ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 19 May, 2008

ಮಳೆ

Wednesday, April 4, 2007

ಹನಿ ಹನಿಯು ಹನಿ ಹನಿದು ಸ್ಫಟಿಕ ಮಣಿ ಮಾಲೆ
ಇಣುಕಿ ನೋಡಿದರಲ್ಲಿ ಮುತ್ತು ಮರ ಸಾಲೆ!
ಚಿಲಿಪಿಲಿಯ ದನಿಯಡಗಿ ಚಿಟಿಪಿಟಿಯ ಸದ್ದು
ಉಷ್ಣವಡರಿದ ಭುವಿಗೆ ನಭ ಕೊಡುವ ಮದ್ದು

ಮತ್ತು ಬರಿಸುವ ಹೊತ್ತು ಬಿತ್ತು ಮಳೆ ಮುತ್ತು
ಚಿಣಮಿಣನೆ ಹೊಳೆದಿತ್ತು ಭೂದೇವಿ ನತ್ತು
ಅಬ್ಬರದ ಸಿಡಿಲ ದನಿ, ಬೊಬ್ಬಿಡುವ ಬಾನು
ಹೊಂಚುಹಾಕಿತು ಒಮ್ಮೆ ಬಣ್ಣದ ಕಮಾನು

ಲೋಕವಿದೆ ನೋಡೆಂದು ಹಣಕಿತ್ತು ಬೆಳಕು
ದಿಟ್ಟನೆದೆ ನಡುಗಿಸಲು ಮಿಂಚಿತ್ತು ಛಳಕು
ನಕ್ಕಿತ್ತು ಧರೆ ತಾನು ಮಿಂದೆನಿಂದೆಂದು
ಉಕ್ಕಿತ್ತು ಸಾಗರದ ಎದೆಯುಬ್ಬಿ ಬಂದು

ಹನಿಹನಿಯು ಅಮೃತವು, ಹನಿ-ಸೋನೆ-ಧಾರೆ
ಜೀವ ಉಸಿರಾಡಿಹುದು, ರವಿ-ನೀರೆ ಸೇರೆ
(ಜನವರಿ-೧೯೯೮)

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:00 PM
Labels:

12 ಪತ್ರೋತ್ತರ:
Shiv said...
ಸುಪ್ತದೀಪ್ತಿಯವರೇ,
ನಿಮ್ಮ ಬ್ಲಾಗ್‍ನಲ್ಲೂ ಮಳೆ ಬರ್ತಾ ಇದೆ :)>ಹೊಂಚಿ ಹಾಕಿತು ಕಮಾನು ಚೆನ್ನಾಗಿ ಅನಿಸ್ತು..
ರವಿ-ನೀರೆ ಸೇರೆ? ತಿಳಿಲಿಲ್ಲ?
April 4, 2007 11:35 PM

suptadeepti said...
@ಶಿವು: ಎಲ್ಲ ಕಡೆ ಮಳೆ ಬರುವಾಗ ನಾನೊಬ್ಳೇ ಹೇಗೆ ನೆನೆಯದೆ ಇರಲಿ? ಅದೂ ಮಳೆ ಇಷ್ಟವಾಗಿರುವಾಗ!! ಅದರಲ್ಲೂ ಇದು ಅಂತಿಂಥಾ ಮಳೆಯಲ್ಲ; ಕರಾವಳಿಯ ಮುಂಗಾರು ಮಳೆ, ಬಿರು ಮಳೆ. ಸಿಡಿಲು, ಗುಡುಗುಗಳ ಅಬ್ಬರದ ಧೋ ಧೋ ಮಳೆ. ಬೆಚ್ಚಗೆ ರಗ್ ಹೊದ್ದು ಕೂತು, ಕಿಟಿಕಿಯಿಂದ ಆಚೆ ನೋಡಿ ಆನಂದಿಸಿ.
"ರವಿ-ನೇರೆ ಸೇರೆ" = ರವಿ (ಸೂರ್ಯ, ಬೆಳಕು, ಗಂಡು) ನೀರೆ (ನೀರು, ಹೆಣ್ಣು) ಸೇರಿದಾಗಲೇ ಜೀವ (ಜಗತ್ತು) ಉಸಿರಾಡುವುದು.
April 5, 2007 12:11 AM

poornima said...
ಮಳೆಯಷ್ಟೇ ಮೋಹಕ ನಿಮ್ಮ ಕವನ.
April 5, 2007 9:12 AM

poornima said...
ಜ್ಯೋತಿಯವರೇ, ಅಂದ ಹಾಗೆ ಯಾಕೋ ಇಂದು ತುಳಸೀವನಕ್ಕೆ ಹೋಗಲು ಆಗುತ್ತಿಲ್ಲವಲ್ಲ !
April 5, 2007 9:17 AM

suptadeepti said...
ಹೌದು ಪೂರ್ಣಿಮಾ, ನಿನ್ನೆ ಸಂಜೆಯಿಂದಲೇ ವನದಲ್ಲಿ ತೊಂದರೆಯಿದೆ. ಏನೋ ಗೊತ್ತಿಲ್ಲ. ಇವತ್ತು ತ್ರಿವೇಣಿಗೆ ಫೋನ್ ಮಾಡಿ ನೋಡ್ತೇನೆ.
April 5, 2007 10:17 AM

Vijendra ( ವಿಜೇಂದ್ರ ರಾವ್ ) said...
ಪುಣೆ ಕುದಿತ ಇದೆ. ಆ ಭಗವಂತ ಯಾವಾಗ ಅಮೃತಧಾರೆ ಹರಿಸ್ತಾನೊ ಗೊತ್ತಿಲ್ಲ ....."ಅಬ್ಬರದ ಸಿಡಿಲ ದನಿ, ಬೊಬ್ಬಿಡುವ ಬಾನು"ನಿಮ್ಮ ವರ್ಣನೆ ಸರಿಯಾಗಿ ಕಾರ್ಕಳದ ಮಳೆಗೆ ಹೋಲಿಕೆಯಾಗ್ತಾ ಉಂಟು !!ಕವನ Superb!!
April 5, 2007 10:35 PM

suptadeepti said...
ಧನ್ಯವಾದ ವಿಜ್. ಪುಣೆ ಏನು, ಊರಲ್ಲೂ ವಿಪರೀತ ಸೆಖೆಯಂತೆ. ಅಲ್ಲಿಗೂ ಈ ವರುಣದೇವನನ್ನು ಕಳಿಸುವನಾ, ಹೇಗೆ?
ಈ ಕವನ ನಾನು ಬರೆದದ್ದು, '೯೮ರ ಜನವರಿಯಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಎಲ್-ನೀನ್ಯೋ ಗಲಾಟೆ ಎಬ್ಬಿಸಿದಾಗ. ಆದರೆ ನಮ್ಮೂರಿನ ಮಳೆಗಾಲಕ್ಕೆ ಇದು ಪ್ರತೀ ವರ್ಷವೂ ಪ್ರಸ್ತುತ.
April 5, 2007 10:45 PM

srinivas said...
ನಿಮ್ಮ ’ಹೀಗೊಂದು ಯೋಚನೆ’ಗೆ ನನ್ನ ಕೆಲವು ಪದಗಳು
ನಾನು ಯಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ? ನನ್ನನ್ನು ನಾನು ಹೇಗೆ ಗುರುತಿಸಿದೆ? ಇದೇನು ಕನಸೇ? ಕನಸಿನಿಂದ ಆಚೆ ಬರುವವರೆವಿಗೆ ಇದು ಕನಸೆಂದು ತಿಳಿಯದು - ಒಮ್ಮೆ ಆಚೆ ಬಂದ ಮೇಲೆ ಮರಳಿ ಅದೇ ಕನಸಿಗೆ ಹೋಗಲಾಗದು - ಎನ್ನುವರಲ್ಲ - ಇದೇನು ಸತ್ಯವೇ? ಸತ್ಯವೆಂದು ಸಾಬೀತು ಪಡಿಸಲು, ಸುಳ್ಳು ಯಾವುದು? ನಾ ಕಾಣುತಿರುವುದೆಲ್ಲಾ ಕೈಗೆ ಎಟಕುವುದೇ? ಅಥವಾ ಅವಿರುವುದು ಕನ್ನಡಿಯೊಳಗೆಯಾ?
April 9, 2007 8:47 PM

parijata said...
ಸುಪ್ತದೀಪ್ತಿಯವರೆ, ಮಳೆಯ ವರ್ಣನೆ ಬಹಳ ಚೆನ್ನಾಗಿ ಮಾಡಿದ್ದೀರಿ. ಸಿಡಿಲ ದನಿಯ ಅಬ್ಬರ, ಬಾನಿನ ಬೊಬ್ಬೆ ಎಂದು ಕೇಳುವುದೋ ಎಂದು ಹಾತೊರೆಯುತ್ತಿದ್ದೇವೆ. ನಿಮ್ಮ ಪದ್ಯ ಓದಿ, ಮಳೆಯಲ್ಲಿ ನೆನೆದಷ್ಟೇ ಸಂತೋಷವಾಯಿತು.
April 9, 2007 9:16 PM
suptadeepti said...
@ಶ್ರೀನಿವಾಸ್: ನಿಮ್ಮ "ಅಂತರ್ಧ್ಯಾನ"ದ ಪದಗಳಿಗೆ ವಂದನೆಗಳು. ಇಂತಹ introspection ಮಾಡಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದೆಂದು ನನ್ನ ನಂಬಿಕೆ, ನೀವೇನಂತೀರಿ?
@ಪಾರಿಜಾತ: ಮೆಚ್ಚುಗೆಗೆ ವಂದನೆಗಳು. ನಾವು ಕರೆದಾಗಲೆಲ್ಲ ಬರಲು ವರುಣ ನಮ್ಮವನಲ್ಲವಲ್ಲ!! ಅವನ ಮನಕ್ಕೆ ತೋಚಿದಾಗ ಬರುವವನು; ಅವನೇ ಕೃಪೆಮಾಡಬೇಕು, ನಾವು ನೆನೆಯಬೇಕು. ಸೇರಿ ಕರೆಯೋಣ, ಬಂದಾನು.
April 9, 2007 10:29 PM

ಮನಸ್ವಿನಿ said...
ಮಳೆ!!!! ಮಳೆ ಅಂದ್ರೆ ನನಗೆ ತುಂಬಾ ಇಷ್ಟ :)
ಹಾಡು ತುಂಬಾ ಚೆನ್ನಾಗಿದೆ
ಹನಿ ಹನಿಯು ಹನಿ ಹನಿದು ಸ್ಫಟಿಕ ಮಣಿ ಮಾಲೆ
ಇಣುಕಿ ನೋಡಿದರಲ್ಲಿ ಮುತ್ತು ಮರ ಸಾಲೆ!
ಶಿರಸಿ ನೆನಪಾಗ್ತ ಇದೆ
April 11, 2007 7:50 PM

suptadeepti said...
@ಮನಸ್ವಿನಿ: ಧನ್ಯವಾದ.
ಮಳೆ ಯಾರಿಗಿಷ್ಟವಿಲ್ಲ ಅಂತ ಮತ ಕೇಳಿದರೆ ಎಷ್ಟು ಸಿಗಬಹುದು ಅನ್ನುವ ಯೋಚನೆ ಹತ್ತಿದೆ!
April 11, 2007 9:25 PM

No comments: