ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday, 29 August, 2009

ಮರೆಯ ಮನ

ಕಣ್ಣಲ್ಲೊಂದು ಹನಿ, ಎದೆಯಲ್ಲೊಂದು ಮೊನೆ,
ಮೊಗದಲ್ಲಿ ಬಿರಿದರಳು ದುಂಡು ಮಲ್ಲಿಗೆ,
ಮನಸೇಕೊ ಕಡು-ಕಡು ಕೆಂಡ ಸಂಪಿಗೆ.

ಕಣ್ವರಾನಂದಕ್ಕೆ ನೀರಿನುಂಗುರದುರುಳು,
ಸಾವಿತ್ರಿಗಿತ್ತಲ್ಲಿ ಸಾವಿನರಮನೆ,
ಊರ್ಮಿಳೆಯ ತಾಪಕ್ಕೆ ಮೂರು ಸೆರೆಮನೆ.

ಜಾನಕಿಯ ವನವಾಸ ಕರ್ತವ್ಯದನಾಯಾಸ,
ಮತ್ತಶೋಕ ವನದಲ್ಲಿ ಶೋಕಮನ,
ಪಾಂಚಾಲಿಯಜ್ಞಾತ ರಕ್ತ-ಸಿಂಚನ.

ಅಕ್ಕನುಸಿರಿಗೆ ಉಸಿರು ಕೊಟ್ಟ ದೇವಗೆ ಹೆಸರು,
ಚೆನ್ನಮ್ಮನಲಿ ತುಂಬು ಸ್ಥೈರ್ಯದಾ ಸೆಲೆ,
ಬೇಗೆಯೊಳಗೊಲುಮೆಯೇ ನೆಮ್ಮದಿಯ ನೆಲೆ.

ಮರೆಯಲಾರದ ಮನಕೆ ಮರೆಯಬಾರದ ಕನಸು-
ಸುಪ್ತ-ಜಾಗೃತಿಯೊಳಗೆ ಮನಸು ಕೂಸು.
(೧೧-ಫ಼ೆಬ್ರವರಿ-೨೦೦೪)

2 comments:

sunaath said...

ಕೆಲವೊಮ್ಮೆ ಅಗ್ನಿಜ್ವಾಲೆ,
ಕೆಲವೊಮ್ಮೆ ಹೂವಮಾಲೆ,
ನಿನ್ನ ಕವನವು ನಿನಗೆ
ಸುಲಭ ಲೀಲೆ!

ಸುಪ್ತದೀಪ್ತಿ suptadeepti said...

ಕಾಕಾ,
ನಿಮ್ಮ ಲೀಲೆಯು ಏನು ಕಡಿಮೆ ನೆಲೆಯದು ಅಲ್ಲ
ಕಬ್ಬಿಣದ ಕಡಲೆಗಳ ಹುರಿದು ಪುಡಿಮಾಡಿ
ಪಂಚಕಜ್ಜಾಯ ಬಡಿಸುವಿರಿ ಬೆರೆಸಿ ಕೊಬ್ಬರಿ ಬೆಲ್ಲ
ಹೊಗಳಿದರೆ ನನಗಿಷ್ಟು ಕೊಂಬು, ನೋಡಿ.