Sunday, February 3, 2008
ಬಿಸಿಲು ಮಚ್ಚಿನ ಮೇಲೆ ಒಂದು ಸಂಜೆ
ಹೆಸರ ಹೇಳೆಂದು ಕಾಡಿದ ಕಿರಣ
ಹಸಿರು ಬಳೆಗಳು ಕಿಲಕಿಲನೆ ಹಾಡಿರಲು
ಹುಸಿಕೋಪ ತೋರಿ ಓಡಿದಳು ಅರುಣ
ಮೋಡ ಮೋಡಗಳೆಡೆಯ ಎಳೆ ಎಳೆಯ ಬಂಗಾರ
ಹಾಡು ಹಾಡೊಳಗಿನ ಅಲೆ ಅಲೆಯು ಸೆಳೆದು
ಕಾಡ ಮಲ್ಲಿಗೆಯರಳ ನಸುನಗೆಯ ಶೃಂಗಾರ
ನೋಡ ನೋಡುತ ನಲಿದರು ಮೈಮರೆದು
ನಿನ್ನೆ ಮೊನ್ನೆಗಳಾಚೆ ಕಂಡ ಕನಸುಗಳು
ಕೆನ್ನೆ ಕೆಂಪಾಗಿಸಿದ ಸಣ್ಣ ದಿನಗಳು
ಬೆನ್ನು ಬಾಗುವ ಸಮಯದೀ ಮನಸುಗಳು
ಕಣ್ಣು ಸೆಳೆಯುತ ಹೊಳೆವ ಕ್ಷಣಗಳು
ಅರ್ಥ ಹುಡುಕುವ ನೋಟ ಇಂದು ತಣಿಯುತಿದೆ
ಸಾರ್ಥಕತೆ ಸಾಫಲ್ಯ ಮಡಿಲ ತುಂಬಿದೆ
ಪಾರ್ಥರಥದ ಸಾರಥ್ಯದಂತೆ ಜೀವನವಿದೆ
ಅರ್ಧ ಶತಕದ ದಾಂಪತ್ಯ ಹೊಂಗಿರಣ ಬೀರಿದೆ
(೦೨-ಜೂನ್-೧೯೯೭)
(ನಮ್ಮೂರಲ್ಲಿ ಹಿರಿಯ ಜೋಡಿಯೊಂದು ಒಂದು ಮುಸ್ಸಂಜೆ ತಮ್ಮ ಮನೆಯ ಟೆರೇಸಿನಲ್ಲಿ ನಿಂತು ಏನೋ ಮಾತಾಡುತ್ತಿದ್ದದ್ದನ್ನು, ಅವರ ಮನೆ ಮುಂದೆ ಹಾದು ಹೋದ ಬಸ್ಸಿನಲ್ಲಿದ್ದ ನಾನು ನೋಡಿದಾಗ ಹುಟ್ಟಿದ್ದು ಈ ಕವಿತೆ)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 7:23 PM
Labels: 'ಭಾವಗಾನ'ದಿಂದ-, ರಮ್ಯಗಾನ..., ಹೀಗೇ ಸಾಗಲಿ....
14 ಪತ್ರೋತ್ತರ:
ಶಾಂತಲಾ ಭಂಡಿ said...
suptadeeptiಅವರೆ
ಮುಸ್ಸಂಜೆಯ ಬೆಳಗರಿದು ಮಂದಹಾಸವನೊಂದ ಬೀರಿದ ರಾಗವೊಂದು ಮನವನಾವರಿಸಿತು.
February 4, 2008 9:19 AM
ಸಿಂಧು Sindhu said...
ಚಂದ ಕವಿತೆ ಸುಪ್ತದೀಪ್ತಿ.
ತುಂಬ ಇಷ್ಟವಾಯಿತು. ನಿನ್ನೆ ಮೊನ್ನೆಯಾಚೆ ಕಂಡಕನಸುಗಳನ್ನ, ಬೆನ್ನು ಬಾಗುವ ಸಮಯದಲ್ಲೂ ನೇರವಾಗಿ ಒಡಮೂಡಿಸಿದ ರೀತಿ ತುಂಬ ಹಿಡಿಸಿತು.
ಪ್ರೀತಿಯಿಂದ
ಸಿಂಧು
February 5, 2008 1:14 AM
Mahantesh said...
super agide..
February 5, 2008 4:03 AM
ಸುಶ್ರುತ ದೊಡ್ಡೇರಿ said...
ನೀವು ಇಷ್ಟೆಲ್ಲ ಚನಾಗ್ ಬರೆದ್ರೆ ನಾನು "ಅಯ್ಯೋ ನಮ್ಗೂ ಬೇಗ ವಯಸ್ಸಾಗ್ಲಪ್ಪಾ.. 'ಕೆನ್ನೆ ಕೆಂಪಾಗಿಸಿದ ಸಣ್ಣ ದಿನಗಳ'ನ್ನು ನೆನೆದು ಖುಶಿ ಪಡೋ ಕಾಲ ಬೇಗ ಬರ್ಲಪ್ಪಾ" ಅಂತ ಆಸೆ ಪಡ್ಬೇಕಾಗತ್ತೆ... ;)
February 5, 2008 4:05 AM
ಅರುಣ್ ಮಣಿಪಾಲ್ said...
ಕವಿತೆ ಚೆನ್ನಾಗಿದೆ..:-)
February 5, 2008 6:47 AM
sritri said...
ಕಳೆದ ಬಾಳಿನ ಬಗೆಗೆ ಹಳಹಳಿಕೆಗಳಿಲ್ಲದ ಇಂತಹ ಮುಸ್ಸಂಜೆಯ ಬದುಕು ನಮಗೂ ಸಿಗಲಿ!
ಜೋಗಿ ಬ್ಲಾಗಿನಲ್ಲೂ ಈ ಬಗ್ಗೆ ಓದಿದೆ. ಇಲ್ಲೂ ಅದೇ. ಯಾಕೆ ಎಲ್ಲರಿಗೂ ವಯಸ್ಸಾಗ್ತಾ ಇದೆಯಾ? :) ಸುತ್ತಮುತ್ತಲೂ ಮುಸ್ಸಂಜೆಗತ್ತಲು....
February 5, 2008 8:33 AM
suptadeepti said...
@ಶಾಂತಲಾ: ಮಂದಹಾಸದ ಮುಸ್ಸಂಜೆಯೇ ಈಗ ಎಲ್ಲರಿಗೂ ಬೇಕಾಗಿರುವುದು. ಧನ್ಯವಾದ.
@ಸಿಂಧು: ಪ್ರೀತಿಯಿಂದಲೇ ವಂದನೆಗಳು.
@ಮಹಾಂತೇಶ್: ಧನ್ಯವಾದ, ನಿಮಗೂ.
@ಸುಶ್: ಮೊದಲು ಕೆನ್ನೆ ಕೆಂಪಾಗಿಸಿಕೋ, ಆಮೇಲೆ ವಯಸ್ಸಾದರೆ ಸಾಕು ಮರೀ; ಇಷ್ಟು ಬೇಗ ಬೇಡ. ಧನ್ಯವಾದ.
@ಅರುಣ್: ನಿಮಗೂ ವಂದನೆಗಳು.
@ವೇಣಿ: ಹಳಹಳಿಕೆಗಳಿಲ್ಲದ ಮುಸ್ಸಂಜೆ... ಹ್ಞಂ! ಕಳೆದು ಹೋಗಿದೆ, ನಮಗೆ ಸಿಗಬಹುದು; ಆ ಕಾಲ ಬಂದಾಗ ಸಿಗಲಿ! ನಾನು ಈ ಕವನ ಬರೆದದ್ದು ೧೦ ವರ್ಷಗಳ ಹಿಂದೆ, ಇಲ್ಲಿ ಪ್ರಕಟಿಸಿದ್ದು ಮೊನ್ನೆ, ಭಾನುವಾರ ಸಂಜೆ. ಜೋಗಿಯವರು ಬರೆದದ್ದು ಮಂಗಳವಾರ.... ಇದನ್ನು ನೋಡಿಯೇ ಬರೆದರೋ!? ಕೇಳಿನೋಡಿ.
February 5, 2008 1:28 PM
ಮನಸ್ವಿನಿ said...
ವಾಹ್ ಮಸ್ತ್ ಇದೆ :)
February 6, 2008 6:24 AM
suptadeepti said...
ಧನ್ಯವಾದ ಸು.
February 6, 2008 9:01 AM
sunaath said...
ಎಲ್ಲರೂ ಬಯಸುವ ದಾಂಪತ್ಯದ ಸುಂದರ ಚಿತ್ರಣ ನೀಡಿದ್ದೀರಿ.
February 7, 2008 3:00 AM
ಜಗಲಿ ಭಾಗವತ said...
ಮುಸ್ಸಂಜೆ ಚೆನ್ನಾಗಿತ್ತು....ಈಗ ’ಬೆಳಗಾಗ್ಲಿ :-)
February 7, 2008 9:00 PM
suptadeepti said...
ಸುನಾಥರಿಗೂ ಭಾಗವತರಿಗೂ ಧನ್ಯವಾದಗಳು.
ಭಾಗವತರೇ, ಬೆಳಗಾಗಿದೆ.... ನೋಡಿದಿರಾ?
February 8, 2008 11:18 AM
sunaath said...
ರವೀಂದ್ರನಾಥ ಠಾಕೂರರವರು ಬರೆದ ಕವಿತೆಯ ಎರಡು ಸಾಲುಗಳು ನೆನಪಾದವು:
"Let us grow old together,The best is yet to be."
February 9, 2008 5:34 AM
suptadeepti said...
ಸುನಾಥರೆ, ಠಾಗೋರರ ಈ ಸಾಲುಗಳನ್ನು ಕೇಳಿರಲಿಲ್ಲ, ಓದಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು. ಅಂಥ ಎತ್ತರದ ಕವಿಯ ಸಾಲುಗಳನ್ನು ನೆನಪಿಸಿ ಈ ಪದಗಳು ಧನ್ಯವಾದವು.
February 10, 2008 9:08 PM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 22 May 2008
Subscribe to:
Post Comments (Atom)
No comments:
Post a Comment