ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May 2008

ಲಹರಿಗಳು

Thursday, January 3, 2008

ಲಹರಿಗಳು ಹರಿಯುತ್ತವೆ-
ಹೊರಳಿ - ಮರಳಿ - ಕೆರಳಿ;
ಒಳಹರಿವ ತುಡಿತಕ್ಕೆ-
ಒಳಗಾಗಿ ಹಣ್ಣಾಗಿ
ತೂಗಿ - ತೊನೆದು - ಕನಲಿ,
ಬಳಲಿ ಬೆಂಡಾದ ಜೀವಕ್ಕೆ-
ನೀಡುತ್ತವೆ ಚೈತನ್ಯ
ಚೇತನದೊಳು ಸೇರಿ.

ಚಿಂತನೆಗೆ ಪಕ್ಕಾಗಿ, ಚಿಲುಮೆಯ ಕಣ್ಣಲ್ಲಿ
ಚಿಮ್ಮಿ ಚಿಮ್ಮಿ ಹೊಮ್ಮುತ್ತವೆ;
ತಡೆಯಲಾರದ ಒರತೆಯಾಗಿ,
ಒಡೆಯಲಾರದ ಒಗಟಾಗಿ,
ಕಸುವಿಗೆ ಕಸರತ್ತು ನೀಡುತ್ತ-
ಹರಿಯುತ್ತವೆ- ಮಹಾಪೂರವಾಗಿ.

ಲಹರಿಗಳು ಹರಿಯುತ್ತವೆ-
ಆಳದ ಒತ್ತಡದಿಂದ
ಬಲ ತುಂಬಿಕೊಂಡು ಬುಗ್ಗೆಯಾಗಿ-
ಅಂತಃಸತ್ವದ ಸತು
ಹೀರಿಕೊಂಡು ನುಗ್ಗಿಬಿಡುತ್ತವೆ,
ಎಲ್ಲೆಂದರಲ್ಲಿ ದಾರಿ ಮಾಡಿಕೊಂಡು;
ಅಡೆತಡೆಗಳ ಗೋಡೆ
ಅವುಗಳಿಗಿಲ್ಲ, ಇರಬೇಕಿಲ್ಲ
ಬೇರೆಯೆಲ್ಲದರ ಗೊಡವೆ.

ತಮ್ಮ ದಾರಿಯಲ್ಲಿ ತಾವೇ
ತಾವಾಗಿ ಹರಿವ ಅವೇ
ಕಂಡುಕೊಳ್ಳುತ್ತವೆ ಗಮನದ-
ಗಮನದಲ್ಲಿರುವ-
ಗಮ್ಯ ಸ್ಥಾನವನ್ನು.

ಲಹರಿಗಳಿವು - ಎಲ್ಲೆಲ್ಲಿಂದಲೋ
ಬಂದು ಸೇರುವವು,
ಒಂದನ್ನೊಂದು; ಒಡೆದು-
ಒಂದರಿಂದಿನ್ನೊಂದು ತೊರೆದು-
ದೂರ ಸರಿಯುವವು;
ಓಡುವ ಓಟದಲ್ಲೂ,
ಆಡುವ ವೈಖರಿಯಲ್ಲೂ,
ಒಂದರಿಂದಿನ್ನೊಂದಕ್ಕಿಲ್ಲ ಸಾಮ್ಯ;
ಆದರೂ ಒಂದೇ ಎಲ್ಲ-
ಸದಾ ಕರೆವ ಹರಿವುಗಳು.

ಕೊನೆಗೆ ತಪ್ಪದೇ ಗುರಿ-
ಸೇರುವ ಇವೆಲ್ಲವೂ ಅವೇ-
ಮೊರೆವ, ಕೊರೆವ ಲಹರಿಗಳು;
ಯೋಚನಾ ಲಹರಿಗಳು.
(೦೮-ಫೆಬ್ರವರಿ-೨೦೦೦)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:18 PM
Labels: ,

8 ಪತ್ರೋತ್ತರ:

sritri said...
ಲಹರಿಗಳು ಹರಿಯುತ್ತವೆ
ಅಕ್ಷರಗಳಾಗಿ
ಪದಗಳಾಗಿ
ಸಾಲುಗಳಾಗಿ
ಮನಮೋಹಿಸುವ
ನವಿರು ನವಿರು
ನೂರು ಕವಿತೆಗಳಾಗಿ!
January 4, 2008 9:37 AM

suptadeepti said...
ಲಹರಿಗಳೇ ಅವು...
ನೂರು ರೂಪಗಳಾಗಿ
ನೂರು ಕಥೆಗಳಾಗಿ
ಎಲ್ಲೆಲ್ಲೂ ಆಡುತ್ತವೆ
ಮನೆ ಮಾಡುತ್ತವೆ.
ಮತ್ತೆ ಮತ್ತೆ ಮೂಡಿ
ಮೋಡಿ ಮಾಡುತ್ತವೆ.
ಮೋಹಿತರಾದ ನಾವು?
ಮರುಳರಲ್ಲಿ ಮರುಳರು!
ಧನ್ಯವಾದ ವೇಣಿ.
January 4, 2008 12:48 PM

ಶಾಂತಲಾ ಭಂಡಿ said...
ಸುಪ್ತದೀಪ್ತಿಯವರೆ...
ಲಹರಿಯೊಳಗೆ ಲಗ್ಗೆ ಹಾಕುವ ಈ ಲಹರಿಯ ಝರಿಗಳು ತುಂಬ ಇಷ್ಟವಾದವು.
January 4, 2008 3:42 PM

suptadeepti said...
ಧನ್ಯವಾದಗಳು ಶಾಂತಲಾ.
January 5, 2008 12:36 AM

Anonymous said...
ishta aayitu
-mala
January 6, 2008 2:12 PM

ತೇಜಸ್ವಿನಿ ಹೆಗಡೆ said...
ಲಹರಿಗಳಿವು - ಎಲ್ಲೆಲ್ಲಿಂದಲೋ
ಬಂದು ಸೇರುವವು, ಒಂದನ್ನೊಂದು;
ಒಡೆದು-ಒಂದರಿಂದಿನ್ನೊಂದು ತೊರೆದು-
ದೂರ ಸರಿಯುವವು;
very nice Lahari...
manassu laharigolgaythu...
January 16, 2008 7:59 AM

suptadeepti said...
ಧನ್ಯವಾದಗಳು ತೇಜಸ್ವಿನಿ.
ಲಹರಿಗಳ ತೀರಕ್ಕೆ ಸ್ವಾಗತ. ಹೀಗೇ ಬರುತ್ತಿರಿ, ಬರೆಯುತ್ತಿರಿ.
January 16, 2008 9:34 AM

No comments: