ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday, 18 September 2009

ಕೂಸು ಮನ

ಅರುಣ ರವಿ ರಾಗಕ್ಕೆ ಹೊಳೆದು ನರ್ತಿಸುತಿದ್ದ
ಹುಲ್ಲಂಚ ಮಿಂಚನ್ನು ತೊರೆದೆವೇಕೆ?
ಪುಟಿ-ಪುಟಿದು ಏಳುತ್ತ ಆಗಸಕೆ ಹಾರುತ್ತ
ಅರಳಿ ಬೆಳೆಯುವ ಚಿಗುರ ಮರೆತೆವೇಕೆ?

ಹಾಲುಗಲ್ಲದ ಮೇಲೆ ಇಟ್ಟ ಬೆಟ್ಟನು ಸರಿಸಿ
ದಿಟ್ಟಿ ಸೋಕದ ಬೊಟ್ಟನಿಟ್ಟೆವೇಕೆ?
ಕೌತುಕವ ಸೋಜಿಗವ ಕಣ್ಣಂಚಿನಲೆ ಸವರಿ
ತುರಗ ಪಟ್ಟಿಯನಡ್ಡ ಕೊಟ್ಟೆವೇಕೆ?

ಬಿಂಬವಿಲ್ಲದ ಗುಡಿಗೆ ಮೂರ್ತತೆಯ ಸ್ವಾಗತಿಸಿ
ಅಷ್ಟಬಂಧಗಳಿಂದ ಬಿಗಿದೆವೇಕೆ?
ಸ್ತಂಭಗಳ ಅರಮನೆಯ ತುಂಬ ತುಂಬಿದೆ ಸರಕು
ಬಹಿರಂತರಂಗದಲಿ ಕೋಟೆಯೇಕೆ?

ಅನುದಿನವು ಸುಪ್ರಭೆಯ ಹೀರುವೆಲೆ ಹಸುರಂತೆ
ಕೂಸು-ಮನವಿರಲೆಮಗೆ ಮುಪ್ಪದೇಕೆ?
(೨೪-ಆಗಸ್ಟ್-೨೦೦೪)

7 comments:

ಸಂಕ್ಷಿಪ್ತ said...

ಬಹಳ ಚೆನ್ನಾಗಿದೆ. ಎಲ್ಲಾ ಸಾಲುಗಳೂ ಸಕ್ಕತ್ ಹಿಡಿಸಿತು, ಆದರೆ ಕೊನೆಯದು ಮಾತ್ರ ಸ್ವಲ್ಪ ಪ್ರಶ್ನಾರ್ಥಕವಾಗಿತ್ತು :). "ಅನುದಿನವು ... ಕೂಸು-ಮನವಿರಲೆಮಗೆ .." -- ನಿಜಕ್ಕೂ?!

sunaath said...

ಜ್ಯೋತಿ,
ಸುಂದರವಾದ ಭಾವ; ಸುಂದರವಾದ ಕವನ.

ಬದುಕಿನ ಬೆರಗನ್ನು ಅನುಭವಿಸಲು ಕೂಸುಮನ ಬೇಕು. ಆದರೆ ಬಾಳಗುರಿಯನ್ನು ತಲುಪಲು ಬಹುಶಃ ತುರಗಪಟ್ಟಿ ಬೇಕೇನೊ?

ಸುಪ್ತದೀಪ್ತಿ suptadeepti said...

ಸಂಕ್ಷಿಪ್ತ,
ಈ ಅಕ್ಷರಲೋಕಕ್ಕೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನನ್ನ ಮಟ್ಟಿಗೆ ಈ ಮಾತುಗಳು ಸತ್ಯ. ಪ್ರಪಂಚದ ಸೌಂದರ್ಯವನ್ನು ಆಸ್ವಾದಿಸಲು ಕೌತುಕ ನೋಡುವ, ಅದಕ್ಕೆ ವಿಸ್ಮಯಗೊಳುವ ಮಗುವಿನಂಥ ಮನಸ್ಸು ನಮಗಿರಬೇಕು. ಅಂಥವರಿಗೆ "ಮುಪ್ಪು" ಆವರಿಸದು ಅನ್ನುವುದಷ್ಟೇ ನನ್ನ ನಿಲುವು. ಮುಪ್ಪು= ಬರೀ ದೈಹಿಕ ವಯಸ್ಸಾಗುವಿಕೆಯಲ್ಲ. ಮನಸ್ಸಿನ ಪರಿಪಕ್ವತೆಯೂ ಅಲ್ಲ. ನನ್ನ ಮಟ್ಟಿಗೆ ಈ ಮುಪ್ಪು ಮನಸ್ಸಿನ ಜಡತ್ವ.
ಪರಿಪಕ್ವವಾಗಿದ್ದುಕೊಂಡೂ ಕೌತುಕ ಸೋಜಿಗಪಡುವಂಥ, ಕಣ್ಣ ಮುಂದೆ ಹಾರಾಡುವ ಚಿಟ್ಟೆಯೊಂದನ್ನು ಗಮನಿಸಿ ಮೆಚ್ಚುವಂಥ ಮನ್ನಸ್ಸೊಂದು ನಮ್ಮೊಳಗೇ ಇದ್ದದ್ದೇ ಆದಲ್ಲಿ, ಯಾವ ವಯಸ್ಸಿನಲ್ಲೂ ನಾವು ಕ್ರಿಯಾಶೀಲರಾಗಿರಬಹುದು- ಅಂತ; ಅಷ್ಟೇ.

ಸುನಾಥ್ ಕಾಕಾ,
ನಿಮ್ಮ ಅಭಿಮಾನಕ್ಕೂ ಧನ್ಯವಾದಗಳು.
ಬದುಕಿನ ಬೆರಗನ್ನು ಅನುಭವಿಸುತ್ತಲೇ ಬಾಳಗುರಿ ತಲುಪಲು ಸಾಧ್ಯವಿಲ್ಲವೆ? ಕುದುರೆಓಟದಲ್ಲಿ ಮೊದಲಿಗರಾಗಿಯೇ ಓಡಿ ಗೆಲ್ಲಬೇಕೆಂಬ ಛಲ ಬೇಕಿಲ್ಲ, ಅಲ್ವಾ? ಅತ್ತಿತ್ತ ಸುತ್ತಲ ಮರ-ಗಿಡ, ಹಣ್ಣು-ಹಕ್ಕಿ, ಹೂವು-ಚಿಟ್ಟೆಗಳನ್ನು ನೋಡಿ ಅವುಗಳ ಚೆಲುವನ್ನು ಅನುಭವಿಸಿ ಸಾಗುತ್ತಿರೋಣ. "Pleasure of journey is in journey itself..." ಮಾತನ್ನು ನಂಬಿದವಳು ನಾನು. ಕಣ್ಣುಗಳಿಗೆ ತುರಗಪಟ್ಟಿ ಕಟ್ಟಿ "ಸೊಂಯ್ಕ್ ಹೋಗಿ ಸೊಂಯ್ಕ್ ಬರುವ" ಜಾಯಮಾನ ನನಗೆ ಕಷ್ಟ (ಅದಕ್ಕೇ, ಎಲ್ಲಿಗಾದರೂ ಹೋಗಬೇಕಾದಲ್ಲಿ ನಾನು ಸ್ವಲ್ಪ ತಡವಾಗಿಯೇ ತಲುಪೋದು!). ಹಾಗಾಗಿ, ದಾರಿಯಲ್ಲಿ ಸಾಗುವಾಗ, ನನ್ನ ಸಹಪಯಣಿಗರಿಗೆ ಕಾಣದ್ದು ಏನೋ ಒಂದು ನನಗೆ ಕಂಡಿರುತ್ತದೆ. ಅಂಥ ಸಣ್ಣ ಪುಟ್ಟ ವಿಷಯಗಳು ನನಗೆ ಖುಷಿ ಕೊಡುತ್ತವೆ.

Anonymous said...

ಹೌದು ಜ್ಯೋತಿ ಅಂಥಾ ಕೂಸುಮನ ಕಳೇದು ಹೋದದ್ದೆಲ್ಲಿ ಅಂತ ನಾನೂ ಆಗಾಗ ಯೋಚಿಸುತ್ತಿರುತ್ತೇನೆ ಚೆನ್ನಾಗಿದೆ ಕವಿತೆ....
ಮಾಲ

ಸುಪ್ತದೀಪ್ತಿ suptadeepti said...

ಅಂಥಾ ಒಂದು ಕೂಸುಮನದ ಸರದಾರನನ್ನು ಬಗಲಲ್ಲಿರಿಸಿಕೊಂಡು ಒಂದು ಕಾಲದಲ್ಲಿ ನಿನ್ನನ್ನು ಬಗಲಲ್ಲಿರಿಸಿಕೊಂಡಿದ್ದ ಮನದಂಗಳದಲ್ಲಿ ಸದ್ಯಕ್ಕೆ ಅಡ್ಡಾಡುತಿರುವವಳೇ, ಈ ಥರದ ಕೂಸುಮನ ಎಲ್ಲೂ ಕಳೆದುಹೋಗಿರಲ್ಲ! ಅದಕ್ಕೆ ತುರಗಪಟ್ಟಿಯನಿಟ್ಟು ಸುತ್ತ ಕೋಟೆ ಕಟ್ಟಿ ಅದನ್ನು ಮರೆತುಬಿಟ್ಟು ನಾವು ಸಾಗುತ್ತಿದ್ದೇವೆ, ಅಷ್ಟೇ. ಆ ಪಟ್ಟಿಯನ್ನೂ ಕೋಟೆಯನ್ನೂ ಕೆಡವಿದರೆ ಕೂಸು ಮತ್ತೆ ಸುತ್ತಮುತ್ತೆಲ್ಲ ನಲಿದಾಡುತ್ತದೆ, ನೋಡು.
ಬಿಡುವು ಮಾಡಿಕೊಂಡು ಬ್ಲಾಗ್’ಲೋಕಕ್ಕೆ ಬಂದು ಪ್ರತಿಕ್ರಿಯೆ ಬರೆದದ್ದಕ್ಕೆ ಧನ್ಯವಾದಗಳು, ಮಾಲಾ.

ಸೀತಾರಾಮ. ಕೆ. / SITARAM.K said...

ಅದ್ಭುತ! ಅಪ್ಪಟ! ಹಾಗೂ ಚೊಕ್ಕಟ! ಪ್ರಾಸ ಪ೦ಕ್ತಿಗಳು. ಇತ್ತೀಚೆಗೆ ಇಷ್ಟೊ೦ದು ಚೊಕ್ಕ ಪ್ರಾಸ ಸಾಲುಗಳನ್ನು ಕ೦ಡಿರದ ಮನ ಫುಲಕಗೊ೦ಡಿತು. ಧನ್ಯವಾದಗಳು.

ಸುಪ್ತದೀಪ್ತಿ suptadeepti said...

ನಮಸ್ಕಾರ, ಸ್ವಾಗತ, ಮತ್ತು ಧನ್ಯವಾದಗಳು ಸೀತಾರಾಮ್. ನಿಮ್ಮಂಥ ಸಹೃದಯ ಓದುಗರೇ ಕನಡಕ್ಕೆ ಬೇಕಾಗಿದ್ದಾರೆ ಈಗ. ಹೀಗೇ ಬರುತ್ತಿರಿ, ಬರೆಯುತ್ತಿರಿ.