ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 19 May, 2008

ವಿಷು- ಸೌರ ಯುಗಾದಿಯ ಸಂಭ್ರಮ


ವಿಷು= ಸೌರ ಯುಗಾದಿಯ ದಿನ. ಸಾಮಾನ್ಯವಾಗಿ ತಮಿಳು, ಮಲೆಯಾಳ, ಮತ್ತು ದಕ್ಷಿಣ-ಕನ್ನಡ ಜಿಲ್ಲೆಯ ಕೆಲವರಿಗೆ ಸೌರ ಸಂಕ್ರಾಂತಿಯ ಮರುದಿನವೇ (೧೪/೧೫-ಎಪ್ರಿಲ್) ಯುಗಾದಿ ಹಬ್ಬ.

ನಮ್ಮ ಕಡೆ (ಮಂಗಳೂರು, ಉಡುಪಿ, ಸುತ್ತಮುತ್ತ) ಅಂದಿನ ವಿಶೇಷ: ವಿಷು-ಕಣಿ (ಕಣಿ= ಭವಿಷ್ಯ ಫಲ).

ಹಿಂದಿನ ದಿನ ಸಂಜೆಯೇ ದೇವರ ಪೂಜೆ ಆದ ಮೇಲೆ, ಮತ್ತೆ ದೇವರ ಮನೆ ಸಾರಿಸಿ, ಒರಸಿ ಶುದ್ಧ ಮಾಡಿ, ದೊಡ್ಡ ಹರಿವಾಣದಲ್ಲಿ ಸುಮಾರು ಒಂದು ಸೇರು ಅಕ್ಕಿ ಹಾಕಿ, ಅಕ್ಕಿಯ ನಡುವೆ ಸುಲಿಯದ ತೆಂಗಿನಕಾಯಿ (ಲಭ್ಯವಿಲ್ಲದಲ್ಲಿ, ಸುಲಿದ ಇಡೀ ಕಾಯಿಯೂ ಆಗುತ್ತದೆ) ಇಟ್ಟು, ಅದರ ಸುತ್ತೆಲ್ಲ ಹೊಸಫಲಗಳಾದ ಹಣ್ಣು-ತರಕಾರಿಗಳನ್ನು ಇಟ್ಟು, ನಡುವಲ್ಲೊಂದು ಕನ್ನಡಿ ಇಟ್ಟು... ಅದೇ ಒಂದು ಸಂಭ್ರಮ. ಹೊಸ ಫಲಗಳೆಂದರೆ, ಆ ವರ್ಷದ ಗೇರು, ಮಾವು, "ಪುಟ್ಟ-ಹಲಸು", "ಮುಳ್ಳುಸೌತೆ", "ಬಣ್ಣದ ಸೌತೆ", ಬೆಂಡೆ, ತೊಂಡೆ, ಅಲಸಂಡೆ-- ಇತ್ಯಾದಿ ಇತ್ಯಾದಿ ವಾರ್ಷಿಕ ಬೆಳೆಗಳಲ್ಲಿ ಅಂದು ಕೊಯ್ಯಬಹುದಾದ ಮಾಗಿದ ಹಣ್ಣು-ತರಕಾರಿಗಳು. ಇವೆಲ್ಲ ಹಿಂದಿನ ದಿನದ ತಯಾರಿ. ಮರುದಿನಕ್ಕೆ ಹೊಸ ಬಟ್ಟೆಯನ್ನೂ ತಯಾರಿಸಿಟ್ಟುಕೊಂಡು ಕನಸುಗಣ್ಣಲ್ಲಿ ನಿದ್ದೆಹೋದರೆ ಮರುದಿನ ಯುಗಾದಿ.

ಅಂದು ಬೆಳಗ್ಗೆ ಏಳುತ್ತಿದ್ದಂತೆಯೇ (ಬೇರೇನನ್ನೂ ಬೇರೆ ಯಾರನ್ನೂ ನೋಡದೇ) ಸೀದಾ ದೇವರ ಮನೆಗೆ ಹೋಗಿ ಅಲ್ಲಿ ಅಮ್ಮ ಹೂವು, ಚಿನ್ನದ ಆಭರಣಗಳಿಂದ ಅಲಂಕರಿಸಿದ್ದ "ಕಣಿ"ಯನ್ನು ನೋಡಿ, ಅದರ ನಡುವಿನ ಕನ್ನಡಿಯಲ್ಲಿ ಮುಖ ನೋಡಿ ಕಣಿಗೂ ದೇವರಿಗೂ ನಮಸ್ಕರಿಸಬೇಕು. ಇದು ಕೆಲವು ಮನೆಗಳ ಕ್ರಮವಾದರೆ ಇನ್ನು ಕೆಲವೆಡೆ- ಮನೆ ಮಂದಿ ಎಲ್ಲರೂ ಮುಖ ತೊಳೆದು, ದೇವರ ಮನೆಗೆ ಬಂದು, ಅಪ್ಪ "ಕಣಿ ದೇವರಿಗೆ" (ಲಕ್ಷ್ಮಿಯೆಂದು) ಪೂಜೆ ಮಾಡಿ, ಎಲ್ಲರೂ ಕನ್ನಡಿಯಲ್ಲಿ ತಮ್ಮ ಮುಖ ನೋಡಿ, ಕಣಿಗೂ ಮನೆದೇವರಿಗೂ ನಮಸ್ಕರಿಸುವುದು ಪದ್ಧತಿ. ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ಮನೆದೇವರ ಪೂಜೆ ಆದ ಮೇಲೆ, ಎಲ್ಲ ಹಿರಿಯರಿಗೂ ಕಿರಿಯರೆಲ್ಲರೂ ನಮಸ್ಕರಿಸಿದರೆ ಹಬ್ಬದ ಮೊದಲ ಭಾಗ ಮುಗಿದಂತೆ. ಕಣಿದೇವರಿಗೆ ಹಾಕಿದ್ದ ಚಿನ್ನದಲ್ಲಿ ಕೆಲವನ್ನಾದರೂ ಮನೆಯವರು ಅಂದು ಧರಿಸಬೇಕು. ಅಮ್ಮ, ಕಣಿಯ ತರಕಾರಿಗಳನ್ನೂ ತೆಂಗಿನಕಾಯಿಯನ್ನೂ ಉಪಯೋಗಿಸಿ, ಮತ್ತೊಂದಿಷ್ಟು ಮುತುವರ್ಜಿ ವಹಿಸಿ ಅದೇ ಅಕ್ಕಿಯ ಅನ್ನ, ತರಕಾರಿಗಳ ಪಲ್ಯ, ಅವಿಯಲ್, ಹುಳಿ, ಕೋಸಂಬ್ರಿ, ಎಳೆ ಗೇರುಬೀಜ ಹಾಕಿದ ಕಡ್ಲೆಬೇಳೆ ಪಾಯಸ, ಎಲ್ಲ ಮಾಡಿದ್ರೆ, ಮಧ್ಯಾಹ್ನದ ಊಟ ಹಬ್ಬದ ಎರಡನೇ ಭಾಗ.

ಇನ್ನುಳಿದದ್ದು ಮಕ್ಕಳ ಪಾಲಿಗೆ ಕಷ್ಟದ ಸಮಯ. ರಾತ್ರೆ ಮಲಗುವವರೆಗೂ ಒಳ್ಳೆಯ ಮಕ್ಕಳಾಗಿ, ಹಿರಿಯರಿಂದ ಬೈಯಿಸಿಕೊಳ್ಳದೆ ಇರುವುದು ಹೇಗೆ? ಹೊಸ ಬಟ್ಟೆ ತೆಗೆಯಲು ಇಷ್ಟವಿಲ್ಲ (ವರ್ಷ ಪೂರ್ತಿ ದಿನ-ದಿನ ಹೊಸ ಬಟ್ಟೆ, ಯಾರಿಗೆ ಬೇಡ!?). ಅದನ್ನು ಬದಲಿಸದೆ ಆಟಕ್ಕೆ ಹೊರಗೆ ಹೋಗುವಂತಿಲ್ಲ. ಬಟ್ಟೆ ಬದಲಿಸಿ ಹೋದರೂ, ಅಲ್ಲಿಯೂ "ಒಳ್ಳೆಯವರಾಗಿ"ಯೇ ಇರಬೇಕಾದ ಧರ್ಮಸಂಕಟ. ಅಂತೂ ಇಂತೂ ಸಂಜೆಯಾಗಿ, ರಾತ್ರೆಯಾಗಿ ಮತ್ತೆ ಊಟ ಮಾಡಿ ಮಲಗಿದರೆ ಹಬ್ಬ ಮುಗಿದೇ ಹೋದ ಖಿನ್ನತೆಯ ಜೊತೆಗೇ ಇಡೀ ದಿನದ ನಮ್ಮ ವರ್ತನೆಯ ಬಗ್ಗೆ ಖುಷಿ ಅಥವಾ ಸಂಕಟವೂ ಸೇರಿಕೊಂಡಿರುತ್ತಿತ್ತು. ಹಾಗೆ ಸಾಗುತ್ತಿತ್ತು ನಮ್ಮ ಬಾಲ್ಯದ ವಿಷು-ಯುಗಾದಿ.

ವಿಷು-ಕಣಿಯ ಜೊತೆಗೆ ಹೊಂದಿಹೋಗಿರುವ ಎರಡು ಕಥೆಗಳು ನಮ್ಮ ಅಮ್ಮನ ಮನೆಯಲ್ಲಿ ಚಾಲ್ತಿಯಲ್ಲಿವೆ, ಅವರ ಬಾಲ್ಯಕ್ಕೆ ಸಂಬಂಧಿಸಿದ್ದು:

(೧) ನಮ್ಮಮ್ಮ ತುಂಬಾ ಸಣ್ಣವಳಿದ್ದಾಗ, ಒಂದು ಯುಗಾದಿಗೆ ಹಿಂದಿನ ದಿನ ತನಗಿಂತ ಹಿರಿಯರೆಲ್ಲ "ನಾಳೆ ಬೇಗ ಎದ್ದು ಕಣಿ ನೋಡಿ, ಆಮೇಲೆ ಮುಖ ತೊಳೆದು ಕಾಫಿ ಕುಡಿಯಬೇಕು" ಅಂತ ಮಾತಾಡಿಕೊಂಡಿದ್ದು ಕೇಳಿದ್ದಾಳೆ. ಮರುದಿನ ತಾನೂ ಬೇಗ ಎದ್ದು, ಕಣಿ ನೋಡಿ ಬಂದು, ಮುಖ ತೊಳೆದು ಒಳಗೆ ಬಂದಾಗ ಅವಳಿಗಿಂತ ಅಣ್ಣ ದೂರಿತ್ತ- "ಇವಳು ಕಣಿ ನೋಡ್ಲಿಲ್ಲ"! ಹುಡುಗಿಗೆ ತಬ್ಬಿಬ್ಬಾಗಿ, ತನ್ನಮ್ಮನ ಜೊತೆ- "ಅಮ್ಮ, ನಾನು ಹೋಗಿ ನೋಡಿದೆ, ಕಣಿಯಲ್ಲಿ ಏನೂ ಇರಲಿಲ್ಲ, ಯಾಕೆ ನೋಡಬೇಕು?" ಅಂತ ಕೇಳಿದಾಗಲೇ ಗೊತ್ತಾಗಿದ್ದು, ಅವಳು ಮನೆ ಮುಂದಿದ್ದ, ಮಳೆಗಾಲದಲ್ಲಿ ನೀರು ಹರಿಯುವ, ಈಗ ಬರಿದಾಗಿರುವ, ಕಣಿ ನೋಡಿ ಬಂದಿದ್ದಾಳೆಂದು. ಎಲ್ಲರಿಗೂ ನಗು, ಈಕೆಗೆ ವಿಸ್ಮಯ.

(೨) ಮತ್ತೊಮ್ಮೆ, ನಮ್ಮಮ್ಮನ ಕೊನೇ ತಮ್ಮ ಒಂದು ಯುಗಾದಿ ದಿನ, ತಾನು ಎಲ್ಲರಿಗಿಂತ ಕಿರಿಯ, ಉಳಿದೆಲ್ಲರಿಗೂ ನಮಸ್ಕರಿಸಿದ ಮೇಲೆ, ತನಗಿಂತ ಹಿರಿಯಣ್ಣನನ್ನು ತನಗೆ ನಮಸ್ಕರಿಸಲು ಹಠ ಹಿಡಿದ. ಉಳಿದವರು ಬುದ್ಧಿ ಹೇಳಿದರು, ಕಿರಿಯರು ಹಿರಿಯರಿಗೆ ನಮಸ್ಕಾರ ಮಾಡುವುದು ಕ್ರಮವೆಂದು. ಖಿನ್ನನಾದ ಹುಡುಗ ಅಂಗಳಕ್ಕೆ ಹೋಗಿದ್ದಾನೆ. ಮನೆಯ ಬೆಕ್ಕು ಬಾಲ ಬೀಸಿಕೊಂಡು ಬಿಸಿಲಾಡಿಸುತ್ತಾ ಕೂತಿತ್ತು. ಅದರ ಮುಂದೆ ನಿಂತು- "ಹ್ಙೂಂ!! ಮಾಡು ನನಗೆ ನಮಸ್ಕಾರ, ನೋಡು ನಾನು ನಿನಗಿಂತ ದೊಡ್ಡವ, ನೀನು ನನಗೆ ನಮಸ್ಕಾರ ಮಾಡು...!" ಅಂತಿದ್ದ ಕಿರಿಯನನ್ನು ನೋಡಿ ಹಿರಿಯರೆಲ್ಲ ಘೊಳ್ಳೆಂದು ನಕ್ಕಿದ್ದರು. ಆತನಿಗೆ ಅವಮಾನವಾಗಿ ಆ ಇಡೀ ಮುಂಜಾನೆ ಪಡಸಾಲೆಯ ಬೆಂಚು ಬಿಟ್ಟು ಎದ್ದಿರಲಿಲ್ಲ.

ಈ ಎರಡು ನಗೆಹೂಗಳೊಂದಿಗೆ ಸರ್ವರಿಗೂ ಸೌರಯುಗಾದಿಯ ಶುಭಾಶಯಗಳು.
ಈಗ ಹೇಳಿ, ನಿಮ್ಮ ವಿಷು-ಕಣಿ ಹೇಗಾಯ್ತು?
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:40 PM
Labels: ,

14 ಪತ್ರೋತ್ತರ:
sritri said...
ವಿಷು-ಕಣಿ ಎಲ್ಲದರ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ Thanks.
ಎಲ್ಲರಿಗೂ ಸೌರ ಯುಗಾದಿಯ ಶುಭಾಶಯಗಳು. ಒಂದೇ ಬಾಲ್ಯ, ಒಂದೇ ಹರಯಗಳು ನಮಗಿದ್ದರೂ ಯುಗಾದಿ ಹಬ್ಬ ಎರಡಿವೆ. ಸಂತೋಷವಲ್ಲವೇ!
April 14, 2007 2:35 PM

Shiv said...
ಸುಪ್ತದೀಪ್ತೀಯವರೇ,
ವಿಷು ಹಬ್ಬದ ಬಗ್ಗೆ ಸವಿಸ್ತಾರವಾಗಿ ಹೇಳಿದ್ದಕ್ಕೆ ವಂದನೆಗಳು..
ಸೌರ್ಯಾಮಾನ ಯುಗಾದಿಯ ಬಗ್ಗೆ ಕೇಳಿದ್ದೆ, ಆದರೆ ವಿಷು ಇಷ್ಟು ವಿಶಿಷ್ಟವಾಗಿ ಇರುತ್ತೆ ಬ್ಲಾಗ್‍ಗಳಲ್ಲಿ ನೋಡಿದಾಗಲೇ ಗೊತ್ತಾಗಿದ್ದು. ಎರಡು ನಗೆಹೂಗಳು ಚೆನ್ನಾಗಿದ್ದವು :)ನಿಮಗೆ ನಿಮ್ಮ ಕುಟುಂಬದವರಿಗೆಲ್ಲಾ ವಿಷುವಿನ ಶುಭಾಶಯಗಳು !!
April 14, 2007 4:03 PM

ಅಸತ್ಯ ಅನ್ವೇಷಿ said...
ಸುಪ್ತದೀಪ್ತಿಯವರೆ, ಕಣಿಯಲ್ಲಿ ಪೇರಿಸಿಟ್ಟಿದ್ದ ಹಣ್ಣುಗಳೆಲ್ಲಾ ಹಿಂದಿನ ದಿನವೇ ಹೊಟ್ಟೆಯೊಳಗೆ ಮಾಯವಾಗಿಬಿಟ್ಟಿತ್ತು. ಬೇಗನೇ ಎದ್ದು ಕಣಿ ನೋಡಬೇಕೆಂಬ ಮನಸ್ಸಿದ್ದರೂ ಏಳುವುದಕ್ಕೇ ಕಣಿ ಕೇಳಿದ ಕಾರಣದಿಂದಾಗಿ ತಡವಾಗಿತ್ತು. ಒಟ್ಟಾರೆ ಕಣಿ ನೋಡಲಾಗಲಿಲ್ಲ. ಶುಭಾಶಯಗಳು
April 14, 2007 8:45 PM

ರಾಜೇಶ್ ನಾಯ್ಕ said...
ಸುಪ್ತದೀಪ್ತಿ,
ವಿಷು ಬಗ್ಗೆ ಮತಷ್ಟು ತಿಳಿದುಕೊಂಡೆ ನಿಮ್ಮ ಬರಹದಿಂದ. ನಾವು ಚಂದ್ರಮಾನ ಯುಗಾದಿಯಂದೇ ಹಬ್ಬ ಆಚರಿಸಿದ್ದೆವು. ಆದರೂ ವರ್ಷಗಳಿಂದ ವಿಷು ಆಚರಿಸುವುದನ್ನು ನೋಡುತ್ತ ಬಂದಿದ್ದೇನೆ. ಮೊನ್ನೆ ಶ್ರೀಯವರ ಬ್ಲಾಗ್ ನಲ್ಲಿ ವಿಷು ಬಗ್ಗೆ ಓದಿದೆ. ಈಗ ನಿಮ್ಮ ಬ್ಲಾಗ್ ನಲ್ಲಿ.
ಎರಡು ನಗೆಹೂಗಳು ಐಸಿಂಗ್ ಆನ್ ದ ಕೇಕ್ ಇದ್ದಂಗೆ. ವಿಷು ಶುಭಾಶಯಗಳು ನಿಮಗೆ.
April 14, 2007 11:12 PM

ವಿಚಿತ್ರಾನ್ನಭಟ್ಟ said...
Wish U ಸಂಭ್ರಮದ ವಿಷು
April 15, 2007 2:36 AM

mala rao said...
jyOthi,
lEkana cennaagide
nimma kone maavana kathe Odi nakkU nakkU saakaaytu........
shubhaashayagaLu
April 15, 2007 10:47 AM

ಸಿಂಧು Sindhu said...
ವಿಷು ಶುಭಾಶಯಗಳು.. ನೋವ ಕ್ಷಣಗಳನ್ನಣಕಿಸುವಷ್ಟು ನಗುವಿರಲಿ ನಿಮ್ಮ ಬಾಳಲ್ಲಿ.
April 15, 2007 9:13 PM

Sanath said...
ವಿಷು ಶುಭಾಶಯಗಳು..
April 15, 2007 10:34 PM

suptadeepti said...
ಬ್ಲಾಗಿಗೆ ಭೇಟಿಕೊಟ್ಟು, ಹರಸಿ-ಹಾರೈಸಿದವರಿಗೆಲ್ಲ ವಂದನೆಗಳು, ಧನ್ಯವಾದಗಳು.

@ಶ್ರೀತ್ರೀ: ನಿಜ, ಎರಡು ಯುಗಾದಿಗಳಿಂದ ಆರಂಭಿಸಿ, ವರ್ಷ ಪೂರ್ತಿ ಹಬ್ಬಗಳ ಸಾಲುಗಳೇ ನಮಗಿವೆ. ಒಂದೆ ಬಾಲ್ಯ, ಒಂದೆ ಹರೆಯ, ಒಂದೆ ಜನ್ಮ ಅನ್ನುವದನ್ನು ನೆನೆವುದಕ್ಕಿಂತ ಆ ಒಂದು ಜನ್ಮದಲ್ಲಿ ಎಷ್ಟು (ಒಟ್ಟೂ ಎಷ್ಟು) ಹಬ್ಬಗಳನ್ನು "ಸವಿ"ದೆವೆಂದು ಲೆಕ್ಕ ಹಾಕೋಣವೆ?

@ಶಿವ್: ವಿಷು ನಮ್ಮಮ್ಮನ ಮನೆಕಡೆ ಈ ರೀತಿ ಆಚರಣೆ. ಇವೆಲ್ಲ ಮನೆಯಿಂದ ಮನೆಗೆ ವ್ಯತ್ಯಾಸವಾಗುವ ಪದ್ಧತಿಗಳು.

@ಅನ್ವೇಷಿ: ಹಣ್ಣು ಹಿಂದಿನ ರಾತ್ರೆಯೇ ಹೊಟ್ಟೆ ಸೇರಿದ್ದು ವಿಶೇಷ ಅಲ್ಲ! ಬಾಳೆಯ ತೋಟದಲ್ಲಿ ಮಾಡಿದ ಉಪವಾಸ ಯಾರಿಗೆ ನೆನಪಿಲ್ಲ!? ಕಣಿ ಕೇಳಿದರೂ ಕಣಿ ನೋಡಿಲ್ಲ ಅಂದ್ರೆ, ನಿಮ್ಮ ಹೆಸರಿಗೆ ಅನ್ಯಾಯ ಮಾಡಿಲ್ಲ, ಬಿಡಿ. ಎಲ್ಲ ಸಾಂಗ.

@ರಾಜೇಶ್: ನೀವು ಬೆಂಗಳೂರಿಗ ಅನ್ನೋದನ್ನು ಸಾಬೀತು ಮಾಡಿದ್ರಾ, ಹೇಗೆ? "ಐಸಿಂಗ್ ಆನ್ ದ ಕೇಕ್" ಅನ್ನೋದ್ರ ಬದಲು "ಹೋಳಿಗೆ ಮೇಲೆ ತುಪ್ಪ" ಅನ್ನಬಾರದಿತ್ತಾ? "ಪಾಯಸದಲ್ಲಿ ಗೇರುಬೀಜ, ದ್ರಾಕ್ಷೆ" ಅನ್ನಬಹುದಿತ್ತಾ? ಹೋಗ್ಲಿ ಬಿಡಿ... ನಿಮಗೇ ಕೇಕೇ (ಕೇಕ್+ಏ) ಇರಲಿ.

@ವಿ.ಭಟ್ಟ: ನಿಮ್ಮ Wish-U ಸೇರಿದೆ.

@ಮಾಲಾ: ನಗು ಸಹಜ. ಇನ್ನೊಂದೆರಡು ಮೊಗಗಳಿಗೆ ಹಂಚಿಬಿಡು.

@ಸಿಂಧು: ನೋವ ಕ್ಷಣಗಳನ್ನಣಕಿಸಿ ಅವುಗಳಿಗೇ ಅಣಕಿಸಿಕೊಂಡ ನೋವು ಕೊಡುವ ನಿಮ್ಮ ಮಾತು ಚೆನ್ನಾಗಿದೆ.

@ಸನತ್: ನನ್ನ ಅಕ್ಷರ ಲೋಕಕ್ಕೆ ಸ್ವಾಗತ. ಬರುತ್ತಿರಿ.
April 15, 2007 11:14 PM

Shrilatha Puthi said...
ಜ್ಯೋತಿ,
ಚಂದದ ಬರಹ. ದಕ್ಷಿಣಕನ್ನಡಿಗರ ಈ ಯುಗಾದಿ ಆಚರಣೆ ಬಗ್ಗೆ ಯಾರಿಗೂ ಹೆಚ್ಚಾಗಿ ಗೊತ್ತಿಲ್ಲ. ಯುಗಾದಿ ದಿನ ವರ್ಷದಲ್ಲಿ ಮೊದಲ ಸಲ ಭೂಮಿಗೆ ಪೂಜೆ ಮಾಡಿ ಉಳುವುದು ನಮ್ಮ ಕಡೆ ಇರುವ ಇನ್ನೊಂದು ಸಂಪ್ರದಾಯ.

ನೀವು ಪ್ರಸ್ತಾಪಿಸಿದ ’ಎಳೆ ಗೇರುಬೀಜ ಹಾಕಿದ ಕಡ್ಲೇಬೇಳೆ ಪಾಯಸ’ ಒಂದು ತಮಾಷೆ ನೆನಪಿಸಿತು. ನಮ್ಮಲ್ಲಿ ಯಗಾದಿ ದಿನ ಪಾಯಸಕ್ಕೆ ಹಾಕುವ ಎಳೇ ಗೇರುಬೀಜ ಬೇರೆಯವರ ಮರಗಳಿಂದ ಕದ್ದು ತಂದದ್ದಾಗಿರಬೇಕು ಅಂತ ಕ್ರಮ. ನಾವು ಚಿಕ್ಕವರಾಗಿದ್ದಾಗ ಯುಗಾದಿ ಮುಂಚಿನ ದಿನ ಗೇರಿಬೀಜ ಕದಿಯುವ ಗಮ್ಮತ್ತು! ಪಾರ್ಸಿಗಳ ಹೊಸ ವರ್ಷ ಮಾರ್ಚ್ ತಿಂಗಳಲ್ಲಿ ಬರುತ್ತದೆ (nouroz). ನಾನು ಕಳೆದ ವರ್ಷ ಇರಾನ್ ನಲ್ಲಿ ಇದ್ದಾಗ ಅವರ ಹೊಸ ವರ್ಷದ ಆಚರಣೆಯಲ್ಲಿ ನಮ್ಮ ಕಣಿಯ ಹಾಗೆಯೇ ಒಂದು ಕ್ರಮ ಇರುವುದನ್ನು ನೋಡಿದ್ದೆ. ಈ post ನೋಡಿ: http://sillylittlethings.blogspot.com/2006/04/experience-tehran.html
April 16, 2007 1:58 AM

Mahesh Chevar said...
ಬಿಸು ಪರ್ಬೊದ ಸೊಲ್ಮೆಲು. ಬಿಸು ಗಮ್ಮತ್ತಾ?
April 16, 2007 1:37 PM

suptadeepti said...
@ಶ್ರೀಲತಾ: ಧನ್ಯವಾದಗಳು. ಯುಗಾದಿ ದಿನ ಭೂಮಿ ಪೂಜೆ ಮಾಡಿ ಗದ್ದೆ ಉಳುವ ಕ್ರಮ ಗೊತ್ತಿರಲಿಲ್ಲ. ಬೇಸಾಯ ಇರುವ ಮನೆಗಳ ಕ್ರಮವಿರಬೇಕು. ಹಾಗೇ ಗೇರುಬೀಜ ಕದ್ದು ತರುವ ಪದ್ಧತಿಯೂ ಗೇರು ತೋಟ ಇಲ್ಲದವರಿಂದ ಶುರುವಾಗಿರಬೇಕು. ಪಾರ್ಸಿಗಳ ವರ್ಷಾಚರಣೆಯ ಬಗ್ಗೆ ತಿಳಿಸಿದ್ದಕ್ಕೆ ಮತ್ತೆ ಧನ್ಯವಾದಗಳು.

@ಮಹೇಶ್: ಈರೆಗ್ಲಾ ಸೊಲ್ಮೆಲು. ಈ ಪರದೇಶೊಡ್ ಬಿಸುಲಾ ಇಜ್ಜಿ, ಬಿಸಲೆಲಾ ಇಜ್ಜಿ. ಐತಾರ ಕಾಂಡೆ ಲಕ್ಕೊಂದು ಒಂಜಿ ಕ್ಲಾಸ್'ಗ್ ಬಲ್ತೆ... ಬನ್ನಗ ಅರೆಜೀವ ಆದಿತ್ತೆ, ಅವ್ವೇ ನಮ್ಮೊ ಬಿಸು ಆಂಡ್. ಈರ್ ದಾದ ಮಲ್ತರ್?
April 16, 2007 2:38 PM

parijata said...
ಸುಪ್ತದೀಪ್ತಿಯವರೆ, ನಿಮಗೂ ಹೊಸ ವರ್ಷದ ಶುಭಾಶಯಗಳು. ನಮ್ಮ ನವವರ್ಷಾರಂಭ ಯುಗಾದಿಯಂದೇ ಆಯಿತು. ನನ್ನ ತಾಯಿಯ ಮನೆಯಲ್ಲಿ ಬೇವು ಬೆಲ್ಲಗಳ ಜೊತೆಗೆ ಹುಣಿಸೆಹಣ್ಣು, ಹುರಿಗಡಲೆಪುಡಿ ಗೇರುಬೀಜ, ದ್ರಾಕ್ಷಿ ಮುಂತಾದ ವಸ್ತುಗಳನ್ನು ಸೇರಿಸಿ ತಿನ್ನುವುದು ವಾಡಿಕೆ. ಬೆಂಗಳೂರಿನ ಕಡೆ ಬರಿಯ ಬೇವು-ಬೆಲ್ಲಗಳನ್ನು ಸೇರಿಸಿ ತಿನ್ನುತ್ತಾರೆ. ನಮ್ಮ ಆಚರಣೆಗಳಲ್ಲಿ ಅದೆಷ್ಟು ವೈವಿಧ್ಯ!
April 17, 2007 9:38 PM

suptadeepti said...
@ಪಾರಿಜಾತ: ನಿಜ, ನಮ್ಮ ಹಿಂದೂ ಆಚರಣೆಗಳು ಕೆಲವೊಮ್ಮೆ ಒಂದೇ ಊರೊಳಗೇ ಮನೆಯಿಂದ ಮನೆಗೇ ವ್ಯತ್ಯಾಸ ಆಗುವುದಿದೆ. ಅದರಲ್ಲಿ ವೈವಿಧ್ಯ ನಮಗೆ ಕಂಡರೆ ಹೊರಗಿನವರಿಗೆ "ಬೊಗಳೆ, ಡಂಭಾಚಾರ, ಅನುಕೂಲ ಸಿಂಧು ಆಚರಣೆ" ಅನ್ನಿಸುವುದು ಇರಬೇಕು. ನಮ್ಮ ನೆರಳೇ ನಮ್ಮನ್ನು ಹೆದರಿಸುವಂತೆ.... ಅದಕ್ಕೇನನ್ನೋಣ?
April 17, 2007 10:48 PM

1 comment:

Guruprasad said...

ನಾನು ಇದು ಬರಿ ತಮಿಳರ ನ್ಯೂ ಇಯರ್ ಅಂತ ಅಂದು ಕೊಂಡಿದ್ದೆ. ನಮ್ಮ ಕರ್ನಾಟಕದ ಮಂಗಳೂರು ಮತ್ತೆ ಕೆಲವು ಕಡೆ ಆಚರಿಸುತ್ತರೆಂದು ಗೊತ್ತಿರಲಿಲ್ಲ... ತುಂಬ ಧನ್ಯವಾದಗಳು ವಿಷು ಹಬ್ಬವನ್ನು ತುಂಬ ಚೆನ್ನಾಗಿ ವಿವರಿಸಿದ್ದಿರ...
ಒಳ್ಳೆಯ ಲೇಖನ.....
ಹಾಂ ನಿಮಗೂ ವಿಷು ಹಬ್ಬದ ಶುಭಾಶಯಗಳು

ಗುರು