Friday, August 24, 2007
ಅರಳಿ ನಿಂತಿರುವ ಸೊಬಗಿ, ನಗುತಿಹ ರಮಣಿಗೆ
ಅರುಣನುದಯಕೆ ಮುನ್ನ ಜಳಕ ಮಾಡಿಸಿದ ವರುಣ
ಅಭ್ಯಂಗ ಮುಗಿಸಿ ಹೆರಳ ಕೆದರಿದ ಧರಣಿಗೆ
ಅರುಣರಾಗದ ರಂಗಿನ ಮಳೆಬಿಲ್ಲನು ತೊಡಿಸಿದ
ಹೊನ್ನವರ್ಣದ ಮೇಲುದವ ಹರಡಿ ಹೊದೆಸಿ
ಹರುಷ ಪ್ರಭಾವಳಿಯ ನೀಡಿದ ಭಾಸ್ಕರ
ಹಸುರು ಕೆಂಪುಗಳ, ಮುತ್ತು ರತ್ನಗಳ ಪೋಣಿಸಿ
ಹೊಂದಾವರೆಗಳಲಿರಿಸಿ ಮಡದಿಯ ಸಿಂಗರಿಸಿದ
ಭಾನುತೇಜದ ತೀಕ್ಷ್ಣವೇರಿ ಭುವಿಯು ಬಳಲಿ-
ಬಾಡಲು, ಮುದವ ನೀಡುತ ಮಂದ ಮಾರುತ
ಬಾಳೆಲೆಗಳ ತಂಪು ಸೇರಿಸಿ, ಪ್ರೇಮದಲಿ
ಬಳಸಿ ತಣಿಸಿದ ನೀರೆ ತಾಪವ, ಸುಗಂಧ ಪೂಸಿ
ಕವಿದ ಕತ್ತಲೆ ಕಳೆಯೆ ಕಿರಣಗಳ ತೂರುತ್ತ
ಕಳ್ಳ ಹೆಜ್ಜೆಯ ಇನಿಯ ಶಶಿ ಮೆಲ್ಲ ಹೊರಬಂದ
ಕಪಟವರಿಯದ ಮುದ್ದು ಮಗುವಂತೆ ನಿದ್ರಿಸುತ
ಕನಸು ಕಾಣುವ ಪ್ರಿಯೆಗೆ ಬೆಳದಿಂಗಳ ಹಾಸಿದ
ಮಂದಾನಿಲ, ಜೊನ್ನಗಂಗೆ ನಲ್ಲೆಯ ನಡುಗಿಸೆ
ಮರಳಿನಂತೆ ಬಿಸಿಯೇರಿದ ಅಗ್ನಿರಾಜ ಕೆರಳಿ
ಮಣಿಗಳಂತೆ ಕಿಡಿಹಾರಿಸಿ ಚಳಿಯ ಕರಗಿಸಿರಲು
ಮತ್ತೆ ಮುತ್ತು ಹನಿಗಳಿಳಿಸಿ ವರುಣ ಬಂದ ಸೇವೆಗೆ.
(೦೯-ಅಕ್ಟೋಬರ್-೧೯೯೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:23 PM
Labels: 'ಭಾವಗಾನ'ದಿಂದ-
1 ಪತ್ರೋತ್ತರ:
parijata said...
Very, very nice poem. Reminds me of 'mauna tabbitu nelava...'
August 27, 2007 1:13 AM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Tuesday, 20 May 2008
Subscribe to:
Post Comments (Atom)
No comments:
Post a Comment