Wednesday, March 14, 2007
ಮುಂಬೆಳಕ ನಸುನಗೆಯಲ್ಲಿ ಸತಿಗೆ ಮುತ್ತಿಟ್ಟು,
ದಿನದ ಕಾಯಕ ಮುಗಿಸೆ ಹೊರಟು ನಿಂತ ರವಿ;
ನಿತ್ಯ ನೂತನ ಪ್ರಥಮ ಚುಂಬನಕೆ ರಂಗೇರಿ,
ಪತಿಯ ಬೀಳ್ಕೊಡುವಳು ಉಷೆ, ಹೀರುತಲಿ ಸವಿ।
ತಮ್ಮೊಲವ ಅರಮನೆಯ ಮುಂಬಾಗಿಲನು ತೆರೆದು,
ಹೊರಟ ತೇಜರಾಜನ ಗಾಂಭೀರ್ಯ ನೋಡಿ,
ಮತ್ತೆ ಮೋಹಿತಳಾಗಿ, ವರ್ಣ ರಂಜಿತಳಾಗಿ,
ಮೆಲ್ಲ ಸರಿವಳು ಒಳಗೆ ನೆನಪುಗಳ ಕೂಡಿ।
ಹಗಲ ಹುಟ್ಟಿನ ಹೊತ್ತು ಉಷೆಯಾಗಿ ನಕ್ಕವಳು,
ಮನೆಯ ಬಾಗಿಲ ಸರಿಸಿ ಒಳಸೇರಿದವಳು,
ಹೊತ್ತೇರಿ ಇಳಿಯುತಿರೆ ಹಿತ್ತಿಲಲಿ ನಿಲ್ಲುವಳು,
ರವಿಯ ಸ್ವಾಗತಕೆ ನಿಶಾರಾಣಿಯಾಗಿ।
ಮುಂಜಾನೆ ಉಷೆಯಾಗಿ, ಮುಸ್ಸಂಜೆ ನಿಶೆಯಾಗಿ,
ಬೀಳ್ಕೊಡುಗೆ-ಸ್ವಾಗತದ ಅರ್ಥಗಳ ಹರಡಿ,
ರವಿಯೊಲವ ಹೊಂಗಿರಣ ರಂಗೋಲೆ ಬಿಡಿಸುವರು,
ಅನುದಿನದ ನವ್ಯತೆಯ ರೂವಾರಿ ಜೋಡಿ।
(೧೯೯೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:57 PM
Labels: 'ಭಾವಲಹರಿ'ಯಿಂದ-, ರಮ್ಯಗಾನ...
9 ಪತ್ರೋತ್ತರ:
Shiv said...
ಮುಂಜಾನೆ ಉಷೆಯಾಗಿ ಸಂಜೆಗೆ ನಿಶೆಯಾಗಿಸಿದ ಕಲ್ವನೆ ಚೆನ್ನಾಗಿದೆ.
ಮತ್ತೆ ಮೋಹಿತಳಾಗಿ, ವರ್ಣರಂಜಿತಳಾಗಿ...ಆಹಾ !
೧೯೯೬ ಅಂತ ಹಾಕಿದ್ದೀರಾ...ಆವಾಗೆ ಬರೆದಿದ್ದ ಇದು ??
March 15, 2007 1:38 AM
ಸುಶ್ರುತ ದೊಡ್ಡೇರಿ said...
1996ರಲ್ಲಿ ಬರೆದದ್ದಾ? ಓಹ್! ಅದ್ಭುತ. ಚಂದದ ಚಿತ್ರಣಗಳ ಸುಂದರ ಕವಿತೆ. ಲಹರಿ ಹರಿಯುತ್ತಿರಲಿ..
March 15, 2007 3:10 AM
suptadeepti said...
