ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 18 May, 2008

ಕಾತರ

Friday, March 16, 2007

ಮಾಂದಳಿರ ತಂಪಿನಡಿ ಮಲ್ಲಿಗೆಯ ಕಂಪಿರಲು
ಕೋಗಿಲೆಯ ಇಂಪನಾಲಿಸುತ ಕುಳಿತಾಗ,
ನನ್ನೊಳಗೆ ಎಲ್ಲೋ ಕಾರಂಜಿ ಚಿಲುಮೆಯೊಲು-
ನಿನ್ನ ಕಾಣುವ ತವಕ ಒಸರಾಯಿತು.


ಧವಳ ಕಾಂತಿಯ ಹರಡಿ ಸ್ನಿಗ್ಧ ಶಾಂತಿಯ ಸುರಿವ
ಮುಗ್ಧ ಮೌನದ ತುಂಬು ಚಂದಿರನ ನೋಡುತಿರೆ,
ಮಳೆಹನಿಯ ಸ್ಪರ್ಶಕ್ಕೆ ಬುವಿ ತಾನು ಮಿಡಿವಂತೆ-
ನಿನ್ನ ಕಾಣುವ ತವಕ ಹಸಿರಾಯಿತು.


ವದನದಲಿ ನಗುವಿನೆಳೆ ಮನದಲ್ಲಿ ವಿರಹದಲೆ
ನನ್ನೆದೆಯ ತುಂಬೆಲ್ಲ ಶೂನ್ಯತೆಯಿದೇನು?
ಮಧುರ ಸಾನ್ನಿಧ್ಯಕ್ಕೆ ಕ್ಷಣಗಣನೆ ಮಾಡುತಿರೆ-
ನಿನ್ನ ಕಾಣುವ ತವಕ ಉಸಿರಾಯಿತು.
(ಮಾರ್ಚ್, ೧೯೯೪)


ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:59 AM
Labels: ,

9 ಪತ್ರೋತ್ತರ:
mala rao said...
"ನಿನ್ನ ಕಾಣುವ ತವಕ ಒಸರಾಯಿತು....

ನಿನ್ನ ಕಾಣುವ ತವಕ ಹಸಿರಾಯಿತು....

ನಿನ್ನ ಕಾಣುವ ತವಕ ಉಸಿರಾಯಿತು...."

ಕವನ ಓದಿ ನಿಮ್ಮ ದೇವರ ಅದೃಷ್ಟ ನೆನೆದು ನನಗೆ ಹೊಟ್ಟೆಕಿಚ್ಚಾಯಿತು!
ಅಂದ ಹಾಗೆ ನೀವು ಇಷ್ಟೆಲ್ಲಾ ರೊಮ್ಯಾಂಟಿಕ್ಕಾಗಿ ಕವನ ಹೆಣೆದು ಲಹರಿಯಿಂದ ಹಾಡುತ್ತಾ ಇರುವ ಸಂಜೆ ನಿಮ್ಮ ದೇವರು ಮನೆಗೆ ಬಂದು `ನನ್ನ ಕಾಫಿ ಬೇಗ ಬೇಗ ಬರಲಿ...' ಅಂದಾಗ ನಿಮಗೇನನ್ನಿಸುತ್ತೇ ಅಂತ ಕೇಳಬಹುದೇ?
March 16, 2007 4:41 PM

suptadeepti said...
ಈ ಕವನ ಬರೆದ ದಿನ ಅವರೇನಾದರೂ ಬಂದಿದ್ದರೆ, "ದೂರದಿಂದ ಬಂದಂಥ ಸುಂದರಾಂಗ ಜಾಣ..." ಅಂತಲೂ ಗುನುಗಬಹುದಾಗಿತ್ತು. ಕೂಡಲೇ ಬರಲಾರದಷ್ಟು ದೂರದ ಊರಲ್ಲಿದ್ದಾಗಲೇ ಕಾಣುವ ತವಕ ಬಲವಾಗುವುದು ತಾನೇ...! ಹೊಟ್ಟೆಕಿಚ್ಚು ಪಡುವಂಥಾದ್ದೇನೂ ಇಲ್ಲ, ಇದು ಕವನಕ್ಕೆ ಮಾತ್ರ, ಜೀವನಕ್ಕಲ್ಲ! (ಅಯ್ಯೋ ಪಾಪ ಅನ್ನು, ಪರವಾಗಿಲ್ಲ)
March 16, 2007 5:09 PM

Jagali Bhagavata said...
This post has been removed by the author.
March 16, 2007 8:17 PM

Shiv said...
ಸುಪ್ತದೀಪ್ತಿಯವರೇ,
ಮಧುರ ಸಾನ್ನಿಧ್ಯಕ್ಕೆ ಕ್ಷಣಗಣನೆ ಮಾಡುತಿರೆ-ನಿನ್ನ ಕಾಣುವ ತವಕ ಉಸಿರಾಯಿತು
ನೀವು ೧೯೯೪ರಲ್ಲಿ ಅನುಭವಿಸಿದ ಆ ಮಧುರ ಯಾತನೆಯನ್ನು ನಾನು ಸಹ ಈಗ ಅನುಭವಿಸುತ್ತರಿವುದರಿಂದ ಈ ಸಾಲುಗಳು ನನಗೋಸ್ಕರವೇ ಬರೆದ ಹಾಗೆ ಇದೆ..
March 17, 2007 6:55 PM

ಮನಸ್ವಿನಿ said...
ಆಹಾಹ...ಸುಂದರ ಕವನ
March 17, 2007 9:59 PM

suptadeepti said...
ಶಿವು, ಮಧುರ ಯಾತನೆ, ಯಾವ ಕಾಲಕ್ಕೂ ಪ್ರಸ್ತುತ, ಆಯಾಯ ಹೃದಯಕ್ಕೆ ಹತ್ತಿರ. ನನ್ನ ದಫ್ತರದಲ್ಲಿ ಅದಕ್ಕೊಂದು ತಾರೀಖು ಇದೆ, ನಿಮಗೆ ಅದು ವರ್ತಮಾನ, ಅಷ್ಟೇ ವ್ಯತ್ಯಾಸ. ಅಭಿಪ್ರಾಯಕ್ಕೆ ಧನ್ಯವಾದಗಳು.


ಮನಸ್ವಿನಿ, ಧನ್ಯವಾದಗಳು, ನಿನಗೂ.
March 17, 2007 11:12 PM

Phantom said...
ಮಳೆಹನಿಯ ಸ್ಪರ್ಶಕ್ಕೆ ಬುವಿ ತಾನು ಮಿಡಿವಂತೆ-ನಿನ್ನ ಕಾಣುವ ತವಕ ಹಸಿರಾಯಿತು.
ಉಪಮಾನ, ಉಪಮೇಯ ಎರಡು ಸುಂದರ :ಹ
ವದನದಲಿ ನಗುವಿನೆಳೆ ಮನದಲ್ಲಿ ವಿರಹದಲೆ

ಅದ್ಭುತ! ೯೪ ಇಸ್ವಿ ಲೇ ಬರ್ದಿದ್ ಕವನ, ಮ್ಯಡಮ್ ನೀವು ಎಷ್ಟ್ ವರುಷದಿಂದ ಬರಿತ ಇದ್ದಿರಿ ಕವನಗಳನ್ನ :ಓ
ಇಂತಿ
ಭೂತ
March 19, 2007 5:34 AM

Shrilatha Puthi said...
ಆಹಾ... ಎಷ್ಟು ಚಂದದ ಸಾಲುಗಳು!! ನನಗೆ ಮೊದಲಿನಿಂದಲೂ ಗದ್ಯದ ಕಡೆಗೆ ಪದ್ಯಕ್ಕಿಂತ ಜಾಸ್ತಿ ಒಲವು. ಕೆ ಎಸ್ ನ ಅವರ ಪದ್ಯಗಳನ್ನು ಓದಿದ್ದರೂ, ನಾನು ಹೆಚ್ಚು ಇಷ್ಟ ಪಡುತ್ತಿದ್ದದ್ದು ಗದ್ಯವನ್ನೇ. ಆದರೆ ನೀವು, ವೇಣಿ, ಮತ್ತೆ ಮಾಲಾ ಸೇರಿಕೊಂಡು ಪದ್ಯಗಳ ಹುಚ್ಚು ಹಿಡಿಸಿಬಿಟ್ಟಿದ್ದೀರಿ..
March 20, 2007 12:28 AM

Suptadeepti said...
ಭೂತಯ್ಯ, ವಂದನೆಗಳು. ಮೆಚ್ಚುಗೆಯಾಗಿದ್ದು ಸಂತೋಷ.

ಶ್ರೀಲತಾ, ಪದ್ಯ ಮತ್ತು ಗದ್ಯ ಎರಡೂ ಕನ್ನಡ ಸರಸ್ವತಿಯ ಎರಡು ಕೈಗಳು. ಯಾವ ಕೈ ಇಷ್ಟ ಅಂದರೆ ಏನು ಉತ್ತರ ಕೊಡಲಿ? ಹಾಗೇ ಇದು. ಆದರೆ ನನ್ನ ಬರವಣಿಗೆಯ ಮಟ್ಟಿಗೆ ನನಗೆ ಪದ್ಯ ಇಷ್ಟ, ನಾನು ಕವನಗಳನ್ನೇ ಹೆಚ್ಚಾಗಿ ಬರೆಯುವುದು. ಮತ್ತೆ, ಮೆಚ್ಚುಗೆಗೆ ವಂದನೆಗಳು.
March 20, 2007 10:39 AM

No comments: