Friday, March 30, 2007
ರವಿವಾರ ಮುಂಜಾನೆ ಯಾರೂ ಮನೆಯೊಳಗಿಲ್ಲ,
ಹೊರಗೆಲ್ಲೋ ಹೋಗಿಹರು ಅತ್ತೆ ಮಾವದಿರು
ಆಗಷ್ಟೇ ಮುಖ ತೊಳೆದ ಸೂರ್ಯವಂಶಿ ನಲ್ಲ,
ದಿನ ಪತ್ರಿಕೆಯ ಹಿಡಿದ; ಮೌನ ಮನೆಯೆಲ್ಲ.
ವಾರಾಂತ್ಯದ ಅಭ್ಯಂಜನ ಮುಗಿಸಿ ಹೊರಬಂದೆ,
ಧ್ಯಾನಸ್ಥನಂತಿದ್ದ ಪತಿಯ ಬಳಿ ನಿಂದೆ,
"ಸವಿಯಾದ ಬಿಸಿಯಾದುದೇನನ್ನೋ ಕೊಡುವೆ"-
ಎಂದು ಪತ್ರಿಕೆಯ ತೆಗೆದಿರಿಸಿ ಸನಿಹ ಕುಳಿತೆ.
"ಸವಿಯಿರಲಿ, ಬಿಸಿ ಮಾತ್ರ ಅತಿಯಾಗದಿರಲೆಂ"ದ,
"ತುಟಿಗಳಿಗೆ ಬಿಸಿಯಾಗಿ, ಬಾಯೊಳಗೆ ಸವಿ"ಯೆಂದೆ,
"ಕೈಗಳಿಗೆ? ನಾಲಗೆ, ಕೊರಳಿಗೆ ಏನೂ ಆಗದೆ?"
"ಬೆರಳುಗಳಲ್ಲಿ ಮೆಲ್ಲನೆ ಹಿಡಿದೆತ್ತಿ ಬಾಯೊಳಿಡೆಂ"ದೆ.
ಹಿತವಾಗಿ ಮೃದುವಾಗಿ ಹಬೆಯಾಡುವ ಬಿಸಿಯ,
ವಿಶಿಷ್ಟ ಸುವಾಸನೆಯ, ಆಸೆ ತರಿಸುವ ಸವಿಯ,
ಒಮ್ಮೆ ಮುಗಿದರಿನ್ನೊಮ್ಮೆ ಪಡೆವ ರುಚಿಯ,
ತಟ್ಟೆಯೊಳಿರಿಸಿ ತಂದಿಟ್ಟೆ, ಉಪಾಹಾರಕ್ಕೆ ಇಡ್ಲಿಯ.
(೧೪-ಸೆಪ್ಟೆಂಬರ್-೧೯೯೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:35 PM
Labels: 'ಭಾವಗಾನ'ದಿಂದ-, ನಗುವಿನೆಳೆಗಳು, ರಮ್ಯಗಾನ...
15 ಪತ್ರೋತ್ತರ:
Mahesh Chevar said...
kasaragodudu chevar panpi jage yenna ooru. Muliyar kend gothundu. Bukka eer daaada manthondullar. Sadyog bangalorudu newspapered sub editor. Kari varsho yenna journalism course mugind. from Mangalore university. eerena bagge vivaravaad bared theripale...
March 31, 2007 3:08 AM
Shiv said...
ಸುಪ್ತದೀಪ್ತಿಯವರೇ,
ಛೇ ಛೇ... ನಾವು ಎನೋ ತಿನಿಸ್ತಿದಿರಾ ಅನ್ನುವಾಗಲೇ ಹೀಗೆ ನೀವು ಇಡ್ಲಿ ತಿನ್ನಿಸಿ ರಸಭಂಗ ಮಾಡಿದ್ದು ಸರಿಯೇ ;)
ಇಡ್ಲಿ ತಿನ್ನಿಸುವ ಎಪಿಸೋಡೇ ಇಷ್ಟು ರಸಮಯವಾಗಿದ್ದರೆ.. ಬೇರೆ ಎಪಿಸೋಡ್‍ಗಳು ಹೇಗಿರಬಹುದು :)
March 31, 2007 9:02 AM
suptadeepti said...
@ mahesh chevar: ಮಹೇಶ್, ಈರೆಗ್ ಸ್ವಾಗತ. ನಮನ ಸ್ವಂತ ವಿಷಯ ಬರೆಯೆರೆ ಈ ಜಾಗೆ ಸರಿಯತ್ತ್. ಈರೆನ ಮೈಲ್ ಅಡ್ರೆಸ್ ಕೊರ್ಲೆ.
@ Shivu: ರಸ ಭಂಗ ಅಂದುಕೊಂಡರೆ ಅದು ಒಂದು ದೃಷ್ಟಿಕೋನ ಆಯ್ತು. ಶೃಂಗಾರಮಯ ಸನ್ನಿವೇಶ ಬದಿಗೆ ಸರಿದು ಹಾಸ್ಯ ರಸ ಹೊಮ್ಮುವುದು ಈ ಕವನದ ಉದ್ದೇಶ. ಅದು ನೆರವೇರಿದೆ ಅಂತ ಅಂದುಕೊಂಡಿದ್ದೇನೆ. ಎಪಿಸೋಡ್ ಮಾಡೋದಿಕ್ಕೆ ನಮ್ಮ ಜೀವನ ಕಿರುತೆರೆ ಧಾರಾವಾಹಿಗಳಲ್ಲವಲ್ಲ!!
March 31, 2007 1:48 PM
ಶ್ರೀವತ್ಸ ಜೋಶಿ said...
ಕೆಲವು ಬಿಸಿ ಬಿಸಿ ಟಿಪ್ಪಣಿಗಳು:
೧. ಈ ಕವನವನ್ನು ಅವತ್ತು (೧೯೯೭) ಬರೆಯುವಾಗ ನಿಮಗೆ ನೆಗಡಿ (ದೆಗಡಿ?) ಆಗಿತ್ತಾ ಅಥವಾ ಈಗ ಹತ್ತು ವರ್ಷಗಳ ನಂತರ (೨೦೦೭) ಬ್ಲಾಗಾರೋಹಣ ಮಾಡುವಾಗ ದೆಗಡಿಯಾಗಿದೆಯಾ? ಅತ್ತೆ ಮಾವದಿರು ಎಂದು ಬರೆದಿದ್ದೀರಲ್ಲಾ? ಅದು ಅತ್ತೆ ಮಾವಂದಿರು (ದೆಗಡಿ ಪ್ರಭಾವದಿಂದ) ಎಂದಾಗಬೇಕಿತ್ತೇ?
೨. ಒಂದನೇ ಚರಣದ ’ನಲ್ಲ’ ಮತ್ತು ಎರಡನೆ ಚರಣದ ’ಪತಿ’ ಒಂದೇ ವ್ಯಕ್ತಿ ಎಂದು ನನ್ನ ಆರೋಗ್ಯಕರ ಗ್ರಹಿಕೆ.
೩. ಮೇಲಿನ ಗ್ರಹಿಕೆಗೆ ಉತ್ತರ ಹೌದು ಎಂದಾದರೆ, ’ನಲ್ಲ’ ಮತ್ತು ’ಪತಿ’ ಯಾಕೋ ಸಿನೊನಿಮ್ಸ್ ಆಗಿ ಸರಿಹೋಗೋದಿಲ್ಲ.
೪. ನಲ್ಲ ಅಥವಾ ಪತಿಯು ’ಮುಖ ತೊಳೆವ’ ಪ್ರಕ್ರಿಯೆಯು ’ಹಲ್ಲುಜ್ಜುವುದನ್ನೂ ಒಳಗೊಂಡಿತ್ತು’ ಎಂದು ನಾವು ಓದುಗರು ಗ್ರಹಿಸಿಕೊಳ್ಳಬೇಕೇ?
೫. ’ಇಡ್ಲಿ(ಯನ್ನು) ಎಲ್ಲಿ ಇಡ್ಲಿ?’ ಎಂದು ಕೇಳಿದಿರಾ?
೬. ಆಗಷ್ಟೇ ವಾರಾಂತ್ಯದ ಅಭ್ಯಂಜನವಾಗಿದ್ದರಿಂದ ಇಡ್ಲಿ ಕೊಟ್ಟಾಕೆಯ ಮೈ ಸಹ ’ಹಿತವಾಗಿ ಮೃದುವಾಗಿ ಹಬೆಯಾಡುವ ಬಿಸಿಯ’ ಹೊಂದಿತ್ತು ಎನ್ನೋಣವೇ?
April 1, 2007 4:45 AM
suptadeepti said...
@ ಶ್ರೀವತ್ಸ:
ನಿಮ್ಮ ಬಿಡಿ-ಬಿಡಿಯಾದ ಆರು ರನ್ನುಗಳಿಗೆ ಒಂದೇ ಸಿಕ್ಸರ್-ಫಿಕ್ಸರ್ ಹೊಡೆಯಲೇ?
ಅದಾದರೆ: "ಕವನ ಓದುಗರ ಅನುಭವ-ವಿಸ್ತಾರದ ಮೇಲೆ ಬೇರೆ ಬೇರೆ ಅರ್ಥಗಳನ್ನು ಕೊಡುತ್ತದೆ; ಅದೇ ಕವನದ ಜೀವಾಳ, ಹೆಗ್ಗಳಿಗೆ."
ಇನ್ನು ಬಿಡಿ-ಬಿಡಿಯಾಗಿಯೇ ಬಡಿಸುವುದಾದರೆ:
೧) ನೆಗಡಿಯಾಗುತ್ತಲೇ ಇರುತ್ತದೆ, ಸೈನಸ್ ತೊಂದರೆ ಬರುತ್ತಲೇ ಇರುತ್ತದೆ. ಅದರಿಂದಾಗಿ ಪ್ರತೀಬಾರಿ ಒಂದೊಂದು ಸೊನ್ನೆ ನುಂಗುವುದಾದರೆ ಕೆಲವರು "ಉರುಟುರುಟು" ಆಗ್ತಿರೋದಕ್ಕೆ ಕಾರಣ ಅದೇ ಇರಬೇಕು.
೨) "ನಲ್ಲ" ಮತ್ತು "ಪತಿ" ಈ ಕವನದಲ್ಲಿ ಸಮಾನಾರ್ಥಕಗಳಾಗಿ ಬಂದಿವೆ. ನಿಮ್ಮ ಆರೋಗ್ಯವೂ ಚೆನ್ನಾಗಿದೆ.
೩) ಆರೋಗ್ಯ ಯಾಕೆ ಅಷ್ಟು ಬೇಗ ಕೆಟ್ಟಿತು? ನಲ್ಲ ಪದದ ಅರ್ಥ ಪ್ರೀತಿ-ಪಾತ್ರ ಗಂಡು ಅಂತ, ಅಷ್ಟೇ. ಆತ ಪತಿಯೂ ಆಗಿರಬಾರದು ಅಂತೇನಿಲ್ಲವಲ್ಲ!!
೪) ನಿಮ್ಮ ಗ್ರಹಿಕೆ ನಿಮಗೆ ಬಿಟ್ಟದ್ದು, ನಿಮ್ಮ ಅಭ್ಯಾಸದ ಮೇಲೆ ಹೊಂದಿಕೊಂಡದ್ದು. ಅದಕ್ಕೆ ಈ ಕವನ ಹೊಣೆಯಲ್ಲ.
೫) "ಇಡ್ಲಿ"ಯನ್ನು ತಟ್ಟೆಯಲ್ಲಿಟ್ಟೆ ಅಂದ ಮೇಲೆ, "ಎಲ್ಲಿ ಇಡ್ಲಿ?" ಅಂತ ಕೇಳುವ ಪ್ರಶ್ನೆಯೇ ಇಲ್ಲವಲ್ಲ!
೬) ಇದೀಗ ನಿಮ್ಮ ಸ್ವಾನುಭವದ, ಕಲ್ಪನೆಯ- ನೆನಪುಗಳು, ಚಿತ್ರಗಳು ಸೇರಿಕೊಂಡಿವೆ. ಇಡ್ಲಿ ಕೊಟ್ಟಾಕೆಯ ಮೈ-ಬಿಸಿ ಹೇಗಿತ್ತೆಂದು ನನಗೇನು ಗೊತ್ತು?
ಬಾಲಂಗೋಚಿ: ಆಕೆಗೆ "ದೆಗದಿ"ಯಾಗಿದ್ದಾದದೆ, ವನ್'ದಿತ್ತು ಜ್ವರ ಬನ್'ದಿತ್ತೇನೋ?
April 1, 2007 11:17 AM
ಸುಶ್ರುತ ದೊಡ್ಡೇರಿ said...
ನೀವು ಹಿಂಗೆಲ್ಲಾ ನಮ್ಮುನ್ನ ಕನ್‍ಫ್ಯೂಸ್ ಮಾಡ್ಬಾರ್ದು... ನಾವೇನೋ ಅಂದ್ಕೊಂಡು ಓದ್ತಾ ಇದ್ವಿ... ಕೊನಿಗೆ ನೋಡಿದ್ರೆ ಬರೀ ಇಡ್ಲಿ... ಛೇ ! :)
April 2, 2007 1:01 AM
ಸಿಂಧು Sindhu said...
ಅಡ್ ಬಿದ್ದೆ ನಿಮ್ಮ ಕಲ್ಪನೆಗೆ.. ಆಹ್ಲಾದವನ್ನ ತುಂಟತನದೊಂದಿಗೆ ಸೇರಿಸಿ ಸವಿದರೆ ಸಿಗುವ ರುಚಿಯಿದೆಯಲ್ಲಾ ನೀವು ಮಾಡಿದ ತಿಂಡಿಗೆ, ಬಡಿಸಿದ ರೀತಿಗೆ.. ಚಂದ ಕವಿತೆ. ನಿಮ್ಮ ಒಂದರೊಳಗಿನ್ನೊಂದನ್ನ ನೇಯುವ ಪ್ರತಿಭೆಗೆ ಮನಸೋತಿದ್ದೇನೆ. - ಒಮ್ಮೆ ಮುಗಿದರಿನ್ನೊಮ್ಮೆ ಪಡೆವ ರುಚಿಯ - ಇರುಳ ಕಳೆದು ಇರುಳ ನಡುವೆ ಬೆಳೆವ ಚಂದಿರ - ಇತ್ಯಾದಿ..
April 2, 2007 1:24 AM
Alpazna said...
ಆಹಾ!!ತುಂಬಾನೆ ಆನಂದವಾಯ್ತು, ಇದನ್ನು ಓದಿ.. :)
April 2, 2007 6:24 AM
suptadeepti said...
ಎಲ್ಲರ ಮೆಚ್ಚುಗೆಗೆ ಧನ್ಯವಾದಗಳು.
@ ಸುಶ್ರುತ: ಕನ್'ಫ್ಯೂಸ್? ಇಷ್ಟಕ್ಕೇ ಕನ್'ಫ್ಯೂಸ್ ಆದ್ರೆ ಮುಂದಕ್ಕೇನು? ಬೇರೇನನ್ನೋ ಕಲ್ಪಿಸಿ ಇಡ್ಲಿ ಸಪ್ಪೆ ಆಗ್ಹೋಯ್ತಾ? ಛೆ, ಛೆ!! ಪಾಪ ಇಡ್ಲಿ.
@ ಸಿಂಧು: ಅಯ್ಯೋ ಮಾರಾಯ್ತಿ, ಅಡ್ಡ ಬಿದ್ರೆ ಮುಂದೆ ದಾರಿ ಕಾಣಲ್ಲ. ನೇರ ನಡೆ, ಜೊತೆಯಾಗಿ. ನಿನಗಿಷ್ಟವಾಗಿದ್ದಕ್ಕೆ ಸಂತೋಷ.
@ alpazna: Thanks.
April 2, 2007 10:02 AM
Enigma said...
:-) i would prefer Idli any day tahn something else :-P. Nimma comments oddie bahala maja vagi uttara baritheera :-)
April 4, 2007 11:58 AM
suptadeepti said...
@enigma: ಓಹೋ, prefer ಇಡ್ಲಿ...! ಹಾಗಾದ್ರೆ ನೀವು ಕನಸುಗಾರ ಅಲ್ಲ ಅಂತ ತಿಳಿಯಲೆ? ನಿಮ್ಮ ಟಿಪ್ಪಣಿಗೆ, ಮೆಚ್ಚುಗೆಗೆ ವಂದನೆಗಳು.
April 4, 2007 1:16 PM
ಅಸತ್ಯ ಅನ್ವೇಷಿ said...
ಇಡ್ಲಿ ತಟ್ಟೆಯಲ್ಲೇ ಇಡಲಿ
ಯಾರು ಬೇಕಾದರೂ ಕೊಡಲಿ
ಆದರೆ ಅದನು ತುಂಡರಿಸಲು
ಬೇಕೆಂದರೆ ಹೇಗೆ "ಕೊಡಲಿ"?
April 4, 2007 8:08 PM
suptadeepti said...
@ಅನ್ವೇಷಿ: "ಆದರೆ ಅದನು ತುಂಡರಿಸಲು ಬೇಕೆಂದರೆ ಹೇಗೆ "ಕೊಡಲಿ"?" :- ನಿಮ್ಮ ಮನೆಯ ಇಡ್ಲಿ ಬಗ್ಗೆ ಹೇಳುತ್ತಿದ್ದೀರ? ನಾವು ನಿಮ್ಮಲ್ಲಿಗೆ ಬರುವಾಗ ಬರೀ ಉಪ್ಪಿಟ್ಟು ಮಾಡಿದರೂ ಸಾಕು, ಇಡ್ಲಿಯೇ ಬೇಕೆಂದಿಲ್ಲ.
April 4, 2007 8:56 PM
Ranjitha said...
deepthi thumba chennagede.... :)
nanu idli thenuvaga nemma nenapu kandetha eruthe... :)
January 19, 2008 6:18 AM
suptadeepti said...
ಧನ್ಯವಾದ ರಂಜಿತಾ. ನನ್ನನ್ನು ನೆನಪಿಸಿಕೊಳ್ಳುತ್ತಾ ಇಡ್ಲಿ ತಿಂದರೆ ಅದು ಸಪ್ಪೆಯಾಗಿ ತೋರದೆ? ಯಾವುದೇ ತಿಂಡಿಯನ್ನು ಅದರ ಪೂರ್ತಿ ಸ್ವಾದದ ಜೊತೆ ಸವಿಯಿರಿ, ಯಾವುದೋ/ಯಾರದೋ ನೆನಪನ್ನು ನೆಂಜಿಕೊಳ್ಳೋದು ಬೇಡ, ಅಲ್ವಾ?
January 19, 2008 10:27 AM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Sunday, 18 May 2008
Subscribe to:
Post Comments (Atom)
No comments:
Post a Comment