Thursday, February 21, 2008
(ಮೈಸೂರು ಕೆ.ಆರ್.ನಗರದ "ಗ್ರಾಮಾಂತರ ಬುದ್ಧಿಜೀವಿಗಳ ಬಳಗ" ಕಳೆದ ವರ್ಷ ಏರ್ಪಡಿಸಿದ "ದ.ರಾ.ಬೇಂದ್ರೆ ಸ್ಮರಣಾರ್ಥ ಕಾವ್ಯ ಸ್ಪರ್ಧೆ"ಯಲ್ಲಿ 'ವೈಪರೀತ್ಯ' ಮತ್ತು 'ಒಡಲಾಚೆಗೀಚೆ' ಕವನಗಳು, 'ಹೊರನಾಡ ಕನ್ನಡಿಗರು ವಿಭಾಗ'ದಲ್ಲಿ ಪ್ರಶಸ್ತಿಗೆ ಅರ್ಹವಾದವು. ಇದೇ ಫೆಬ್ರವರಿ ಮೂರರಂದು ಮೈಸೂರಿನಲ್ಲಿ ನಡೆದ, ಆ ಸಂಸ್ಥೆಯ ೨೩ನೇ ವಾರ್ಷಿಕೋತ್ಸವದಲ್ಲಿ ವಿಜೇತ ಕವನಗಳನ್ನು ಒಳಗೊಂಡ ಪುಸ್ತಕ ಬಿಡುಗಡೆ ಮಾಡಲಾಗಿದೆ.)
(ಮತ್ತೊಂದು ವರುಷದ ಕುಸುರಿ, ನಿಮ್ಮ ಮಡಿಲಿಗೆ...)
ಸೂರ್ಯನುದಿಸುವನಲ್ಲಿ, ಈ ಊರು ನಿಶೆಯಲ್ಲಿ
ತಂಗಾಳಿ ತೊಟ್ಟಿಲು ಎರಡು ಬದಿಗೂ
ನಡುಹಗಲು ನಟ್ಟಿರುಳು ತೂಗು ಉಯ್ಯಾಲೆಯಲಿ-
ಲಂಬವಾಗುವ ಬೆಳಕು ಎರಡು ಮುಖಕೂ
ಚೈತನ್ಯಕೊಂದು ಎಳೆ, ನಿರ್ಜೀವಕೊಂದು ನೆಲೆ
ಗೋಳದಲಿ ಬಿಸಿಲಿಹುದು ತಂಪು ಇಹುದು
ಅರಳು ಹೂವಿಗೆ ದುಂಬಿ ಮುತ್ತಿಡುವ ಹೊತ್ತಲ್ಲೆ-
ಮುಗ್ಧ ಕಣ್ಣಲಿ ಮಿನುಗುತಾರೆಯಿಹುದು
ಮುಗಿಯಿತೆನ್ನುವ ಪಯಣ ಒಂದು ಪಾದದ ಕ್ರಮಣ
ಇನ್ನೊಂದು ಹೆಜ್ಜೆಯನು ಎತ್ತಬೇಕು
ನಿಂತ ನೀರಾಗದಿರೆ ಬದುಕ ಸರಸಿಗೆ ಅರುಣ-
ಮತ್ತೆ ಹೊನ್ನಿನ ಕಿರಣ ಮೆತ್ತಬೇಕು
(೨೧-ಫೆಬ್ರವರಿ-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:01 AM
Labels: ಹೀಗೇ ಸಾಗಲಿ...., ಹೊಚ್ಚಹೊಸದು
15 ಪತ್ರೋತ್ತರ:
ಸುಶ್ರುತ ದೊಡ್ಡೇರಿ said...
ಸಖತ್ತಾಗಿದೆ ಕವನ.
February 21, 2008 1:38 AM
ವಿಕ್ರಮ ಹತ್ವಾರ said...
ಮುಗಿಯಿತೆನ್ನುವ ಪಯಣ ಒಂದು ಪಾದದ ಕ್ರಮಣ
ಇನ್ನೊಂದು ಹೆಜ್ಜೆಯನು ಎತ್ತಬೇಕು
emtaha olle saalidu....
February 21, 2008 8:11 AM
ಸುಪ್ತದೀಪ್ತಿ suptadeepti said...
ಸುಶ್, ವಿಕ್ಕಿ: ಧನ್ಯವಾದಗಳು ಇಬ್ಬರಿಗೂ.
February 21, 2008 8:34 AM
ಶಾಂತಲಾ ಭಂಡಿ said...
suptadeeptiಯವರೆ...
"ಸೂರ್ಯನುದಿಸುವನಲ್ಲಿ, ಈ ಊರು ನಿಶೆಯಲ್ಲಿ
ತಂಗಾಳಿ ತೊಟ್ಟಿಲು ಎರಡು ಬದಿಗೂ
ನಡುಹಗಲು ನಟ್ಟಿರುಳು ತೂಗು ಉಯ್ಯಾಲೆಯಲಿ-
ಲಂಬವಾಗುವ ಬೆಳಕು ಎರಡು ಮುಖಕೂ"
ನಿಮ್ಮ ಮಿದುಳಲ್ಲಿ ಕವನ ಹುಟ್ಟಲಿಕ್ಕೆಯೇ ಅಂತ ವಿಶೇಷವಾದ ಭಾಗವೊಂದಿದೆಯಾ ಅಂತ! ಈ ಕವನದ ಬಗ್ಗೆ ಮಾತನಾಡಿದಷ್ಟೂ ಕಮ್ಮಿಯೇ. ಮನಮೋಹಕ, ಅಷ್ಟೆ.
February 21, 2008 9:35 AM
sritri said...
"ನಿಂತ ನೀರಾಗದಿರೆ ಬದುಕ ಸರಸಿಗೆ ಅರುಣ-
ಮತ್ತೆ ಹೊನ್ನಿನ ಕಿರಣ ಮೆತ್ತಬೇಕು"
ಮತ್ತೆ ಮತ್ತೆ ಓದಬೇಕೆನಿಸಿದ ಸಾಲು!
February 21, 2008 10:45 AM
Keshav Kulkarni said...
ತುಂಬ ಸುಂದರ ಕವನ. ಕೆ.ಎಸ್.ನ ನಿಮ್ಮಲ್ಲಿ ಅಡಗಿ ಕೂತು ಈ ಥರ ಬರೆಸುತ್ತೀದ್ದಾರೋ ಹೇಗೆ? ನವ್ಯ, ನವ್ಯೋತ್ತರದ ಹಂಗಿಲ್ಲದೇ, ನವೋದಯದ ನಿತ್ಯ ವಸಂತದ ಸಾಲುಗಳು ಮತ್ತೆ ಮತ್ತೆ ಮೆಲುಕು ಹಾಕಿಸುತ್ತವೆ.
-ಕೇಶವ
(www.kannada-nudi.blogspot.com)
February 21, 2008 12:50 PM
ಸುಪ್ತದೀಪ್ತಿ suptadeepti said...
ಶಾಂತಲಾ: "ನಿಮ್ಮ ಮಿದುಳಲ್ಲಿ ಕವನ ಹುಟ್ಟಲಿಕ್ಕೆಯೇ ಅಂತ ವಿಶೇಷವಾದ ಭಾಗವೊಂದಿದೆಯಾ ಅಂತ!"-- ಹೌದೆನಿಸುತ್ತೆ; ಯಾಕಂದ್ರೆ, ಕವನಗಳನ್ನು ಬರೆದಂತೆಲ್ಲ ನನ್ನ ನೆನಪೂ ಕಡಿಮೆಯಾಗುತ್ತಿದೆ... ಆ ಭಾಗ ನನ್ನ ನೆನಪಿನ ಕೋಶಗಳನ್ನು ಆಕ್ರಮಿಸುತ್ತಿದೆಯಾ ಅಂತ!!
ಧನ್ಯವಾದ ವೇಣಿ.
ಕೇಶವ್: "ನವ್ಯ, ನವ್ಯೋತ್ತರದ ಹಂಗಿಲ್ಲದೇ, ನವೋದಯದ ನಿತ್ಯ ವಸಂತದ ಸಾಲುಗಳು..."-- ಅದೇ ನನ್ನ ಮಿತಿ ಅಂತಲೂ ಬಲ್ಲೆ. "ಬರಹದ ಶೈಲಿ ಸಕಾಲಿಕವಾಗಿಲ್ಲ" ಅನ್ನುವುದು ನನ್ನ ಮೇಲಿನ ಟೀಕೆ. ಒಪ್ಪಿಕೊಳ್ಳುತ್ತೇನೆ.
February 21, 2008 2:40 PM
Keshav Kulkarni said...
ಇದು ಟೀಕೆಯಲ್ಲ, ನವ್ಯ ನವ್ಯೋತ್ತರಗಳನ್ನು ಓದಿ ಬೇಸತ್ತ ನಮಗೆ ನವೋದಯದ ಅಹ್ಲಾದತೆಯನ್ನು ನೆನಪಿಸುವ ನಿಮ್ಮ ಹೊಸ ಕವನಗಳು ಚಿತೋಹಾರಿ ಎಂದು ನಾನು ಹೇಳಲು ಹೊರಟಿದ್ದು.
- ಕೇಶವ
February 21, 2008 3:41 PM
ಸುಪ್ತದೀಪ್ತಿ suptadeepti said...
ಕ್ಷಮಿಸಿ ಕೇಶವ್, ನಿಮ್ಮ ಮಾತು ಟೀಕೆಯಲ್ಲ. ಬೇರೆ ಸಮಕಾಲೀನ ಕವಿ-ಕವಯಿತ್ರಿಯರು ನನ್ನ ಬಗ್ಗೆ ಹೇಳಿರುವ ಮಾತಿದು. ನಿಮ್ಮದಲ್ಲ. ಈ ನನ್ನ ಅಭಿಪ್ರಾಯ ಮೊದಲ ಮಾತಿನಲ್ಲಿ ಸ್ಪಷ್ಟವಿರಲಿಲ್ಲ, ಕ್ಷಮಿಸಿ.
February 21, 2008 3:59 PM
ಮನಸ್ವಿನಿ said...
ನನ್ನ fav ಲಿಸ್ಟಿಗೆ ಈ ಹಾಡನ್ನು ಹಾಕಿಕೊಂಡಿದ್ದೇನೆ. ಸೂಪರ್ ಆಗಿದೆ.
February 22, 2008 5:44 AM
ಸುಪ್ತದೀಪ್ತಿ suptadeepti said...
ಧನ್ಯವಾದ ಸು.
February 22, 2008 10:21 AM
sunaath said...
ಇರುಳು ಕಳೆಯಲೆ ಬೇಕು, ಬೆಳಗು ಮೂಡಲೆ ಬೇಕು, ಪಯಣ ಸಾಗಲೆ ಬೇಕು ಅನಂತದೆಡೆಗೆ!
February 22, 2008 11:27 AM
ಸುಪ್ತದೀಪ್ತಿ suptadeepti said...
ಆ ಅನಂತ ಪಯಣವೇ ಈ ಜೀವನದ ಗುರಿ... ಧನ್ಯವಾದಗಳು.
February 22, 2008 11:31 AM
decemberstud said...
ನವ್ಯ, ನವ್ಯೋದಯದ ಹಂಗಿಲ್ಲದಿದ್ದರೆ, ಅದು ಮಿತಿ ಹೇಗಾದೀತು?
ಸಣ್ಣಕಥೆ ಬರೆಯುವವನು ಕಾದಂಬರಿ ಬರೆಯಲೇಬೇಕಿಲ್ಲವಲ್ಲ. ಭೈರಪ್ಪನವರಿಗೂ ಒಮ್ದು ಮಿತಿ ಇದೆ, ಕೆ.ಎಸ್.ನ ರಿಗೂ ಇದೆ. ಆ ಮಟ್ಟೀಗೆ ಹೇಳುವುದಾದರೆ ನವೋದಯ ನಿಮ್ಮ ಮಿತಿ ಹೌದು. ಆದರೆ, ನನ್ನನ್ನು ಕೇಳಿದರೆ ಅದು ನಿಮ್ಮ ಕವಿತೆಗಳ ಬುನಾದಿ. ಹೆಚ್ಚು ವಾಲುವುದು ಬೇಡ!!!
February 24, 2008 12:37 AM
ಸುಪ್ತದೀಪ್ತಿ suptadeepti said...
ಹೆಚ್ಚು ವಾಲಲಾರೆ ಡಿ.ಎಸ್.... ಬೆನ್ನ ಹಿಂದೆಯೇ ಜೊತೆಕೊಡಲು ನೀನಿದ್ದೀಯಲ್ಲ. ಧನ್ಯವಾದಗಳು.
February 24, 2008 10:23 PM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 22 May 2008
Subscribe to:
Post Comments (Atom)
No comments:
Post a Comment