ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May, 2008

ಅವಳೆಲ್ಲಿ ಗೊತ್ತಾ?

Sunday, February 10, 2008

ಯಾವುದೋ ಬಹಿರಂಗ ಸತ್ಯವನ್ನು ನುಂಗಿ-
ಅವಿತಿರಿಸಿಕೊಂಡವನಂತೆ ನಗುವ ಆತ,
ಇವಳ ಮನಸ್ಸನ್ನು ಎಲ್ಲಿರಿಸಿಕೊಂಡಿದ್ದಾನೆ?
-ನಿಮಗೇನಾದರೂ ಗೊತ್ತಾ?

ನಿಶ್ಚಯದ ದ್ಯೋತಕ ನೀಡುವ ಸಂದರ್ಭ-
ಅಮೆರಿಕನ್ ರೀತಿ ಪ್ರೇಮಭಿಕ್ಷಾ ಯಾಚನೆಯ `ಪೋಸ್'
ತಗ್ಗಿದ ತಲೆಯಡಿಯ ಓರೆ ನೋಟಕ್ಕೆ ದೃಷ್ಟಿ ಸೇರಿ
-ಅಲ್ಲೇ ಅರಳಿತ್ತೊಂದು ರೋಸ್

ಆಗ, ಆ ಕ್ಷಣದಲ್ಲೇ ನನಗೆ ನೆನಪಾಗಿದ್ದು-
ಎರಿಕ್ ಕ್ಲಾಪ್ಟನ್ನರ ಒಂದು ಜನಪ್ರಿಯ ಹಾಡು
"...ಹೇ ಲವ್, ಬ್ರಾಟ್ ಮಿ ಆನ್ ಮೈ ನೀಸ್....
ಬೆಗ್ಗಿಂಗ್ ಅಟ್ ಯುವರ್ ಫೀಟ್...!"

"ಮುತ್ತು"ಗಳ ಬದಲಾಗಿ ಹವಳಗಳ ಕೊಟ್ಟ
ಮತ್ತೆ ಬರುವೆನೆಂದು ಕೈ ಬೀಸಿ ಹೊರಟ
ಹೊಸ ರಂಗು ಕೆನ್ನೆಗೆ ತಂದುಕೊಂಡ ಆಕೆ-
-ಹೊಸ್ತಿಲಲ್ಲೇ ನಿಂತಿದ್ದಾಳೆ, ಗೊತ್ತಾ?

ಕೆಲಸ ಬದಿಗಿರಿಸಿ ಕನಸ ಬುಟ್ಟಿ ಹೆಣೆಯುತ್ತಾಳೆ,
ಮಾಂತ್ರಿಕ ಪರದೆಯ ಮೇಲೆ ಏನೋ ಬರೆಯುತ್ತಾಳೆ,
ಉಣ್ಣುತ್ತಾಳೆ, ಮಲಗುತ್ತಾಳೆ, ನಗುತ್ತಾಳೆ, ನಲಿಯುತ್ತಾಳೆ,
-ಆದರಿವಳು ನಮ್ಮ "ಆ ಹುಡುಗಿ"ಯಲ್ಲ.

-- ಅವಳೆಲ್ಲಿ? ನಿಮಗ್ಗೊತ್ತಾ?
(೧೭-ಜೂನ್-೧೯೯೯)
(ಗೆಳತಿಯೊಬ್ಬಳ ಮದುವೆಯ ನಿಶ್ಚಿತಾರ್ಥದ ಭಾವಚಿತ್ರದ ಸ್ಫೂರ್ತಿಯಿಂದ...)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:22 PM
Labels: ,

10 ಪತ್ರೋತ್ತರ:

sritri said...
ಪ್ರೇಮಿಗಳ ದಿನಕ್ಕೆ ಮೊದಲು ಪ್ರೇಮ ಕವನ ಹಾಜರ್! :)
"ಅವಳೆಲ್ಲಿ ಗೊತ್ತಾ?" -ಎಲ್ಲಾದರೂ, ಎಂತಾದರೂ ಇರಲಿ. ಸುಖವಾಗಿದ್ದರೆ ಸರಿ.
February 11, 2008 1:47 PM

suptadeepti ಸುಪ್ತದೀಪ್ತಿ said...
ಪ್ರೇಮಿಗಳ ದಿನವೆಂದು ಕರೆಸಿಕೊಳ್ಳುವ ಒಂದು ದಿನ ಮಾತ್ರ ಪ್ರೇಮಿಗಳಿಗೆ ಮೀಸಲಾದರೆ, ಬೇರೆ ದಿನಗಳಲ್ಲಿ ಅವರ ಪಾಡೇನು? ದೇವ ದೇವಾ.... ಕಾ...ಪಾಡು!
February 12, 2008 6:16 PM

ನಾವಡ said...
ಪ್ರೇಮಿಗಳ ದಿನದ ಮುನ್ನಾ ದಿನ ಈ ಕವನ ಓದಿದೆ. ಖುಷಿ ನೀಡಿತು.
ಕೆಲಸ ಬದಿಗಿರಿಸಿ, ಕನಸ ಬುಟ್ಟಿ ಹೆಣೆಯುತ್ತಿದ್ದಾಳೆ
--ಚೆಂದದ ಸಾಲು.
ನಾವಡ
February 13, 2008 3:35 AM

ಮನಸ್ವಿನಿ said...
ಮಾಂತ್ರಿಕ ಪರದೆಯ ಮೇಲೆ ಏನೋ ಬರೆಯುತ್ತಾಳೆ,
ವಾವ್ :) ಸಿಕ್ಕಿದ್ಲಾ ಅವಳು? ;)
February 13, 2008 7:27 AM

ಸುಪ್ತದೀಪ್ತಿ suptadeepti said...
ನಾವಡರೆ, ಮನಸ್ವಿನಿ, ಧನ್ಯವಾದಗಳು.
ಪ್ರೇಮಿಗಳ ದಿನಕ್ಕೆ ಇನ್ನೊಂದು ಟ್ರೀಟ್ ತಯಾರಾಗಿ ಕೂತಿದೆ. ಮತ್ತೆ ಮತ್ತೆ ಬರುತ್ತಾ ಇರಿ, ಓದಿ, ಆನಂದಿಸಿ.
February 13, 2008 7:58 AM

decemberstud said...
ಖಂಡಿತ ಗೊತ್ತು... ಕನಸು.... ಕವನ....
February 13, 2008 11:33 AM

ಸುಪ್ತದೀಪ್ತಿ suptadeepti said...
ಡಿ.ಎಸ್.,
ನಿನ್ನಂಥ ಕನಸುಗಾರನ ಕನಸು-ಕವನಗಳಲ್ಲಿ ಅಲ್ಲದೆ ಮತ್ತೆಲ್ಲಿ ಅವಳಿರಲು ಸಾಧ್ಯ? ಪತ್ತೆ ಹಚ್ಚಿದೆಯಲ್ಲ. ಧನ್ಯವಾದಗಳು.
February 13, 2008 6:41 PM

ಜಗಲಿ ಭಾಗವತ said...
ಅವಳೆಲ್ಲಿ ಅಂತ ಗೊತ್ತು. ಆದ್ರೆ ಹಾಗೆಲ್ಲ್ ಸುಮ್ಮಸುಮ್ಮನೆ ಹೇಳಲಿಕ್ಕಾಗಲ್ಲ. ಮಸಾಲೆದೋಸೆ ಕೊಡಿಸೋದಾದ್ರೆ ನೋಡೋಣ :-)
February 13, 2008 8:55 PM

Shiv said...
ಮುತ್ತುಗಳ ಬದಲು ಹವಳ ?ಈ ಹವಳ ಅಂದ್ರೇನು ??
ನಿಮ್ಮ ಸ್ಪೂರ್ತಿ ಚೆನ್ನಾಗಿ ಮೂಡಿಬಂದಿದೆ ಜ್ಯೋತಿ
February 13, 2008 9:22 PM

ಸುಪ್ತದೀಪ್ತಿ suptadeepti said...
ಭಾಗವತ, ಒಂದೆರಡೋ ಕೆಲವಾರೋ ಮಸಾಲೆ ದೋಸೆಗಳಿಗಾಗಿ ದೇಶದ ಅಗಲವನ್ನೇ ಜಿಗಿಯಬಲ್ಲ ಜಗಮಲ್ಲ ನೀನಾದ್ರೆ, ಬಾ, ಕೊಡಿಸೋಣ; ಗುಟ್ಟು ತಿಳಿಯೋಣ. ಇಲ್ಲಿ ಬಾ ಮೊದಲು.
ಶಿವ್, ನಿಜವಾಗಲೂ "ಹವಳ" (coral) ಅಂದ್ರೆ ಗೊತ್ತಿಲ್ವೋ ಅಥವಾ ಸುಮ್ನೆ ತಮಾಷೆ ಮಾಡ್ತಿದ್ದೀರಾ? ತಮಾಷೆ ಮಾಡಿದ್ದೇ ಹೌದಾದ್ರೆ.... "ಹೇಗೂ ನಮ್ಮೂರಿಗೇ ಬಂದಿದ್ದೀರಿ, ನೋಡ್ಕೋತೀನಿ ನಿಮ್ಮನ್ನ" ಅನ್ನಲಾ?
February 13, 2008 9:36 PM

No comments: