ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May, 2008

ಮಾರಾಟಕ್ಕಿವೆ....

Saturday, March 8, 2008

(ಮಾರ್ಚ್ ೦೮- ಜಾಗತಿಕ ಮಹಿಳಾ ದಿನ.
ಈ ರಚನೆ-- ನಮ್ಮ-ನಿಮ್ಮೂರಿನ ಗಲ್ಲಿಗಳಲ್ಲಿನ
ಚಂಪ, ಮಲ್ಲಿ, ಜಾಜಿ, ಗುಲಾಬಿ, ಸೇವಂತಿಯರಿಗೆ...)

ನಮ್ಮ-ನಿಮ್ಮೂರಿನಲಿ ಸಂತೆ ಸೇರುವ ದಿನ
ಘಮಘಮಿಸಿ ನಳನಳಿಸಿ ಕಣ್ಸೆಳೆವ ಗಲ್ಲಿ
ಹೂವಾಡಿಗರೆಲ್ಲ ಮಾರುವರು ಹೊರೆ ತಂದು
ಚಂಪ, ಮಲ್ಲಿಗೆ, ಜಾಜಿ, ಗುಲಾಬಿಗಳನಿಲ್ಲಿ

"ಹೂವು ಬೇಕೇ ಹೂವು..." ಭಾವ ಬಣ್ಣವು ನೂರು
ಯಾವ ದೇವನ ಪಾದ, ಮತ್ತಾರ ಮುಡಿಗೆ
ಕಣ್ಣು-ಮನಗಳ ತಣಿಸಿ, ನಲ್ಮೆ ಪ್ರೀತಿಯ ಉಣಿಸಿ
ಅಲ್ಪ ಬಾಳಿನ ಚಣಕೆ ಸಾರ್ಥ ಘಳಿಗೆ

ಹೊತ್ತ ಗಿಡಕೊಂದೊಂದೂ ಹೆಸರಾಗಿ ಅರಳಿದವು
ಹೆತ್ತಬ್ಬೆಗೆಂದೆಂದು ತನ್ನ ಕುಡಿ ಭಾರವೆ?
ಚಿತ್ತ ಕಲಕಿದ ಕೈಗೆ ಸೇರಿದ ಕ್ಷಣದಲ್ಲಿ
ಅತ್ತವೆ? ನಕ್ಕವೆ - ಸಾಫಲ್ಯವೆಂದು?

ಸೃಷ್ಟಿ ಲೀಲೆಯ ನೋಡ, ಫಲ ಹೊರುವ ಕ್ಷೇತ್ರವದು
ಯಾರ್ಯಾರ ಕೈಸೇರಿ ನಲುಗಿ ಕರಗಿದವು
ದೇವ ಪೂಜೆಯ ಪುಣ್ಯ ಯಾವ ಪಾಪದ ಲೆಕ್ಕ?
ಮಂಗಲೆಯ ಸಿಂಗರಕೆ ಮೀಸಲೇ ಬಾಳು?

ಅರೆಬಿರಿದ ನಸುನಗೆಯ ಕನಸಲ್ಲಿ ಹಿಡಿವರೆ
ಕನಸುಗಳ ಶವಯಾತ್ರೆಗೂ ಬೇಕಾದವು
ಚೈತ್ರ ಚೈತನ್ಯದೊಳು ಚಂದಗಾಣುವರೆಲ್ಲ
ಮಾಘ ಮಘಮಘಿಸದೆಯೆ ಬಾಳು ಬೋಳು
(೦೧-ಮಾರ್ಚ್-೨೦೦೧)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:01 AM
Labels:

8 ಪತ್ರೋತ್ತರ:
decemberstud said...
ಆಹ್.... ಇದನ್ನೇ ನಾನು ಹೇಳಿದ್ದು.. ಓದುತ್ತಿದ್ದ ಹಾಗೇ "J" ಕವಿತೆ ಅನ್ನಿಸಬೇಕು ಅಂತ. ಸಖತ್ತಾಗಿದೆ....
March 8, 2008 10:19 PM

sunaath said...
ದೀಪ್ತಿ, ಸಂಕೀರ್ಣ ಭಾವನೆ, ಸಂಕೀರ್ಣ ಪ್ರತೀಕ ಬೆರೆತ ಸಂಕೀರ್ಣ ಕವನ!
March 9, 2008 12:54 AM

ಸುಪ್ತದೀಪ್ತಿ suptadeepti said...
ಡಿ.ಎಸ್. ಮತ್ತು ಸುನಾಥ್ ಕಾಕಾ, ಇಬ್ಬರಿಗೂ ಧನ್ಯವಾದಗಳು.
March 9, 2008 9:39 PM

ತೇಜಸ್ವಿನಿ ಹೆಗಡೆ said...
ಅಕ್ಕ, ನೋವದುಂಬಿ ನಲಿವು ಬೀರಿ ನಗುತ ನಗಿಸುವ ಕವನ..
ಕಣ್ತುಂಬಿ ಬಂತು.
ನಿಮ್ಮ "ಹೀಗೊಂದು ಯೋಚನೆ" ತುಂಬಾ ಇಷ್ಟವಾಯಿತು. ನೆನಪಿಟ್ಟುಕೊಳ್ಳುವೆ.
March 9, 2008 11:32 PM

ಮನಸ್ವಿನಿ said...
ಅಕ್ಕ, ಚಂದ ಇದೆ.
’ಹೊತ್ತ ಗಿಡಕೊಂದೊಂದೂ ಹೆಸರಾಗಿ ಅರಳಿದವು
ಹೆತ್ತಬ್ಬೆಗೆಂದೆಂದು ತನ್ನ ಕುಡಿ ಭಾರವೆ?
ಚಿತ್ತ ಕಲಕಿದ ಕೈಗೆ ಸೇರಿದ ಕ್ಷಣದಲ್ಲಿ
ಅತ್ತವೆ? ನಕ್ಕವೆ - ಸಾಫಲ್ಯವೆಂದು?’
ಸಿಕ್ಕಾಪಟ್ಟೆ ಇಷ್ಟ ಆದವು ಈ ಸಾಲುಗಳು.
March 10, 2008 8:20 AM

ಸುಪ್ತದೀಪ್ತಿ suptadeepti said...
ತೇಜು, ಸು, ಇಬ್ಬರಿಗೂ ಧನ್ಯವಾದಗಳು.
March 10, 2008 9:28 AM

ಸಿಂಧು Sindhu said...
ಸುಪ್ತದೀಪ್ತಿ,
ಆಶಯ ಇಷ್ಟ ಆಯಿತು.ಎಷ್ಟು ಚೆನ್ನಾಗಿ ನೇಯುತೀರಿ ಹೂವ ಮಾಲೆ!
ಅತ್ತವೆ ನಕ್ಕವೆ ಸಾಫಲ್ಯವೆಂದು.. ತುಂಬ ಚೆನಾಗಿ ಮೂಡಿ ಬಂದಿದೆ.
ಪ್ರೀತಿಯಿಂದ
ಸಿಂಧು
March 12, 2008 10:02 AM

ಸುಪ್ತದೀಪ್ತಿ suptadeepti said...
ಸಿಂಧು, ಧನ್ಯವಾದ ಕಣೇ.
March 12, 2008 2:07 PM

No comments: