ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 19 May, 2008

ಕನಸು-ಕನಸು-ಕನಸು

Thursday, April 12, 2007

ಕನಸುಗಳು ಯಾರಿಗೆ ಬೇಡ? ಕನಸುಗಳ ಬಗ್ಗೆಯೇ ಬೇಕಷ್ಟು ಬರಹಗಳು ಸಧ್ಯ ಬ್ಲಾಗ್'ಗಳಲ್ಲಿ ಹರಿದಾಡುತ್ತಿವೆ, ಸುಳಿದಾಡುತ್ತಿವೆ. ಅದೇ ಲಹರಿಯಲ್ಲಿ ನನ್ನೆರಡು ಹರಿವುಗಳು: ಮೊದಲನೆಯದು ಒಂದು ಚುಟುಕ, ಎರಡನೆಯದು ಕನಸಲ್ಲಿಯೇ ಹರಿದು ಬಂದ ಮೊದಲ ಸಾಲಿನ ಜಾಡು ಹಿಡಿದು ನಡೆದಾಗ ಒಲಿದದ್ದು.

(೧) ಕನವರಿಕೆ

ಕನಸುಗಳ ಸುಪ್ರಭಾತ, ಕನಸುಗಳ ಶುಭರಾತ್ರಿ
ನಡುಹಗಲ ಜೊಂಪಿನಲೂ ಮತ್ತಷ್ಟು ಕನಸು
ಕಂಡೂ ಕಾಣದಿಹ, ಕಾಣದೆಯೂ ಕಂಡಿರುವ
ಕನಸಿನೊಳಗಿನ ಮನಸ ಕಂಡ ಕನಸಿಗರಾರು?
(ಜನವರಿ, ೧೯೯೭)

(೨) ಕನಸಿನಾನನ.....
"ತಂತಾನನ ತುಂತನನ, ತುಂತನಾನ ತಂತನನ"
ಗುಂಯ್-ಗುಟ್ಟಿದ ಭ್ರಮರ-ಸ್ವರಕಾಧೀನ ಹೃನ್ಮನ
ಧ್ವನಿಗುಂಗಿನ ಪದಪುಂಜದ ಗುಂಜಾರವ ನಂದನ
ಪ್ರತ್ಯುತ್ತರ ತೇಲಿ ಬಂತು, ಮಾರುತ್ತರ ಸ್ಪಂದನ

ಆಡಲೆಯುವ ಭಂಡತನದ ಪುಂಡುಮನದ ಪಟಲದೆ
ಕಾಡ್ಯಾಡುವ ಚಿನಕುರುಳಿಯ ಚಿತ್ತಾರವು ಹರಡಿದೆ
ಸ್ಮೃತಿ-ವಿಸ್ಮೃತಿ - ಭ್ರಮ-ವಿಭ್ರಮ ಸಮಾಧಿಸ್ಥ ಚೇತನ
ಅರಿವು-ಮರೆವು ಅರಿಯದಂತೆ ನಡೆಯುವೊಂದು ಚಿಂತನ

ಪೂರ್ವೋತ್ತರ ನೆನಪೇ ನೆಪ, ರಂಗವಲ್ಲಿ ಮಂಟಪ
ಸುಪ್ತತೆ ಜೊತೆ ಜಾಗೃತಿಯ ಕನವರಿಕೆಯ ಸಲ್ಲಾಪ
ತಿಳಿದೇಳುವ ಸಡಗರದಲಿ ವಾಸ್ತವತೆಯ ಹೊನಲಲಿ
ಹೊಂಗಿರಣದ ಹೊಳೆಸುಳಿಯಲಿ ಕರಗುವುದು ರಂಗೋಲಿ

"ತುಂತನನ"ದ ಗುಂಗಿಳಿಯಲು "ತಂತನನ"ದ ಹೊಸತನ
ತುಂಬಿ ಬಂದು ಖಾಲಿಯಾದ ನವ-ಪಲುಕಲಿ ಹೂಬನ
(೨೭-ಅಕ್ಟೋಬರ್-೨೦೦೧)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 3:10 PM
Labels: ,

10 ಪತ್ರೋತ್ತರ:
ಸುಶ್ರುತ ದೊಡ್ಡೇರಿ said...
ಆನನ ಅಂದ್ರೆ ಮುಖ. ಕನಸಿನಾನನ ಅಂದ್ರೆ ಕನಸಿನ ಮುಖ! ತನನಾನ.. ಅಂದ್ರೆ? ಥೋ! ಹೋಗ್ಲಿ ಬಿಡಿ! ಕವನ ಚೆನ್ನಾಗಿದೆ. ಚುಟುಕವೂ. :)
April 13, 2007 1:51 AM

ರಾಜೇಶ್ ನಾಯ್ಕ said...
ಸುಪ್ತ ದೀಪ್ತಿ,
ಚುಟುಕ ಬಹಳ ಹಿಡಿಸಿತು. ಗಟ್ಟಿ (ಬಾಯಿಪಾಠ) ಮಾಡ್ಬಿಟ್ಟೆ.
April 13, 2007 8:22 AM

suptadeepti said...
ಇಬ್ಬರಿಗೂ ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.
@ಸುಶ್: ಕವನದ ಮೊದಲ ಸಾಲು ಕನಸಲ್ಲೇ ಮೂಡಿ ಬಂದು, ಮನಸ್ಸಲ್ಲಿ ಕಾಡಿ, ಪಕ್ವವಾಗಿ ಕವನವಾಗಿ ಹೊಮ್ಮಿದ್ದು. ಆದ್ದರಿಂದ ಆ ಮೊದಲ ಸಾಲಿನ ಅರ್ಥ ನಾನು ಹೇಳಲಾರೆ. ಅದಕ್ಕೇ ಅದನ್ನು ಉದ್ಧರಣ ಚಿಹ್ನೆಯಲ್ಲಿ ಕೊಟ್ಟದ್ದು.
April 13, 2007 11:28 AM

suptadeepti said...
@ರಾಜೇಶ್, ನನ್ನ ಅಕ್ಷರಲೋಕಕ್ಕೆ ಸ್ವಾಗತ.
April 13, 2007 12:13 PM

Mahantesh said...
kanasina lokada kanasugaarare,nimma kanassu manassu nannu nenesitu
ನಡುಹಗಲ ಜೊಂಪಿನಲೂ ಮತ್ತಷ್ಟು ಕನಸು ...anno sAlu tuMba hidisitu...
April 14, 2007 2:18 AM

suptadeepti said...
@ಮಹಾಂತೇಶ್: ಮೆಚ್ಚುಗೆಗೆ ಧನ್ಯವಾದಗಳು.
April 14, 2007 11:37 AM

Shiv said...
ಸುಪ್ತದೀಪ್ತಿ,>>ಸ್ಮೃತಿ-ವಿಸ್ಮೃತಿ - ಭ್ರಮ-ವಿಭ್ರಮ ಸಮಾಧಿಸ್ಥ ಚೇತನ
ವಾಹ್..
ಕನಸಿನೊಳಗಿನ ಮನಸ ಕಂಡ ಕನಸಿಗರಾರು ಅಂತಾ ಗೊತ್ತಾಯಿತೇ :)
April 14, 2007 11:58 AM

suptadeepti said...
@ಶಿವ್: ಇಲ್ಲಪ್ಪಾ, ಗೊತ್ತಿಲ್ಲ. ನಿಮಗೇನಾದರೂ ತಿಳಿದರೆ, ನನಗೂ ತಿಳಿಸುವಿರಾ?
April 14, 2007 12:38 PM

December Stud said...
ಕನಸು - ಕನ್ನಡದಲ್ಲಿ ನನಗೆ ಅತಿ ಹತ್ತಿರವಾದ ಪದ.
ಕವನ ಹಾಗೂ ಚುಟುಕ ಸುಂದರವಾಗಿದೆ. ಕಬ್ಬಿಣದ ಕಡಲೆಯೇನಲ್ಲ ಬಿಡಿ :)
May 9, 2007 4:43 PM

suptadeepti said...
@D.S.: ಕನಸು ಬಹುಜನಪ್ರಿಯ ಪದ. ನಿಮ್ಮ ಗುತ್ತಿಗೆಯೇನಲ್ಲವಲ್ಲ!!
ಕನಸು ಕಾಣುವ ಕಣ್ಣುಗಳಲ್ಲಿ ಬೆಳಕು ಆರದು. ವೈರುಧ್ಯವೆನಿಸುವ ಮಾತು, ಆದರೆ ಸತ್ಯ. ಅದಕ್ಕೇ ನನಗೂ ಕನಸು ಇಷ್ಟ.
May 9, 2007 4:57 PM

No comments: