೧
ಸಿಹಿನಿದ್ದೆಯಿಂದ ಸಟಕ್ಕನೆ ಎಚ್ಚರಾದಾಗ ಎದ್ದು ಕುಳಿತೆ. ಆಂಟಿ, ಅಂಕಲ್ ಇನ್ನೂ ಎದ್ದಿರಲಿಲ್ಲ. ಹಾಗೇ ಮತ್ತೆ ಹಾಸಿಗೆಯ ಮೇಲೆ ಮುದುಡಿಕೊಂಡೆ. ಇವತ್ತು ನಮಗೆ ಕ್ಲಾಸಸ್ ಇಲ್ಲ, ಯೂನಿಫ್ಹಾರ್ಮ್ ಇಲ್ಲ; ಆದ್ರೆ ಸ್ಕೂಲ್ ಇದೆ. `ಏನು ಸ್ಪೆಷಲ್?' ಅಂದ್ರಾ? ಇವತ್ತು, ನಮಗೆಲ್ಲಾ ಸ್ಕೂಲಿಂದ ಬುಕ್ಸ್ ಕೊಡ್ತಾರೆ, ಅದಕ್ಕಾಗಿ ಫ್ಹಂಕ್ಷನ್ ಇದೆ. ಬಣ್ಣ-ಬಣ್ಣದ ಬಟ್ಟೆ ಹಾಕಿ ನಾವೆಲ್ಲರೂ ಚಿಟ್ಟೆಗಳ ಹಾಗೆ ಕಾಣ್ತೀವೀಂತ ನಿನ್ನೆ ಆಂಟಿ ಹೇಳ್ತಿದ್ರು. ತುಂಬಾ ಮಜ. ಈಗ ಕೊಡೋ ಬುಕ್ಸ್‍ಗೇಂತ ನಮ್ಮ ಮಿಸ್ ನಮ್ಹತ್ರ ಎಲ್ಲಾ ಹಂಡ್ರೆಡ್ ರುಪೀಸ್ ತಗೊಂಡಿದಾರೆ. ಖಾಲಿ ಸ್ಕೂಲ್‍ಬ್ಯಾಗ್ ತಗೊಂಡ್ಹೋಗೋದು ಇವತ್ತೊಂದೇ ದಿನಾನಾಂತ! ಹೋಗೋವಾಗ ಅಂಕಲ್ ನನ್ನನ್ನ ಸ್ಕೂಲ್ ಹತ್ರ ಡ್ರಾಪ್ ಮಾಡ್ತಾರೆ. ಬರ್ತಾ ಫ್ಹ್ರೆಂಡ್ಸ್ ಜೊತೆ ವ್ಯಾನ್‍ನಲ್ಲಿ ಬರೋದು, ಚೆನ್ನಾಗಿರತ್ತೆ....ಹ್ಙಾ! ಆಂಟಿ ಎದ್ರೂಂತ ಕಾಣತ್ತೆ. ನಾನೂ ಏಳ್ತೀನಿ! "ಅನಿಲ್..." "ಓ..." ಆಂಟಿ ಕರೀತಿದ್ದಾರೆ ನನ್ನ. ಎಲ್ಲಾ ಕೆಲಸಗಳನ್ನೂ ಬೇಗ ಮುಗಿಸಿ ಹೊರಡ್ಬೇಕು. ಸ್ಕೂಲಿಗೆ ಬೇಗ ಹೋಗ್ಬೇಕು.... "ನಾನು ರೆಡಿ." ಅಂಕಲ್ ಡ್ರೆಸ್ ಮಾಡ್ಕೊಂಡು ಬರೋದ್ರೊಳ್ಗೆ ನಾನು ಸ್ಕೂಟರ್ ಪಕ್ಕ ನಿಂತೆ. ಆಂಟಿಗೆ `ಟಾಟಾ' ಹೇಳಿ ಹೊರಟ್ವಿ. ಇವತ್ತು ಅಂಕಲ್ ಸ್ಪೀಡಾಗಿ ಬಂದ್ರಾ? ಎಷ್ಟು ಬೇಗ ಬಂದ್ಬಿಟ್ವಿ! ಯಾರೂ ಕಾಣಿಸ್ತಾನೇ ಇಲ್ವಲ್ಲಪ್ಪಾ? ಹೋ, ಅಲ್ಲಿ ರಜನಿ ಬಂದ್ಳು. ಆಕಡೆಯಿಂದ ಸಚಿನ್ ಮತ್ತು ಸಿಮಿ ಬರ್ತಿದ್ದಾರೆ. `ಟಾಟಾ, ಅಂಕಲ್. ವ್ಯಾನ್‍ನಲ್ಲೇ ಮನೇಗ್ಹೋಗ್ತೀನಿ. ಟಾಟಾ.' ಎಲ್ಲ ಬಂದೇ ಬಿಟ್ರು. ಎಲ್ಲರೂ ಕಲರ್‌ಫುಲ್ ಡ್ರೆಸಸ್ ಹಾಕಿ ಎಷ್ಟು ಚೆನ್ನಾಗಿ ಕಾಣಿಸ್ತೀವಿ.
ಗುಡ್! ಫಂಕ್ಷನ್ ಶುರುವಾಗೇ ಬಿಡ್ತು. ಇದೇನಪ್ಪಾ ಸ್ಪೀಚ್ ಮಾಡ್ತಿದಾರೆ. ಈ ಹೆಡ್‍ಮಿಸ್ ಮಾತಾಡಕ್ಕೆ ಶುರುಮಾಡಿದ್ರೆ ಕೊನೇನೇ ಇರೋಲ್ಲ. ಬೇಗ ಬುಕ್ಸ್ ಕೊಡ್ಬಾರ್ದಾ?.... ಅಬ್ಬಾ, ಮುಗೀತು. ಕ್ಲಾಸ್‍ವೈಸ್ ಹೆಸ್ರು ಕರೀತಿದ್ದಾರೆ! ಎಲ್‍ಕೇಜೀನಲ್ಲಿ.... ವನ್... ಟೂ... ಥ್ರೀ... ಫೋರ್... ....ಫೊರ್ಟಿನೈನ್ ಕಿಡ್ಸ್! ಇನ್ನು ಯೂಕೇಜೀನಲ್ಲಿ.... ವನ್... ಟೂ... ಥ್ರೀ... ಫೋರ್... ....ಫಿಫ್ಟಿಸೆವೆನ್ ಕಿಡ್ಸ್! ಮತ್ತೀಗ ಫಸ್ಟ್ ಸ್ಟಾಂಡರ್ಡ್! ವನ್... ಟೂ... ಥ್ರೀ... ಫೋರ್... ....ಫಿಫ್ಟಿವನ್. ನಮ್ಮ ಕ್ಲಾಸ್ ಈಗ. ನನ್ನದೇ ಮೊದಲ ಹೆಸರು. "ಅನಿಲ್" ಓಡಿದೆ ಸ್ಟೇಜ್ ಮೇಲೆ. ಬಣ್ಣದ ಪೇಪರಲ್ಲಿ ರ್‍ಯಾಪ್ ಮಾಡಿದ ಪ್ಯಾಕೆಟ್, ಚೆನ್ನಾಗಿದೆ, ಭಾರವೂ ಇದೆ. ಹೆಡ್‍ಮಿಸ್‍ಗೆ ವಿಶ್ ಮಾಡಿ, ಕೆಳಗಿಳಿದು ಬಂದೆ. ಫ್ಹ್ರೆಂಡ್ಸ್ ಜೊತೆ ಮಾತಾಡ್ತಿದ್ದಂತೆ ಎಲ್ಲಾ ಮುಗಿದು, ನ್ಯಾಷನಲ್ ಆಂಥಮ್ ಹೇಳಿದ್ರು. ಅದಾದ ಕೂಡ್ಲೇ ನಾವೆಲ್ಲಾ ಗೇಟ್ ಹತ್ರ ನಿಂತಿದ್ದ ನಮ್ಮ ರೆಗ್ಯುಲರ್ ವ್ಯಾನ್ ಹತ್ತಿದೆವು, ನಾನೇ ಫಸ್ಟ್. ಮದನ್, ಮಿಟ್ಟೂ, ವಿಜಯ್, ವಿನುತ ಎಲ್ರೂ ಬಂದ್ಮೇಲೆ ಅಂತ್ಯಾಕ್ಷರಿ ಹಾಡ್ತಾ ಮನೆಗೆ ಬಂದ್ವಿ.
ಒಳಗೆ ಹೋದ ಕೂಡ್ಲೇ ಆಂಟಿ ಪ್ಯಾಕೆಟ್ ತಗೊಂಡು ಬಿಡಿಸಿ ನೋಡಿದ್ರು. ಒಂದೊಂದೇ ಬುಕ್ ನೋಡಿ, ಪಕ್ಕಕ್ಕಿಡ್ತಾ ಬಂದ್ರು. ಅವರ ಮುಖ ಒಂಥರಾ ಆಯ್ತು. "ಏನಾಯ್ತು ಆಂಟೀ, ಬುಕ್ಸ್ ಎಲ್ಲಾ ಇಲ್ವಾ? ಸರೀ ಇಲ್ವಾ?...." ಕೇಳಿದೆ. "ನೋಡೋಣ ಮರೀ, ನಿನ್ನ ಸಿಲಬಸ್ ಬುಕ್ ತಗೊಂಬಾ" ಅಂದ್ರು. ಓಡಿ ಹೋಗಿ ತಂದಿತ್ತೆ. ಅದನ್ನು ನೋಡ್ತಾ, ಒಂದೊಂದೇ ಬುಕ್ ಎತ್ತಿಟ್ರು, ಮೂರು ಬುಕ್ಸ್ ಬಂದಿರ್ಲಿಲ್ಲ. ಆಂಟಿಗೆ ಹೇಳಿ ವಿಜೂ ಮನೆಗೆ ಓಡಿದೆ. ಅವನಿಗೂ ಬೇರೆ ಮೂರು ಬುಕ್ಸ್ ಬಾಕಿ, ವಿನುತಗೆ ಎಲ್ಲ ಬುಕ್ಸ್ ಸಿಕ್ಕಿತ್ತು. ಅಲ್ಲಿಂದ ವಿಜೂ ಜೊತೆಗೆ ಮದನ್ ಮನೆಗ್ಹೋದೆ. ಅವನಿಗೆ ನಾಲ್ಕು ಬುಕ್ಸ್ ಸಿಕ್ಕಿರ್ಲಿಲ್ಲ. ಮನೆಗೆ ಬಂದು ಆಂಟಿಗೆ ಹಾಗೇ ಹೇಳಿದೆ. ಅವ್ರಿಗೆ ತುಂಬಾ ಸಿಟ್ಟು ಬಂತೂಂತ ಕಾಣತ್ತೆ, ಸ್ವಲ್ಪ ಹೊತ್ತು ಸುಮ್ಮಗಿದ್ದು ನಂತರ ಹೇಳಿದ್ರು, "ಅನಿಲ್, ನಾಳೆ ಸ್ಕೂಲಿಗೆ ನಾನೂ ಬರ್ತೀನಿ. ಯಾಕೆ ಹೀಗ್ ಮಾಡ್ತಾರೇಂತ ಕೇಳ್ಬೇಕು. `ಬುಕ್ಸ್ ಎಲ್ಲ ನಾವೇ ತರಿಸ್ತೀವಿ, ನೀವು ಅಂಗಡಿ ಸುತ್ತೋದು ಬೇಡ' ಅಂದ್ರು; ಈಗ ಹೀಗೆ. ಇವೆಲ್ಲ ಹೊರಗಡೆ ಅಂಗಡಿಗಳಲ್ಲಿ ಸಿಗೋಲ್ಲ, ಏನ್ಮಾಡೋದು? ಹೆಡ್‍ಮಿಸ್‍ನೇ ಕೇಳ್ತೀನಿ ನಾಳೆ...." ಎಂದರು. ಸಂಜೆಯೆಲ್ಲ ಅದೇ ಗುಂಗಿನಲ್ಲಿ ಕಳೆದೆ. ಇನ್ನು ನಾಳೆಯಿಂದ ಮತ್ತೆ ಸ್ಕೂಲು.... ಬ್ಯಾಗ್ ಹೊತ್ತುಕೊಂಡು ಹೋಗ್ಬೇಕು.
************************ ************************
೨
ಇವತ್ತೂ ಬೇಗನೇ ಎಚ್ಚರವಾಯ್ತು. ಆಂಟೀನೂ ಸ್ಕೂಲಿಗೆ ಬರ್ತಾರಲ್ಲ; ಸೋ, ಸ್ಕೂಟರಲ್ಲೇ ಹೋಗೋದು, ಮಜಾ.... ಆಂಟಿ ಹೇಳಿದ್ಹಾಗೆ, ನಾನು ಕ್ಲಾಸಿಗೆ ಹೋದೆ. ಅವ್ರು ಹೆಡ್‍ಮಿಸ್ ಜೊತೆ ಮಾತಾಡೋಕೆ ಹೋದ್ರು. ನಮ್ಮ ಕ್ಲಾಸ್‍ಮಿಸ್ ಬಂದ ಕೂಡ್ಲೇ ಆಂಟೀನೂ ಬಂದ್ರು. ಕೇಳೇ ಬಿಟ್ರು ಮಿಸ್‍ನ, "ಗುಡ್‍ಮಾರ್ನಿಂಗ್ ಮಿಸ್. ಒಂದ್ವಿಷಯ ಮಾತಾಡ್ಬೇಕಿತ್ತು. ನೀವು ಸ್ಟೂಡೆಂಟ್ಸ್ ಹತ್ರ ಹಂಡ್ರೆಡ್ ರುಪೀಸ್ ಕಲೆಕ್ಟ್ ಮಾಡಿ, ಈಗ ಕೆಲವೇ ಬುಕ್ಸ್ ಕೊಟ್ಟಿದ್ದೀರ. ಉಳಿದಿದ್ದು ಅಂಗಡೀಲೂ ಸಿಗೋಲ್ಲ. ನಾವೀಗ ಏನ್ ಮಾಡೋದು? ನೀವೇ ತರ್‍ಸಿ ಕೊಡ್ತೀರೋ, ಹೇಗೆ?" ಅಂದರು. ನಮ್ಮ ಮಿಸ್ ನನ್ನನ್ನ ಒಂಥರಾ ನೋಡಿ, ಆಂಟಿ ಜೊತೆ, "ಸಾರಿ ಮೇಡಮ್. ಒಂದು ಸೆಟ್ ಬುಕ್ಸ್ ಮಾತ್ರ ಬಂದಿರೋದು, ಉಳಿದವು ಈ ವೀಕ್ ಅಥ್ವಾ ನೆಕ್ಸ್ಟ್ ವೀಕ್ ಬರತ್ವೆ. ಆವಾಗ, ಕ್ಲಾಸಲ್ಲೇ ಕೊಡ್ತೀವಿ. ನೀವೇನೂ ವರಿ ಮಾಡ್ಕೋಬೇಡಿ. ಮತ್ತೆ... ನಾವು ಕಲೆಕ್ಟ್ ಮಾಡಿರೋ ಅಮೌಂಟ್ ಬಗ್ಗೆ... ನಾವು ಈ ಕ್ಲಾಸ್‍ಗೆ, ಅಂದ್ರೆ ಎಲ್ಲ ಸೆಕೆಂಡ್ ಸ್ಟಾಂಡರ್ಡ್ ಮಕ್ಕಳಿಗೆ ಸೆವೆಂಟಿ-ಫೈವ್ ರುಪೀಸ್ ಮಾತ್ರಾ ಹೇಳಿದ್ದು, ನೀವು ಹಂಡ್ರೆಡ್ ಅಂತಿದ್ದೀರ, ಇದರಲ್ಲಿ ನಿಮ್ಮ ಹುಡುಗನೇ ಏನೋ..." ಮಿಸ್‍ನ ಮಾತಿನ್ನೂ ಮುಗಿದಿರಲಿಲ್ಲ, ಆಂಟಿ ಎಲ್ಲರೆದುರಿಗೆ ನನ್ನನ್ನು ಎಳೆದು, ಕಿವಿಹಿಂಡಿ ಕೆನ್ನೆಗೊಂದು ಬಾರಿಸಿದರು. ನೋವು, ಅವಮಾನಗಳಿಂದ ಅತ್ತುಬಿಟ್ಟೆ. ಆಂಟಿಗೆ ಸಿಟ್ಟು ಏರಿತ್ತು, "ಡರ್ಟಿ ಬಾಯ್, ನಮ್ಗೇ ಮೋಸ ಮಾಡ್ತೀಯಾ? ಯಾವಾಗಿಂದ ಕಲ್ತೆ ಈ ರೀತಿ ಸುಳ್ಳು ಹೇಳೋದಿಕ್ಕೆ? ಆ ಟ್ವೆಂಟಿ-ಫೈವ್ ಏನ್ ಮಾಡ್ದೆ ಹೇಳು! ಇರು ನಿಂಗೆ, ಅಂಕಲ್ ಕೈಲೂ ಶಾಸ್ತಿ ಮಾಡಿಸ್ತೀನಿ!" ಸಿಟ್ಟಿನಲ್ಲೇ ಎದ್ದು ಹೊರಟೇ ಹೋದ್ರು. ನಾನು ಅಳುತ್ತಲೇ ಇದ್ದೆ. ಅವರು ಬೇರೆ ಯಾರನ್ನಾದ್ರೂ ಕೇಳಿದ್ದರೆ ನಿಜ ಗೊತ್ತಾಗ್ತಿತ್ತು, ವಿಜೂ ಮತ್ತು ಮದನ್ ನನ್ನೇ ನೋಡ್ತಾ ಇದ್ದರು. ಮಿಸ್ ಎದುರು ಮಾತಾಡಲು ಯಾರಿಗೂ ಧೈರ್ಯ ಇಲ್ಲ, ನಂಗೊತ್ತು.`ಆಂಟಿ ಬೇರೆ ಯಾರನ್ನಾದರೂ ಕೇಳ್ಬೇಕಿತ್ತು, ಇನ್ನೀಗ ಅಂಕಲ್ ಕೈಯಿಂದಲೂ ಹೊಡೆಸಿಕೊಳ್ಬೇಕಲ್ಲ' ಅಂತ ಅಂದ್ಕೊಳ್ತಿರುವಾಗ್ಲೇ ಸ್ಕೇಲಿನೇಟು ತಲೆಗೆ ಬಿತ್ತು; ತತ್ತರಿಸಿದೆ. ಮಿಸ್ ಕಣ್ಣು ಕೆಂಪು ಮಾಡ್ಕೊಂಡು ನಿಂತಿದ್ರು. ನನ್ನನ್ನು ಕ್ಲಾಸಿನೆದುರಿಗೆ ಎಳೆದು ಹೇಳಿದ್ರು, "ಇದು ವಾರ್ನಿಂಗ್, ಇನ್ನು ಯಾರಾದ್ರೂ ಮನೇಗ್ ಹೋಗಿ ನಾನು ಹಂಡ್ರೆಡ್ ಕಲೆಕ್ಟ್ ಮಾಡಿರೋದು ಸರಿಯಲ್ಲ, ನಿಜವಾಗಿ ಸೆವೆಂಟಿ-ಫೈವ್ ಮಾತ್ರಾ ಅಂತ ಹೇಳಿದ್ರೆ, ನೀವ್ಯಾರೂ ಮುಂದಿನ್ ಕ್ಲಾಸಿಗೆ ಹೋಗೋಲ್ಲ, ನೋಡ್ತಿರಿ. ಅನಿಲ್, ಯೂ ಬಿ ಕೇರ್‌ಫುಲ್. ಮತ್ತೆ ನಿನ್ನ ಆಂಟಿ ಹತ್ರ ನಾನೇ ಹಂಡ್ರೆಡ್ಡೂ ತಗೊಂಡೆ ಅಂತೇನಾದ್ರೂ ಹೇಳಿದ್ರೆ, ನಿನ್ನ ಈ ವರ್ಷ ಖಂಡಿತಾ ಪಾಸ್ ಮಾಡಲ್ಲ, ಈ ಕ್ಲಾಸಲ್ಲೇ ಇರಬೇಕಾಗತ್ತೆ, ನೋಡ್ತಿರು!" ಅಂದರು.
************************ ************************
೩
ಇಡೀ ದಿನ ಹೇಗೋ ಕಳೀತು. ನಾನು ಅಳುತ್ತಲೇ ಇದ್ದೆ, ಉಳಿದವರು ಸುಮ್ಮನಿದ್ದರು. ಲಂಚ್ ಟೈಮ್‍ನಲ್ಲಿ ವಿಜು ಮತ್ತು ಮದನ್ ನನ್ನ ಜೊತೆಗೇ ಇದ್ದು, ಏನೇನೋ ಸಮಾಧಾನ ಹೇಳ್ತಿದ್ರು. ಸಂಜೆ ಸ್ಕೂಲ್ ವ್ಯಾನ್‍ನಲ್ಲಿ ಮನೆಗೆ ಹೊರಟಾಗಲೂ ಅವರೆಲ್ಲ ಸೇರಿ, "ಅನಿಲ್, ನಿನ್ನ ಆಂಟಿ ಇನ್ನೂ ನಿಂಗೆ ಬೈದ್ರೆ ನಾವೆಲ್ಲ ಬಂದು ಆ ಮಿಸ್ ಮಾಡಿದ್ ಮೋಸಾನ ಹೇಳ್ತೀವಿ..." ಅಂದ್ರು. ನನಗೂ ಸ್ವಲ್ಪ ಧೈರ್ಯ ಬಂತು ಅಂತ ಅನ್ನಿಸಿದರೂ ಮನೆಯ ಮೆಟ್ಟಲು ಹತ್ತಿದಾಗ ಎದೆಯೊಳಗೆ ಏನೇನೋ ಆಗ್ತಿತ್ತು. ಅವರೆಲ್ಲರೂ ನನ್ನ ಜೊತೆಗೇ ಬಂದಿದ್ದರೆ ಚೆನ್ನಾಗಿತ್ತು ಎಂದೂ ಅನ್ನಿಸ್ತು.ಬೆಲ್ ಮಾಡಿದಾಗ ಬಾಗಿಲು ತೆರೆದ ಆಂಟಿಯ ಕಣ್ಣುಗಳು ಕೆಂಪಾಗಿದ್ದವು, ತುಂಬಾ ಅತ್ತಿರಬೇಕು. ನಾನು ಒಳಗೆ ಬಂದ ಕೂಡಲೇ ಬಾಗಿಲು ಹಾಕಿಕೊಂಡ ಆಂಟಿ, ನನ್ನ ರಟ್ಟೆ ಹಿಡಿದು, ಕೆನ್ನೆಗೆ ಬಾರಿಸಿ, "ಕೆಟ್ಟ ಹುಡುಗ, ನಮ್ಮ ಪ್ರೀತಿಗೆ ದ್ರೋಹ ಮಾಡ್ತಿದೀಯ. ಈಗಿನ್ನೂ ಏಳು ವರ್ಷ. ಈ ಥರ ಕಳ್ಳಬುದ್ಧಿ ಎಲ್ಲಿ ಕಲ್ತೆ? ದೇವರು ನಂಗಂತೂ ಕೊಟ್ಟಿಲ್ಲ. ಅಕ್ಕ-ಭಾವ ಎದ್ಕೊಂಡು ಹೋದ್ಹಾಗೆ ಹೋದ್ಮೇಲೆ ನಿನ್ನನ್ನ ನಮ್ಮಗೂಂತ ಸಾಕಿದ್ದಕ್ಕೆ ಒಳ್ಳೇ ಪ್ರತಿಫಲ ಕೊಟ್ಟೆ, ಕತ್ತೆ. ನಿಂಗೇನ್ ಕಡ್ಮೆ ಮಾಡಿದ್ವಿ ಹೇಳು. ನಮ್ಮ ಪ್ರೀತೀಲಿ ನಿಂಗೇನ್ ಕೊರತೆ ಅನ್ಸಿತ್ತು, ಬೊಗಳೋ ನಾಯಿ...." ಏನೇನೋ ಹೇಳುತ್ತಾ ಮೈ-ಮುಖ ನೋಡ್ದೆ ಬಾರಿಸ್ತಿದ್ರು. ಎಲ್ಲೋ ಒಮ್ಮೆ ಅವರು ಸುಮ್ಮನಾದಾಗ, ನಾನು ಬಿಕ್ಕಳಿಸುತ್ತಾ ಅಂದೆ, "ಆಂಟೀ, ಪ್ಲೀ...ಸ್, ನಾ..ನ್ ಹೇಳೋ..ದನ್ನ ಕೇ..ಳಿ. ನಾ..ನ್ ಸು..ಳ್ಳು ಹೇಳ್..ತಿಲ್ಲ, ಮೋಸ ಮಾ..ಡಿಲ್ಲ. ಆ ಮಿಸ್...ಸ್ ಎಲ್ಲಾ...ರ್ ಹತ್ರಾ...ನೂ ಹ..ಹಂಡ್ರೆಡ್ ರುಪೀ...ಸೇ ತಗೊಂ..ಡಿದಾ..ರೆ. ನಿಂ..ಹತ್ರ ಹೇ...ಹೇಳಿದ್ರೆ ಈ ವರ್ಷ ನನ್ನ ಫೈಲ್ ಮಾಡ್...ತಾ..ರಂತೆ. ಆ..ಆದ್ರೂ ಪ..ಪರ್ವಾಗಿಲ್ಲ, ಆಂಟಿ, ನಾ..ನ್ ಸುಳ್ಳು ಹೇ..ಳಿಲ್ಲ.... ಸು..ಳ್ಳು ಹೇಳಲ್ಲ..." ದುಃಖ ತಡೆಯಲಾರದೆ ಸೋಫಾಕ್ಕೆ ಮುಖವೊತ್ತಿ ಅಳತೊಡಗಿದೆ. ಸ್ವಲ್ಪ ಹೊತ್ತಿನ ಮೇಲೆ, ಆಂಟಿ ನನ್ನ ತಲೆ ಸವರಿ, "ಹೋಗು, ಕೈಕಾಲು-ಮುಖ ತೊಳ್ಕೋ, ನಾನು ವಿಜೂ ಮನೆಗೆ ಹೋಗ್‍ಬರ್ತೀನಿ" ಅಂತ ಎದ್ದರು. ಏಳುವ ಮನಸ್ಸಿಲ್ಲದೆ ಹಾಗೇ ಅಳುತ್ತಾ, ಬಿಕ್ಕಳಿಸುತ್ತಾ ಎಷ್ಟು ಹೊತ್ತು ಕುಳಿತಿದ್ದೆನೋ ತಿಳಿಯಲಿಲ್ಲ.
ಆಂಟಿ ಬಂದವರೇ ನನ್ನನ್ನು ತಬ್ಬಿ ಹಿಡಿದರು. ನಾನಿನ್ನೂ ಬಿಕ್ಕಳಿಸುತ್ತಿದ್ದೆ. "ಅನಿಲ್, ನನ್ನ ಕಂದಾ, ಸಾರಿ ಕಣೋ. ನನ್ನ ಕ್ಷಮಿಸ್ತೀಯಾ? ನಿಂಗೆ ಸುಮ್‍ಸುಮ್ನೆ ಹೊಡ್ದದ್ದಾಯ್ತು ಮರೀ; ಎಲ್ ನೋಯ್ತಿದೆಯಪ್ಪ? ವಿನುತಾನೂ ಮಮತಾನೂ ನನ್ನೇ ಬೈಯ್ದ್ರು. ಅವ್ರನ್ನ ಒಂದ್ ಮಾತೂ ಕೇಳ್ದೆ ದುಡುಕ್ಬಿಟ್ಟೆ. ಕ್ಷಮಿಸು ಚಿನ್ನೂ. ನೀನು ತಪ್ಪು ಮಾಡಿಲ್ಲ, ಸುಳ್ಳು ಹೇಳಿಲ್ಲ, ನಾನೇ ಎಡವಿದೆ. ನಾಳೆ ನಾವು ಮೂವರು ಅಮ್ಮಂದಿರೂ ಸ್ಕೂಲಿಗೆ ಬಂದು ನಿಮ್ಮ ಮಿಸ್ ಮೇಲೆ ಕಂಪ್ಲೇಂಟ್ ಕೊಡ್ತೀವಿ. ಅವರು ಮಾಡಿರೋ ತಪ್ಪಿಗೆ ಅವ್ರನ್ನು ಪೊಲೀಸ್‍ಗೆ ಹ್ಯಾಂಡ್‍ಓವರ್ ಮಾಡ್ಸೋಣ." ಅಂದರು.
"ಬೇಡ ಆಂಟಿ, ಪೊಲೀಸ್ ಬೇಡ. ಹೆಡ್‍ಮಿಸ್ ಹತ್ರ ಹೇಳಿದ್ರೆ ಸಾಕು. ನಮ್ಮ ಮಿಸ್‍ನ ಜೈಲಿಗೆ ಹಾಕೋದು ಬೇಡ ಆಂಟಿ..." ಅಂದಾಗ ಅವ್ರು ಮತ್ತೆ ನನ್ನ ತಬ್ಬಿಕೊಂಡು, "ಇಂಥಾ ಮುದ್ದು ಮರೀ ಮನಸ್ಸನ್ನ ನೋಯ್ಸಿದ್ನಲ್ಲ, ಎಂಥಾ ತಾಯಿ ನಾನು. ಏಳಪ್ಪ, ನಿನ್ನ ಅಂಕಲ್ ಬರೋ ಹೊತ್ತಾಯ್ತು. ಒಂದ್ಲೋಟ ಹಾಲು ಕುಡ್ದು ರೆಡಿಯಾಗು, ಹೊರಗೆ ಹೋಗೋಣ. ನಿಂಗೆ ಇಷ್ಟವಾದ ತಿಂಡಿ ಕೊಡಿಸ್ತೀನಿ, ನಡೀ." ಅಂದರು. "ಆಂಟಿ ಎಷ್ಟು ಒಳ್ಳೆಯವ್ರು. ನಮ್ಮ ಮಿಸ್‍ಗೆ ಸರಿಯಾದ ಶಾಸ್ತಿನೇ ಆಗತ್ತೆ. ಆದ್ರೆ, ಆಮೇಲೆ ನಮ್ಮ ಕ್ಲಾಸಿಗೆ ಯಾವ ಮಿಸ್ ಬರ್ತಾರೆ?.... ಅವ್ರೇ ಮತ್ತೆ ಬಂದ್ರೆ?...." ಮುಂದಿನ ಯೋಚನೆಗಳ ದಾರಿಗೆ ಅಂಕಲ್‍ನ ಸ್ಕೂಟರ್ ಶಬ್ದ ಅಡ್ಡ ಬಂತು. ಮುಖ ತೊಳೆಯಲು ಬಾತ್‍ರೂಮಿಗೆ ಓಡಿದೆ.
************ ************ ************ ************
೧೯೮೫ರ ಜೂನ್‍ನಲ್ಲಿ ಕರ್ನಾಟಕದ ಶಾಲೆಯೊಂದರಲ್ಲಿ ನಡೆದ ಘಟನೆಯ ಆಧಾರದ ಮೇಲೆ
ಹತ್ತೊಂಭತ್ತರ ಹದಿಹೃದಯ ಹೆಣೆದದ್ದು
ದಟ್ಸ್'ಕನ್ನಡ.ಕಾಂನಲ್ಲಿ ೨೦೦೨ರ ನವೆಂಬರ್'ನಲ್ಲಿ ಪ್ರಕಟವಾಗಿದೆ.
ದಟ್ಸ್'ಕನ್ನಡ.ಕಾಂನಲ್ಲಿ ೨೦೦೨ರ ನವೆಂಬರ್'ನಲ್ಲಿ ಪ್ರಕಟವಾಗಿದೆ.
************************ *************************
(ಡಿಸೆಂಬರ್-೧೯೮೫)
5 comments:
chennagide
It is realistic.
ಗೌತಮ್ ಮತ್ತು ಕಾಕಾ, ಧನ್ಯವಾದಗಳು.
ಹದಿವಯಸ್ಸಿನಲ್ಲಿ ಬರೆದ ಕಥೆ,ಪೋಷಕರಿಗೆ ಒಳ್ಳೆ ಪಾಠವಿದೆ .ಕಥಾವಸ್ತು ಇಷ್ಟವಾಯ್ತು.
ಧನ್ಯವಾದಗಳು ಭಾರ್ಗವಿ.
ಪೋಷಕರಿಗೆ ಪಾಠ ಎಲ್ಲ ಕಡೆ ಇರುತ್ತದೆ, ಕಲಿಯುವ ಮನಸ್ಸಿದ್ದವರಿಗೆ ಮಾತ್ರ, ಅಲ್ಲವೆ? ಕಥೆ ಇಷ್ಟವಾಗಿದ್ದಕ್ಕೆ ಮತ್ತೆ ಥ್ಯಾಂಕ್ಸ್.
Post a Comment