ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday 4 April 2009

ಬಂದನೇನೇ...

ಓದುಗರೆಲ್ಲರಿಗೂ ಶ್ರೀರಾಮನವಮಿಯ ಶುಭಾಶಯಗಳು.


ಬಂದನೇನೇ, ರಾಮ, ಬಂದನೇನೇ
ಮುಂದೆ ನೋಡಲಾರದ ಒಂದು
ಮರುಳು ಮುದುಕಿ ಬಳಿಗೆ ಇಂದು
ಬಂದನೇನೇ, ರಾಮ, ಬಂದನೇನೇ

ನಾಡಿನ ದೊರೆ ಕಾಡೊಳು ಬಂದು
ನನ್ನ ಗುಡಿಯ ಬಾಗಿಲ ಮುಂದು
ನೂರುಕಾಲ ಜಪಿಸಿದೆನೆಂದು
ನಲ್ನುಡಿಯನಾಡಲು ಇಂದು ---ಬಂದನೇನೇ...

ಹಾದಿ ಹಲವು ನಡೆವನೆಂದು
ಹಸಿದು ದಣಿದು ಬರುವನೆಂದು
ಹುಡುಕಿ ತಡಕಿ ತನಿಹಣ್ಣೆಂದು
ಹೊಸದೆ ಕೊಯಿದು ಕಾದಿಹೆನಿಂದು ---ಬಂದನೇನೇ...

ಜನತೆಯ ಜತೆ ಆದರದಿಂದ
ಜಗದೊಡೆಯನ ಠೀವಿಯಿಂದ
ಜಗವ ಗೆಲುವ ನಸುನಗೆಯಿಂದ
ಜನರ ಮನಕೆ ಸಂತಸತಂದ ---ಬಂದನೇನೇ...

ಕೋಸಲದ ಮುದ್ದಿನ ಕಂದ
ಕೌಸಲ್ಯೆಯ ಮನದಾನಂದ
ಕೋಟಿಸೂರ್ಯ ತೇಜದಿಂದ
ಕೌಸ್ತುಭಧರ ಕರುಣೆಯಿಂದ ---ಬಂದನೇನೇ...

ಋತುರಾಜನ ಸೊಬಗಿನಿಂದ
ಋಷಿಮುನಿಗಳ ರೂಪದಿಂದ
ಋತ್ವಿಜರನು ಸೇವಿಸಿ ಬಂದ
ಋಣಮುಕ್ತಿಯ ನೀಡುವೆನೆಂದ ---ಬಂದನೇನೇ...
(೨೧-ಮೇ-೨೦೦೮)

4 comments:

ಸುಶ್ರುತ ದೊಡ್ಡೇರಿ said...

ಇದ್ನ ನನ್ ಅಮ್ಮಂಗೆ ಕೊಟ್ರೆ ಚಂದ ಹಾಡ್ತಾಳೆ..

ಸುಪ್ತದೀಪ್ತಿ suptadeepti said...

ಸುಶ್,
'ಭಾವಬಿಂಬ'ದಲ್ಲಿ (ಪುಟ-೭೦) ಈ ಪದ್ಯ ಇದೆ. ಅದನ್ನ ಫೋಟೋಕಾಪಿ ಮಾಡಿ ಅಮ್ಮಂಗೆ ಕಳಿಸು. ಹಾಡಿದರೆ ಅದನ್ನ ರೆಕಾರ್ಡ್ ಮಾಡಿ ಕೊಡು, ಪಾಡ್-ಕಾಸ್ಟ್'ನಲ್ಲಿ ಹಾಕುತ್ತೇನೆ. ಆಯ್ತಾ?

sunaath said...

ರಾಮನವಮಿಗೆ ಭಾವಪೂರ್ಣ ಕವನ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

ಸುಪ್ತದೀಪ್ತಿ suptadeepti said...

ಕಾಕಾ,
ಧನ್ಯವಾದಗಳು ನಿಮಗೂ, ಓದಿ ಪ್ರತಿಕ್ರಿಯಿಸಿದ್ದಕ್ಕೆ.