ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 22 May 2008

ಒಂಟಿ ಕೋಗಿಲೆ

Monday, January 7, 2008

(ನಾಲ್ಕನೇ ವಿಶ್ವ ಕನ್ನಡ ಸಮ್ಮೇಳನ (ಸೆಪ್ಟೆಂಬರ್ ೨೦೦೬) ಸಂದರ್ಭದಲ್ಲಿ ಕಾವೇರಿ ಕನ್ನಡ ಸಂಸ್ಥೆಯ ಸಹಯೋಗದಲ್ಲಿ "ಅಕ್ಕ" ಹೊರತಂದ "ಕಥಾವಾಹಿನಿ"ಯಲ್ಲಿ ಪ್ರಕಟಿತ ಕಥೆ)

"....ಹಸುರಿನ ಹೊದಿಕೆ ಹೊದ್ದಾಕೆ
ನಿನ್ನೊಳಗೆ ಹಸುರನೆಲ್ಲಿ ಹುಡುಕಲೆ?
ಉಸಿರಿಗೆ ಜೀವ ಕೊಡುವಾಕೆ
ನಿನ್ನೊಳಗೆ ಉಸಿರೂ ಬಡಕಲೇ!
ಜೀವಕೋಟಿಗೆ ಮಾತೆ, ನೀ ಮಾಯೆಯಾದೆಯ
ರವಿ ಗರ್ಭ ಸಂಜಾತೆ, ಉರಿಗೆ ತಿದಿಯಾದೆಯ ...."

ಅನಾಮಿಕ ಕವಿಯ ಸಾಲುಗಳನ್ನು ಓದುತ್ತಿದ್ದೆ. ನನ್ನೆದೆಯ ತಿದಿಯನ್ನೇ ಯಾರೋ ಒತ್ತಿದಂತಾಗಿ ಕಣ್ಣಿಗೆ ಹೊಗೆ ನುಗ್ಗಿಬಂತು. ಒಣಮರದ ಗಂಟಿನಂತೆ ಕೆಮ್ಮುತ್ತಾ ಎದ್ದು ಹೊರ ಬಂದೆ. ಬೂದು ಬಣ್ಣದ ಚಾದರ ಹಾಸಿ ಮಗುವಿನಂತೆ ಮಲಗಿತ್ತು ನಮ್ಮ ಅಂಗಳದ ಚಿಗುರುಹುಲ್ಲು. ಆಗಸದಲ್ಲೂ ಅದರ ಪ್ರತಿಬಿಂಬ. ಪಕ್ಕದ ಕಿರುಗೋಳಿ ಮರದಲ್ಲಿ ಕೆಂಪು ಹಣ್ಣು ಕುಕ್ಕಲು ಬಂದ ಕೋಗಿಲೆ ಹಿಂಡು. ಲೆಕ್ಕ ಹಾಕಿದೆ, ಒಟ್ಟು ಒಂಭತ್ತು; ನಾಲ್ಕು ಹೆಣ್ಣು, ಐದು ಗಂಡು. ಹಿಂದಿನಿಂದ ಕುಕಿಲು ಕೇಳಿ ಬಂತು, ಹುಡುಕಿದೆ. ನೀರು-ನೆರಳಿಲ್ಲದ ನೆಲದಂತೆ ಒಣಗಿದ ತೆಂಗಿನ ಬರಡು ಸೋಗೆಯ ನಡುವೆ ಒಂಟಿಯಾಗಿ ಕುಳಿತ ಹೆಣ್ಣು ಕೋಗಿಲೆ. "ಯಾಕೆ ನೀನಲ್ಲಿದ್ದೀ?" ಕೇಳಬೇಕೆನಿಸಿತು. ಶಾಂತ ಸರಸಿಯಲ್ಲಿ ಇದ್ದಕ್ಕಿದ್ದಂತೆ ದೊಡ್ಡದೊಂದು ತೆರೆಯೆದ್ದು ಬಂದಂತೆ ಭರ್ರೆಂದು ಬಂದು ಹಾದು ಹೋದ ಲಾರಿಯೊಂದರ ಸದ್ದು-ಧೂಳಿಗೆ ಹಣ್ಣು ತಿನ್ನುತ್ತಿದ್ದ ಕೋಗಿಲೆಗಳೆಲ್ಲ ಮೂರು ದಿಕ್ಕಿಗೆ ಚದುರಿದರೆ, ಒಂಟಿ ಹೆಣ್ಣು ನಾಲ್ಕನೇ ದಿಕ್ಕಿಗೆ ಹಾರಿತು. "ನೀನೇಕೆ ಒಂಟಿ?" ಪ್ರಶ್ನೆ ಎದೆಯಲ್ಲೇ ಉಳಿಯಿತು. ದೃಷ್ಟಿ ಆ ಮನೆಯತ್ತ ಸಾಗಿತು....

ಅನಾಮಧೇಯರಾಗಿ ಪರದೇಶದಲ್ಲಿ ದುಡಿದು ದಣಿದ ಜೀವಿಗಳೆರಡು ಎದುರಿನ ಮನೆಗೆ ವಾಸಕ್ಕಾಗಿ ಬಂದು ತಿಂಗಳೊಂದಾಗಿದೆ. ಸರಿಸುಮಾರು ಎಪ್ಪತ್ತರ ವಯಸ್ಕ, ಹುಮ್ಮಸ್ಸಿನ ಪ್ರತಿರೂಪ. ಅರವತ್ತೈದನ್ನು ದಾಟುತ್ತಿರಬಹುದಾದ ಹುಣ್ಣಿಮೆಯ ಮರುದಿನದ ಚಂದಿರನಂತಹ ಮುತ್ತೈದೆ. ಇಬ್ಬರೂ ಜೊತೆಯಾಗಿ ಸಂಜೆ ತೋಟಕ್ಕೆ ನೀರುಣಿಸುವಾಗ, ಕೈ-ಕೈ ತಗಲುವಂತೆ ವಾಕಿಂಗ್ ಹೋಗುವಾಗ, ಚುಮು-ಚುಮು ಮುಂಜಾನೆ ವೆರಾಂಡದಲ್ಲಿ ಕುಳಿತು ಕಾಫಿಯೋ ಟೀಯೋ ಹೀರುವಾಗ.... ಇಂತಹ ಆತ್ಮೀಯ ಸಂದರ್ಭಗಳು ಪೆಟ್ರೋಲ್ ಮೇಲೆ ಬಿದ್ದ ಸಿಗರೇಟಿನ ಕಿಡಿಯಾಗಿ ನನ್ನಲ್ಲಿ ಕಿಚ್ಚು ಹತ್ತಿಕೊಂಡು ಭುಗಿಲೆದ್ದಿದ್ದು ಅದೆಷ್ಟು ಬಾರಿಯೋ! ನನ್ನದೂ ಒಂದು ಸಂಸಾರವಿದೆ, ಪಾರ್ಕಿನ ಮೂಲೆಯಲ್ಲೊಂದು ಬಂಡೆ ಕಲ್ಲು ಇರುವ ಹಾಗೆ....

ಭೋಪಾಲ್ ದುರಂತದಲ್ಲಿ ಅಪ್ಪ-ಅಮ್ಮ, ತಂಗಿ-ಭಾವನವರ ಜೊತೆ ಮೂರು ತಿಂಗಳ ಎಳಸುಕುಡಿ ಸೋದರ ಸೊಸೆಯನ್ನೂ ಕಳೆದುಕೊಂಡು ಅವರಿಗಾಗಿಯೇ ಸದಾ ಮರುಗುತ್ತಿರುವ ಕಾಲೇಜ್ ಪ್ರೊಫೆಸರ್- ನನ್ನ ಪತಿ. ಭೋಪಾಲಿನಿಂದ ತೊಟ್ಟಿಲು ಹೊತ್ತು ಮಂಗಳೂರಿಗೆ ಬರಬೇಕಿದ್ದ ರೈಲು ಮಸಣಯಾತ್ರೆ ಕೈಗೊಂಡಿತ್ತು. ಕೈಕಂಬವೆಂಬ ಊರಿಗೆ ಊರೇ `ಶಾಂತಿ ನಿಲಯ'ದ ಮುಂದೆ ಹೊಳೆ ಹರಿಸಿತ್ತು. ಆಗಿನ್ನೂ ನಾನೀ ಮನೆಯ ಸೊಸೆಯಾಗಿರಲಿಲ್ಲ, ಊರಿನ ಬಾಯಿ ನನ್ನನ್ನು ಹುರಿದು ಮುಕ್ಕಲಿಲ್ಲ. ಹಿರಿಯರೆನಿಸಿಕೊಂಡ ದೊಡ್ಡಪ್ಪ ನೋಡಿಟ್ಟ ಹುಡುಗಿಯನ್ನು ತಿರುಗಿಯೂ ನೋಡದೆ ಇವರು ನನ್ನನ್ನು ಮನೆತುಂಬಿಸಿಕೊಂಡಿದ್ದರು. ನಿಜಕ್ಕೂ ಪ್ರಶಾಂತವಾಗಿದ್ದ `ಶಾಂತಿ ನಿಲಯ' ನನ್ನ ಪಾಲಿಗೆ ಅರಮನೆಯಾಗಿತ್ತು, ಅಂತಃಪುರವಾಗಿತ್ತು. ಹೆತ್ತವರಿಲ್ಲದೆ ಇಬ್ಬರೂ ಸಮಾನದುಃಖಿಗಳಾಗಿದ್ದುದು ನಮ್ಮಲ್ಲಿದ್ದ ಒಂದೇ ಸಮಾನತೆ. ಆದರೂ ನಾನು ಸುಖಿಯಾಗಿರಬಲ್ಲೆ ಅಂದುಕೊಂಡು ಬಂದೆ. ಹಾಗಾದರೆ, ಈ ಸವೆದ ವರ್ಷಗಳಲ್ಲಿ.... ನಮ್ಮ ದೋಣಿಯ ಹಾಯಿ ಹರಿದದ್ದು ಎಲ್ಲಿ? ಹೇಗೆ? ಉತ್ತರ ನನ್ನಲ್ಲಿಲ್ಲ.

ಮಂಗಳೂರಿನ ಪ್ರತಿಷ್ಠಿತ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಸಮಾಜ ವಿಜ್ಞಾನದ ಪ್ರಾಧ್ಯಾಪಕ, ಮನಶ್ಶಾಸ್ತ್ರದ ಆರಾಧಕ, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕ, ಸಹೋದ್ಯೋಗಿಗಳ ಮೆಚ್ಚಿನ ಸ್ನೇಹಿತ.... ಇವೆಲ್ಲವೂ ನನ್ನವರು. ಹೇಳಿಕೊಳ್ಳಲು ಹೆಮ್ಮೆ. ಆದರೆ ಮನೆಯೊಳಗೆ ಮಾತ್ರ ಇನ್ನೊಂದು ಮುಖ. ಮುಂಗೋಪದ ಗುತ್ತಿಗೆ ಪೂರ್ಣ ಜೀವನಕ್ಕಾಗುವಷ್ಟು ಪಡೆದವರು, ಸಂಶಯದ ಕನ್ನಡಕ ಧರಿಸಿ ಒಳಗೆ ಬರುವವರು, ಹೇಳಿದ್ದು ಹೇಳಿದಂತೆ, ಬಾಯಿಂದ ಶಬ್ದ ಉದುರಿದ ಕ್ಷಣದಲ್ಲೇ ನಡೆಯಬೇಕೆನ್ನುವವರು, ಅದಕ್ಕಾಗಿಯೇ ತುಡಿಯುವವರು. ಒಟ್ಟಿನಲ್ಲಿ ಆದರ್ಶದ ಪ್ರತಿರೂಪ ಮುಂಬಾಗಿಲಲ್ಲಿ ಸಿಕ್ಕಿಸಿಕೊಂಡು ಹೊರಗೆ ಹೋಗುವ ವ್ಯಕ್ತಿ; ಮನೆಯೊಳಗೆ ಮಾನವೀಯತೆ ಮರೆತ ಅತ್ಯಂತ ಸ್ವಾರ್ಥಿ. ಮನಶ್ಶಾಸ್ತ್ರದ ಭಾಷೆಯಲ್ಲಿ ದ್ವಿಮುಖ ವ್ಯಕ್ತಿತ್ವದಾತ. ನಿನ್ನ ಬಿಟ್ಟರೆ ಅನ್ಯರಿಲ್ಲ ಅನ್ನುವ ಸ್ಥಿತಿ ನನ್ನದೆ? ಇದಕ್ಕೂ ನನ್ನಲ್ಲಿ ಉತ್ತರವಿಲ್ಲ.

"ಸಾಮ್‍ನೆವಾಲಿ `ಆಂಗನ್' ಮೇ..." ನಾನು ನಿತ್ಯ ಕಾಣುವ ತೃಪ್ತ ಜೋಡಿ ನನ್ನಲ್ಲಿ ಕಿಚ್ಚು ಹೊತ್ತಿಸುವುದು ಇವೇ ಕಾರಣಗಳಿಗೆ. ಯಾವ ತಪ್ಪಿಗೆ ನನಗಿಂಥ ಜೀವನ? ನನ್ನ ಪ್ರಜ್ಞಾಪೂರ್ವಕ ಯಾರಿಗೂ ಯಾವುದೇ ಅನ್ಯಾಯ ಮಾಡಿಲ್ಲ. ಯಾರನ್ನೂ ನೋಯಿಸಿಲ್ಲ. ಎಲ್ಲೂ ತಪ್ಪಿ ನಡೆದಿಲ್ಲ. ಮತ್ತೇಕೆ ಹೀಗೆ? ಇತರ ಅಧ್ಯಾಪಕರುಗಳ ದೃಷ್ಟಿಯಲ್ಲಿ, ಅವರ ಪತಿ/ಪತ್ನಿಯರ ನೋಟದಲ್ಲಿ ನನ್ನಷ್ಟು ಅದೃಷ್ಟವಂತೆ ಇನ್ನೊಬ್ಬರಿಲ್ಲ. ನನ್ನ ಬಾಯಲ್ಲಿ ಬಿಸಿ ತುಪ್ಪವೆಂದು ಯಾರಿಗೂ ಹೇಳಲಾರೆ. ನಡೆವ ಕೆಂಡದ ನೆಲ ಕೆಂಗುಲಾಬಿಯಾಗಿ ಲೋಕಕ್ಕೆ ಕಂಡರೆ ನನಗೇನು ಲಾಭ? ಒಂಟಿ ಸೂರ್ಯನಿಗೂ ನನ್ನ ಬಿಕ್ಕುಗಳು ಕೇಳಲಾರವು, ಎದೆಯ ಉರಿಯನ್ನು ಯಾವ ಹನಿಗಳೂ ತಣಿಸಲಾರವು. ಇನ್ನೂ ಮೂಡದ ಅವನ ಹಾದಿ ಕಾಯುತ್ತಾ ಬೂದು ಚಾದರವನ್ನೇ ನೋಡುತ್ತಿದ್ದೆ, "ಹೆಲ್ಲೋ, ಗುಡ್ ಮಾರ್ನಿಂಗ್...." ಆಗಷ್ಟೇ ಕರೆದ ನಸುಬೆಚ್ಚಗಿನ ನೊರೆಹಾಲನ್ನು ಕಣ್ಣಿಗೆ ತೊಟ್ಟಿಕ್ಕಿದಂತೆ. ನವಜೋಡಿ ವಾಯುವಿಹಾರ ಮುಗಿಸಿ ಬಂದಿತ್ತು. ಇಂದು ರವಿಯ ದರ್ಶನವೇ ಬೇಡ. "ಓಹ್, ಹಲೋ. ಗುಡ್ ಮಾರ್ನಿಂಗ್. ಹೌ ಆರ್ ಯೂ?" ಅಪ್ರಯತ್ನವಾಗಿ ಬಾಯಿ ತೆರೆದಿದ್ದೆ. ಸ್ನೇಹ ಸಮಾನ ವಯಸ್ಕರಲ್ಲೇ ಆಗಬೇಕೆಂದೇನಿಲ್ಲ, ಅಥವಾ ನಾವು ಸಮಾನ ವಯಸ್ಕರೇ...! ನನ್ನ ಮನಸ್ಸು ಅವರ ದೇಹದಷ್ಟು ಮುಪ್ಪಾಗಿದೆ, ಅವರ ಮನಸ್ಸಿಗೆ ನನ್ನ ದೇಹದ ವಯಸ್ಸು.

"ಕನ್ನಡದವರೇ ಅಲ್ವ?" ಬೂದು ಮುಂಜಾನೆಗೆ ಹುಣ್ಣಿಮೆ ಹರಡಿತು."ಹೌದ್ಹೌದು. ನೀವೂ ಕನ್ನಡದವರಾ?" ನಮ್ಮ ಜಗಲಿಯಿಂದ ಗೇಟಿನವರೆಗೆ ಹೋಗಿದ್ದೆ. "ಯೇಸ್, ನಾವು ಮೆಲ್‍ಬೋರ್ನ್‍ನಲ್ಲಿ.... ಆಸ್ಟ್ರೇಲಿಯಾದಲ್ಲಿ.... ಇಪ್ಪತ್ತು ವರ್ಷ ಇದ್ದೆವು.... ಇಲ್ಲಿ ಹುಟ್ಟಿದ ಮಕ್ಕಳನ್ನು ಅಲ್ಲಿ ಬೆಳೆಸಿ ಅವರ ಕಾಲೇಜ್ ಮುಗಿದು.... ಕೆಲಸಕ್ಕೆ ಸೇರಿದ ಮೇಲೆ ಇಲ್ಲಿಗೆ ಬಂದೆವು.... ನಮ್ಮಿಬ್ಬರ ಪೇರೆಂಟ್ಸ್ ಇದ್ದದ್ದು ಬಾಂಬೇಯಲ್ಲಿ.... ಅಲ್ಲೀಗ ಯಾರೂ ಇಲ್ಲ.... ಈಗ ಬೆಂಗಳೂರಲ್ಲಿ ಒಂದೆರಡು ತಿಂಗಳು ಇದ್ದು, ಸರಿಯಾಗದೆ.... ಈ ರೂರಲ್ ಏರಿಯಾಗೆ ಬಂದದ್ದು.... ಇಲ್ಲೆಲ್ಲ ತುಂಬಾ ಚೆನ್ನಾಗಿದೆ. ಇಲ್ಲೇ ಇರೋಣಾಂತ ಆಸೆಯಾಗಿದೆ.... ನೋಡುತ್ತಿದ್ದೇವೆ." ಸತಿ-ಪತಿಯರ ಪರಸ್ಪರ ಪೂರಕ ಮಾತುಗಳು."ಹೌದಾ!? ನೀವು ಇರುವ ಮನೆಯನ್ನೇ ಮಾರುತ್ತಾರೇಂತ ಕೇಳಿದ್ದೆ, ವಿಚಾರಿಸಿದ್ದೀರಾ?" ಅಷ್ಟರಲ್ಲಿ ನನ್ನ ಮನೆಯೊಳಗೆ ಗುಡುಗು ಮೊಳಗಿತು. "ಓಹ್, ಸ್ಸಾರೀ, ನನ್ನವರು ಕರೀತಿದ್ದಾರೆ. ಮತ್ತೆ ಸಿಗೋಣ, ಇನ್ನೀಗ ಬೆಳಗಿನ ತರಾತುರಿ. ಬಿಡುವು ಆದಾಗ ಬನ್ನಿ ಮನೆಗೆ; ಬರ್ಲಾ?." ಅವರ ಉತ್ತರಕ್ಕೂ ಕಾಯದೆ ಒಳಗೋಡಿದೆ; `ಅವರೇನಂದುಕೊಂಡರೋ' ಎಂದು ಒಳಗೊಳಗೇ ನೊಂದೆ.

"ಬೆಳಗಾಗೆದ್ದು ಅದೇನು ಕಾಡು ಹರಟೆ, ಮನೆಯೊಳಗೆ ಕೆಲಸ ನೋಡೋದು ಬಿಟ್ಟು.... ನಿನಗೆ ಕೊಟ್ಟ ಸಲಿಗೆ ಅತಿಯಾಯ್ತು....!" ಗುಡುಗನ್ನು ತಡೆಯಲು ನಾನ್ಯಾರು? ಬಚ್ಚಲು ಮನೆಯ ಬಾಗಿಲು ಮಾತ್ರ ನಡುಗಿತು. ಸ್ನಾನ ಮುಗಿಸಿ ಬರುವುದರೊಳಗೆ ಇಸ್ತ್ರಿ ಮಾಡಿದ್ದ ಬಟ್ಟೆಯನ್ನು ಹಾಸಿಗೆ ಮೇಲೆ ರೆಡಿ ಮಾಡಿಟ್ಟು, ಅವರ ಕರವಸ್ತ್ರ, ಪೆನ್ನು, ಬಾಚಣಿಗೆ, ಪುಟ್ಟ ಪರ್ಸ್, ಎಲ್ಲವನ್ನೂ ಅವರ ಮೇಜಿನ ಮೇಲೆ ಜೋಡಿಸಿ ಇಟ್ಟು, ತಿಂಡಿಯ ತಯಾರಿಯಲ್ಲಿ ತೊಡಗಿದೆ. ಸ್ನಾನದ ಆಹ್ಲಾದ ಎಂದೂ ತಿಳಿಯದವರ ಮನಸ್ಸು ಹೇಗೆ ತಿಳಿಯಾದೀತು? ಆಕಾಶವೂ ಮಸುಕು-ಮಸುಕಾಗಿಯೇ ಇತ್ತು. ಮಸಾಲೆ ದೋಸೆಯ ಜೊತೆಗೆ ಚಟ್ಣಿ, ಸಾಂಬಾರ್ ಮತ್ತು ಕಾಫಿ ಊಟದ ಮೇಜಿನಲ್ಲಿ ಕಂಡವರೇ ಮತ್ತೆ ಗುಡುಗಿದರು, "ಮೊದಲನೇ ದೋಸೆ ನನಗೇ ಕೊಟ್ಟಿದ್ದೀಯ? ಮನೆ ಹಿರಿಯನಿಗೆ ಮೊದಲ ದೋಸೆ ಕೂಡದು ಅಂತ ನಿನಗೆ ಎಷ್ಟು ಸಾರಿ ಹೇಳಿದ್ದೇನೆ, ನನ್ನನ್ನೂ ಮುಕ್ಕಿ-ತಿನ್ನಬೇಕು ಅಂತ ಇದ್ದೀಯ ನೀನು....?" ನನ್ನ ನಾಲಗೆ ಗೇಟಿನ ಬಳಿಯಿಂದ ಮನೆಯೊಳಗೆ ಬಂದಿರಲಿಲ್ಲ. "ಬೆಳಗ್ಗೆ ಬೆಳಗ್ಗೆ ಮಸಾಲೆದೋಸೆ ಯಾರಿಗೆ ಬೇಕು, ಸಾದಾ ದೋಸೆ ಕೊಡು...." ಮಸಾಲೆ ಪಲ್ಯದ ಪಾತ್ರೆ ಬದಿಗಿಟ್ಟು ಹೊಸದಾಗಿ ದೋಸೆ ಮಾಡಿ ತಟ್ಟೆ ಅವರ ಮುಂದಿಟ್ಟೆ. "ಕಾಫಿ ಆರಿ ತಂಗಳಾಗಿದೆ, ದನಕ್ಕೆ ಅಕ್ಕಚ್ಚು ಕೂಡಾ ಇದಕ್ಕಿಂತ ಬಿಸಿ ಕೊಡ್ತಿದ್ದಳು ಅಮ್ಮ...." ಹೊಸ ಕಾಫಿ ತಂದಿಟ್ಟೆ. ಟೇಬಲ್ ಮೇಲೆ ಮೊದಲೇ ಆರಿ ಹೋಗುತ್ತಿದ್ದ ಮಸಾಲೆದೋಸೆ ಮತ್ತು ಕಾಫಿ ನನ್ನ ತಿಂಡಿಯ ಶ್ರಮ ನೀಗಿದವು.

ಗುಡುಗು ಮುಗಿದು, ಮಳೆ ಸುರಿದು ಮನೆ-ಮನಗಳ ಅಂಗಳಗಳು ತಿಳಿಯಾದವು. ಬಾನಲ್ಲಿ ಭಾನು ಒಂದಿಷ್ಟು ಮೊಗ ತೋರಿದ. ಬಟ್ಟೆಗಳನ್ನು ಹೊರಗೆ ತಂತಿಯ ಮೇಲೆ ಹರವಿ ಹಾಕಲು ಹೋದಾಗ ಮತ್ತೆ ಕಣ್ಣಿಗೆ ಬಿದ್ದದ್ದು ಉತ್ಸಾಹದ ಬುಗ್ಗೆಗಳು; ತೋಟದಲ್ಲಿ ಗಿಡಗಳ ಬುಡ ಕೆದಕುತ್ತಾ, ಒಣಗಿದ ಗೆಲ್ಲುಗಳನ್ನು ಕತ್ತರಿಸುತ್ತಾ ಹರಟುತ್ತಿದ್ದ ಜೋಡಿ. ನಮ್ಮ ಹಿತ್ತಲಿನ ಒಣ ತೆಂಗಿನ ಗರಿಗಳ ನಡುವೆ ಮತ್ತದೇ ಒಂಟಿ ಹೆಣ್ಣು ಕೋಗಿಲೆ ಕುಕಿಲಿಡುತ್ತಿತ್ತು. ಉಳಿದವುಗಳ ಪತ್ತೆಯಿಲ್ಲ. "ನೀನೀಗ ಬಂದು ಈ ಹಣ್ಣುಗಳನ್ನು ತಿನ್ನು, ಬಾ...." ಅಂದೆ ಮನದೊಳಗೆ. ಸೊಪ್ಪಿನ ಅಜ್ಜಿ ಗೇಟು ತೆರೆದು ಒಳಗೆ ಬಂದಾಗ ನನ್ನ ಧ್ಯಾನ ಬಹಿರ್ಮುಖವಾಯ್ತು. "ಏನು ಅಮ್ಮಾ, ಆ ಮರವನ್ನು ಹಾಗೆ ನೋಡಿದ್ರೆ ಕಾಯಿ ಉದುರ್ತದಾ? ನಿಮಗೆ ಕಾಯಿ ತೆಗೆಸಬೇಕಾದ್ರೆ ನನ್ನ ಮಗನಿಗೆ ಹೇಳ್ತೇನೆ, ಬರ್ತಾನೆ...." "ಇವಳದ್ದು ಯಾವಾಗಲೂ ವ್ಯಾಪಾರೀ ಬುದ್ಧಿ, ತುಂಬಾ ಚಾಲಾಕಿದ್ದಾಳೆ" ಅಂದುಕೊಂಡೇ ಜಗಲಿಯ ಮೇಲೆ ಅವಳ ಸೊಪ್ಪಿನ ಬುಟ್ಟಿಯನ್ನು ಇಳಿಸಿಕೊಂಡೆ. "ಇದೇನ್ ಅಜ್ಜಿ ಇವತ್ತು? ನುಗ್ಗೇ ಸೊಪ್ಪು ಏನೂ ಲಾಯಕ್ಕಿಲ್ಲ. ಬಾಡಿ ಹೋಗಿದೆ. ಹೋಗ್, ನಿನ್ನ ಹಟ್ಟಿಯ ದನಗಳಿಗೇ ಸರಿ ಇದು. ಇನ್ನು ಈ ಬಸಳೆಗಿಂತ ನನ್ನ ಹಿಡಿಸೂಡಿ (ಪೊರಕೆ) ಕಡ್ಡಿಯೇ ತೋರ ಉಂಟು. ಇದನ್ನೆಲ್ಲ ಯಾಕೆ ತರ್ತೀ? ಯಾರಿಗೆ ಟೊಪ್ಪಿ ಹಾಕುವ ಯೋಚನೆ ನಿಂದು? ಇವತ್ತು ಯಾವ ಸೊಪ್ಪು ಕೂಡಾ ಬೇಡ ನಂಗೆ, ಯಾವುದೂ ಸರಿಯಿಲ್ಲ. ನಾಳೆ ಸ್ವಲ್ಪ ಒಳ್ಳೇದು ತಾ...." ಅಂದೆ. "ಅಮ್ಮಾ, ನನ್ನ ತೋಟದ್ದಾದ್ರೆ ನಿಮಗೇಂತ ಬೇರೆಯೇ ತರಕಾರಿ ಬೆಳೆಸಿ ತರ್ತಿದ್ದೆ, ನನಗೆ ಅಷ್ಟು ತಾಕತ್ತಿಲ್ಲ, ತೋಟ ಇಲ್ಲ. ಯಾರೋ ಬೆಳೆಸಿ ತಂದದ್ದನ್ನು ನಾನು ಮನೆ-ಮನೆಗೆ ಮಾರಿ ನಾಲ್ಕು ಹೊಟ್ಟೆ ತುಂಬಿಸ್ಬೇಕು. ಅದಕ್ಕೇ ನೀವು ಹೀಗೆ ಕೊರೆ ಹೇಳಿದ್ರೆ ಬಡವರು ಬದುಕ ಬೇಡ್ವಾ, ಹೇಳಿ?" ಅಂದಳು. ಮರುಕ ಗೆದ್ದಿತು. ಇದ್ದದ್ದರಲ್ಲಿ ಸ್ವಲ್ಪ ಹಸಿಹಸಿಯಾಗಿದ್ದ ಹರಿವೆ ಸೊಪ್ಪನ್ನೇ ತೆಗೆದುಕೊಂಡೆ. ದುಡ್ಡು ಕೊಡುವಾಗ ಮತ್ತೆ ಮಗನನ್ನು ಯಾವಾಗ ಕಳಿಸಲೆಂದು ಕೇಳಿದಳು, ಬೇಡವೆಂದೆ. ಆ ಮರದಲ್ಲಿ ಕಾಯಿಯೇ ಇಲ್ಲ, ಅದು ಅವಳಿಗೂ ಗೊತ್ತು. ಒಂದು ಚೊಂಬು ನೀರು ಕುಡಿದು, ಸ್ವಲ್ಪ ತಡೆದು, "ಅಮ್ಮನ ಮೈ ತುಂಬಿದ ಹಾಗೆ ಕಾಣ್ತದೆ, ಏನಾದ್ರೂ ಸುದ್ದಿ ಉಂಟಾ?" ಸೆರಗಿನ ಮರೆಮಾಡಿ ಕಿಸಕಿಸ ನಕ್ಕಳು. "ಸುದ್ದಿ ಇದ್ರೆ ನಿನಗೇ ಮೊದ್ಲು ಹೇಳ್ತೇನೆ ಮಾರಾಯ್ತಿ, ನಂಗೆ ಅಮ್ಮ ಇಲ್ಲ ನೋಡು. ಈಗ ನಡಿ ನೀನು, ಈ ಸೊಪ್ಪು ಇನ್ನೂ ಬಾಡುವ ಮೊದಲು ಯಾರಿಗಾದರೂ ದಾಟಿಸಿಬಿಡು, ಏಳು." ಅಂದೆ, ಅವಳ ಬೆನ್ನು ಗೇಟು ದಾಟುವಾಗಲೇ ಮುಂಬಾಗಿಲು ಹಾಕಿಕೊಂಡೆ. ಸೆರಗಿನ ಮರೆಯಲ್ಲಿ ಮುಸಿಮುಸಿ ಮಾಡುತ್ತಾ ಅಡುಗೆ ಮನೆಗೆ ನಡೆದೆ.

ಹೌದು, ನನ್ನ ಮೈ-ತೂಕ ಒಂದಿಷ್ಟು ಹೆಚ್ಚಾಗಿದೆ, ಅಷ್ಟೆ; ಬೇರೇನೂ ಆಗಿಲ್ಲ. ವಯಸ್ಸು ಮೂವತ್ತಾದಾಗ ಹೆಣ್ಣಿನ ಮೈ ಗುಂಡು-ಗುಂಡಾಗುವುದು ಸಹಜ. ಅದಕ್ಕೂ ಅವಳು ಕೇಳಿದ ಪ್ರಶ್ನೆಗೂ ಯಾವುದೇ ಸಂಬಂಧವಿಲ್ಲ. ಆದರೆ ಅದು ನನ್ನ ಮನಸ್ಸಿಗೆ ಸಂಬಂಧಿಸಿದೆಯಲ್ಲ. ಈ ಅಜ್ಜಿ ಅದನ್ನು ಯಾವತ್ತಿನಿಂದ ಆಗೊಮ್ಮೆ, ಈಗೊಮ್ಮೆ ಕೇಳುತ್ತಲೇ ಬಂದಿದ್ದಾಳೆ. ಅವಳಿಗೆ ಏನೋ ಉತ್ತರ ಕೊಡಬಹುದು. ಕಷ್ಟವೆಂದರೆ ಸರೀಕರೆದುರು ತಲೆಯೆತ್ತಿ ಉತ್ತರಿಸುವುದು. ಅವರಲ್ಲಿ ತಲೆಗ್ಹತ್ಹತ್ತರಂತೆ ಉಪದೇಶಗಳು, ಅನುಭವ-ನುಡಿಗಳು, ಕಿವಿ-ಮಾತುಗಳು. ಎಲ್ಲವೂ ನನ್ನೊಬ್ಬಳಿಗೇ. ಅವರಾಡುವ ವಿಷಯಕ್ಕೆ ನಾನೊಬ್ಬಳೇ ಜವಾಬ್ದಾರಳೇ? ಸಾರ್ವಜನಿಕವಾಗಿ ಕೇಳಲಾರದ, ಕೇಳಬಾರದ ಪ್ರಶ್ನೆ ಅದು. ನನ್ನ ಚಿಕ್ಕಪ್ಪನ ಮಗಳೇ ಒಳ್ಳೆಯ ವೈದ್ಯೆ. ಅವಳ ಮೂಲಕ ಎಲ್ಲ ಪರೀಕ್ಷೆಗಳನ್ನು ನಾನು ಮಾಡಿಸಿಕೊಂಡಾಗಿದೆ. `ಎಲ್ಲವೂ ಸಮರ್ಪಕವಾಗಿವೆ' ಎನ್ನುವ ವರದಿಯನ್ನು ಕಳೆದ ವಾರವಷ್ಟೇ ಅವಳಿಂದ ಪಡೆದು ಬೀರುವಿನೊಳಗೆ ಬೀಗದಲ್ಲಿಟ್ಟು ಬಿಸಿಯುಸಿರಿನ ಬೇಗೆಯಲ್ಲಿರುವುದು ನನ್ನ ಪಾಲಿಗೆ ಬಂದ ಪಂಚಾಮೃತ. ಹೆಣ್ಣು ತನ್ನ ಭೋಗದ- ತನಗೆ ಸೇರಿದ ಒಂದು ವಸ್ತು, ತಾನು `ಅದಕ್ಕೆ' ಯಜಮಾನ, `ಅವಳು' ತನ್ನನ್ನು `ಸೇವಿಸಿ' ಸ್ವರ್ಗ ಪಡೆಯತಕ್ಕವಳು....! ಇಂಥ ವಿಚಾರಗಳಲ್ಲೇ ಮುಳುಗಿರುವ ಈ ಪ್ರೊಫೆಸರ್ ಮಹಾಶಯರಿಗೆ ನನ್ನೊಳಗಿನ ಮನಸ್ಸಿನ, ಅದರ ಭಾವನೆಗಳ ಪರಿವೆಯೇ ಇಲ್ಲವಲ್ಲ. ನನಗೆ ಮಾತೇ ಬರುವುದಿಲ್ಲ ಅಂದುಕೊಂಡಂತಿದೆ ಇತ್ತೀಚಿನ ಅವರ ನಡವಳಿಕೆ. ಇನ್ನು ಅವರೊಡನೆ ಈ ವಿಷಯವನ್ನು ಹೇಗೆ ಮಾತಾಡಲಿ?

ಹರಿವೆ ಸೊಪ್ಪಿನ ಹುಳಿ ಮಾಡಿ, ಮಧ್ಯಾಹ್ನದೂಟದ ಶಾಸ್ತ್ರ ಮುಗಿಸಿ, ಹೊಸದಾಗಿ ಬಂದ `ತರಂಗ', `ಸುಧಾ' ಎರಡನ್ನೂ ತೊಡೆಯ ಮೇಲಿರಿಸಿಕೊಂಡು, ಹತ್ತು ನಿಮಿಷದ ತೂಕಡಿಕೆ ಮುಗಿಸಿದ್ದೆ- ಗೇಟಿನ ಸದ್ದು ಎಚ್ಚರಿಸಿದಾಗ. ಮುಸ್ಸಂಜೆಯ ಸೂರ್ಯ, ಕೃಷ್ಣಪಾಡ್ಯದ ಚಂದ್ರ ಜೊತೆಯಾಗಿ ನಮ್ಮ ಅಂಗಳದಲ್ಲಿ ಅವತರಿಸಿದ್ದರು. ಅವರು ಬಾಗಿಲ ಬಳಿ ಬರುವ ಮೊದಲೇ ಬಚ್ಚಲ ಮನೆಗೆ ಓಡಿ ಮುಖ ತೊಳೆದುಕೊಂಡು, ತಲೆಯ ಮೇಲೆ ಬಾಚಣಿಗೆ ಆಡಿಸಿಕೊಂಡೆ. ಕರೆಗಂಟೆ ಎಂದಿಗಿಂತ ಹಿತವೆನಿಸಿತು. ಬಾಗಿಲು ದಾಟಿ ಬಂದ ಹೊನಲು ನಡುಮನೆಯನ್ನಷ್ಟೇ ಅಲ್ಲ, ನನ್ನೊಳಗನ್ನೂ ತುಂಬಿದಂತಾಯ್ತು. ಇಬ್ಬರನ್ನೂ ಸೋಫಾದಲ್ಲಿ ಕುಳ್ಳಿರಿಸಿ, ಫ್ರಿಜ್ಜಿನಿಂದ ಬೀರುಂಡಿ ಪಾನಕ ತಂದಿತ್ತೆ. ಏನೂ ಮಾತಾಡಲೂ ತೋರದೆ ಸುಮ್ಮನೆ ಅವರ ಮುಖವನ್ನೇ ನೋಡುತ್ತಿದ್ದ ನನಗೆ ಒಂದನೇ ತರಗತಿಗೆ ಆಗಷ್ಟೇ ಸೇರಿದ ಪುಟ್ಟನಂತೆ ಭಾಸವಾಗುತ್ತಿತ್ತು.
ಅಂಕಲ್ ಮಾತಿಗೆ ತೊಡಗಿದರು....
"ನಿಮ್ಮ ಊರು ತುಂಬಾ ಚೆನ್ನಾಗಿದೆಯಮ್ಮ. ಪುಟ್ಟದಾದರೂ ಆತ್ಮೀಯವಾಗಿದೆ. ಬೆಂಗಳೂರಲ್ಲಿ ನಮಗೆ ಅನಾಥರಾದ ಹಾಗಾಗಿತ್ತು, ಅಲ್ಲಿನ ಗಡಿಬಿಡಿ, ಓಡಾಟ, ಅಡ್ಡಾದಿಡ್ಡಿ ಸಂಚಾರ.... ಅಬ್ಬಬ್ಬಾ! ಸಾಕಪ್ಪಾ ಅನಿಸಿಬಿಟ್ಟಿತ್ತು. ಇಲ್ಲಿ ನಿರಾಳವಾಗಿದೆ ನೋಡಿ."
ಆಂಟಿ ಮುಂದುವರಿಸಿದರು, "ನಿಮ್ಮ ತೌರು ಮನೆ ಎಲ್ಲಮ್ಮಾ? ನಿಮ್ಮ ಅತ್ತೆ, ಮಾವ ಎಲ್ಲ ಎಲ್ಲಿ?"
ನನ್ನ ನಾಲಗೆ ಜೀವ ಪಡೆಯಿತು.... "ನಿಮ್ಮನ್ನು ಅಂಕಲ್, ಆಂಟಿ ಅಂತ ಕರೆಯಬಹುದಾ? ನಿಮ್ಮನ್ನು ಕಂಡರೆ ಹಾಗೇ ಕರೀಬೇಕು ಅಂತ ಅನ್ನಿಸ್ತದೆ."
"ಧಾರಾಳವಾಗಿ ಕರಿಯಮ್ಮ, ಅದರಲ್ಲೇನು? ಸರಿಸುಮಾರು ನಿಮ್ಮ ವಯಸ್ಸಿನ ಮಕ್ಕಳಿದ್ದಾರೆ, ಹಾಗೇ ಆಗಲಿ." ಅಂದರು ಆಂಟಿ.
"ಹಾಗಾದರೆ ಒಂದು ಷರತ್ತು, ನೀವು ನನ್ನನ್ನು ಏಕವಚನದಲ್ಲಿ ಮಾತಾಡಿಸಬೇಕು. ಸರಿಯಾ?"
"ಸರಿ, ಆಗ್ಲಿ, ನೀನು ನಮ್ಮ ಮಗಳೇ ಅಂದುಕೊಳ್ತೇವೆ." ಅಂಕಲ್ ದನಿ ಸೇರಿಸಿದರು.
ಆಂಟಿಯತ್ತ ತಿರುಗಿ "ನನಗೆ ತೌರು ಅಂತ ಇಲ್ಲ ಆಂಟಿ, ಅಪ್ಪ, ಅಮ್ಮ ಇಬ್ಬರೂ ನನ್ನ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡರು. ನನ್ನ ಚಿಕ್ಕಪ್ಪ ನನ್ನನ್ನು ಸಾಕಿದ್ದು. ಅವರ ಮನೆಯೇ ನನ್ನ ತೌರಿನ ಹಾಗೆ, ಅವರ ಮಕ್ಕಳೇ ನನ್ನ ಒಡಹುಟ್ಟು. ಆದರೂ ಅಮ್ಮನಿಲ್ಲದ ಕೊರತೆ ಕಾಡ್ತದೆ. ಇನ್ನು ಅತ್ತೆ, ಮಾವ ಕೂಡಾ ಇಲ್ಲ, ಅವರೂ ನನ್ನ ಮದುವೆಗೆ ಎರಡು ವರ್ಷ ಮೊದಲೇ ಹೋಗಿಬಿಟ್ಟರು, ಇದ್ದೊಬ್ಬ ನಾದಿನಿ ಮತ್ತು ಅವಳ ಸಂಸಾರ ಸಮೇತ, ಭೋಪಾಲದ ಅನಿಲ ದುರಂತದಲ್ಲಿ. ಹೀಗೆ ಒಂದು ರೀತಿಯಲ್ಲಿ ನಾವಿಬ್ಬರೂ ಅನಾಥರು. ಅದನ್ನು ತಿಳಿದೇ ಇವರು ನನ್ನನ್ನು ಮದುವೆಯಾದದ್ದು....."
"ಹೌದಾ? ಒಬ್ಬರಿಗೊಬ್ಬರು ಜೊತೆಯಾಗಿರಿ. ಸಂತೋಷ." ಅಂದರು ಅಂಕಲ್. ಆಂಟಿಯ ಕಣ್ಣು ತರಂಗ, ಸುಧಾಗಳತ್ತ ಹರಿಯಿತು. ಹಳೆಯ ಸಂಚಿಕೆಗಳನ್ನು ತಂದು ಅವರೆದುರು ರಾಶಿ ಹಾಕಿದೆ. ಕೆಲವನ್ನು ತೆಗೆದಿಟ್ಟುಕೊಂಡು, ಓದಿ ಕೊಡುವೆನೆಂದರು. ಅಷ್ಟರಲ್ಲಿ ಇವರ ಮೋಟರ್‌ಬೈಕಿನ ಶಬ್ದ ಕೇಳಿಬಂತು. ಅವರ ಪರಿಚಯ ಮಾಡಿಕೊಂಡು ಅಂಗಳದಿಂದಲೇ ಅವರಿಬ್ಬರೂ ಹೊರಟು ನಿಂತಾಗ ನನಗೆ ಮೊತ್ತ ಮೊದಲ ಬಾರಿಗೆ ಆತ್ಮೀಯರನ್ನು ಬೀಳ್ಕೊಟ್ಟ ಅನುಭವ.

ಮನೆಯೊಳಗೆ ಬರುವಾಗಲೇ ಮುಖ ಉರಿಯುತ್ತಿತ್ತು, "ಗುರುತು ಪರಿಚಯ ಇಲ್ಲದವರನ್ನೆಲ್ಲ ಮನೆಯೊಳಗೆ ಸೇರಿಸಿಕೊಳ್ಳಬೇಡಾಂತ ಎಷ್ಟು ಹೇಳಿದ್ದೇನೆ, ನಿನಗೆ ಅರ್ಥವೇ ಆಗ್ಲಿಲ್ಲ. ಏನಾದ್ರೂ ಅನಾಹುತ ಆದ್ರೆ ಎಲ್ರೂ ನನ್ನನ್ನೇ ಕೇಳ್ತಾರೆ..... ನಿನಗೆ ಯಾವಾಗ ಬುದ್ಧಿ ಬರ್ತದೋ?...." ಇನ್ನೂ ಏನೇನೋ ಗೊಣಗುತ್ತಲೇ ಕೈ-ಕಾಲು-ಮುಖ ತೊಳೆದು ಊಟದ ಮನೆಗೆ ಬಂದವರಿಗೆ ಕಾಫಿ ತಂದಿತ್ತೆ. "ಏನು? ದೋಸೆ ಎಲ್ಲ ಅವರಿವರಿಗೆ ತಿನ್ನಿಸಿ ಖಾಲಿ ಮಾಡಿದ್ದೀಯ?" ಅಂದರು. ಉತ್ತರಿಸಲಿಲ್ಲ. ಮಸಾಲೆ ದೋಸೆಯ ತಟ್ಟೆ ಮೇಜಿಗೆ ಬಂತು. ಮಾತಿಲ್ಲದೆ ತಿಂದು ಮುಗಿಸಿ ವೆರಾಂಡಕ್ಕೆ ಹೋಗಿ "ಇಂಡಿಯನ್ ಎಕ್ಸ್'ಪ್ರೆಸ್" ಎತ್ತಿಕೊಂಡರು. ನನಗೋ ಮಾಡಲು ಮತ್ತೇನೂ ಕೆಲಸವಿರಲಿಲ್ಲ. ತೋಟದ ಗಿಡಗಳಿಗೆ ನೀರು ಹರಿಸಿ, ರಾತ್ರೆಯೂಟಕ್ಕೆ ಅನ್ನ ಮಾಡಿ, ದೇವರ ದೀಪ ಹಚ್ಚುತ್ತಿದ್ದಂತೆ ಮುಂಬಾಗಿಲು ದಢಾರೆಂದು ಹಾಕಿ ಒಳಗೆ ಬಂದರು. ಮನಸ್ಸಿಗೆ ಮುಳ್ಳು ಚುಚ್ಚಿದಂತೆ.... ಮುಸ್ಸಂಜೆ ಹೊತ್ತಿಗೆ ಹೀಗೆ ಬಾಗಿಲು ಒಡೆಯುವಂತೆ ಹಾಕಬಾರದು ಅನ್ನುವ ಸೂಕ್ಷ್ಮ ಅವರಿಗೆ ಗೊತ್ತಿಲ್ಲವೆ? ಕೇಳುವ ಧೈರ್ಯ ಎಂದೋ ಕಳೆದುಕೊಂಡಿದ್ದೇನೆ. ತುಳಸಿಗೆ ದೀಪವಿಟ್ಟು ಮತ್ತೆ ಒಳಗೆ ಬಂದಾಗ ದೂರ್ವಾಸರನ್ನು ಕಂಡಂತಾಯ್ತು. ಎಲ್ಲೋ ಏನೋ ತಪ್ಪಿದೆ! ಮತ್ತೆ ದೇವರಿಗೆ ನಮಸ್ಕರಿಸಿ ಏಳುವಷ್ಟರಲ್ಲಿ ಬೆನ್ನಿಗೆ ಒಂದರ ಮೇಲೊಂದು ಏಟುಗಳು.... "ಅಲ್ಲೇ ಬಿದ್ದು ಸಾಯಿ, ನನ್ನ ಮರ್ಯಾದೆ ತೆಗೀಲಿಕ್ಕೆ ಈ ಮನೆಗೆ ಬಂದ ಮಾರಿ ನೀನು. ನಿನಗೇನು ಕಡಿಮೆ ಮಾಡಿದ್ದೆ? ಊರೆಲ್ಲ ನಾನು ತಲೆ ಎತ್ತದ ಹಾಗೆ ಆಗಿದೆ...." ಎಲ್ಲಿ? ಏನು? ಯಾಕೆ? ಯಾವಾಗ? ಯಾರು? ಒಂದೂ ಗೊತ್ತಿಲ್ಲ. ಕೇಳುವ ಹಾಗೇ ಇಲ್ಲ. ಮನಕ್ಕೆ ಮಂಕು ಬಡಿದಿದೆ. "ನಿಮ್ಮಪ್ಪ ಅಮ್ಮ ದನಕ್ಕೂ ಹೀಗೆ ಬಡಿಯುತ್ತಿರಲಿಲ್ಲ" ಮಾತು ತುಟಿಮೀರಿ ಬರಲಿಲ್ಲ. ಎದೆಯೊಳಗೆ ಅತೀವ ತಲ್ಲಣ. ಕಾರಣ ತಿಳಿಯದೆ ಹೊಡೆಸಿಕೊಳ್ಳುವ ನಾನೂ ಒಬ್ಬ ಮನುಷ್ಯಳೇ? ಆದರೆ, ಹೇಗೆ ಎದುರಿಸಲಿ? ಎಲ್ಲಿಂದ ಶುರು ಮಾಡಲಿ? ಏನೇನೆಲ್ಲ ವಿಚಾರಿಸಲಿ? ಯಾವುದಕ್ಕೆ ಕಡಿಮೆ ಮಾಡಿದ್ದಾರೆ ಎಂದರಲ್ಲ, ಏನು ಕೊಟ್ಟಿದ್ದಾರೆಂದು ಹೇಗೆ ಕೇಳಲಿ? ಇಷ್ಟು ವರ್ಷಗಳಲ್ಲಿ ಒಂದು ಮಗುವನ್ನಾದರೂ ಕೊಟ್ಟಿದ್ದರೆ....! ನನ್ನ ಒಂಟಿತನವನ್ನು, ನಿರಾಶೆಗಳನ್ನು, ಹತಾಶೆಗಳನ್ನು, ನೋವುಗಳನ್ನು ಸಹಿಸಿಕೊಳ್ಳುತ್ತಿದ್ದೆನೇನೋ! ಅದೇ ಸರಿ. ಇಂದು ಇದು ನಿರ್ಧಾರವಾಗಲೇ ಬೇಕು. ಇದಮಿತ್ಥಂ ಇತ್ಯರ್ಥವಾಗಲೇ ಬೇಕು. ಹೃದಯ, ಮನಸ್ಸುಗಳನ್ನು ಕಲ್ಲು ಮಾಡಿಕೊಂಡೇ ಅವರಿಗೆ ಊಟ ಬಡಿಸಿದೆ. ನನ್ನ ಗಂಟಲಲ್ಲಿ ಅನ್ನ ಇಳಿಯಲಿಲ್ಲ.

ಅಡುಗೆ ಮನೆ ಶುದ್ಧಮಾಡಿ, ಮುಂದಿನ-ಹಿಂದಿನ ಬಾಗಿಲುಗಳನ್ನೆಲ್ಲ ಹಾಕಿಕೊಂಡು ಮಲಗುವ ಮನೆಗೆ ಬಂದರೆ ಅವರಾಗಲೇ ಗೊರಕೆ ಹೊಡೆಯುತ್ತಿದ್ದರು. ಸಣ್ಣಗೆ ಮಿನುಗುತ್ತಿದ್ದ ರಾತ್ರೆ-ದೀಪದ ಬೆಳಕಿನಲ್ಲಿ ಅವರ ಮುಖ ದಿಟ್ಟಿಸಿದೆ. ಒಂದೆರಡು ಘಂಟೆಗಳ ಹಿಂದೆ ಎದ್ದು ತೋರಿದ್ದ ಕ್ರೌರ್ಯದ ಛಾಯೆಯೂ ಇರಲಿಲ್ಲ. ಅದೇನು ಆವೇಶ ಏರಿತ್ತೋ ಅಂದುಕೊಂಡೆ. ಎಲ್ಲದಕ್ಕೂ ಒಂದು ಕಾರಣವಿರಲೇ ಬೇಕಲ್ಲ. ಆ ಆವೇಗಕ್ಕೆ ಏನು ಕಾರಣವಿರಬಹುದು? ನನ್ನಿಂದ ಎಲ್ಲಿ, ಏನು ತಪ್ಪಾಗಿರಬಹುದು? ಊರೆಲ್ಲ ಹರಟೆಗೆ ಹೋದವಳಲ್ಲ. ಯಾರೂ ಇಲ್ಲಿ ಬರುವವರೂ ಇಲ್ಲ. ಹೀಗಿರುವಾಗ....! ಏನೂ ಹೊಳೆಯಲಿಲ್ಲ. ಸುಮ್ಮನೆ ಅತ್ತಿತ್ತ ನೋಡುತ್ತಿದ್ದಾಗ ಅವರ ಮೇಜಿನ ಮೇಲೆ ಕಾಗದದ ಸುರುಳಿಯೊಂದು ಕಂಡಿತು. ಏನೆಂದು ನೋಡಿದರೆ.... ನನ್ನ ವೈದ್ಯಕೀಯ ವರದಿ. ಇವರಿಗೆ ಹೇಗೆ ಸಿಕ್ಕಿತು? ಸದ್ದಾಗದಂತೆ ಬೀರು ಬಾಗಿಲು ತೆರೆದೆ. ವರದಿಯ ಪ್ರತಿ ಅಲ್ಲೇ ಇದೆ. ಅಂದರೆ.... ಇವರಿಗೆ ಯಾರೋ ಇನ್ನೊಂದು ಪ್ರತಿ ಕೊಟ್ಟಿದ್ದಾರೆ! ಯಾರು? ತಟ್ಟನೆ ನೆನಪಾಯಿತು, ಇವರ ಹೊಸ ಸಹೋದ್ಯೋಗಿಯ ಅಕ್ಕ ನನ್ನ ವೈದ್ಯೆಯ ಕ್ಲಿನಿಕ್‍ನಲ್ಲಿ ಕಾರ್ಯದರ್ಶಿ. ಈ ಅಕ್ಕ-ತಂಗಿಗೆ ನನ್ನ ಪರಿಚಯವಾಗಿದೆ. ತಂಗಿ ಇವರೊಂದಿಗೆ ಸಲಿಗೆಯಿಂದ ಇರುವುದನ್ನು ನಾನೇ ಕಂಡಿದ್ದೇನೆ, ಅದರಲ್ಲಿ ವಿಶೇಷವೇನೂ ಅನಿಸಿರಲಿಲ್ಲ. ಆದರೆ, ಈಗ.... ಈ ತಿರುವು! ಇವರ ಹಿತ್ತಾಳೆ ಕಿವಿಯನ್ನು ಅವಳು ಕಚ್ಚಿದ್ದಾಳೆ. ಅದು ಇವರನ್ನು ರೊಚ್ಚಿಗೆಬ್ಬಿಸಿದೆ. ಅದಕ್ಕೇ ಈ ಸಂಜೆಯ ರೌದ್ರಾವತಾರ. ಬಂದ ಬಿಕ್ಕಳಿಕೆಯನ್ನೂ ತಡೆದು ವರದಿಯನ್ನು ಅದೆಷ್ಟನೆಯ ಬಾರಿಗೋ ಮತ್ತೆ ಓದಿಕೊಂಡೆ.... `ಮಹಿಳೆಯಾಗಿ ನಿಮ್ಮ ದೇಹದಲ್ಲೇನೂ ತೊಂದರೆಯಿಲ್ಲ. ನಿಮ್ಮ ಅಂಡಾಶಯಗಳು ಮತ್ತು ಗರ್ಭಕೋಶ ಸುಸ್ಥಿತಿಯಲ್ಲಿವೆ. ನಿಮ್ಮ ಆರೋಗ್ಯ ಉತ್ತಮವಾಗಿದೆ. ತಾಯಿಯಾಗುವ ಎಲ್ಲ ಸಾಧ್ಯತೆಗಳೂ ಇವೆ.' ಹಾಗಾದರೆ....? ಅವರಲ್ಲೇ ದೋಷ! ಇರಬಹುದು! ಅದನ್ನೇ ಹೇಳಿದ್ದಳಲ್ಲ ಆ ವೈದ್ಯೆ, ಅವರನ್ನೊಮ್ಮೆ ವೀರ್ಯ ಪರೀಕ್ಷೆಗೆ ಒಳಪಡಿಸಿದರೆ ಒಳ್ಳೆಯದೆಂದು! ಆದರೆ, ಹೇಗೆ ಹೇಳಲಿ? ಅದಕ್ಕಿಂತ ಹೆಚ್ಚಾಗಿ.... ಛೇ! ಆ ಯೋಚನೆ ಕೂಡಾ ತಪ್ಪು. ಅಲ್ಲ, ಅದ್ಹೇಗೆ ತಪ್ಪು? ಸಹಜವಾದ ದೈಹಿಕ ಬಯಕೆ ಅದು, ತಪ್ಪು ಹೇಗಾದೀತು? ಗರ್ಭನಾಳದ ಪರೀಕ್ಷೆಗೆ ಬಲೂನ್ ಹಾಕಿದಾಗ ಆದ ಹಿತಾನುಭವ ಹಿಂದೆಂದೂ ಆಗಿರಲಿಲ್ಲ. ಸಂಭೋಗದಲ್ಲಿ ಸುಖವಿರಲಿಲ್ಲ ಎಂದು ಪತಿಯೊಡನೆ ಹೇಳುವ ಹಾಗಿಲ್ಲದ ನನ್ನ ಬಾಳೂ ಒಂದು ಬಾಳೇ! ಈ ಎರಡು ವಾರಗಳಿಂದ ನನ್ನೊಳಗೆ ನಡೆಯುತ್ತಿದ್ದ ಯುದ್ಧ ಇದೇ ಇರಬೇಕು. ಕಾರಣ ಹೊಳೆದಿರಲಿಲ್ಲ, ಇದೀಗ ಗುರುತಿಸಿಕೊಂಡಿದ್ದೇನೆ. ಸಹಿಸುವ ನೆಲೆ ದಾಟಿ ಬಿಡಲೆ? ಹೌದು! ಅದೇ ಸರಿ.

ಗಂಟೆ ನೋಡಿಕೊಂಡೆ. ಇನ್ನೂ ಒಂಭತ್ತೂವರೆ. ಮಂಗಳೂರಿಗೆ ಬಸ್ಸುಗಳಿವೆ. ಕೈಚೀಲದಲ್ಲಿ ಒಂದೆರಡು ಬಟ್ಟೆ ತುಂಬಿಕೊಂಡೆ. ಮದುವೆಯಲ್ಲಿ ಚಿಕ್ಕಪ್ಪ ಹಾಕಿದ್ದ ಎಲ್ಲ ಆಭರಣಗಳನ್ನೂ ತೆಗೆದುಕೊಂಡೆ. ಮಂಗಳಸೂತ್ರವನ್ನು ತೆಗೆದಿರಿಸಿ, ಪಕ್ಕದಲ್ಲಿ ವೈದ್ಯಕೀಯ ವರದಿಯ ಪ್ರತಿಯನ್ನೂ, ಜೊತೆಗೆ ಒಂದು ಪತ್ರವನ್ನೂ ಬರೆದಿಟ್ಟೆ: "ಕ್ಷಮಿಸಿ. ನೀವು ನನಗೆ ಕೊಟ್ಟಿದ್ದೆಲ್ಲವನ್ನೂ ಹಿಂತಿರುಗಿಸಿದ್ದೇನೆ. ಈ ಎಂಟು ವರ್ಷಗಳಲ್ಲಿ ನೀವು ಕಳೆಯಲಾಗದ ನನ್ನ ಕನ್ಯತ್ವವನ್ನು ಜೊತೆಗೆ ಇಟ್ಟುಕೊಂಡಿದ್ದೇನೆ. ಇಷ್ಟು ವರ್ಷ ನಿಮ್ಮ ಪತ್ನಿಯಾಗಿ ಸಮಾಜದಲ್ಲಿ ಒಂದು ಸ್ಥಾನ ಪಡೆದಿದ್ದೆ. ಅದನ್ನು ಇಂದು ನಾನಾಗಿಯೇ ಕಳೆದುಕೊಳ್ಳುತ್ತಿದ್ದೇನೆ. ನಿಮ್ಮನ್ನು ಮತ್ತೆ ಅನಾಥನನ್ನಾಗಿಸಿದೆ ಅನ್ನುವ ನೋವು ನನಗಿಲ್ಲ, ನಿಮಗೆ ನಿಮ್ಮ ಆವೇಗ, ಆವೇಶಗಳ ಜೊತೆಯಿದೆ. ನನ್ನ ದಾರಿ ನಾನು ಕಂಡುಕೊಳ್ಳುವ ಧೈರ್ಯಕ್ಕೆ ಇಂದು ಸಂಜೆಯ ನಿಮ್ಮ ನಡವಳಿಕೆ ಕಾರಣ, ಅದಕ್ಕಾಗಿ ಧನ್ಯವಾದಗಳು."

ಮುಂಬಾಗಿಲು ತೆರೆದು, ಮತ್ತೆ ಹೊರಗಿನಿಂದ ಬೀಗ ಹಾಕಿ, ಬೀಗದ ಕೈಯನ್ನು ಕಿಟಿಕಿಯಿಂದ ಮನೆಯೊಳಗೆ ತೂರಿಸಿ, ಮಂಗಳೂರಿಗೆ, ಚಿಕ್ಕಪ್ಪನ ಮನೆಗೆ ಹೊರಟೆ. ಮುಂದಿನ ಮನೆಯಲ್ಲಿ ಇನ್ನೂ ದೀಪ ಉರಿಯುತ್ತಿತ್ತು. ಅವರಿಗೂ ತಿಳಿಸುವ ಮನಸ್ಸಾದರೂ ಅವರಿಬ್ಬರ ನಿರಾತಂಕ ಬದುಕಿಗೆ ನನ್ನ ಛಾಯೆಯ ಅಗತ್ಯವಿಲ್ಲ ಅನಿಸಿತು. ಅವರಿಬ್ಬರ ನೆನಪು ನನ್ನೊಳಗೆ ಸದಾ ಹಸುರಾಗಿ, ಹೊಂಬೆಳಕಾಗಿ, ದಾರಿ ದೀಪವಾಗಿ ಇರಬಹುದೆಂಬ ನಂಬಿಕೆಯಿಂದ ಬಸ್ ನಿಲ್ದಾಣದತ್ತ ನಡೆದೆ. ಒಣ ತೆಂಗಿನ ಮರದ ಒಂಟಿ ಕೋಗಿಲೆಗೆ ವಿದಾಯ ಹೇಳಿದೆ, ಮನದಲ್ಲೇ.
(ಏಪ್ರಿಲ್-೨೦೦೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 2:30 PM
Labels:

10 ಪತ್ರೋತ್ತರ:

ಶಾಂತಲಾ ಭಂಡಿ said...
ಸುಪ್ತದೀಪ್ತಿಯವರೆ...
ಕಥೆ ಓದಿ ಮುಗಿವಾಗ ಒಂಟಿ ಕೋಗಿಲೆಯೊಂದು ಮನದಲ್ಲಿ ಕುಳಿತು ಕೂಗಿದಂತಹ ಅನುಭವ. ತಾವಾಗಿಯೇ ಕಣ್ಣಲ್ಲಿ ಕರಗುವ ಸಾಲುಗಳು.....ಸುಂದರ.
January 7, 2008 4:28 PM

suptadeepti said...
ಧನ್ಯವಾದ ಶಾಂತಲಾ.
January 7, 2008 5:02 PM

parijata said...
ಸುಂದರವಾದ ಕಥೆ. ನಾಯಕಿಯ ಒಳತೋಟಿಯನ್ನು ತುಂಬ ಚೆನ್ನಾಗಿ ಚಿತ್ರಿಸಿದ್ದೀರಿ. ನಿಮ್ಮ ಕಥೆಗಳಲ್ಲಿ ನನಗೆ ಅತಿಪ್ರಿಯವಾದ 'ಮುಗ್ಧ'ನಷ್ಟೇ ಹಿಡಿಸಿತು.
January 7, 2008 9:23 PM

suptadeepti said...
ಧನ್ಯವಾದ ಪಾರಿಜಾತ.
January 7, 2008 11:39 PM

sritri said...
ಒಮ್ಮೆ ಓದಿದ್ದೆ. ಮತ್ತೆ ಓದಿಸಿಕೊಂಡಿತು. ಬೇಸರ ತರಿಸದೆ.
January 9, 2008 3:06 PM

suptadeepti said...
ವೇಣಿ, ಬೇಸರಿಸದೆ ಮತ್ತೊಮ್ಮೆ ಓದಿದ್ದಕ್ಕೆ ಧನ್ಯವಾದ.
January 9, 2008 10:47 PM

ಪಯಣಿಗ said...
geddavaru yaaru?
elladaralloo hostannu kaaNuvavaru sadaa gelluvaru...
hasiru-hombeLakannu konegoo tumbikonda nimma kathaanaayakiya haage..
Kaggada AregaNNu.... saalugalannu nimma kathe nenapige tantu
January 10, 2008 10:03 AM

suptadeepti said...
ಧನ್ಯವಾದ ಪಯಣಿಗ. ಕಗ್ಗದ ಆ ಪದ್ಯ ಓದಿಲ್ಲ/ ಓದಿದ ನೆನಪಿಲ್ಲ. ಈ-ಮೈಲ್ ಮಾಡುವಿರ?
January 10, 2008 2:19 PM

sritri said...
ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು?
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು?
ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ
ಪರಿಕಿಸಿದೊಡದು ಲಾಭ - ಮಂಕುತಿಮ್ಮ-

ಪಯಣಿಗ ಹೇಳಿರುವುದು ಬಹುಶಃ ಇದೇ ಅರೆಗಣ್ಣು?:)
January 10, 2008 7:37 PM

suptadeepti said...
ಕಗ್ಗದ ಪದ್ಯಗಳೆಲ್ಲ ಅರ್ಥಪೂರ್ಣವಾದವುಗಳೇ. ಇದೂ ಹೊರತಲ್ಲ. ಸಾಹಿತ್ಯ ಒದಗಿಸಿದ್ದಕ್ಕೆ ಧನ್ಯವಾದ ವೇಣಿ.
January 10, 2008 8:10 PM

No comments: