Sunday, March 23, 2008
ಕಂಡ ಕಂಡೆಡೆಯೆಲ್ಲ
ಕೈ ಮುಗಿದು ಫಲವೇನು
ಕಲ್ಲು ಗುಡಿಯೊಳಗೆಲ್ಲು ದೈವವಿಲ್ಲ
ಮೂರ್ತತೆಯ ನೆಪದಲ್ಲಿ
ಅಮೂರ್ತವಾಗಿಹುದು
ಒಳಗಣ್ಣಿಗಲ್ಲದೆ ನಿಲುಕದಲ್ಲ
ಪೂಜಿಸಲು ಅರ್ಚಿಸಲು
ಹಾಲು ಹಣ್ಣಿನ ಸೇವೆ
ಬೀದಿ ಬಡವನಿಗಿಷ್ಟು ಕೊಟ್ಟರೇನು?
ಹರಿದು ಮಣ್ಣನು ಸೇರ್ವ
ಎಳನೀರನೊಂದು ದಿನ
ಒಬ್ಬ ರೋಗಿಯ ಕೈಯೊಳಿಟ್ಟರೇನು?
ಕಡೆಗೊಂದು ದಿನ ನಾವು
ಎಲ್ಲ ನಡೆಯುವ ಹಾದಿ
ಇಂದು ಕಾಣದೆ, ಕುರುಡನಾನೆಯಂತೆ
ತಾನು ಕಂಡುದೆ ಸತ್ಯ
ಉಳಿದೆಲ್ಲ ಮಿಥ್ಯವೆನೆ
ಜಗವನ್ನು ಮಿಥ್ಯೆಯೇ ಆಳ್ವುದಂತೆ
ರಂಗಮಂಚದ ಮೇಲೆ
ರಂಗು ರಂಗಿನ ದೀಪ
ನಟನೆಯದು ನೈಜದಲಿ ತೋರುತಿಹುದು
ಕಣ್ಣು ಕಂಡದ್ದಷ್ಟೆ
ನಮ್ಮ ನೋಟದ ಅರ್ಥ
ಸೂತ್ರಧಾರನ ಪಾತ್ರ ತೋರದಿಹುದು
(೨೫-ಮಾರ್ಚ್-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 1:30 PM
Labels: ಆತ್ಮ ಚಿಂತನ..., ಹೀಗೇ ಸಾಗಲಿ...., ಹೊಚ್ಚಹೊಸದು
16 ಪತ್ರೋತ್ತರ:
Shubhada ಶುಭದಾ said...
ಅಕ್ಕಾ,
ಕವನ ತುಂಬ ಮಾರ್ಮಿಕವಾಗಿದೆ. ತುಂಬ ಇಷ್ಟವಾಯಿತು. ಧನ್ಯವಾದ ನಿಮಗೆ.
March 23, 2008 9:14 PM
ಬ್ರಹ್ಮಾನಂದ ಎನ್.ಹಡಗಲಿ said...
'ರಂಗಮಂಚದ ಮೇಲೆ ರಂಗು ರಂಗಿನ ದೀಪ'
ಈ ಸಾಲುಗಳನ್ನು ನೀವು ಪರಿಸರಕ್ಕೆ ಹೋಲಿಸಿದಂತೆ ಭಾಸವಾಗುತ್ತದೆ. ಕವನ ಮನಮುಟ್ಟುವಂತಿದೆ.
March 24, 2008 12:12 PM
ಸುಪ್ತದೀಪ್ತಿ suptadeepti said...
ಶುಭದಾ, ಧನ್ಯವಾದ ಕಣೇ.
ಬ್ರಹ್ಮಾನಂದ,ನಿಮಗೆ- ಸ್ವಾಗತ, ಧನ್ಯವಾದ, ಎರಡೂ. ನೀವು ಹೇಳಿದ ಎರಡು ಸಾಲುಗಳು ನಮ್ಮ ದೈನಂದಿನ ಪರಿಸರಕ್ಕೆ, ಈ ಭೌತಿಕ ಲೋಕಕ್ಕೆ. ಸರಿಯಾಗಿಯೇ ಹಿಡಿದಿದ್ದೀರಿ.
March 24, 2008 5:00 PM
ಶಾಂತಲಾ ಭಂಡಿ said...
suptadeeptiಅವರೆ...
ಎಲ್ಲವೂ ಸೊಗಸಾದ ಅರ್ಥದ ಸಾಲುಗಳೇ.
ಮೊದಲಿನೆರಡು stanzas ತುಂಬ ಇಷ್ಟವಾದವು.
March 24, 2008 5:59 PM
sunaath said...
"ಕಣ್ಣು ಕಂಡದ್ದಷ್ಟೆನಮ್ಮ ನೋಟದ ಅರ್ಥ
ಸೂತ್ರಧಾರನ ಪಾತ್ರ ತೋರದಿಹುದು"
Very Good, ಜ್ಯೋತಿ! ಬೇಂದ್ರೆಯವರ "ಹೃದಯಸಮುದ್ರ"ದ ಸಾಲೊಂದು ನೆನೆಪಾಯಿತು:
"ಕಂಡವರಿಗಲ್ಲೊ ಕಂಡವರಿಗಷ್ಟೆ ಕಂಡsದ ಇದರ ನೆಲೆಯು"
March 25, 2008 2:02 AM
ಸುಪ್ತದೀಪ್ತಿ suptadeepti said...
ಧನ್ಯವಾದ ಶಾಂತಲಾ.
ಧನ್ಯವಾದ ಕಾಕಾ.
--ಬೇಂದ್ರೆಯವರ "ಹೃದಯಸಮುದ್ರ"ದ ಸಾಲೊಂದು ನೆನಪಾಯಿತು:"ಕಂಡವರಿಗಲ್ಲೊ ಕಂಡವರಿಗಷ್ಟೆ ಕಂಡsದ ಇದರ ನೆಲೆಯು"
--ಬೇಂದ್ರೆಯವರ ಈ ಕವನದ ಬಗ್ಗೆ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.
March 25, 2008 8:46 PM
ಸುಶ್ರುತ ದೊಡ್ಡೇರಿ said...
ಇವತ್ತು ಬೆಳಗ್ಗೆ ಓದಿದ ಎರಡು ಒಳ್ಳೆಯ ಕವಿತೆಗಳಲ್ಲಿ ಇದೂ ಒಂದು. ಇನ್ನೊಂದು, ಇಲ್ಲಿದೆ.
March 26, 2008 9:24 PM
ಸುಶ್ರುತ ದೊಡ್ಡೇರಿ said...
ಅಂದಹಾಗೇ, ನಿಮ್ಮ ಬ್ಲಾಗಿನ ಹೊಸ ಲೇಔಟು ಚೆನ್ನಾಗಿದೆ.
March 26, 2008 9:24 PM
ಸುಪ್ತದೀಪ್ತಿ suptadeepti said...
ಧನ್ಯವಾದ ಸುಶ್, ನಿನ್ನ ಎರಡೂ ಪ್ರತಿಕ್ರಿಯೆಗಳಿಗೆ. ಹೊಸದೇನನ್ನೋ ಮಾಡುತ್ತಲೇ ಇರುವ ಕೆಟ್ಟ ಚಟ ನನಗೆ, ಏನ್ಮಾಡಲಿ?
March 26, 2008 10:03 PM
ಬಾನಾಡಿ said...
ಅಪರೂಪಕ್ಕೆ ದೊರೆತ ಕಾವ್ಯಾನುಭೂತಿಯಿಂದ ಕೂಡಿದ ಅಪೂರ್ವವಾದ ಕವನ. ಕವನದ ಆಶಯ ಅನನ್ಯವಾದುದು.
ಒಲವಿನಿಂದ
ಬಾನಾಡಿ
March 28, 2008 6:03 PM
ಸುಪ್ತದೀಪ್ತಿ suptadeepti said...
ಸ್ವಾಗತದ ಜೊತೆಗೆ ಧನ್ಯವಾದಗಳು, ಬಾನಾಡಿ. ಹೀಗೇ ಬರುತ್ತಿರಿ, ಬರೆಯುತ್ತಿರಿ.
March 29, 2008 10:19 PM
Ravikiran Gopalakrishna said...
Suptadeeptiyavare, sundaravaada saalugalu. Modaleradu stanza Odi innondu kavite nenapige bantu. "haavige haaleradarenu phala... bevu belladalidalenu phala...".
April 3, 2008 10:36 PM
ಸುಪ್ತದೀಪ್ತಿ suptadeepti said...
ಸ್ವಾಗತ ರವಿಕಿರಣ್. ವಚನದ ಸಾಲುಗಳ ಆಳ, ಗಾಂಭೀರ್ಯ, ಅರ್ಥಸಾಂದ್ರತೆ, ನನ್ನ ಗುರಿ ಮಾತ್ರ. ಪ್ರತಿಕ್ರಿಯೆಗೆ ಧನ್ಯವಾದಗಳು.
April 3, 2008 11:18 PM
ಹಂಸಾನಂದಿ Hamsanandi said...
ಸುಪ್ತದೀಪ್ತಿ,
ಕವನ ಬಹಳ ಚೆನ್ನಾಗಿದೆ; ಎರಡನೆ, ಮತ್ತು ನಾಲ್ಕನೆ ಚರಣಗಳು ಬಹಳ ಹಿಡಿಸಿದವು.
ಜೊತೆಗೆ, ’ಹರಿಗೆ ಎದೆಯೊಳೊಂದು ಗುಡಿಯ ಕಟ್ಟುತಿರುವೆನು’ ಸಾಲೂ ನೆನಪಾಯಿತು.
April 10, 2008 5:17 PM
ಸುಪ್ತದೀಪ್ತಿ suptadeepti said...
ಹಂಸಾನಂದಿ, ಧನ್ಯವಾದಗಳು. ಹಿರಿಯ ಕವಿಗಳ ಸಾಲುಗಳನ್ನು ನನ್ನ ಕವಿತೆ ನೆನಪಿಸಿದರೆ ಅದು ನಿಮ್ಮ ಓದಿನ ಆಳವನ್ನು, ಹರಹನ್ನು ತೋರಿಸುತ್ತದೆ ಎಂದು ನಮ್ರವಾಗಿ ತಿಳಿಯುತ್ತೇನೆ.
April 10, 2008 6:13 PM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Subscribe to:
Post Comments (Atom)
No comments:
Post a Comment