Sunday, March 2, 2008
ಸ್ವಲ್ಪ ಸಮಯದ ಹಿಂದೆ ಇಲ್ಲಿನ ಟಿ.ವಿ.ಯಲ್ಲಿ ಒಂದು ಮೋಜಿನ ಆಟ ಬರುತ್ತಿತ್ತು- "ಈಸ್ ದ್ಯಾಟ್ ಯುವರ್ ಐಡೆಂಟಿಟಿ?" ಯಾವಾಗಾದರೊಮ್ಮೆ ಅದನ್ನು ನೋಡುತ್ತಿದ್ದೆ. ಹನ್ನೆರಡು ಜನ ಆಕರ್ಷಕವಾಗಿ ದಿರಿಸು ಧರಿಸಿ ನಿಂತಿದ್ದರೆ ಒಬ್ಬ ನಿಯಂತ್ರಕ, ಒಬ್ಬ ಆಟಗಾ(ರ/ರ್ತಿ). ಹನ್ನೆರಡು ಜನರಿಗೆ ಅವರವರದ್ದೇ ಆದ ಪರಿಚಯಾತ್ಮಕ ನಿಲುವುಗಳು, ಅದಕ್ಕೆ ಸರಿಯಾದ ಹೇಳಿಕೆಗಳು. ಈ ಹನ್ನೆರಡು ಹೇಳಿಕೆಗಳನ್ನು ದೊಡ್ಡದಾಗಿ ಬರೆದಿಟ್ಟಿರುತ್ತಾರೆ. ಆಟಗಾರ ವ್ಯಕ್ತಿಯನ್ನು ಹೇಳಿಕೆಯೊಂದಿಗೆ ಹೊಂದಿಸಬೇಕು. ಪ್ರತೀ ಸರಿ ಹೆಜ್ಜೆಗಳಿಗೆ ಒಂದಷ್ಟು ಹಣ. ತಪ್ಪಾದರೆ, ಎಲ್ಲವನ್ನೂ ಕಳೆದುಕೊಂಡು ಮನೆಗೆ ನಡೆಯಬೇಕು. ಯಾವುದೇ ಹಂತದಲ್ಲಿ ಆಟ ಹಿಂದೆಗೆದುಕೊಂಡು ಅದುವರೆಗೆ ಸಿಕ್ಕಿದ್ದ (ಅಥವಾ ಹಿಂದಿನ ಹಂತದವರೆಗೆ ಸಿಕ್ಕಿದ್ದ) ಹಣ ತೆಗೆದುಕೊಂಡು ಹೋಗುವ ಅವಕಾಶವೂ ಇದೆ. ಒಳ್ಳೆ ಮೋಜಿನ ಆಟ.
ಕೆಲದಿನಗಳ ಹಿಂದೆ ನನ್ನ ಗೆಳತಿಯೊಬ್ಬಳೊಡನೆ ಮಾತಾಡಿದ ನಂತರ, ನಮಗೆಲ್ಲರಿಗೂ ಇರುವ ಒಂದೊಂದು ರೀತಿಯ ಗುರುತುಗಳ ಬಗ್ಗೆ ಯೋಚನೆ ಹುಟ್ಟಿತು. ಆಗಲೇ ಈ ಟಿ.ವಿ. ಆಟವೂ ನೆನಪಾಯಿತು. ಅದೇ ಈ ಹರಟೆಗೆ ನಾಂದಿ.
ಇಲ್ಲಿ ನನ್ನದೇ ಕೆಲವಾರು ಪರಿಚಯಾತ್ಮಕ ರೇಖೆಗಳನ್ನು ಹಂಚಿಕೊಳ್ಳುತ್ತೇನೆ. ನಿಮಗೂ ಇಂತಹ ಕೆಲವು ಶಿರೋನಾಮೆಗಳು, ಪಾತ್ರಗಳು, ಬಿರುದುಗಳು, ಗುರುತುಗಳು ಇರಬಹುದು. ಅವನ್ನೆಲ್ಲ ಇಲ್ಲಿ ಹಂಚಿಕೊಳ್ಳುವಿರಾದರೆ ಸಂತೋಷ.
ಇದೀಗ ನನ್ನ ಸರದಿ....
ಮಗಳು, ಅಕ್ಕ, ವಿದ್ಯಾರ್ಥಿ, ಹೆಂಡತಿ, ಸೊಸೆ, ನಾದಿನಿ, ಅತ್ತಿಗೆ, ಗೃಹಿಣಿ, ಅಮ್ಮ, ಸ್ನೇಹಿತೆ, ಕವಯಿತ್ರಿ, ಅತಿಥಿ, ಆತಿಥೇಯಳು,... ಇಂಥವು ಇನ್ನೂ ಕೆಲವಾರು. ಇವುಗಳಲ್ಲಿ ನಾನು ಯಾವುದು ಹೌದು ಮತ್ತು ಯಾವುದಲ್ಲ ಅನ್ನುವಂತಿಲ್ಲ. ಎಲ್ಲವೂ ನಾನೇ; ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ನನ್ನ ಸಂಬಂಧ, ಪರಿಚಯ. ಈ ಪರಿಚಯಗಳಲ್ಲಿ ಕೆಲವಕ್ಕೆ ನಗುಮುಖವಿದ್ದರೆ ಇನ್ನು ಕೆಲವಕ್ಕೆ......!!
(೧) ನನ್ನ ಗೆಳತಿಯೊಂದಿಗಿನ ಆ ಹರಟೆಯಿಂದಲೇ ಶುರುಮಾಡುತ್ತೇನೆ....
ಕೆಲವು ವರ್ಷಗಳ ಹಿಂದೆ ಅವಳ ಅಪ್ಪ-ಅಮ್ಮ ಇಲ್ಲಿಗೆ (ಬೇ ಏರಿಯಾಕ್ಕೆ) ಬಂದಿದ್ದಾಗ ನನಗೂ ಅವರ ಪರಿಚಯವಾಗಿತ್ತು. ಏನೋ ಮಾತಿನ ನಡುವೆ, ತಮ್ಮ ಮಗಳು (ನನ್ನ ಸ್ನೇಹಿತೆ) ಹಾಗಲಕಾಯಿ ಮನೆಗೆ ತರುವುದಿಲ್ಲವೆಂದೂ, ತಮಗೆ ಅದು ಇಷ್ಟವೆಂದೂ ಹೇಳಿಕೊಂಡರು. ಇವಳ ಮಕ್ಕಳಿಗೆ, ಗಂಡನಿಗೆ ಹಾಗಲ ರುಚಿಸುವುದಿಲ್ಲ, ಹಾಗಾಗಿ ಅದಕ್ಕೆ ಆ ಮನೆಯಲ್ಲಿ ಪ್ರವೇಶವಿರಲಿಲ್ಲ. ಆ ಸಮಯದಲ್ಲಿ ನಾವು ಅವಳ ಮನೆಯ ಹತ್ತಿರದಲ್ಲೇ ಇದ್ದೆವು. ನಂತರದ ವಾರಗಳಲ್ಲಿ ನಾನು ಹಾಗಲ-ಪಲ್ಯ ಮಾಡಿದಾಗಲೆಲ್ಲ ಆ ಆಂಟಿ-ಅಂಕಲ್ ಅದರ ಪಾಲುದಾರರಾಗುತ್ತಿದ್ದರು. ಅವರ ಅಡುಗೆಗಿಂತ ಭಿನ್ನವಾಗಿದ್ದರಿಂದಲೂ, ಮಗಳ ಮನೆಯಲ್ಲಿ ದೊರೆಯದ್ದು ನನ್ನಿಂದ ದೊರೆತದ್ದರಿಂದಲೂ ಅವರಿಗೆ ತುಂಬಾ ಇಷ್ಟವಾಗಿತ್ತು.
ಈ ಸಂಗತಿ ನನಗೆ ಮರೆತೇ ಹೋಗಿತ್ತು, ಮೊನ್ನೆ-ಮೊನ್ನೆ ಸ್ನೇಹಿತೆ ಹೇಳುವತನಕ. ಅವಳ ಅಪ್ಪ-ಅಮ್ಮ ಮತ್ತೆ ಇಲ್ಲಿಗೆ ಮುಂಬೈಯಿಂದ ಬರುತ್ತಿದ್ದಾರೆ. ಅವರ ಜೊತೆ ಮಾತಾಡುತ್ತಾ ಇವಳು ಯಾಕೋ ನನ್ನ ಹೆಸರು ಹೇಳಿದ್ದಕ್ಕೆ ಅವರು, "ಓ ಅವಳಾ, ಕರೇಲಾ ಹುಡುಗಿ, ನಿನ್ನ ಸ್ನೇಹಿತೆ..." ಅಂದರಂತೆ. ಇದನ್ನು ಹೇಳುತ್ತಾ ಅವಳೂ, ಕೇಳುತ್ತಾ ನಾನೂ ನಕ್ಕೂ ನಕ್ಕೂ ಸುಸ್ತಾದೆವು. ಹಾಗೆ, ನನ್ನ ಒಂದು ಐಡೆಂಟಿಟಿ- "ಕರೇಲಾ ಹುಡುಗಿ", ನನ್ನ ಸ್ನೇಹಿತೆಯ ಅಪ್ಪ-ಅಮ್ಮನ ನೋಟದಲ್ಲಿ.
(೨) ಇತ್ತೀಚೆಗೆ ನನ್ನ ಇನ್ನೊಂದು ಸ್ನೇಹಿತೆಗೆ ಮಗುವಾಯಿತು. ಹೆರಿಗೆಯ ಬಳಿಕ ಆಸ್ಪತ್ರೆಯಿಂದ ತಾಯಿ-ಮಗು ಮನೆಗೆ ಬಂದಾಗ ಅವರನ್ನು ಮನೆಯೊಳಗೆ ಕರೆದುಕೊಳ್ಳುವ ಮೊದಲು ಒಂದು ಪುಟ್ಟ ಲೋಟದಲ್ಲಿ ಅರಶಿನ-ಕುಂಕುಮ ಕದಡಿದ ನೀರನ್ನು ಅವರ ಮೇಲೆ ನಿವಾಳಿಸಿಕೊಂಡು ತಾಯಿ-ಮಗುವನ್ನು ಮನೆಯೊಳಗೆ ಬರಹೇಳಿದೆ. ಗೆಳತಿಯ ಗಂಡ ಇದನ್ನೆಲ್ಲ ಹ್ಯಾಂಡಿಕ್ಯಾಮ್'ನಲ್ಲಿ ಸೆರೆಹಿಡಿದಿದ್ದ. ಹಲವು ದಿನಗಳ ಬಳಿಕ ಈ ನನ್ನ ಸ್ನೇಹಿತೆ ಮಾತಾಡುತ್ತಾ, "ನಿಮ್ಮ ಪರಿಚಯ ನಮ್ಮಿಬ್ಬರ ಮನೆಯವರಿಗೂ ಚೆನ್ನಾಗಿ ಆಗಿದೆ. ನೀವು ಲೋಟದಲ್ಲಿ ಕದರಾರತಿ ಮಾಡಿದ್ದನ್ನು ನೆನಪಿಟ್ಟುಕೊಂಡಿದ್ದಾರೆ" ಅಂದಳು. "ಅದರಲ್ಲೇನು ವಿಶೇಷ? ನಿಮ್ಮಲ್ಲಿ ಆ ಕ್ರಮ ಇಲ್ಲವೆ?" ಕೇಳಿದ್ದಕ್ಕೆ, "ನಮ್ಮಲ್ಲಿ ಲೋಟದಲ್ಲಿ ಮಾಡಲ್ಲ, ತಟ್ಟೆಯಲ್ಲಿ ಮಾಡ್ತಾರೆ..." ಅಂದಳು. ಹೀಗೆ ನನ್ನ ಇನ್ನೊಂದು ಐಡೆಂಟಿಟಿ- "ಲೋಟದಲ್ಲಿ ಆರತಿ ಮಾಡಿದವಳು".
(೩) ಒಮ್ಮೆ ದಟ್ಸ್-ಕನ್ನಡದಲ್ಲಿ ಒಂದು ಲೇಖನ ಬರೆದ ಒಬ್ಬಳಿಗೆ ನಾನು ಮಿಂಚಂಚೆ ಕಳಿಸಿದೆ. ಅವಳಿಂದ ಬಂದ ಪತ್ರ: "ದಟ್ಸ್-ಕನ್ನಡದಲ್ಲಿ ಕವನಗಳನ್ನು ಲೇಖನಗಳನ್ನು ಬರೆಯುವ ಸುಪ್ತದೀಪ್ತಿಯೇ ನೀವಲ್ಲವ? ನೀಲಿ ಚೂಡಿದಾರ್ ಫೋಟೋ...?"
"ಹೌದು, ನೀಲಿ ಚೂಡಿದಾರ್ ಫೋಟೋ ನನ್ನದೇ" ಅಂದಿದ್ದೆ ಅವಳಿಗೆ. ಅಲ್ಲಿಗೆ ನನ್ನ ಇನ್ನೊಂದು ಐಡೆಂಟಿಟಿ- "ನೀಲಿ ಚೂಡಿದಾರ್".
(೪) ಏನೇನೋ ತರಗತಿಗಳಿಗೆ ಸೇರುತ್ತಾ, ಏನೇನನ್ನೋ ಕಲಿಯುತ್ತಾ ಇರೋದು ನನ್ನ ಹವ್ಯಾಸಗಳಲ್ಲಿ ಒಂದು. "ವೇರ್ ಡು ಯು ವರ್ಕ್?" ಅನ್ನುವ ಪ್ರಶ್ನೆಗೆ ಉತ್ತರ, "ಅಯಾಮ್ ಎ ಕಂಪಲ್ಸಿವ್ ಸ್ಟೂಡೆಂಟ್". ಅದು ಮತ್ತೊಂದು ಐಡೆಂಟಿಟಿ.
(೫) ಇನ್ನು ಸಮಯದ ದಾರಿಯಲ್ಲಿ ಸ್ವಲ್ಪ ಹಿಂದಕ್ಕೆ ಹೋದರೆ- ನಾವು ಭಾರತದಲ್ಲಿದ್ದಾಗ, ನನಗೆ ಹಲವರ ಪರಿಚಯ, ಸ್ನೇಹ ಲಭಿಸಿತ್ತು. ಅವರಲ್ಲಿ ಕೆಲವರು ನನ್ನ ಕವನಗಳನ್ನು ಮೆಚ್ಚುತ್ತಿದ್ದರು. ಕೆಲವರು ಏನೂ ಹೇಳದೆ ಸುಮ್ಮನಿದ್ದರು. ಇನ್ನು ಕೆಲವು "ಫೇಮಸ್" ಕವಿ/ಕವಯಿತ್ರಿಯರು ಸಾರಾಸಗಟಾಗಿ ನನ್ನ ಕವನಗಳಿಗೆ "ಸಕಾಲಿಕ ಬರಹಗಳಲ್ಲ. ಶೈಲಿ ಸರಿಯಿಲ್ಲ. ಆಧುನಿಕತೆ ಇಲ್ಲ. ನವೋದಯ ಕಾಲದಲ್ಲಿ ಹುದುಗಿ ಹೋದವುಗಳು." ಅಂತೆಲ್ಲ ಪಟ್ಟಿ ಹಚ್ಚಿದ್ದರು. "ಆದಿಕಾಲದ ಗೌರಮ್ಮ" ಅಂತಲೂ ಕರೆದರು. "ಅಮೆರಿಕಾದಲ್ಲಿದ್ದು ಬಂದರೂ ನೀನು ಅಡುಗೂಲಜ್ಜಿ ಗೌರಮ್ಮ" ಅಂತ ಒಬ್ಬರು ಅಂದರು. ಇವೆರಡೂ ನನ್ನ ಐಡೆಂಟಿಟಿಗಳೇ ತಾನೇ (ಅವರ ದೃಷ್ಟಿಯಲ್ಲಿ!)?
(೬) ಇನ್ನೂ ಸ್ವಲ್ಪ ಹಿಂದಕ್ಕೆ ಹೋದರೆ, ನಾನು ಕಾಲೇಜು ಸೇರಿದ ಮೊದಲಲ್ಲಿ, ನಮ್ಮ ಮನೆ-ತೋಟ ಎಲ್ಲವೂ ಹೊಸದು (ಆವಾಗಷ್ಟೇ ಅಪ್ಪ ಮನೆ ಕಟ್ಟಿಸಿದ್ದರು. ಅಮ್ಮ, ನಾನು ಸೇರಿ ತೋಟ ಮಾಡಿದ್ದೆವು). ತೋಟದ ತುಂಬಾ ನಾಲ್ಕೈದು ಥರದ ಗುಲಾಬಿಗಳು. ಗಿಡಗಳ ಗೆಲ್ಲುಗಳು ಮುರಿದು ಬೀಳುವಷ್ಟು ಹೂಗಳು. ನನಗೋ ಹೂವಿನ ಹುಚ್ಚು (ಮೊದಲಿಂದಲೂ. ಪ್ರೈಮರಿ ಶಾಲೆಯಲ್ಲಿ ನಾನು "ಹೂವಿನ ಹುಡುಗಿ"ಯಾಗಿದ್ದೆ). ದಿನಾ ಒಂದೊಂದು ಗುಲಾಬಿ, ಮನೆದೇವರ ಪೂಜೆಯ ನಂತರ ನನ್ನ ಜಡೆಗೆ. ಹ್ಮ್... ತಿಂಗಳ ಆ ದಿನಗಳಲ್ಲಿ ಅಪ್ಪ ದೇವರ ಮೇಲಿನ ಹೂ ಕೊಡದಿದ್ದಾಗ, ಗಿಡದಿಂದಲೇ ಕಿತ್ತು ಮುಡಿಯುತ್ತಿದ್ದೆ. ಪಿ.ಯು.ಸಿ. ಓದಿದ ಎರಡು ವರ್ಷಗಳಲ್ಲಿ ಬಹುಶಃ ನನ್ನ ಜಡೆಯಲ್ಲಿ ಗುಲಾಬಿ ತಪ್ಪಿರಲಿಲ್ಲ. ಇದನ್ನು ಗಮನಿಸಿದ್ದ ಒಂದು ಗೆಳತಿ ಕೊನೆಕೊನೆಗೆ ನನ್ನನ್ನು "ಗುಲಾಬಿ ಹುಡುಗಿ" ಅಂತಲೇ ಕರೆಯುತ್ತಿದ್ದಳು. ಐಡೆಂಟಿಟಿಯ ಪಟ್ಟಿಯಲ್ಲಿ ಅದೂ ಇದೆ.
(೭) ನಾನು ಕನ್ನಡ ಸ್ನಾತಕೋತ್ತರ ಪರೀಕ್ಷೆ (ಸಂಸಾರದಲ್ಲಿ ಕೆಲವರ ಅಸಹನೆಯ ಹೊರತಾಗಿಯೂ) ಮುಗಿಸಿದಾಗ ನನ್ನ ಸಂಬಂಧಿಯಬ್ಬರು, "ನೀವು.... ಕನ್ನಡ.... ಎಮ್ಮೆ...." ಅಂತ ಬಿಡಿ ಬಿಡಿಯಾಗಿ ರಾಗ ಎಳೆದರು. ನಾನಂದೆ, "ಇಲ್ಲಪ್ಪ, ಎಮ್ಮೆ ಈಗ ಸಪೂರ ಆಗಿದೆ". ಆದ್ರೂ... ಅವರ ಧಾಟಿಯಲ್ಲಿ, ನಾನು ಕನ್ನಡ "ಎಮ್ಮೆ".
(೮) ಇತ್ತೀಚೆಗೆ ಬೇರೊಂದೂರಿನಲ್ಲಿ ನಡೆದ ಒಂದು ಸಾಹಿತ್ಯಗೋಷ್ಠಿಯಲ್ಲಿ ಒಬ್ಬರು ನನ್ನ ಬಳಿ ಬಂದು, "ನೀವು ಹ್ಯೂಸ್ಟನ್ "ಅಕ್ಕ-ಸಮ್ಮೇಳನ"ದ ಕವಿಗೋಷ್ಠಿಯಲ್ಲಿ "ವಯಸ್ಸು" ಕವನ ಓದಿದವರಲ್ವ?" ಅಂದರು (ಅಲ್ಲಿ ಆ ಕವನ ಓದಿದಾಗ ಇದ್ದುದಕ್ಕಿಂತ ಒಂದೂವರೆ ಪಟ್ಟು ನಾನು "ಅಡ್ಡಕ್ಕೆ" ಬೆಳೆದಿದ್ದರೂ ನನ್ನ ಗುರುತು ಹಿಡಿದರು).
ಅವರ ನೆನಪಿನ ಮೂಸೆಯಲ್ಲಿ "ವಯಸ್ಸು ಕವನ ಓದಿದವಳು" ಅನ್ನುವ ಐಡೆಂಟಿಟಿ ನನಗೆ.
ಸದ್ಯಕ್ಕೆ ಕೊನೆಯದಾಗಿ...
(೯) ಕೆಲವಾರು ತಿಂಗಳ ಬಳಿಕ ನನ್ನ ಗೆಳತಿಯೊಬ್ಬಳನ್ನು ಭೇಟಿಯಾದೆ. ನಾನು ಕಾಲೇಜಿಗೆ ಹೋಗುತ್ತಿರುವುದು ಆಕೆಗೆ ತಿಳಿದಿತ್ತು. ಕಲಿಯುತ್ತಿರುವ ವಿಷಯವೇನೆಂದೂ ತಿಳಿದಿತ್ತು. ಅದೇ ಹಿನ್ನೆಲೆಯಲ್ಲಿ ಆಕೆಯ ಚಟಾಕಿ: "ಡ್ರಮ್ಮಿಗೆ ಈಗ ಸ್ವಲ್ಪ ಶೇಪ್ ಬಂದಿದೆ, ಸೊಂಟ ಇದೆ ಅಂತ ಗೊತ್ತಾಗತ್ತೆ". ಸೋ, ಅವಳ ಪ್ರಕಾರ ನಾನು.... ಬೇಡ ಬಿಡಿ. ಪುನಃ ಹೇಳೋಕೆ ಇಷ್ಟ ಇಲ್ಲ.
ಇವತ್ತಿಗೆ ಇಷ್ಟು ಸಾಕು. ನಿಮ್ಮ ಅನುಭವ-ಅನುಭಾವಗಳನ್ನು ಹಂಚಿಕೊಳ್ಳಿ, ನಿಮ್ಮ ಕಿರೀಟದ ಗರಿಗಳನ್ನು ತೆರೆದಿಡಿ ಎಂದು ಕರೆಗೊಡುತ್ತಾ....
ಇಂತಿ,
ನಿಮ್ಮ ಸಹ-ಬ್ಲಾಗರ್.
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 8:00 PM
Labels: ಆತ್ಮ ಚಿಂತನ..., ನಗುವಿನೆಳೆಗಳು, ಹೀಗೇ ಸಾಗಲಿ....
26 ಪತ್ರೋತ್ತರ:
parijata said...
ನಗುಮುಖದ, ನೇರವಾದ ಮಾತಿನ ಸ್ನೇಹಿತೆ...
March 3, 2008 12:46 AM
ಶಾಂತಲಾ ಭಂಡಿ said...
ಅಕ್ಕಾ... ಇದನ್ನ ಬಿಟ್ಟಿರಲ್ಲ!
http://shantalabhandi.blogspot.com/2007/12/blog-post_19.html
ಈ ಲಿಂಕಿನಲ್ಲಿ ನಗುತ್ತಿರುವ ಸಿಂಡರೆಲಾಳನ್ನು!
ಚಂದ್ರನಂತಹ ದೋಸೆ ಕೊಟ್ಟು ಸಿಹಿ ಜಾಮ್ ನಂತಹ ಪ್ರೀತಿ ಕೊಟ್ಟ ನನ್ನ ಅಕ್ಕಳ ಬಗ್ಗೆ ಏನೂ ಹೇಳಲೇ ಇಲ್ಲ. ಇದು ಅನ್ಯಾಯ. ನೋವನ್ನೆಲ್ಲ ಗಂಟು ಕಟ್ಟಿಟ್ಟು ನಲಿವನ್ನು ಮಾತ್ರ ಬಿಚ್ಚಿಟ್ಟು ಹಂಚಿಕೊಳ್ಳುವ ನಿಮ್ಮನ್ನು ಏನೆನ್ನಲಿ! ಇನ್ನೊಂದು ಸಾಲು ಖಂಡಿತ ಅವಶ್ಯ ಬೇಕಿತ್ತು ಈ ಲೇಖನಕ್ಕೆ- ಮೊನ್ನೆ ಮೊನ್ನೆ ಪಡೆದ ಆ ಒಂದು ಬಿರುದಿಗೆ ನೀವು ಅರ್ಹರಲ್ಲ, ನಿಮಗದು ಸಲ್ಲ ಎನ್ನುವ ಸಾಲು.
March 3, 2008 7:42 AM
ಸುಪ್ತದೀಪ್ತಿ suptadeepti said...
ಹೌದು ಪಾರಿಜಾತ, ನೀವು ಒಬ್ಬ ಒಳ್ಳೆಯ ಸ್ನೇಹಿತೆ. ಜೊತೆಗೆ- ಭಾವಜೀವಿ, ಸಹೃದಯಿ, ಕವಯಿತ್ರಿ, ಜ್ಞಾತೆ, ಗಣಕ-ತಂತ್ರಾಂಶ ತಜ್ಞೆ, ಸಂಗೀತಗಾರ್ತಿ, ಹಾಗೂ ಮತ್ತುಳಿದ ಮಗಳು, ಸಹೋದರಿ, ಮಡದಿ, ಮಾತೆ, ಸೊಸೆ... ಎಲ್ಲವೂ. ನಿಮ್ಮ ಬಗ್ಗೆ ನನಗೆ ಗೌರವ, ಪ್ರೀತಿಯಿದೆ.
ಪ್ರತಿಕ್ರಿಯೆಗೆ ಧನ್ಯವಾದಗಳು.
ಶಾಂತಲಾ ಮರೀ, ನಿನ್ನ ಪ್ರೀತಿಯನ್ನು ಗೌರವವನ್ನು ಮರೆಯುವ ಪ್ರಶ್ನೆಯಿಲ್ಲ. ಅದನ್ನೆಲ್ಲ ಪಡೆಯುವ ಭಾಗ್ಯ ನನ್ನದಾಗಿದ್ದಕ್ಕೆ ನನಗೆ ತೃಪ್ತಿಯಿದೆ. ನೋವನ್ನು ಬದಿಗಿಟ್ಟು ನಲಿವನ್ನು ಹಂಚುವುದೇ ನಾನು ಪಾಲಿಸುವ ಧರ್ಮ.
ಇನ್ನು ಆ ಬಿರುದಿನ ಬಗ್ಗೆ- ಅದಕ್ಕೆ ಇಲ್ಲಿ ಸ್ಥಾನವೇ ಇಲ್ಲ, ಬಿಡು.
ನಿನ್ನ ಸ್ನೇಹಕ್ಕೆ, ಪ್ರೀತಿಗೆ, ಭಾವುಕತೆಗೆ, ಬರವಣಿಗೆಗೆ, ನಿನ್ನೊಳಗಿನ ಕವಯಿತ್ರಿಗೆ, ಕಥೆಗಾರ್ತಿಗೆ, ಪುಟ್ಟ ತಂಗಿಗೆ ನನ್ನೊಲವು.
March 3, 2008 12:45 PM
ಮಧು said...
ಸದಾ ನಗುತ್ತಾ, ನಗಿಸುತ್ತಾ, ನನ್ನ ಚಿಕ್ಕ ಪುಟ್ಟ ಪ್ರಯತ್ನಗಳಿಗೆಲ್ಲಾ ಪ್ರೋತ್ಸಾಹ ಕೊಟ್ಟು ಹುರಿದುಂಬಿಸುವ ದೊಡ್ಡಕ್ಕ....
March 3, 2008 5:51 PM
ಸುಪ್ತದೀಪ್ತಿ suptadeepti said...
ಮಧು, ನಿನ್ನ ಶುಧ್ದ ಮನಸ್ಸೂ ಅದಕ್ಕೆ ಕಾರಣ ಕಣೋ. ನನಗಿಂತ ಇಷ್ಟು ಚಿಕ್ಕವರೆಲ್ಲ ಈ ನಮ್ಮ ಭಾಷೆಯ ಬಗ್ಗೆ ಒಲವು ತೋರಿ ಅದನ್ನು ಬೆಳೆಸುತ್ತಾ ನಡೆಯುವುದನ್ನು ನೋಡಿ ನನಗಂತೂ ಖುಷಿಯಾಗುತ್ತಿದೆ. ಈ ಹೃದಯದಲ್ಲಿ ನಿನಗೂ ಜಾಗವಿದೆ.
March 3, 2008 6:04 PM
ಸುಪ್ತದೀಪ್ತಿ suptadeepti said...
ಅಲ್ಲಪ್ಪಾ, ನಿಮ್ಮ ಬಗ್ಗೆ ಹೇಳಿಕೊಳ್ಳಿ ಅಂದ್ರೆ, ಎಲ್ಲರೂ ಮತ್ತೆ ಮತ್ತೆ ನನ್ನ ಕಥೇನೇ ಕೊರೀತಿದ್ದೀರಲ್ಲ... ನಿಮ್ಮ ಕಿರೀಟದ ಗರಿಗಳನ್ನು ಸ್ವಲ್ಪ ತೋರಿಸಿ ನನಗೆ.
March 3, 2008 6:05 PM
Nempu.Guru said...
ಇಂತಹ ಬರಹ, ಕವನಗಳೇ ನನ್ನನ್ನು ದಿನಕ್ಕೊಂದು ಬಾರಿಯಾದರೂ ನಿಮ್ಮ ಬ್ಲಾಗಿಗೆ ಎಳೆದು ತರುವುದು. ಕೆಲಸದ ಒತ್ತಡದಲ್ಲಿ ಈ ಪ್ರಶ್ನೆಗಳನ್ನು ನನಗೆ ನಾನೇ ಕೇಳಿಕೊಳ್ಳದೆ ಅದೆಷ್ಟು ದಿನಗಳಾಯಿತು? ನನ್ನ ಬತ್ತಳಿಕೆಯಲ್ಲೂ "ಪಾಸಿಟಿವ್, ನೆಗೆಟಿವ್" ಬಿರುದುಗಳು ಸಾಕಷ್ಟಿವೆ. ಜೀವನದಲ್ಲಿ ಮುನ್ನುಗ್ಗಲು ಎರಡೂ ಬೇಕು :-)
March 3, 2008 7:12 PM
sunaath said...
ದೀಪ್ತಿ, ನಿನ್ನ ಮತ್ತೊಂದು identityಯನ್ನು ಮರೆತಿಯಾ?
ನೀನು ನನಗೆ online ಮಗಳು. ತಿರುಗಿಸಿ ಹೇಳುವದಾದರೆ ನಾನು online ಚಿಕ್ಕಪ್ಪ ಎನ್ನುವದು ನನ್ನ ಕಿರೀಟದ ಒಂದು ಗರಿ.
March 3, 2008 11:02 PM
Seema said...
ಸುಪ್ತದೀಪ್ತಿ ಅವರೇ, Identity ಗೆ ಬರಗಾಲವಿಲ್ಲ ಬಿಡಿ. ತುಸು ತೆಳ್ಳಗಿದ್ರೂ ಸಿಗತ್ತೆ, ತುಸು ದಪ್ಪಗಿದ್ರೂ ಸಿಗತ್ತೆ! ನನಗೂ ಇಂಥ identity ಗಳ ಕೊರತೆಯಾಗಿಲ್ಲ. ಕ್ರಿಶ್ಚಿಯನ್ನರ ತರ ಕಾಣುವವಳು, ತೆಳ್ಳಗಿನವಳು, ಬಿಳಿ ಚೂಡಿದಾರದವಳು, ಮಾತಾಡದವಳು, ಸೊಕ್ಕಿನವಳು, ಹೀಗೇ ಇನ್ನೂ ಏನೇನೋ.... ನಿಮ್ಮ ಬರಹ ಚೆನ್ನಾಗಿದೆ ಎಂದು ಹೇಳುವಷ್ಟು ನಾನು ದೊಡ್ದವಳಲ್ಲ, ಬೆಳೆದಿಲ್ಲ; ಓದಿ ಖುಷಿ ಆಗಿದ್ದು ಮಾತ್ರ ನಿಜ. ನನ್ನನ್ನು ಜನರು ಏನೆಲ್ಲ ಹೆಸರಿನಿಂದ ಕರೆಯುತ್ತಿದ್ದರು ಎಂಬುದೆಲ್ಲಾ ನೆನಪಾಯಿತು.
March 4, 2008 3:08 AM
ಮನಸ್ವಿನಿ said...
ಜ್ಯೋತಿ ಅಕ್ಕ,
ಚೆನ್ನಾಗಿದೆ ಈ ಬರಹ :) ನೆನಪಿದೆಯಲ್ಲ ’ತಲೆ ಬೊಂಡ ಮಾಡುವವರು ಬೇಕಾಗಿದ್ದಾರೆ’ - ಮೊದಲ ಸಲ ಫೋನಲ್ಲಿ ನೀವು ಕೇಳಿದ್ದು. ಸುಮಾರಷ್ಟಿವೆ ಅಡ್ಡ ಹೆಸರುಗಳು (ಎರಡೂ ತರದವು). ಇಲ್ಲಿ ಬೇಡ. :)
March 4, 2008 7:01 AM
ಸುಪ್ತದೀಪ್ತಿ suptadeepti said...
ಗುರು, ಸುನಾಥ್ ಕಾಕಾ, ಸೀಮಾ, ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಧನ್ಯವಾದಗಳು.
ಹೌದು ಗುರು, ಜೀವನದಲ್ಲಿ positive, negetive ಎರಡೂ ಬೇಕಾಗುತ್ತೆ balance ಆಗಿ ಇರ್ಲಿಕ್ಕೆ, ಅಲ್ವಾ?
ಕಾಕಾ, ನಿಮ್ಮನ್ನು, ನಮ್ಮ ಹೊಸ ಬಂಧವನ್ನು ಮರೆತಿಲ್ಲ (ಎಲ್ಲವನ್ನೂ ಹೇಳ್ತಾ ಕೂತ್ರೆ ಓದೋರಿಗೆ ಕೊರೆತ ಆಗ್ಬಾರ್ದಲ್ಲ, ಅದಕ್ಕೆ ಹೇಳಿಲ್ಲ). ಅದು ನಿಮ್ಮ ಗರಿ ಅಂತ ಹೇಳಿ ನನ್ನನ್ನು ಸಂಕೋಚಕ್ಕೆ ಹಾಕಿದ್ದೀರಿ.
ಸೀಮಾ, ನಮ್ಮಮ್ಮ ತುಂಬಾ ತೆಳ್ಳಗಿದ್ದಾಗ ಅವರನ್ನು "ತಲಕೆ" (ಅಡಕೆ ಮರದ ಸೀಳು) ಅಂತ ಕರೀತಿದ್ರು. ಬಹುಶಃ ಅದರಿಂದಾಗಿಯೋ ಏನೋ, ನಾನು ತೆಳ್ಳಗಾಗೋದೇ ಇಲ್ಲ (ಮತ್ತೊಂದು ತಲಕೆ ಆಗಕ್ಕೆ ಇಷ್ಟ ಇಲ್ಲ!!). ಹಾಗೇನೇ, ನನ್ನ ದಟ್ಟ ಕಪ್ಪು ಗುಂಗುರು ಕೂದಲು ನೋಡಿ, ನನ್ನನ್ನು "ಮಲಯಾಳಿಯಾ?" ಅಂತ ಕೇಳಿದವರಿದ್ದಾರೆ. ಹೀಗೇ ಏನೇನೋ ಇರುತ್ತವೆ. ನಿಮ್ಮ "ಬಿರುದುಗಳನ್ನು" ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
March 4, 2008 5:24 PM
ತೇಜಸ್ವಿನಿ ಹೆಗಡೆ said...
ಅಕ್ಕ.. ಈ Identity ಹೇಳುವುದು ಎಲ್ಲರಿಗೂ ಕಟ್ಟಿಟ್ಟ ಬುತ್ತಿಯೇನೋ. ನಾನು ರಾತ್ರಿಗಳಲ್ಲಿ ಎಚ್ಚೆತ್ತಿರುವುದು ಹೆಚ್ಚು. ಕಾಲೇಜುದಿನಗಳಲ್ಲೂ ಓದುವುದೆಲ್ಲಾ ರಾತ್ರಿಯೇ ಮಾಡುತ್ತಿದ್ದೆ. ಒಟ್ಟಿನಲ್ಲಿ ನಿದ್ದೆ ಕಡಿಮೆ. ಹಾಗಾಗಿ ನನ್ನ "ನಿಶಾಚರಿ" ಎನ್ನುತ್ತಾರೆ ;) ಈಗ ನನ್ನ ಮಗಳಿಗೂ ರಾತ್ರಿ ನಿದ್ರೆ ಕಡಿಮೆ. ಹಾಗಾಗಿ ಅವಳಿಗೆ ಈಗಲೇ Identity ಬಂದಿದೆ.. "ನಿಶಾಚರಿ ಮಗಳು" ಎಂದು:)ಇನ್ನು ನನ್ನ ದೃಷ್ಟಿಯಲ್ಲಿ ನಿಮ್ಮ Identity ಏನೆಂದರೆ, ಪ್ರೀತಿಯ ಅಕ್ಕ:-)
March 5, 2008 7:53 AM
ಶ್ರೀವತ್ಸ ಜೋಶಿ said...
ಐಡೆಂಟಿಟಿಗೆ ಸಂಬಂಧಿಸಿದಂತೆ ಭದ್ರಗಿರಿ ಅಚ್ತುತದಾಸರು ಹರಿಕಥೆಯೊಂದರಲ್ಲಿ ಹೇಳಿದ ಈ ವ್ಯಾಖ್ಯಾನ ಚೆನ್ನಾಗಿದೆ.
ಶ್ರೀರಾಮನ ಐಡೆಂಟಿಟಿ ಯಾರ್ಯಾರಿಗೆ ಏನೇನು ಎಂಬುದರ ವಿವರಣೆ. ರಾಮರಕ್ಷಾಸ್ತೋತ್ರದಲ್ಲಿ ಬರುವ ಒಂದು ಶ್ಲೋಕ:
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ನಾಥಾಯ ರಘುನಾಥಾಯ ಸೀತಾಯಾಃ ಪತಯೇ ನಮಃ
ಶ್ರೀರಾಮನನ್ನು ಮಾತೆ ಕೌಸಲ್ಯೆ ಮಾತ್ರ ರಾಮ ಎಂದು ಕರೆಯುತ್ತಾಳೆ. ತನ್ನ ಹಿರಿಮಗ ಎಂಬ ಹೆಮ್ಮೆಯಿಂದ ದಶರಥ ಅವನನ್ನು ರಾಮಭದ್ರ ಎನ್ನುತ್ತಾನೆ. ಅಯೋಧ್ಯೆಯ ಪ್ರಜೆಗಳಿಗೆ ಅವನು ಸುಖ ಸಂತೋಷಗಳನ್ನು ಕೊಡುವ ತಂಪು ಚಂದಿರ - ಹಾಗಾಗಿ ರಾಮಚಂದ್ರ. ವಿಶ್ವಾಮಿತ್ರಾದಿ ಋಷಿಮುನಿಗಳಿಗೆ ಅವನು ವೇಧಸ (ವೇದಗಳನ್ನು ಅರೆದು ಕುಡಿದವನು). ಸೀತೆಗೆ ’ನಾಥ’. ರಘುಕುಲವಂಶಜರಿಗೆಲ್ಲ ಆತ ರಘುನಾಥ. ಆದರೆ... ಆದರೆ... (ಇದೇ ಇಂಪಾರ್ಟೆಂಟು) - ಮಿಥಿಲೆಯ ಜನರು ಮಾತ್ರ ಅವನನ್ನು "ನಮ್ಮ ಸೀತಮ್ಮನ ಗಂಡನಲ್ವೇ..." ಅಂತಲೇ ಐಡೆಂಟಿಸುವರು!
ತಾತ್ಪರ್ಯ: ಜಗನ್ನಿಯಾಮಕ ಶ್ರೀರಾಮಚಂದ್ರನಿಗೇ ಆರೀತಿ ವಿವಿಧ ಐಡೆಂಟಿಟಿಗಳಿರುವಾಗ ನಮಗೆಲ್ಲ ಇರುವುದು ವಿಶೇಷವಲ್ಲ!
March 5, 2008 11:31 AM
ಸುಪ್ತದೀಪ್ತಿ suptadeepti said...
ತೇಜು, ನಿಶಾಚರಿ ಪದವಿಗೆ ನಿನ್ನ ಜೊತೆ ನಾನೂ ಪಾಲುದಾರಳು. ಕಾಲೇಜಿನ ದಿನಗಳಲ್ಲಿ ನಾನೂ ಕೂಡಾ ರಾತ್ರೆಯೇ ಓದುತ್ತಿದ್ದೆ. ಹೇಳಿಕೊಂಡದ್ದಕ್ಕೆ ಧನ್ಯವಾದಗಳು.
ವತ್ಸ, ಶ್ರೀರಾಮನ ಈ ಐಡೆಂಟಿಟಿಗಳನ್ನು ಕೇಳಿದ್ದೆ, ಭದ್ರಗಿರಿಯವರ ಮಾತಲ್ಲೇ. ಅವರು ವಿವರಿಸುವ ರೀತಿಯೇ ಸೊಗಸು. ಅದ್ರಲ್ಲೂ ಆ ಕೊನೆಯ ಸಾಲು... "ನಮ್ ಸೀತಮ್ಮನ್ ಗಂಡಾಂತ..." ಸುಂದರ, ಮೋಹಕ. ಅದನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.
March 5, 2008 1:11 PM
ಸುಶ್ರುತ ದೊಡ್ಡೇರಿ said...
ಜ್ಯೋತೀಜಿ,
ನಮಸ್ಕಾರ. ಹೇಗಿದ್ದೀರಿ?ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ. ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
March 5, 2008 8:51 PM
sritri said...
ನನ್ನ ಪ್ರೀತಿಯ ಪುಟ್ಟ ದುನಿಯಾದಲ್ಲಿ ವ್ಯಂಗ್ಯ, ಕಟು ವಿಶೇಷಣಗಳಿಂದ ನನ್ನನ್ನು ಗುರುತಿಸುವವರಿಲ್ಲ. (ಇದ್ದರೂ ನನ್ನ ಅನುಭವಕ್ಕೆ ಬಂದಿಲ್ಲ) ನನಗೆ ಸಿಕ್ಕಿರುವ ಕೆಲವಾರು ವಿಶೇಷಣಗಳಲ್ಲಿ ದಟ್ಸ್ ಕನ್ನಡದಿಂದ ಉಡುಗೊರೆ ರೂಪದಲ್ಲಿ ಸಿಕ್ಕಿರುವ ಪರಿಚಯ "ತುಳಸಿಯಮ್ಮ". ಯಾರಾದರೂ ಈ ಹೆಸರಿನಿಂದ ಕರೆದರೆ ನನಗೆ ತುಂಬಾ ಸಂತೋಷವಾಗುತ್ತದೆ :)
March 6, 2008 6:51 AM
ಸುಪ್ತದೀಪ್ತಿ suptadeepti said...
ಸುಶ್ರುತ, ನಿಮ್ಮೆಲ್ಲ ಸ್ನೇಹಿತ ಬಳಗದ ಈ ಒಳ್ಳೆಯ ಪ್ರಯತ್ನಕ್ಕೆ ಇಲ್ಲಿಂದ ಶುಭ ಕೋರುತ್ತೇನೆ. ಕಾರ್ಯಕ್ರಮ ಯಶಸ್ವಿಯಾಗಲಿ. ಇನ್ನಷ್ಟು ಇಂಥ ಸಂಘಟನೆಗೆ, ಗೋಷ್ಠಿಗೆ ನಾಂದಿಯಾಗಲಿ.
ಹೃತ್ಪೂರ್ವಕ ಹಾರೈಕೆಗಳು ತಮ್ಮಾ.
ವೇಣಿ, ಕಾಮಧೇನುವಿನಂಥ ನಿನಗೆ ಯಾರಾದರೂ ಯಾಕೆ ವ್ಯಂಗ್ಯ, ಕಟು ಮಾತು ಆಡಿಯಾರು? ಆಮ್ಲಜನಕ ನೀಡುವ ತುಳಸಿವನದ ತುಳಸಿಯಮ್ಮನಾಗಿಯೇ ಖುಷಿಯಾಗಿರು.
March 6, 2008 5:51 PM
ಅಸತ್ಯ ಅನ್ವೇಷಿ said...
ನನ್ನ ಬಗ್ಗೆ ಹೇಳ್ಬೇಕಾದ್ರೆ... ಬೊ.ರ.ಣ್ಣ, ಅನ್ವೇಶಿ... ಉಹ್.... ಬೇಡ.... ಬೇಡ...ನಿಮ್ ಬಗ್ಗೆ ನೀವೇ ಕೆಲವು ಮರೆತ್ರಿ... ಲಹರಿ ಹರಿಸುವವರು, ಖಾಯಂ ವಿದ್ಯಾರ್ಥಿನಿ...
March 6, 2008 11:11 PM
parijata said...
"ನಮ್ಮ ಸೀತಮ್ಮನ ಗಂಡನಲ್ಲವೇ" ಅನ್ನುವ ಸಾಲು ನೋಡಿ ಶತಾವಧಾನಿ ಡಾಆರ್. ಗಣೇಶರ 'ಕವಿತೆಗೊಂದು ಕಥೆ' ಎಂಬ ಪುಸ್ತಕದಲ್ಲಿ ಹಿಂದೆ ಓದಿದ್ದ ಕಥೆ ಹೇಳಲೇಬೇಕೆಂದು ಮನಸ್ಸಾಯಿತು.
ಅಪ್ಪಯ್ಯ ದೀಕ್ಷಿತರು ಸಂಸ್ಕೃತದ ಹೆಸರಾಂತ ಅಲಂಕಾರಿಕರು, ದೈವಭಕ್ತರೂ ಆಗಿದ್ದು, 'ಕುವಲಯಾನಂದ' ಮುಂತಾದ ಕೃತಿಗಳನ್ನು ನಮಗೆ ಕೊಟ್ಟಿದ್ದಾರೆ. ಅವರ ಪತ್ನಿಯಾದ ಅಚ್ಚಮ್ಮನವರೂ ವಿದುಷಿ. ಅಚ್ಚಮ್ಮನವರ ಗ್ರಾಮದಲ್ಲಿ ಒಮ್ಮೆ ಒಂದು ಸಮಾರಂಭವಾದಾಗ ದೀಕ್ಷಿತರೂ ಪತ್ನಿಯೊಡಗೂಡಿ ಅಲ್ಲಿಗೆ ಹೋಗಿದ್ದರು. ಪ್ರಸಿದ್ಧ ವ್ಯಕ್ತಿಯಾಗಿದ್ದರೂ ಮುಖಪರಿಚಯವಿಲ್ಲದಿದ್ದ ಕೆಲವರಿಗೆ ದೀಕ್ಷಿತರ ಗುರುತು ಸಿಗಲಿಲ್ಲ. ನಂತರ "ಓಹೋ, ಇವರೋ, ನಮ್ಮ ಅಚ್ಚಮ್ಮನ ಗಂಡ!" ಎಂದು ಅವರನ್ನು ಗುರುತಿಸಿದರು. ತಮ್ಮ (ಅ)ಪ್ರಸಿದ್ಧಿಯನ್ನು ಗಮನಿಸಿದ ದೀಕ್ಷಿತರು 'ಅಸ್ಮಿನ್ ಗ್ರಾಮೇ ಅಚ್ಚಾ ಪ್ರಸಿದ್ಧಾ' (ಈ ಊರಿನಲ್ಲಿ ಅಚ್ಚಳೇ ಪ್ರಸಿದ್ಧಳು') ಎಂದು ಉದ್ಗರಿಸಿದರು. ಪೂರ್ಣ ಶ್ಲೋಕ ನನಗೆ ಮರೆತಿದೆ- ಸಿಕ್ಕಿದಾಗ ಬರೆಯುತ್ತೇನೆ.
March 6, 2008 11:43 PM
ಪಯಣಿಗ said...
ಮನಸ್ಸನ್ನ ಒ೦ದಿಷ್ಟು ನೆನಪಿನ ಹಿ೦ದೋಟಕ್ಕೊಯ್ಯುವ ಬರಹ. ವಯಸ್ಸು, ಬುದ್ಧಿ, ದೇಹ, ಸ೦ಬ೦ಧಗಳು ಬೆಳೆದ೦ತೆಲ್ಲ ಸುತ್ತಲಿನವರ ನೋಟಕ್ಕೆ-ಓಟಕ್ಕೆ ತಕ್ಕ೦ತೆ ನಮ್ಮ ಪರಿಚಯದ ಎಳೆ ಬದಲಾಗುತ್ತ ಹೋಗುತ್ತೆ, ಅಲ್ಲವೆ? ನಾಲ್ಕು ವರೆ ವರ್ಷಗಳ ಹಿ೦ದೆ ಮೊದಲ ಬಾರಿಗೆ 'ಅಕ್ಕ' ಎ೦ದು ನಿಮ್ಮ ದನಿಯ ಪರಿಚಯಮಾಡಿಸಿದವರ ದಿಕ್ಕು-ದೃಷ್ಟಿ ಬದಲಾಗಿದ್ದರೂ ನೀವು ನನಗೆ ಅಕ್ಕನಾಗಿಯೇ ಉಳಿದದ್ದು ನನ್ನ ಅದೃಷ್ಟ.
March 7, 2008 5:00 AM
ಸುಪ್ತದೀಪ್ತಿ suptadeepti said...
ಪಾರಿಜಾತ, ಕಥೆಯೊಂದನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
ಅಸತ್ಯಾನ್ವೇಷಿಗಳೇ, ನಿಮ್ಮ ಅಷ್ಟುದ್ದ ಹೆಸರಿನ ಒಂದಕ್ಷರಗಳನ್ನು ಹೇಳುವಾಗಲೇ "ಉಹ್" ಅಂತ ಏದುಬ್ಬಸ ಬಿಡುವಷ್ಟು ಕಷ್ಟವಾಯ್ತೇ? ಹಾಗಾದ್ರೆ, ಡಬ್ಬಲ್ ಧ.ವಾ.ಗಳಪ್ಪ!! ನನ್ನ ಹೆಸರುಗಳನ್ನೆಲ್ಲ ಇಲ್ಲಿ ಪಟ್ಟಿ ಮಾಡಿಲ್ಲ. ಸದ್ಯಕ್ಕೆ ಸಾಕು ಅಂದಿದ್ದೇನೆ. ಎಲ್ಲವನ್ನೂ ಹೇಳ್ತಾ ಕೂತ್ರೆ, "ಕೊರೆವ ಲಹರಿ" ಆಗ್ತದಲ್ಲ (ಅಥವಾ ಈಗ್ಲೇ ಆಗಿದೆಯೋ, ಗೊತ್ತಿಲ್ಲ).
ಪಯಣಿಗ, ನನ್ನ ತಮ್ಮಂದಿರ ಬಳಗ ಬೆಳೆಯುತ್ತಲೇ ಇದೆ. ತಮ್ಮಂದಿರ ಜೊತೆಗೇ ಬೆಳೆದ ನನಗೆ ಅದು ಖುಷಿಯ ಸಂಗತಿ. ಜೊತೆಜೊತೆಗೇ ತಂಗಿಯಂದಿರೂ ಸೇರಿಕೊಂಡಿದ್ದಾರೆ, ಖುಷಿ ಹೆಚ್ಚಿಸಲು. ಇನ್ನೇನು ಬೇಕು?
March 7, 2008 5:35 PM
nilgiri said...
ನಮಸ್ಕಾರ ಸುಪ್ತದೀಪ್ತಿ ಅವರಿಗೆ,
ಬ್ಲಾಗಿನ ಪ್ರಪಂಚಕ್ಕೆ ನಾನು ಹೊಸಬಳು. ಹೀಗೆ ಸುತ್ತಾಡುವಾಗ ನಿಮ್ಮ ಬ್ಲಾಗ್ ಕಣ್ಣಿಗೆ ಬಿತ್ತು :) ನಿಮ್ಮ ಬರಹ ನನಗೆ ತುಂಬಾ ಇಷ್ಟವಾಯಿತು.
March 9, 2008 5:03 PM
ಸುಪ್ತದೀಪ್ತಿ suptadeepti said...
'ನೀಲಗಿರಿ'ಯವರಿಗೆ ಸ್ವಾಗತ, ವಂದನೆ ಮತ್ತು ಧನ್ಯವಾದ. ಹೀಗೇ ಬರುತ್ತಿರಿ, ಬರೆಯುತ್ತಿರಿ.
March 9, 2008 9:36 PM
ಸುಪ್ತದೀಪ್ತಿ suptadeepti said...
ಮನಸ್ವಿನಿ, ನನ್ನಿಂದ ತಪ್ಪಾಗಿದೆ, ಕ್ಷಮಿಸು. ನಿನ್ನ ಪ್ರತಿಕ್ರಿಯೆ ಪತ್ರಗಳ ಸಾಲಿನಲ್ಲಿ ಎಡೆಯಲ್ಲಿ ಸಿಕ್ಕಿಕೊಂಡಿತ್ತು, ಸರಿಯಾಗಿ ನೋಡದೆ ಪ್ರಕಟ ಆಗಲಿಲ್ಲ."ತಲೆ ಬೊಂಡ ಮಾಡುವವರು" ಇನ್ನೂ ಬೇಕಾಗಿದ್ದಾರೆ. ಸಿಗುತ್ತಾರಾ?
ಮತ್ತೊಮ್ಮೆ Sorry ಜೊತೆಗೆ Thanks.
March 10, 2008 9:26 AM
srinivas said...
'ತಲೆ ಬೊಂಡ ಮಾಡುವವರು ಸಿಗುತ್ತಾರಾ?’ ಹೆ ಹೆ ಹೆ - ದಕ್ಷಿಣ ಕರ್ನಾಟಕದ ನಾನು ಈ ಪದಗಳನ್ನು ಓದಿದ್ದು ಹೀಗೆ 'ತಲೆ ಬೋಡು ಮಾಡುವವರು ಸಿಗುತ್ತಾರಾ?’
ಈ ಪದಗಳಿಗೂ ಶ್ರೀ ಪೆಜತ್ತಾಯ ಅವರು ನನಗೆ ಇಟ್ಟ ಹೆಸರಿಗೂ ಸ್ವಲ್ಪ ಸಂಬಂಧ ಇದೆ ಎಂದೆನಿಸುತ್ತದೆ
ಶ್ರೀ ಪೆಜತ್ತಾಯರವರು ನನ್ನ ಕೆಲವು ವೈಯಕ್ತಿಕ ಬರಹಗಳನ್ನು ಓದಿ, ನನಗೆ ಇಟ್ಟ ಹೆಸರು ಡಾ ಮೋಸಸ್ - ಹೇಗೆ ಅರ್ಥೈಸುತ್ತೀರ ನೋಡಿ, ಅದು ನಿಮಗೇ ಬಿಟ್ಟದ್ದು.
March 22, 2008 10:33 PM
ಸುಪ್ತದೀಪ್ತಿ suptadeepti said...
ನಮಸ್ಕಾರ ಶ್ರೀನಿವಾಸರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಶ್ರೀ ಪೆಜತ್ತಾಯರು ನಿಮಗಿಟ್ಟ ಹೆಸರಿನ ಅರ್ಥ ಗೊತ್ತಾಗಲಿಲ್ಲ, ನನ್ನ ಲೋಕಜ್ಞಾನ ಈ ನಿಟ್ಟಿನಲ್ಲಿ ಕಡಿಮೆಯಿರಬಹುದು. ವಿವರಿಸುವಿರಾ?
March 23, 2008 8:49 AM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Subscribe to:
Post Comments (Atom)
No comments:
Post a Comment