ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May, 2008

ಹೃದಯದ ಭಾಷೆ

Wednesday, May 14, 2008

ಕಾರಿರುಳ ಸಾಂದ್ರತೆಯಲ್ಲಿ, ಅಲ್ಲಲ್ಲಿ ಉರಿವ ಚಿತೆಗಳ ಮಂದ ಬೆಳಕಿನಲ್ಲಿ, ಮಿನುಗುವ ಮಂಗಲಸೂತ್ರವನ್ನು ಕಂಡ ಆತ, "ನಿನ್ನ ಆ ತಾಳಿಯನ್ನೇ ಒತ್ತೆಯಿಟ್ಟು ಶವಸಂಸ್ಕಾರಕ್ಕೆ ಶುಲ್ಕ ತಾ" ಎಂದು ಅಬ್ಬರಿಸಿ ಪಟ್ಟು ಹಿಡಿದಾಗಲಷ್ಟೇ ಪತಿಯ ದನಿಯ ಪರಿಚಯವಾಯಿತೇ ಚಂದ್ರಮತಿಗೆ? ಅದುವರೆಗೆ..... "ಶುಲ್ಕ ತೆರದೆ ಸಂಸ್ಕಾರ ಮಾಡುವಂತಿಲ್ಲ" ಎಂದಾತ ತಿಳಿಸಿದಾಗಲಾಗಲೀ, "ನನ್ನ ಪಾಲಿನ ಶುಲ್ಕ ಬಿಟ್ಟುಕೊಡಬಲ್ಲೆ, ಒಡೆಯನಿಗೆ ಸೇರಬೇಕಾದ್ದನ್ನಾದರೂ ನೀನು ತೆರಲೇಬೇಕು" ಎಂದಾಗಲಾಗಲೀ ಅವಳಲ್ಲಿನ ಪತ್ನಿ ಏನಾಗಿದ್ದಳು? ಎಂದೂ ಅಗಲಿರದ ಆದರ್ಶ ಪತ್ನಿ ಅಲ್ಪಕಾಲದ ಕಣ್ಮರೆಯಿಂದ ಪತಿಯ ದನಿಯನ್ನೂ ಗುರುತಿಸದಾದಳೆ? ದುಃಖದ ಮಡುವಿನಲ್ಲಿ ಕರಗಿ ಕಳೆದುಹೋದ ಅವಳ ಮಾತೃಹೃದಯ ತನ್ನ ಪತ್ನಿತ್ವದ ತುಣುಕನ್ನೂ ಕಳೆದುಕೊಂಡಿತ್ತೆ?

"ಧರ್ಮ, ಅರ್ಥ, ಕಾಮ, ಮೋಕ್ಷ- ಈ ಯಾವ ಪುರುಷಾರ್ಥಗಳಲ್ಲೂ ನಿನ್ನನ್ನು ಮೀರಿ ನಡೆಯುವುದಿಲ್ಲ, ನಿನ್ನನ್ನು ಅಗಲಿ ಹೋಗುವುದಿಲ್ಲ, ನಿನ್ನ ಸಾಹಚರ್ಯ ಬಿಡುವುದಿಲ್ಲ." ಎಂದು ಭಾಷೆಕೊಟ್ಟು, ಆತ ತೋರಿದ ಏಳು ಹೆಜ್ಜೆಗಳನ್ನಿಟ್ಟು ಮಡದಿಯಾದವಳು- ಧರ್ಮಪತ್ನಿ. ಪುಣ್ಯಕಲಶಾಭಿಸೇಚನಗಳಿಂದ ಅವನೊಂದಿಗೆ ಮಂಗಳಸ್ನಾತಳಾಗಿ ಸಾಮ್ರಾಜ್ಞಿಯಾದವಳು- ಪಟ್ಟ ಮಹಿಷಿ. ಮಹಾಸಾಮ್ರಾಟನಾಗುವ ಮಗನನ್ನು ಹೆತ್ತವಳು- ರಾಜಮಾತೆ. ಅವಳು ಈಗೆಲ್ಲಿ? ರಘುವಂಶತಿಲಕ, ಧವಳಕೀರ್ತಿಧಾರಕ, ಚಕ್ರವರ್ತಿ ಹರಿಶ್ಚಂದ್ರ ಮಹಾರಾಜನ ಮನೋಮಂದಿರ ಬೆಳಗಿದ ಚಂದ್ರಮತಿ, ಅರಮನೆಯಲ್ಲೇ ಹುಟ್ಟಿ, ಬೆಳೆದು, ಬೇಕಾದ್ದನ್ನು ಉಂಡುಟ್ಟು, ಸೇರಿದ ಮನೆಯ ಕೀರ್ತಿಗೆ ಮಂಗಳದ ತಿಲಕವಿಟ್ಟು, ಕಾಲ ತಿರುಗಿ ಹೊರಳಿದಾಗ ಪಟ್ಟ ಬಿಟ್ಟು, ಚಿಂದಿಯುಟ್ಟು, ಪತಿಯಿಂದಲೇ ಮಾರಲ್ಪಟ್ಟು, ಊಳಿಗದವರನ್ನೂ ಉಳ್ಳವರನ್ನಾಗಿಸುತ್ತಿದ್ದಾಕೆ ತಾನೇ ಊಳಿಗದ ಆಳಾಗಿ, ಮಗನಿಗೆ ತಂಗಳು ಉಣಲಿಟ್ಟು ಕಣ್ಣೀರಿಟ್ಟಳೆ? ಧರ್ಮಕ್ಕೆ ಮೀರದಂತೆ ನಡೆಯುವ ನಿಯಮದಲ್ಲಿ ಬಂಧಿತಳಾಗಿ ಮಗನನ್ನು ಕಳೆದುಕೊಂಡು ದುಃಖದ ತಾಪದಲ್ಲಿ ಧರ್ಮವನ್ನು ಹಳಿದಳೆ?

ಇವೆಲ್ಲ ಉತ್ತರಿಸಲಾರದ ಪ್ರಶ್ನೆಗಳು. "ಚಂದ್ರಮತಿಯ ಪ್ರಲಾಪ" ಎಂಬುದು ಕಾವ್ಯ ವಿಸ್ಮಯ. ಅಲ್ಲಿ ಮಾತೃಹೃದಯದ ವಿಜ್ರಂಭಣೆಯಿದೆ, ಪತ್ನಿಯದ್ದಲ್ಲ. ಮಾತೃತ್ವ ಎಲ್ಲವನ್ನೂ ಮೀರಿದ ನೆಲೆ. ಒಂದು ಜೀವದ ಹುಟ್ಟಿನೊಂದಿಗೆ ಮರುಹುಟ್ಟು ಪಡೆವ ಹಿರಿಯ ಜೀವ- ಮಾತೆ. ಅಲ್ಲಿಂದ ಆ ಹೆಣ್ಣಿನ ಜೀವನದ ಪ್ರಮುಖವಾದೊಂದು ಮುಖ ಅನಾವರಣಗೊಳ್ಳುತ್ತಾ ಹೋಗುತ್ತದೆ. ಅದುವರೆಗೆ ಮಗಳಾಗಿ, ಅಕ್ಕ-ತಂಗಿಯಾಗಿ, ಮಡದಿ-ಸೊಸೆಯಾಗಿ ಇದ್ದಾಕೆ ಮಾತೆಯೂ ಆದಾಗ ಹಲವಾರು ನೆಲೆಗಳಲ್ಲಿ ಆಕೆಯ ದೃಷ್ಟಿಕೋನ ಬದಲಾಗುತ್ತದೆ.

ಮಾತೃಸ್ಥಾನ ಪಡೆದ ಹೆಣ್ಣು ತನ್ನ ತಾಯಿ-ಅತ್ತೆಯರನ್ನು ಇನ್ನೂ ಹೆಚ್ಚಾಗಿ ಗೌರವಿಸಬಲ್ಲಳು. ಅವರ ಭಾವನಾನೆಲೆಯ ಹಲವಾರು ಸೂಕ್ಷ್ಮ ಎಳೆಗಳನ್ನೂ ಅರಿಯಬಲ್ಲಳು. ಪತಿಯ ಕಡೆಗೆ ಒಲವಿನೊಂದಿಗೆ ಮಮತೆಯಿಂದಲೂ ನೋಡಬಲ್ಲಳು. ಜೊತೆಗೆ, ತನಗೀ ಮಾತೃತ್ವವೆಂಬ ಉನ್ನತ ಸ್ಥಾನ ದೊರೆಯಲು ಕಾರಣೀಭೂತನಾದ ಆತನಲ್ಲಿ ಹೆಚ್ಚಿನ ಗೌರವ ಹೊಂದಬಲ್ಲಳು. ಸಾಮಾನ್ಯವಾಗಿ ಹೆಣ್ಣಿನಲ್ಲಿರುವ ಸೂಕ್ಷ್ಮಗ್ರಾಹಿತ್ವಕ್ಕಿಂತಲೂ ಮೇಲ್ಮಟ್ಟದ ಸೂಕ್ಷ್ಮತೆ ಹೊಂದುವಳು. ತನ್ನ ಕಂದನ ಬೇಕು-ಬೇಡಗಳಿಗೆ ಸ್ಪಂದಿಸುವ ಅವಳ ಅಗೋಚರ ಶಕ್ತಿಗೆ ಬೆರಗಾಗದವರುಂಟೆ! ಅವಳ ಈ ಶಕ್ತಿ `ಮಾತೃ ಹೃದಯ'. ಜನ್ಮತಃ ಸಿದ್ಧಿಸಿದ ಈ ಶಕ್ತಿ ಕೆಲವರಲ್ಲಿ ಜಾಗೃತವಾಗುವುದೇ ಇಲ್ಲ. ಇನ್ನು ಕೆಲವರಲ್ಲಿ ಕಾಲಕ್ರಮೇಣ ಬಲಿತರೆ, ಮತ್ತೆ ಕೆಲವರಲ್ಲಿ ಸಮಯ ಸಂದಂತೆ ಸವೆಯುತ್ತದೆ. ಇವು ಲೋಕರೀತಿ. ಮಾತೃಹೃದಯ ಮಾತ್ರ ನಿಗೂಢ, ಅವಿಚ್ಛಿನ್ನ ಶಕ್ತಿ. `ಹೃದಯ ಭಾಷೆ'ಯ ಮೊದಲ ಹೆಜ್ಜೆ ಅಲ್ಲೇ, ಮಾತೆಯ ಮನೋಮಂಟಪದಲ್ಲಿ.

ಅಂಕುರಿಸಿದ ಜೀವದ ಮೊದಲ ಮಿಡಿತ ಅವಳಿಗಲ್ಲದೆ ಇನ್ನಾರಿಗೂ ತಿಳಿಯದಂತಹ ಸಂರಕ್ಷಿತ ಕೋಟೆಯಲ್ಲಿ, ಹಗಲೂ ಇರುಳೂ ತನ್ನ ಇಂದ್ರಿಯಾತೀತ ಸಂವೇದನೆಗಳಿಂದ ಸಂಭಾಷಿಸಿ, `ಕಂದನಿಗಾಗಿಯೇ ತನ್ನ ಜೀವ' ಎಂಬಷ್ಟರ ಮಟ್ಟಿಗೆ ತನ್ಮಯಳಾಗುವಳು, ತಾಯಿಯಾಗುವವಳು. ತುಡಿಯುವ ಜೀವವನ್ನು ಕೂಸಾಗಿಸಿ ಪ್ರೀತಿಯಿಂದ ಪ್ರೀತಿಸುವ ಕೈಗಳಿಗೆ ನೀಡುವಳು. ಕಾತರತೆಯಿಂದ ಕಾಯುವ ಹಿರಿಯ ಜೀವಗಳಿಗೆ `ಅಜ್ಜಿ-ಅಜ್ಜ'ನ ಪಟ್ಟ ದೊರಕಿಸುವಳು. "ಇವೆಲ್ಲ ಎಲ್ಲರಿಗೂ ತಿಳಿದಿರುವ ವಿಷಯವೇ, ಹೊಸತೇನು?" ಎಂದಿರಾ? ಸರಿ! ಈ ಮಾತೃಹೃದಯದ ಒಳಹೊಕ್ಕು ನೋಡಬಲ್ಲವರು ಯಾರು? ಪರಕಾಯಪ್ರವೇಶ ಕಲೆಯನ್ನು ಬಲ್ಲವರು, ಅಜನ ಪ್ರತಿಸ್ಪರ್ಧಿಗಳು, ಭೂಲೋಕದ ಬ್ರಹ್ಮರು; ಕವಿಗಳು. ಅಂಥ ಕವಿ ಪರಂಪರೆಯಲ್ಲಿ ಮಹಾಮಹಿಮರು ಆಗಿಹೋಗಿದ್ದಾರೆ, ಘಟಾನುಘಟಿಗಳು ಸಾಗಿಬಂದಿದ್ದಾರೆ. ಅಂತಹ ಶ್ರೇಷ್ಠ ಕೃತಿಗಳಲ್ಲೊಂದಾದ ರಾಮಾಯಣವನ್ನೂ ವಾಲ್ಮೀಕಿಯನ್ನೂ ಬಲ್ಲದ ಭಾರತೀಯನಿಲ್ಲ. ಆ ಮಹಾಕವಿ ಮಾತೃಹೃದಯದ ಸೂಕ್ಷ್ಮತೆಯ ಚಿತ್ರಣವನ್ನು ನೀಡಿದ ಸಂದರ್ಭಗಳಲ್ಲಿ ಎರಡನ್ನು ಕವಿ ಡಾ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು 1998ರ ಜೂನ್'ನಲ್ಲಿ ಒಮ್ಮೆ ಆಸಕ್ತರಿಗೆ ವಿವರಿಸಿದರು. ಆ ಎರಡು ಸಂದರ್ಭಗಳು ಹೀಗಿವೆ:

ಮೊದಲನೆಯದು, ಶ್ರೀರಾಮನಿಗೆ ಯೌವ್ವರಾಜ್ಯಾಭಿಷೇಕದ ನಿಶ್ಚಯವಾದಂದು. ಈ ಕರ್ಣಾನಂದಕರ ವಾರ್ತೆ ಅರಮನೆಯಲ್ಲೆಲ್ಲ ಹಬ್ಬಿತ್ತು. ಪ್ರಮುಖವಾಗಿ ಕೌಸಲ್ಯೆಯ ಅಂತಃಪುರ ವಿಶೇಷ ಸಡಗರದಲ್ಲಿತ್ತು. ಪಟ್ಟಮಹಿಷಿ ಕೌಸಲ್ಯಾದೇವಿ ರಾಜಮಾತೆಯಾಗುವಳು. ಇದಕ್ಕಿಂತ ಸಂಭ್ರಮ ಬೇಕೆ? ಇಂತಹ ವಾರ್ತೆ ಸುತ್ತೆಲ್ಲ ಹಬ್ಬಿರುವ ಹೊತ್ತು, ಪ್ರಪ್ರಥಮವಾಗಿ ಮಾತೃದೇವತೆಯ ಚರಣ ಘ್ರಾಣಿಸಿ ಆಶೀರ್ವಾದ ಪಡೆಯಲು ಬಂದ ಮರ್ಯಾದಾಪುರುಷೋತ್ತಮ. ಪತ್ನೀಸಹಿತನಾಗಿ ಪೊಡಮಟ್ಟುಕೊಂಡವನನ್ನು ಮೇಲೆತ್ತಿ, ನೆತ್ತಿಸವರಿ, ತುಂಬಿನಿಂತ ಕಂಗಳಲ್ಲಿ ಆತನ ಬಿಂಬಪ್ರತಿಬಿಂಬಗಳನ್ನು ನಿಲ್ಲಿಸಿಕೊಂಡ ಆಕೆ ಮೊದಲಾಗಿ ಕೇಳಿದ್ದೇನು! "ನೀನು ಉಂಡೆಯಾ, ಕಂದ?" ತಾಯಿಯಲ್ಲದೆ ಇನ್ನಾರೂ ಈ ಪ್ರಶ್ನೆ ಕೇಳಲಾರರು, ಅದೂ ಇಂಥಾ ಉನ್ಮತ್ತ ಸಂದರ್ಭದಲ್ಲಿ. ಪಕ್ಕದಲ್ಲಿ ಕೂರಿಸಿಕೊಂಡು ತನ್ನ ಕೈಯಾರ ಮಗ-ಸೊಸೆಗೆ ಉಣಬಡಿಸಿದಳು ಪಟ್ಟದರಸಿ, ಒಬ್ಬ ಮಾತೆಯಾಗಿ. ಆ ಸೂಕ್ಷ್ಮವನ್ನು ಹಿಡಿದ ಕವಿ ಧನ್ಯ.

ಎರಡನೆಯದು, ಜನನಿಬಿಡ ಅಯೋಧ್ಯೆಯನ್ನು ತೊರೆದು ಚಿತ್ರಕೂಟದಲ್ಲಿ ಸೀತಾಸಹಿತ ರಾಮ-ಲಕ್ಷ್ಮಣರು ಕುಟೀರ ಹೂಡಿದ್ದಾಗ.... ಅಣ್ಣನ ನೆಲೆಯನ್ನು ಪತ್ತೆಹಚ್ಚಿದ ಭ್ರಾತೃಪ್ರೇಮಿ ಭರತ ಅಲ್ಲಿಗೆ ಹೊರಟ, ಹಿಂಬಾಲಿಸಿದ ಪರಿವಾರ ಸಹಿತ. ದುಡುಕಿದ ತಮ್ಮನನ್ನು ಸುಮ್ಮನಾಗಿಸಿ, ಚಿಕ್ಕವರನ್ನು ಚೆಂದದಿಂದ ಸ್ವಾಗತಿಸಿ, ಪ್ರೀತಿಯಿಂದ ಆಲಂಗಿಸಿ, ಮಾತೆಯರಿಗೆ ಮಣಿದು, ತಂದೆಯ ಅಗಲಿಕೆಗೆ ನೊಂದು, ಶ್ರಾದ್ಧಕ್ರಿಯೆಗಾಗಿ ವಸಿಷ್ಠರಿಂದ ದೀಕ್ಷಿತನಾದ ಶ್ರೀರಾಮ. ಕ್ರಿಯಾವಿಧಿಗಳನ್ನೆಲ್ಲ ಪೂರೈಸಿ, ಮತ್ತೆ ಮಾತೆಯರ ಚರಣಗಳಿಗೆ ಎರಗಿದವನನ್ನು ಮೇಲೆತ್ತಿ ತಬ್ಬಿದರು, ಆಶೀರ್ವದಿಸಿದರು. ಕೊನೆಯಲ್ಲಿ ನಿಂತಿದ್ದ ಕೌಸಲ್ಯೆಗೆ ಮಗನ ಮುಖ ಕಾಣುತ್ತಿಲ್ಲ, ಕಂಬನಿಯ ಪೊರೆಯಾವರಿಸಿದೆ. ಪಾದಕ್ಕೆರಗಿದವನನ್ನು ಹೇಗೋ ಎತ್ತಿಕೊಂಡಳು, ನೆತ್ತಿ ಸವರಿದಳು, ಹಾರೈಕೆ ಗುಣುಗಿದಳು. ಆಗಲೇ ಅವನ ನಾರುಮಡಿಗೆ ಮೆತ್ತಿದ್ದ ಮಣ್ಣನ್ನು ಕಂಡು ಮೆಲುವಾಗಿ ಕೊಡಹಿದಳು. ನೆರೆದಿದ್ದ ಅಷ್ಟೂ ಮಂದಿಯ ದೃಷ್ಟಿಗೆ ಕಾಣದಿರುವಂತೆ, ಮರೆಯಲ್ಲಿ ನಾಜೂಕಾಗಿ ಸವರಿದಳು. ಮಗನ ಸ್ಥಿತಿಗೆ ತಾಯಿಯ ಹೃದಯ ಚೀರಿರಬೇಕು. ಅರಮನೆಯಲ್ಲಿ ಸಿಂಹಾಸನದ ಮೇಲೆ ಇರಬೇಕಾದವನು ಇಲ್ಲಿ ಕಾನನದ ಕಲ್ಲ ಮೇಲೆ! ಕೃಷ್ಣಾಜಿನದ ಮೇಲೆ ಕುಳಿತು ನಿತ್ಯಕ್ರಿಯಾವಿಧಿಗಳನ್ನು ನಡೆಸಬೇಕಾದವನು, ಇಲ್ಲಿ ಮಣ್ಣಿನಲ್ಲಿ! ಯಾವುದೇ ತಾಯಿಯ ಹೃದಯ ಇದನ್ನು ಸಹಿಸದು, ಆದರೆ ವಿಧಿಯಿಲ್ಲ. ಕಣ್ಣಿಗೆ ಕಂಡ ಮೃತ್ತಿಕೆಯನ್ನು ತೊಡೆಯಬಲ್ಲಳು, ಅಷ್ಟೇ.

ಇಂತಹ ಅನೇಕಾನೇಕ ಉದಾಹರಣೆಗಳನ್ನು ನಮ್ಮ ಮಹಾಕಾವ್ಯಗಳಲ್ಲಿ ಕಾಣಬಹುದು. ಕುಂತಿ ತನ್ನ ಭೀಮನಿಗೆ ವಿಶೇಷವಾಗಿ ತಿಂಡಿ-ತೀರ್ಥಗಳನ್ನು ತಯಾರಿಸಿ ನೀಡುತ್ತಿದ್ದಳು, ಆತ ಎಲ್ಲರಂತಲ್ಲವೆಂದು ಆಕೆಗೊಬ್ಬಳಿಗೇ ಗೊತ್ತು. ಬಕಾಸುರ ಸಂಹಾರಕ್ಕೆ ಭೀಮನನ್ನು ಕಳುಹಲು ಮುಂದಾದಾಗ, ಅವಳದು ತ್ಯಾಗಬುದ್ಧಿಯಲ್ಲ, ಭೀಮನಿಗಾಗಿ ಸ್ವಾರ್ಥ. ಬಕಾಸುರನಿಗಾಗಿ ನೀಡಲ್ಪಡುವ ಅಷ್ಟೂ ಆಹಾರ ತನ್ನ ಭೀಮನ ಹೊಟ್ಟೆಯನ್ನು ಒಮ್ಮೆ ತಂಪಾಗಿಸಬಲ್ಲದೆಂದು ಅವಳ ಹಂಚಿಕೆ, ಜೊತೆಗೆ ಅವನ ಅದಮ್ಯ ಶಕ್ತಿಯಲ್ಲಿನ ನಂಬಿಕೆ. ಕಂದನಿಗಾಗಿ ತಾಯಿ ಏನೂ ಮಾಡಬಲ್ಲಳಲ್ಲವೆ? ಅರ್ಜುನ ದ್ರೌಪದಿಯನ್ನು ಗೆದ್ದು ತಂದು, ತಾನೊಂದು ಅಮೂಲ್ಯ ಭಿಕ್ಷೆ ತಂದಿರುವುದಾಗಿ ಹೇಳಿದಾಗ, `ಎಲ್ಲರೂ ಸಮನಾಗಿ ಹಂಚಿಕೊಳ್ಳಿ' ಎಂದು ನುಡಿದದ್ದೂ ಆ ಹೃದಯವೇ, ನಂತರ ನೊಂದುಕೊಂಡಿದ್ದೂ ಅದೇ. ಆದರೆ ಇದೇ ಹೃದಯ ತನ್ನ ಚೊಚ್ಚಲ ಕಂದನನ್ನು ಹೇಗೆ ದೂರ ಮಾಡಿತು? ಅದು ಕವಿಯ ಕಾವ್ಯನೈಪುಣ್ಯತೆ ಎನ್ನೋಣವೆ? ಬೇಡ, ಈಗಲೂ ನಮ್ಮಲ್ಲೆಷ್ಟು ಹೆಣ್ಣುಮಕ್ಕಳು ತಮ್ಮ ಅನೈತಿಕ ಸಂತಾನವನ್ನು ಸಮಾಜದ ನಿಂದೆಗಳಿಗೆ ಹೆದರಿ ತ್ಯಜಿಸುವುದಿಲ್ಲ! ಇವರಿಗೆಲ್ಲ ಕುಂತಿ ಹಿರಿಯಕ್ಕ ಅನ್ನೋಣವೆ?

ಮಾತೃತ್ವದ ಮಾತು ಬಂದಾಗ ಗಾಂಧಾರಿಯನ್ನು ಹೊರಗುಳಿಸುವಂತಿಲ್ಲ. ಮಹಾಸಾಧ್ವಿ, ಪತಿವ್ರತೆ ಎಂದೆಲ್ಲ ಪಟ್ಟ ಹೊತ್ತ ಆಕೆ ಮಾತೆಯೂ ಹೌದು. ವಿಶ್ಲೇಷಣೆಗಳೇನೇ ಇರಲಿ, ಸುಯೋಧನಾದಿ ನೂರು ಮಂದಿ ಗಂಡುಮಕ್ಕಳ ತಾಯಿ ಎನಿಸಿಕೊಂಡಾಕೆ, ದುಶ್ಯಲೆಯ ಮಾತೆ. ತನ್ನ ಕರುಳಕುಡಿಗಳನ್ನು ಒಮ್ಮೆಯೂ ಕಣ್ಣಿಂದ ನೋಡಲಾರದ ಧರ್ಮಬಂಧನದಲ್ಲಿ ಸಿಲುಕಿದಾಕೆ. ಅವಳ ಮನಸ್ಸು ಅದೆಷ್ಟು ತುಡಿದಿರಬಹುದು! ಆದರೆ, ಅಷ್ಟು ವರ್ಷಗಳ ತನ್ನ ತಾಪಸ ಶಕ್ತಿಯನ್ನೆಲ್ಲ ಒಬ್ಬ ಮಗನಿಗೆ ಧಾರೆಯೆರೆಯಲು ಸಿದ್ಧಳಾಗಿಸಿದ್ದು ಅವಳ ಮಾತೃತ್ವ. ಆತನ ಹಠಸಾಧನೆಗಾಗಿ ಬೆಳೆದುನಿಂತ ಶೂರ-ವೀರ-ಪರಾಕ್ರಮಿಯಾದ ಮಗನನ್ನು ನಿರ್ವಸ್ತ್ರನಾಗಿ ಕಣ್ಣೆದುರು ಬರಹೇಳಿದ್ದಳಾಕೆ. ಶ್ರೀಕೃಷ್ಣನ ಕೈವಾಡದಿಂದ ಮಗನನ್ನು ಸಂಪೂರ್ಣ ವಜ್ರದೇಹಿಯಾಗಿಸಲು ಸಾಧ್ಯವಾಗದೇ ಹೋದಾಗ ನೊಂದುಕೊಂಡಳೆ? ವಿಧಿಯನ್ನು ಹಳಿದಳೆ? ಒಪ್ಪಿಕೊಂಡಳೆ? ಹಾಗೆಯೇ, ವನವಾಸ, ಅಜ್ಞಾತವಾಸಗಳಿಗೆಂದು ತೆರಳಿದ ದ್ರೌಪದಿ ತನ್ನೈದೂ ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟು ಹೊರಟಳಲ್ಲ, ಆಕೆಯಲ್ಲಿನ ತಾಯಿಯನ್ನು ಕವಿ ಗಮನಿಸಲೇ ಇಲ್ಲ. ಸುಭದ್ರೆಗಾದರೋ ತನ್ನ ಅಣ್ಣನ ಆಸರೆಯಿತ್ತು, ಮಗನ ಸಹವಾಸವಿತ್ತು. ದ್ರೌಪದಿಗೆ ಏನಿತ್ತು? ಕೊನೆಯಲ್ಲಿ ಮಗ ಅಭಿಮನ್ಯುವನ್ನು ಕಳೆದುಕೊಂಡ ಅರ್ಜುನ ಗೋಳಿಟ್ಟು ಅತ್ತದ್ದನ್ನು ಕಂಡ ದ್ರೌಪದಿಗೆ ತನ್ನೈದು ಮಕ್ಕಳಿಗಾಗಿ ಭೀಮನ ಹೊರತಾಗಿ ಯಾರೂ ಮರುಗದಾಗ ಹೇಗಾಗಿರಬೇಡ! ಇಲ್ಲೆಲ್ಲ ಕವಿ ಎತ್ತಿ ಹಿಡಿದದ್ದು ಕಲಿತನವನ್ನು, ಧರ್ಮವನ್ನು; ಮಾನವೀಯತೆಗೇ ಸ್ಥಾನವಿರಲಿಲ್ಲ, ಮತ್ತೆ ಮಾತೃತ್ವಕ್ಕೆಲ್ಲಿ!

ಇಂದಿನ ಸಮಾಜದಲ್ಲಿ, ಗಡಿಬಿಡಿಯ ಜೀವನದಲ್ಲಿ, ಎಷ್ಟು ಮಾತೆಯರಿಗೆ ತಮ್ಮ ಕರುಳಕುಡಿಗಳನ್ನು ಮುದ್ದಿಸಲು ಸಮಯವಿರುತ್ತದೆ? ಬೆಳಗ್ಗೆದ್ದು ಅವರನ್ನೂ ಹೊರಡಿಸಿಕೊಂಡು, ಬಹುತೇಕ ಅಟ್ಟಿಕೊಂಡು, ಹೊರನಡೆದರೆ ಸಂಜೆ ಹಿಂದಿರುಗಿದಾಗ ರಾತ್ರೆಯ ಊಟ ಮತ್ತು ಮರುದಿನದ ತಯಾರಿಗಳಿಗೆ ಅವಳ ಸಮಯ ಮೀಸಲು. ಇಂತಹ ಯಾಂತ್ರಿಕತೆಯಲ್ಲಿ ಕಳೆದುಹೋಗುವವರು ಯಾರು? ನಿಮ್ಮ ಹೃದಯದ ಭಾಷೆ ಯಾವುದು? ಎದೆಯ ಕದ ತಟ್ಟಿ ನೋಡಿ.
(ಮೇ-೨೦೦೨)
(ಡೆಟ್ರಾಯಿಟ್ ಪಂಪ ಕನ್ನಡ ಕೂಟದ ಸಹಯೋಗದೊಂದಿಗೆ, ಅಮೆರಿಕಾ ಕನ್ನಡ ಕೂಟಗಳ ಆಗರ- ಅಕ್ಕ -ದ ಎರಡನೇ ವಿಶ್ವಕನ್ನಡ ಸಮ್ಮೇಳನ-೨೦೦೨ರ ಸ್ಮರಣ ಸಂಚಿಕೆ 'ಸ್ಪಂದನ'ದಲ್ಲಿ ನನ್ನೀ ಲೇಖನ ಪ್ರಕಟವಾಗಿತ್ತು.)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 8:45 PM
Labels:

8 ಪತ್ರೋತ್ತರ:
Harish - ಹರೀಶ said...
ಚೆನ್ನಾಗಿ ಬಂದಿದೆ... ಆದರೆ ಒಂದು ವಿಷಯ...
"ಧರ್ಮ, ಅರ್ಥ, ಕಾಮ, ಮೋಕ್ಷ- ಈ ಯಾವ ಪುರುಷಾರ್ಥಗಳಲ್ಲೂ ನಿನ್ನನ್ನು ಮೀರಿ ನಡೆಯುವುದಿಲ್ಲ, ನಿನ್ನನ್ನು ಅಗಲಿ ಹೋಗುವುದಿಲ್ಲ, ನಿನ್ನ ಸಾಹಚರ್ಯ ಬಿಡುವುದಿಲ್ಲ." ಎಂದು ಬರೆದಿದ್ದೀರಿ."ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಾಮಿ" ಎಂದು ಹೇಳಲ್ಪಟ್ಟಿದೆಯೇ ವಿನಹ ಮೋಕ್ಷದ ಬಗ್ಗೆ ಎಲ್ಲೂ ಪ್ರಸ್ತಾಪಿಸಲಾಗಿಲ್ಲ. ಆ ರೀತಿ ಹೇಳುವುದು, ಭಾಷೆ ಕೊಡುವುದು ಅಸಾಧ್ಯ ಕೂಡ.. ಅಲ್ಲವೇ?
May 14, 2008 9:48 PM

ಸುಪ್ತದೀಪ್ತಿ suptadeepti said...
ನಮಸ್ಕಾರ ಹರೀಶ್, ಸ್ವಾಗತ.
ತಾತ್ವಿಕವಾಗಿ ಇದು ಅಸಾಧ್ಯ. ಆದರೆ, ನಮ್ಮ ನಂಬಿಕೆಯಂತೆ- 'ಪತಿ-ಪತ್ನಿ ಸಂಬಂಧ ಏಳೇಳು ಜನ್ಮಗಳದ್ದು ಅಂತಾದಾಗ, ಮೋಕ್ಷದ ದಾರಿಯೂ ಜೊತೆಯಲ್ಲೇ ಸಾಗಬೇಕಾದ ಹಾದಿಯಾಗಿರುವಾಗ, ಮೋಕ್ಷದಲ್ಲೂ ಜೊತೆಯಾಗಿರುವುದು ಯಾಕೆ ಸಾಧ್ಯವಿಲ್ಲ'- ಅನ್ನುವ ತರ್ಕದ ಮೇಲೆ ಹಾಗೆ ಬರೆದೆ. ಮದುವೆಯ ಮಂತ್ರದ ಆಧಾರದ ಮೇಲಲ್ಲ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.
May 14, 2008 10:13 PM

sunaath said...
ಜ್ಯೋತಿ,
ಮಾತೃಹೃದಯದ ಬಗೆಗೆ ಬಹಳ ಚೆನ್ನಾಗಿ ಬರೆದಿರುವಿ.

ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಅಸಿಸ್ಟಂಟ ಕಮಿಶನರ ಆದಾಗಿನ ಘಟನೆಯೊಂದನ್ನು ನೀನೂ ಓದಿರಬಹುದು. ಅವರು ತಮ್ಮ ಮನೆಯಿಂದ ಕಚೇರಿಗೆ ಹೊರಡುವ ತರಾತುರಿಯಲ್ಲಿದ್ದಾರೆ. ಅವರ ತಾಯಿ "ಅಯ್ಯೊ, ಮಗೂ ಎಲ್ಹೋಯ್ತು? ಸರಿಯಾಗಿ ಊಟಾನೇ ಮಾಡ್ಲಿಲ್ಲ" ಎಂದು ಇವರನ್ನು ಹುಡುಕುತ್ತಿದ್ದರಂತೆ!
-ಸುನಾಥಕಾಕಾ
May 15, 2008 10:27 AM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಕಾಕಾ.
ಮಾಸ್ತಿಯವರ ಅಮ್ಮನ ಬಗ್ಗೆ ಗೊತ್ತಿರಲಿಲ್ಲ. ಆ ತಲೆಮಾರಿನ, ಮತ್ತು ನಂತರದ ಒಂದೆರಡು ತಲೆಮಾರಿನ ಬಹುತೇಕ ಅಮ್ಮಂದಿರು ಇದ್ದದ್ದೇ/ ಇರುವುದೇ ಹಾಗೆ, ಅಲ್ಲವೆ?
May 15, 2008 11:10 AM

ತುರಂಗ said...
ವಾಲ್ಮೀಕಿರಾಮಾಯಣದ ಅಯೋಧ್ಯಾಕಾಂಡದ ಎರಡು ಸಂದರ್ಭಗಳ ಬಗ್ಗೆ ನೀವು ಬರೆದಿರುವುದು ಸ್ವಾರಸ್ಯವಾಗಿದೆ. ಆದರೆ, ನನ್ನ ರಾಮಾಯಣದ ಆವೃತ್ತಿಯಲ್ಲಿ ಇವನ್ನು ಈ ರೀತಿ ಹೇಳಿಲ್ಲ. ಮೊದಲನೆಯ ಸಂದರ್ಭದ ಶ್ಲೋಕಗಳು ಹೀಗಿವೆ -(ಅಯೋಧ್ಯಾಕಾಂಡನ ನಾಲ್ಕನೆಯ ಸರ್ಗದ ಶ್ಲೋಕಗಳು)
ಇತ್ಯುಕ್ತಃ ಸೋಽಭ್ಯನುಜ್ಞಾತಃ ಶ್ವೋಭಾವಿನ್ಯಭಿಷೇಚನೇ
ವ್ರಜೇತಿ ರಾಮಃ ಪಿತರಮಭಿವಾದ್ಯಾಭ್ಯಯಾದ್‍ಗೃಹಮ್
ಪ್ರವಿಶ್ಯ ಚಾತ್ಮನೋ ವೇಶ್ಮ ರಾಜ್ಞೋದ್ದಿಷ್ಟೇಽಭಿಷೇಚನೇ
ತತ್ಕ್ಷಣೇನ ಚ ನಿಷ್ಕ್ರಮ್ಯ ಮಾತುರಂತಃಪುರಂ ಯಯೌ
ತತ್ರ ತಾಂ ಪ್ರವಣಾಮೇವ ಮಾತರಂ ಕ್ಷೌಮವಾಸಿನೀಮ್
ವಾಗ್ಯತಾಂ ದೇವತಾಗಾರೇ ದದರ್ಶಾಯಾಚತೀಂ ಶ್ರಿಯಮ್
ಪ್ರಾಗೇವ ಚಾಗತಾ ತತ್ರ ಸುಮಿತ್ರಾ ಲಕ್ಷ್ಮಣಸ್ತಥಾ
ಸೀತಾ ಚಾನಾಯಿತಾ ಶ್ರುತ್ವಾ ಪ್ರಿಯಂ ರಾಮಾಭಿಷೇಚನಮ್
ತಸ್ಮಿನ್ ಕಾಲೇ ಹಿ ಕೌಸಲ್ಯಾ ತಸ್ಥಾವಾಮೀಲಿತೇಕ್ಷಣಾ
ಸುಮಿತ್ರಯಾನ್ವಾಸ್ಯಮಾಣಾ ಸೀತಯಾ ಲಕ್ಷ್ಮಣೇನ ಚ
ಶ್ರುತ್ವಾ ತು ಪುಷ್ಯೇ ಪುತ್ರಸ್ಯ ಯೌವರಾಜ್ಯಾಭಿಷೇಚನಮ್
ಪ್ರಾಣಾಯಾಮೇನ ಪುರುಷಂ ಧ್ಯಾಯಮಾನಾ ಜನಾರ್ದನಮ್
ತಥಾ ಸನಿಯಮಾಮೇವ ಸೋಽಭಿಗಮ್ಯಾಭಿವಾದ್ಯ ಚ
ಉವಾಚ ವಚನಂ ರಾಮೋ ಹರ್ಷಯಂಸ್ತಾಮನಿಂದಿತಾಮ್
ಅಂಬ ಪಿತ್ರಾ ನಿಯುಕ್ತೋಽಸ್ಮಿ ಪ್ರಜಾಪಾಲನಕರ್ಮಣಿ
ಭವಿತಾ ಶ್ವೋಽಭಿಷೇಕೋಽಯಂ ಯಥಾ ಮೇ ಶಾಸನಂ ಪಿತುಃ
ಸೀತಯಾಪ್ಯುಪವಸ್ತವ್ಯಾ ರಜನೀಯಂ ಮಯಾ ಸಹ
ಏವಮೃತ್ವಿಗುಪಾಧ್ಯಾಯೈಃ ಸಹ ಮಾಮುಕ್ತವಾನ್ ಪಿತಾ
ಯಾನಿ ಯಾನ್ಯತ್ರ ಯೋಗ್ಯಾನಿ ಶ್ವೋಭಾವಿನ್ಯಭಿಷೇಚನೇ
ತಾನಿ ಮೇ ಮಂಗಲಾನ್ಯದ್ಯ ವೈದೇಹ್ಯಾಶ್ಚೈವ ಕಾರಯ
ಏತತ್ಶ್ರುತ್ವಾ ತು ಕೌಸಲ್ಯಾ ...
ಇಲ್ಲಿ ರಾಮ ಬಂದು ಅವನ ತಾಯಿಗೆ, "ಸೀತಯಾಪ್ಯುಪವಸ್ತವ್ಯಾ...", ಅಂದರೆ ಸೀತೆಯೊಡನೆ ಈ ರಾತ್ರೆ ನಾನು ಉಪವಾಸ ಇರಬೇಕು ಎಂದು ಹೇಳುತ್ತಾನೆ. ಕೌಸಲ್ಯೆ ರಾಮ ಸೀತೆಯರನ್ನು ಕೂರಿಸಿ ಉಣಬಡಿಸಿದ ವಿಷಯ ಇಲ್ಲಿಲ್ಲ.

ಎರಡನೆಯ ಸಂದರ್ಭದ ಶ್ಲೋಕಗಳು ಈ ರೀತಿ ಇವೆ -
...
ದದೃಶುಶ್ಚಾಶ್ರಮೇ ರಾಮಂ ಸ್ವರ್ಗಚ್ಯುತಮಿವಾಮರಮ್
ಸರ್ವಭೋಗೈಃ ಪರಿತ್ಯಕ್ತಂ ರಾಮಂ ಸಂಪ್ರೇಕ್ಷ್ಯ ಮಾತರಃ
ಆರ್ತಾ ಮುಮುಚುರಶ್ರೂಣಿ ಸಸ್ವರಂ ಶೋಕಕರ್ಶಿತಾಃ
ತಾಸಾಂ ರಾಮಃ ಸಮುತ್ಥಾಯ ಜಗ್ರಾಹ ಚರಣಾನ್ ಶುಭಾನ್
ಮಾತೄಣಾಂ ಮನುಜವ್ಯಾಘ್ರಃ ಸರ್ವಾಸಾಂ ಸತ್ಯಸಂಗರಃ
ತಾಃ ಪಾಣಿಭಿಃ ಸುಖಸ್ಪರ್ಶೈಃ ಮೃದ್ವಂಗುಲಿತಲೈಃ ಶುಭೈಃ
ಪ್ರಮಮಾರ್ಜೂ ರಜಃ ಪೃಷ್ಟಾದ್ರಾಮಸ್ಯಾಯತಲೋಚನಾಃ

ಇಲ್ಲಿ ರಾಮನ ಧೂಳನ್ನು ಕೊಡವಿದವರು ಮಾತರಃ, ಅಂದರೆ ಬಹುವಚನದ (ದ್ವಿವಚನವೂ ಅಲ್ಲದ!) ತಾಯಂದಿರು! ಅಂದರೆ, ಕೌಸಲ್ಯೆ ಮಾತ್ರ ಅಲ್ಲ, ಕೌಸಲ್ಯೆ ಸುಮಿತ್ರೆಯರೂ ಅಲ್ಲ, ಕೌಸಲ್ಯೆ, ಸುಮಿತ್ರೆ, ಕೈಕೇಯಿಯರು!
ಈ ಸಂದರ್ಭಗಳು ಇಲ್ಲಿ ಕನಿಷ್ಠ ಪಕ್ಷ ನನ್ನ ರಾಮಾಯಣದ ಆವೃತ್ತಿಯಿಂದ ಬೇರೆಯಾಗಿ ಇಳಿದು ಬಂದಿವೆ. ಇವು ಬೇರೆ ಯಾವುದಾದರೂ ರಾಮಾಯಣದವಾಗಿರಬಹುದು.
May 17, 2008 12:24 PM

ಸುಪ್ತದೀಪ್ತಿ suptadeepti said...
ತುರಂಗ, ನಮಸ್ಕಾರ. ಸ್ವಾಗತ.
ನಿಮ್ಮ ವಿವರಣೆಗೆ, ಉದಾಹರಣೆಗೆ ಧನ್ಯವಾದಗಳು.
ನಾನಿಲ್ಲಿ ಬರೆದದ್ದು ಡಾ. ಲಕ್ಷ್ಮೀನಾರಾಯಣ ಭಟ್ಟರ ಭಾಷಣದ ತುಣುಕು. ಯಾವ ರಾಮಾಯಣದಲ್ಲಿ ಈ ಸಂದರ್ಭಗಳು ವರ್ಣಿಸಲ್ಪಟ್ಟಿದ್ದವು ಎಂಬುದು ನಾನರಿಯೆ.
May 17, 2008 1:17 PM

sritri said...
ದುಡಿಮೆಯ ಬೆನ್ನುಹತ್ತಿ ಓಡಬೇಕಾಗಿರುವ ಇಂದಿನ ಮಾತಾಪಿತರಿಗೆ ಹೃದಯದ ಭಾಷೆ ಇರಲಿ, ಮಕ್ಕಳ ಬಾಲಭಾಷೆಯನ್ನೂ ಕೇಳಿಸಿಕೊಳ್ಳಲು ಪುರುಸೊತ್ತಿಲ್ಲವಾಗಿದೆ. ಮಕ್ಕಳನ್ನು ಪ್ರೀತಿಸುವುದು ಎಂದರೆ, ಅವರು ಕೇಳಿದ್ದನ್ನು ಕೊಡಿಸುವುದು ಎಂಬ ಯಾಂತ್ರಿಕ ಯುಗ ಬಂದಿದೆ. ಜ್ಯೋತಿ, ಸುಂದರ ಭಾವನೆಗಳನ್ನು ಹೊರಹೊಮ್ಮಿಸುವ ಸೊಗಸಾದ ಲೇಖನಕ್ಕೆ ಅಭಿನಂದನೆ.
May 18, 2008 10:29 AM

ಸುಪ್ತದೀಪ್ತಿ suptadeepti said...
ಹೌದು ವೇಣಿ. ಯಾಂತ್ರಿಕ ಬದುಕಿನ ವೇಗದೊಂದಿಗೆ ಓಡುತ್ತಿರುವ ಎಲ್ಲ ಹೆತ್ತವರ/ ಪೋಷಕರ ದುಗುಡವೂ ಅದೇ ಇರಬಹುದು... ಕೆಲವರಿಗೆ ಈ ವೇಗದ ಬದುಕು ಅನಿವಾರ್ಯವಾದರೆ ಇನ್ನು ಕೆಲವರಿಗೆ ಪ್ರತಿಷ್ಠೆಯ ಸಂಕೇತವಾಗಿರುವುದು ಮಾತ್ರ ಆಧುನಿಕತೆಯ ದುರಂತ.
ಪ್ರತಿಕ್ರಿಯೆಗೆ ಧನ್ಯವಾದಗಳು.
May 18, 2008 5:29 PM

2 comments:

Anonymous said...

ಲಕ್ಶ್ಮೀನಾರಾಯಣಭಟ್ಟರು ವಾಲ್ಮೀಕಿಯದೇ ಬೇರೆ ಆವೃತ್ತಿಯನ್ನು ಓದಿದ್ದರಿಂದಲೋ, ಬೇರೆ ಕಾರಣದಿಂದಲೋ, ಅಂತೂ ಇಂತೂ, ನಿಮ್ಮ ಕಥನ, ನಾನು ಕೊಟ್ಟಿರುವ ಕಥನದಿಂದ ಬೇರೆ ಆಗಿದೆ. ನಾನು ಕೊಟ್ಟಿರುವ ಪಾಠ ಸರಿ ಎಂದಿಟ್ಟುಕೊಂಡರೆ, ವಾಲ್ಮೀಕಿಯನ್ನು ಅವನು ಹೇಳದೆ ಇದ್ದದ್ದಕ್ಕೆ ಹೊಗಳಿ, ಹೇಳಿದ್ದರ ಪರಿಣಾಮ ತಪ್ಪಿಸಿಕೊಂಡಂತಾಗುತ್ತದೆ.

ಮೊದಲ ಸಂದರ್ಭದಲ್ಲಿ ಕೌಸಲ್ಯೆ ರಾಮನಿಗೆ ಒಳ್ಳೆಯದಾಗಲಿ ಎಂದು ದೇವರನ್ನು ಬೇಡುತ್ತಾ ಕುಳಿತಿದ್ದಳು. ಆದ್ದರಿಂದ "ಪ್ರಮುಖವಾಗಿ ಕೌಸಲ್ಯೆಯ ಅಂತಃಪುರ ಸಡಗರದಲ್ಲಿತ್ತು" ಎನ್ನುವುದು ಇದಕ್ಕೆ ಹೊಂದುವುದಿಲ್ಲ. ದೇವರನ್ನು ಬೇಡುತ್ತಾ ಇದ್ದಳು ಇತ್ಯಾದಿ ವಿವರಗಳನ್ನೊಳಗೊಂಡ ಚಿತ್ರಣ, ಅವಳ ರಾಮಾಯಣದ ಇತರ ಭಾಗಗಳಲ್ಲಿನ ಚಿತ್ರಣಕ್ಕೆ ಇನ್ನೂ ಚೆನ್ನಾಗಿ ಹೊಂದುತ್ತದೆ ಎನ್ನಬಹುದೇನೋ.

ಎರಡನೆಯ ಸಂದರ್ಭದಲ್ಲಿ ನಾನು ಕೊಟ್ಟಿರುವ ಪಾಠ ಇನ್ನೂ ಹೆಚ್ಚು ಅರ್ಥ ಕೊಡುತ್ತದೆ. ಇಲ್ಲಿನ ರಾಮ, ಕೈಕೇಯಿಯರ ಸಂಬಂಧದ ಸೂಕ್ಷ್ಮ ಚಿತ್ರಣ ಗಮನಿಸಬಹುದು. ರಾಮಾಯಣದ ಬೇರೆ ಜಾಗಗಳಲ್ಲಿ ನೋಡಿದರೆ, ಅವಳು ಅವನನ್ನು ಪ್ರೀತಿಯಿಂದ ನೋಡಿತ್ತಿದ್ದ ಚಿಕ್ಕ ತಾಯಿ. ಅವನೂ ಅವಳನ್ನು ಗೌರವದಿಂದ ಪ್ರೀತಿಯಿಂದ ನೋಡುತ್ತಿದ್ದವನು. ಅವನನ್ನು ಕಾಡಿಗೆ ಕಳಿಸಿದಾಗ ಮಾತ್ರ ಮಂಥರೆಯ ಮಾತು ಕೇಳಿ ಅವಳ ಮನಸ್ಸು ಕೆಟ್ಟಿತ್ತು. ವಾಲ್ಮೀಕಿರಾಮಾಯಣದಲ್ಲಿ ಭರತನಿಗೆ ಅವಳು ನಾನು ರಾಜ್ಯ ದೊರಕಿಸಿಕೊಟ್ಟೆ ಎಂದು ಹೇಳುವ ಸನ್ನಿವೇಶದ ನಂತರ ಅವಳು ಒಂದು ಮಾತೂ ಆಡುವುದಿಲ್ಲ. ಅವಳಿಗೆ ಏನಾಯಿತು, ಅವಳು ಏನು ಹೇಳಿದಳು ಎನ್ನುವ ವಿಷಯಗಳ ಪ್ರಸ್ತಾಪವೇ ಇಲ್ಲ. ಅವಳು ಕತೆಗೆ ಮಾಡಬೇಕಾದ ಕೆಲಸ ಮಾಡಿ ಮರೆಯಾಗುತ್ತಾಳೆ. ಈ ಅನುಕ್ತಿ ಕತೆಯ ಆಳವನ್ನು ಹೆಚ್ಚಿಸುತ್ತದೆ. ಅವಳು ಅಪರೂಪಕ್ಕೆ (ಗಮನವಿಟ್ಟು ನೋಡಿದರೆ ಮಾತ್ರ) ಕಾಣುವ ಈ ಸಂದರ್ಭದಂತಹ ಸಂದರ್ಭಗಳು ಅವಳ ಪಾತ್ರದ ಪೂರ್ಣ ಚಿತ್ರಣಕ್ಕೆ ಸಹಾಯಕವಾಗುತ್ತವೆ.

ವಾಲ್ಮೀಕಿ ಕೌಸಲ್ಯೆ ರಾಮನ ಪೃಷ್ಠದ ಧೂಳು ಕೊಡವಿದಳು ಎಂದರೆ ಅದು ಸಾಕಷ್ಟು ಒಳ್ಳೆಯದೇ ಆದ ಕವಿಯ ಒಳನೋಟವಾಗುತ್ತದೆ. ಅವನೇನಾದರೂ ಕೌಸಲ್ಯೆ, ಸುಮಿತ್ರೆಯರು ಕೊಡವಿದರು ಎಂದಿದ್ದಿದ್ದರೆ, ಅದು ಪಾತ್ರಗಳ ಬೇರೆಯದೇ ಆದ ಚಿತ್ರಣ ಕೊಡುತ್ತಿತ್ತು. ಪಾತ್ರಗಳು ಪೂರ್ತಿ ಬೇರೆ ಆಗುತ್ತಿದ್ದವು. ಅವರೆಲ್ಲರೂ ಧೂಳು ಕೊಡವಿದರು ಎನ್ನುವುದು ಇದೆರಡಕ್ಕಿಂತ ಇನ್ನೂ ಸಂದರ್ಭದ (ಕರುಣಾ)ರಸಾಸ್ವಾದವನ್ನು ಪೋಷಿಸುತ್ತದೆ.

ಇದಾಗುವುದಕ್ಕೆ ಸ್ವಲ್ಪ ಮೊದಲು ರಾಮ ಪ್ರಸಿದ್ಧವಾದ "ಕಚ್ಚಿತ್"ಸರ್ಗದಲ್ಲಿ

ಸಾ ತಾತ ಕಚ್ಚಿತ್ ಕೌಸಲ್ಯಾ ಸುಮಿತ್ರಾ ಚ ಪ್ರಜಾವತೀ | ಸುಖಿನೀ ಕಚ್ಚಿದಾರ್ಯಾ ಚ ದೇವೀ ನಂದತಿ ಕೈಕಯೀ ||

ಎಂದು ಭರತನನ್ನು ಕೇಳಿದ್ದನ್ನೂ, ಸುಂದರಕಾಂಡದಲ್ಲಿ ಹನುಮಂತನನ್ನು ಸೀತೆ

ಕೌಸಲ್ಯಾಯಾಃ ತಥಾ ಕಚ್ಚಿತ್ ಸುಮಿತ್ರಾಯಾಸ್ತಥೈವ ಚ | ಅಭೀಕ್ಷ್ಣಂ ಶ್ರೂಯತೇ ಕಚ್ಚಿತ್ ಕುಶಲಂ ಭರತಸ್ಯ ಚ ||

ಕೇಳಿದ್ದನ್ನೂ ಗಮನಿಸಬಹುದು!

ಸುಪ್ತದೀಪ್ತಿ suptadeepti said...

ತುರಂಗ, ತುಂಬಾ ಧನ್ಯವಾದಗಳು.
ಸಾಕಷ್ಟು ವಿವರಣಾತ್ಮಕವಾಗಿಯೇ ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದೀರಿ. ಒಪ್ಪುವಂತಹ ಮಾತೇ ಹೇಳಿದ್ದೀರಿ. ಇದನ್ನು ನಾನು ಯಾವರೀತಿಯಲ್ಲೂ ಪ್ರಶ್ನಿಸುವುದಿಲ್ಲ.

ನನ್ನ ಬರಹದ ಸಂದರ್ಭಗಳು ಡಾ.ಭಟ್ಟರ ಭಾಷಣದ ತುಣುಕುಗಳನ್ನು ಆಧರಿಸಿರುವುದರಿಂದ, ವಾಲ್ಮೀಕಿ ರಾಮಾಯಣವನ್ನು ನಾನು ನೇರವಾಗಿ ಓದಿಲ್ಲವಾದ್ದರಿಂದ ಈ ಬಗ್ಗೆ ನಾನು ವಾದ ಮಾಡುವುದಿಲ್ಲ.

ನಿಮ್ಮ ವಿವರಣೆ ಖಂಡಿತವಾಗಿಯೂ ನಮ್ಮೆಲ್ಲರ ರಾಮಾಯಣ ರಸಾಸ್ವಾದನೆಯನ್ನು ಹೆಚ್ಚಿಸಿದೆ ಎಂದು ಧನ್ಯವಾದ ಸಹಿತ ಹೇಳಲಿಚ್ಛಿಸುತ್ತೇನೆ.