ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 21 May 2009

ಬೇರುಗಳು

ಮನೆಯಿಂದಿಳಿದು ಮೂರು ಬ್ಲಾಕ್ ಆಚೆಗಿರುವ ಬ್ಯೂಟಿ ಪಾರ್ಲರ್‍ಗೆ ಹೋಗಲು ಕಾರ್ ತೆಗೆಯಲೋ ನಡೆಯಲೋ ಎಂದು ಯೋಚಿಸಿದ ಅನಿತಾ, ಗರಾಜಿನಿಂದ ಕಾರ್ ತೆಗೆದಳು. ಪುಟ್ಟ ನೇತನ್ ಓಡಿ ಬಂದಾಗ ಬೇಬಿ ಸಿಟ್ಟರ್ ಶೆರ್ಲಿ ಹಿಂದೆಯೇ ಬಂದು ಅವನನ್ನು ಎತ್ತಿಕೊಂಡು, ಅಮ್ಮನಿಗೆ ಬಾಯ್ ಹೇಳಿಸಿ ಅವನನ್ನು ಒಳಗೊಯ್ದಳು. ಫೇಷಿಯಲ್ ಮಾಡಿಸಿಕೊಂಡು ಸುಡುವ ಬಿಸಿಲಲ್ಲಿ ನಡೆಯುವುದು ಸರಿಯಲ್ಲ ಎಂಬ ತರ್ಕದ ಮೇಲೆ ಕಾರ್ ಚಲಾಯಿಸಿದಳು ಅನಿತಾ. ಸಂಜೆಯ ಕೋಲು ಬಿಸಿಲು ನೇರವಾಗಿ ಅವಳ ಎಡಕೆನ್ನೆಗೆ ಬೀಳುತ್ತಿದ್ದು, ಹಿಂದಿರುಗುವಾಗ ಅದು ತನ್ನನ್ನು ಕಾಡುವುದಿಲ್ಲವೆಂದು ಸಮಾಧಾನಿಸಿಕೊಂಡಳು. ತಿಂಗಳಿಗೊಂದರಂತೆ ಫೇಷಿಯಲ್ ಹಾಗೂ ಕೈಕಾಲುಗಳ ಪೂರ್ಣ ವ್ಯಾಕ್ಸಿಂಗ್ ಮಾಡಿಸಿಕೊಳ್ಳುವ ಹವ್ಯಾಸ ಹತ್ತಿಸಿದ ಕೆನೆತ್ ಅವಳ ಜೀವನದಿಂದ ಜಾರಿದ ಮೇಲೂ ಈ ಹವ್ಯಾಸ ಅವಳನ್ನು ಬಿಟ್ಟಿರಲಿಲ್ಲ. ಸುಮ್ಮನೆ ಮಲಗಿದ್ದು ಮುಖಕ್ಕೆ ಮಸಾಜ್ ಮಾಡಿಸಿಕೊಳ್ಳುವಾಗಿನ ಸುಖ, `ಪ್ಯಾಂಪರ್‍ಡ್ ಫೀಲಿಂಗ್' ಮುದ ನೀಡುತ್ತದೆ ಅನ್ನುವ ಸತ್ಯವನ್ನು ಕಂಡುಕೊಂಡಿದ್ದಳು. ಕೆನೆತ್‍ನ ಸಾಂಗತ್ಯದ ದಿನಗಳಲ್ಲಿ ಅವನ ಹೊಗಳಿಕೆಗಾಗಿ ಪಾರ್ಲರಿಗೆ ಹೋಗುತ್ತಿದ್ದೇನೆ ಅನ್ನುವ ಭಾವನೆಯಿತ್ತು, ಈಗ ತನಗಾಗಿಯೇ ಹೋಗುತ್ತಿದ್ದಳು.

ಅವನೇಕೆ ತನ್ನನ್ನು ತೊರೆದ ಅನ್ನುವುದಕ್ಕೆ ಸಮಾಧಾನ ಇರಲಿಲ್ಲವಾದರೂ, ಅವನೆಲ್ಲಾದರೂ ಸುಖವಾಗಿರಲಿ, ತನ್ನ ಸುಖ ತನಗಿರಲಿ ಅನ್ನುವ ತಾತ್ವಿಕ ನಿಲುವನ್ನು ತಳೆದಿದ್ದಳು. ಭಾರತೀಯಳಾದ ತಾನು ಕೆನೆತ್‍ನಲ್ಲಿ ಕಂಡಿದ್ದಾದರೂ ಏನು ಎಂದು ಅನೇಕ ಬಾರಿ ಪ್ರಶ್ನಿಸಿಕೊಂಡು ಉತ್ತರ ಸಿಗದೇ ನಿರಾಶಳಾಗಿದ್ದೂ ಇದೆ. ಪ್ರತಿ ಬಾರಿ ಪಾರ್ಲರಿಗೆ ಹೋಗುವಾಗಲೂ ಅವನ ನೆನಪು ಕಾಡುವುದಾಗಿತ್ತು. ಯಾವ ವೇಗದಲ್ಲಿ ಎಷ್ಟು ಗಾಢವಾಗಿ ಪ್ರೀತಿಸಿದ್ದನೋ ಅದೇ ವೇಗದಲ್ಲಿ ಅಷ್ಟೇ ಗೂಢವಾಗಿ ಬಿಟ್ಟು ನಡೆದಿದ್ದ. ಅವನ ಸೆಕ್ರೆಟರಿಯಿಂದ ಅವನ ಹೊಸ ಪ್ರಣಯದ ವಿಷಯ ತಿಳಿದಾಗ ಅನಿತಾಳಿಗೆ ಆಘಾತವಾಗಿತ್ತು. ಅವನೊಂದಿಗೆ ನೇರವಾಗಿ ವಿಚಾರಿಸಿದಾಗ `ವಿಚ್ಛೇದನಕ್ಕೆ ಒಪ್ಪಿಗೆಯಿದೆ' ಎಂದು ನಿರಾಳವಾಗಿ ಹೇಳಿ ಹೊರಟಿದ್ದ. ಈ ಜನರ ನೈತಿಕತೆಯೇ ಅರ್ಥವಾಗದು ಎಂದು ಅಮ್ಮನೊಂದಿಗೆ ಹೇಳಿಕೊಂಡು ಅಳಲಾರದ ಇಬ್ಬಂದಿಯಲ್ಲಿದ್ದಳು ಅನಿತಾ. ಅವಳ ಈ ಮದುವೆಗೆ ಅವಳಮ್ಮ ಬಹುವಾಗಿ ವಿರೋಧಿಸಿ ಬುದ್ಧಿ ಹೇಳಿದ್ದರು. ಆಗ ಅನಿತಾ ಅದಾವುದನ್ನೂ ಕಿವಿಗೆ ಹಾಕಿಕೊಂಡಿರಲಿಲ್ಲ. ಕೆನೆತ್ ಬಿಟ್ಟು ಹೊರಟಾಗ ಅಳುತ್ತಾ ಅಮ್ಮನ ಮಡಿಲಿಗೆ ಹೋಗುವ ಮನಸ್ಸಾಗಿದ್ದರೂ ಅಭಿಮಾನ ಬಿಡಲಿಲ್ಲ. ಬಹುರಾಷ್ಟ್ರೀಯ ಕಂಪೆನಿಯೊಂದರ ವಿತ್ತ ಶಾಖೆಯಲ್ಲಿ ಉನ್ನತ ಕೆಲಸದಲ್ಲಿದ್ದ ಅವಳು ಮಗನಿಗಾಗಿ ಮನೆಯಲ್ಲೇ ಬಂದಿರುವಂತೆ ಬೇಬಿ ಸಿಟ್ಟರ್ ಒಬ್ಬಳನ್ನು ಗೊತ್ತುಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಇದೀಗ ಕೆನೆತ್‍ನಿಂದ ಬಿಡುಗಡೆಯೂ ದೊರೆತಿದ್ದು, ಸಂಪೂರ್ಣ ಸ್ವತಂತ್ರ ನಾರಿಯಾಗಿದ್ದಳು. ಆದರೂ ಬೇರು ಬಿಟ್ಟಿದ್ದ ಭಾರತೀಯತೆ ಒಂದು ರೀತಿಯ ಬೇಲಿಯಾಗಿತ್ತು. ಒಳಗೊಳಗೇ ನೊಂದುಕೊಂಡು ಬೇಯುತ್ತಿದ್ದಳು.

ಮಾಮೂಲಿನಂತೆ ಬ್ಯೂಟಿ ಪಾರ್ಲರಿನಲ್ಲಿ ತನ್ನ ನಿಯಮಿತ ಸಖಿಯೊಂದಿಗೆ ಒಳಕೋಣೆ ಹೊಕ್ಕು, ತನ್ನ ಮೇಲುಡುಪುಗಳನ್ನು ತೆಗೆದಿರಿಸಿ, ಅವಳು ಕೊಟ್ಟ ಪೇಪರ್ ಬಟ್ಟೆ ತೊಟ್ಟು, ಎತ್ತರದ ಆರಾಮಾಸನದಲ್ಲಿ ಮಲಗಿದಳು. ಛಾವಣಿ ನೋಡುತ್ತಿದ್ದಂತೆ, ಮತ್ತೆ ಕೆನೆತ್ ನೆನಪು ಓಡಿ ಬಂತು. `ಇಂದೇಕೆ ಹೀಗೆ ಕಾಡುತ್ತಿದ್ದಾನೆ, ಅವನ ಆರೋಗ್ಯ ಚೆನ್ನಾಗಿದೆ ತಾನೆ? ಅವನಿಗೇನೂ ಹಾನಿಯಾಗಿಲ್ಲದಿರಲಿ' ಅಂದುಕೊಂಡಳು. ಮತ್ತೆ `ಹುಚ್ಚು ಮನಸ್ಸು, ಅವನಿಗೇನಾದರೆ ನನಗೇನು?' ಎಂದೂ ಕಂಡಿತು. ಯೋಚನೆಯನ್ನು ನೇತನ್ ಕಡೆ ಹರಿಸಿದಳು. ಅವನಿಗೆ ಇನ್ನೇನು ಮೂರು ತುಂಬುವುದರಲ್ಲಿದೆ. ಅವನ ಹುಟ್ಟು ಹಬ್ಬ ನಡೆಸುವ ಉತ್ಸಾಹ ಅವಳಲ್ಲಿಲ್ಲ. ಆದರೆ ಪ್ರಿ-ಸ್ಕೂಲಿಗಂತೂ ಹಾಕಬಹುದಲ್ಲ. ಅದಕ್ಕಾಗಿ ತಯಾರಿ ನಡೆಸಬೇಕು. `ಶೆರ್ಲಿಯನ್ನೇ ಒಂದು ಮಾತು ಕೇಳಬೇಕು. ಅವಳಾದರೋ ಇದೇ ಪ್ರದೇಶದಲ್ಲಿ ಇಪ್ಪತ್ಮೂರು ವರ್ಷಗಳಿಂದ ಇದ್ದವಳು, ಅವಳಿಗೆ ಎಲ್ಲ ಗೊತ್ತಿರುತ್ತದೆ', ಅಂದುಕೊಂಡಳು. ಯೋಚನೆಗಳ ನಡುವೆ ಯಾಂತ್ರಿಕವಾಗಿ ಫೇಷಿಯಲ್ ಮುಗಿಸಿ ಹೊರಬಂದಾಗ ಕೌಂಟರ್ ಪಕ್ಕದಲ್ಲಿ ಹೊಸ ಮುಖಗಳೆರಡು ಕಂಡವು. ಇಬ್ಬರೂ ಹೆಂಗಸರಂತೆ ಬಟ್ಟೆಬರೆ ಧರಿಸಿದ್ದ ಗಂಡಸರೆಂದು ಅವಳಿಗನ್ನಿಸಿತು. `ಕ್ರಾಸ್ ಡ್ರೆಸ್ಸರ್‍ಸ್. ಹೇಗಾದರೂ ಇರಲಿ, ತನಗೇನು' ಅಂದುಕೊಳ್ಳುತ್ತಲೇ ಹೊರ ಬಂದು ಮನೆ ಸೇರಿದಳು. ಶೆರ್ಲಿ ತನ್ನ ಮನೆಗೆ ಹೊರಡುವ ಮುನ್ನ ಸುತ್ತ ಮುತ್ತಲಿನ ಪ್ರಿ-ಸ್ಕೂಲುಗಳ ವಿವರಗಳನ್ನು ತಿಳಿಸಿ, ಯಾವ ಶಾಲೆಗೆ ನೇತನ್ ಸೇರಿದರೂ ಅವನ ಶಾಲಾ ಅವಧಿ ಮುಗಿದ ಮೇಲೆ ತಾನು ಅವನನ್ನು ಮನೆಗೆ ಕರೆತಂದು ಅನಿತಾ ಬರುವವರೆಗೆ ಮನೆಯಲ್ಲಿರುವುದಾಗಿಯೂ ಹೇಳಿದಳು. ಶೆರ್ಲಿ ಅನಿತಾಳ ಸ್ನೇಹಿತೆಯೇ ಆಗಿಬಿಟ್ಟಿದ್ದಳು. ಅದೆಷ್ಟೋ ಬಾರಿ ಅವರಿಬ್ಬರೂ ಜೊತೆಯಾಗಿ ವಾರಾಂತ್ಯಗಳನ್ನೂ ಕಳೆಯುತ್ತಿದ್ದರು. ಮಗನನ್ನು ಮಲಗಿಸಿ ಹಾಸಿಗೆ ಸೇರಿದಾಗ ಅನಿತಾ ಉದ್ವಿಗ್ನಳಾಗಿದ್ದು ಯಾಕೆಂದು ಆಕೆಗೇ ತಿಳಿಯಲಿಲ್ಲ.

ಮರುದಿನ ಶನಿವಾರ. ತನಗೊಂದು ಡೇಟ್ ಇದೆ ಎಂದು ಸುಮಾರು ನಲ್ವತ್ತರ ಶೆರ್ಲಿ ಹೇಳಿದ್ದೇ ತನ್ನ ದುಗುಡಕ್ಕೆ ಕಾರಣವೇ ಎಂದು ಚಡಪಡಿಸಿದಳು ಅನಿತಾ. ಅವಳಿಗಿನ್ನೂ ಇಪ್ಪತ್ತಾರು. ಇನ್ನೂ ಮದುವೆಯೂ ಆಗಿರದ ಈ ವಯಸ್ಸಿನ ಹೆಣ್ಣುಗಳೆಷ್ಟೋ ಈ ಪ್ರಪಂಚದಲ್ಲಿದ್ದರೂ ಸುಂದರಿಯಾದ ತಾನು, ಒಬ್ಬ ಮಗುವಿನ ತಾಯಿಯಾದುದೇ ಕಾರಣವಾಗಿ, ಹೀಗೆ ಒಂಟಿಯಾಗಿರಬೇಕೆ ಅನ್ನಿಸಿತ್ತು ಅವಳಿಗೆ. ಆದರೆ ಅಮೆರಿಕನ್ನರಂತೆ ಡೇಟಿಂಗ್ ಮಾಡಲು ಮನಸ್ಸಿಲ್ಲ. ತನಗಾಗಿ ಇನ್ನೊಬ್ಬ ಗೆಳೆಯನನ್ನು ತಾನೇ ಹುಡುಕಿಕೊಳ್ಳುವ ಕಡೆ ಅವಳ ಮನಸ್ಸಿನ್ನೂ ವಾಲಿರಲಿಲ್ಲ. ಅಂಥ ಸ್ಥಿತ-ಮನಸ್ಸು, ಇಂದೀಗ ಯಾಕೆ ವಿಲಿ-ವಿಲಿ ಒದ್ದಾಡುತ್ತಿದೆ ಎಂದು ತಿಳಿಯದೆ ಎದ್ದು ಹೋಗಿ ಟಿ.ವಿ. ಹಾಕಿಕೊಂಡಳು. ವಾರ್ತೆಗಳ ಬಳಿಕ ಜೇ-ಲಿನೋ ಷೋ ನೋಡುತ್ತಾ ನಡು ನಡುವೆ ಜಾಹೀರಾತುಗಳ ಸಮಯದಲ್ಲಿ ಅನ್ಯ ಮನಸ್ಕಳಾಗಿ ಚಾನೆಲ್ ಬದಲಿಸುತ್ತಾ ಕುಳಿತಿದ್ದಾಕೆಯ ಗಮನ ಯಾವುದೋ ಚಾನೆಲ್‍ನಲ್ಲಿದ್ದ ಒಂದು ವಾರ್ತೆಯತ್ತ ಹರಿಯಿತು. `ಪರ್ಸನಲೈಸ್ಡ್ ಡೇಟಿಂಗ್ ಸರ್ವಿಸಸ್' ಎಂಬ ಸಂಸ್ಥೆಯೊಂದು ಒಂಟಿಯಾಗಿರುವ ಗಂಡು-ಹೆಣ್ಣುಗಳ ವೈಯಕ್ತಿಕ ಆಸಕ್ತಿ-ಅಭಿರುಚಿ ಮುಂತಾದ ವಿಷಯಗಳನ್ನು ಸಂಗ್ರಹಿಸಿ ತಮಗೆ ಸೂಕ್ತ ಕಂಡಂತೆ ಜೊತೆ ಮಾಡಿ ಕೊಡುತ್ತಾರೆಂದೂ, ಹಾಗೆ ಅವರ ಮೂಲಕ ಜೊತೆಯಾದ ಜೋಡಿಗಳು ಈ ಒಂದೆರಡು ವರ್ಷಗಳಿಂದ ಸಂತೋಷದಿಂದ ಇದ್ದಾರೆಂದೂ ತಿಳಿಸಲಾಗಿತ್ತು. ಆದರೆ, ಸಂಸ್ಥೆಯು ತನ್ನ ವಿಷಯ ಸಂಗ್ರಹ ಹೇಗೆ ನಡೆಸುತ್ತದೆ ಎಂಬುದನ್ನು ತಿಳಿಸಲಿಲ್ಲ; ಎಲ್ಲೆಲ್ಲಿ, ಯಾವ ರೂಪದಲ್ಲಿ ತಮ್ಮ ಬೇಹುಗಾರರು ಇದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿಲ್ಲ- ಎಂದು ವಾರ್ತೆಯಲ್ಲಿ ಬಿತ್ತರವಾದಾಗ ಅನಿತಾಳಿಗೆ ತಟ್ಟನೆ ಪಾರ್ಲರಿನಲ್ಲಿ ಕಂಡ ಆ ಇಬ್ಬರ ನೆನಪಾಯಿತು. `ಛೇ, ಇರಲಾರದು. ಎಲ್ಲಿಂದೆಲ್ಲಿಯ ಸಂಬಂಧ!' ಅಂದುಕೊಂಡು ಟಿ.ವಿ. ಆರಿಸಿ ಹೋಗಿ ಮಲಗಿದಳು.

ವಾರಾಂತ್ಯ ಹೇಗೋ ಕಳೆದು, ಸೋಮವಾರ ಆಫೀಸಿಗೆ ಬಂದವಳ ಮನಸ್ಸು ಇನ್ನೂ ಸ್ಥಿಮಿತದಲ್ಲಿರಲಿಲ್ಲ. ಏನೋ ದುಗುಡ, ಕಳವಳ, ಆತಂಕ. ಎಚ್.ಆರ್. ವಿಭಾಗದಿಂದ ಕ್ಯಾಥರೀನ್ ಕರೆ ನೀಡಿದಾಗ ಅವಳ ಮನಸ್ಸು ಕೆಲಸದತ್ತ ತುಸು ಗಮನ ಹರಿಸಿತು. ಹೊಸದಾಗಿ ಸೇರಿದ ವ್ಯಕ್ತಿಯೊಬ್ಬನ ಖಾತೆಗೆ ಸಂಬಂಧಿಸಿದಂತೆ ಕೆಲವು ವಿವರಗಳನ್ನು ಕ್ಯಾಥರೀನ್‍ಗೆ ಒದಗಿಸಿ ಕಾಫಿ ಮೆಷೀನ್ ಕಡೆ ನಡೆದಳು. ಅದೂ ಬೇಡವೆನ್ನಿಸಿ ತನ್ನ ಸ್ಥಾನಕ್ಕೆ ಬಂದು ಮನೆಗೆ ಫೋನ್ ಮಾಡಿದಳು. ಉತ್ತರಿಸಿದ ಶೆರ್ಲಿ, ಕೆನೆತ್ ಕರೆ ನೀಡಿದ್ದನೆಂದೂ, ಮಗನ ಹುಟ್ಟು ಹಬ್ಬಕ್ಕೆ ತಾನು ತನ್ನ ಹೊಸ ಪತ್ನಿ ಮತ್ತು ಪುತ್ರಿಯೊಂದಿಗೆ ಬರುವುದಾಗಿ ತಿಳಿಸಲು ಹೇಳಿದ್ದಾನೆಂದೂ ಅರಿತಾಗ ಮಗನನ್ನು ಕಳೆದುಕೊಂಡೇ ಬಿಟ್ಟೆನೆಂಬ ಭ್ರಾಂತಿ ಹುಟ್ಟಿತು. ಮನೆಗೆ ಸ್ವಲ್ಪ ಬೇಗ ಬರುವುದಾಗಿ ಶೆರ್ಲಿಗೆ ಹೇಳಿ ಫೋನ್ ಇಟ್ಟಳು. ಅವಳ ಜೀವನದಿಂದ ಆತ ಹೊರನಡೆದು ಎರಡೂವರೆ ವರ್ಷಗಳಾಗಿದ್ದವು. ನೇತನ್‍ನ ಮೊದಲ ಹುಟ್ಟುಹಬ್ಬಕ್ಕೆ ಉಡುಗೊರೆ ತಂದಿತ್ತಿದ್ದ. ಆಗಷ್ಟೇ ಹೊಸ ಮದುವೆಯಾಗಿದ್ದ. ಎರಡನೆಯ ವರ್ಷ ಇತ್ತ ಸುಳಿದಿರಲಿಲ್ಲ. ಶುಭಾಶಯವೂ ಇಲ್ಲ. ಅಷ್ಟರಲ್ಲಿ ಮಗಳು ಹುಟ್ಟಿದ್ದಳು. ಇದೀಗ ಇದ್ದಕ್ಕಿದ್ದಂತೆ ಮಗನ ಮೇಲೆ ಪ್ರೀತಿ ಹೇಗೆ ಬಂತು? ಯಾಕೆ? ಆಫೀಸಿನಲ್ಲಿ ಉಳಿದ ಸಮಯವನ್ನು ಇನ್ನಷ್ಟು ಗೊಂದಲದೊಳಗೇ ಕಳೆದಳು ಅನಿತಾ.

ಸಂಜೆ ಮನೆ ಸೇರಿದವಳೇ, ಕೆನೆತ್ ಹೇಳಿದುದನ್ನೆಲ್ಲ ಶೆರ್ಲಿಯಿಂದ ಮತ್ತೆ ಹೇಳಿಸಿಕೊಂಡು, ಅವಳ ಉತ್ತರವನ್ನೂ ಕೇಳಿ ತಿಳಿದುಕೊಂಡಳು. ನಿರಾಳವಾಗೊಂದು ಉಸಿರು ಬಿಟ್ಟು, "ಆದರೆ ಶೆರ್ಲಿ, ಆ ವೀಕೆಂಡ್ ನಾನು ನೇತನ್ ಜೊತೆ ಲಾಸ್ ಏಂಜಲಿಸ್ ಕಡೆ ಹೋಗೋಣವೆಂದು ಅಲ್ಲಿ ಡಿಸ್ನಿ ರೆಸಾರ್ಟಿನಲ್ಲಿ ಬುಕ್ ಮಾಡಿದ್ದೇನೆ. ಕೆನೆತ್‍ನನ್ನು ಭೇಟಿ ಮಾಡಲಾಗುವುದಿಲ್ಲ. ನಾನೇ ಅವನಿಗೆ ಫೋನ್ ಮಾಡಿ ತಿಳಿಸೋಣವೆಂದಿದ್ದೆ...." ಅಂದಳು. "ನಿನ್ನ ಪ್ಲಾನ್ ನಿನ್ನದು, ಅವನಿಗೆ ಹಾಗೇ ಹೇಳು. ತೊಂದರೆಯೇನಿಲ್ಲ." ಅಂದ ಶೆರ್ಲಿ, ಇದ್ದಕ್ಕಿದ್ದಂತೆ, ಇಷ್ಟು ದೊಡ್ಡ ನಗು ಹೊಮ್ಮಿಸುತ್ತಾ, ತಾನೂ ತನ್ನ ಹೊಸ ಗೆಳೆಯನೊಂದಿಗೆ ಅದೇ ವಾರಾಂತ್ಯ ಲಾಸ್ ಏಂಜಲಿಸ್‍ಗೆ ಹೋಗುವ ನಿರ್ಧಾರ ಮಾಡಿರುವುದಾಗಿ ತಿಳಿಸಿದಳು. ಅನಿತಾಳ ಆಶ್ಚರ್ಯ "ಇಷ್ಟು ಬೇಗ...?" ಪದಗಳಲ್ಲಿ ವ್ಯಕ್ತವಾಯಿತು. "ಹೌದು, ರಾಬರ್ಟ್‍ನ ತಂದೆ ತಾಯಿ ಅಲ್ಲಿದ್ದಾರೆ. ಅವನಿಗೆ ನಾನು ಬಹಳ ಇಷ್ಟವಾಗಿದ್ದೇನೆ, ನನಗೂ ಅವನು ಹಿಡಿಸಿದ್ದಾನೆ. ನಮ್ಮಿಬ್ಬರ ಬಹುತೇಕ ಆಸಕ್ತಿಗಳು ಹೊಂದುತ್ತವೆ. `ಪರ್ಸನಲೈಸ್ಡ್ ಡೇಟಿಂಗ್ ಸರ್ವಿಸಸ್' ಮೂಲಕ ನಮ್ಮಿಬ್ಬರ ಭೇಟಿಯಾಯಿತು. ವಾರಾಂತ್ಯವಿಡೀ ಜೊತೆಗಿದ್ದು, ನಮ್ಮ ಬಾಳಿನ ಹಾದಿ ಒಂದೇ ಎಂದು ನಿರ್ಧರಿಸಿಕೊಂಡೆವು. ನೀನೂ ಯಾಕೆ ಆ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳಬಾರದು? ನಿನಗೂ ಮನಸ್ಸಿಗೆ ಹಿಡಿಸುವಂಥ ಯಾರಾದರೂ ಸಿಗಬಹುದು, ನೋಡು" ಎಂದಳು. ಅದೇ ಸಂಸ್ಥೆಯ ಬಗ್ಗೆ ತಾನು ಶುಕ್ರವಾರದ ರಾತ್ರಿ ಯಾವುದೋ ಚಾನೆಲ್‍ನಲ್ಲಿ ಕಂಡಿದ್ದಾಗಿ ಅನಿತಾ ಹೇಳಿದಾಗ ಶೆರ್ಲಿ ಅತಿ ಸಂತಸ ತೋರಿದಳು. `ಯೋಚಿಸುತ್ತೇನೆ' ಎಂದಂದು ಶೆರ್ಲಿಯನ್ನು ಬೀಳ್ಕೊಟ್ಟು, ನೇತನ್ ಜೊತೆ ಅಡುಗೆ ಮನೆಗೆ ಬಂದಳು ಅನಿತಾ.

ಮಗನ ತೊದಲುಗಳ ನಡುವೆ ಅವನ ದಿನಚರಿಯ ವಿವರಣೆ ಕೇಳಿ, ಅವನಿಗೆ ಬೇಯಿಸಿ ಜಜ್ಜಿದ ಅರ್ಧ ಆಲೂಗಡ್ಡೆ, ನಾಲ್ಕು ಅರೆಬೆಂದ ಬೀನ್ಸ್, ಒಂದು ರೋಟಿ, ಸ್ವಲ್ಪ ಪಲ್ಯ, ಜೊತೆಗೆ ತುಸು ಮೊಸರನ್ನ ಕಲಸಿಟ್ಟು, ತಾನೂ ತಟ್ಟೆಯಲ್ಲಿ ರೋಟಿ-ಪಲ್ಯಗಳನ್ನೂ, ಅರೆಬೆಂದ ಬೀನ್ಸ್ ಮತ್ತು ಮೊಸರನ್ನವನ್ನೂ ಬಡಿಸಿಕೊಂಡು ಊಟದ ಟೇಬಲ್‍ಗೆ ಬಂದಳು. ನೇತನ್ ಆಗಲೇ ಊಟ ಶುರುಮಾಡಿದ್ದ. ಸಾಮಾನ್ಯ ಟೆರಿಬಲ್ ಟಾಡ್ಲರ್ ಆಗಿಲ್ಲದ ತನ್ನ ಕಂದನ ಸೌಮ್ಯ ನಡವಳಿಕೆ ತನ್ನ ಹಾಗೂ ಶೆರ್ಲಿಯ ಮಮತೆಯ ಫಲ ಎಂಬ ಅರಿವಾಗಿ ಶೆರ್ಲಿಯ ಬಗ್ಗೆ ಇನ್ನಷ್ಟು ಗೌರವ ಮೂಡಿತು. ಪರದೇಶೀಯಳಾದರೂ ತನ್ನ ಬಗ್ಗೆ ಆಕೆ ತೋರುತ್ತಿರುವ ಪ್ರೀತಿಗೆ ಹೃದಯ ಋಣಿಯಾಯಿತು. ಅವಳು ಹೇಳಿದಂತೆ, ಆ ಡೇಟಿಂಗ್ ಸಂಸ್ಥೆಯಲ್ಲಿ ತನ್ನ ಹೆಸರು ನೋಂದಾಯಿಸಿಕೊಳ್ಳುವ ಬಗ್ಗೆ ಯೋಚನೆ ಗಾಢವಾಯಿತು. ಏನೇನೋ ಹರಟುತ್ತಾ ಊಟ ಮುಗಿಸಿದ ಮಗ, `ಡೆಸರ್ಟ್' ಎಂದು ಒಂದು ಸೇಬನ್ನು ತಂದಾಗ ಅದನ್ನೂ ಹೆಚ್ಚಿ ಕೊಟ್ಟಳು. ಶೆರ್ಲಿ ತಂದಿದ್ದೆಂದು ಖುಷಿಪಟ್ಟು ತಿಂದ. ನೇತನ್‍ಗಾಗಿ ಆಕೆ ಒಮ್ಮೊಮ್ಮೆ ಹಣ್ಣನ್ನೂ, ಆಟಿಕೆಗಳನ್ನೂ ತರುವುದಿದೆ. ಇವಳು ಆಕ್ಷೇಪಿಸಿದಾಗ, "ನನಗಂತೂ ಸ್ವಂತ ಮಕ್ಕಳಿಲ್ಲ. ಇನ್ನು ಆಗುತ್ತೋ ಇಲ್ಲವೋ ಗೊತ್ತಿಲ್ಲ. ನಿನ್ನ ಮಗ ನನ್ನ ಮಗನಂತೆ. ಅದಕ್ಕಾಗಿ ನೀನು ಏನೂ ಹೇಳಕೂಡದು. `ಮಕ್ಕಳು ದೇವರಂತೆ' ಅನ್ನುತ್ತೀರಲ್ಲ ನೀವು; ದೇವರಿಗೇ ಕೊಟ್ಟೆ ಅಂದುಕೋ" ಎಂದುತ್ತರಿಸಿ ಇವಳ ಬಾಯ್ಮುಚ್ಚಿಸಿದ್ದಳು. ಇಂಥ ಚತುರೆ ಸ್ನೇಹಿತೆಯಾದದ್ದು ತನ್ನ ಭಾಗ್ಯ ಎಂದುಕೊಂಡು ನೇತನ್‍ನನ್ನು ಮಲಗಿಸಿದಳು ಅನಿತಾ.

ಕೆನೆತ್‍ಗೆ ಫೋನ್ ಮಾಡಿ ಮಗನೊಂದಿಗೆ ತನ್ನ ಪ್ರವಾಸದ ವಿಷಯ ತಿಳಿಸಿದಾಗ, ಅದನ್ನು ನಿರಾಳವಾಗಿಯೇ ಸ್ವೀಕರಿಸಿದ ಕೆನೆತ್, "ನೀನು ಇನ್ನೂ ಯಾರನ್ನೂ ನೋಡುತ್ತಿಲ್ಲವೆ?" ಎಂದ. ಅದರ ಅರ್ಥ ಹೊಳೆಯಲು ಒಂದು ಕ್ಷಣ ಬೇಕಾಯಿತು ಅನಿತಾಳಿಗೆ. ಮತ್ತೆ, ನೇರವಾಗಿ ಇಲ್ಲ ಅಂದಳು. "ಯಾಕೆ?" ಪ್ರಶ್ನೆಗೆ, "ಬೇಕೆನಿಸಿಲ್ಲ" ಅಂದಳು. "ಮುಂದಿನ ವೀಕೆಂಡ್ ನನ್ನೊಂದಿಗೆ ಕಳೆಯುತ್ತೀಯಾ? ನೀನೊಬ್ಬಳೇ, ನೇತನ್ ಬೇಡ" ಅಂದ. ಬೆಣ್ಣೆ ಸವರಿದ ಕತ್ತಿ ಅಂದುಕೊಂಡಳು, "ಆಗೋಲ್ಲ, ಬೇರೆ ಕಮಿಟ್‍ಮೆಂಟ್ ಇದೆ" ಅಂದಳು. ಮಾತು ಮುಂದುವರಿಸಲಾರದೆ ಬೈ ಹೇಳಿದಳು. ಮೈಯೆಲ್ಲ ಉರಿಯುತ್ತಿತ್ತು. `ಅವನ ತೊತ್ತು ಅಂದುಕೊಂಡಿದ್ದಾನೇನು ನನ್ನ, ಅವನು ಕರೆದಾಗಲೆಲ್ಲ ಜೊತೆಗೆ ಹೋಗಲು. ಅವನ ಹೊಸ ರಾಣಿಗೇನಾಗಿದೆ? ಅವಳೊಂದಿಗೂ ಹೊಂದಿಕೆಯಾಗಿಲ್ಲವೇನೊ! ಅವಸರದಲ್ಲಿ ಅವಳನ್ನು ಕಟ್ಟಿಕೊಂಡ, ಈಗ ತಿಣುಕುತ್ತಿದ್ದಾನೆ. ನಾನೇಕೆ ಅದಕ್ಕೆ ತಲೆ ಕೊಡಲಿ?...." ಯೋಚನೆಗಳ ನಡುವೆ ನಿದ್ದೆ ನುಸುಳಿ ಅವಳನ್ನು ತಬ್ಬಿತ್ತು. ಮುಂಜಾನೆ ಎದ್ದಾಗ ಯಾವುದೋ ನಿರ್ಧಾರಕ್ಕೆ ಬಂದವಳಂತೆ ಶೆರ್ಲಿಯ ಬರವನ್ನೇ ಕಾಯುತ್ತಿದ್ದವಳು, ಅವಳಿಂದ ಡೇಟಿಂಗ್ ಸಂಸ್ಥೆಯ ಬಗ್ಗೆ ತಿಳಿದುಕೊಂಡಳು. ಗುಡ್ ಲಕ್ ಎಂದು ಕಣ್ಣು ಮಿಟುಕಿಸಿ ಬೀಳ್ಕೊಟ್ಟಳು ಶೆರ್ಲಿ.

ಮುಂದಿನ ದಿನಗಳಲ್ಲಿ ಆಫೀಸಿನಲ್ಲಿ ಗಡಿಬಿಡಿಯ ವಾತಾವರಣ ಹುಟ್ಟಿಕೊಂಡು, ತನ್ನ ಅಸ್ಥಿರತೆಯ ಬಗ್ಗೆ ಯೋಚಿಸಲೂ ಬಿಡುವಿರದಷ್ಟು ಕೆಲಸ ಅನಿತಾಳ ಮೇಲೆ ಬಿತ್ತು. ಅದೇ ಗುಂಗಿನಲ್ಲಿ ತಾಯಿ-ಮಗ ಲಾಸ್ ಏಂಜಲಿಸ್‍ನ ಡಿಸ್ನಿ ರೆಸಾರ್ಟ್‍ಗೆ ಹೋಗಿ ನೇತನ್‍ನ ಹುಟ್ಟುಹಬ್ಬ ಖುಷಿಯಲ್ಲಿ ಕಳೆದರು. ಅಲ್ಲಿಂದ ಹಿಂತಿರುಗಿದಾಗ ಅವಳ ಫೋನಿನ ಆನ್ಸರಿಂಗ್ ಮೆಷೀನ್‍ನಲ್ಲಿ ಇದ್ದ ನಾಲ್ಕು ಸಂದೇಶಗಳಲ್ಲಿ ಒಂದು ಕೆನೆತ್ ನೇತನ್‍ಗೆ ಶುಭಾಶಯ ಕೋರಿದ್ದಾಗಿತ್ತು. ಇನ್ನೊಂದು ಶೆರ್ಲಿಯ ಶುಭಾಶಯ. ಮೂರನೆಯದು ಡೇಟಿಂಗ್ ಸಂಸ್ಥೆಯದಾಗಿತ್ತು. ಸ್ಯಾಮ್ ಎಂಬವನೊಬ್ಬ ಅವಳನ್ನು ಭೇಟಿಯಾಗಲು ಇಚ್ಛಿಸಿರುವುದಾಗಿಯೂ, ಆತ ಫೋನ್ ಮಾಡಬಹುದೆಂದೂ ತಿಳಿಸಿದ್ದರು. ನಾಲ್ಕನೆಯದು ಸ್ಯಾಮ್‍ನದಾಗಿತ್ತು. ಅನಿತಾಳಲ್ಲಿ ಮತ್ತೊಮ್ಮೆ ಅಸ್ಥಿರತೆ ಮನೆ ಮಾಡಿತು. ಈತ ಹೇಗೋ ಏನೋ? ಟಿಪಿಕಲ್ ಅಮೆರಿಕನ್ ಆಗಿದ್ದರೆ? ತನ್ನನ್ನು ಮಗನ ಹೊರತಾಗಿ ಬಯಸುವವನಾಗಿದ್ದರೆ? ಒಳ್ಳೆಯ ಮನಸ್ಸಿನ, ತನ್ನನ್ನೂ ನೇತನ್‍ನನ್ನೂ ಮುಕ್ತವಾಗಿ ಸ್ವೀಕರಿಸುವ ಭಾರತೀಯನೊಬ್ಬ ಸಿಗಲಾರನೆ? ಅಮ್ಮನ ನೆನಪು ಕಾಡಿತು. ಗೊಂದಲದ ಗೋರಿಯೊಳಗೆ ಹುದುಗಿ ಹೋದಳು.

ಮರುದಿನ ಶೆರ್ಲಿ ಬರುವುದನ್ನೇ ಕಾದಳು. ಗೆಳತಿಯೊಂದಿಗೆ ಎಲ್ಲವನ್ನೂ ಹೇಳಿಕೊಂಡು ಒಂದು ನಿಟ್ಟುಸಿರು ಬಿಟ್ಟಾಗ ಶೆರ್ಲಿ ಮುಗುಳ್ನಕ್ಕಳು. "ನೀನು ಸುಮ್ಮನೇ ಹೆದರುತ್ತಿದ್ದೀ. ನೋಂದಾಯಿಸಿಕೊಳ್ಳುವಾಗ ನಿನ್ನ ವಿವರಗಳನ್ನೆಲ್ಲ ಸರಿಯಾಗಿಯೇ ತುಂಬಿದ್ದೀಯಲ್ಲ. ಮಗ ಇರುವುದನ್ನೂ ಅವನೇ ನಿನ್ನ ಜೀವ ಅನ್ನುವುದನ್ನೂ ಬರೆದಿದ್ದೀಯೆಂದು ನೀನೇ ನನಗೆ ಹೇಳಿದ್ದು ಮರೆತಿಯಾ? ಈ ಸಂಸ್ಥೆಯವರು ಅದನ್ನೆಲ್ಲ ಗಮನದಲ್ಲಿ ಇರಿಸಿಕೊಂಡಿರುತ್ತಾರೆ. ಹಾಗೆಲ್ಲ ಸಣ್ಣತನದ ವ್ಯಕ್ತಿಗಳೊಂದಿಗೆ ವ್ಯವಹರಿಸುವುದಿಲ್ಲ. ಸ್ಯಾಮ್ ನಿನ್ನನ್ನು ಭೇಟಿ ಮಾಡಲು ಬಯಸಿದ್ದಾನಾದರೆ, ನೀನು ಅವನನ್ನು ನೋಡುವುದೇ ಒಳಿತು. ಆದರೆ ಮುಕ್ತ ಮನಸ್ಸಿನಿಂದ ಹೋಗು. ಸಂಶಯದ ಮನಸ್ಸಿಗೆ ಎಲ್ಲವೂ ಮಸುಕಾಗಿಯೇ ಕಾಣುತ್ತದೆ. `ಪರ್ಸೆಪ್ಷನ್ ಈಸ್ ಎವೆರಿಥಿಂಗ್' ಗೊತ್ತಿದೆಯಲ್ಲ. ಹಾಗೇನೇ, `ಫಸ್ಟ್ ಇಂಪ್ರೆಶನ್ ಈಸ್ ದಿ ಬೆಸ್ಟ್ ಇಂಪ್ರೆಶನ್' ಎಲ್ಲ ಸರಿ ಹೋಗುತ್ತದೆ, ಧೈರ್ಯವಾಗಿ ಹೋಗು. ಒಂದು ವೀಕೆಂಡ್ ಫಿಕ್ಸ್ ಮಾಡು, ನೇತನ್ ಜೊತೆ ನಾನಿರುತ್ತೇನೆ" ಅಂದಳು.

ಸ್ಯಾಮ್ ಮುಂದಿನ ವಾರಾಂತ್ಯವೇ ಭೇಟಿಯಾಗಲು ಸಾಧ್ಯವೇ ಎಂದು ಕೇಳಿದ್ದನಾದ್ದರಿಂದ ಆತನಿಗೆ ಬೇಗ ಉತ್ತರಿಸಬೇಕಾಗಿತ್ತು. ಅಳೆದೂ ಸುರಿದೂ ಯೋಚಿಸಿ, ಕೊನೆಗೆ ಬುಧವಾರದಂದು ಆತನಿಗೆ ಕರೆಕೊಟ್ಟಳು. ಆತ ಫೋನಿಗೆ ಸಿಗದೆ, ತನ್ನ ಮನೆಗೇ ಆತ ಬರುವಂತೆ ಆಹ್ವಾನಿಸಿ, ತನ್ನ ವಿಳಾಸ ತಿಳಿಸಿ ಸಂದೇಶವಿಟ್ಟಳು. ಮನೆಯಲ್ಲಿ ಶೆರ್ಲಿ ಮತ್ತು ನೇತನ್ ಇರುತ್ತಾರೆ, ಆತನಿಗೆ ನೈಜತೆಯ ಅರಿವಾಗಲಿ ಎಂಬ ಉದ್ದೇಶ ಅವಳದು. ಅಮೆರಿಕನ್ನರ ದೃಷ್ಟಿಯಲ್ಲಿ ಮೊದಲ ಭೇಟಿಯನ್ನು ಮನೆಯಲ್ಲಿ ಏರ್ಪಡಿಸುವುದು ಒಳ್ಳೆಯ ಅಭ್ಯಾಸವಲ್ಲದಿದ್ದರೂ ನೇರ ವ್ಯವಹಾರ ಅವಳ ಕ್ರಮ. ಭಾನುವಾರ ಅವನನ್ನು ಬರಹೇಳಿದ್ದಳು. ಹಿಂದಿನ ಶನಿವಾರ ಬ್ಯೂಟಿ ಪಾರ್ಲರಿಗೆ ಹೋಗಿ ಬಂದಳು. ಇಂದೂ ಕೂಡ ಕೌಂಟರಿನ ಪಕ್ಕದಲ್ಲಿ `ಕ್ರಾಸ್ ಡ್ರೆಸ್ಸರ್'ಗಳಂತೆ ಕಾಣುವ ಅದೇ ಇಬ್ಬರು ಹೆಂಗಸರಿದ್ದು, ಅವರಿಬ್ಬರ ಕಡೆಗೂ ಒಂದೊಂದು ಮುಗುಳ್ನಗು ಬೀರಿ, ಹಲ್ಲೋ ಅಂದಳು. ಶೆರ್ಲಿಯನ್ನು ಆ ರಾತ್ರಿ ತನ್ನ ಮನೆಯಲ್ಲಿ ಇರಲು ಕೇಳಿಕೊಂಡರೂ ಆಕೆ ರಾಬರ್ಟ್ ಜೊತೆಗೆ ಸಿನೆಮಾ ನೋಡಲು ಒಪ್ಪಿಕೊಂಡಿದ್ದಾಗಿ, ಹೊರಟು ಹೋದಳು. ಅಂದಿನ ರಾತ್ರಿ ಎಂದಿಗಿಂತ ದೀರ್ಘವೆನ್ನಿಸಿತು ಅವಳಿಗೆ.

ಮುಂಜಾನೆ ಎದ್ದು ನೇತನ್‍ಗೆ ಸ್ನಾನ ಮಾಡಿಸಿ ಮನೆಗೆ ಗೆಸ್ಟ್ ಬರುತ್ತಾರೆಂದೂ, ಸಭ್ಯ ನಡತೆಯಿಂದ ಇರಬೇಕೆಂದೂ ಮಗುವಿಗೆ ತಿಳಿಹೇಳಿ, ಅವನಿಗೆ ಇಡ್ಲಿ ಮಾಡಿಕೊಟ್ಟಳು. ಶೆರ್ಲಿ ಮತ್ತು ತನಗಾಗಿ ಸಾಂಬಾರ್ ತಯಾರಿಸಿ, ಮಧ್ಯಾಹ್ನದ ಊಟಕ್ಕೂ ತರಕಾರಿ ಹೆಚ್ಚಲು ತೊಡಗಿದಳು. ಒಳಗಿನ ಗೊಂದಲ, ಗಡಿಬಿಡಿ ನಡತೆಯಲ್ಲೂ ಕಾಣುತ್ತಿತ್ತು. ಪಾತ್ರೆಗಳ ಮೇಲೆ ಸಿಡುಕಿದಳು. ಬಾಗಿಲನ್ನು ಅಪ್ಪಳಿಸಿದಳು, ತರಕಾರಿಯನ್ನು ಕೌಂಟರ್ ಮೇಲೆ ಕುಕ್ಕಿದಳು. ನೇತನ್ ಭಯಪಟ್ಟು, "ಯಾಕೆ ಮಮ್ಮೀ, ನಾನು ಮಿಸ್-ಬಿಹೇವ್ ಮಾಡಿದೆನಾ? ನಿನಗೆ ಮೈ ಹುಶಾರಿಲ್ಲವಾ? ಮತ್ಯಾಕೆ ಗೆಸ್ಟ್ ಕರೆದೆ? ಇರಲಿ ಬಿಡು, ಶೆರ್ಲಿ ಬಂದ ಮೇಲೆ ನಾನು ಮತ್ತು ಅವಳು ಲಂಚ್ ರೆಡಿ ಮಾಡ್ತೇವೆ, ನೀನು ಹೋಗು ಮಲಗು, ಆಯ್ತಾ?" ಎಂದೆಲ್ಲ ಮುದ್ದುಗರೆದಾಗ ಅವನನ್ನು ತಬ್ಬಿಕೊಂಡು ಸೋಫಾದಲ್ಲಿ ಕುಳಿತು ಅತ್ತಳು. ನೇತನ್ ಪೆಚ್ಚಾಗಿ ತೆಪ್ಪಗೆ ಕುಳಿತು ಬಿಟ್ಟ. ಅಮ್ಮನ ನೋವು, ತುಮುಲ ಅವನ ಅರ್ಥಕ್ಕೆ ಸಿಗಲಿಲ್ಲ. ಕಟ್ಟಿಕೊಂಡ ದುಗುಡದ ಕಟ್ಟೆ ಹರಿದಾಗ ಅನಿತಾಳಿಗೆ ಹಗುರವೆನಿಸಿ, ಮತ್ತೆ ಅಡುಗೆ ಮನೆಗೆ ನಡೆದು, ಊಟದ ತಯಾರಿ ಮುಗಿಸಿದಳು. ಹೊರಗೆ ಕರೆಗಂಟೆ ಸದ್ದಾಯಿತು.

ಮುಖದಲ್ಲಿ ರಂಗು ಚಿಮ್ಮಿಸುತ್ತಾ ಬಂದ ಶೆರ್ಲಿ, ರಾಬರ್ಟ್ ತನಗೆ ಪ್ರಪೋಸ್ ಮಾಡಿರುವುದಾಗಿ ಹೇಳಿ, "ಅನಿತಾ, ನನಗೆಷ್ಟು ಸಂತೋಷವಾಗಿದೆ ಗೊತ್ತೇ? ಈ ದಿನಕ್ಕಾಗಿಯೇ ಕಾಯುತ್ತಿದ್ದೆ. ಇನ್ನಾರು ತಿಂಗಳಲ್ಲಿ ಮದುವೆ ಆಗುತ್ತೇವೆ. ನೀನೂ ಬೇಗ ಸೆಟ್ ಮಾಡಿಕೋ. ಇಬ್ಬರೂ ಜೊತೆಗೇ ಮದುವೆಯಾಗೋಣ, ರಾಬರ್ಟ್ ಖಂಡಿತಾ ಬೇಡವೆನ್ನಲಾರ, ಅವನು ತುಂಬಾ ಒಳ್ಳೆಯವನು. ನೀನು ಅವನನ್ನು ಮೀಟ್ ಮಾಡಲೇ ಬೇಕು, ಒಮ್ಮೆ ಕರೆತರುತ್ತೇನೆ. ಈಗ ನೀನು ರೆಡಿಯಾಗು, ನಿನ್ನ ಮೇಕಪ್ ಸರಿಯಿಲ್ಲ. ಬಾ ಇಲ್ಲಿ, ನಾನು ಸರಿ ಮಾಡುತ್ತೇನೆ" ಎಂದಳು. ಅವಳ ನಡಿಗೆಯಲ್ಲಿ ಹರ್ಷದ ತಾಳವಿತ್ತು. ಆತಂಕದ ಭಾರದಲ್ಲಿ ನಲುಗುತ್ತಿದ್ದ ಅನಿತಳಿಗೆ ಈ ಸಂತಸ ತುಸು ಚೈತನ್ಯ ನೀಡಿತು. ಅಮ್ಮನ ವಿಚಿತ್ರ ನಡವಳಿಕೆಯಿಂದ ಬೆಚ್ಚಿದ್ದ ನೇತನ್ ಶೆರ್ಲಿಗೆ ಅಂಟಿಕೊಂಡ. ಅವಳನ್ನು ಒಂದು ಅಮೂಲ್ಯ ವಸ್ತುವೆಂಬಂತೆ ಕೈಯಳತೆಯಲ್ಲಿ ಇರುವಂತೆ ನೋಡಿಕೊಂಡ. ಅವನ ಪ್ರೀತಿಗೆ ಕರಗಿದ ಶೆರ್ಲಿ, ಅವನನ್ನು ತಬ್ಬಿಕೊಂಡು, ತಾನು ಮದುವೆಯಾಗಿ ಇದೇ ಊರಲ್ಲಿ ಇರಲಾರದೇ ಹೋದರೆ ಈ ಕಂದನನ್ನು ಬಹಳ ಮಿಸ್ ಮಾಡಿಕೊಳ್ಳುವುದಾಗಿ ಸಂಕಟ ಪಟ್ಟಳು. ರಾಬರ್ಟ್ ಒಂದು ಕೆಲಸದ ಮೇಲಷ್ಟೇ ಈ ಊರಲ್ಲಿ ಇದ್ದಾನೆಂದೂ, ಇಲ್ಲಿನ ಪ್ರಾಜೆಕ್ಟ್ ಮುಗಿದಾಗ ಬೇರೆಡೆಗೆ ಹೋಗಬೇಕಾಗಿದೆಯೆಂದೂ ಅನಿತಳಿಗೆ ತಿಳಿಸಿದಳು. ಗೆಳತಿಯರು ಹರಟುತ್ತಾ ತಿಂಡಿ ಮುಗಿಸಿದರು.

ಒಂಭತ್ತು ಗಂಟೆಗೆ ಸರಿಯಾಗಿ ಬಾಗಿಲು ಟಕಟಕಿಸಿದಾಗ ನಡುಗುವ ಕೈಗಳಿಂದಲೇ ಬಾಗಿಲು ತೆರೆದಳು, ದಂಗಾದಳು. ಪಾರ್ಲರಿನಲ್ಲಿ ಕಂಡಿದ್ದ ಕ್ರಾಸ್ ಡ್ರೆಸ್ಸರ್‌ನಂತಿರುವ ಒಬ್ಬಳ ಜೊತೆಗೆ ಒಬ್ಬ ಭಾರತೀಯ ಯುವಕ. "ಹಲ್ಲೋ, ನನ್ನ ಹೆಸರು ಎಲಿಝಬೆತ್. ನಾವು ಭೇಟಿಯಾಗಿದ್ದೇವಲ್ಲ. ನಮ್ಮ ಅಪಾಯಿಂಟ್‍ಮೆಂಟ್ ಟೈಂ ತಾಳೆಯಾಗಿ ಎರಡು ಬಾರಿ ನಿಮ್ಮನ್ನು ಪಾರ್ಲರಿನಲ್ಲಿ ಕಂಡಿದ್ದೆ, ಅಲ್ಲವೆ? ನನ್ನಕ್ಕ ಮತ್ತು ನಾನು ಕಳೆದ ನಾಲ್ಕು ತಿಂಗಳಿಂದ ಈ ಊರಲ್ಲಿದ್ದೇವೆ. ಅದೇ ಪಾರ್ಲರಿಗೆ ಬರುತ್ತೇವೆ. ಬೈ ದಿ ವೇ, ಇವರು ಸ್ಯಾಮ್, ಸಂಪತ್ ರಾಮ್‌ನಾಥ್. ನಿಮಗಿವರನ್ನು ಪರಿಚಯಿಸುವುದು ನಮ್ಮ `ಪರ್ಸನಲೈಸ್ಡ್ ಡೇಟಿಂಗ್ ಸರ್ವಿಸಸ್' ಸಂಸ್ಥೆಯ ಕರ್ತವ್ಯ, ಅದಕ್ಕಾಗಿ ಬಂದೆ. ನಿಮ್ಮ ಬಗ್ಗೆ ನೀವು ಒದಗಿಸಿದ ಮಾಹಿತಿಯನ್ನು ಇವರಿಗೆ ತಿಳಿಸಿದ್ದೇವೆ. ಇನ್ನು ನಿಮ್ಮಿಬ್ಬರಿಗೆ ಬಿಟ್ಟಿದ್ದು. ಒಂದೇ ಕೋರಿಕೆ ಏನೆಂದರೆ, ನಿಮ್ಮ ನಿರ್ಧಾರವನ್ನು ನಮ್ಮ ಸಂಸ್ಥೆಗೆ ತಿಳಿಸಿ, ಅದರಿಂದ ನಮಗೆ ತುಂಬಾ ಅನುಕೂಲವಿದೆ. ನಾನಿನ್ನು ಬರುತ್ತೇನೆ, ಬೈ" ಎಂದಂದು ಹೊರಟೇ ಬಿಟ್ಟಳು. ಔಪಚಾರಿಕವಾಗಿಯೂ ಮನೆಯೊಳಗೆ ಬಾ ಎಂದು ಕರೆಯಲಾಗದಷ್ಟು ದಂಗಾಗಿದ್ದ ಅನಿತಾ, ಅವಳು ಹೋದತ್ತಲೇ ನೋಡುತ್ತಿದ್ದಳು. "ನಾನು ಒಳಗೆ ಬರಬಹುದೇ?" ಎಂಬ ಮೃದು ಮಾತಿಗೆ ಎಚ್ಚತ್ತು, ಮುಗುಳ್ನಕ್ಕು, ಸರಿದು ನಿಂತು, ಸಂಪತ್ ರಾಮನಾಥನನ್ನು ಮನೆಯೊಳಗೆ ಬರಮಾಡಿಕೊಂಡಳು.
(ಫೆಬ್ರವರಿ-೨೦೦೩)
(ಈ ಕಥೆ ವಿಜಯಕರ್ನಾಟಕ ಸಾಪ್ತಾಹಿಕದಲ್ಲೂ ದಟ್ಸ್ ಕನ್ನಡ ಅಂತರ್ಜಾಲ ದೈನಿಕದಲ್ಲೂ ೨೦೦೩ ಆಗಸ್ಟ್ ತಿಂಗಳಲ್ಲಿ ಪ್ರಕಟವಾಗಿದೆ.)

6 comments:

ಅನಂತ said...

ಕಥೆ ತುಂಬಾ ಚೆನ್ನಾಗಿದೆ ರೀ.. :)

ಸುಪ್ತದೀಪ್ತಿ suptadeepti said...

ಹರಿವ ಲಹರಿಗೆ ಸ್ವಾಗತ ಅನಂತ್. ಕಥೆಯನ್ನು ಮೆಚ್ಚಿಕೊಂಡದ್ದಕ್ಕೆ ಧನ್ಯವಾದಗಳು.

sunaath said...

Cultural conflict ಕತೆಯನ್ನು ತಾಳ್ಮೆಯಿಂದ ಚಿತ್ರಿಸಿದ್ದೀಯಮ್ಮ. ಕತೆ ಸ್ವಾರಸ್ಯಕರವಾಗಿದೆ.

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಕಾಕಾ

ಭಾರ್ಗವಿ said...

ಮುಂದೇನಾಗುತ್ತೆ ಅಂತ ಓದ್ತಾನೇ ಇದ್ದೆ, ಮುಗಿದದ್ದೇ ಗೊತ್ತಾಗಲಿಲ್ಲ. ಚೆನ್ನಾಗಿತ್ತು ಕಥೆ.ಇಲ್ಲಿಯವರು ಅಂದಾಕ್ಷಣ ಬೇರೇನೆ ತರವಾಗಿ ಯೋಚಿಸುವಾಗ, ಶರ್ಲಿ ಮೂಲಕ ಇಲ್ಲೂ ಶರ್ಲಿಯಂಥವರು ಇರ್ತಾರೆ ಅಂತ ಚೆನ್ನಾಗಿ ತಿಳಿಸಿದ್ದೀರಿ ಅಕ್ಕ.ಧನ್ಯವಾದಗಳು.

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಭಾರ್ಗವಿ.
ಹೌದಮ್ಮ, ಶೆರ್ಲಿಯಂಥವರು ಎಲ್ಲ ದೇಶಕಾಲಗಳಲ್ಲೂ ಇರ್ತಾರೆ. ಅಂಥವರಿಂದಲೇ ಮಳೆ-ಬೆಳೆ ಸಕಾಲಕ್ಕೆ ಆಗ್ತಿರೋದು ಅಂತ ನಮ್ಮಜ್ಜಿ ಹೇಳ್ತಿದ್ದರು (ಆಆಆಆ ಕಾಲದಲ್ಲಿಯೇ). ನಿಜ ಅಲ್ಲವಾ?