ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 20 May 2008

ಜಲಧಾರೆ

Sunday, October 14, 2007

ಹೊನಲು ಹೊನಲಾಗಿ ಹರಿವ ಜಲಧಾರೆ
ಹಾಲು ಹೊಳೆಯ ರೀತಿ
ಎರಡು ದೇಶಗಳ ಒಂದು ಜಲಪಾತ
ಎರಡು ಮನದ ಪ್ರೀತಿ

ರಾಧೆ ಮಾಧವನ ವಿರಹ ತಾಪದಲಿ
ಕ್ಷೀರಧಾರೆ ಚೆಲ್ಲಿ
ವಸುಧೆ ತುಂಬಿದ್ದ ವರ್ಣಮೇಳವು
ಕರಗಿ ಬಂದಿತಿಲ್ಲಿ
ಪ್ರಕೃತಿ ಪುರುಷರ ಮಿಲನ ತಾಣವಿದು
ಕೈಲಿ ಕೈಯನಿರಿಸಿ
ಸನಿಹ ಸರಿದವರ ಹರಸಿ ನಗುವರು
ಮೌನ ಶಬ್ದ ಬೆರೆಸಿ

ಸವತಿ ಮಾತ್ಸರ್ಯದಿಂದ ಸಿಡುಕಾಗಿ
ಗಂಗೆ ಬಂದಳೇನು?
ಸಖಿಯ ಅಗಲಿರಲು ಮನಸು ಬಾರದೆ
ಯಮುನೆಯೂ ಇಹಳೇನು?
ಮಕ್ಕಳಿಬ್ಬರಿಂದಗಲಿ ಹಿಮವಂತ
ಕಣ್ಣತುಂಬಿ ನಿಂತು
ತಲೆಯ ಕೊಡವಿರಲು ನೀರು ಹಾರಿರಲು
ಬಿಳಿಯ ಹಾಳೆಯಾಯ್ತು

ಸುರಿವ ಸ್ಫಟಿಕಮಣಿ ಪರದೆ ಹಿಂದುಗಡೆ
ನಿಂದು ನೋಡ ಬಾರೇ
ಪ್ರತೀ ಬಿಂದುವಲೂ ನಮ್ಮ ಪ್ರತಿಬಿಂಬ
ನಾವೇ ಚಂದ್ರ ತಾರೆ
ನೋವು ನಲಿವುಗಳ ಬದುಕು ಸಾವುಗಳ
ಜಗವು ಆಚೆ ಕಡೆಗೆ
ಬೆಳ್ಳಿ ಮಾಲೆಗಳು ಬಣ್ಣ ಬಿಲ್ಲುಗಳು
ನಮಗೆ ಈಚೆ ಕಡೆಗೆ

ಜೋಗದಿಂದ ನಯಾಗರಾವರೆಗೆ
ಬೆಳೆದ ನಮ್ಮ ಪಯಣ
ಒಲವು ಬತ್ತದೇ ತುಂಬಿ ಮೊರೆಯಲಿ
ಹರಡಿ ಹೊನ್ನ ಕಿರಣ
(ಅಕ್ಟೋಬರ್, ೧೯೯೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 8:15 AM
Labels: ,

2 ಪತ್ರೋತ್ತರ:
KALIGHAT2003 said...
sUpta deeptiyavare...
nimma blog tuMbaa cennAgide... thanks for giving the link. look forward to read your creations..
best wishes
Hari Sarvothama Doss
December 29, 2007 11:45 PM
suptadeepti said...
ನಮಸ್ಕಾರ ಹರಿ. ಇಲ್ಲಿ ಬಂದದ್ದಕ್ಕೆ ಧನ್ಯವಾದಗಳು. ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು. ಇನ್ನೂ ಬನ್ನಿ, ಬರುತ್ತಾ ಇರಿ.
December 30, 2007 12:32 AM

No comments: