ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 13 December, 2009

ನಮ್ಮ-ನಿಮ್ಮಲ್ಲಿ...

ಇಂದು ನಮ್ಮೂರಲ್ಲಿ ಸುಡು ಸುಡು ಬಿಸಿಲು
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಇಂದು ನಮ್ಮೂರಲ್ಲಿ ನವೆಯುವ ಸೆಖೆ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಇಂದು ನಮ್ಮೂರಲ್ಲಿ ಬವಳಿಸುವ ಬೆವರು
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.

ಇಂದು ನಮ್ಮೂರಲ್ಲಿ ಮೋಡ ಮುಸುಕು
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಇಂದು ನಮ್ಮೂರಲ್ಲಿ ಬೆದರಿಸುವ ಮಿಂಚು-ಸಿಡಿಲು
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಇಂದು ನಮ್ಮೂರಲ್ಲಿ ಕರಗಿಸುವ ಮಳೆ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.

ಇಂದು ನಮ್ಮೂರಲ್ಲಿ ಕೊರೆಯುವ ಕುಳಿರ್ಗಾಳಿ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಇಂದು ನಮ್ಮೂರಲ್ಲಿ ದಿಕ್ಕೆಡಿಸುವ ಚಂಡಮಾರುತ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.

ಇಂದು ನಮ್ಮೂರಲ್ಲಿ ನಡುಗಿಸುವ ಛಳಿ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಇಂದು ನಮ್ಮೂರಲ್ಲಿ ಸುರಿವ ಬಿಳಿ ಹಿಮ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.

ಇಷ್ಟಾದರೂ ನನ್ನೊಳಗೆ ಬದುಕುವ ಬಯಕೆ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಬಾಳುವ ಕನಸು, ಕಲಿಕೆಯ ದಾಹ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.

ಇಷ್ಟಾದರೂ ನನ್ನೊಳಗೆ ಸೋಜಿಗದ ಅಚ್ಚರಿ
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
ಬಾಚಿಕೊಳ್ಳುವ ಬೆರಗು, ತೆರೆದುಕೊಳ್ಳುವ ನಗು
ನಿಮ್ಮಲ್ಲಿ ಹೇಗಿದೆಯೋ ಗೊತ್ತಿಲ್ಲ.
(೦೨/೦೮-ಎಪ್ರಿಲ್-೨೦೦೮)

7 comments:

ಆನಂದ said...

ನಮ್ಮಲ್ಲೂ ಇನ್ನೂ ಸ್ವಲ್ಪ ಹಾಗೇ ಇದೆ :)
ಕವನ ಚೆನ್ನಾಗಿದೆ.

ಸೀತಾರಾಮ. ಕೆ. said...

ನಮ್ಮಲ್ಲೂ ಹಾಗೇ ಇದೆ

sunaath said...

ನಿಮ್ಮೂರಿನಲಿ ಸುರಿದ ಕವನಗಳ ಸುರಿಮಳೆಯು,
ಹರಿದು ಬಂದಿದೆ ಲಹರಿ ಲಹರಿಯಾಗಿ.
ನಮ್ಮೂರ ತೃಷಿತರು ಕೂಡಿಟ್ಟು ಕುಡಿದಿಹರು
ಕಾವ್ಯಗಂಗೆಯ ಬೊಗಸೆ ಬೊಗಸೆಯಾಗಿ.

ಸುಶ್ರುತ ದೊಡ್ಡೇರಿ said...

ಇಲ್ಲೂ ಅಷ್ಟೇ!

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯೆಗಳಿಗೆ ವಂದನೆಗಳು.

ಆನಂದ,
ಸ್ವಾಗತ. ಯಾವೂರು ನಿಮ್ಮೂರು?
ಕವನ ಮೆಚ್ಚುಗೆಯಾಗಿದ್ದು ಸಂತೋಷ.

ಸೀತಾರಾಮ್,
ಈ ಛಳಿಗಾಲದಲ್ಲಿ ಯಾಕೋ ಸರಿಯಾಗಿ ಇನ್ನೂ ಛಳಿಯೇ ಬಿದ್ದಿಲ್ಲ, ಮಾವು, ಗೇರು, ಹಲಸು ಹೂ ಬಿಟ್ಟಿಲ್ಲ. ಎಲ್ಲೆಡೆಯೂ ಹಾಗೇ ಇದೆ, ಅಲ್ಲವೆ? ಧನ್ಯವಾದಗಳು.

ಕಾಕಾ,
ನಿಮ್ಮ ಪ್ರೀತಿ-ಪ್ರೋತ್ಸಾಹಗಳು ಸದಾ ಹೀಗೇ ಭರಪೂರ ಬರುತ್ತಿದ್ದರೆ ಅದರಲ್ಲಿ ತೋಯುವ ಸಂತೋಷ ನನ್ನದು. ನಮನಗಳು ನಿಮಗೆ.

ಸುಶ್,
ಎಲ್ಲೋಗಿದ್ಯೋ ಇಷ್ಟ್ ದಿನ? ಊರಿನ ತೋಟದೊಳಗಿನ ತಂಪಿನಲ್ಲಿದ್ಯಾ ಹೇಗೆ? ಈಗ ಬೆಂಗಳೂರಿಗೆ ಬಂದು- "ಇಲ್ಲೂ ಅಷ್ಟೇ" ಅಂದ್ಯಾ?
ನಾನೂ ನೋಡ್ಕೊಂಡ್ ಬಂದೆ. ಬರ್ತಿರು ಮಾರಾಯ.

ಸಿಂಧು Sindhu said...

ಜ್ಯೋತಿಅಕ್ಕ,

ಇಲ್ಲು ಹಾಗೇ ಇದೆ.
ಕವಿತೆ ತುಂಬ ಚೆನಾಗಿದೆ.


ಪ್ರೀತಿಯಿಂದ
ಸಿಂಧು

ಶ್ರೀನಿಧಿ.ಡಿ.ಎಸ್ said...

illond swalpa bere tara ide:)

nice poem.