ಹೌದು, 1996ರಲ್ಲಿ ಬರೆದದ್ದು. 1980ರಿಂದಲೇ ಕವನ, ಚುಟುಕ ಬರೆಯುವ ಹವ್ಯಾಸಕ್ಕೆ ಬಿದ್ದವಳು. ಇಲ್ಲಿ ಸ್ವಲ್ಪ ಹಳೆಯ ಕವನಗಳಿಗೆ ಬೆಳಕು ಕಾಣಿಸುವ ಪ್ರಯತ್ನ (ಹೊಸ ಕವನಗಳು ದಟ್ಸ್'ಕನ್ನಡದಲ್ಲೋ, ಕನ್ನಡ ಧ್ವನಿಯಲ್ಲೋ, ಕನ್ನಡ ಕೂಟಗಳ ಸಂಚಿಕೆಗಳಲ್ಲೋ ಮುಖ ತೋರಿಸುತ್ತಲೇ ಇವೆ).
ಶಿವು, ಸುಶ್ರುತ, ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.
March 15, 2007 10:30 AM
Phantom said...
ನಿತ್ಯ ಕಾಯಕವನ್ನು ಸುಂದರವಾಗಿ ಚಿತ್ರಿಸಿದ್ದಿರಿ.
ಪತಿಯ ಬೀಳ್ಕೊಡುವಳು ಉಷೆ, ಹೀರುತಲಿ ಸವಿ।
ಬೀಳ್ಕೊಡುವಾಗ ಸವಿ ಎಂತದ್ದು?
ಹೊತ್ತೇರಿ ಇಳಿಯುತಿರೆ ಹಿತ್ತಿಲಲಿ ನಿಲ್ಲುವಳು,
ರವಿಯ ಸ್ವಾಗತಕೆ ನಿಶಾರಾಣಿಯಾಗಿ।
ಸೊಗಸಾದ ಕಲ್ಪನೆ :ಹ
೧೯೯೬ ನೆ ಇಸ್ವಿ ಲೇ ಬರೆದಿರುವ ಕವನ, ನಾನು ಆಗ ಬರೆದದ್ದು ಎಲ್ಲ ಕಳೆದು ಹೋಯ್ತು :(ಮತ್ತೆ ಈಗ ಬರುತಿರುವ ಕವನಗಳ ಕೊಂಡಿಗಳನ್ನು ದಯಪಾಲಿಸ ಬೇಕಾಗಿ ವಿನಂತಿ.
ಇಂತಿ
ಭೂತ ಸ್ರೇಷ್ಟ
March 16, 2007 12:35 AM
Alpazna said...
ಬಹು ಸುಂದರವಾಗಿ ಮೂಡಿಬಂದಿದೆ.
March 16, 2007 2:47 AM
suptadeepti said...
ಭೂತಯ್ಯ, alpazna, ಪ್ರತಿಕ್ರಿಯೆಗಳಿಗೆ ವಂದನೆಗಳು.
"ಪತಿಯ ಬೀಳ್ಕೊಡುವಳು ಉಷೆ, ಹೀರುತಲಿ ಸವಿ।"- ಈ ಸಾಲು ಹಿಂದಿನ ಸಾಲಿನ ಮುಂದುವರಿಕೆ. ಜೊತೆಗೆ ಓದಿ, ಆಗ "ಸವಿ"ಯ ಅರ್ಥ ಆಗುತ್ತದೆ.
http://thatskannada.oneindia.in/nri/kavana_index.html
http://www.sahityanjali.org/?q=taxonomy/term/8
http://kannadadhvani.com/kavana/index.html
ಈ ಎಲ್ಲ ಲಿಂಕ್'ಗಳಲ್ಲಿ "ಸುಪ್ತದೀಪ್ತಿ" ಹೆಸರಲ್ಲಿ ನನ್ನ ಪ್ರಕಟಿತ ಕವನಗಳು ಕಾಣ ಸಿಗುತ್ತವೆ. ದಟ್ಸ್'ಕನ್ನಡ ಮತ್ತು ಕನ್ನಡ ಧ್ವನಿ ತಾಣಗಳಲ್ಲಿ ಕಥಾ ವಿಭಾಗದಲ್ಲಿಯೂ ಕಣ್ಣಾಡಿಸಿ, ನನ್ನ ಕಥೆಗಳಿವೆ.
ಆಸಕ್ತಿ ತೋರಿಸಿದ್ದಕ್ಕೆ ಧನ್ಯವಾದಗಳು.
March 16, 2007 10:38 AM
Jagali Bhagavata said...
ನಿಮ್ಮ ಎಲ್ಲ ಕವನಗಳೂ, ಕವಿತೆಗಳೂ ಚೆನ್ನಾಗಿವೆ. ನೋಡಿ, ಅವತ್ತೇ ನಾನು ನಿಮ್ಮ 'ಸುಪ್ತದೀಪ್ತಿ'ಯನ್ನು ಗುರುತು ಹಿಡಿದಿದ್ದೆ. ಹಾಗಾಗಿ ನಿಮ್ಮ ಎಲ್ಲ ಕವಿತೆ, ಕವನಗಳಲ್ಲಿ 'ಇದು ತುಂಬ ಚೆನ್ನಾಗಿದೆ' ಅಂತ ಬರೆಯಲ್ಲ. ಒಂದೇ ವಾಕ್ಯವನ್ನು ತುಂಬ ಸರ್ತಿ ಹೇಳೊಕೆ ಬೋರ್ ಹೊಡಿಯತ್ತೆ:-)
March 16, 2007 8:26 PM
ಶ್ರೀವತ್ಸ ಜೋಶಿ said...
ನುಡಿ: "ಪತಿಯ ಬೀಳ್ಕೊಡುವಳು ಉಷೆ, ಹೀರುತಲಿ ಸವಿ"
ಕಿಡಿ: ರವಿ ಮತ್ತು ಉಷೆಯರ ಮ್ಯಾರೇಜ್ ರಿಸೆಪ್ಷನ್‍ನಲ್ಲಿ, ಫಾಂಟಾದ ಒಂದೇ ಬಾಟಲಿಯಿಂದ ಎರಡು ಸ್ಟ್ರಾಗಳಲ್ಲಿ ರವಿ ಮತ್ತು ಉಷೆ ಇಬ್ಬರೂ ಫಾಂಟಾ ಹೀರುವ ಸೀನ್ ಇತ್ತಾ? ಆಲ್ಬಮ್‍ನಲ್ಲಿ ಆ ಪಟ ಇದೆಯಾ? ಫಾಂಟಾಬಾಟಲಿಯಲ್ಲಿ ಉಳಿದಿರುವುದನ್ನೇ ಉಷೆ ಹೀರುತ್ತಿರುವುದಾ?
ಏನೇ ಇರಲಿ, ನಿಮ್ಮ ಕವನ Fanta with a stick (ಸ್ಟ್ರಾ) = Fantastic!
March 19, 2007 6:55 PM
suptadeepti said...
ಜೋಶಿಜಿ ಉವಾಚ: "ಫಾಂಟಾದ ಒಂದೇ ಬಾಟಲಿಯಿಂದ ಎರಡು ಸ್ಟ್ರಾಗಳಲ್ಲಿ ರವಿ ಮತ್ತು ಉಷೆ ಇಬ್ಬರೂ ಫಾಂಟಾ ಹೀರುವ ಸೀನ್ ಇತ್ತಾ? ಆಲ್ಬಮ್‍ನಲ್ಲಿ ಆ ಪಟ ಇದೆಯಾ?"
ನನ್ನ ಆಲ್ಬಂನಲ್ಲಿ ರವಿ-ಉಷೆಯರ ಪಟ ಇಲ್ಲ, ಆದರೆ ಮದುವಣಿಗರ ಬಾಳ ಪುಟಗಳಲ್ಲಿ ಅಂಥದ್ದೊಂದು ಪಟ ಇದ್ದೇ ಇರಬಹುದು, ರಿಸೆಪ್ಷನ್ ದಿನ ಅಲ್ಲವಾದರೆ ಮತ್ತೆಂದೋ ಆಗಿರಬಹುದು.
ಅದರ ಹೊರತಾಗಿಯೂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
March 19, 2007 8:55 PM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Sunday, 18 May 2008
Subscribe to:
Post Comments (Atom)
No comments:
Post a Comment