ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 18 August 2009

ಶೂನ್ಯದೊಳಗೆ...

"ನಕ್ಷತ್ರಗಳೋ... ಕನಸುಗಳೋ..."
ಅಚ್ಚರಿಪಟ್ಟ ಒಬ್ಬ ಗೆಳೆಯ
ಕಾಕತಾಳೀಯವಾಗಿ ಅದೇ ಸಂಜೆ
ಉರಿವ ಬೆಂಕಿಯುಂಡೆಗಳ ಬಗ್ಗೆ-
ಸೋಜಿಗಗೊಂಡ ನನ್ನಿನಿಯ
ನಾನೂ ತಲೆ ಕೆರೆದೆ!
"ಹೀಲಿಯಂ" ಎಂದ ಮಗ
"ಏನೂ... ಇಲಿಯಾ...?" ಉಲಿದಳು ಪುಟ್ಟವಳು

ಎಲ್ಲರ ತಲೆಯಲ್ಲೂ ಒಂದಿಲ್ಲೊಂದು ಯೋಚನೆ!
ಗೆಳೆಯ ಕವನ ಬರೆದ
ಇನಿಯ ವೆಬ್-ಸೈಟ್ ತೆರೆದ
ಮಗ-ಮಗಳು ಮಿನುಗುಗಳಿಗೆ
‘ಗುಡ್-ನೈಟ್’ ಗುನುಗಿ
ಬೆಚ್ಚನೆ ಉಸಿರೆಳೆದರು.

ನನ್ನೊಳಗೆ ದೊಡ್ಡದೊಂದು ಉಸಿರಿನ ಸುಯ್ಲೆದ್ದಿತು,
ತಲೆಯಲ್ಲಿ ಬ್ರಹ್ಮಾಂಡ-
-ದ ಆಸ್ಫೋಟ!
ಕಣ್ಣು ಮುಚ್ಚಿ ಕುರ್ಚಿಯ ಬೆನ್ನಿಗೊರಗಿದೆ...

ಬೆಚ್ಚಿಸುವ ಸದ್ದು,
ಹುಚ್ಚಾಗಿಸುವ ಬೆಳಕಿನುಂಡೆ-
-ಗಳ ಹಾರಾಟ...
ನನ್ನ ಚೀರಾಟ ಸತ್ತಿತ್ತು!
ಉಸಿರಾಟ ಮಾತ್ರ ನಡೆದಿತ್ತು!
ತುದಿ ಮೊದಲಿಲ್ಲದ ನೀಹಾರಿಕೆಗಳ ನಡುವೆ
ದೃಷ್ಟಿಗೆ ಕಂಡೂ ಕಾಣದ ಕತ್ತಲೆಯೊಳಗೆ
ಕೇಳುತ್ತಿದ್ದ ಆಸ್ಫೋಟಗಳೆಡೆಯಲ್ಲಿ
ಮಿತಿ ಮೀರಿದ ಉಸಿರಾಟ.
ಬೆಕಿನುಂಡೆಗಳ ಸಮೂಹದಲ್ಲಿ
ಆಚ್ಛಾದಿತ ಅವಕಾಶದಲ್ಲಿ
‘ಆಕಾಶ’ವೆಲ್ಲಿ?
ಸೂರ್ಯ-ಚಂದ್ರ-ತಾರಾನಿವಹಗಳೆಲ್ಲಿ?
ಭೂಮಿಯೆಲ್ಲಿ, ಬಾನೇ ಇಲ್ಲದಲ್ಲಿ?
ಆ ತಾಯಿ ಕಳ್ಳ-ಕಂದನ ಬಾಯಲ್ಲಿ
ಕಂಡ ಶೂನ್ಯ ಇದೇ ಏನು?
ಕುರುಡು ಚಕ್ರವರ್ತಿ ಕಂಡ
‘ವಿಶ್ವರೂಪ’ ಇದೇ ಆಗಿತ್ತೆ?
ಎಲ್ಲೆಲ್ಲೂ ತುಂಬಿದ ಕತ್ತಲು
ಮತ್ತೆತ್ತೆತ್ತಲೂ ತುಂಬಿದ
ಮಿಣುಕು ತಿಣುಕುವ ‘ಹೀಲಿಯಮ್’ ಗೋಳಗಳು!
ಪ್ರತ್ಯಕ್ಷ ಕಂಡರೂ ಪರಾಂಬರಿಸಬೇಕು...
ಕಂಡವರೇ ಇಲ್ಲವಾದಾಗ?

"ಖಗೋಳ ವಿಜ್ಞಾನ ಬಹುತೇಕವಾಗಿ
ಕರಾರುವಾಕ್ ಲೆಕ್ಕಾಚಾರ..."
ಅಪ್ಪ ಮಗನಿಗೆ ಪಾಠ ಹೇಳಿದ್ದರು
ನಿಗೂಢ ಸೆಳೆತಗಳೊಳಗೆ ಸಿಲುಕಿ
ಸುತ್ತುವ ಅವುಗಳ ಕುರಿತ ಜಿಜ್ಞಾಸೆ;
ಯಾರ ಲೆಕ್ಕಾಚಾರವೂ ತಪ್ಪಬಹುದಲ್ಲ!

ಶೂನ್ಯದ ಅವಕಾಶದೊಳಗೆ
ಎಲ್ಲೋ ಕಳೆದು ಹೋಗದಂತೆ
ನಮ್ಮದೆಂದುಕೊಳ್ಳುವ ನೆಲಕ್ಕೆ
ಅಂಟಿಕೊಳ್ಳ ಬಯಸುವ ನಾವು...
ಮನುಜರು...
"ಪೂರ್ಣಮದಃ ಪೂರ್ಣಮಿದಂ..."
ಅಂದವರು...
ವ್ಯೋಮಯಾನಗೈದೆವೆಂದು
ನಂನಮ್ಮ ಬೆನ್ನನ್ನೇ ತಟ್ಟಿಕೊಂಡವರು...
ನಾವೆಷ್ಟು ಅಪೂರ್ಣರೆಂಬ
ಕಲ್ಪನೆಯೇ ಇರದವರು...
ಅತ್ತಿತ್ತ ನೋಡಿ ಪಕ್ಕದವರಿಗೆ
ಮೊಣಕೈಯಲ್ಲಿ ತಿವಿದು
ಶೂನ್ಯ ನೋಟ ಬೀರುವವರು...
ಆ ಅವರು... ಈ ಇವರು...

ಮತ್ತೆ ಆಸ್ಫೋಟ...

ಆಚೆ ಮನೆಯಲ್ಲಿ ಗುಂಡು ಹಾರಿಸಿದ ಸದ್ದು
ಕುರ್ಚಿಯಿಂದೆದ್ದು ಕಿಟಕಿಯ ಪರದೆ ಸರಿಸಿ
ದೂರಕ್ಕೆ ದಿಟ್ಟಿ ನೆಟ್ಟಾಗ...
ಮಿನುಗುಗಳೆಲ್ಲ ಸುಖವಾಗಿ
ತಣ್ಣನೆ ಮೋಡದ ಹೊದಿಕೆ ಹೊದ್ದು
ಕಣ್ಣು ಮುಚ್ಚಿ ಕನಸುವುದ ಕಂಡು
ನನ್ನುಸಿರು ನಿಧಾನವಾಗಿ ಸಮಸ್ಥಿತಿಗಿಳಿಯಿತು

ನನಗಾಗಿ ಒಂದಿಷ್ಟು ತಂಪು ಕನಸುಗಳನ್ನು
ಕೈಬೀಸಿ ಕರೆದು ದಿಂಬಿಗೊರಗಿದೆ.
(೨೦-ಅಕ್ಟೋಬರ್-೨೦೦೧)
{ಕವಿ ಮಿತ್ರ ಎಂ. ಆರ್. ದತ್ತಾತ್ರಿಯ ಕವನದ ಸ್ಫೂರ್ತಿಯಿಂದ}

2 comments:

sunaath said...

ಅನೂಹ್ಯ ಬ್ರಹ್ಮಾಂಡವು ನಮ್ಮ ತಿಳಿವಿಗೆ ಸಿಗುವದು ಸಾಧ್ಯವೆ?
ಕನಸುಗಳೇ ನಮಗೆ ನೆಲೆ!
ಜ್ಯೋತಿ,
ನೀನು ಬರೆದ ಪ್ರತಿ ಕವನವು ತನಗೆ ಸಮರ್ಪಕವಾದ ಛಂದಸ್ಸನ್ನು ಆರಿಸಿಕೊಂಡಿರುವದನ್ನು ಕಂಡು ಅಚ್ಚರಿಪಟ್ಟಿದ್ದೇನೆ.
ಈ ಕವನವೂ ಸಹ ಮುಕ್ತಛಂದಸ್ಸಿನಲ್ಲಿ ರಾರಾಜಿಸುತ್ತಿದೆ.

ಸುಪ್ತದೀಪ್ತಿ suptadeepti said...

ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು ಕಾಕಾ.

--ಅನೂಹ್ಯವಾದ ಬ್ರಹ್ಮಾಂಡವು ನಮ್ಮ ತಿಳಿವಿಗೆ ಸಿಗುವುದು ಸಾಧ್ಯವೆ?-- ನಿಜ. ಆದರೂ ನಾವೇ ಎಲ್ಲವನ್ನೂ ತಿಳಿದವರೆಂದು ಬೀಗುತ್ತಾ ಓಡಾಡುವವರನ್ನು ಕಂಡಾಗ ಈ ಅಗಾಧದ ನೆನಪಾಗುತ್ತದೆ. ಅದರೊಳಗೆ ನಮ್ಮೆಲ್ಲರ ಪಾತ್ರದ ನೆನಪಾಗುತ್ತದೆ. ಎಷ್ಟು ಕ್ಷುಲ್ಲಕ ಅನ್ನಿಸುತ್ತದೆ. "ನಗೆಯು ಬರುತಿದೆ ಎನಗೆ ನಗೆಯು ಬರುತಿದೆ, ಜಗದೊಳಿರುವ ಮನುಜರೆಲ್ಲ ಹಗರಣವ ಮಾಳ್ಪುದ ಕಂಡು..." ದಾಸರ ನಗೆಯ ಬಗೆ ಲಾಸ್ಯವಾಡುತ್ತದೆ.