ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 22 May 2008

ಗ್ರಾಫ್ಟಿಂಗ್

Monday, January 21, 2008

ತಾಯಿ ಗಿಡದಲ್ಲಿ ಎಲೆಯ ಬುಡದಲ್ಲಿ
ಗಿಣ್ಣಿನ ಕಣ್ಣಾಗಿ ಹಾಯಾಗಿದ್ದೆ
ಬಿಸಿಲು-ಮಳೆಗಳ, ಗಾಳಿ-ಛಳಿಗಳ
ಹೊಡೆತಗಳಿಲ್ಲದೆ ಸುಖವಾಗಿದ್ದೆ.

ಅದೊಂದು ಬೆಳಗ್ಗೆ, ಅರುಣೋದಯದ ಘಳಿಗೆ
ಮೈ ಚಾಚಿ ಮಂಜುಹನಿ ಹೀರುತ್ತಿದ್ದೆ
ಸುಂದರ ಜಗದಲ್ಲಿ ನೆಮ್ಮದಿಯ ನೆಲೆಗೆ
ನನ್ನ ಅದೃಷ್ಟವನ್ನು ಹೊಗಳುತ್ತಿದ್ದೆ

ಎಲ್ಲಿಂದಲೋ ಬಂತು ಅಗಾಧ ನೆರಳು
ಏನೆಂದು ನೋಡಲೂ ಭಯ
ಕಸಕ್ಕನೆ ಎಲ್ಲೋ ಇರಿದಂಥ ನೋವು
ತವರಿಂದ ಬೇರ್ಪಟ್ಟ ಗಾಯ.

ಈ ಗಿಡದ ಮೊಗ್ಗನ್ನು ಆ ಗಿಡಕೊಯ್ದು
ಕಸಿಕಟ್ಟಿ ರಕ್ಷೆಯಿಟ್ಟ
ಬಿಸಿಲು-ಮಳೆಗಳ, ಗಾಳಿ-ಛಳಿಗಳ
ಹೊಡೆತವಿರದಂಥ ಬಾಳು ಕೊಟ್ಟ

ಹೊಸ ನೀರು-ಮಣ್ಣಿನ ಸಾರ ಹೀರಿ
ಹೊಸತನದ ಚಿಗುರು ಕಟ್ಟಿ
ಹೊಸ ಮನೆಯ ಅಂಗಳಕೆ ಶೃಂಗಾರ ನೀಡೆ
ಹೊಸದೊಂದು ಕನಸ ಬುಟ್ಟಿ

ಎಳೆ ಚಿಗುರು ಬೆಳೆದು ಹಸುರ ಚಿತ್ತಾರ
ಹರೆಯಕ್ಕೆ ಹೂವ ಹುರುಪು
ದೇವನ ಅಡಿಗಳಿಗೆ, ಮಾತೆಯ ಮುಡಿಗೆ
ಏರಲು ಜೀವ ಮುಡಿಪು

ಒಂದರ ಮೇಲೊಂದು ಮತ್ತೆ ಆಘಾತಗಳು
ಸ್ಥಳಾಂತರಗಳ ಛಳಕು
ಮತ್ತೊಂದು ಮಣ್ಣಲ್ಲಿ ನೀರು ಹೀರುವಷ್ಟರಲ್ಲಿ
ಬೇರುಗಳಲ್ಲಿ ಬಿರುಕು

ಹದವಾದ ನೆಲದಲ್ಲಿ ದೃಢವಾಗಿ ಬೇರೂರಿ
ಚೆನ್ನಾಗಿ ಬೆಳೆಯುವಾಸೆ
ಊರಿಂದ ಊರಿಗೆ ಅಲೆಯುವೀ ಬಾಳಲ್ಲಿ
ನೆಲೆಯೆಂಬುದೊಂದು ಕನಸೆ?

ಹಸುರು ಹೂವಾಗಿ, ಕಾಯಾಗಿ, ಹಣ್ಣಾಗಿ
ಮಾಗುವುದು ಲೋಕ ನಿಯಮ
ಬಿಸಿಲ ಹೀರುತ್ತ ಸುತ್ತೆಲ್ಲ ನೆರಳೂಡಿ
ಹಾಡುವುದು ನನ್ನ ಧರ್ಮ

ಸ್ನೇಹ-ಸೌಹಾರ್ದಗಳ ಫಲ-ಪುಷ್ಪ ನೀಡುತ್ತ
ಬೆಳೆವಂಥ ಬಾಳು ಸಾರ್ಥ
ಬೇರೂರಿದೆಡೆಯೆಲ್ಲ ಹರುಷ ನಗೆ ಚಿಮ್ಮಿಸಿ
ಅರಳುವುದೆ ಪ್ರೀತಿ ಅರ್ಥ
(೦೪-ಸೆಪ್ಟೆಂಬರ್-೧೯೯೮)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:30 AM
Labels:

17 ಪತ್ರೋತ್ತರ:

ಶಾಂತಲಾ ಭಂಡಿ said...
suptadeeptiಯವರೆ...
ತುಂಬ ಚೆನ್ನಾಗಿದೆ.
ಪ್ರತಿ ಸಾಲುಗಳು ಒಂದೊಂದು ಪುಟಗಳಾಗಿ ಸೇರುತ್ತ ಕೊನೆಯ ಸಾಲಿನ ಜೊತೆ ಪುಸ್ತಕವಾದ ರೀತಿ ಚೆನ್ನಾಗಿದೆ.
ಒಂದೊಂದು ಪುಟದಲ್ಲಿಯೂ ಒಂದೊಂದು ಪಾಠ. ತುಂಬ ಇಷ್ಟವಾಯಿತು.
January 21, 2008 2:42 PM

suptadeepti said...
ಧನ್ಯವಾದ ಶಾಂತಲಾ.
January 21, 2008 7:27 PM

sritri said...
ಈ ಕವನಕ್ಕೆ ಏನಾದರೂ ಹಿನ್ನಲೆ ಇದೆಯೇ? ಅನಿವಾಸಿ ಬದುಕಿನ ಬಗ್ಗೆ ಬರೆದಂತೆ ಅನಿಸಿತು.
January 22, 2008 10:04 AM

suptadeepti said...
ಒಂದೊಂದೇ ಮನೆ ಬದಲಾಯಿಸುತ್ತಾ ಸಾಗುವ ಒಂದು ಸಂಸಾರದ ಜೊತೆಗೆ ಪಯಣಿಸುವ ಒಂದು ಹೂಕುಂಡದ ಗಿಡವೂ ಅನಿವಾಸಿಯೇ ತಾನೇ? ಅಂಥ ಒಂದು ಗಿಡದ ಸ್ವಗತ ಇದು.
January 22, 2008 3:29 PM

ಜಗಲಿ ಭಾಗವತ said...
ಜೋಗ ಬತ್ತಿ ಹೋದ ಹಾಗಿದೆಯಲ್ಲ?
January 22, 2008 4:55 PM

suptadeepti said...
ಜೀವರಸ ಹೀರುವವರು ಜಾಸ್ತಿಯಾದಾಗ ಜೀವ ನದಿಯ ಒಸರು ಬತ್ತುವುದು ಸಹಜ, ಅಲ್ಲವೆ?
January 22, 2008 4:57 PM

Mahantesh said...
ಬಹಳ ಒಳ್ಳೇ ಕವನ..... ಮತ್ತೆ ಮತ್ತೆ ಓದಿದಿದಷ್ಟು ಆಳವಾದ ಅರ್ಥ......
i kavankke spoortianivasi badukina saareve?illa transferable jobnalli iruva janagaLa swagathve? hokuMda anisike....
ಹಸುರು ಹೂವಾಗಿ, ಕಾಯಾಗಿ, ಹಣ್ಣಾಗಿ
ಮಾಗುವುದು ಲೋಕ ನಿಯಮ
ಬಿಸಿಲ ಹೀರುತ್ತ ಸುತ್ತೆಲ್ಲ ನೆರಳೂಡಿ
ಹಾಡುವುದು ನನ್ನ ಧರ್ಮ
tuMba hiDisida sAlugaLu..... keLina line yaKo eno astu sariyagi artha agalilla....
ಸ್ನೇಹ-ಸೌಹಾರ್ದಗಳ ಫಲ-ಪುಷ್ಪ ನೀಡುತ್ತ
ಬೆಳೆವಂಥ ಬಾಳು ಸಾರ್ಥ
illi baLu saarth annodu sarthakave anno arthna? illa bere enadaru artha ideya? nanage gottiru haage sarth annode bere artha ide...
January 23, 2008 4:40 AM

ಹುಣ್ಣಿಮೆಯ ಹಂಬಲ said...
ತುಂಬಾ ಚೆನ್ನಾಗಿದೆ ಜ್ಯೋತಿ.
ಹಸುರು ಹೂವಾಗಿ, ಕಾಯಾಗಿ, ಹಣ್ಣಾಗಿ
ಮಾಗುವುದು ಲೋಕ ನಿಯಮ
ಬಿಸಿಲ ಹೀರುತ್ತ ಸುತ್ತೆಲ್ಲ ನೆರಳೂಡಿ
ಹಾಡುವುದು ನನ್ನ ಧರ್ಮ
ಸ್ನೇಹ-ಸೌಹಾರ್ದಗಳ ಫಲ-ಪುಷ್ಪ ನೀಡುತ್ತ
ಬೆಳೆವಂಥ ಬಾಳು ಸಾರ್ಥ
ಬೇರೂರಿದೆಡೆಯೆಲ್ಲ ಹರುಷ ನಗೆ ಚಿಮ್ಮಿಸಿ
ಅರಳುವುದೆ ಪ್ರೀತಿ ಅರ್ಥ

ಈ ಸಾಲುಗಳು ಬಹಳ ಹಿಡಿಸಿದವು. ನಿಮ್ಮ ಕವನಗಳನ್ನು ಓದುವುದೇ ಒಂದು ಖುಷಿ :-)
January 23, 2008 5:29 AM

suptadeepti said...
ಓದಿ ಖುಷಿಪಟ್ಟಿದ್ದಕ್ಕೆ ಮತ್ತು ಪ್ರತಿಕ್ರಿಯೆಗಳಿಗೆ ಧನ್ಯವಾದಗಳು ಮಹಾಂತೇಶ್ ಮತ್ತು 'ಹುಣ್ಣಿಮೆಯ ಹಂಬಲ'.

ಈ ಕವನ ಒಂಥರಾ self explanatory. ಅದರ ಅರ್ಥವೂ ಸಾರವೂ ಅಲ್ಲೇ ವ್ಯಕ್ತ. ಅಲೆಮಾರಿಯ ಅನಿಸಿಕೆಯೂ ಹೌದು, ಕುಂಡದಲ್ಲಿ ಬಾಳುವ (ಆಳವಾದ ಮಣ್ಣಲ್ಲಿ ಬೇರು ಬಿಡಲಾಗದ) ಒಂದು ಗಿಡದ ಸ್ವಗತವೂ ಹೌದು. ಇವೆರಡೂ ನಮಗೆ ಹತ್ತಿರದ್ದೇ, ಅಲ್ಲವೆ?ಸಾರ್ಥ ಪದವನ್ನು- ಅರ್ಥಭರಿತವಾದದ್ದು, ಸಾರ್ಥಕವಾದದ್ದು, meaningful, fruitful -ಅನ್ನುವ ರೀತಿಯಲ್ಲಿ ಬಳಸಿದ್ದೇನೆ. ಇದಕ್ಕಿಂತ ಬೇರೆ ಅರ್ಥವಿದ್ದರೆ ತಿಳಿಸಿ, ಮಹಾಂತೇಶ್.
January 23, 2008 10:37 AM

ತೇಜಸ್ವಿನಿ ಹೆಗಡೆ said...
ಸುಪ್ತದೀಪ್ತಿಯವರೆ..
ಗಿಡದ ಬದುಕು-ಬವಣೆಯ ಜೊತೆಗೆ ಒಂದು ಹೆಣ್ಣಿನ ಜೀವನದ ಪರಿಯನ್ನೂ ಇಲ್ಲಿ ಅರ್ಥೈಸಬಹುದಲ್ಲವೇ?. ಹೆಣ್ಣೂ ಕೂಡಾ ತವರಿನ ತಂಪಲ್ಲಿ ಬೆಳೆದು.. ತದನಂತರ ಬೇರೆಕಡೆ ಬೇರು ಬಿಟ್ಟು ಕವಲಾಗಿ ನೆರಳಾಗುವಳು, ಫಲ-ಪುಷ್ಪಗಳನ್ನಿತ್ತು ಸಾರ್ಥಳಾಗುವಳು. ಸರಿ ತಾನೆ?....
ತುಂಬಾ ಇಷ್ಟವಾಯಿತು..ಗ್ರಾಫ್ಟಿಂಗ್.
January 23, 2008 8:05 PM

suptadeepti said...
ಈ ಅರ್ಥವೂ ಅಲ್ಲಿ ವ್ಯಕ್ತವೇ. ವಾಚ್ಯವಾಗಿಯೂ ಸೂಚ್ಯಾರ್ಥಗಳನ್ನು ತುಂಬಿಸಿಕೊಂಡ ಕವನ. ಧನ್ಯವಾದ ತೇಜಸ್ವಿನಿ.
January 23, 2008 8:55 PM

ಸುಪ್ರೀತ್.ಕೆ.ಎಸ್. said...
“ಈ ಗಿಡದ ಮೊಗ್ಗನ್ನು ಆ ಗಿಡಕೊಯ್ದು
ಕಸಿಕಟ್ಟಿ ರಕ್ಷೆಯಿಟ್ಟ”
ದಾಂಪತ್ಯವೂ ಒಂದು ಬಗೆಯ ಗ್ರಾಫ್ಟಿಂಗೇ?

ಒಂದು ಗಂಡಿಗೊಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು ಹೋಗುವ ದಾಂಪತ್ಯದಲ್ಲಿ ಎಲ್ಲಿಂದಲೋ ತಂದ ಹೆಣ್ಣು ಮತ್ತೆಲ್ಲಿಂದಲೋ ಕರೆತಂದ ಗಂಡು ಕಸಿಯಾಗುವ ಪ್ರಕ್ರಿಯೆಯೇ ನಡೆಯುತ್ತದೆಯಲ್ಲವೇ?
January 24, 2008 12:00 PM

suptadeepti said...
ಇದಕ್ಕೆ ಬೇರೆ ಅರ್ಥ, ಉತ್ತರ ಬೇಡ, ಅಲ್ವಾ? ಧನ್ಯವಾದ ಸುಪ್ರೀತ್.
January 24, 2008 5:38 PM

Anonymous said...
naa hElabEkeMdu koDiddannellaa aagalE ellarU hELibiTTiddare sOiShTE hELtIni TUMBAA ishTa aayitumala
January 24, 2008 11:40 PM

suptadeepti said...
Thanks Mala.
January 25, 2008 10:00 AM

ತನ್ಮಯಿ said...
ಸುಪ್ತದೀಪ್ತಿಯವರೆ,
ಹಲವು ತಿಂಗಳುಗಳಿಂದ ನಿಮ್ಮ ಬ್ಲಾಗ್ ಓದುತ್ತಿದ್ದೇನೆ. ನಿಮ್ಮ ಕವಿತೆಗಳು ಮನಸ್ಸಿಗೆ ನನ್ನವೇ ಏನೋ ಎನ್ನುವಷ್ಟು ಹತ್ತಿರವಾಗಿವೆ. ಈ ಕವನ ಮತ್ತು 'ನನ್ನ ಪ್ರೇಯಸಿ' ನನಗೆ ಅತ್ಯಂತ ಪ್ರಿಯವಾದವು. ಗ್ರಾಫ್ಟಿಂಗ್ ನಲ್ಲೂ ಹೆಣ್ಣುಮಗಳೊಬ್ಬಳ ಜೀವನದಲ್ಲೂ ಹೋಲಿಕೆಯನ್ನು ಕಂಡು, ಅದನ್ನು ಕವಿತೆಯಲ್ಲಿ ಅಷ್ಟೇ ಸುಂದರವಾಗಿ ಸೆರೆಹಿಡಿದ ನಿಮ್ಮ ಸಾಮರ್ಥ್ಯಕ್ಕೆ ಅಭಿನಂದನೆಗಳು.
March 4, 2008 5:03 PM

ಸುಪ್ತದೀಪ್ತಿ suptadeepti said...
ತನ್ಮಯಿ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೇ ಬರುತ್ತಿರಿ, ಬರೆಯುತ್ತಿರಿ.
March 4, 2008 6:01 PM

No comments: