Sunday, November 18, 2007
ಭೂಮಿಯೊಂದು ಪುಟ್ಟ ಶಾಲೆ ಮನುಜ ಕುಲದ ಪಾಠಕೆ
ಬರುವೆವಿಲ್ಲಿ ಬಾಳ್ವೆ ನಡೆಸಿ ಕುಣಿದು, ನಲಿದು, ಆಟಕೆ
ಎಲ್ಲ ಶಾಲೆಯಂತೆ ಅಲ್ಲ, ಇದುವೆ ಬೇರೆ ಲೋಕವು
ದಣಿದ ಜೀವಕಿಲ್ಲಿ ನೆರಳು, ಇಲ್ಲ ಬೇರೆ ನಾಕವು
ಕಲಿಕೆಗಂತು ಇಂಥ ಶಾಲೆ ಸಿಗದು ಜೀವಜಾತಗೆ
ತನಗೆ ತಾನೇ ಗುರುವು ಆಗಿ ಕಲಿಯಬಲ್ಲ ಸ್ನಾತಗೆ
ಏನು ಬೇಕು, ಏನು ಬೇಡ, ಎಲ್ಲ ಇರುವ ಶಾಲೆಯು
ಕಲಿಕೆಯಲ್ಲಿ ಗಳಿಕೆಯನ್ನು ಹೊಂದಿಸಿರುವ ಮಾಲೆಯು
ಪಂಚಭೂತ ತತ್ವಕಂಟಿ ಶಾಲೆಗಿಳಿದ ಜೀವವು
ಅನುಭವದಲಿ ಪಾಠ ಪಡೆದು ದಿವ್ಯ ಚೇತ-ಭಾವವು
ಅರಿತರಹುದು ಇಹದ-ಪರದ ಪೂರ್ಣತೆಯ ಲೆಕ್ಕವ
`ಪೂರ್ಣಮಿದಂ' ಲೋಕದೊಳಗೆ `ನಾನು' ಎಷ್ಟು ಚಿಕ್ಕವ
(೨೫-ಅಕ್ಟೋಬರ್-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:45 PM
Labels: ಆತ್ಮ ಚಿಂತನ..., ಹೀಗೇ ಸಾಗಲಿ...., ಹೊಚ್ಚಹೊಸದು
14 ಪತ್ರೋತ್ತರ:
ಸಿಂಧು Sindhu said...
ಜ್ಯೋತಿ..
"ಪೂರ್ಣಮಿದಂ ಲೋಕದೊಳಗೆ 'ನಾನು' ಎಷ್ಟು ಚಿಕ್ಕವ"
ಎಂಥ ಅರ್ಥಪೂರ್ಣ ಸಾಲು..!
ಥ್ಯಾಂಕ್ಸ್
ಸಿಂಧು
November 18, 2007 10:03 PM
suptadeepti said...
ಧನ್ಯವಾದಗಳು ಸಿಂಧು.
November 18, 2007 10:04 PM
ವಿದ್ಯಾರ್ಥಿ said...
ಈ ಶಾಲೆಯಲ್ಲಿ
೧. ಹೋಮ್‌ವರ್ಕ್ ಕೊಡೋದಿಲ್ವಾ?
೨. ಇನ್‍ಸ್ಪೆಕ್ಟರು ಬರೋದು ಅಂತ ಇಲ್ವಾ?
೩. ಮಧ್ಯಾಹ್ನ ಬಿಸಿಊಟ ವ್ಯವಸ್ಥೆ (ಹಾಲು? ಮೊಟ್ಟೆ?), ಹುಡುಗರಿಗೆ/ಹುಡುಗಿಯರಿಗೆ ಬೈಸಿಕಲ್ ವಿತರಣೆ (ಮತ್ತು ಹಿಂತೆಗೆದುಕೊಳ್ಳುವಿಕೆ) ಇದೆಯಾ?
೪. ಆಟದ ಮೈದಾನ ವಿಸ್ತಾರ ಸಾಲದು ಅಂತ ಮಕ್ಕಳ (ಮತ್ತು ಹೆತ್ತವರ) ದೂರು ಕೇಳಿಬರುತ್ತಿದೆಯಂತೆ ನಿಜವಾ?
November 19, 2007 8:04 PM
suptadeepti said...
ವಿದ್ಯಾರ್ಥಿ, ಕವನದ ಮೊದಲೆರಡು ಚರಣಗಳಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳಿವೆ, ಮತ್ತೊಮ್ಮೆ ಓದಿ.
November 19, 2007 10:01 PM
ಜಗಲಿ ಭಾಗವತ said...
ಈ ಕವನ ಲಾಯ್ಕಿತ್ತ್.
November 20, 2007 6:43 PM
Shiv said...
ಸುಪ್ತದೀಪ್ತಿಯವರೇ,
ಸೊಗಸಾದ ಕವನ.. ಕೊನೆಯ ಸಾಲು ತುಂಬಾ ಮನೋಜ್ಞವಾಗಿದೆ
November 20, 2007 8:41 PM
suptadeepti said...
ಭಾಗ್ವತ್ರೆ, ಧನ್ಯವಾದಗಳು.
ನಿಮ್ಮ ಜಗಲಿಗೆ ಬಪ್ಪ ಇನ್ಸ್'ಪೆಕ್ಟರನ್ನು ಇಲ್ಲಿ ಯಾರೋ ಕೇಳಿಕೊಂಡು ಬಂದಿದ್ರ್ ಕಾಣಿ!
November 20, 2007 8:42 PM
suptadeepti said...
ಧನ್ಯವಾದಗಳು ಶಿವ್.
November 20, 2007 8:43 PM
ಜಗಲಿ ಭಾಗವತ said...
ಅವರನ್ನ ಕಟ್ಕಂಡ್ ಕೋಳಿಪಡೆ ಮರ್ರೆ. ಆಪ್ದಾ ಹೋಪ್ದಾ?
ಹಸಿರು ಹಿನ್ನೆಲೆ ಚೆನ್ನಾಗಿ ಕಾಣಿಸ್ತಿಲ್ಲ :-(
November 22, 2007 6:25 PM
suptadeepti said...
ಏನೋ ಸ್ವಲ್ಪ experiment ಮಾಡಕ್ ಹೋದೆ, ಹಿಂಗಾತ್ ನೋಡಿ. ಕೆಲ ದಿನ ಇರ್ಲಿ, ಆಮೇಲ್ ಬದ್ಲಾಯ್ಸಿದ್ರಾಯ್ತ್.
Inspector'ಗೆ ಕೋಳಿಪಡೆ ಅಂದ್ರೆ ಹೆಂಗ್ ಮಾರಾಯ್ರೆ... ಅವರಿಲ್ದೆ ಶಾಲೆ ನಡ್ಯೂದಿಲ್ಲೆ ಅಲ್ದಾ?
November 23, 2007 12:09 AM
ಹುಣ್ಣಿಮೆಯ ಹಂಬಲ said...
ಬಹಳ ಚೆನ್ನಾಗಿದೆ ಜ್ಯೋತಿಯವರೇ .
November 27, 2007 10:39 AM
suptadeepti said...
ಹೊಸಬರಿಗೆ ಹುಣ್ಣಿಮೆಯ ಹೊನಲಿನಂಥ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.
November 27, 2007 4:45 PM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Subscribe to:
Post Comments (Atom)
No comments:
Post a Comment