ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 22 May, 2008

ವೈಪರೀತ್ಯ

Friday, February 8, 2008

(ಮೈಸೂರು ಕೆ.ಆರ್.ನಗರದ "ಗ್ರಾಮಾಂತರ ಬುದ್ಧಿಜೀವಿಗಳ ಬಳಗ" ಕಳೆದ ವರ್ಷ ಏರ್ಪಡಿಸಿದ "ದ.ರಾ.ಬೇಂದ್ರೆ ಸ್ಮರಣಾರ್ಥ ಕಾವ್ಯ ಸ್ಪರ್ಧೆ"ಯಲ್ಲಿ 'ವೈಪರೀತ್ಯ' (ಈಗ ಇಲ್ಲಿದೆ) ಮತ್ತು 'ಒಡಲಾಚೆಗೀಚೆ' (ಸದ್ಯದಲ್ಲೇ ಬರಲಿದೆ) ಕವನಗಳು, 'ಹೊರನಾಡ ಕನ್ನಡಿಗರು ವಿಭಾಗ'ದಲ್ಲಿ ಪ್ರಶಸ್ತಿಗೆ ಅರ್ಹವಾದವು. ಇದೇ ಫೆಬ್ರವರಿ ಮೂರರಂದು ಮೈಸೂರಿನಲ್ಲಿ ನಡೆದ, ಆ ಸಂಸ್ಥೆಯ ೨೩ನೇ ವಾರ್ಷಿಕೋತ್ಸವದಲ್ಲಿ ವಿಜೇತ ಕವನಗಳನ್ನು ಒಳಗೊಂಡ ಪುಸ್ತಕ ಬಿಡುಗಡೆ ಮಾಡಲಾಗಿರಬೇಕು.)

ತುಂತುರು ಮಳೆಗೆ ಅಂಗಳಕಿಳಿದೆ
ಮನದೊಳು ಕರಿ ಮುಂಗಾರು
ವರ್ಣವಿಲಾಸ ಸಿಡಿಲಿನ ಹಾಸ
ರಮಿಸದು ಸಿಂಚನದೆಲರು

ಹೊಂಬಿಸಿಲೊಳಗೆ ತೊರೆಯೊಳಗಿಳಿದೆ
ಮನದೊಳು ಸುಡು ಸುಡು ಕುಲುಮೆ
ಹರಿಯುವ ಲಹರಿ ಬೇಗುದಿಯ ಉರಿ
ತಣಿಸದು ನೀರಿನ ಚಿಲುಮೆ

ಇಬ್ಬನಿಯೊಳಗೆ ಚಾದರವೆಳೆದೆ
ಮನದೊಳು ಮಂಜಿನ ಬಂಡೆ
ಬೆಚ್ಚನೆಯುಸಿರು ಹಿಮದಡಿ ಹಸಿರು
ದೊರೆಯದು ಮಲ್ಲಿಗೆ ದಂಡೆ
(೦೮-ಫೆಬ್ರವರಿ-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:15 AM
Labels: ,

14 ಪತ್ರೋತ್ತರ:

ವಿಕ್ರಮ ಹತ್ವಾರ said...
ಇಬ್ಬನಿಯೊಳಗೆ ಚಾದರವೆಳೆದೆ
ಮನದೊಳು ಮಂಜಿನ ಬಂಡೆ

ಕವಿತೆಗೆ ಪ್ರಶಸ್ತಿ ಬಂದಿದ್ದು ಹೇಳಲೇ ಇಲ್ಲ ?
Congrats!!
February 8, 2008 1:20 PM

suptadeepti said...
ಅಲ್ಲ ಮರೀ, "ಮನದೊಳು ಮಂಜಿನ ಬಂಡೆ" ಇಟ್ಕೊಂಡು ಏನನ್ನು ಹೇಳೋದು, ಏನನ್ನು ಬಿಡೋದು?ನಿನ್ನ ಕಂಗ್ರಾಟ್ಸ್'ಗೆ ಧನ್ಯವಾದಗಳು ಖಂಡಿತ.
February 8, 2008 5:58 PM

ಜಗಲಿ ಭಾಗವತ said...
ನನ್ನ ಕಡೆಯಿಂದನೂ ಅಭಿನಂದನೆಗಳು.
ಪ್ರಶಸ್ತಿಯ ಬಗ್ಗೆ ತಿಳಿಸಲೇ ಇಲ್ಲವಲ್ಲ!! ನಿಮ್ಮ ನಿಷ್ಠಾವಂತ ಓದುಗರನ್ನು ಹೀಗೆ ಕತ್ತಲಲ್ಲಿಡುವುದು ಉಚಿತವೇ? :-)
February 8, 2008 6:30 PM

suptadeepti said...
ನಿಷ್ಠಾವಂತ ಓದುಗರಾದ ಭಾಗವತರೆ, ನಿಮ್ಮ ಅಭಿನಂದನೆಗೆ ಧನ್ಯವಾದಗಳು. ನಿಮ್ಮ ಮತ್ತು ನಿಮ್ಮಂಥ ಇತರರ ಗಮನ, ಸಮಯ ಕಳೆಯುವಷ್ಟು ಮಹತ್ವದ ಪ್ರಶಸ್ತಿಯೇನಲ್ಲ; ಆದ್ದರಿಂದ ಮೊದಲೇ ತಿಳಿಸಲಿಲ್ಲ.
ಇನ್ನು ಕತ್ತಲಲ್ಲಿಡುವ ಪ್ರಶ್ನೆಯೇ ಇಲ್ಲ. ಈಗಷ್ಟೇ ಬೆಳಗಾಗಿದೆ(!?!).
February 8, 2008 9:23 PM

ಶಾಂತಲಾ ಭಂಡಿ said...
ಸುಪ್ತದೀಪ್ತಿಯವರೆ...
ಅಭಿನಂದನೆಗಳು. ಪ್ರಶಸ್ತಿ ದೊರೆತ ವಿಷಯ ಕೇಳಿ ಖುಷ್-ಖುಷಿಯಾಯ್ತು.
February 8, 2008 9:43 PM

ಶ್ರೀವತ್ಸ ಜೋಶಿ said...
"ಗಮನ, ಸಮಯ ಕಳೆಯುವಷ್ಟು ಮಹತ್ವದ ಪ್ರಶಸ್ತಿಯೇನಲ್ಲ; ಆದ್ದರಿಂದ ಮೊದಲೇ ತಿಳಿಸಲಿಲ್ಲ..."- ಇದು ಸ್ವಲ್ಪ ವಿಷಾದದ ಸಂಗತಿ. ಪ್ರಶಸ್ತಿ ಬಗ್ಗೆ ನಿಮಗೆ ಜಂಭ ಇಲ್ಲದಿರುವುದು ಸಂತೋಷವೇ. ಅದು ನಿಮ್ಮ ಒಳ್ಳೆಯತನವನ್ನು ಪ್ರತಿಬಿಂಬಿಸುತ್ತದೆ. ಆದರೆ ಈತೆರನಾದ ತಾತ್ಸಾರ ಸಲ್ಲದು. ಒಪ್ಪಿಕೊಳ್ಳೋಣ, ಈಗೀಗ "ಕಾಸಿಗೊಂದು ಕೊಸರಿಗೊಂದು ಪ್ರಶಸ್ತಿಗಳಿವೆ" ಎನ್ನುವವರಿದ್ದಾರೆ. ಆದರೆ ಪ್ರಾಮಾಣಿಕವಾಗಿ ಯಾರು ಯಾವುದೇ ಪ್ರಶಸ್ತಿಯನ್ನು ಕೊಟ್ಟಿದ್ದರೆ ಅದನ್ನು ’ಕೇವಲ’ವಾಗಿ ನೋಡುವುದು ಸಲ್ಲ. ಪ್ರಸ್ತುತ "ಗ್ರಾಮಾಂತರ ಬುದ್ಧಿಜೀವಿಗಳ ಬಳಗ"ವು ನಿಮಗೆ ಪ್ರಶಸ್ತಿಯನ್ನು ಪ್ರಾಮಾಣಿಕವಾಗಿ ನೀಡಿತೋ ಸೋಗಲಾಡಿತನಕ್ಕೆ ನೀಡಿತೋ ನಮಗೆ ಗೊತ್ತಿಲ್ಲವಾದರೂ (ಮತ್ತು ನಾವು ನಿರ್ಧರಿಸುವುದು ಬೇಡವಾದರೂ) ಸಿಕ್ಕಿದ ಒಂದು ಗೌರವದ ಬಗ್ಗೆ ಅಪಗೌರವ ಖಂಡಿತ ಬೇಡ. ವೈಯಕ್ತಿಕವಾಗಿ ನಿಮ್ಮನ್ನು ಬಲ್ಲೆನಾದ್ದರಿಂದ ನನಗೆ ಸಂಶಯ ಬರದು, ಇಲ್ಲವಾದರೆ ನಿಮ್ಮ ಈ ಮೇಲಿನ ಮಾತುಗಳು - "ನನಗೆ ಆ ಪ್ರಶಸ್ತಿಯಾ...? ನಿಜವಾಗಿ ಸಿಗಬೇಕಾದ್ದು ಇನ್ನೂ ಮಹತ್ತರವಾದ ಪ್ರಶಸ್ತಿ!" ಎಂಬಂತೆ ಅರ್ಥೈಸಿಕೊಂಡರೂ ಆಶ್ಚರ್ಯವಿಲ್ಲ!
ಕ್ಷಮಿಸಿ. ಅನಿಸಿದ್ದನ್ನು ಮುಜುಗರವಿಲ್ಲದೆ ಬರೆದೆ. ಚಿಟಿಕೆ ಉಪ್ಪಿನೊಂದಿಗೆ ಸೇವಿಸಿ,
February 9, 2008 2:23 AM

sunaath said...
ಸುಂದರವಾದ ಕವಿತೆ. ಓದಿ ಖುಶಿಯಾಯ್ತು.
February 9, 2008 5:37 AM

ಮನಸ್ವಿನಿ said...
congrats :) ಪಾರ್ಟಿ ಯಾವಾಗ? ;)
February 9, 2008 7:30 AM

ಪಯಣಿಗ said...
Congratulations!!
ಹರಿವ ಲಹರಿಯ ಮನದ ಮ೦ಜಿನ ಗಡ್ಡೆ ಈಗಲಾದ್ರೂ ಕರಗಿತಲ್ಲ! ಹರಿವು ಹೀಗೆ ಇರಲಿ... ನಿಮ್ಮ ಕವಿತೆಗಳ೦ತೆ ಕಿರೀಟವನ್ನೂ ಹರಿಬಿಡಿ...'ಉಪ್ಪು' ಬಿಸಿಲು-ಮಳೆಯಲಷ್ಟೇ ಇರಲಿ, ಮ೦ಜಿಗೆ ತಾಗಿದರೆ ಮತ್ತೂ ಗಟ್ಟಿಯಾದೀತು!
February 9, 2008 10:04 AM

Shiv said...
ಸುಪ್ತದೀಪ್ತಿ ಅವರೇ,
ಅಭಿನಂದನೆಗಳು !ನಿಮ್ಮ ಮನೆಗೆ ಬಂದಾಗೆ ಇದರ ಖುಷಿಯುಲ್ಲಿ ಒಂದು ಪಾರ್ಟಿ ಮಾಡೋಣಾ :)
ಹಿಮದಡಿ ಹಸಿರು ದೊರೆಯದು ಮಲ್ಲಿಗೆ ದಂಡೆ ಚೆನ್ನಾಗಿದೆ !
February 9, 2008 11:15 AM

suptadeepti said...
ಶಾಂತಲಾ, ಸುನಾಥ್, ಪಯಣಿಗ, ಮನಸ್ವಿನಿ, ಶಿವ್, ಜೋಶಿ... ಎಲ್ಲರಿಗೂ ಧನ್ಯವಾದಗಳು.

ಜೋಶಿ, ನಿಮ್ಮ ಎಚ್ಚರಿಕೆಯ ಮಾತು ಒಪ್ಪಿದೆ. ಒಂದು ರೀತಿಯ ಹೇಳಿಕೆ ಇನ್ನೊಂದರ್ಥದಲ್ಲಿ ಓದಿಸಿಕೊಳ್ಳುವುದರ ಅರಿವಿಲ್ಲದೆ ಇಲ್ಲ. ಬರೆಯುವಾಗ ಅದರ ಗಮನ ಇರಲಿಲ್ಲ. ನಿಮ್ಮಂಥ ಗೆಳೆಯರಿರುವುದು ನನ್ನ ಭಾಗ್ಯ.
ನನ್ನ ಮಾತಿಗೆ ಸಣ್ಣದೊಂದು ಹಿನ್ನೆಲೆಯಿದೆ, ಆದ್ದರಿಂದ ಹಾಗೆ ಹೇಳಿದೆನೇ ಹೊರತು ಯಾವುದೇ ಅಗೌರವದಿಂದಲ್ಲ. ಮಹತ್ವ ಅನ್ನುವಂಥದ್ದು ಸಂಸ್ಥೆಯ ಉದ್ದೇಶ, ಕಾರ್ಯಾಚರಣೆಗಳ ಮೇಲೆಯೂ ಅವಲಂಬಿಸುತ್ತದೆ, ಬರೀ ಪ್ರಶಸ್ತಿಪತ್ರದ ಮೇಲೆ ಮಾತ್ರವಲ್ಲ; ಒಪ್ಪುತ್ತೀರ? ಅಗೌರವದ ಪ್ರಶ್ನೆಯಿಲ್ಲವೇ ಇಲ್ಲ.
February 9, 2008 8:48 PM

reborn said...
Congrats ...Have come here before ..commenting for the first time though ... Do I get a treat too ?
February 10, 2008 4:06 AM

PSMurthy said...
ಇದೇ ಮೊದಲಬಾರಿ ಈ ಬ್ಲಾಗಿಗೆ ಬಂದೆ. ಒಳ್ಳೆ ಸುದ್ದಿ ಸಿಕ್ಕಿತು. ಲೇಖಕಿಯವರಿಗೆ ಅಭಿನಂದನೆಗಳು.
ಶ್ರೀವತ್ಸಜೋಶಿ, ನನಗೆ ಸುಪ್ತದೀಪ್ತಿಯವರ ಪರಿಚಯವಿಲ್ಲದಿದ್ದರೂ, ಅವರ ಸರಳ ಮಾತಿನಲ್ಲಿ ನೀವು ಹೇಳಿದ ಅರ್ಥಗಳಂತೂ ನನಗೆ ಕಾಣಿಸಲಿಲ್ಲ. ಇನ್ನು ನಿಮ್ಮಂತೆಯೇ -ಕೊಂಕು ಬುದ್ಧಿಯಿಂದ- ಯೋಚಿಸಿದರೆ ನಿಮ್ಮದೇ ಮಾತಿಗೆ ಈ ಅರ್ಥ ಬರುತ್ತದೆ - "ಸಿಕ್ಕಿದ ಒಂದು ಗೌರವದ ಬಗ್ಗೆ".... - "ನಿಮ್ಮ ಯೋಗ್ಯತೆಗೆ ಸಿಕ್ಕಿರುವ ಈ ಒಂದು ಗೌರವವೇ ಹೆಚ್ಚು. ಅದನ್ನು ಒಪ್ಪಿಕೊಂಡು ಸ್ವೀಕರಿಸಿ"ನೀವೂ ಕೂಡ ಇದನ್ನು ಚಿಟಿಕೆ ಉಪ್ಪಿನೊಂದಿಗೆ ಸೇವಿಸಿ.
February 10, 2008 4:06 PM

suptadeepti said...
ರಿಬೋರ್ನ್ ಮತ್ತು ಪಿ.ಎಸ್.ಮೂರ್ತಿ, ಇಬ್ಬರಿಗೂ ಧನ್ಯವಾದಗಳು.
ರಿಬೋರ್ನ್, ನೀವು ಇಲ್ಲಿ ಬಂದು, ಈ ಕವನಗಳನ್ನು ಓದಿ, ಆನಂದಿಸಿದಿರಿ; ಅದೇ ಟ್ರೀಟ್ ಆಯ್ತಲ್ಲ. ಇನ್ನೂ ಬರುತ್ತಾ ಇರಿ, ಮುಂದೆಯೂ ಇಂಥ ಟ್ರೀಟ್ ಇದ್ದೇ ಇದೆ.

ಜೋಶಿಯವರು ಕೊಂಕು ಬುದ್ಧಿಯಿಂದ ಯೋಚಿಸಿದ್ದೆಂದು ನೀವು ಹೇಗೆ ಅಂದುಕೊಂಡಿರಿ, ಮೂರ್ತಿಯವರೆ? ಪ್ರತಿಯೊಂದು ಮಾತಿಗೂ, ವಾಕ್ಯಕ್ಕೂ ಎರಡು ಆಯಾಮಗಳಿರುತ್ತವೆ ಅನ್ನುವುದನ್ನು ಮತ್ತೊಮ್ಮೆ ಸ್ಫುಟಪಡಿಸಿದ ಹಾಗಾಗಿದೆ ಇಲ್ಲಿ.
February 10, 2008 9:17 PM

No comments: