ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May, 2008

ಅರಿವಿನಾಚೆಯ ಲೋಕ

Wednesday, March 12, 2008

ಮದುವೆಯಾದ ಹೊಸತು, ನಾವಿನ್ನೂ ಮದುಮಕ್ಕಳೇ. ಹೊಸತೊಂದು ಮನೆಗೆ ಬಾಡಿಗೆಗೆ ಬಂದಿದ್ದೇವೆ. ದೊಡ್ಡದಾದ, ತುಂಬಾ ದೊಡ್ಡದಾದ ಮನೆಯ ಮುಂದಿನ ಎರಡು ಕೋಣೆಯ ಭಾಗ ನಮ್ಮ ವಾಸಕ್ಕೆ. ನೆಂಟರು ಜಾಸ್ತಿ ಬರುವವರು ಇಲ್ಲವೆಂದು, ದೊಡ್ಡ ಮನೆಯ ಹಿಂಭಾಗದಲ್ಲಿರುವ ಬಚ್ಚಲು ಮನೆಯನ್ನೇ ನಮಗೆ ಬಿಟ್ಟಿದ್ದಾರೆ. ಬಚ್ಚಲು ದಾಟಿದರೆ ದೊಡ್ಡ ಹಿತ್ತಲು. ನಮ್ಮ ಭಾಗಕ್ಕಿರುವ ಮನೆಯಲ್ಲಿ ಒಂದು ಕೋಣೆಯನ್ನು ಪಡಸಾಲೆ, ಅಡುಗೆ ಕೋಣೆ ಅಂತ ವಿಭಾಗಿಸಿಕೊಂಡಿದ್ದೇವೆ. ಒಳಗಿನ ಪುಟ್ಟ ಕೋಣೆ ನಮ್ಮದು. ರಾತ್ರೆ ಹೊತ್ತು ಬಚ್ಚಲಿಗೆ ಹೋಗಬೇಕಾದರೆ ಈ...ಷ್ಟುದ್ದದ ಹಜಾರ ದಾಟಿಕೊಂಡು, ಮಾಳಿಗೆಗೆ ಹೋಗುವ ಮೆಟ್ಟಲಿನ ಅಡಿಯಲ್ಲಿ ಹೋಗಬೇಕು, ಅದೊಂದೇ ಬೇಸರ ತರಿಸುವ ವಿಷಯ. ಮಿಕ್ಕೆಲ್ಲವೂ ತೊಂದರೆಯಿಲ್ಲ ಅನಿಸಿತ್ತು.

ನಮ್ಮ ಭಾಗದಿಂದ ಬಚ್ಚಲಿಗೆ ಹೋಗುವ ಹಜಾರದಲ್ಲಿ ಎಡ-ಬಲಕ್ಕೆ ಕಿಟಕಿಗಳು. ಬಲಬದಿಯ ಕಿಟಕಿಯಿಂದ ಮನೆಯ ನಡುವಿನ ಅಂಗಳ, ಹಳೇ ತುಳಸಿಕಟ್ಟೆ ಕಂಡರೆ, ಎಡ ಬದಿಯಿಂದ ತೆಂಗಿನ ತೋಟ ಕಾಣುತ್ತದೆ. ಬಲೆ-ಧೂಳು ಮುಸುಕಿದ ಈ ಹಜಾರ ಸ್ವಚ್ಛಗೊಳಿಸಿ ಇಲ್ಲೇ ಒಂದು ಕುರ್ಚಿ ಹಾಕಿಕೊಂಡು ಕೂತರೆ... ಗಾಳಿ-ಬೆಳಕುಗಳಿಗೂ ನೆಮ್ಮದಿಗೂ ಯಾವುದೇ ತೊಂದರೆಯಿರಲಿಲ್ಲ. ನನ್ನ ಹುರುಪು ಹೆಚ್ಚಿತು. ನಡು ಪೇಟೆಯಲ್ಲೂ ಇಂಥ ಶಾಂತ ಮನೆ ಸಿಕ್ಕಿದ್ದು ಸಂತೋಷ ತಂದಿತ್ತು. ಮನೆಯ ಯಜಮಾನರಿಗೆ ಹೇಳಿ ಅಪ್ಪಣೆ ಪಡೆದಾಯ್ತು. ಎಲ್ಲವನ್ನೂ ಸ್ವಚ್ಛಗೊಳಿಸಿ, ಮಧ್ಯಾಹ್ನದ ಜೋಂಪುನಿದ್ದೆ ಅಲ್ಲೇ ಮಾಡುವ ಕನಸು ಶುರುವಾಯ್ತು.

ಅದೇ ರಾತ್ರೆ, ಊಟ ಮುಗಿಸಿ ಬಚ್ಚಲಿಗೆ ಹೋಗಿ ಬಂದು, ಇನ್ನು ರಾತ್ರೆ ಹೋಗೋದು ಬೇಡ ಅಂತ ನಿರ್ಧರಿಸಿ ಮಲಗಿದ್ದೆವು. ಆದರೆ ದೇಹ ಕೇಳಬೇಕಲ್ಲ... ಸುಮಾರು ಎರಡು ಘಂಟೆಗೆ ಜಲಬಾಧೆ ಎಬ್ಬಿಸಿತು. ಸರಿ, ಇವರನ್ನೂ ಕರೆದು ಎಬ್ಬಿಸಿದೆ. ಹೊಸ ಜಾಗ, ಒಬ್ಬಳೇ ಆಚೆ ಹೋಗಲು ಏನೋ ಅಳುಕು. ಕಣ್ಣುಜ್ಜುತ್ತಾ ಎದ್ದರು. ನನ್ನ ಜೊತೆ ಟಾರ್ಚ್ ಹಿಡಿದು ಆಚಿನ ಹಜಾರಕ್ಕೆ ಬಂದರು. ಅಲ್ಲಿ... ಆಶ್ಚರ್ಯ.... ಅಲ್ಲಿ....

....ಹಗಲಿನಂತೆ ಬೆಳಕು. ಎಲ್ಲವೂ ತೊಳೆದಿಟ್ಟಂತೆ ಹೊಳೆಯುತ್ತಿದ್ದವು. ಮಾಳಿಗೆಯ ಮೆಟ್ಟಲಿನ ಮೇಲೆ ಸರ-ಬರ ಸೀರೆಗಳ, ಕಿಣಿ-ಕಿಣಿ ಬಳೆಗಳ ಸದ್ದು. ಆ ಕಡೆಯ ತುಳಸಿಕಟ್ಟೆಯಲ್ಲಿ ನಳನಳಿಸುವ ತುಳಸಿಗಿಡ. ಅದಕ್ಕೆ ವಂದಿಸುತ್ತಿರುವ ಒಬ್ಬ ಮುತ್ತೈದೆ...! ಸುಮಾರಾದ ಜರಿ-ಸೀರೆ ಉಟ್ಟು, ಹಣೆಗೆ ಅಷ್ಟು ದೊಡ್ಡ ಕುಂಕುಮ ಇಟ್ಟು, ದೊಡ್ಡ ತುರುಬಿನ ತುಂಬ ಮಲ್ಲಿಗೆ ಕನಕಾಂಬರ ಮುಡಿದ ನಡುವಯಸ್ಸಿನ ಲಕ್ಷಣವಾದ ಮುತ್ತೈದೆ. ಕಂಡರೆ ಕೈಮುಗಿಯಬೇಕೆನ್ನಿಸಿತು. ತುಳಸಿಗೆ ಸುತ್ತು ಬಂದು ಆಕೆ ಒಳಗೆ ಬಂದರು. ಅಲ್ಲೇ ಇನ್ನೊಂದು ಬದಿಗೆ ದೊಡ್ಡ ಅಡುಗೆಮನೆ. ಆಕೆ ಅತ್ತ ಹೊರಟವರು ನಮ್ಮನ್ನು ಕಂಡು, ಇತ್ತ ಬಂದರು. ನಯವಾಗಿ ನಡುವನ್ನು ಒಂದಿಷ್ಟೇ ಇಷ್ಟು ಬಾಗಿಸಿ, ಕೈ ಜೋಡಿಸಿ ವಂದಿಸಿ, `ನಮಸ್ಕಾರ' ಅಂದರು. ನಮಗೆ ಗಲಿಬಿಲಿ, ಗಾಬರಿ, ಗೊಂದಲ. ನಾನು ಮೆತ್ತಗೆ ಇವರನ್ನು ಚಿವುಟಿದೆ, `ಹೇಯ್' ಅಂತ ಕಿರುಚಿದರು. ಇಬ್ಬರಿಗೂ ಎಚ್ಚರ ಇದೆ, ಇದು ಕನಸಲ್ಲ ಅಂತ ಖಾತ್ರಿಯಾಯ್ತು. ಹಾಗಾದ್ರೆ, ಇದೆಲ್ಲ ಏನು? ಇವರೆಲ್ಲ ಯಾರು? ಪ್ರತಿವಂದನೆ ಹೇಳುವಷ್ಟರಲ್ಲಿ, ಈ ಕಡೆಯ ಬಚ್ಚಲಿಂದ `ಅಕ್ಕಾ...' ಅನ್ನುತ್ತಾ ಬಂದರು ಇನ್ನೊಬ್ಬಾಕೆ, ಇವರ ಅವಳಿ ಮುತ್ತೈದೆ... ಸೀರೆಯ ಬಣ್ಣ ಬೇರೆ ಅನ್ನುವುದನ್ನು ಬಿಟ್ಟರೆ ಇಬ್ಬರಲ್ಲೂ ವ್ಯತ್ಯಾಸವೇ ಇಲ್ಲ.

ಅಕ್ಕ ತಂಗಿ ನಮ್ಮ ಕಡೆ ಬರುತ್ತಿದ್ದರೆ ನಾವು ಏನೂ ಅರಿಯದ ಮೂಢರಂತೆ ನಿಂತಿದ್ದೆವು. ಅಷ್ಟರಲ್ಲಿ ಮಾಳಿಗೆಯಿಂದ ಒಂದು ಹುಡುಗಿ, ಲಂಗ ದಾವಣಿಯ ಸುಂದರಿ, ನಾಜೂಕು ಗೊಂಬೆಯಂಥ ಚೆಲುವೆ, ಇಳಿದು ಬಂದಳು. `ಇವರು ಯಾರಮ್ಮಾ? ಚಿಕ್ಕೀ, ಯಾರಿವರು?' ಅಂದಳು. ಅವಳ ಗಂಧರ್ವ ಸೌಂದರ್ಯ ನನ್ನ ಗಮನ ಸೆಳೆದಿತ್ತು. `ನಮ್ಮ ಮಗಳು ಹೀಗೇ ಇರಲಿ' ಅಂತ ಹಾರೈಸಿತ್ತು ಮನಸ್ಸು. ಮೂರೂ ಹೆಂಗಸರ ಕಿಲ-ಕಿಲ ನಗು ಸಂಗೀತದಂತೆಯೇ ಇತ್ತು. ಅವರೆಲ್ಲರ ಅಲಂಕಾರ, ಅಲಂಕಾರ ಪದಕ್ಕೇ ಪ್ರತಿಮೆಯಂತಿತ್ತು. ಹಣೆಯ ತಿಲಕ, ಬೆಳಗಿನ ಬಾಲಭಾನುವಿನಂತೆ ಎಂದರೆ ಕಾವ್ಯವಲ್ಲ. ಧರಿಸಿದ್ದ ಆಭರಣಗಳು ಇವರ ಒನಪು ವೈಯ್ಯಾರಗಳಿಂದಲೇ ತಮ್ಮ ಅಂದ ಹೆಚ್ಚಿಸಿಕೊಂಡಂತೆ ಇದ್ದವು. ಕಿವಿ, ಕತ್ತು, ಸೊಂಟ, ತೋಳು, ಕೈ, ಕಾಲುಗಳಲ್ಲಿ ಬೆಳ್ಳಿ-ಬಂಗಾರಿಯರು ಮಿನುಗುತ್ತಿದ್ದರು. ಇವರೆಲ್ಲ ಗಂಧರ್ವರೇ ಅನ್ನುವ ಭ್ರಮೆಯಲ್ಲಿದ್ದೆ. ಸ್ವರ್ಗದ ಆಹ್ಲಾದದಂತೆ ತೋಟದಿಂದ ತೆವಳಿಕೊಂಡು ಬಂದ ಗಾಳಿಗೆ ಮಲ್ಲಿಗೆ, ಸಂಪಿಗೆಗಳ ಮಿಶ್ರ ಸುಗಂಧವಿತ್ತು. ನಾನು ಕಳೆದೇ ಹೋಗಿದ್ದೆ. ಅಷ್ಟರಲ್ಲಿ, ನನ್ನ ಜಲಬಾಧೆ ಮತ್ತೆ ಎಚ್ಚರಿಸಿತು. ಇವರನ್ನು ಎಳೆದುಕೊಂಡೇ ಬಚ್ಚಲಿನ ಕಡೆ ತಿರುಗಿದೆ. ಅಲ್ಲಿ....

...ಇಡೀ ಕೋಣೆಯೇ ಬೆಂಕಿ ಗೂಡಿನಂತೆ ಇದ್ದ ಬಚ್ಚಲೊಲೆ. ಒಲೆಯ ಬಾಯಿ, ಬಾಗಿಲಿನಷ್ಟು ದೊಡ್ಡದು. ಅದರ ಒಂದು ಗೋಡೆಯ ಆ ಕಡೆಗೆ ಬಚ್ಚಲುಮನೆ. ಯಾರೋ ಒಬ್ಬರು ತುಂಡುಸೀರೆಯುಟ್ಟ, ತುಂಬಾ ಬೆಳ್ಳಗಿದ್ದ ಮಡಿ-ಹೆಂಗಸು ಒಲೆಗೆ ಇಡೀ ತೆಂಗಿನ ಸೋಗೆ, ಆ...ಷ್ಟುದ್ದದ ಕಟ್ಟಿಗೆ ತುಂಬುತ್ತಿದ್ದರು. ಅವರ ದೈತ್ಯ ಶಕ್ತಿಗೆ ಬೆರಗಾದೆ. ಅವರನ್ನು ಕೇಳಿದೆ, `ಇಷ್ಟು ದೊಡ್ಡ ಒಲೆ ಯಾಕೆ? ಇದೊಳ್ಳೆ ಇಟ್ಟಿಗೆಗೂಡಿನ ಒಲೆಗಿಂತ ದೊಡ್ಡದಿದೆಯಲ್ಲ!' ಅಂತ. ಮೊದಲಿಗೆ ನನ್ನನ್ನು ನಿರ್ಲಕ್ಷಿಸಿದ ಆಕೆ, ನಂತರ ತನ್ನ ಕೈ ಮುಂದೆ ಮಾಡುತ್ತಾ... `ಇಫ್ ಯೂ ಹ್ಯಾವ್ ಎನೀ ಕ್ವೆಶ್ಚನ್ಸ್... ಕಾಲ್ ಮೀ ಅಟ್ ದಿಸ್ ನಂಬರ್...' ಅಂದು ಒಂದು ಚೀಟಿಯನ್ನು ನನ್ನ ಕೈಯಲ್ಲಿರಿಸಿದರು. ಅವಳಿ ಮುತ್ತೈದೆಯರಿಬ್ಬರೂ ಆ ಸುಂದರಿ ಹುಡುಗಿಯ ಜೊತೆಗೆ ಹಿಂದೆ-ಹಿಂದೆ ನಡೆಯುತ್ತಾ ಬಂದು ಒಲೆಯೊಳಗೆ ಹೋದಂತೆ, ಆ ಮಡಿ ಹೆಂಗಸೂ ಒಲೆಯೊಳಗೇ ಹೋದಂತೆ, ಅವರನ್ನೆಲ್ಲ ಸೇರಿಸಿಕೊಂಡ ಬೆಂಕಿ ಕೂಡಲೇ ಆರಿ ತಣ್ಣಗಾದಂತೆ ಭಾಸವಾಗಿ, ನನ್ನ ಮೈಯೆಲ್ಲ ನಡುಗಲು ಶುರುವಾಯಿತು.

`ಅಮ್ಮಾ, ಅಮ್ಮಾ... ಎಂತಾ, ಏನಾಯ್ತು? ಕನಸಾ?... ಗಂಟೆ ನಾಲ್ಕಾಯ್ತು. ಏಳಿ. ಸಾಕು ನಿಮ್ಮ ನ್ಯಾಪ್!!' ಹದಿ ಹರೆಯದ ಮಗನ ಸ್ವರ ನನ್ನ ಹೊರ ಪ್ರಜ್ಞೆಯನ್ನು ಸನ್ನಿವೇಲಿನ ಮನೆಯ ವಾಸ್ತವಕ್ಕೆ ತಂದರೂ ನನ್ನ ಒಳಮನಸ್ಸು ವಾಸ್ತವಕ್ಕೆ ಬರಲು ಇಡೀ ಸಂಜೆಯೇ ಬೇಕಾಯ್ತು. ಆದರೂ...

ಆದರೂ... ನಿದ್ದೆಯಿಂದೆದ್ದಾಗ ನನ್ನ ಬಲಗೈ ಹಿಡಿಯೊಳಗೆ ಖಾಲಿ ಕಾಗದದ ತುಂಡೊಂದು ಹೇಗೆ ಬಂತೆಂದು ನನಗಿನ್ನೂ ತಿಳಿದಿಲ್ಲ.
(೨೮-ಜೂನ್-೨೦೦೭)
(2007ರ ಜುಲಾಯಲ್ಲಿ ದಟ್ಸ್-ಕನ್ನಡದಲ್ಲಿ ಪ್ರಕಟಗೊಂಡಿತ್ತು)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 6:08 PM
Labels: , ,

19 ಪತ್ರೋತ್ತರ:
sunaath said...
ಜ್ಯೋತಿ,
ನೀನು ಬರೆದದ್ದನ್ನು ಓದುವಾಗ ನಾನೂ ಒಂದು ಭ್ರಮಾಲೋಕವನ್ನೇ ಹೊಕ್ಕಂತೆ ಭಾಸವಾಗುತ್ತಿತ್ತು. ಇದಲ್ಲದೆ, ನೀನು ಒಂದು transcendantal sessionನಲ್ಲಿ ೨೦೦೦ ವರ್ಷಗಳಷ್ಟು ಹಿಂದೆ ಪಯಣಿಸಿದ್ದದ್ದು ಬರೆದಿದ್ದೀಯಾ. ಈ parapsychological potential ಅಥವಾ occult faculty ಎಲ್ಲರಿಗೂ ಇರುವದಿಲ್ಲ. ಇದನ್ನು develop ಮಾಡಬಹುದು ಎಂದು ಹೇಳುತ್ತಾರೆ. ನೀನು ಪ್ರಯತ್ನಿಸಬಹುದು.
-ಕಾಕಾ
March 13, 2008 1:16 AM

Avinash Siddeshware said...
ಕಥೆ ತುಂಬ ಚೆನ್ನಾಗಿದೆ ಓದುವಾಗ ಮೈ ಜುಮ್ಮೆನ್ನುತ್ತಿತ್ತು
March 13, 2008 5:07 AM

ತೇಜಸ್ವಿನಿ ಹೆಗಡೆ said...
ಅಕ್ಕ,
ಒಂದು ಕ್ಷಣ ನನಗೆ ನಾನೇ ಆ ಮನೆಯಲ್ಲಿದಂತೆ ಅನುಭವವಾಯಿತು.. ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿದ್ದೀರಾ.. ತುಂಬಾ ಚೆನ್ನಾಗಿದೆ. ಅಂದಹಾಗೆ ಎಚ್ಚರವಾದಾಗ ನಿಮ್ಮ ಕೈಯೊಳಗಿದ್ದ ಆ ಚೀಟಿಯಲ್ಲಿ ಏನುಬರೆದಿತ್ತು?
ಸುನಾಥರೆ,
parapsychological potential ಅಥವಾ occult faculty ಅಂದರೆ ಏನರ್ಥ? ತುಂಬಾ ಕುತೂಹಲವಾಗಿದೆ ಅದಕ್ಕೇ ಕೇಳಿದ್ದು.
ಅಕ್ಕಾ ನಿಮಗೆ ತಿಳಿದಿದ್ದರೂ ತಿಳಿಸಿ.
March 13, 2008 7:32 AM
sunaath said...
ತೇಜಸ್ವಿನಿ,
ಕೆಲವರಿಗೆ intution ಇದೆ ಎಂದು ಹೇಳುತ್ತೇವೆ. ಇನ್ನೂ ಕೆಲವರು ಮನೋಬಲದಿಂದಲೆ ವಸ್ತುಗಳನ್ನು ಚಲಿಸಬಲ್ಲರು. ಭಾರತದಲ್ಲಿ, ಇಂತಹ ವಿಷಯಗಳನ್ನು ದೇವರ ಅನುಗ್ರಹ ಎಂದು ಹೇಳಿಬಿಡುತ್ತಾರೆ. ಆದರೆ ಪಾಶ್ಚಾತ್ಯ ವಿಜ್ಞಾನಿಗಳು ಇದನ್ನು Parapsychology ಅಂತ ಕರೆದು, ಇದನ್ನು ನಿಷ್ಪಕ್ಷಪಾತವಾಗಿ ಅಧ್ಯಯನ ಮಾಡಿದ್ದಾರೆ. ತಮ್ಮಲ್ಲಿ ಈ potential ಇದೆಯೆ ಎನ್ನುವದನ್ನು ನಾವೇ ಪರಿಕ್ಷೆ ಮಾಡಿ ನೋಡಿಕೊಳ್ಳಬಹುದು. (ಪುಸ್ತಕಗಳು ಸಿಗುತ್ತವೆ). ಇದ್ದರೆ ಅದನ್ನು ಅಭಿವೃದ್ಧಿಪಡಿಸಬಹುದು.
March 13, 2008 9:03 AM

ಶಾಂತಲಾ ಭಂಡಿ said...
suptadeeptiಅವರೆ...
ಕುತೂಹಲ ಕಾಡುತ್ತಿದೆ ಖಾಲಿ ಕಾಗದದ ಚೂರು ನಿಮ್ಮ ಕೈಯಲ್ಲಿ ಹೇಗೆ ಬಂತೆಂದು!
ಒಮ್ಮೊಮ್ಮೆ ಕನಸುಗಳು ವಿಚಿತ್ರವಾಗಿರುತ್ತವೆ. ನಾವು ಕಂಡ ಕನಸು(ಹಗಲುಗನಸಲ್ಲ) ನಮ್ಮ ಹತ್ತಿರದಲ್ಲೆಲ್ಲೋ ನನಸಾದ ವಿಷಯ ತಿಳಿದಾಗ ನಾನು ಅಚ್ಚರಿಪಟ್ಟಿದ್ದಿದೆ. ಕೆಲವರ ಮುಂದೆ ಈ ವಿಷಯಗಳನ್ನು ನಾವು ಹೇಳಹೋದರೆ ನಮ್ಮನ್ನು ಬೇರೆಯದೇ ರೀತಿಯಲ್ಲಿ ನೋಡುತ್ತಾರೆ (ವಿಜ್ಞಾನವನ್ನೂ ಓದಿರದ, ಮೂಢನಂಬಿಕೆಗಳೆಂದು ನಂಬಲರ್ಹವಾದವುಗಳನ್ನೂ ಹೀಗಳೆಯುವಂಥ ಜನರು). ಸುಮ್ಮನಿದ್ದುಬಿಡುತ್ತೇನೆ ಎಷ್ಟೋ ಸಾರಿ. ವಾದಿಸಿ ಗೆಲ್ಲುವ ಸಾಮರ್ಥ್ಯ ನನ್ನಲ್ಲಿ ಇಲ್ಲದಿರುವುದರಿಂದ ಹಾಗೂ ಸೋಲುವ ಮನಸ್ಸು ಸಹ ಇಲ್ಲದಿರುವುದರಿಂದ.
ಇಂಥಹ ಕುತೂಹಲಕಾರಿ ವಿಷಯಗಳನ್ನು ಬರೆಯುತ್ತಿರಿ. ಓದುತ್ತಿರುತ್ತೇವೆ.
March 13, 2008 11:49 AM

ಸುಪ್ತದೀಪ್ತಿ suptadeepti said...
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಕಾಕಾ, ತೇಜು, ಶಾಂತಲಾ: ನಾನು ಕಂಡ ಈ ಕನಸಿನ ಗುಂಗು ನನ್ನನ್ನು ಇನ್ನೂ ಕಾಡುತ್ತಿದೆ. ಅದರ ಮುಂದೆ-ಹಿಂದೆ-ಒಳ-ಹೊರಗುಗಳ ವಿಶ್ಲೇಷಣೆಯ ಪ್ರಯತ್ನದಲ್ಲಿ ಇದ್ದೇನೆ. ಇದುವರೆಗೆ ಏನೂ ಸಿಕ್ಕಿಲ್ಲ, ಸಿಕ್ಕರೆ ಇಲ್ಲೇ ಬರೆಯುತ್ತೇನೆ.
ಅಲ್ಲದೆ, Parapsychology -or- Mind Power ಬಗ್ಗೆಯೂ ಇನ್ನೂ ಹೆಚ್ಚಿನ ಅರಿವು ಪಡೆಯುವ ಪ್ರಯತ್ನದಲ್ಲೂ ಇದ್ದೇನೆ. ಇನ್ನೊಂದೆರಡು ವಾರದಲ್ಲಿ ಅದು ಒಂದು ಹಂತ ತಲುಪುತ್ತದೆ. ಆಮೇಲೆ... ಆಮೇಲೆ ನೋಡೋಣ.

ತೇಜು, ಶಾಂತಲಾ, ನನ್ನ ಕೈಯಲ್ಲಿದ್ದದ್ದು ಖಾಲಿ ಕಾಗದದ ಚೂರು, ಏನೂ ಬರೆದಿರಲಿಲ್ಲ.
ಅವಿನಾಶ್, ಸ್ವಾಗತ. ಧನ್ಯವಾದಗಳು ಕೂಡಾ. ಹೀಗೇ ಬರುತ್ತಿರಿ, ಬರೆಯುತ್ತಿರಿ.
March 13, 2008 2:21 PM

ತನ್ಮಯಿ said...
coincidence ಅನ್ನಿಸುತ್ತಿದೆ. ನಿನ್ನೆ ನನಗೆ ಬಿದ್ದ ಕನಸೊಂದರಿಂದ, ಕನಸುಗಳು, ಅವುಗಳ ಅರ್ಥಗಳ ಬಗ್ಗೆ ಬೆಳಿಗ್ಗೆಯಲ್ಲಾ ಗೂಗಲಿಸುತ್ತಿದ್ದೆ. ಈಗ ನಿಮ್ಮ ಬ್ಲಾಗಿನಲ್ಲಿಯೂ ಅದೇ 'ಅರಿವಿನಾಚೆಯ ಲೋಕ' ಓದುತ್ತಿದ್ದೇನೆ. ಈ ಬಗ್ಗೆ ನಿಮ್ಮ ಮುಂದಿನ ಒಂದೆರಡುವಾರಗಳ ನಂತರದ ಬರಹಕ್ಕಾಗಿ ಕಾಯುತ್ತಿರುತ್ತೇನೆ.
March 13, 2008 6:46 PM

ಸುಪ್ತದೀಪ್ತಿ suptadeepti said...
ತನ್ಮಯಿ: ಮುಂದಿನ ಎರಡು ವಾರಗಳಲ್ಲಿ ನನ್ನ ಕಲಿಕೆ ಒಂದು ಹಂತ ತಲುಪುತ್ತದಷ್ಟೇ. ಆದ್ರೆ, ಅದರ ಬಗ್ಗೆ ಬರೆಯಬಲ್ಲೆನೇ, ಗೊತ್ತಿಲ್ಲ. ಸಾಧ್ಯವಾದಾಗ ಖಂಡಿತಾ ಬರೆಯುತ್ತೇನೆ.
ಇನ್ನು, ನಾವೆಲ್ಲರೂ "ಗೂಗಲೋಪನಿಷತ್ತಿನ" ಆರಾಧಕರೇ.
March 13, 2008 10:30 PM

parijata said...
ಅಬ್ಬಬ್ಬಾ! ಓದುವಾಗ ಸಣ್ಣಗೆ ನಡುಗುತ್ತಿದ್ದೆ. ತುಂಬಾ ಚೆನ್ನಾಗಿ ಬರೆದಿದ್ದೀರಿ.
March 14, 2008 1:05 AM

Vanamala said...
ನಿಮ್ಮ ಕನಸಿನ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದೀರಿ. ತುಂಬ ಚೆನ್ನಾಗಿ ಬಂದಿದೆ.
March 14, 2008 7:40 AM

ಸುಪ್ತದೀಪ್ತಿ suptadeepti said...
ಪಾರಿಜಾತ, ವನಮಾಲಾ: ಪ್ರತಿಕ್ರಿಯೆಗೆ ಧನ್ಯವಾದಗಳು.
ವನಮಾಲಾ, ನನ್ನ ಅಕ್ಷರ ಲೋಕಕ್ಕೆ ಸ್ವಾಗತ. ಹೀಗೇ ಬರುತ್ತಿರಿ, ಬರೆಯುತ್ತಿರಿ.
March 14, 2008 9:32 AM

ನಾವಡ said...
ಜ್ಯೋತಿಯವರೇ, ಕನಸೇ ವಿಚಿತ್ರ. ಅದನ್ನು ಸಚಿತ್ರವಾಗಿ ಬರೆದ ಬಗೆಯೂ ಅಚ್ಚರಿ ಎನಿಸಿತು. ಒಳ್ಳೆ ಬರಹ ನೀಡಿದ್ದಕ್ಕೆ ಧನ್ಯವಾದ. ನನ್ನ ಬ್ಲಾಗ್ ಹೆಸರನ್ನು ನಿಮ್ಮ ಲಿಸ್ಟ್ ನಲ್ಲಿ ಸೇರಿಸುವಂತೆ ಮನವಿ.
ನಾವಡ
March 15, 2008 10:23 AM

ಸುಪ್ತದೀಪ್ತಿ suptadeepti said...
ನಾವಡರೇ, ಆಶ್ಚರ್ಯಕರವಾಗಿ ಕಂಡು ಬಂದ ಸವಿವರ ಕನಸನ್ನು ಹಾಗಿಂದ ಹಾಗೇ ಬರಹಕ್ಕಿಳಿಸಿ ನಿಮಗೆಲ್ಲ ಬಡಿಸಿದ್ದೇನೆ. ಮೆಚ್ಚಿದರೆ ಖುಷಿ; ಬೆಚ್ಚಿದರೆ ಅಚ್ಚರಿ ಇದ್ದದ್ದೇ.
ನಿಮ್ಮ ಚೆಂಡೆ-ಮದ್ದಳೆ ನನ್ನ ಸಹಚರರ ಸಾಲಿನಲ್ಲಿ ಖುಷಿ ಕೊಡಲಿದೆ.
March 16, 2008 8:58 PM

NilGiri said...
ಯಪ್ಪಾ... ಓದುವಾಗ ಮೈ ಸಣ್ಣಗೆ ಗಡಗಡ!
March 17, 2008 8:22 PM

ಸುಪ್ತದೀಪ್ತಿ suptadeepti said...
ಗಿರಿಜಾ (ನಿಮ್ಮ ಬ್ಲಾಗಿನಿಂದ ಆ ಹೆಸರು ಗೊತ್ತಾಯ್ತು. ನಿಮ್ಮ pen-name, "nilgiri" ಚೆನ್ನಾಗಿದೆ. ಒಳ್ಳೆಯ ಜೋಡಣೆ), ಭಯ ಬೇಡ. ಅದು ಬರೀ ಕನಸು!!
March 17, 2008 8:49 PM

L said...
ಕನಸಾದರೇನಂತೆ ಅದನ್ನು ಹೆಣೆದು ನಂತರ ಸುಂದರ ಕಥನವಾಗಿಸಿದ್ದೀರಿ. ಇನ್ನೂ ಹೆಚ್ಚಿನ ರೆಕ್ಕೆ ಪುಕ್ಕ ಸಿಕ್ಕರೆ, "ಹ್ಯಾರಿ ಪಾಟರ್" ತರವೇ ಕನ್ನಡದಲ್ಲೊಂದು "ಗರಿ-ಕನ್ಯೆ" ಹುಟ್ಟಿ ಬಂದಾಳು. ಹಾಗಾಗಲೆಂದು ಹಾರೈಸುತ್ತ
ಗಣಪತಿ
March 18, 2008 1:14 PM

ಸುಪ್ತದೀಪ್ತಿ suptadeepti said...
ಗಣಪತಿ, ತುಂಬಾ ದೊಡ್ಡ ಹಾರೈಕೆಯನ್ನೇ ಆರಿಸಿದ್ದೀರಿ. ಸದ್ಯಕ್ಕೆ ಆ ಕನ್ಯೆ ಕಾಣಲಾರಳೇನೋ? ಆಶಯಕ್ಕೆ ಧನ್ಯವಾದಗಳು.
March 18, 2008 3:57 PM

ಅರ್ಚನಾ said...
wow..eshtondu sogasaada baraha!!
oduttiddante bereye lokadalli iddante bhaasavaayitu.. kaialli cheeti iddudara bagge odi bahaLa acchari aayitu..
March 19, 2008 8:58 PM

ಸುಪ್ತದೀಪ್ತಿ suptadeepti said...
ಧನ್ಯವಾದ ಅರ್ಚನಾ.
March 19, 2008 10:56 PM

No comments: