ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 19 May, 2008

ಅಮ್ಮನಿಗೆ 'ಬ್ಲಾಗಿ'ದ ನಮನ

Sunday, May 13, 2007

`ಅಮ್ಮನ ದಿನ'ದಂದು ಓದುಗರಿಗೆಲ್ಲ ಶುಭಾಶಯಗಳು.
`ಅಮ್ಮ' ಪದಕ್ಕೆ ಬಹಳ ಆಳ-ಅಗಲದ ಅರ್ಥವಿದೆ.
ಈ ಎರಡು ಕವನಗಳಿಂದ ಅಮ್ಮನ ಬಿಂಬ ನಿಮ್ಮ ಕಂಗಳಲ್ಲಿ ಮೂಡೀತೇ ನೋಡಿಕೊಳ್ಳಿ:

(೧) ಜನನಿ

ಕಣ್ಬೆಳಕ ತೋಟದೊಳು ಮುಂಗುರುಳ ನೆರಳು,
ಸಣ್ಣನೆಯ ಉಸಿರಿಗೂ ಕುಲುಕಾಡೊ ಹೆರಳು,
ಬಣ್ಣ ಬರೆಯುವ ಕುಂಚ ನಿಡಿದಾದ ಬೆರಳು,
ತಣ್ಣನೆಯ ಶಾಂತಿಯಲು ಭೋರ್ಗರೆವ ಮರಳು.

ಅಡಿ ಮೇಲೆ ಅಡಿಯಿರಿಸಿ ನಡೆದಾಡುವಾಕೆ,
ಅಡಿಯಿಂದ ಮುಡಿವರೆಗು ಶೃಂಗಾರದಾಕೆ,
ಮಡಿಯ ಮೈಲಿಗೆಯೆಲ್ಲ ಕಳೆದ್ಹಾಕುವಾಕೆ,
ಉಡಿಯಲ್ಲಿ ತೆಕ್ಕೈಸಿ ಮೈಮರೆಸುವಾಕೆ.

ಅಲೆದಲೆದು ಹೆಡೆಯೆತ್ತಿ ಆಡುವೆ ಆಳೆತ್ತರ,
ತಲೆಮಣಿದು ಭುಸುಗುಟ್ಟಿ ನೀಡುವೆ ದಡಕುತ್ತರ,
ಅಳೆವ ಯಾವಳತೆಗೂ ನಿಲುಕದ ಜೀವಾಗಾರ,
ಕಳೆದ ಶತಶತಕಗಳ ಇರುವಿಕೆಯ ಆಧಾರ.

ನಿನ್ನಡಿಯ ಬಿರುಕುಗಳ ಕಂಡು ಬೆರಗಾಗಿಹೆವು,
ನಿನ್ನುಡಿಯ ಬಿಸುಪಿನಲಿ ಮಿಂದು ಮರುಳಾಗಿಹೆವು,
ನಿನ್ನುದರ ವೈಶಾಲ್ಯದೊಳಗೆ ತೃಣವಾಗಿಹೆವು,
ನಿನ್ನೆರಡು ಕಂಗಳಲೆ ರವಿ ಶಶಿಯ ಕಾಣುವೆವು.
(ಆಗಸ್ಟ್, ೧೯೯೬)

(೨) ಸ್ಮರಣೆ

ಹೊನಲು ಹೊನಲಾಗಿ ಹರಿವ ಕೇಶ ಗಂಗೆ,
ತೆನೆಯ ತೂಗುವ ಬಯಲಂಥ ನಗೆ ತುಂಗೆ;
ಮುಗಿಲು-ಸಾಗರ ಪರಿಧಿ ಹೃದಯ ವೈಶಾಲ್ಯ,
ಅಗಲಿದಾಗಲೆ ಅರಿವು; ಮನದ ಹೂ ನೈರ್ಮಾಲ್ಯ.

ನೆರೆಹೊರೆಯ ಸುಂದರಿಯ ಸೌಂದರ್ಯ ಸೆಳೆದು,
ಅರೆಬಿರಿದ ಕಂಗಳಲೆ ಅವಳತ್ತ ನಡೆದು;
ಮತ್ತು-ಮೆತ್ತೆಗಳ ರಾಜ್ಯದಲಿ ಮೈ ಮರೆಯೆ,
ಸುತ್ತುವುದು ನುಣ್ಣನೆಯ ರೇಶ್ಮೆ ಎಳೆಯೆಳೆಯು.

ಹೊಳೆವ ತಿಳಿನೀರ ಕೊಳ ಎಷ್ಟಿದ್ದರೇನೀಗ,
ನಲಿವ ಹೊಂದಾವರೆಗಳಿಲ್ಲವಾದಾಗ;
ಸವೆದ ಹಾದಿಯ ಕೊನೆಯ ತಿರುವಿನಲಿ ನಿಂತು,
ಅವಲೋಕಿಸಲೊಂಟಿತನ ಜಿಗಿದೆದ್ದು ಬಂತು.

ಮತ್ತೆ ಮರುಕಳಿಸುವುದು ಹೊತ್ತವಳ ನೆನಹು,
ಅತ್ತು ಅತ್ತರು ಸಿಗದು, ಮತ್ತವಳ ಮಡಿಲು.
(೦೭-ಡಿಸೆಂಬರ್-೨೦೦೦)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:27 AM
Labels: , ,

9 ಪತ್ರೋತ್ತರ:
Shiv said...
ಸುಪ್ತದೀಪ್ತಿ,
ಅಮ್ಮನ ದಿನದಂದು ಅಮ್ಮನಿಗೆ ಈ ಕವನಗಳ ಮೂಲಕ ಮನದ ನಮನಗಳನ್ನು ಸಲ್ಲಿಸಿದ್ದೀರಾ.
"ನಿನ್ನುದರ ವೈಶಾಲ್ಯದೊಳಗೆ ತೃಣವಾಗಿಹೆವು,
ನಿನ್ನೆರಡು ಕಂಗಳಲೆ ರವಿ ಶಶಿಯ ಕಾಣುವೆವು."

ಎಂತಹ ಸುಂದರ ಸಾಲುಗಳು
"ನೆರೆಹೊರೆಯ ಸುಂದರಿಯ ಸೌಂದರ್ಯ ಸೆಳೆದು,"
ನೆರೆಹೊರೆಯ ಸುಂದರಿಯ ?? ಅರ್ಥವಾಗಲಿಲ್ಲ
May 13, 2007 12:50 AM

VENU VINOD said...
ವರ್ಷವಿಡೀ ಭ್ರಮೆಗಳ ಹಿಂದೆ ಓಡುತ್ತಾ ಅಮ್ಮನನ್ನು ಮರೆಯುವ ನನ್ನಂಥವರಿಗೆ ಅಮ್ಮನ ಪ್ರೀತಿ ನೆನಪಿಸಿದ್ದೀರಿ, ಅಮ್ಮನ ದಿನಕ್ಕೆ ನಾನೂ ನಾಲ್ಕು ಸಾಲು ಗೀಚುವಂತೆ ಮಾಡಿದ್ದೀರಿ!
May 13, 2007 3:46 AM

Jagali Bhagavata said...
ಚೆನ್ನಾಗಿವೆ. ಅಬ್ಬ, ಅಂತೂ ಪುನರ್ಜನ್ಮದಿಂದ ಹೊರಗೆ ಬಂದ್ರಲ್ಲ, ತಾತ್ಕಾಲಿಕವಾಗಿಯಾದ್ರೂ:-)
May 13, 2007 2:48 PM

Mahantesh said...
ಮತ್ತೆ ಮರುಕಳಿಸುವುದು ಹೊತ್ತವಳ ನೆನಹು,
ಅತ್ತು ಅತ್ತರು ಸಿಗದು, ಮತ್ತವಳ ಮಡಿಲು!!!!!s
aalugaLu tumba hiDisidavu...
May 14, 2007 5:05 AM

ಶ್ಯಾಮಾ said...
"ಮತ್ತೆ ಮರುಕಳಿಸುವುದು ಹೊತ್ತವಳ ನೆನಹು,
ಅತ್ತು ಅತ್ತರು ಸಿಗದು, ಮತ್ತವಳ ಮಡಿಲು"
ಎಷ್ಟು ಅರ್ಥಗರ್ಭಿತ ಸಾಲುಗಳು ತುಂಬಾ ಚೆನ್ನಾಗಿದೆ
May 14, 2007 11:01 PM

December Stud said...
"ಮತ್ತೆ ಮರುಕಳಿಸುವುದು ಹೊತ್ತವಳ ನೆನಹು,
ಅತ್ತು ಅತ್ತರು ಸಿಗದು, ಮತ್ತವಳ ಮಡಿಲು"
Awesome!!!
May 15, 2007 11:53 AM

ಮನಸ್ವಿನಿ said...
"ಹೊಳೆವ ತಿಳಿನೀರ ಕೊಳ ಎಷ್ಟಿದ್ದರೇನೀಗ,
ನಲಿವ ಹೊಂದಾವರೆಗಳಿಲ್ಲವಾದಾಗ "
ಈ ಸಾಲುಗಳು ತುಂಬಾ ಇಷ್ಟವಾದವು.ಹಾಡುಗಳು ಚೆನ್ನಾಗಿವೆ
May 15, 2007 7:32 PM

pradyumna said...
"ammana" lekhanakke anantha dhanyavaadagalu.....
May 15, 2007 9:15 PM

suptadeepti said...
ಪ್ರತಿಕ್ರಿಯೆಗಳಿಗೆಲ್ಲ ಧನ್ಯವಾದಗಳು.

@ಶಿವ್: ಈ ಕವನ ನಾನು ಬರೆದದ್ದು ಅಮ್ಮ ಭಾರತಾಂಬೆಯನ್ನು ಕುರಿತು. ಅವಳ ನೆರೆಹೊರೆಯ ಸುಂದರಿ-- ಹೊರದೇಶಗಳು. ಅಥವಾ ಬೆಳೆದ ಮಗನಿಗೆ ಮತ್ತು-ಮೆತ್ತೆಗಳ ರಾಜ್ಯದಲ್ಲಿ ದಕ್ಕುವ ಮಡದಿಯೆಂಬ ಸುಂದರಿಯೂ ಆಗಬಹುದು...!

@ವಿನೋದ್: ನಿಜ ಹೇಳಬೇಕೆಂದರೆ ಅಮ್ಮನನ್ನು ನಾವ್ಯಾರೂ ಮರೆಯೋಕೆ ಸಾಧ್ಯವಿಲ್ಲ, ಆಕೆ ನಮ್ಮೆಲ್ಲರ ಇರವಿನ ಕಾರಣ. ನಮ್ಮನ್ನು ಮರೆತ ಹೊರತು ಆಕೆಯನ್ನು ಮರೆಯಲಾರೆವು.

@ಭಾಗತರೇ, ಪುನರ್ಜನ್ಮದಿಂದ ಹೊರಗೆ ಬಂದದ್ದು ನಿಮಗೆ ಇಷ್ಟು ಸಮಾಧಾನ ಕೊಡುತ್ತೆ ಅನ್ನುವುದರ ಅರಿವಿರಲಿಲ್ಲ. ಆದರೆ, ಇದು ತಾತ್ಕಾಲಿಕ ಅನ್ನುವ ಸತ್ಯ ನಿಮಗೂ ಗೊತ್ತು. ಒಳ್ಳೆಯದು.

@ಮಹಾಂತೇಶ್, ಶ್ಯಾಮಾ, ಡಿಸೆಂಬರ್ ಸ್ಟಡ್, ಮನಸ್ವಿನಿ: ಧನ್ಯವಾದಗಳು.

@ಪ್ರದ್ಯುಮ್ನ: ನನ್ನ ಅಕ್ಷರಲೋಕಕ್ಕೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.
May 15, 2007 9:39 PM

No comments: