Wednesday, March 21, 2007
ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ನಾ ಕರೆದ ವಸಂತ.... ಈಗಲೂ ಮಾರನ ಮಧುವನದ ಓರಣಿಗ ಇವನೇ ಏನು?
ಓ ವಸಂತ, ನಿನ್ನಾಗಮನದ ಆಸೆಯ-
ಕೊನರುಗಳೇ ತುಂಬಿದ ಹೆಮ್ಮರದಡಿಯ-
ನೆಳಲಲ ಕುಳಿತರೂ ಮುದುಡುತಿಹುದು,
ಸೊರಗುತಿಹುದು ಎನ್ನೊಲವ ಬಳ್ಳಿಯಿದು.
ಮಾನವ ತುಳಿತಕೆ ಸಿಲುಕಿ ನಲುಗಿ,
ಒರಗಿ, ಹಸಿರು ವನಗಳು ಕರಗಿ,
ಬುವಿಯೇ ಬೆಂಗಾಡಾಗುತಿರಲು-
ಕಲ್ಪನಾತರುವೇ ನಮಗೆ ನೆಳಲು.
ಕೋಗಿಲೆಯ ದನಿಯಿಲ್ಲ, ಗಿಣಿ ಉಲಿಯುತಿಲ್ಲ,
ಕಾಕರಾಜನ ಕೂಗ ಕೇಳಿ ನೊಂದಿಹೆನಲ್ಲ,
ಕಣ್ಗೆ ಪಸಿರಿಲ್ಲ, ಬಾಯ್ಗೆ ಪಸೆಯಿನಿತಿಲ್ಲ,
ಒಣಗಿ ಕರಕುತ್ತಿಹವು ಎದೆಯ ಭಾವಗಳೆಲ್ಲ.
ದಶದಿಕ್ಕುಗಳಿಂದ ಸೆಳೆಯುತಿರೆ ದುಗುಡಗಳು,
ಬರುವವೇ ನನ್ನ ಬಳಿ ನಿನ್ನ ಕನಸುಗಳು?
ಇರುಳ ಮಬ್ಬಿನಲಿ ಓರ್ವಳೇ ಬಿಕ್ಕಿರಲು,
ಓಡಿ ಬಾ ವಸಂತ, ಸಂತೈಸಲೆನ್ನ ನಿನ್ನೊಕ್ಕೊರಲು
(ಮಾರ್ಚ್, ೧೯೮೭.)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 6:39 PM
Labels: 'ಭಾವಲಹರಿ'ಯಿಂದ-
12 ಪತ್ರೋತ್ತರ:
ಮನಸ್ವಿನಿ said...
’ಇರುಳ ಮಬ್ಬಿನಲಿ ಓರ್ವಳೇ ಬಿಕ್ಕಿರಲು,
ಓಡಿ ಬಾ ವಸಂತ, ಸಂತೈಸಲೆನ್ನ ನಿನ್ನೊಕ್ಕೊರಲು’
ವಾಹ್...ಸುಂದರವಾಗಿದೆ
March 21, 2007 8:10 PM
Shrilatha Puthi said...
"ಮಾರನ ಮಧುವನದ ಓರಣಿಗ"
ಕವನಕ್ಕಿಂತಲೂ ಹೆಚ್ಚು (ಅರ್ಥವಾಗದಿದ್ದರೂ) ಆಕರ್ಷಿಸಿದ್ದು ಈ ಪದಪ್ರಯೋಗ. ಊರಲ್ಲಿ ನೋಡುತ್ತಿದ್ದ/ಕೇಳುತ್ತಿದ್ದ ಯಕ್ಷಗಾನ, ತಾಳಮದ್ದಲೆಗಳ ನೆನಪಾಯಿತು.
March 22, 2007 4:15 AM
sritri said...
ಕಲ್ಪನಾ ತರುವೇ ನಮಗೆ ನೆಳಲು...
ಈ ನೆರಳಿಗಂತೂ ಕೊರತೆ ಇಲ್ಲ. ಆದರೆ ಕಾಕರಾಜನ ರಾಗಕ್ಕೆ ನೋವೇಕೇ? ಗಾಯಕರಲ್ಲೇ ಗಡಸು ಕಂಠದ ಗಾಯಕರ ತರ ಕಾಕರಾಜ!
March 22, 2007 6:39 AM
poornima said...
jYoti,
kavana bahaLa chennAgide. nimma kavanagu nanage bahaLa iShTa.
aMda haage kannaDadalli comment bareyuvudu hEge ?
March 22, 2007 9:37 AM
suptadeepti said...
ಮೆಚ್ಚುಗೆ ಸೂಚಿಸಿದ ಮಹಿಳಾಮಣಿಗಳಿಗೆ ಧನ್ಯವಾದಗಳು.
"ಮಾರನ ಮಧುವನದ ಓರಣಿಗ"= ಮನ್ಮಥನ gardner = ವಸಂತ.
ಕಾಕರಾಜನ ಹಾಡು ಇತರ ಸಮಯಕ್ಕಿಂತ ಸುಡು-ಸುಡು ಬೇಸಗೆಯಲ್ಲಿ ಬಹಳ ಅಸಹನೀಯ ಆಗಿ ಕೇಳತ್ತೆ, ಎಲ್ಲ ಕಡೆ, ಎಲ್ಲವೂ ತುಂಬಾ ಒಣಗಿ, ಸೊರಗಿ, ನಲುಗುತ್ತಿರುವಾಗ ಈ ಕಾ-ಕಾ ಸ್ವಲ್ಪ ಕರ್ಕಶವೇ ಅಂತ ನನ್ನ ಅನುಭವ. ಮಂಗಳೂರು ಕಡೆಯ ಬಿರುಬೇಸಗೆಯಲ್ಲಿನ ಭಾವನೆಯಿದು, ಅಷ್ಟೇ.
March 22, 2007 9:41 AM
suptadeepti said...
ಪೂರ್ಣಿಮ, ಬರಹದಲ್ಲೇ IME ಅಂತ ಇದೆ. ಅದನ್ನ ಬೇರೆಯೇ download ಮಾಡಿಕೊಳ್ಳಬೇಕು. ಅದನ್ನು ಬಳಸಿ ಕನ್ನಡದಲ್ಲೇ ನೇರವಾಗಿ ಬರೆಯಬಹುದು. ಅದು ಬರಹ ಯೂನಿಕೋಡ್ ಅಕ್ಷರರೂಪ.
March 22, 2007 9:44 AM
poornima said...
ಧನ್ಯವಾದ ಜ್ಯೋತಿಯವರೇ !!
March 22, 2007 11:58 AM
Shiv said...
ಸುಪ್ತದೀಪ್ತಿಯವರೇ,
ಇಪ್ಪತ್ತು ವರ್ಷದ ಹಿಂದೆ ನೀವು ಕರೆದಾಗ ಬಂದ ವಸಂತನೋ ಅಥವಾ ವಸಂತನೇ ನಿಮ್ಮನ್ನು ಹುಡುಕಿಕೊಂಡು ಬಂದನೋ ?ಯಾವುದಾದರೂ ಇರಲಿ..
ಒಣಗಿ ಕರಗುತ್ತಿಹವು ಎದೆಯ ಭಾವಗಳೆಲ್ಲ..
ವಸಂತಾಗಮನದ ನಂತರ ಲಹರಿ ಹರಿಯೋಕೆ ಶುರುವಾಯ್ತು ಅನಿಸುತ್ತೆ
ಅಂದಾಗೆ ನಿಮಗೆ ಮೇಲ್ ಮಾಡಬೇಕೆಂದುಕೊಂಡೆ ನಿಮ್ಮ ಇ-ಮೇಲ್ ನನ್ನ ಹತ್ತಿರ ಇಲ್ಲ.
ದಯವಿಟ್ಟು ನಿಮ್ಮ ಮೇಲ್ ಕೊಡಿ.
March 22, 2007 10:14 PM
Shrilatha Puthi said...
>>ಗಾಯಕರಲ್ಲೇ ಗಡಸು ಕಂಠದ ಗಾಯಕರ ತರ ಕಾಕರಾಜ!
ಹಿಮೇಶ್ ರೇಷಿಮಿಯಾನ ಹಾಗೆ!!!
March 22, 2007 11:52 PM
Jagali Bhagavata said...
ಕಲ್ಪನಾತರುವೇ ನಮಗೆ ನೆಳಲು....
ಸಾಲು ತುಂಬ ಚೆನ್ನಾಗಿದೆ. ಮತ್ತೆ, ಈ ವಸಂತ ಬಂದನೇ ನಿಮ್ಮ ಕರೆಗೆ ಓಗೊಟ್ಟು? ಓಡಿ ಬಂದನೇ ಇಲ್ಲ ನಿಧಾನವಾಗಿ ಬಂದನೇ? ಒಂಟಿಯಾಗಿ ಬಿಕ್ಕುತ್ತಿದ್ದ ನಿಮ್ಮನ್ನು ಸಂತೈಸಿದನೇ? ಕವನದ ಮುಂದಿನ ಭಾಗವನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೇನೆ:-))
March 24, 2007 7:14 PM
suptadeepti said...
ಭಾಗವತರೇ, ನನ್ನ ಕರೆಗೆ ಅಲ್ಲದಿದ್ದರೂ ವಸಂತ ಬಂದ, ಹೋದ...! ಪ್ರತೀ ವರ್ಷ ಅವನದ್ದು ಇದೇ ಕಥೆ. ಈ ವರ್ಷವೂ ಬರುತ್ತಾ.... ಇದ್ದಾನೆ, ಮತ್ತೊಮ್ಮೆ ಮರೆಯಾಗುವುದಕ್ಕೆ! ಕವನದ ಮುಂದಿನ ಭಾಗಕ್ಕೆ ಅವನು ಇದ್ದರೆ ತಾನೇ? ಏನು ಮಾಡೋದು?
March 25, 2007 1:09 PM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Sunday, 18 May 2008
Subscribe to:
Post Comments (Atom)
No comments:
Post a Comment