ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 22 May 2008

ಉಗಮಾಗಮ

Tuesday, May 6, 2008

ಜೀವತಂತುವೊಂದರಿಂದ ಬಂದ ಉಗಮ, ಜೀವಾಗಮ,
ಮಿಂಚಿನೆಳೆಗೆ ಕಾದ ಇಳೆಗೆ ಹರಿದ ಸುರಿದ ವಿಕ್ರಮ;
ಏಕತಾನದಿಂದ ಸರಿದ ಸಂಗಮದಲಿ ಸರಿ-ಸರಿಗಮ,
ಜೋಡು ಭಿನ್ನ ತಂತುಗಳಿಗೆ ಮತ್ತ ಮುತ್ತ ವಿಭ್ರಮ;
ಚುಂಬಿಸಿದರೆ ಚಾತಕದೊಲು, ಚೇತರಿಸಲು ಚಂಚಲದೊಳು-
ಪುಟಿಯುವೆದೆಗೆ ತುಟಿಯೊತ್ತಲು ಕಾದಿರುವದು ಸಂಭ್ರಮ.

ಸುರಲೋಕದ ತೃಣ ಕಣದಲಿ, ನೀಹಾರಿಕೆಯೆದೆಗೂಡಲಿ
ಲೌಕಿಕ ರತಿ ಲಾಸ್ಯಗಳಲಿ, ಅಲೌಕಿಕದ ಭಾಷ್ಯಗಳಲಿ,
ಸೌಂದರ್ಯದ ಮೂರ್ತಗಳಲಿ, ರೌದ್ರತೆಯತಿ ರೂಪಗಳಲಿ,
ರಿಂಗಣಿಸುವ ದನಿಯೆಡೆಯಲಿ, ಮೌನಹೆಣೆದ ಬಿಡುಜಡೆಯಲಿ
ಯಂತ್ರ-ತಂತ್ರದೊಳಗೆ ಮಂತ್ರ ಉದ್ಗರಿಸುವ ಮಾಂತ್ರಿಕತೆಯ-
ಮೋಡಿ ಮಾಡಿ ಮಾಯೆಯಾಗಿ, ನವ್ಯ ಪ್ರಭೆಯು ಮರಳಲಿ.

ಹೊಸರೂಪಿನ ಹೊಸ ಚೇತನ, ಹೊಸತನದಲಿ ಹೊಸ ಚಿಂತನ,
ರಮ್ಯಗಾನ ಧ್ಯಾನತಾನ ಬರಸೆಳೆಯುವ ಅಭಿಸೇಚನ;
ಅನುರಕ್ತಿಯೊಳಾರತಿಯಿದು, ಅಣುರೇಣುವಿನಾತ್ಮತನ,
ಅವನಿಜೆಯಲಿ ಆತ್ಮಜನಲಿ ಝೇಂಕರಿಸುವ ಓಂತನನ,
ಸಂಧಿಸಿದವು ವಿಂಗಡಿಸಲು, ವಿವಿಧತೆಗಳ ನೋಂಪಿಯೊಳಗೆ-
ಅಚ್ಚರಿಯಿದು ಸೋಜಿಗವಿದು, ಜೀವವುದಿಪ ನರ್ತನ.
(೧೭-ಫೆಬ್ರವರಿ-೨೦೦೪)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:34 PM
Labels: ,

9 ಪತ್ರೋತ್ತರ:
sritri said...
ಜೀವ ಉದಿಪ ಅಚ್ಚರಿಗಳ ಬಿಚ್ಚಿಡುವ ವೈಜ್ಞಾನಿಕ ಕವನ! ಜೀವವುದಿಪ ......ನರ್ತನ..ಎನ್ನುವ ಪದ ಯಾಕೋ ಸರಿಹೋಗಲಿಲ್ಲ ಅನಿಸಿತು. ಹರಿವ ಲಹರಿಯಲ್ಲಿ ಮತ್ತೆ ಕವನದ ಝರಿ ಕಂಡು ಖುಷಿಯಾಯಿತು.
May 7, 2008 7:00 AM

ಸುಪ್ತದೀಪ್ತಿ suptadeepti said...
`ಜೀವವುದಿಪ ನರ್ತನ' ಅನ್ನುವುದನ್ನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ, ಅದರ ಹಿಂದಿನ ಸಾಲಿನ (ಸಂಧಿಸಿದವು ವಿಂಗಡಿಸಲು, ವಿವಿಧತೆಗಳ ನೋಂಪಿಯೊಳಗೆ) ಮುಂದರಿಕೆಯಾಗಿ.
ಜೀವಕೋಶದೊಳಗೆ ವರ್ಣತಂತು (ಕ್ರೋಮೋಸೋಮ್)ಗಳ ಚಲನೆ ಯಾವುದೋ ಅಲೌಕಿಕ ನರ್ತನದಂತೆಯೇ ಭಾಸವಾಗುವುದರಿಂದ ಹಾಗೆ ಬರೆದೆ.
ಪ್ರತಿಕ್ರಿಯೆಗೆ ಧನ್ಯವಾದಗಳು, ವೇಣಿ.
May 7, 2008 4:54 PM

Anonymous said...
ಕವನ ತುಂಬಾ ಇಷ್ಟವಾಯಿತು. ಜೀವಸೃಷ್ಟಿಯ ಪ್ರಕ್ರಿಯೆಯನ್ನ ವಿಜ್ಞಾನಿಯ ದೃಷ್ಟಿಯಲ್ಲಿ, ಕವಿಯತ್ರಿಯ ಕಲ್ಪನೆಗಳನ್ನ ಭಾವಪೂರ್ಣ ಪದಲಾಸ್ಯದಲ್ಲಿ ಹಿಡಿದಿಟ್ಟಿರುವ ’ಸಂಗಮಾಗಮ’ ಈ ’ಉಗಮಾಗಮ’.
ಧನ್ಯವಾದಗಳು,
ಮೋಹನ ಬಿಸಲೇಹಳ್ಳಿ
May 7, 2008 6:03 PM

ಸುಪ್ತದೀಪ್ತಿ suptadeepti said...
ಸ್ವಾಗತ ಮತ್ತು ಧನ್ಯವಾದ ಮೋಹನ್. ಹೀಗೇ ಬರುತ್ತಿರಿ, ಓದಿ, ಆಸ್ವಾದಿಸಿ, ಪ್ರತಿಕ್ರಿಯೆ ಬರೆಯುತ್ತಿರಿ.
May 7, 2008 6:22 PM

phonon said...
ಪುಟಿಯುವೆದೆಗೆ ತುಟಿಯೊತ್ತಲು ಕಾದಿರುವದು ಸಂಭ್ರಮ- ಈ ಸಾಲುಗಳು ಹುಬ್ಬೀರುವಂತೆ ಮಾಡಿತು!.
ಸೃಷ್ಟಿ ಕ್ರಿಯೆಯನ್ನು ಶರೀರ-ರಸಾಯನ ಶಾಸ್ತ್ರದಿಂದ ವಿವರಿಸಿದ್ದಿರಿ. ಸೃಜನಾತ್ಮಕ ವಿವರಣೆಗೆ ಇನ್ನಸ್ಟು ಆಸ್ಪದ ಇತ್ತು ಎಂದು ನನ್ನ ಭಾವನೆ. ಲೌಕಿಕ ರತಿ ಲಾಸ್ಯಗಳಲಿ..- ಇಲ್ಲಿ ಲೌಕಿಕ ಎನ್ನುವ ಪದ ಮುಂದಿನ ಪದಲಾಸ್ಯಗಳ ತೀವ್ರತೆಯನ್ನು ಕಡಿಮೆ ಮಾಡಿದೆ ಎಂದು ಅನ್ನಿಸುತ್ತದೆ. ಏಕೆಂದರೆ, ರತಿ ಲಾಸ್ಯದ ಸಂದರ್ಭದಲ್ಲಿ ಅದು ಲೌಕಿಕವೋ ಅಥವಾ ಅಲೌಕಿಕವೋ ಎನ್ನುವ ಸಂಶಯ ಮೂದಿದರೆ, ಅಲ್ಲಿ ತಲ್ಲೀನತೆ ಇರಲಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ಒಟ್ಟಾರೆ ಬಹಳ ದಿನಗಳ ನಂತರ ಒಂದು ಕವನ ಇಸ್ತವೈತು ನನಗೆ.
D.M.Sagar
May 8, 2008 3:16 PM

ಸುಪ್ತದೀಪ್ತಿ suptadeepti said...
ಸಾಗರ್, ಪ್ರತಿಕ್ರಿಯೆಗೆ ಧನ್ಯವಾದಗಳು. ಕವನ ಇಷ್ಟವಾದುದಕ್ಕೂ ಸಹ.
ಇಲ್ಲಿ ಹುಬ್ಬೇರುವಂಥ ಆಶ್ಚರ್ಯಕರವಾದುದು ಏನಿದೆಯೋ ಗೊತ್ತಾಗಲಿಲ್ಲ.
ಸೃಷ್ಟಿಕ್ರಿಯೆ ಲೌಕಿಕ ಮತ್ತು ಅಲೌಕಿಕಗಳ ಸಂಗಮ. ಅದನ್ನು ಇಲ್ಲಿ ಹೇಳಲಿಚ್ಛಿಸಿದ್ದೇನೆ. ಹೊರತಾಗಿ `ರತಿಲಾಸ್ಯ ಲೌಕಿಕ' ಅನ್ನುವ ಕಟ್ಟುಪಾಡು ಕೊಟ್ಟಿಲ್ಲ. ಮೊತ್ತಮೊದಲ ಡಿ.ಎನ್.ಎ. ಹುಟ್ಟಿಕೊಂಡಾಗಿನಿಂದ ಪ್ರಕೃತಿಯಲ್ಲಿನ ಎಲ್ಲ ಸಸ್ಯ-ಜೀವಿಗಳ ಆಗಮ-ಉಗಮಗಳ ಒಟ್ಟು ಪ್ರಾತಿನಿಧಿಕ ಬಿಂಬ ಈ ಕವನ. ಮಾನುಷ ನೆಲೆಯೊಂದೇ ಉದ್ದೇಶವಲ್ಲ, ಸ್ಫೂರ್ತಿಯೂ ಅಲ್ಲ.
ಇತ್ತೀಚೆಗೆ ನಿನ್ನೊಂದಿಗೆ ಮಾತಾಡುತ್ತಾ ದೃಷ್ಟಿಕೋನಗಳು ಬೇರೆ ಬೇರೆ ಇರುವ ಬಗ್ಗೆ ಹೇಳಿದ್ದೆ. ಇಲ್ಲೂ ಅದೇ ಆಗಿದೆಯೆಂದು ಕಾಣುತ್ತದೆ.
May 8, 2008 11:21 PM

ಶ್ರೀವತ್ಸ ಜೋಶಿ said...
ಉನ್ನತದರ್ಜೆಯ ಕವಿತೆಗಾಗಿ ಜ್ಯೋತಿಯವರಿಗೆ ಅಭಿನಂದನೆಗಳು!
ಈ ಕವಿತೆ ಇನ್ನೂ ಮೇಲ್ಮಟ್ಟಕ್ಕೇರುತ್ತಿತ್ತು...
೧) ಅಲ್ಪವಿರಾಮ, ಅರ್ಧವಿರಾಮ, ಪೂರ್ಣವಿರಾಮ ಚಿಹ್ನೆಗಳನ್ನು ಬಳಸದಿದ್ದರೆ.
೨) ಪದಲಾಲಿತ್ಯದ ಜತೆಯಲ್ಲಿ ತಾಳ-ಲಯಗಳಿಗೂ ಸ್ವಲ್ಪ ಗಮನ ಹರಿಸಿದ್ದರೆ (ಉದಾ: ಮೊದಲ ೨ ಸಾಲುಗಳನ್ನು ಓದಿದ ಮೇಲೆ ೩ನೇ ಸಾಲಿನಲ್ಲಿ ಸರಿ-ಸರಿಗಮ ಎಂದಿರುವುದು ಲಯಕ್ಕೆ ತೊಡಕಾಗುತ್ತದೆ. ಸರಿಗಮ ಎಂದಷ್ಟೇ ಇದ್ದರೆ ಸರಿಹೋಗುತ್ತದೆ, ನಾಲ್ಕನೆಯ ಸಾಲು ಅದೇ ಲಯಕ್ಕೆ ಸರಿಹೊಂದುತ್ತದೆ).
೩) ಒಂದನೇ ಮತ್ತು ಮೂರನೇ ಭಾಗಗಳು ವಿಶೇಷಣ-ನಾಮಪದ ಸಂಯೋಗ ಪದಪುಂಜಗಳನ್ನು ಬಳಸಿದ ಚಿತ್ರಣಗಳಾದರೆ ಎರಡನೆಯ ಭಾಗವು ಆಜ್ಞಾರ್ಥಕ ಧಾಟಿಯಲ್ಲಿದೆ. ಹೀಗಿರುವ ಬದಲು ಅದೂ ಇನ್ನುಳಿದ ಎರಡು ಭಾಗಗಳಂತೆಯೇ ಇದ್ದಿದ್ದರೆ.
೪) ’ಅಭಿಸೇಚನ’ ವನ್ನು ’ಅಭಿಸಿಂಚನ’ ಎಂದು ಬರೆದಿದ್ದರೆ ಮತ್ತು ಅದು ’ಹೊಸ ಚಿಂತನ’ಕ್ಕೆ ಸನ್ನಿಹಿತಪ್ರಾಸವಾಗುವಂತೆ ನೋಡಿಕೊಂಡಿದ್ದರೆ. (ಹಾಗೆಯೇ, "ಹೊಸರೂಪಿನ ಹೊಸ ಚೇತನ ಹೊಸತನದಲಿ ಚಿಂತನ ರಮ್ಯಗಾನ ಧ್ಯಾನತಾನ ಬರಸೆಳೆಯುವ ಅಭಿಸಿಂಚನ" ಅಂತಿದ್ದರೆ ಸಂಗೀತಕ್ಕೆ ಅಳವಡಿಸಲು ಸುಲಭವಾಗಿರೋದು)
೫) ’ವಿವಿಧತೆಗಳ’ ಪದದ ಬದಲಿಗೆ ’ವೈವಿಧ್ಯದ’ ಎಂದು ಬರೆದಿದ್ದರೆ.
=======
ಮೌನ "ಹೆಣೆದ" "ಬಿಡು" ಜಡೆ = ?(ಹೆಣೆದಿದ್ದರೂ ಬಿಡಿಸಿದಂತಿರುವ?)
=======
May 10, 2008 3:02 AM

sunaath said...
ಜ್ಯೋತಿ,
ನೀನು ಬರೆದ ಗೇಯ ಕವನಗಳಿಗಿಂತ ಭಿನ್ನವಾದ ಕವನ. ವೈಚಾರಿಕತೆಯನ್ನು ಅಂದವಾಗಿ ಹುದುಗಿಸಿಕೊಂಡ ಕವನ.
ಅಭಿನಂದನೆಗಳು.
-ಕಾಕಾ
May 10, 2008 10:11 AM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಶ್ರೀವತ್ಸ ಮತ್ತು ಕಾಕಾ.

ವತ್ಸ, ನಿಮ್ಮ ಪ್ರತಿಕ್ರಿಯೆಗಳನ್ನು ಗಾಂಭೀರವಾಗಿಯೇ ಪರಿಗಣಿಸುತ್ತೇನೆ.
ಇದರ ಸಂದೇಶ ಮುಖ್ಯವಾಗಿದೆಯೇ ಹೊರತು ಇದರ ಗೇಯತೆಯಲ್ಲ. ತನಗೆ ತಾನೇ "ಬರೆಸಿಕೊಂಡ" ಕವನಗಳಲ್ಲಿ ಇದೂ ಒಂದು. ಅಂಥ ಕವನಗಳ ಪದಪುಂಜಗಳಲ್ಲಿ ಬದಲಾವಣೆ ಮಾಡುವ ಪ್ರಯತ್ನ ನಾನು ಮಾಡುವುದು ಕಡಿಮೆ.ಇದೇ ವಿವರಣೆ ಚಿತ್ರಕ ನುಡಿ/ ಆಜ್ಞಾರ್ಥಕ ನುಡಿ- ಪ್ರಶ್ನೆಗೂ.
ಇದರ ಅರ್ಥ-ಸಂದೇಶಕ್ಕೆ ವಿರಾಮ ಚಿಹ್ನೆಗಳಿದ್ದರೆ ಉತ್ತಮ ಅನಿಸಿದ್ದರಿಂದ, ಹಾಗೇ ಬರೆದಿದ್ದೆ. ನಾಲ್ಕು ವರ್ಷಗಳ ಹಿಂದೆ ಬರೆದದ್ದನ್ನು ಈಗ ಹಾಗೇ ಪ್ರಕಟಿಸಿದೆ."ಸರಿ-ಸರಿಗಮ" ಅನ್ನುವುದು "ಸರಿಯಾದ ಸ-ರಿ-ಗ-ಮ" ಅನ್ನುವರ್ಥದಲ್ಲಿ. ಲಯಕ್ಕಾಗಿ ಹಾಡುವವರು ಹೊಂದಿಸಿಕೊಳ್ಳುತ್ತಾರೆ. ಅಭಿಸೇಚನ ಪದ ಇಲ್ಲಿ ಸನ್ನಿಹಿತ ಪ್ರಾಸ ಅಥವಾ ಗೇಯತೆಗಿಂತಲೂ ಮಿಗಿಲಾಗಿ, ಅರ್ಥವ್ಯಾಪಿಯ ದೃಷ್ಟಿಯಲ್ಲಿ ಸೂಕ್ತವೆನ್ನಿಸುತ್ತಿದೆ.
ವಿವಿಧತೆ/ ವೈವಿಧ್ಯ -- ಅಂಥ ವ್ಯತ್ಯಾಸವೇನಿಲ್ಲ.
"ಮೌನಹೆಣೆದ ಬಿಡುಜಡೆಯಲಿ"= ಮೌನವೇ ಹೆಣೆದುಕೊಂಡ ಬಿಡುಜಡೆ.
May 11, 2008 8:05 PM

No comments: