ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May, 2008

(ಅನು)ಕಂಪನ

Friday, January 25, 2008

ರಾಷ್ಟ್ರದ ಮಹಾತ್ಮ ಜನಿಸಿದ ರಾಜ್ಯ-
ಆಗಿದೆ ಪ್ರಕೃತಿ ಪ್ರಕೋಪಕೆ ಆಜ್ಯ,
ನೆರಳಾಗಿದ್ದವು ನೆಲೆಗಳು ಅಂದು-
ಸೆರೆಮನೆ ಗೋರಿಗಳಾಗಿವೆ ಇಂದು.

ಮಕ್ಕಳ ಪೊಗರಿಗೆ ಮುನಿದಳೆ ಮಾತೆ?
ಶಿವ ತಾಂಡವಕೆ ಬುವಿ ಅದುರಿತ್ತೆ?
ನರ ನಡೆಸುವ ಪ್ರತಿ ನರಮೇಧಕ್ಕೆ,
ಮರೆಯ ನರೋತ್ತಮ ನೀಡಿದ ಶಿಕ್ಷೆ!

ನ್ಯಾಯಾನ್ಯಾಯದ ಪ್ರಶ್ನೆಯ ದಾಟಿ-
ಯಾವನ ತಪ್ಪಿಗೆ ಯಾರಿಗೋ ಚಾಟಿ!
ಅರಸನ ದೊರೆತನ, ಬಡವನ ಹಸಿವು,
ಅರೆಕ್ಷಣದಲ್ಲಿ ಸರಿಸಮ ಬಲವು.

ಕಣ್ಣಿಗೆ ಬೆಳಕು ತಿಳಿಯುವ ಮುನ್ನ
ಮಾಸಿದ ಚಿತ್ರ, ಜೀವನ ಭಿನ್ನ,
ಅರಳುವ ಮುಗುಳುಗಳಾಸೆಯ ಕೆದಕಿ,
ಮೆರೆಸಿದೆ ಶೌರ್ಯ, ಆಸರೆ ಹೊಸಕಿ.

ಒಸಗೆಯ ನೀಡದೆ ಕರೆದೊಯ್ಯಲಿಕೆ
ಒಂದೇ ತೋಳಲಿ ತುಂಬಿದೆ ತೆಕ್ಕೆ
ಯಾರನು ಕರೆದೆ? ಯಾರನ್ನುಳಿದೆ?
ತೆರೆಸರಿಸದೆಯೇ ಪರದೆಯನೆಳೆದೆ.

ನೋವು-ನೆತ್ತರು, ಅಳು-ಆಕ್ರೋಶ,
ಮಾನವನೇಳ್ಗೆಯೇ ಮಾಯಾಪಾಶ!
ಬರಲಿರುವುದೆಲ್ಲ ಎದುರಿಸುವೆನೆಂದೆ,
ನೆರೆಮನೆಯೊಳಿದ್ದೂ ಎದೆಗುಂದಿ ಬೆಂದೆ.
(೨೯-ಜನವರಿ-೨೦೦೧)
(ಜನವರಿ ೨೬, ೨೦೦೧-ರಂದು ಗುಜರಾತನ್ನು ನಡುಗಿಸಿದ ಭೂಕಂಪದ ಅನುಕಂಪನ)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:30 PM
Labels:

5 ಪತ್ರೋತ್ತರ:

sritri said...
ಕವನ ಓದಿ ಅಂದಿನ ಘೋರ ನೆನಪು ಮರುಕಳಿಸಿತು. ಯಾವನ ತಪ್ಪಿಗೆ ಯಾರಿಗೋ ಚಾಟಿ ಬೀಸುತ್ತಲೇ ಇರುತ್ತದೆ ಆಗಾಗ ಪ್ರಕೃತಿ. ನೊಂದವರಿಗೆ ಕಂಬನಿ ಇಡುವುದಷ್ಟೇ ನಮಗುಳಿದ ವಿಧಿ.
January 26, 2008 9:37 PM

suptadeepti said...
ಎಲ್ಲೋ ನಡೆಯುವ ದುರಾಚಾರಕ್ಕೆ ಮತ್ತೆಲ್ಲೋ ದುರಂತ... ಇದೆಂಥಾ ಆಟ!? ಇದೇ ಸಂದರ್ಭದ ಹಿನ್ನೆಲೆಯಲ್ಲಿ ಬರೆದ ಇನ್ನೊಂದು ಕವನವೂ ಇದೆ, ಮುಂದಿನ ವಾರಕ್ಕೆ....
January 26, 2008 9:56 PM

ತೇಜಸ್ವಿನಿ ಹೆಗಡೆ said...
"ಅಹಂ ಬ್ರಹ್ಮಾಸ್ಮಿ" ಎನ್ನುವ ಮನುಷ್ಯನಿಗೆ ಪ್ರಕೃತಿ ಕಲಿಸಿದ ಪಾಠವಾಗಿತ್ತು ಅದು.. ಆದರೆ ಅಮಾಯಕ ಮಕ್ಕಳು ತೀರಿದ್ದು ಮಾತ್ರ ತುಂಬಾ ದುರದೃಷ್ಟಕರ. ಪ್ರಕೃತಿಯ ಮುಂದೆ ಯಾರೂ ದೊಡ್ಡವರಲ್ಲ..
January 27, 2008 10:44 PM

Mahantesh said...
padya aMdina dinagaLanna nenapige taMditu...tumba chennagide....
January 27, 2008 10:52 PM

suptadeepti said...
ತೇಜಸ್ವಿನಿ, ಮಹಾಂತೇಶ್, ಧನ್ಯವಾದಗಳು.
January 27, 2008 11:16 PM

No comments: