ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 28 April 2009

ಶಿವಾನಿ

ರಸ್ತೆಯ ಕೆಂಪುದೀಪಕ್ಕೆ ಶರಣಾಗಿ ನಿಂತಿದ್ದ ಶಿವಾನಿಗೆ ತನ್ನ ಕಣ್ಣುಗಳಿಂದ ಚಿಮ್ಮುವ ಹನಿಗಳನ್ನು ತಡೆಯುವ ಮನಸ್ಸು ಇರಲಿಲ್ಲ. ಎಲ್ಲೋ ಕಳೆದು ಹೋದಂತಿದ್ದ ಆಕೆಯನ್ನು ಹಿಂದಿನ ಕಾರಿನ ಹಾರ್ನ್ ಎಚ್ಚರಿಸಿ ವಾಸ್ತವಕ್ಕೆ ಎಳೆತಂದಿತು. ಕೆಂಪು ಕಳೆದು ಹಸಿರಾಗಿದ್ದು ಕಂಡ ಶಿವಾನಿ, ತಾನೇ ಒಂದು ರಸ್ತೆ ತಡೆಯಾಗಿರುವುದರ ಬಗ್ಗೆ ಸಂಕೋಚಗೊಂಡಳು. ತನ್ನ ಮೆಚ್ಚಿನ `ಟೊಯೋಟಾ ಕ್ಯಾಮ್ರಿ'ಯನ್ನು ಚಾಲನಾತಡೆಯಿಂದ ಬಿಡುಗಡೆಗೊಳಿಸಿ ಗ್ಯಾಸ್ ಪೆಡಲ್ ಮೇಲೆ ಕಾಲಿರಿಸಿದ ಆಕೆ ರಸ್ತೆಯ ಕಡೆ ಗಮನ ಹರಿಸಿದಳು. ಕಣ್ಣೀರು ಅದರ ಪಾಡಿಗೆ ಹರಿದು ಸಾಕಾಗಿ ಒಣಗುತ್ತಿತ್ತು, ಕೆನ್ನೆಯ ಮೇಲೆ ತನ್ನ ದಾರಿಯ ಗುರುತು ಉಳಿಸಿ. ಯಾವಾಗಲೂ ತಡೆರಹಿತ ಫ್ರೀ-ವೇಯಲ್ಲೇ ಸಾಗುವ ಆಕೆ ಇಂದು ಮಾತ್ರ ಸನ್ನಿವೇಲ್‍ನಲ್ಲಿರುವ ತನ್ನ ಮನೆಯಿಂದ ಸ್ಯಾನ್‍ಹೋಸೆಯ `ವ್ಯಾಲಿ ಫೇರ್ ಮಾಲ್'ಗೆ ಹೋಗಲು ಒಳದಾರಿಗಳನ್ನು ಹಿಡಿದಿದ್ದಳು. ಅಂತೂ ಮಾಲ್ ತಲುಪಿದಾಗ ಟ್ರ್ಯಾಫಿಕ್‍ನಿಂದ ಹೊರಬಂದುದಕ್ಕೆ ಒಂದು ರೀತಿಯ ನಿರಾಳ ಭಾವ ಅವಳನ್ನು ತುಂಬಿಕೊಂಡಿತು. ಕಾರನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸಿ, ಮುಖವನ್ನೊಮ್ಮೆ ಒರಸಿಕೊಂಡು, `ಮೇಸೀಸ್' ಒಳಗೆ ನಡೆದ ಶಿವಾನಿಗೆ ತನ್ನ ತಲೆಯೊಂದು ಜೇನುಗೂಡಾಗಿರುವಂತೆ ಭಾಸವಾಯಿತು. ತನಗೆ ಬೇಕೇ ಬೇಕಾದ ಕೆಲವು ಬಟ್ಟೆಗಳನ್ನು ಆರಿಸಿ, ಎಲ್ಲವನ್ನೂ ಮುಂಗೈಯಲ್ಲಿರಿಸಿಕೊಂಡು ಕೌಂಟರಿನತ್ತ ನಡೆದವಳ ಗಮನ ಪಕ್ಕದ ಮಕ್ಕಳ ವಿಭಾಗದಲ್ಲಿದ್ದ ಒಂದು ಸುಂದರವಾದ ಫ್ರಾಕಿನೆಡೆ ಹರಿದಾಗ ಮತ್ತೆ ತನ್ನೆಲ್ಲ ನೋವುಗಳೂ ಸೇರಿ ಮುತ್ತಿಗೆ ಹಾಕಿದ ಅನುಭವ. ಉಕ್ಕುವ ಕಣ್ಣೀರನ್ನು ಪ್ರಯಾಸದಿಂದ ತಡೆದು, ಕೌಂಟರಿನಲ್ಲಿ ತನ್ನ ಖರೀದಿಗಳನ್ನು ವೀಸಾ ಕಾರ್ಡಿಗೆ ಚಾರ್ಜ್ ಮಾಡಿ, ಬ್ಯಾಗ್, ರಿಸಿಟ್ ಪಡೆದಳು. ಹೊರಬಂದು ಕಾರಿನತ್ತ ನಡೆಯುವಾಗಲೇ ಬಿಕ್ಕಳಿಸತೊಡಗಿದ ಶಿವಾನಿ, ಕಾರೊಳಗೆ ಕುಳಿತು ಜೋರಾಗಿ ಅಳಲಾರಂಭಿಸಿದಳು. ತಾನು ಪಾರ್ಕಿಂಗ್ ಲಾಟಿನಲ್ಲಿರುವುದನ್ನೂ ಮರೆತು ಮುಖ ಮುಚ್ಚಿಕೊಂಡು ತನ್ನೊಳಗಿನ ನೋವನ್ನು ಕೋಡಿಯಾಗಿ ಹರಿಸುತ್ತಿದ್ದ ಆಕೆಗೆ ಸಮಯದ ಪರಿವೆಯಿರಲಿಲ್ಲ.

ಕಾರ್ ಬಾಗಿಲಿನ ಗಾಜಿನ ಮೇಲೆ ಟಕಟಕಿಸಿದ ಸದ್ದಿಗೆ ಬೆಚ್ಚಿಬಿದ್ದು ತಿರುಗಿ ನೋಡಿದವಳಿಗೆ ಅತ್ಯಾಶ್ಚರ್ಯವಾಗಿತ್ತು. ಇತ್ತೀಚೆಗಷ್ಟೇ ಈ ಊರಲ್ಲಿ ಮತ್ತೆ ಭೇಟಿಯಾದ ತನ್ನ ಬಾಲ್ಯ, ಹದಿಹರೆಯದ ಆತ್ಮೀಯ ಗೆಳತಿ ಸವಿತ! ಉಕ್ಕಿ ಬಂದ ಸಂತೋಷದಲ್ಲಿ ಕಾರಿನಿಂದ ಹೊರಬಂದು ಸವಿತಳನ್ನು ಬಿಗಿದಪ್ಪಿದ ಶಿವಾನಿಗೆ `ಈ ಕ್ಷಣದಲ್ಲೇ ತಾವಿಬ್ಬರೂ ಮತ್ತೆ ಹೈಸ್ಕೂಲ್ ಹುಡುಗಿಯರಾಗಬಾರದೇ' ಅನ್ನಿಸಿತು. ಒಂದು ಕ್ಷಣ ಗೆಳತಿಯ ಮುಖ ಗಮನಿಸಿದ ಸವಿತ, ಅದೇ ಹಳೇ ಸಲುಗೆಯಿಂದ- "ಯಾವ ಕಡೆ ಸವಾರಿ? ತುಂಬಾ ಬಿಝೀನಾ? ನಮ್ಮನ್ನು ನಿನ್ನ ಮನೆಗೆ ಕರೀಲೇ ಇಲ್ಲ ನೀನು..." ಎಂದೆಲ್ಲ ಹರಟಿದಳು. ಗೆಳತಿಯನ್ನು ದಿಟ್ಟಿಸಿದ ಶಿವಾನಿ ಏನೋ ಹೇಳಬೇಕೆಂದು ಬಾಯಿ ತೆರೆದು ಅಲ್ಲಿಗೇ ಸುಮ್ಮನಾಗಿ, ಬಳಿಕ- "ಹಾಗೇನಿಲ್ಲ. ಇಲ್ಲಿಯ ಜೀವನ ನಿನಗ್ಗೊತ್ತಲ್ಲ. ವಾರ ಪೂರ್ತಿ ಕತ್ತೆದುಡಿತ, ವೀಕೆಂಡ್ ಮಾಡಬೇಕಾದ ಕೆಲಸಗಳಿಗೆ ದೊಡ್ಡ ಲಿಸ್ಟೇ ಕಾದಿರುತ್ತದೆ. ಹೀಗೇ ದಿನಗಳು ಓಡುತ್ತವೆ; ಅಷ್ಟೇ. ನೀನು, ಮನೆಯವರು ಹೇಗಿದ್ದೀರಿ? ಮಗ ಮುದ್ದಾಗಿದ್ದಾನೆ. ಏನಂತಾಳೆ ಒಳಗಿನ ರಾಜಕುಮಾರಿ?" ಎಂದು ಅವಳ ೯ ತಿಂಗಳ ಹೊಟ್ಟೆ ಸವರಿದಳು. ಪ್ರತಿ ಸವಾಲೆಂಬಂತೆ "ನಾವೆಲ್ಲ ಆರಾಮ್. ನಿನ್ನ ವಿಷಯ ಹೇಳು. ಏನು ಒಬ್ಬಳೇ! ಎಲ್ಲಿ ನಿನ್ನ ಅರ್ಧಾಂಗ ಮತ್ತು ಪ್ರೀತಿಯ ಮುತ್ತು ಸ್ವಾತಿ? `ವ್ಯಾಲೆಂಟೈನ್ಸ್ ಡೇ'ಗೆ ಸ್ಫೆಶಲ್ ಶಾಪಿಂಗ್ ಅಂತ ಒಬ್ಬಳೇ ಬಂದೆಯಾ?" ಅಂದಳು. ಪ್ರಯತ್ನಿಸಿದರೂ ತಡೆಯಲಾಗದ ಕಣ್ಣ ಹನಿಯನ್ನು ಮರೆಮಾಡುವ ಸಲುವಾಗಿ ಮುಖ ತಿರುಗಿಸಿದ ಶಿವಾನಿ, ಸ್ವಲ್ಪ ತಡೆದು ನಿಧಾನವಾಗಿ, "ಸವಿತ, ಇಲ್ಲೀಗ ಮಾತು ಬೇಡ. ನೀವು ಶಾಪಿಂಗ್ ಮುಗಿಸಿ. ನಾನು ನಾಳೆಯೇನಾದರೂ ನಿನಗೆ ಫೋನ್ ಮಾಡುತ್ತೇನೆ, ಫ್ರೀ ಇರ್ತೀಯಾ?" ಅಂದಳು. ಥಟ್ಟನೆ "ನೀನೀಗ ಫ್ರೀ ಇದ್ದೀಯಾ? ಆಪ್ತ ಗೆಳತಿ ಜೊತೆ ಸಮಯ ಕಳೆಯದೆ ಎಷ್ಟೋ ಕಾಲವಾಗಿದೆ. ಬಾ, ಕಾಫಿಗೆ ಹೋಗೋಣ" ಅಂದವಳ ಸರಳ ನೇರ ನಡವಳಿಕೆ ಶಿವಾನಿಯನ್ನು ತಟ್ಟಿತು. "ನಾನೇನೋ ಫ್ರೀ ಈಗ. ಆದರೆ ನೀವೆಲ್ಲ ಶಾಪಿಂಗ್...." ಮಾತು ಮುಗಿಯುವ ಮುನ್ನ ತಡೆದ ಸವಿತ- "ನಮ್ಮ ಶಾಪಿಂಗ್ ಏನೂ ಇಲ್ಲ, ಸುಮ್ಮನೆ ಸುತ್ತಾಡಲಿಕ್ಕೆ ಬಂದಿದ್ದೆವು. ನಡಿ ಮತ್ತೆ. ಈ ಸಂಜೆ ನೀನು ನನ್ನ ಗೆಸ್ಟ್. ಬಾ, ಮನೆಗೆ ಹೋಗೋಣ. ಹತ್ತು ನಿನ್ನ ಗಾಡಿ...." ಅಂದವಳು ಗಂಡನ ಕಡೆ ನೋಡಿ, "ಮನೆಗೇ ಹೋಗೋಣರೀ, ಶಿವಾನಿಯೂ ಬರ್ತಾಳೆ." ಅಂತಂದು ಶಿವಾನಿಯನ್ನು ಆಕೆಯ ಕ್ಯಾಮ್ರಿಯೊಳಗೆ ಕೂರಿಸಿ, ತಾನೂ ಅದರ ಪ್ಯಾಸೆಂಜರ್ ಸೀಟನ್ನೇರಿದಳು. ಶಿವಾನಿಯ ಮುಖ ಆಶ್ಚರ್ಯ, ಸಂತೋಷಗಳ ಮಿಶ್ರಣವಾಗಿತ್ತು.

ದೀರ್ಘವಾಗಿ ಗೆಳತಿಯ ಮುಖ ನೋಡಿದ ಸವಿತ, "ಶಿವಿ, ನಮ್ಮ ಮನೆ ಹೋಮ್‍ಸ್ಟೆಡ್ ರೋಡ್ ಮತ್ತು ಬ್ಲೇನಿ ಅವೆನ್ಯೂ ಹತ್ರ. ಫ್ರೀವೇನಲ್ಲಿ ಹೋಗೋದಾ, ಈ ಕಡೆಯಿಂದ ಹೋಗೋದಾ?" ಅಂದಾಗ ಶಿವಾನಿ ಮೊದಲನೆ ದಾರಿಯನ್ನೇ ಆರಿಸಿಕೊಂಡಳು. ಪಾರ್ಕಿಂಗ್ ಲಾಟ್‍ನಿಂದ ಹೊರಬಂದು, ಫ್ರೀವೇ-೨೮೦ನ್ನು ಪ್ರವೇಶಿಸಿ, ನಿಮಿಷಗಳಲ್ಲಿ ವೂಲ್ಫ್ ರೋಡ್ ಎಗ್ಸಿಟ್ ಕೂಡ ಬಂದೇಬಿಟ್ಟಿತು. ಗೆಳತಿಯರ ನಡುವೆ ಅಸಹನೀಯ ಮೌನ. ಮುಂದೆ ಸವಿತಳ ಮಾರ್ಗದರ್ಶನದಲ್ಲಿ ಅವಳ ಮನೆ ತಲುಪಿತು ಸ್ನೇಹ ಜೋಡಿ. ಕಾರ್ ಪಾರ್ಕ್ ಮಾಡಿ ಮನೆಯೊಳಗೆ ಹೋಗುವಷ್ಟರಲ್ಲಿ ಸವಿತಳ ಪತಿ ಅಶ್ವಿನ್ ಮತ್ತು ಮಗ ಅಮರ್ ಜತೆಗೂಡಿದರು. ಸ್ನೇಹಿತೆಯ ಅಂದವಾದ ಮನೆ ಮತ್ತು ಸುಂದರವಾದ ಸಂಸಾರ ಕಂಡು ಶಿವಾನಿಯ ಮನಸ್ಸಿಗೆ ಏನೋ ನೆಮ್ಮದಿ ಅನ್ನಿಸಿತು. ಅಡುಗೆ ಮನೆಗೆ ನುಗ್ಗಿದ ಗೆಳತಿಯನ್ನು ಹಿಂಬಾಲಿಸಿ ಬಂದು, "ಈಗೇನೂ ಮಾಡೋದಕ್ಕೆ ಹೋಗ್ಬೇಡ ಸವಿ, ಈಗ ತಿಂಡಿ ತಿಂದರೆ ಆಮೇಲೆ ಊಟ ಸೇರೋಲ್ಲ. ಏನೂ ಬೇಡ, ಬರೇ ಕಾಫೀನೋ ಟೀನೋ ಮಾಡು, ಅಷ್ಟೇ ಸಾಕು; ಪ್ಲೀಸ್" ಅಂದ ಗೆಳತಿಯನ್ನು ನೋಡಿದ ಸವಿತ, "ನೀನಿನ್ನೂ ಅದೇ ಹಳೇ ಶಿವಿ, ಸಂಕೋಚದ ಮುದ್ದೆ. ಯಾವಾಗ ಬದಲಾಗ್ತೀ? ನಿನ್ನವರು ಏನೂ ಹೇಳೋದಿಲ್ವಾ?" ಅಂತ ಪ್ರಶ್ನಿಸಿದಳು. ಉತ್ತರಕ್ಕಾಗಿ ಅವಳ ಮುಖ ನೋಡಿದಾಗ ಗಾಬರಿಗೊಂಡಳು ಸವಿತ. ಲಿವಿಂಗ್ ರೂಂ ಕಡೆ ತಿರುಗಿ, "ರೀ, ಅಶ್ವಿನ್, ಇಲ್ಲಿ ಟೀಗಿಟ್ಟಿದ್ದೇನೆ, ಸ್ವಲ್ಪ ನೋಡ್ಕೊಳ್ಳಿ. ನಾನೀಗ ಬಂದೆ." ಅಂತ ಕೂಗಿ ಹೇಳಿ, ಶಿವಾನಿಯನ್ನು ತಬ್ಬಿ ಹಿಡಿದು ತನ್ನ ರೂಮಿಗೆ ಕರೆದೊಯ್ದಳು. ಸ್ನೇಹಿತೆಯನ್ನು ಮಂಚದ ಮೇಲೆ ಕೂರಿಸಿ, ತಾನೂ ಪಕ್ಕದಲ್ಲೇ ಕೂತ ಸವಿತ, ತನ್ನ ಅಪ್ಪುಗೆಯನ್ನು ಬಿಡಲಿಲ್ಲ; ಶಿವಾನಿ ಬಿಡಿಸಿಕೊಳ್ಳಲೂ ಇಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾಕೆ, ಬಾಗಿಲಿನ ಶಬ್ದಕ್ಕೆ ತುಸು ಸರಿದು ಕುಳಿತಳಾದರೂ ಕಣ್ಣೀರು ನಿಂತಿರಲಿಲ್ಲ. ಟೀ ಕಪ್ಪುಗಳನ್ನು ತಂದಿರಿಸಿದ ಅಶ್ವಿನ್ ಪತ್ನಿಯ ಕಡೆ ಪ್ರಶ್ನಾರ್ಥಕವಾಗಿ ನೋಡಿ, ಆಕೆಯ ನೋಟದಲ್ಲಿ ಉತ್ತರವನ್ನೂ ಗ್ರಹಿಸಿ ಮತ್ತೆ ಬಾಗಿಲು ಹಾಕಿಕೊಂಡು ಹೊರಗೆ ನಡೆದ. ಟೀಯನ್ನು ಶಿವಾನಿಯ ಕೈಯಲ್ಲಿರಿಸುತ್ತಾ ಮುಗುಳ್ನಗೆ ಬೀರಿದ ಸವಿತಳ ಸ್ನೇಹಪೂರ್ಣ ಕಣ್ಣುಗಳು ತನ್ನೆಲ್ಲ ನೋವನ್ನು ಹೀರಿ ನೆಮ್ಮದಿಯನ್ನು ನೀಡುವ ಭರವಸೆಯಿತ್ತಂತೆ ತೋರಿದವು. ಬಿಸಿ ಟೀ ಒಳ ಸೇರಿದಂತೆ, ಒಳಗಿನ ಹಸಿ ನೋವು ಹೊರಗೆ ಬರತೊಡಗಿತು.

"ಸವಿ, ಈಗೊಂದು ವಾರದಿಂದ ನಾನೊಬ್ಳೇ ಒಂದು ಅಪಾರ್ಟ್‍ಮೆಂಟಿನಲ್ಲಿದ್ದೇನೆ. ವಸಂತ್ ಮತ್ತು ಸ್ವಾತಿ ಮನೆಯಲ್ಲಿದ್ದಾರೆ; ಅತ್ತೆ, ಮಾವ ಕೂಡ ಇಲ್ಲೇ ಇದ್ದಾರೆ. ತಿಂಗಳ ಹಿಂದೆ ಊರಿಂದ ಇಲ್ಲಿಗೆ ಬಂದರು. ಎರಡು ವಾರದ ಹಿಂದೆ ನಾನು ಆ ಮನೆಯಿಂದ ಹೊರಗ್ಬಂದೆ. ಇನ್ನು ಅಲ್ಲಿರೋದು ಸಾಧ್ಯವಿಲ್ಲ. ಆ ಬಗ್ಗೆ ನನಗೆ ನೋವಿದೆ, ಪಶ್ಚಾತ್ತಾಪ ಇಲ್ಲ. ಆದ್ರೆ ಸ್ವಾತೀನ ಬಿಟ್ಟಿರಕ್ಕೆ ಆಗ್ತಾ ಇಲ್ಲ. ಈ ವಾರ ಪೂರ್ತಾ ನಾನು ಆಫೀಸಿಗೂ ಹೋಗ್ಲಿಲ್ಲ. ನಾಳೆ ಭಾನುವಾರ; ಅಲ್ಲಿ ಹೋಗಿ ಮಗ್ಳನ್ನ ನೋಡ್ಕೊಂಡು ಬರ್ತೇನೆ, ಅಷ್ಟೆ; ನನಗೀಗ ಅದಷ್ಟೇ ಉಳಿದದ್ದು. ಜೀವನವೇ ಬೇಡವಾಗಿದೆ. ಸಾಯುವ ಧೈರ್ಯವೂ ಇಲ್ಲ. ಊರಿಗೆ ಹೋಗಲೂ ಸಾಧ್ಯವಿಲ್ಲ, ಅಪ್ಪ-ಅಮ್ಮನಿಗೆ ಉತ್ತರ ಹೇಳೋದಕ್ಕೆ ನನಗೆ ಆಗೋದಿಲ್ಲ. ನನ್ನ ಲೈಫ್ ಇಲ್ಲಿಗೇ ನಿಂತರೇ ಚೆನ್ನಾಗಿತ್ತು, ಇನ್ನೂ ಹೆಚ್ಚಿನ ನೋವು ತಡೆಯೋ ಶಕ್ತಿ ನನಗಿಲ್ಲ ಸವೀ, ನನಗಿಲ್ಲ..." ಮತ್ತೆ ಬಿಕ್ಕಳಿಸಲು ಶುರುಮಾಡಿದ ಶಿವಾನಿಗೆ ಏನು ಹೇಳಬೇಕೆಂದೇ ತೋಚಲಿಲ್ಲ ಸವಿತಳಿಗೆ. ಕಳೆದ ಬಾರಿ ತಾವು ಪೀಟ್ಝಾ ಹಟ್‍ನಲ್ಲಿ ಭೇಟಿಯಾದಾಗ ತನ್ನ ಅತ್ತೆ-ಮಾವ ಬರುತ್ತಿರುವ ಬಗ್ಗೆಯೂ ಹೇಳಿದ್ದ ಶಿವಾನಿಯ ಮುಖದಲ್ಲಿ ಖುಷಿ ಕುಣಿಯುತ್ತಿತ್ತು. ಆದರೆ ಈಗ? ತಾನು ಮೇಸೀಸ್ ಪಾರ್ಕಿಂಗ್ ಲಾಟ್‍ನಲ್ಲೇ ಕಂಡುಕೊಂಡ ಸಂಶಯದ ಸುಳಿವು, ಕೇಳಬಾರದೆಂದು ಅಂದುಕೊಂಡದ್ದು, ಈಗ ಬಲವಾಯಿತು. ಎಲ್ಲಿ, ಏನು, ಹೇಗೆ, ತಾಳ ತಪ್ಪಿತು? ಈ ಪ್ರಶ್ನೆಗಳನ್ನು ಕೇಳಿಸಿಕೊಂಡಳೋ ಅನ್ನುವಂತೆ ಶಿವಾನಿ ಮತ್ತೆ ಹೇಳಿದಳು, "ನಾನು ಹೊರಗ್ಬಂದದ್ದಕ್ಕೆ ಅತ್ತೆ-ಮಾವನಿಗೂ ನೋವಿದೆ. ಆದ್ರೆ ಇದ್ರಲ್ಲಿ ಅವರ ಪಾತ್ರ ಏನೂ ಇಲ್ಲ. ಎಲ್ಲಾ ವಸಂತ್‍ದೇ. ಮಗೂಗೆ ಕೂಡಾ ನಾನು ಏನೂ ಕೊಡಬಾರದೂಂತ ಆಜ್ಞೆ ಮಾಡಿದಾರೆ. ಅತ್ತೆಯಂತೂ ನನ್ನ ತಬ್ಬಿಕೊಂಡು ಅತ್ತೇಬಿಟ್ಟರು. ವಸಂತ್ ಅವ್ರ ಮೇಲೂ ರೇಗಾಡಿದ್ರು, `...ಅವಳು ಹೋಗೋದಾದ್ರೆ ಹೋಗ್ಲಿ. ಬಿಡಿ ಅವ್ಳನ್ನ. ಸ್ವಾತಿಯನ್ನು ನೋಡ್ಕೊಳ್ಳಿಕ್ಕೆ ನೀವಿದ್ದೀರಿ. ಹೆಣ್ಣಿಗೆ ಸೊಕ್ಕಿರಬಾರ್ದು, ಹೊಂದಾಣಿಕೆ ಇರ್ಬೇಕು...' ಅಂತ ಏನೇನೋ ಹೇಳಿದ್ರು. ನನಗೆ ದೊಡ್ಡ ಆಘಾತವೇ ಆಗಿತ್ತು. ಎದ್ದು ಆಚೆ ನಡೆದೇ ಬಿಟ್ಟೆ..." ನಿಟ್ಟುಸಿರ ನಡುವೆ ಪಿಸುಮಾತಿನಲ್ಲಿ "ಶಿವಿ, ನಾನೊಂದು ಪ್ರಶ್ನೆ ಕೇಳ್ತೇನೆ, ನೀನೇನೂ ತಪ್ಪು ತಿಳೀಬೇಡ." ಅಂದ ಸವಿತ, ಆಕೆಯ ಅನುಮೋದನಾ ಸೂಚನೆಯನ್ನು ಕಂಡು ಮುಂದುವರಿಸಿ ಹೇಳಿದಳು, "ನಿನ್ನಂಥ ಹುಡುಗಿಗೇ ಈ ಪರಿಸ್ಥಿತಿ ಅಂದ್ರೆ ನಂಬಕ್ಕೇ ಆಗ್ತಾ ಇಲ್ಲ. ವಸಂತ್‍ಗೆ ನಿನ್ನಲ್ಲಿ ಅಸಮಾಧಾನವಾಗಲು ಕಾರಣವಾದರೂ ಏನು? ಯಾಕಂತೆ ಈ ಶಿಕ್ಷೆ? ಹೇಳಿದ್ದಾರಾ?" ಕೆಲವು ನಿಮಿಷಗಳ ಮೌನದ ಬಳಿಕ ತಲೆ ಎತ್ತಿದ ಶಿವಾನಿ ತನ್ನ ಕಥೆಯನ್ನು ತೆರೆದಿಟ್ಟಳು.

"ವಸಂತ್ ಡೆಲ್ಲಿಯಲ್ಲೇ ಹುಟ್ಟಿ ಬೆಳೆದವರು. ಊರಿನ ಕಡೆ ಬರುತ್ತಿದ್ದರೂ ಬರೇ ರಜೆಯಲ್ಲಷ್ಟೇ. ಹಾಗಾಗಿ ತೀರಾ ಪಟ್ಟಣಿಗನಾಗಿಯೇ ಬೆಳೆದವರು. ತುಂಬಾ ಸೋಶಿಯಲ್, ಜೋವಿಯಲ್ ಮನುಷ್ಯ. ಅತ್ತೆ-ಮಾವ ನನ್ನನ್ನು ಇಷ್ಟ ಪಟ್ಟು ಮಗನಿಗೆ ಮದುವೆ ನಿಶ್ಚಯಿಸಿದಾಗ ಖುಷಿಯಲ್ಲೇ ಒಪ್ಪಿಕೊಂಡಿದ್ದರು ಕೂಡ. ಡೆಲ್ಲಿಯಲ್ಲಿದ್ದಷ್ಟು ಕಾಲವೂ ಜೀವನ ಚೆನ್ನಾಗೇ ಇತ್ತು; ಯಾರಾದರೂ ಅಸೂಯೆ ಪಡುವಂತಿತ್ತು. ಅತ್ತೆ ಮತ್ತು ಮಾವನವರೂ ನಮ್ಮ ಜೊತೆಗೇ ಇದ್ರು. ಆದರೆ ಈ ದೇಶಕ್ಕೆ ಬಂದ ಮೇಲೆ ವಸಂತ್ ನಡತೆಯ ರೀತಿಯಲ್ಲಿ ವ್ಯತ್ಯಾಸ ಕಂಡೆ. ಮದುವೆ ಆದಾಗಿನಿಂದಲೂ ಡೆಲ್ಲಿಯಲ್ಲೂ ನಾನು ಕೆಲಸಕ್ಕೆ ಹೋಗುತ್ತಿದ್ದೆನಲ್ಲ. ಇಲ್ಲಿ ಸನ್ನಿವೇಲ್‍ಗೆ ಬಂದಾಗ ಕೆಲಸ ಸಿಗುವವರೆಗೆ ನನಗೆ ಬೋರ್ ಅನಿಸುತ್ತಿತ್ತು. ನಂತರ ಕೆಲಸವೂ ಸಿಕ್ಕಿತು; ಆಮೇಲೆ ಸ್ವಾತಿ ಹುಟ್ಟಿದಳು. ಮೊದಲು ಆರು ತಿಂಗಳು ಅಪ್ಪ, ಅಮ್ಮ ಇಲ್ಲಿದ್ರು; ಆಮೇಲೆ ಅತ್ತೆ, ಮಾವ ಬಂದು ಹೋದ್ರು. ಕಳೆದೊಂದು ವರ್ಷದಿಂದ ಸ್ವಾತಿಗಾಗಿ ನಾನು ಬರೇ ಪಾರ್ಟ್‍ಟೈಂ ಕೆಲಸ ಮಾಡ್ತಿದ್ದೆ. ಈಗ ಮತ್ತೆ ಅತ್ತೆಯವರು ಬಂದ ಮೇಲೆ ಫುಲ್‍ಟೈಂ ಹೋಗುತ್ತಿದ್ದೇನೆ. ಈ ನಡುವೆ ವಸಂತ್ ಬೇರೆ ಬೇರೆ ಕೆಲಸಗಳಲ್ಲಿ ಅಲೆದಾಡಿ, ಕೊನೆಗೆ ಗೆಳೆಯರಿಬ್ಬರ ಜೊತೆಗೆ ಸ್ವಂತ ಕಂಪೆನಿಯನ್ನು ಹುಟ್ಟುಹಾಕಿದರು. ಅದೀಗ ಚೆನ್ನಾಗಿ ಬೆಳೆದಿದೆ. ಇದೆಲ್ಲವೂ ಸುಂದರವಾಗಿಯೇ ಇದೆ. ಆದ್ರೆ ಕಷ್ಟ ಇರೋದು ವಸಂತ್‍ನ ಸಾಮಾಜಿಕ ನಡವಳಿಕೆಯಲ್ಲಿ. ತೀರಾ ಪಾರ್ಟಿ-ಜೀವಿ. ಸಮಾಜದಲ್ಲಿ ಆತನಿಗೆ ಗೌರವವೂ ಇದೆ, `ಇನ್ನೋವಿಷನ್ಸ್ ಸಾಫ್ಟ್‍ಟೆಕ್' ಕಂಪನಿಯ ಸಿ.ಇ.ಓ.ಗಳಲ್ಲಿ ಒಬ್ಬರು ತಾನೇ! ಎಲ್ಲಿ ಯಾವ ಪಾರ್ಟಿ ಇದ್ದರೂ ಹೋಗಲೇ ಬೇಕು. ಜೊತೆಗೆ ಸ್ವಲ್ಪ ಡ್ರಿಂಕ್ಸ್, ಡ್ಯಾನ್ಸ್. ಬರು-ಬರುತ್ತಾ ಸಂಗಾತಿ ಬದಲಿಸುವ ಆಟಕ್ಕೂ ಇಳಿದರು. ನನಗೂ ಒತ್ತಾಯ ಮಾಡುತ್ತಿದ್ದರು, ಆದ್ರೆ ನಾನು ಒಪ್ಪಲೇ ಇಲ್ಲ. ಅವರು ಯಾರ ಜೊತೆ ಡ್ಯಾನ್ಸ್ ಮಾಡೋದಕ್ಕೂ ನನ್ನ ಅಭ್ಯಂತರವೇನೂ ಇಲ್ಲ. ಆದರೂ, `ಸೋಶಿಯಲೀ ಯೂ ಆರ್ ಅನ್‍ಫಿಟ್. ಐ ಕಾಂಟ್ ಲಿವ್ ವಿದ್ ಯು ಲೈಕ್ ದಿಸ್' ಎಂದು ಯಾವಾಗಲೂ ಗೊಣಗುತ್ತಿದ್ದರು. ಹೀಗೇ ಸಾಗಿತ್ತು ಜೀವನ."

"ಇತ್ತೀಚೆಗೆ ಪಾರ್ಟಿಗಳಿಗೆ ನನ್ನನ್ನು ಕರೆಯುತ್ತಲೇ ಇರಲಿಲ್ಲ. ಬಹುಶಃ ಗೆಳೆಯರಿಗೆಲ್ಲ ಸಬೂಬು ಹೇಳಿ ಸಾಕಾಗಿರಬೇಕು. ನನ್ನನ್ನು ತೆಗಳಲು, ಕೀಳಾಗಿ ನೋಡಲು ಸುರುಮಾಡಿದ್ದರು. ಆದರೂ ನಾನು ಸುಮ್ಮನಿದ್ದೆ; ಮಗಳ ಸಲುವಾಗಿ. ಈಗ ಅವರ ಅಪ್ಪ-ಅಮ್ಮ ಬಂದ ಮೇಲೆ ತುಂಬಾ ಹಾರಾಡುತ್ತಿದ್ದರು. ನನ್ನ ಅವಶ್ಯಕತೆಯಿಲ್ಲ ಎಂಬಂತೆ ಆಡುತ್ತಿದ್ದರು. ನನ್ನದೇ ತಪ್ಪೆನ್ನುವಂತೆ ನಡೆದುಕೊಳ್ಳುತ್ತಿದ್ದರು. ಅತ್ತೆಗಾಗಲೀ ಮಾವನಿಗಾಗಲೀ ವಿಷಯ ಏನೂಂತ ಗೊತ್ತೇ ಇಲ್ಲ, ನಾನೂ ಹೇಳಿಲ್ಲ. ಹೀಗೇ ಮೊನ್ನೆ ಜಗಳ ಜೋರಾಗಿ, ನನ್ನನ್ನು `ನಡೆಯಾಚೆ, ಹೊಂದಿಕೊಳ್ಳಲು ಆಗೋದಿಲ್ಲವಾದ್ರೆ ಹೋಗಾಚೆ. ಇಲ್ಲಿ ನಿನಗೆ ಜಾಗ ಇಲ್ಲ' ಅಂದುಬಿಟ್ಟರು. ನನಗೂ ಸಾಕಾಗಿತ್ತು. ಒಂದೆರಡು ಜೊತೆ ಬಟ್ಟೆ ಜೋಡಿಸಿಕೊಂಡು ಹೊರಟೇಬಿಟ್ಟೆ. ಕಾರ್ ನನ್ನದೇ ಆದ್ದರಿಂದ ಅವರಿಗೆ ಏನೂ ಮಾಡಲಾಗಲಿಲ್ಲ. ಒಂದು ವಾರ ಮೋಟೆಲ್‍ನಲ್ಲಿದ್ದೆ. ಮತ್ತೆ ಅಪಾರ್ಟ್‍ಮೆಂಟಿಗೆ ಬಂದೆ. `ಡೈವೋರ್ಸಿಗೆ ಫೈಲ್ ಮಾಡ್ತೇನೆ' ಅಂತ ಹೇಳಿದ್ದರು. ಫೈನಾನ್ಷಲೀ ಅವರ ಸ್ಥಿತಿ ಉತ್ತಮವಾಗಿರೋದರಿಂದ, ನೋಡ್ಕೊಳ್ಳೋಕೆ ಅತ್ತೆ-ಮಾವ ಇರೋದರಿಂದ ಸ್ವಾತಿಯ ಕಸ್ಟಡಿಯೂ ಅವರಿಗೇ ಸೇರುತ್ತದೇಂತ ಹೇಳ್ತಿದ್ದರು. ಬೇರೇನನ್ನಾದರೂ ತಡೆದೇನು, ಆದರೆ ಮಗಳಿಂದ ಬೇರೆಯಾಗಿರೋದು ಮಾತ್ರ ಸಾಧ್ಯವಿಲ್ಲ. ನಾಡಿದ್ದು ಇಬ್ಬರಿಗೂ ಲಾಯರ್ ಜೊತೆ ಅಪಾಯಿಂಟ್‍ಮೆಂಟ್ ಇದೆ. ಅದೇನು ಹೇಳ್ತಾರೋ, ಮಾಡ್ತಾರೋ ಗೊತ್ತಿಲ್ಲ. ಹೇಳು ಸವಿ, ಇಂಥಾ ಗಂಡನ ಜೊತೆ ಹೇಗೆ ಬಾಳೋದು? ನನಗಿನ್ನು ಸಾಧ್ಯವಿಲ್ಲ." ಶಿವಾನಿಯ ಕಥೆ ಕೇಳಿ ಸವಿತಳ ಕಣ್ಣಲ್ಲೂ ಹನಿಯಾಡುತ್ತಿತ್ತು.

ಬಾಗಿಲು ಟಕಟಕಿಸಿ ಒಳ ಬಂದ ಅಶ್ವಿನ್ ಇಬ್ಬರನ್ನೂ ಊಟಕ್ಕೆ ಎಬ್ಬಿಸಿದ. ಮತ್ತೆ ಸಂಕೋಚಕ್ಕೆ ಒಳಗಾದ ಶಿವಾನಿಯನ್ನು ಒತ್ತಾಯ ಮಾಡಿ ಟೇಬಲ್ಲಿಗೆ ಎಳೆದಳು ಸವಿತ. ಗೆಳತಿಯರ ಮಾತಿಗೆ ಅಡ್ಡಿಯಾಗದಂತೆ, ಅಶ್ವಿನ್ ತಾನೇ ಅನ್ನ, ಸಾರು, ಪಲ್ಯ ಮಾಡಿದ್ದ. ತಲೆ ತಗ್ಗಿಸಿ ಅನ್ನದ ಅಗುಳುಗಳನ್ನು ಹೆಕ್ಕುತ್ತಿದ್ದ ಶಿವಾನಿಯನ್ನು ಕಂಡು ಸವಿತಳಿಗೆ `ಅಯ್ಯೋ' ಅನಿಸಿತು. ಊಟ ಮುಗಿದ ಮೇಲೆ ಹೊರಟು ನಿಂತ ಗೆಳತಿಯನ್ನು ಮತ್ತೆ ಮಾತಿನಲ್ಲಿ ಕಟ್ಟಿಹಾಕಿ ಆ ದಿನ ಅಲ್ಲೇ ನಿಲ್ಲುವಂತೆ ಒಪ್ಪಿಸಿದಳು ಸಹೃದಯಿ ಸವಿತ. ಬಾಲ್ಯದಿಂದಲೂ ಅಕ್ಕಪಕ್ಕದ ಮನೆಗಳಲ್ಲಿದ್ದು ಬೆಳೆದ ಗೆಳತಿಯರು ಇಂದು ಮತ್ತೆ ಜೊತೆಯಾಗಿ ನಟ್ಟಿರುಳವರೆಗೆ ಹರಟಿದರು. ಮಾತಿನ ನಡುವೆ ಸವಿತ ಗೆಳತಿಯನ್ನು ಕೇಳಿದಳು, "ಶಿವಿ, ನೀನು ಅಪಾರ್ಟ್‍ಮೆಂಟಿನಲ್ಲಿ ಯಾಕಿರ್ಬೇಕು? ಇಲ್ಲಿಗೇ ಬಂದು ಬಿಡು. ಇದು ಹೇಗೂ ೪ ರೂಮಿನ ಮನೆ. ಇಲ್ಲೇ ಇರು, ಆಯ್ತಾ?" ಈ ಮಾತಿಗೆ ಶಿವಾನಿ ಮೆಚ್ಚಿದರೂ ಒಪ್ಪಲಿಲ್ಲ. ಆಕೆಯ ಆತ್ಮಾಭಿಮಾನ ಕಂಡ ಗೆಳತಿ ಹೆಮ್ಮೆಪಟ್ಟುಕೊಂಡಳು. ಮಾರನೇ ದಿನ ಶಿವಾನಿ ಹೊರಟಾಗ ಪತಿ-ಪತ್ನಿ ಜೊತೆಯಾಗಿ ಆಕೆಗೆ ಧೈರ್ಯ, ಸಮಾಧಾನ ಹೇಳಿ, ಯಾವುದೇ ಕಾರಣಕ್ಕೂ ಸಂಕೋಚವಿಲ್ಲದೆ ತಮ್ಮ ಸಹಾಯ ಕೋರಬಹುದೆಂದು ತಿಳಿಸಿದರು. ಸತ್ಯವನ್ನು ಮನೆಯಲ್ಲಿ ಹೇಳಬೇಕೆಂದೂ ಒತ್ತಾಯಿಸಿದರು.

ಸ್ವಾತಿಯನ್ನು ಕಾಣಲು ಹೋದ ಒಂದು ಭಾನುವಾರ, ವಸಂತ್ ಇಲ್ಲದ ಸಮಯ, ಅತ್ತೆ ಮತ್ತು ಮಾವ ಕೇಳಿದ ಪ್ರಶ್ನಾವಳಿಗಳಲ್ಲಿ ಸಿಲುಕಿ, ಆಕೆ ಒಳಗಿನ ಗುಟ್ಟನ್ನು, ತನ್ನೆದೆಯ ನೋವನ್ನು ಹೊರಚೆಲ್ಲಿದಳು. ನೊಂದುಕೊಂಡ ಆ ಹಿರಿಜೀವಗಳು, ಆಕೆಯು ವಿಚ್ಛೇದನ ಪಡೆಯಲಿಚ್ಛಿಸಿದರೆ ತಮ್ಮ ಒಪ್ಪಿಗೆಯೂ ಇದೆಯೆಂದರು. ಬೆಳೆದ ವಯಸ್ಸಿನ ಮಗನನ್ನು ತಿದ್ದುವುದು ಅಸಾಧ್ಯವೆಂದು ಅರಿತಿದ್ದು, ತಮ್ಮ ಮಗನ ಸಣ್ಣತನಕ್ಕೆ, ಕೀಳು ಅಭಿರುಚಿಗೆ ಆಕೆ ಬಲಿಯಾಗಬೇಕಿಲ್ಲವೆಂದು ಅವರ ನಂಬಿಕೆ. ಆಕೆಯ ಪರವಾಗಿಯೇ ತಾವು ನಿಲ್ಲುವುದಾಗಿಯೂ ಭರವಸೆ ನೀಡಿದ ಅವರು `ಹಾಗೇನಾದರೂ ಆದರೆ, ನಾವೂ ನಿನ್ನ ಜೊತೆ ಬರುತ್ತೇವೆ. ಆಗ ಮಗುವೂ ನಿನಗೇ ಸಿಗುತ್ತಾಳೆ' ಅಂದುಬಿಟ್ಟರು. ಆ ದಿನ ಶಿವಾನಿ ಮತ್ತೆ ಕಣ್ಣೀರಿಡುತ್ತಾ ಮನೆ ಬಿಟ್ಟಿದ್ದಳು, ಹಿರಿಯರ ಪ್ರೀತಿಗೆ ಮಾರುಹೋಗಿ.
ಕೋರ್ಟಿನಲ್ಲಿ ವಾದ-ವಿವಾದಗಳು ನಡೆಯುವ ದಿನ ಶಿವಾನಿಯ ಅತ್ತೆ, ಮಾವ, ಸವಿತ, ಅಶ್ವಿನ್ ಆಕೆಯ ಜೊತೆಗಾರರಾಗಿ ನಿಂತಿದ್ದರೆ ವಸಂತ್ ಜೊತೆ ಒಬ್ಬ `ಬಿಳಿ-ಹುಡುಗಿ' ನಿಂತಿದ್ದಳು. ಈ ವಿಚ್ಛೇದನ ದೊರೆತೊಡನೆ ಅವರಿಬ್ಬರು ಮದುವೆಯಾಗುವುದಾಗಿ ವಸಂತ್‍ನ ಸಹೋದ್ಯೋಗಿ ಹೇಳಿದ. ಇದೇ ಮಾತನ್ನು ಆಧಾರವಾಗಿಸಿಕೊಂಡ ಶಿವಾನಿಯ ವಕೀಲರು ಸಮರ್ಪಕವಾಗಿ ವಾದಮಾಡಿ, ತನ್ನ ಕಕ್ಷೀದಾರಳನ್ನು ಸಮರ್ಥಿಸಿಕೊಂಡರು. ವಸಂತ್ ಆಕೆಗೆ ಮಾಸಾಶನ ನೀಡುವಂತೆಯೂ, ಮನೆಯನ್ನೂ, ದೊಡ್ಡ ಬ್ಯಾಂಕ್ ಮೊತ್ತವನ್ನೂ ಆಕೆಗೆ ಒಪ್ಪಿಸುವಂತೆಯೂ ವಾದಿಸಿ, `ಮಗು ತಾಯಿಯ ಬಳಿಯೇ ಇರತಕ್ಕದ್ದೆಂದೂ, ಮನೆಯೆಂಬುದರ, ಸಂಸಾರವೆಂಬುದರ ಅರ್ಥವೇ ಗೊತ್ತಿಲ್ಲದ ಈತನಿಗೆ ಮಗುವಿನ ಸುಪರ್ದಿ ಬೇಡವೆಂದೂ' ಕೋರಿದರು; ಅಂತೆಯೇ ತೀರ್ಪು ನೀಡುವಂತೆ ನ್ಯಾಯಾಧೀಶರನ್ನು ಕೇಳಿಕೊಂಡರು. ಹಣಬಲದ ವಾದ ಮಾಡಿದ ವಸಂತ್‍ನ ವಕೀಲರ ಮಾತುಗಳು ತಂತಾನೇ ಉಡುಗಿದವು. ಮಧ್ಯಾಹ್ನದ ವಿರಾಮದ ಬಳಿಕ ಮತ್ತೆ ಸೇರಿದ ನ್ಯಾಯಾಲಯದಲ್ಲಿ ಮೌನ ತುಂಬಿತ್ತು. ನ್ಯಾಯಾಧೀಶರ ತೀರ್ಪು ಶಿವಾನಿಯ ಹೃದಯ ಹಗುರಾಗುವಂತೆ ಮಾಡಿತು. ಅಜ್ಜ-ಅಜ್ಜಿಯ ನಡುವೆ ಕುಳಿತಿದ್ದ ಮುದ್ದು ಸ್ವಾತಿಯನ್ನು ಮತ್ತೆ ಮತ್ತೆ ಮುತ್ತಿಟ್ಟಳು ಶಿವಾನಿ. ಫ್ರೀವೇಯಲ್ಲಿ ತನ್ನ ಅತ್ತೆ, ಮಾವ ಮತ್ತು ಸ್ವಾತಿಯನ್ನು ಹೊತ್ತ `ಕ್ಯಾಮ್ರಿ'ಯನ್ನು ಮನೆಯ ಕಡೆ ಓಡಿಸುತ್ತಿದ್ದ ಆಕೆಗೆ ತನ್ನ ಕಣ್ಣುಗಳಿಂದ ಇಳಿಯುತ್ತಿದ್ದ ಹನಿಗಳನ್ನು ತಡೆಯುವ ಮನಸ್ಸು ಬರಲಿಲ್ಲ.
(ಫೆಬ್ರವರಿ-೨೦೦೧)
(೨೦೦೧-ರಲ್ಲಿ ಮಂಗಳೂರಿನ ಹೃದಯವಾಹಿನಿ ನಿಯತಕಾಲಿಕ ನಡೆಸಿದ್ದ ಜಾಗತಿಕ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ದಟ್ಸ್'ಕನ್ನಡ.ಕಾಂನಲ್ಲಿ ೨೦೦೬ರ ಜೂನ್'ನಲ್ಲಿ ಪ್ರಕಟವಾಗಿತ್ತು.)

6 comments:

sunaath said...

ಭಾರತದಿಂದ ವಿದೇಶಕ್ಕೆ ತೆರಳಿದ ಭಾರತೀಯರ, ವಿಶೇಷವಾಗಿ ಹೆಣ್ಣುಮಕ್ಕಳ ಸಮಸ್ಯೆಯನ್ನು ಚೆನ್ನಾಗಿ ಬಣ್ಣಿಸಿದ್ದೀಯಮ್ಮ.
ಈ ಸಮಸ್ಯೆಗೊಂದು ವೈಯಕ್ತಿಕ solution ದೊರಕಿರುವದು ಅರ್ಥಪೂರ್ಣವಾಗಿದೆ. ಅಂದರೆ, ವಿದೇಶದಲ್ಲಿ ನೆಲೆಸಿರುವ ಎಲ್ಲ ಭಾರತೀಯರೂ ‘ಸ್ವ-ಅರ್ಥಿ’ಗಳೇ ಆಗಿರುವದಿಲ್ಲ; ಅಲ್ಲೂ ಸಹ
ನಮ್ಮ ನಮ್ಮವರಿಗೆ helping hand ಆಗುವ ಮಾನವರು ಇರುತ್ತಾರೆ ಎನ್ನುವದು ಒಂದು ಅರ್ಥವಾದರೆ, ಕತೆಯನ್ನು ಸಮಸ್ಯೆಯಿಂದ ಹೊರತಂದದ್ದರಿಂದ ಓದುಗನ ಮನಸ್ಸು ನಿರಾಳವಾಗುತ್ತದೆ.
ಜಾಗತಿಕ ಕಥಾಸ್ಪರ್ಧೆಯಲ್ಲಿ ಈ ಕತೆಗೆ ಪ್ರಥಮ ಬಹುಮಾನ ದೊರೆತಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ.
ಅಭಿನಂದನೆಗಳು.

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಕಾಕಾ.
ಎಲ್ಲ ಹೆಣ್ಣುಮಕ್ಕಳಿಗೂ ಇಂಥ ಸಮಸ್ಯೆ ಇರುತ್ತದೆಂದಲ್ಲ. ಇದ್ದರೆ, ಆಗ ಅವಳ ಪರಿಸ್ಥಿತಿ ಹೇಗಿರಬಹುದು ಅನ್ನುವ ಊಹೆಗೆ ಈ ಕತೆಯೊಂದು ಹಾದಿಯಾಯ್ತು.
ಪರಸ್ಪರ ಸಹಾಯ ಮಾಡುವ ಮನೋಭಾವ ಇಲ್ಲಿ ಹಲವರಲ್ಲಿ ಕಂಡಿದ್ದೇನೆ. ಅದನ್ನೂ ಕತೆಯೊಳಗೆ ಸೇರಿಸಿಕೊಂಡೆ.
ಕತೆಯ ಕೊನೆಯನ್ನು ಇನ್ನೂ ವಿಸ್ತರಿಸಬಹುದಿತ್ತು, ಅವಸರದಲ್ಲಿ ಮುಗಿಸಿದಂತಾಗಿದೆ- ಅನ್ನುವ ಪ್ರತಿಕ್ರಿಯೆಗಳೂ ಬಂದಿದ್ದವು, ದಟ್ಸ್'ಕನ್ನಡದಲ್ಲಿ ಪ್ರಕಟವಾಗಿದ್ದಾಗ. ಮತ್ತೆ ತಿದ್ದಲು ಹೋಗಿಲ್ಲ. ತಿದ್ದಬೇಕೆ? ತಿಳಿಸುತ್ತೀರ?

sunaath said...

ಜ್ಯೋತಿ,
ಈ ಕತೆಯನ್ನು ಒಂದು particular ದೃಷ್ಟಿಕೋನದಿಂದ ಬರೆಯಲಾಗಿದೆ.
ತಿದ್ದುವದಾದರೆ ಹೊಸ ಕತೆಯನ್ನೇ ಬರೆಯಬೇಕಾದೀತು. ಅದೊಂದು ನೀಳ್ಗತೆಯೇ ಆಗಬಹುದು.
ಈ ಕತೆಯಲ್ಲಿ ನಾಯಕಿಯ ಅಸಹಾಯಕತೆ ಹಾಗೂ ಗೆಳತಿಯ ಮೂಲಕ ಅವಳಿಗೆ ದೊರೆಯುವ ವೈಯಕ್ತಿಕ ಆಸರೆ ಈ ಅಂಶಗಳು ಕತೆಯನ್ನು ನಿರ್ಧರಿಸಿವೆ.
ನಾನು ನಿನಗೊಂದು ಘಟನೆಯನ್ನು ಹೇಳುವೆ:
ಧಾರವಾಡದ ಹೆಣ್ಣು ಮಗಳೊಬ್ಬಳು ಮದುವೆಯಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಳು. ಕೆಲಕಾಲದ ಬಳಿಕ ಅವಳ ಗಂಡ ಅವಳಿಗೆ ವಿಚ್ಛೇದನ ನೀಡಿದ. ಆ ಹುಡುಗಿ ಅಲ್ಲಿಯೇ ಉಳಿದು, ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡು, ತನ್ನ ಗಂಡನಿಗಿಂತ ಹೆಚ್ಚಿಗೆ ಸಂಪಾದನೆ ಮಾಡತೊಡಗಿದಳು.

ಇಂತಹ ಕೆಚ್ಚು ನನಗೆ ಸೇರುವ ಅಂಶ!

ಸುಪ್ತದೀಪ್ತಿ suptadeepti said...

ಕಾಕಾ,
ನಿಮ್ಮ ಮರುಪ್ರತಿಕ್ರಿಯೆಗೆ ವಂದನೆಗಳು.
ಹೌದು, ನಮ್ಮ ಹೆಣ್ಣುಮಕ್ಕಳು ವಂಚಿಸಿದವರ ಮುಂದೆಯೇ ತಲೆಯೆತ್ತಿ ನಿಂತು ಸೆಡ್ಡು ಹೊಡೆದು ಅವರಿಗಿಂತ ಚೆನ್ನಾಗಿ ಬಾಳಿದರೆಂದರೆ ಅದು ಸಾಧನೆಯೇ ಸರಿ. ಅದಕ್ಕೆ ಬೇಕಾದ ಕೆಚ್ಚು ಇಂದಿನ ಹುಡುಗಿಯರಲ್ಲಿ ಇದೆ ಅನ್ನಬಹುದು. ಈಗಿನವರು ಹಿಂದಿನವರಿಗಿಂತ ಧೈರ್ಯವಂತರು. ಅದು ಒಳ್ಳೆಯದೇ.

ಭಾರ್ಗವಿ said...

ಪ್ರಥಮ ಬಹುಮಾನ ಗಿಟ್ಟಿಸಿದ ಅಕ್ಕನಿಗೆ ಅಭಿನಂದನೆಗಳು.ಕಥೆ ತುಂಬಾ ಇಷ್ಟವಾಯ್ತು. ತುಂಬಾ ಚೆನ್ನಾಗಿ ಬಂದಿದೆ ಕೊನೆತನಕ. ತಿದ್ದುವ ಬದಲು ಕಾಕಾ ಅವರು ಹೇಳಿದಂತೆ ನೀಳ್ಗತೆ ಬರೆದು ಬೇಗ ಹಾಕಿ ಪ್ಲೀಸ್.

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಭಾರ್ಗವಿ.
ಇದನ್ನೇ ನೀಳ್ಗತೆ ಮಾಡುವ ಮನಸ್ಸಿಲ್ಲ. ಬೇರೆ ಕಥೆಗಳು ಇಲ್ಲೇ ಬರುತ್ತವೆ... ಆಗಲೇ Q-ನಲ್ಲಿ ಕೂತಿವೆ. ಆಯ್ತಾ?