ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 20 May 2008

ಹೇಳು ಮನಸೇ

Monday, June 18, 2007

(೨೦೦೨-ರ ಅಕ್ಟೋಬರಿನಲ್ಲಿ ದಟ್ಸ್-ಕನ್ನಡ ಮತ್ತು ಸಪ್ನ ಬುಕ್ ಹೌಸ್ ಜಂಟಿಯಾಗಿ ನಡೆಸಿದ್ದ "ಜಾಗತಿಕ ದೀಪಾವಳಿ ಕವನ ಸ್ಪರ್ಧೆ"ಯಲ್ಲಿ ಭಾಗವಹಿಸಿ, ೧೦೩೪ ಕವನಗಳಲ್ಲಿ ಮೊದಲ ಸ್ಥಾನ ಗಳಿಸಿದ ಸಾಲುಗಳು)
(ಶ್ರೀ ಗುರುರಾಜ ಮಾರ್ಪಳ್ಳಿಯವರ ಸಂಗೀತ ನಿರ್ದೇಶನದ "ಹೇಳು ಮನಸೇ"- ದ್ವನಿಮುದ್ರಿಕೆಯಲ್ಲಿದೆ.
ಹಾಡಿದವಳು- ದಿವ್ಯಾ. ಜಿ. ಯು., ಮೂಡಬಿದ್ರೆ.)


ನಗುವೆಂದು ಜೊತೆಯಾಗಿ ನಕ್ಕಿದ್ದು ಹುಸಿಯಾಗೆ
ಭಾವಕ್ಕೆ ಏನರ್ಥ, ಹೇಳು ಮನಸೆ?
ಅರಿವೆಂದು ಹೀರಿದ್ದು ಹಗುರಾಗಿ ಹರಿದಾಗ
ಜ್ಞಾನಕ್ಕೆ ಏನರ್ಥ, ಹೇಳು ಮನಸೆ?

ಒಳಗೊಂದು ಹೊರಗೊಂದು ನುಡಿಯೊಂದು ನಡೆಯೊಂದು
ನೈಜತೆಗೆ ಏನರ್ಥ, ಹೇಳು ಮನಸೆ?
ಒಗೆತನವ ಕಡೆಗಣಿಸಿ ಕಡಿದಿಕ್ಕಿ ಒಗೆದಿರಲು
ಸ್ನೇಹಕ್ಕೆ ಏನರ್ಥ, ಹೇಳು ಮನಸೆ?

ಹಾಲೆಂದುಕೊಂಡಿದ್ದು ವಿಷಗಿಡದ ರಸವಾಗೆ
ಜೀವನಕೆ ಏನರ್ಥ, ಹೇಳು ಮನಸೆ?
ಗೋವೆಂದುಕೊಂಡಿದ್ದು ನಖವೆತ್ತಿ ಗರ್ಜಿಸಲು
ಮೌಲ್ಯಕ್ಕೆ ಏನರ್ಥ, ಹೇಳು ಮನಸೆ?

ಬಾಳ ಭಂಗುರತನದಿ ನಾಳೆ ಬಲ್ಲವರಾರು
ಮಾನವತ್ವದ ತತ್ವವೇನು ಮನಸೆ?
(೧೮-ಅಕ್ಟೋಬರ್-೨೦೦೨)

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:46 PM
Labels: ,

5 ಪತ್ರೋತ್ತರ:

ಮನಸ್ವಿನಿ said...
ನಿಮ್ಮ ಕವನಗಳಲ್ಲಿ ನಾನು ಹೆಚ್ಚು ಇಷ್ಟ ಪಡುವ ಕವನ ಇದು. ತುಂಬಾನೆ ಇಷ್ಟ ನನಗೆ.
"ಅರಿವೆಂದು ಹೀರಿದ್ದು ಹಗುರಾಗಿ ಹರಿದಾಗ
ಜ್ಞಾನಕ್ಕೆ ಏನರ್ಥ, ಹೇಳು ಮನಸೆ?
ಒಳಗೊಂದು ಹೊರಗೊಂದು ನುಡಿಯೊಂದು ನಡೆಯೊಂದು
ನೈಜತೆಗೆ ಏನರ್ಥ, ಹೇಳು ಮನಸೆ?
ಒಗೆತನವ ಕಡೆಗಣಿಸಿ ಕಡಿದಿಕ್ಕಿ ಒಗೆದಿರಲು
ಸ್ನೇಹಕ್ಕೆ ಏನರ್ಥ, ಹೇಳು ಮನಸೆ?
ಹಾಲೆಂದುಕೊಂಡಿದ್ದು ವಿಷಗಿಡದ ರಸವಾಗೆ
ಜೀವನಕೆ ಏನರ್ಥ, ಹೇಳು ಮನಸೆ?"
ವಾಹ್ ! ಎಷ್ಟು ಅರ್ಥಪೂರ್ಣವಾಗಿದೆ! ನಿಮ್ಮ ಕವನಗಳ ಅಭಿಮಾನಿ ನಾನು. ಬರೆಯುತ್ತಾ ಇರಿ
ಪ್ರೀತಿಯಿಂದ
ಮನಸ್ವಿನಿ ( ಸು)
June 18, 2007 9:54 PM

parijata said...
ಮೊನ್ನೆ ಮೊನ್ನೆ ಈ ಪದ್ಯವನ್ನೇ ಜ್ಞಾಪಿಸಿಕೊಳ್ಳುತ್ತಿದ್ದೆ. Thatskannada ದಲ್ಲಿ ಹುಡುಕೋಣವೆಂದುಕೊಳ್ಳುತ್ತಿದ್ದಾಗಲೇ ಇಲ್ಲಿ ಪ್ರಕಟಿಸಿದ್ದೀರಿ. ಧನ್ಯವಾದಗಳು.
June 18, 2007 11:55 PM

suptadeepti said...
@ಮನಸ್ವಿನಿ: ಧನ್ಯವಾದಗಳು. ಬರವಣಿಗೆ ಅನಿವಾರ್ಯ ನನಗೆ. ಮೆಚ್ಚುಗೆ ಓದುಗರ ದೊಡ್ಡತನ.

@ಪಾರಿಜಾತ: ನಿಮ್ಮ ಧನ್ಯವಾದಕ್ಕೆ ಪ್ರತಿವಂದನೆಗಳು. ಹೀಗೇ ಬರುತ್ತಿರಿ.
June 21, 2007 9:04 PM

Satish said...
ಇತ್ತೀಚೆಗೆ ಎಲ್ಲೋ ಪಬ್ಲಿಷ್ ಆದ ಹಾಗಿತ್ತು ಅಂದುಕೊಂಡು ಓದಿದ್ರೆ ೨೦೦೨ ಅಂತ ಕಾಣಿಸ್ತು...
ಅಬ್ಬಾ ಐದು ವರ್ಷಗಳು ಕಳೆದುಹೋದವೇ :-)
July 1, 2007 8:55 PM

suptadeepti said...
@ಸತೀಶ್: "ಅಬ್ಬಾ ಐದು ವರ್ಷಗಳು ಕಳೆದುಹೋದವೇ"-- ಹೌದು, ಇದೇ ಬರುವ ಅಕ್ಟೋಬರಿಗೆ ಇದನ್ನು ಬರೆದು ಐದು ವರ್ಷಗಳೇ ಸವೆದಿರುತ್ತವೆ. ಹಿಂದಿರುಗಿ ಈ ಐದು ವರ್ಷಗಳನ್ನು ನೋಡಿದಾಗ ಕಾಣುವ ಹೆಜ್ಜೆಗಳು ಹಲವಾರು: ಕೆಲವು ಲಘುತರ, ಕೆಲವು ಗುರುತರ, ಮತ್ತೆ ಕೆಲವು ಮಹತ್ತರ...

ಕಾಲಾಯ ತಸ್ಮೈ ನಮಃ
July 1, 2007 9:23 PM

No comments: