ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 19 May, 2008

ನಮನದ ಹನಿಗಳು

Tuesday, April 3, 2007

ಹಿರಿಯ ಚೇತನವೊಂದು ನಮ್ಮನ್ನಗಲಿದೆ. ನನಗೆ ಕೆಲವು ಕ್ಷಣಗಳ ಪರಿಚಯವೂ ಇಲ್ಲದಿದ್ದರೂ ಅತಿ ಹತ್ತಿರದ ಪರಿಚಿತ ಭಾವ, ಗೌರವ ಅವರಲ್ಲಿ. ನಿರ್ಗಮನದ ಸುದ್ದಿ ಕೇಳಿ ಎರಡು ದಿನಗಳಾದರೂ ಮನಸ್ಸು ಸ್ಥಿಮಿತಕ್ಕೆ ಬಂದಿಲ್ಲ. ಜೀವನವೇ ಹಾಗೆ.
ಸಂದ ಆತ್ಮಕ್ಕೆ ಶಾಂತಿ ಕೋರುತ್ತಾ....

(೧)ಬಾಳು ಬಣ್ಣದ ನೋಟ, ತಂಗಾಳಿ ಹೂದೋಟ,
ಕನವರಿಕೆ, ಸಲ್ಲಾಪ, ಬೇಟದಾಟ;
ಮುಂಜಾನೆ ಮಮತೆಯಲಿ, ನಡುಹಗಲು ಮತ್ತಿನಲಿ,
ಮತ್ತೆ ಮುಸ್ಸಂಜೆಯಲಿ ನೆನಪಿನೂಟ.

(೨)ಅಳುವೊಂದು ನೋವಿಗೆ, ನಗುವೊಂದು ಭಾವಕ್ಕೆ,
ಏರಿಳಿತದಲೆಗಳಲಿ ಉಯ್ಯಾಲೆ ಜೀವ;
ಮನದಲ್ಲಿ ಬೆಳಕಿಲ್ಲವಾದಲ್ಲಿ ಬದುಕಿಲ್ಲ,
ಮಂದಿರದ ಬಂಧಿಯಿದು ಆಂತರ್ಯ ಭಾವ.

(೩)ಸಂದವರು ಎದ್ದಂತೆ ನಡೆದು ಹೋದರೆ ಒಳಿತು,
ಇದ್ದವರ ಪಾಡನ್ನು ಕೇಳು, ಓ ಪ್ರಭುವೆ;
ಕಳೆದುದೆಲ್ಲವು ಸುದಿನ, ಬರುವುದನು ಕಾಣೆವು,
ಇರುಳು ಕಳೆದಹನಿಯನು ನಿಶೆ ಅಟ್ಟಿ ಬರದೆ?

(೪)ಸಾವು ಕಾಣದ ಮನೆಯ ಸಾಸಿವೆಯ ಬೇಕೆಂದ
ಗೌತಮಿಗೆ ನೀನಿತ್ತೆ ದಾರಿದೀಪವನು;
ನಿನ್ನನರಸುವ ಮನಕೆ ಹರಸಿ ಹರಿಸೈ ಶಾಂತಿ,
ನೋವಿರದ ಸಾವಿನಲಿ ಮುಗಿಸು ಬಾಳ್ವೆಯನು.
(೨೪-ಫೆಬ್ರವರಿ-೨೦೦೩)

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 5:34 PM
Labels: ,

7 ಪತ್ರೋತ್ತರ:
mala rao said...
"ಸಂದವರು ಎದ್ದಂತೆ ನಡೆದು ಹೋದರೆ ಒಳಿತು,
ಇದ್ದವರ ಪಾಡನ್ನು ಕೇಳು, ಓ ಪ್ರಭುವೆ"
ಕವನ ಓದಿ ಕಣ್ತುಂಬಿ ಬಂತು... ಇದ್ದವರ ಪಾಡನ್ನು ಕೇಳುವವನು ಸಮಾಧಾನ ಕೊಡಲೀ ಎಂಬುದಷ್ಟೇ ನಮಗೆ ಹೇಳಲುಳಿದಿರುವ ಮಾತು...ಇಲ್ಲಾ... ಮಾತುಗಳೂ ಮೂಕ ಮೂಕ... ಎದ್ದಂತೆ ನಡೆದು ಹೋದವರೇ ಪುಣ್ಯವಂತರು....
April 4, 2007 2:11 AM

sritri said...
" ನೋವಿರದ ಸಾವಿನಲಿ ಮುಗಿಸು ಬಾಳ್ವೆಯನು" ಎಂಬ ಸಾಲು - " Anaayaasena Maranam, Vinaa Dainyena Jeevanam" ಎಂಬ ಸಂಸ್ಕೃತ ಶ್ಲೋಕದ ಸಂಕ್ಷಿಪ್ತ ಭಾವಾನುವಾದಂತೆ, ಸುಂದರವಾಗಿ ಮೂಡಿ ಬಂದಿದೆ!!
ಅಗಲಿದ ವ್ಯಕ್ತಿ ಯಾರೆಂದು ತಿಳಿಸಿ, (ತಿಳಿದು) ನಂತರ ಅವರ ಆತ್ಮಕ್ಕೆ ಶಾಂತಿ ಕೋರುವುದು ಹೆಚ್ಚು ಗೌರವಪೂರ್ಣವೆನ್ನಿಸುತ್ತದೆ.
April 4, 2007 8:44 AM

suptadeepti said...
ಮಾಲಾ, ಶ್ರೀತ್ರೀ, ವಂದನೆಗಳು.
@ಮಾಲಾ: ಹೌದು, ನಡೆದು ಹೋದವರು ಪುಣ್ಯವಂತರು. ಆ ಪುಣ್ಯ ಎಲ್ಲರಿಗೂ ಸಿಗದು.
@ಶ್ರೀತ್ರೀ: ಸಂದವರು ನಡೆದರು. ಯಾರೆಂಬ ಗುರುತು ಈ ಭೌತಿಕದಲ್ಲಿ. ಆ ಆತ್ಮಕ್ಕೆ ಅದ್ಯಾವುದರ ಪರಿವೆ ಇಲ್ಲದಿರುವ ಒಂದು ತಾರ್ಕಿಕ ನೆಲೆಯಲ್ಲಿ ವ್ಯಕ್ತಿಯ ಹೆಸರು, ಗುರುತು ಬರೆದಿಲ್ಲ. ಗೌರವ ಮನದ ಭಾವ, ಪದಗಳಲ್ಲಿ ಮಾತ್ರ ಕಟ್ಟಿಟ್ಟದ್ದಲ್ಲ. ಕ್ಷಮಿಸು.
April 4, 2007 11:23 AM

Satish said...
ನೀವು ಇದನ್ನು ೨೦೦೩ ರಲ್ಲಿ ಬರೆದಿದ್ದು, ಯಾರಪ್ಪಾ ಆ ದೊಡ್ಡ ಮನುಷ್ಯರು ಎಂದು ತಲೆ ಕೆರೆದುಕೊಂಡು ಯಾರ ಹೆಸರೂ ನೆನಪಿಗೆ ಬರಲಿಲ್ಲ! ನನಗೆ "ಮನದಲ್ಲಿ ಬೆಳಕಿಲ್ಲವಾದಲ್ಲಿ ಬದುಕಿಲ್ಲ" ಎಂಬ ಸಾಲು ಇಷ್ಟವಾಯ್ತು, ಆದರೂ ನೀವು "ಬದುಕು" ಅನ್ನೋ ಪದ ಬಳಸಿದ್ದಕ್ಕೆ 'ಅಂತರಂಗ'ಕ್ಕೆ ಕಾಪಿರೈಟ್ ಕೊಡಬೇಕಾಗಿತ್ತು, ಯಾಕಂದ್ರೆ ಅದು ನನ್ನ ಫೇವರೈಟ್ ಪದ. I kind of miss kaaloo, ಅವನಿದ್ದಿದ್ರೆ ಕಾಮೆಂಟು ಬಿಡೋದಕ್ಕೆ ಒಂದು ಹೊಸ ಹುರುಪು ಬಂದಿರೋದು!
April 4, 2007 4:01 PM

suptadeepti said...
@ಸತೀಶ್: "ನೀವು ಇದನ್ನು ೨೦೦೩ ರಲ್ಲಿ ಬರೆದಿದ್ದು, ಯಾರಪ್ಪಾ ಆ ದೊಡ್ಡ ಮನುಷ್ಯರು ಎಂದು ತಲೆ ಕೆರೆದುಕೊಂಡು ಯಾರ ಹೆಸರೂ ನೆನಪಿಗೆ ಬರಲಿಲ್ಲ!"-- ಅಂದು, ೨೦೦೩ರಲ್ಲಿ ಬರೆದಾಗ ಯಾವುದೇ ದೊಡ್ಡ ಮನುಷ್ಯರು ಈ ಹನಿಗಳಿಗೆ ಪಾತ್ರರಾಗಿರಲಿಲ್ಲ. ಮನದೊಳಗಿನಿಂದ ಒದ್ದುಕೊಂಡು ಬಂದ ಭಾವಗಳನ್ನು ಬರೆದದ್ದು ಅಂದು, ಅವುಗಳಿಗೆ ಬ್ಲಾಗ್'ನಲ್ಲಿ ಜಾಗ ನೀಡಿದ್ದು ಈಗ, ಸಕಾರಣವಾಗಿ.
"ಬದುಕು" ಎಲ್ಲರ ಪದ. ಅದಕ್ಕೂ ನೀವು ಕಾಪಿರೈಟ್ ಕೇಳುವ ಹಾಗಿದ್ದರೆ ನೀವು ಆ ಹಣದಲ್ಲಿ ಭೂಗೋಳವನ್ನೇ ಕೊಳ್ಳಬಹುದಿತ್ತು! ಹಾಗೇನಾದ್ರೂ ಆದ್ರೆ, ನಮಗೂ ಒಂದಿಷ್ಟು ಭೂಮಿ ಬೆಂಗಳೂರಲ್ಲಿ ದಾನ ಮಾಡೋ ದಯೆಯಿರಲಿ ಅನ್ನಲೆ?
April 4, 2007 4:27 PM

Shiv said...
ಮುಸ್ಸಂಜೆಯಲಿ ನೆನಪಿನೂಟ.. ಎಂತಹ ಕಟುಸತ್ಯ.. ಲೌಕಿಕ ಜಗತ್ತಿನಲ್ಲಿ ಇಷ್ಟೆಲ್ಲಾ ಮಿಂದ ಮೇಲೆ ಕೊನೆಗೂ ಸಾವೆಂಬ ಸತ್ಯ ಗೊತ್ತಿದ್ದು ಗೊತ್ತಿದ್ದು ಯಾಕೇ ದುಃಖ ತರುತ್ತೆ.. ನೋವಿರದ ಸಾವಿನಲಿ ಮುಗಿಸು ಬಾಳ್ವೆಯನು..ಇದರ ಬಗ್ಗೆ ಎರಡು ಮಾತಿಲ್ಲ
April 4, 2007 11:32 PM

Satish said...
ಇಲ್ಲಿ ಬೇಕಾದರೆ ಒಂದು ೬೦-೪೦ ಸೈಟ್ ಕೊಡುವ ಧೈರ್ಯ ಮಾಡಬಹುದು, ಬೆಂಗಳೂರಿನ ಲೆಕ್ಕಾಚಾರದಲ್ಲಿ ದುರ್ಯೋಧನ ಹೇಳಿದ ಹಾಗೆ ಒಂದು ಸೂಜಿ ಮೊನೆಯಷ್ಟು ಜಾಗೆಯನ್ನೂ ದಾನ ಮಾಡುವುದು ಹಾಗಿರಲಿ, ಕೊಂಡು ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ಬಂದಿದೆಯಂತೆ! :-)
April 5, 2007 1:47 AM

No comments: