Thursday, January 17, 2008
ಬಳ್ಳಿ ತೋಳಿನ ಹಸುರು ಉಡುಗೆಯ
ಸುಕೋಮಲೆ, ಲತಾಂಗಿ-
ನನ್ನ ಪ್ರೇಯಸಿ.
ನಾ ತೋರಿದೆಡೆಯಲ್ಲಿ ನಸುನಗುತ್ತ
ಮೌನವಾಗಿ ಇರುವವಳು-
ನನ್ನ ಪ್ರೇಯಸಿ.
ಗಾಳಿಗೆ ತಲೆದೂಗುತ್ತ, ಬಿಸಿಲಿಗೆ ಅರಳುತ್ತ
ನಲಿಯುತ್ತ ಬಾಳುವವಳು-
ನನ್ನ ಪ್ರೇಯಸಿ.
ಅವಳುಸಿರೇ ನನ್ನ ಪ್ರಾಣವಾಯು,
ಆದರೂ ಹೆಮ್ಮೆ ಪಡಳು
-ನನ್ನ ಪ್ರೇಯಸಿ.
ದಿನ ಕಳೆದ ಕ್ಷಣದಲ್ಲಿ ಅವಳ ಬಳಿ ನಿಂತಾಗ
ತಬ್ಬಿಕೊಳ್ಳಲೂ ನಾಚುವಳು
-ನನ್ನ ಪ್ರೇಯಸಿ.
ಮಾತಿಲ್ಲದೆ ನೂರು ಕಥೆ ಹೇಳುವಂಥ
ಕಲೆಯನ್ನು ಬಲ್ಲಾಕೆ
-ನನ್ನ ಪ್ರೇಯಸಿ.
ಬೆಳೆದರೆ ಚಿಗುರಾಗಿ, ಅರಳಿದರೆ ಸುಮವಾಗಿ
ಕಾಯಾಗಿ, ಹಣ್ಣಾಗಿ ಬಾಗುವಳು
-ನನ್ನ ಪ್ರೇಯಸಿ.
ಧರಣಿಯೆಲ್ಲೆಡೆ ತೌರ ನೆಂಟರಾದರೂ
ಮನೆಯಿಂದ ಅಗಲಳು
-ನನ್ನ ಪ್ರೇಯಸಿ.
ಸದಾ ನವ ಯೌವನದಿ ಸೊಂಪಾಗಿ ಬಳುಕುತ್ತ
ನನಗೆ ಚೇತನ ಕೊಡುವಳು
-ನನ್ನ ಪ್ರೇಯಸಿ.
ಕಸ-ಮುಸುರೆ ಮುಗಿಸಿ ನಾ ಉಸಿರೆಳೆದು ನಿಂತಾಗ
ಹೂಕುಂಡದಲ್ಲಿ ನಗುವಳು
-ನನ್ನ ಪ್ರೇಯಸಿ.
(೧೦-ನವೆಂಬರ್-೧೯೯೮)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 6:40 PM
Labels: 'ಭಾವಗಾನ'ದಿಂದ-, ರಮ್ಯಗಾನ...
13 ಪತ್ರೋತ್ತರ:
ಸುಶ್ರುತ ದೊಡ್ಡೇರಿ said...
"ಧರಣಿಯೆಲ್ಲೆಡೆ ತೌರ ನೆಂಟರಾದರೂ
ಮನೆಯಿಂದ ಅಗಲಳು
-ನನ್ನ ಪ್ರೇಯಸಿ."
ಸೂಪರ್ರಲ್ರೀ! ನಾನೂ ಇಂಥದ್ದೇ ಒಂದು 'ನನ್ನ ಪ್ರೇಯಸಿ'ಯನ್ನ ಹುಡುಕ್ಕೋಬೇಕು.. ;)
January 17, 2008 7:52 PM
ಶಾಂತಲಾ ಭಂಡಿ said...
suptadeepti
ಅವರೆ..."ಪದೇ ಪದೇ ನೆನಪಾದೆ, ಪದೇ ಪದೇ ನೆನೆದೇ..."ನೀವು ಆರಾಧಿಸುವ ಕೃಷ್ಣನ ಕೊಳಲಲ್ಲಿಹಳೋ... ಕೊರಳಲ್ಲಿಹಳೋ...ಪಾದ ಪೂಜೆಗೆ ಅಣಿಯಾಗಿ ಕಾಯುತಲಿಹಳೋ...ಅಥವಾ ಪದಪುಂಜವಾಗಿ ತೇಲುತಲಿಹಳೋ? ಎಲ್ಲಿಹಳು ಅವಳು? ಮನೆಯಲ್ಲೇ ಇರುವವಳು ಆ ನಿಮ್ಮ ಪ್ರೇಯಸಿ?
January 17, 2008 8:12 PM
suptadeepti said...
ಸುಶ್, ಶಾಂತಲಾ, ಇಬ್ಬರಿಗೂ ಧನ್ಯವಾದಗಳು.
ಸುಶ್, ಇಂಥ ಪ್ರೇಯಸಿಯನ್ನ ಹುಡುಕ್ಕೊಂಡ್ರೆ ಸಾಕೋದಕ್ಕೆ ಕಷ್ಟ ಇಲ್ಲ. ಒಂದಿಷ್ಟು ಪ್ರೀತಿ, ಒಂದಿಷ್ಟು ಮಣ್ಣು-ನೀರು, ಒಂದಿಷ್ಟು ಗಾಳಿ-ಬೆಳಕು ಇರೋ ಒಂದು ಮೂಲೆ... ಇಷ್ಟೇ ಸಾಕು ಇವಳಿಗೆ. ಎಂಥಾ ಚೆನ್ನಾಗಿ ಬಳುಕ್ತಾಳೆ, ನಗ್ತಾಳೆ ಗೊತ್ತಾ?
ಶಾಂತಲಾ, ಎಲ್ಲೆಲ್ಲೂ ಇರುವ "ಅವನ" ಪೂಜೆಗೆ ಇವಳೂ ಸದಾ ಅಣಿಯಾಗಿಯೇ ಇರುವಂಥವಳು. ಮೌನಮುಗ್ಧಮಾನಿನಿ.
ಇಂಥವಳು ಪದೇ ಪದೇ ನೆನಪಾಗದೆ ಇದ್ದರೆ ಹೇಗೆ?
January 17, 2008 10:47 PM
ಸುಪ್ರೀತ್.ಕೆ.ಎಸ್. said...
“ಧರಣಿಯೆಲ್ಲೆಡೆ ತೌರ ನೆಂಟರಾದರೂ
ಮನೆಯಿಂದ ಅಗಲಳು-”
ಈ ಸಾಲು ನನ್ನ ಉಸಿರು ಹಿಡಿದು ಕಟ್ಟಿಸಿತು ಎಂದು ಹೇಳಬೇಕಂದುಕೊಂಡು ಇಲ್ಲಿಗೆ ಬಂದರೆ ಸುಶ್ರುತಣ್ಣ ಆಗಲೇ ಅದನ್ನು ದಾಖಲಿಸಿ ಬಿಟ್ಟಿದ್ರು!
ಏನು ನಿಮ್ಮ ಲಹರಿಗೆ ಮನೆಯ ಪ್ರತಿ ಸಂಗತಿ, ಪರಿಸರದ ಒಂದೊಂದು ಕ್ರಿಯೆಯೂ ಪ್ರೇಯಸಿಯ, ಪ್ರಣಯದ ರೂಪಕವಾಗಿ ಕಾಣಿಸುತ್ತಿವೆ? ನಿಜಕ್ಕೂ ನೀವು ಒಬ್ಬ ಪ್ರೇಮಿ…!
January 18, 2008 4:05 AM
suptadeepti said...
ತಪ್ಪೊಪ್ಪಿಗೆಯಿದೆ ಸುಪ್ರೀತ್, ನಾನೊಂದು ಜೀವನ ಪ್ರೇಮಿ.
January 18, 2008 10:59 AM
sritri said...
ಹೂಕುಂಡದಲ್ಲಿ ಪ್ರೇಯಸಿ! ಹೊಸ ಕಲ್ಪನೆ. ಆರೈಕೆಗೆ ಮುದಗೊಂಡು ನಳನಳಿಸುವ, ಉದಾಸೀನ ಮಾಡಿದರೆ ಸೊರಗುವ, ಪ್ರೀತಿಯ ಸ್ಪರ್ಶಕ್ಕೆ ನಗುವ ಮಗುವಿನಂತೆ ...ನನಗೆ ಹೀಗನ್ನಿಸುತ್ತದೆ.
January 18, 2008 11:32 AM
suptadeepti said...
ವೇಣಿ, "ನಗುವ ಮಗುವಿನಂತೆ" ಅಂದಿದ್ದೀ, ಮಗು ಬೆಳೆದು ಬಲಿತಾಗ ನಮ್ಮ ಅಂಕೆಯೊಳಗೆ ಇರೋದಿಲ್ಲ, ಆರೈಕೆ ಬಯಸೋದಿಲ್ಲ. ಆದರೆ ಈ ಪ್ರೇಯಸಿ ಮಾತ್ರ ಎಂದಿಗೂ ಬಲಿಯೋದೇ ಇಲ್ಲ (ಬೆಳೀತಾಳೆ), ಸದಾ ಆರೈಕೆ ಪ್ರೀತಿ ಪಡೆದು ನಗುನಗುತ್ತಿರುತ್ತಾಳೆ... ನನಗೆ ಹೀಗನಿಸಿದ್ದರಿಂದ ಈ ಕವನ ಹುಟ್ಟಿತು. ಧನ್ಯವಾದ.
January 18, 2008 1:24 PM
ಪಯಣಿಗ said...
DharaNiyellede TavaruNentariddaroo Noorumounadale sudutiruva bEgekaaDutide nittusira hogePremada sparsha ellara maneyalloo hasirige dorakadeke?
nimma kalpane-premakke sharanu
January 20, 2008 6:17 AM
suptadeepti said...
ಧನ್ಯವಾದ ಪಯಣಿಗ.
ಎಲ್ಲರ ಮನೆಯಲ್ಲೂ ಹಸಿರಿಗೆ ಪ್ರೀತಿ ದೊರಕದೇಕೆ? ಉತ್ತರ ನನ್ನಲ್ಲಿಲ್ಲ.
January 21, 2008 11:26 AM
ಸುಪ್ರೀತ್.ಕೆ.ಎಸ್. said...
ತಪ್ಪು ಎಂದರೇನು? ನಮ್ಮ ಮನಸ್ಸಿನಲ್ಲಿ ನಿಸ್ಪೃಹವಾದ ಪ್ರೇಮ ಮೂಡಿದರೆ ಸಾಕು. ನೀವು ಒಂದು ಹೆಣ್ಣನ್ನೋ, ಗಂಡನ್ನೋ ಪ್ರೀತಿಸಲೇಬೇಕು ಎಂಬುದಲ್ಲ. ನಿಮ್ಮ ಮನಸ್ಸು ಪ್ರೀತಿಯಲ್ಲಿ ಮುಳುಗಿದ ಕ್ಷಣದಿಂದಲೇ ನೀವು ಪ್ರೇಮಿ. ಅವರವರ ಸಂಸ್ಕಾರಕ್ಕೆ ತಕ್ಕ ಹಾಗೆ ಅವರು ಪ್ರೀತಿಸುವ ವಸ್ತುವನ್ನು, ಧ್ಯೇಯವನ್ನು ಆಯ್ದುಕೊಳ್ಳುತ್ತಾರೆ. ನೀವು ಅತ್ಯುಷ್ಕೃಷ್ಟವಾದ ಜೀವನವನ್ನೇ ಆಯ್ದುಕೊಂಡಿದ್ದೀರಿ… Good choice!
January 24, 2008 11:43 AM
suptadeepti said...
"ತಪ್ಪೊಪ್ಪಿಗೆಯಿದೆ" ಅಂತ ತಮಾಷೆಗೆ ಹೇಳಿದ್ದು... ಇಂಗ್ಲಿಷ್ ಭಾಷೆಯಲ್ಲಿ "guilty as accused" ಅಂತ ಹೇಳುವ ಹಾಗೆ... "ನಿಜಕ್ಕೂ ನೀವು ಒಬ್ಬ ಪ್ರೇಮಿ" ಅನ್ನುವ ನಿಮ್ಮ ಮಾತಿಗೆ ಆ ಉತ್ತರ, ಅಷ್ಟೇ.ಅತ್ಯುತ್ಕೃಷ್ಟವಾದ ಜೀವನ... ಹುಂ! ಜೀವನ ಉತ್ಕೃಷ್ಟ ಅನ್ನುವ ಇರಾದೆಯಿದ್ದರೆ ಜೀವನ ಪ್ರೇಮವೂ ಇರುತ್ತದೆ ಅಂತ ನನ್ನ ನಂಬಿಕೆ Or vice versa.
January 24, 2008 5:36 PM
sunaath said...
naviraada bhaavanegaLu juLu juLu haridive.
February 6, 2008 2:05 AM
suptadeepti said...
ಧನ್ಯವಾದ ಸುನಾಥರೇ.
February 6, 2008 9:01 AM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 22 May 2008
Subscribe to:
Post Comments (Atom)
No comments:
Post a Comment