Wednesday, February 27, 2008
ಶೂನ್ಯದೊಳು ವ್ಯೋಮಗಳ ಉದ್ಭವದ ಕ್ಷಣದಂತೆ-
ವ್ಯೋಮದೊಳು ಅನಿಲಗಳ ಘರ್ಷಣದ ಧಗೆಯಂತೆ-
ಅನಿಲ-ಅನಲರ ಪರಿಧಿ ಶರಧಿಯಲಿ ಇಳಿದಂತೆ-
ವರ್ಣ-ವೈಖರಿಯೊಡ್ಡಿ ಮೊರೆದಿಹುದು - ಆಗಸ!
ನೀಲಸಾಗರದಲ್ಲಿ ಮಂದರವನೆಸೆದಂತೆ-
ಜಯ-ವಿಜಯರಬ್ಬರದ ದರ್ಪವನು ಕೆಡೆದಂತೆ-
ಪಾಂಚಜನ್ಯದ ಪರಿಗೆ ಕುರುಪತಿಯು ಸಿಡಿದಂತೆ-
ವರ್ಣ-ವಾರಿಧಿ ಚೆಲ್ಲಿ ಮೆರೆದಿಹುದು - ಆಗಸ!
ಹಂಸಲಾಸ್ಯದ ಮೇಲೆ ಚಿಗುರುಗೈ ತೊಡೆದಂತೆ-
ನವವಧುವ ಕೆದರುದಲೆ, ಕದಡು ಕುಂಕುಮದಂತೆ-
ಬಾಲಕೇಳಿಯ ಕುಸುರು ನಡುಮನೆಗೆ ಹರಿದಂತೆ-
ವರ್ಣ-ಲೀಲೆಯ ಮೋಡಿ ಮಾಡಿಹುದು - ಆಗಸ!
(೨೨-ಸೆಪ್ಟೆಂಬರ್-೨೦೦೫)
(ಮುಸ್ಸಂಜೆಯಲ್ಲಿ ಅವ್ಯಕ್ತ ಚಿತ್ರಕಾರನ ಕಲಾಭಿತ್ತಿಯಾಗುವ ಒಂದು ಅಪರೂಪದ ಆಗಸ ಹುಟ್ಟಿಸಿದ್ದು)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:30 AM
Labels: ಹೊಚ್ಚಹೊಸದು
15 ಪತ್ರೋತ್ತರ:
ಪುಚ್ಚಪ್ಪಾಡಿ said...
ನಿಜಕ್ಕೂ ಸುಂದರ. ಹರಿಯುವ ಭಾವ ಲಹರಿಯೇ?
February 27, 2008 10:19 AM
ಸುಪ್ತದೀಪ್ತಿ suptadeepti said...
ಲಹರಿ ಹರಿದಾಗಲೇ ಅದರ ಹೆಸರು ಸಾರ್ಥಕ, ಅಲ್ಲವೆ? ನಿಂತರೆ ಅದು ಸರಸ್ಸಾಗದೆ?
ಸ್ವಾಗತ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.
February 27, 2008 11:07 AM
ಶಾಂತಲಾ ಭಂಡಿ said...
ಸುಪ್ತದೀಪ್ತಿಯವರೆ...
ಕೊನೆಯ ಚರಣ ತುಂಬ ಇಷ್ಟವಾಯ್ತು.
ನಾಟಕ ಪ್ರಸಂಗಗಳಲ್ಲಿ ಹಾಡುವ ಹಾಡಿನಂತಿದೆ. ಚೆನ್ನಾಗಿ ಬರೆದಿದ್ದೀರ. ಕಷ್ಟದ ಪದ್ಯ.
February 27, 2008 3:31 PM
ಸುಪ್ತದೀಪ್ತಿ suptadeepti said...
ಧನ್ಯವಾದಗಳು ಶಾಂತಲಾ.
February 27, 2008 4:13 PM
sunaath said...
ಆಗಸ ನಿಮ್ಮಲ್ಲಿ ಎಷ್ಟೆಲ್ಲ ಭಾವನೆಗಳನ್ನು ಉದ್ದೀಪನಗೊಳಿಸುತ್ತದೆ!
February 28, 2008 6:23 AM
ಸುಪ್ತದೀಪ್ತಿ suptadeepti said...
ಹ್ಮ್! ಆಗಸ.... ಅದು ವಿಸ್ಮಯಗಳ ಸಾಗರ, ನಮ್ಮೆಲ್ಲರ ಕುತೂಹಲಕ್ಕೆ ಆಗರ... ಇನ್ನೂ ಏನೇನೋ. ಅದನ್ನೆಲ್ಲ ಬರೆದರೆ ಎಷ್ಟೊಂದು ಕವಿತೆಗಳಾಗಬಹುದು! ಪ್ರತಿಕ್ರಿಯೆಗೆ ಧನ್ಯವಾದಗಳು.
February 28, 2008 8:24 AM
sritri said...
ಆಗಸದ ಕುರಿತ ನಿನ್ನ ಕಲ್ಪನೆಗೂ ಆಗಸವೇ ಮಿತಿ! :)
ಈ ಕವನದಲ್ಲಿ ಸಂಸ್ಕೃತ ಸ್ವಲ್ಪ ಹೆಚ್ಚಾಗಿಯೇ ಇದೆ ಅಲ್ಲವೇ?
February 28, 2008 1:20 PM
ಸುಪ್ತದೀಪ್ತಿ suptadeepti said...
ಸದ್ಯ!! ನನ್ನ ಕಲ್ಪನೆಗೆ ಆಗಸವಾದರೂ ಮಿತಿಯಾಗಿದೆಯಲ್ಲ.
Big-Bang Theory ಬಗ್ಗೆ ಯೋಚನೆ ಬಂತು, ಏನೂ ಇಲ್ಲದಾಗ ವಿವಿಧ ವ್ಯೋಮಗಳು ಹುಟ್ಟಿಕೊಂಡ ಕ್ಷಣ ಹೇಗಿದ್ದಿರಬಹುದು? ಅದನ್ನ ಹೇಳಹೊರಟೆ, ಸಂಸ್ಕೃತ ಬಿಟ್ಟು ಬೇರೆ ಪದಗಳೇ ಹೊಳೆಯಲಿಲ್ಲ.
ಪ್ರತಿಕ್ರಿಯೆಗೆ ಧನ್ಯವಾದ ವೇಣಿ.
February 28, 2008 7:29 PM
ಶ್ರೀವತ್ಸ ಜೋಶಿ said...
ಕವಿತೆ ಬರೆಯುವಾಗ ವ್ಯಾಕರಣಕ್ಕೆ ಎಷ್ಟು ಮಹತ್ವ ಕೊಡಬೇಕು ಎನ್ನುವುದು ಚರ್ಚೆಯ ವಿಷಯ. ಆದರೂ,
೧. ’ವ್ಯೋಮ’ಕ್ಕೆ ಬಹುವಚನ (ಮೊದಲ ಚೌಪದಿಯ ಮೊದಲ ಸಾಲು) ಯಾಕೋ ಸರಿ ಕಾಣಿಸುತ್ತಿಲ್ಲ. ಆಕಾಶಗಳು? ಗಗನಗಳು...?೨. ದರ್ಪವನು ’ಕೆಡೆ’ದಂತೆ? ಅಥವಾ ಅದು ಕಡೆದಂತೆ ಆಗಬೇಕಿತ್ತಾ?
೩. "ನವವಧುವ ಕೆದರುದಲೆ" ಇಲ್ಲಿ ’ನವವಧುವ’ ಎಂದರೆ ದ್ವಿತೀಯಾವಿಭಕ್ತಿ (ನವ ವಧುವನ್ನು) ಎಂದಂತೆ ಭಾಸವಾಗುತ್ತದೆ. ನೀವು ಅಂದುಕೊಂಡದ್ದು ಷಷ್ಠೀ ವಿಭಕ್ತಿ (ನವ ವಧುವಿನ ಕೆದರು+ ತಲೆ) ಅಂತ ನನ್ನೆಣಿಕೆ. ’ಕೆದರು’ ಕ್ರಿಯಾಪದವಾಗಿ ಬಳಸಿದರೆ ’ಕೆದರುದಲೆ’ ಆಗದು, ಕೆದರುತಲೆ ಆಗಬೇಕು. ಕೆದರಿದ ಅಂತ ಅರ್ಥದಲ್ಲಿ ಬಳಸಿದ್ರಾ? ಆಗಲೂ ’ವಧುವ’ ಆಗದು, ವಧುವಿನ ಆಗಬೇಕು. ಒಟ್ಟಿನಲ್ಲಿ ಅಲ್ಲೇನೋ ಗಡ್‌ಬಡೈಜೇಶನ್ ಆಗಿದೆ.
ಇವನ್ನು ಹೊರತುಪಡಿಸಿ ಬರೆಗಳು-೦೨ ಚೆನ್ನಾಗಿವೆ!
February 29, 2008 10:54 AM
ಸುಪ್ತದೀಪ್ತಿ suptadeepti said...
ವತ್ಸ, ನಿಮ್ಮ ೨ ಆರ್ಗ್ಯುಮೆಂಟ್ಸ್ ಒಪ್ಪುವಂಥವೇ. ಆದರೂ ಕಾವ್ಯಾತ್ಮಕ ಅಭಿವ್ಯಕ್ತಿಯಲ್ಲಿ ಪದಗಳು ಅವುಗಳ ವ್ಯಾಕರಣ ಬಂಧ ಮೀರಿ ಅರ್ಥ ಹೊಮ್ಮಿಸುವುದನ್ನು ನಾವು ಕಾಣುತ್ತೇವೆ, ಅದೇ ಪ್ರಯತ್ನ ಇಲ್ಲಿಯೂ.
೧) ವ್ಯೋಮ ಪದದ ಶಬ್ದಾರ್ಥ ಗಗನ, ಆಕಾಶ. ನಾನು ಇಲ್ಲಿ ನೀಹಾರಿಕೆಗಳು, Galaxies ಅನ್ನುವ ಸಂದರ್ಭದಲ್ಲಿ ಬಳಸಿದ್ದೇನೆ.
೨) "ಕೆಡೆ"= ಬೀಳಿಸು, ಕೆಡವು."ಕಡೆ" ಅಲ್ಲ.
೩) "ನವ ವಧುವಿನ ಕೆದರಿದ ತಲೆ ಮತ್ತು ಕರಗಿ ಹೋದ (ಕದಡಿದ) ಕುಂಕುಮದಂತೆ" ಮೂರನೇ ಚರಣದ ಎರಡನೇ ಸಾಲಿನ ಪದವಿಂಗಡಣೆ.
February 29, 2008 2:29 PM
decemberstud said...
Totally.....
I mean poets come up with new words too......"Templeman" for a priest... really? Yes, I have seen several such poems. I have used ವೀರ್ಯಾಳು as a word in one of my poems.
I think poets don't intentionally throw the rules out, but if it happens automatically and if the message is conveyed well, hey, why not? Soooo, I agree with the owner of this blog :)
February 29, 2008 4:39 PM
ಸುಪ್ತದೀಪ್ತಿ suptadeepti said...
ಧನ್ಯವಾದಗಳು ಡಿ.ಎಸ್.
February 29, 2008 5:01 PM
Srivathsa Joshi said...
Thank you for clarification from the blog owner (and endorsement from blog owner's friend :-)
March 1, 2008 3:56 AM
Shiv said...
ಸುಪ್ತದೀಪ್ತಿ, ಪದಗಳ ಜೊತೆ ನಿಮ್ಮ ಬರೆ ಆಟ ಸೊಗಸಾಗಿದೆ..
ಕೊನೆಯ ಪ್ಯಾರ ಸೂಪರ್ !
March 1, 2008 10:26 PM
ಸುಪ್ತದೀಪ್ತಿ suptadeepti said...
ಧನ್ಯವಾದಗಳು ವತ್ಸ.
ಶಿವ್, ನಿಮಗೂ ಧನ್ಯವಾದಗಳು.
March 1, 2008 10:42 PM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 22 May 2008
Subscribe to:
Post Comments (Atom)
No comments:
Post a Comment