ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 20 May, 2008

ಅಳಿವು - ಉಳಿವು

Tuesday, December 11, 2007

(ಒಂದೂವರೆ ವರ್ಷಗಳ ಹಿಂದೆ ಬರೆದದ್ದು, ಇಂದು ಮತ್ತೆ ಪ್ರಸ್ತುತ ಅನಿಸಿದ್ದರಿಂದ.... ನಿಮ್ಮ ಓದಿಗೆ...)
ಅಳಿವು-ಉಳಿವಿನ ಮಧ್ಯೆ ತೊಳಲಾಡಿಹುದು ಜೀವ-
ಜಗದಂಗಳದ ವ್ಯಗ್ರ ವ್ಯಾಧಿಯಲ್ಲಿ;
ತಿಳಿವಿಗರಿಯದ ಗೂಢ ದಾನವನ ಹಿಡಿಯೊಳಗೆ-
ಮೊಗಬಾಡಿ ಮುದುಡಿಹುದು ಭೀತಿಯಲ್ಲಿ.
**** **** **** ****

ಒಂದು ಪಯಣದ ಆದಿ, ಮುಗಿಯಿತಲ್ಲೊಂದಯನ,
ತುಂಬಿ ತುಳುಕಿರೆ ಮನಸು, ಮಸುಕು ನಯನ;
ಮಬ್ಬಾಗಿರಲು ಬಿಂಬ, ಪ್ರತಿಬಿಂಬ ಪ್ರತಿಫಲನ,
ತಬ್ಬಲಿಯು ನಿನನರಸಿ ಹೊರಟ ಗಮನ.

ಗಾಳಿ ಗೋಪುರದಲ್ಲಿ ನಿನನರ್ಚಿಸಿದೆನೇನು?
ಬಾಳುವೆಯ ಒಡವೆಯನೆ ಏಕೆ ಕಿತ್ತೆ?
`ತಾಳುವಿಕೆಗಿಂತನ್ಯ ತಪವಿಲ್ಲ'ವೆಂದಿರಲು-
ಬಾಳೆಯೆಳೆ ಸುಳಿಯೊಂದನೇಕೆ ಸುಟ್ಟೆ?

ಸರ್ವಾಂತರ್ಯಾಮಿಯೆನೆ, ಸರ್ವಜ್ಞ, ಶ್ರೇಷ್ಠನೆನೆ,
ಅರಿವಿಗರಿಯದ ಕಾರ್ಯವೆಸಗಬಹುದೆ?
ಸರ್ವಲೋಕದ ಶಕ್ತಿ ನೀನೆಂದು ಒಪ್ಪಿರಲು-
ಆಸೆ-ಭರವಸೆಗಳನೆ ಹಿಸುಕಬಹುದೆ?
(೦೮-ಮಾರ್ಚ್-೨೦೦೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:48 PM
Labels: ,

11 ಪತ್ರೋತ್ತರ:
ಶಾಂತಲಾ ಭಂಡಿ said...
ಕಣ್ಣಹನಿಯೊಂದು ಕಹಿನೆನಪುಗಳ ಅಳಿಸಿಹಾಕಬಾರದೇ ಎನಿಸಿತು. ಕಣ್ಣಹನಿಯೊಂದರೊಳಗೆ ಮಾತುಗಳ ಮುಚ್ಚಿಟ್ಟು ಮೌನಿಯಾಗಬೇಕಿನೆಸಿತು.
December 12, 2007 11:37 AM

December Stud said...
ಅಂದು ಓದಿದಾಗ ಅನುಭವವೇ ಇಂದು ಮತ್ತೆ.....ಈಗೇಕೆ ಪ್ರಸ್ತುತ?
December 12, 2007 3:57 PM

suptadeepti said...
ಮೌನ ತಬ್ಬಿದ ಕ್ಷಣಗಳಲ್ಲಿ ಮಾತುಗಳು ಬರಬೇಕಿಲ್ಲ, ಮೌನವೇ ಎಲ್ಲವನ್ನೂ ತಿಳಿಸುತ್ತದೆ... ಧನ್ಯವಾದ.

ಈಗೇಕೆ ಪ್ರಸ್ತುತ? ಉತ್ತರ ಇಲ್ಲಿ, ಈಗ ಹೇಳಲಾರೆ!! ಧನ್ಯವಾದ, ನಿನಗೂ.
December 12, 2007 8:37 PM

Nempu.Guru said...
"ಕಹಿ-ಸಿಹಿ ನೆನಪು"ಗಳು ಬಾಳಬಂಡಿಗೆ ವೇಗವನ್ನು, ನಿರಂತರ ಚಲನೆಯನ್ನು ಕೊಡುವ "ಟಾನಿಕ್"ನಂತೆ...
December 12, 2007 9:29 PM

suptadeepti said...
ಧನ್ಯವಾದ ಗುರು. ಇದು ಬರಿಯ ನೆನಪಲ್ಲ... ಒಂದು ನೆಪದಲ್ಲಿ ಮತ್ತೆ ಮರುಕಳಿಸಿದ್ದು...
December 12, 2007 9:42 PM

sritri said...
"ಸರ್ವಲೋಕದ ಶಕ್ತಿ ನೀನೆಂದು ಒಪ್ಪಿರಲು-ಆಸೆ-ಭರವಸೆಗಳನೆ ಹಿಸುಕಬಹುದೆ?"- ಉತ್ತರವೂ ಸರ್ವಶಕ್ತಿಗೇ ಗೊತ್ತಿರಬೇಕು!
December 13, 2007 8:13 AM

suptadeepti said...
"- ಉತ್ತರವೂ ಸರ್ವಶಕ್ತಿಗೇ ಗೊತ್ತಿರಬೇಕು!"-- ನಿಜ.
ಆದರೆ ನಮಗೆ, ಈ ಅಲ್ಪಮತಿಗಳಿಗೆ ಗೊತ್ತಾಗುವುದಿಲ್ಲವಲ್ಲ. ಅದಕ್ಕೇ ನಮ್ಮ ಕೊರಗುಗಳು ಮುಗಿಯುವುದೇ ಇಲ್ಲ.
December 13, 2007 11:16 AM

ಹಂಸಾನಂದಿ Hamsanandi said...
ಒಮ್ಮೆ ಉಣ್ಣುವ ಕಹಿ ಅನುಭವಗಳೇ ಸಾಕು ಜೀವನ ಪೂರ್ತಿ ಭಾರವಾಗಿರಲು. ಮತ್ತವು ಮರುಕಳಿಸದಿರಲಿ.
-ಹಂಸಾನಂದಿ
December 14, 2007 4:36 PM

suptadeepti said...
"ಒಮ್ಮೆ ಉಣ್ಣುವ ಕಹಿ ಅನುಭವಗಳೇ ಸಾಕು ಜೀವನ ಪೂರ್ತಿ ಭಾರವಾಗಿರಲು. ಮತ್ತವು ಮರುಕಳಿಸದಿರಲಿ."
--ನಿಮ್ಮ ಮಾತು ಸತ್ಯ, ಆದರೂ ಕೆಲವು ಕ್ಷಣಗಳಲ್ಲಿ ಯಾವುದೋ ನೆಪ ಹೊತ್ತು ನೋವಿನ ನೆನಪು ಮರುಕಳಿಸುವುದು ಸಳ್ಳಲ್ಲ ತಾನೆ?
December 14, 2007 5:00 PM

yaatrika said...
ಸರ್ವಲೋಕದ ಶಕ್ತಿ ನೀನೆಂದು ಒಪ್ಪಿರಲು ಆಸೆ-ಭರವಸೆಗಳನೆ ಹಿಸುಕಬಹುದೆ?
ಸರ್ವಜ್ಞನು ತಿಳಿಯದ್ದೇನು? ಆತ ಆಸೆ ಭರವಸೆಗಳನ್ನು ಹಿಸುಕಿದರೂ, ಕೊನೆಗೆ ಕತ್ತನ್ನೇ ಹಿಚುಕಿದರೂ ಅವನ ಉದ್ದೇಶ ನಮ್ಮ ಏಳಿಗೆಯೇ. ಕರೆದೊಯ್ದ ಜೀವದ ಜವಾಬ್ದಾರಿ ಅವನೇ ಹೊತ್ತಿರಲು ಇರುವವರು ದುಃಖಿಸಿ ಮಾಡುವುದೇನಿದೆ?
ನೋವ ನುಂಗಿ ನಗುವ ಕಲಿವ.
December 17, 2007 7:50 AM

suptadeepti said...
"ಕರೆದೊಯ್ದ ಜೀವದ ಜವಾಬ್ದಾರಿ ಅವನೇ ಹೊತ್ತಿರಲು ಇರುವವರು ದುಃಖಿಸಿ ಮಾಡುವುದೇನಿದೆ?"
--ಮಾಡುವುದೇನಿಲ್ಲ, ಒಪ್ಪಿದೆ. ದುಃಖವನ್ನು ನುಂಗಿ ಬಾಳುವ ಹಾದಿಗೆ ಮೊದಲ ಹೆಜ್ಜೆ ಎತ್ತುವುದು ಕಷ್ಟದ ಕೆಲಸ. ಅಂಥ ಕ್ಲಿಷ್ಟ ಸಂದರ್ಭದಲ್ಲಿ ಬಂದ ಕರೆ ಈ ಕವನ; ಅಷ್ಟೇ.
December 17, 2007 10:22 AM

No comments: