ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 22 May, 2008

ಒಂದು.... ಒಂದೇ ಒಂದು!

Monday, January 14, 2008

ಬೆಳ್ಳನೆ ತೆಳ್ಳನೆ ತಣ್ಣನೆಯ ಪರದೆಯೊಳಗೆ ತೂರಿ ಬರುತ್ತಿದ್ದ ಚೂರೇ ಚೂರು ಬಂಗಾರದ ಬಣ್ಣ. ಹೊರಳಿದೆ. ಮುಗುಳ್ನಕ್ಕೆ. ಕತ್ತೆತ್ತರಿಸಿ, ರೆಪ್ಪೆ ಪಟಪಟಿಸಿ, ಕಣ್ಣು ಮಿಟುಕಿಸಿ, ಬಂಗಾರ ತೂರಿದವನ ಕೆನ್ನೆಗೆ ಮೆಲ್ಲಗೆ ಮುತ್ತಿಟ್ಟೆ. ಅವನಿನ್ನೂ ರಂಗಾದ. ಆಗಲೇ ಸುತ್ತಿಕೊಂಡು, ಹಬ್ಬಿಕೊಂಡು, ಜೋಕಾಲಿ ಜೀಕಿಸುತ್ತಾ ಬಂದ ಇವನ ಲಾಸ್ಯಕ್ಕೆ ತೂಗಿದೆ. ತೂಗದೆ ಹೇಗಿರಲಿ? ಇವನ ವರ್ಚಸ್ಸೇ ಅಂಥಾದ್ದು. ಮೋಡಿ ಮಾಡಿ ತೇಲಿಸುವಂಥಾದ್ದು. ತೇಲಿಸಿಕೊಂಡೆ. ತೋಳುಗಳಲ್ಲಿ ತೂಗಿಸಿಕೊಂಡೆ. ಎರಡೂ ಕೆನ್ನೆಗಳಿಗೆ ಚುಂಬಿಸಿಕೊಂಡ. ಇನ್ನೇನು, ಮನಸೋತು ಇಲ್ಲೇ ಸೆರೆಯಾಗಿರಿಸುವಷ್ಟರಲ್ಲಿ, ಬಂದಷ್ಟೇ ಹಗುರಾಗಿ ಸಾಗಿ ಹೋದ.

ಎದೆಯಿಂದೆದ್ದು ಬಂದ ನಿಟ್ಟುಸಿರೂ ಹಾದು ಹೋಗಿರಲಿಲ್ಲ, ಇನ್ನೊಬ್ಬನತ್ತ ಗಮನ ಹರಿದಾಗ. ಅವನೋ, ಧೀರ-ಗಂಭೀರ... ರಾಜ-ತೇಜದ ಶೂರ... ಕುದುರೆಗಳ ಸರದಾರ... ಶರಣಾಗದವರಾರು? ನಾಚಿಕೆಯ ಮುಗುಳೊಳಗೆ ಹುದುಗಿದ್ದವರನ್ನೆಲ್ಲ ಬೆಚ್ಚನೆಯ ರೇಶಿಮೆಯಲ್ಲಿ ಸುತ್ತಿ, ಪ್ರಿಯವಾಗಿ ಎತ್ತಿ, ಮುದ್ದಾಡಿ, ಬಿರಿದು ಬೆರೆಯುವಂತೆ ಪುಟಿದೇಳಿಸುವ ಪ್ರಭಾವಳಿಯವ. ಸುತ್ತೆಲ್ಲ ಅವನದೇ ಗುಣಗಾನ. ಪ್ರತಿಯೊಂದು ಮನದಲೂ ಅವನದೇ ಧ್ಯಾನ. ಕಣ್ಣಕನ್ನಡಿಯಲ್ಲೆಲ್ಲ ಪ್ರತಿಫಲನ. ಎಲ್ಲರೂ ಈ ತೆರ ಅವನಿಗೆ ಮಣಿವಾಗ, ನನ್ನದೇನು ಲೆಕ್ಕ. ಕಣ್ಣು ತೆರೆದು ನೋಟ ನೆಟ್ಟೆ. ಅವನ ಬಾಣ ನನ್ನೆದೆಯ ಸೀಳಿತು, ನನ್ನೊಳಗ ತೆರೆಯಿತು. ಜೀವರಸ ಚಿಮ್ಮಿತು. ಕನಿಕರಿಸಿದನೆ? ಮುಂದೆದ್ದು ಸಾಗಿದನಲ್ಲ! ಇರಬಹುದೇ ಹೀಗೂ ಉರಿಸುವ ಕ್ರೂರಿ? ಹಾಯ್!!

ಹಾ... ಹಾ... ಕಾಯುವ ಕಷ್ಟ ಯಾರಿಗೂ ಬೇಡ. ಎಂದಿಗಾದೀತೋ ಪ್ರೇಮಲಾಭ. ಮಿಲನಕೂ ಸರಿಯಾದ ಕ್ಷಣ ಕೂಡಿ ಬರಬೇಕು. ನನಗೆ ತಕ್ಕವನು ಇಲ್ಲಿಗೇ ಬರಬೇಕು. ನನ್ನ ಕಾಣಬೇಕು. ನನ್ನಂತೇ ಅವನೂ ಸೋಲಬೇಕು. ಮೈಮರೆಯಬೇಕು. ಕೈಹಿಡಿಯಬೇಕು. ಪಿಸುಗುಟ್ಟಬೇಕು. ಮೋಡದಲ್ಲೆಂಬಂತೆ ತೇಲಾಡಬೇಕು. ಇನ್ನಿಲ್ಲವೆಂಬಂತೆ ಮೋಹಗೊಳಬೇಕು. ಒಲಿಸುತ್ತ, ರಮಿಸುತ್ತ, ಸಂತೈಸಿ, ತೆಕ್ಕೈಸಿ ಹಾಡುವವ ಬರಬೇಕು. ಆಡ್ಯಾಡಿ ಸೋತಾಗ ನನ್ನ ಮಡಿಲೊಳಗವನು ಮುದುಡಿಕೊಳಬೇಕು. ಇವೆಲ್ಲ, ಇನ್ನೂ ಹಲವೆಲ್ಲ... ಏನೂ ಆಗಲೇ ಇಲ್ಲವೆಂಬಂತೆ ಎಲ್ಲವೂ ಆಗಿ ಬಿಡಬೇಕು. ಅದಕಾಗಿಯೇ ಕಾಯಿತ್ತಿದ್ದೆನೆಂಬಂತೆ ಆ ಕ್ಷಣದಲ್ಲೇ.... ಹಾಯ್!!

ಅದೋ! ಅದಾರು ಬಂದವರು? ಮನ್ಮಥನೆಂದರೆ ಇವನೇನೆ? ಅದೇನು ಮೈಬಣ್ಣ? ಅದೇನು ಠೀವಿ? ಅದೇನು ಭಂಗಿ? ಅದೇನು ಕಣ್ಣ ಮಿಂಚು? ಇವನ್ಯಾವ ಊರಿನವನು? ಯಾವ ಸೀಮೆ, ಯಾವ ಧರ್ಮ, ಯಾವ ದಿಕ್ಕಿನವನು? "ಯಾರಾದರಾಗಲಿ, ನನಗೇನಂತೆ" ಅನ್ನಲಾರೆ. ಮೋಡಿಗಾರನಿವನು. ಸುತ್ತಲ ಕೇರಿಯಲೆಲ್ಲ ಸಮಸುಂದರಿಯರು ಇಲ್ಲದಿರಲಿ! ಇವನನ್ಯಾವ ಜೋಗಿಯೂ ಹಿಡಿದೊಯ್ಯದಿರಲಿ. ಯಾವ ತೇಜದ ಉರಿಯೂ ನೋಯಿಸದಿರಲಿ. ಯಾವ ಧೂಳಿಯ ಮುಸುಕೂ ಕಂಗೆಡಿಸದಿರಲಿ. ಯಾವ ರೆಪ್ಪೆಯ ಪಲುಕೂ ನಲುಗಿಸದಿರಲಿ. ಇವನು ನನ್ನವನು, ನನ್ನವನೇ ಸರಿ.

ಅವನ ಮಂದ್ರಸ್ಥಾಯಿಯ ಓಂಕಾರಕ್ಕೆ ನೆಲೆತಪ್ಪಿದಂತೆ ತಲೆದೂಗಿದ್ದು ಅವನಿಗೂ ಕಂಡಿರಬೇಕು. ನನ್ನೊಳಗಿನ ಕರೆ ಅವನೆದೆಯ ತಟ್ಟಿರಬೇಕು. ನನ್ನೊಡಲ ಪ್ರೇಮಪಾಕದ ಸುವಾಸನೆ ಅವನ ಗಮನ ಸೆಳೆದಿರಬೇಕು. ಇತ್ತಲೇ ಬಂದವನು ಸುತ್ತುಸುತ್ತುಸುತ್ತಿದ. ಅತ್ತಲಿಂದ, ಇತ್ತಲಿಂದ, ಮುಂದಿನಿಂದ, ಮೇಲಿನಿಂದ... ನಿರುಕಿಸಿದ. ನಿಂತಲ್ಲಿ ನಿಲಲಾಗದೆ ಚಡಪಡಿಸಿದ. ತೋಳ್ತೆರೆಯಿತೆ? ಮೊಗವರಳಿತೆ? ನಗು ಸೂಸಿತೆ? ಒಡಲಲ್ಲಿ ಒಸರಾಯಿತೆ? ಕಚಗುಳಿಯಿಟ್ಟ. ನೋಟ ನೆಟ್ಟು ಗುಟ್ಟು ಹೇಳಿದ. ಸ್ವೇದದ ಪ್ರತಿ ಬಿಂದು ಜೇನಹನಿಯೆಂದ. ನಡುಗಿದ ಒಡಲ ರೋಚಕವೆಂದ. ಒಂದೊಂದೂ ರಸಬಿಂದು ಹೀರಿ ಹೀರಿ ಜೀವ ಹಿಗ್ಗಿ "ಆಹ್" ಅಂದ. ಮದುಪಾನಮತ್ತ ಮಧುಪನಾದ. ಮತ್ತಿಳಿದ ಮರುಕ್ಷಣ... ಮತ್ತೆಲ್ಲೋ ಹೊರಟ.

ಹೋದವನ ಗಂಧ ಸುತ್ತೆಲ್ಲ. ಅವನಿಗರಿವಿಲ್ಲದೆಯೇ ಅವನಿತ್ತ ಧನ್ಯತೆಯ ರೇಣುಕಣಗಳೆಲ್ಲ ನನ್ನೊಡಲ ಕೋಶಗಳೊಳಗೆ ನಾಳೆಯ ಕನಸುಗಳ ಹೊತ್ತು ಬೆಚ್ಚನೆ ಮುಸುಕೆಳೆದವು. ಅರಳಿದ್ದ ಮುಖ ಇನಿತೇ ನಲುಗಿತು. ಪಟಪಟಿಸಿದ್ದ ಪಕಳೆ ಆಲಸಿಯಾಯಿತು. ಸಾರ್ಥಕ್ಯದ ಮತ್ತಿನೊಳಗೆ ಜಾರಲಿದ್ದ ನನ್ನನ್ನು ಮತ್ತೊಮ್ಮೆ ನಸುಬೆಚ್ಚಗಿನ ರೇಶಿಮೆಯಲ್ಲಿ ಸುತ್ತಲು ಬಾನೊಳಗ ಭಾಸ್ಕರನೂ, ತೋಳ ಜೋಕಾಲಿಯಲ್ಲಿ ತೂಗಲು ಬಯಲೊಳಗ ಮಾರುತನೂ ಅಂಗಳದ ಬೇಲಿಯಾಚೆ ಮುತ್ತು ಬೇಡುತ್ತ ನಿಂತರು.
(೧೨-ಜನವರಿ-೨೦೦೮)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 7:00 PM
Labels: , , ,

18 ಪತ್ರೋತ್ತರ:

ಜಗಲಿ ಭಾಗವತ said...
ಸೂಪರ್ ಶೈಲಿ.
ಅಂದಹಾಗೆ ಈ ಕಥಾನಾಯಕಿಯ ವಿಳಾಸ/ಫೋನ್ ನಂಬರ್/ಇ-ಪತ್ರ ವಿಳಾಸ ಇದ್ಯಾ ನಿಮ್ಮತ್ರ? ಸ್ವಲ್ಪ ಬೇಕಿತ್ತಲ್ಲ:-))
ಇದು ಯಾರ ಕಥೆ? ಶಕುಂತಳೆ? ಅಂಬೆ? ಭೂಮಿ???
January 14, 2008 9:54 PM

sritri said...
"ಇದು ಯಾರ ಕಥೆ? ಶಕುಂತಳೆ? ಅಂಬೆ? ಭೂಮಿ???"
ಭಾಗವತ್ರೇ, ಯಾವಾಗ್ಲೂ ನನ್ನ ಫೇಲ್ ಮಾಡ್ತಾ ಇದ್ರಲ್ಲ, ಈಗ ನೀವೇ ಢುಂಕಿ :)
January 15, 2008 5:59 AM

ಮನಸ್ವಿನಿ said...
ನಾನೂ ಫೇಲ್ :(
ಮಸ್ತ್ ಶೈಲಿ.
January 15, 2008 6:50 AM

ವಿಕ್ರಮ ಹತ್ವಾರ said...
ಕುಂತಿ? ಯಾರಾದ್ರೆನು? ಚೆನ್ನಾಗಿದೆ.
ಭಾಗವತ-ಸೂರ್ಯ, ಮಾರುತ ಕ್ಯುನಲ್ಲಿದ್ದಾರೆ. ಮನ್ಮಥ ಕೂಡ ಮತ್ತೆ ಬರಬಹುದು. All the best!!.
January 15, 2008 8:14 AM

suptadeepti said...
"ರೊಮ್ಯಾಂಟಿಕ್" ಬೇಕು ಅಂದವರಿಗೆ, ಇಷ್ಟ ಪಟ್ಟವರಿಗೆ, ಪ್ರತಿಕ್ರಿಯೆ ಬರೆದವರಿಗೆ, ಎಲ್ಲ ಧನ್ಯವಾದಗಳು.

ಯಾರು ಅನ್ನುವ ಪ್ರಶ್ನೆಯ ಉತ್ತರಕ್ಕೆ ಪುರಾಣ, ಇತಿಹಾಸಗಳ ಮುಖ ನೋಡಬೇಕಾಗಿಲ್ಲ, ನಮ್ಮ ಸುತ್ತಮುತ್ತ ಒಂದು ಸುತ್ತು ನೋಡಿದರೆ ಕಂಡಾಳು ಈ ಕಥಾನಾಯಕಿ. ಇದಿಷ್ಟೇ ಸುಳಿವು ಕೊಡಬಲ್ಲೆ, ಸದ್ಯಕ್ಕೆ.
January 15, 2008 2:45 PM

ಶಾಂತಲಾ ಭಂಡಿ said...
suptadeeptiಯವರೆ,
ಚೆನ್ನಾಗಿದೆ. ಅವಳಿರ್ಬಹುದಾ? ಛೆ, ಛೆ! ಅವಳಲ್ಲಾ ಬಿಡಿ. ಅವಳೂ..ಅವಳೂ.... ನಂಗೆ ಅವಳು ಯಾರು ಅಂತ ಗೊತ್ತು. ಯಾರ್ಗೂ ಹೇಳಲ್ಲಾ....
ಹೊಸವರ್ಷ ಯಾಕೋ ಒಗಟು!
ಚಂದ ಚಂದ ಚಂದ ಕಥಾ ಹಂದರ.
ನಿನ್ನ ನೋಡ ಬಂದ ಬಾನ ಚಂದಿರ.
ನೀನೆ ಅಂದ, ನೀನೇ ಚಂದ.......
ಲಾಲಲಾಲಲಾ.
January 16, 2008 11:00 AM

suptadeepti said...
ಶಾಂತಲಾ, ಇವಳು ನೀನಂದುಕೊಂಡವಳೇ ಅಂತ ಗ್ಯಾರಂಟಿಯಾ?
January 16, 2008 11:48 AM

ಶಾಂತಲಾ ಭಂಡಿ said...
ಜ್ಯೋತಿ ಅಕ್ಕಾ,
ಎಗ್ಸಾಮ್ ಹಾಲ್ ಅಲ್ಲೇ ನಿಂತು ಪ್ರಶ್ನೆ ಪತ್ರಿಕೆಯಲ್ಲಿ ಬಂದಿರೋ ಪ್ರಶ್ನೆಗೆ ಉತ್ತರ ಕೇಳಿದ್ರೆ ನಾನಂತೂ ಹೇಳಲ್ಲಪ್ಪಾ...
ರಿಸಲ್ಟ್ ಬಂದ್ಮೇಲಾದ್ರೆ ಹೇಳ್ಬಹುದಪ್ಪಾ... ಇವತ್ತು ಬೆಳಿಗ್ಗೆ ನಮ್ಮನೆಯೆದುರು ಸೂರ್ಯ ಬಂದು ನನ್ನೆದುರಿಗೆ "ಒಂದು....ಒಂದೇ ಒಂದು" ಹಾಡು ಹೇಳ್ದ, ಆ ಮೇಲೆ ಸುಮ್ನೇ ಹೋಗ್ಬಿಟ್ಟ. ಅದ್ಯಾವ ಹಾಡು ಗೊತ್ತಾ?
"ಹೂವೊಂದು ಬಳಿ ಬಂದು ತಾಕಿತು ನನ್ನೆದೆಯಾ....
ಏನೆಂದು ಕೇಳಲು ನುಡಿಯಿತು ಜೇನಂಥ ಸವಿ ನುಡಿಯಾ"
January 16, 2008 1:33 PM

suptadeepti said...
ತಂಗ್ಯಮ್ಮಾ,
ಈ ಪೋಕರಿ ಸೂರ್ಯನ ಮಾತಿಗೆ ಬಿದ್ದೀಯಾ, ಜೋಕೆ. ಅವನು ಸಾಮಾನ್ಯನಲ್ಲ. ಎಂದೂ ಒಂದೇ ಹೆಸರು ಇಟ್ಟುಕೊಂಡವನಲ್ಲ. ಯಾವಾಗಲೂ ಒಂದೇ ಕಡೆ ನಿಂತವನಲ್ಲ. ಸದಾ ಒಂದೇ ಪಥದಲ್ಲಿ ನಡೆದವನಲ್ಲ. ಒಮ್ಮೊಮ್ಮೆ, ಯಾರದೋ ಬೆನ್ನ ಹಿಂದೆ ನಿಂತು ಆಡಿಸಿದ್ದು ನೆನಪಿಲ್ಲವ? ಘಳಿಗೆಗೊಂದು ಮೂಡು ಹೊತ್ತು ಕಾಡಿಸಿದ್ದು ಗೊತ್ತಿಲ್ಲವ? ಇವತ್ತು ಹಾಡು ಹೇಳಿದಾಗಲೂ "ಸೂರ್ಯ" ಅನ್ನುವ ಬದಲು, "ರವಿ" ಹೆಸರಿನಲ್ಲಿದ್ದ, ಹೌದಾ?
ಆದ್ದರಿಂದ, ಪ್ರೀತಿಯ ತಂಗೀ, ಅವನ ಮಾತನ್ನು ನಂಬಲೇ ಬೇಡ, ಹುಶಾರು.
January 16, 2008 9:54 PM

ಶಾಂತಲಾ ಭಂಡಿ said...
ಹೌದು ಜ್ಯೋತಿ ಅಕ್ಕಾ...
ನೀವು ಹೇಳಿದ್ದೆ ಸರಿ, ಮೊದಲು ಹೆಸ್ರು ಕೇಳಿದ್ರೆ "ನನ್ ಹೆಸ್ರು ಭಾನು" ಅಂದ, ಮಾತಿನ್ ಮಧ್ಯೆ "ನಾನು ಆದಿತ್ಯ" ಅಂದ. ಹಾಗೆಯೇ ಅವನ ಕೊಟ್ಟುಹೋದ ವಿಸಿಟಿಂಗ್ ಕಾರ್ಡ್ ನೋಡಿದ್ರೆ ಅಲ್ಲಿ "ರವಿ" ಅಂತ ಇತ್ತು. ಈಗ ಕನ್ಫರ್ಮ್ ಆಯ್ತು...
ಕಾವ್ಯನಾಮ "ಅರುಣ"ಅಂತೆ. "ಭಾಸ್ಕರ" ಅಂತ ಕೆಲವು ಕಡೆ ಹೇಳ್ಕೊಂಡು ತಿರುಗ್ತಾನಂತೆ. ಇನ್ನೆಷ್ಟು ಹೆಸ್ರು ಇದ್ಯೋ ಅವನಿಗೆ. ಅಲ್ವಾ?
January 16, 2008 10:28 PM

dinesh said...
ಖುಷಿಯಾಯ್ತು ....ತುಂಬಾ ಚೆನ್ನಾಗಿದೆ...
January 16, 2008 11:10 PM

suptadeepti said...
ನಮಸ್ಕಾರ ದಿನೇಶ್, ಸ್ವಾಗತ ಮತ್ತು ಧನ್ಯವಾದ.
January 17, 2008 12:54 PM

Anonymous said...
"..endigAguvudO prEmada lAbha.." - this is typical women-like feeling.
For me, HIM sounds like YOUTHNESS and SHE sounds like our consciousness.
YOUTHNESS comes and goes, whereas, our mind/consciousness remains as a witness and remembers, recalls as SHE did in this poem.
Nice poem!
D.M.Sagar
January 17, 2008 5:31 PM

suptadeepti said...
ಧನ್ಯವಾದ ಸಾಗರ್. ಒಂದು ಲೇಖನದ ವ್ಯಾಪ್ತಿ ಅದರ ಮೂಲ ಉದ್ದೇಶಕ್ಕಿಂತಲೂ ಹೊರಗೆ ಚಾಚುವುದನ್ನು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದೇನೆ. ನಾನು ಬರೆವಾಗ ಇದ್ದ ಒಂದು ವ್ಯಾಪ್ತಿಯನ್ನು ಮೀರಿಸಿದ್ದಿ ನಿನ್ನ ಪ್ರತಿಕ್ರಿಯೆಯಲ್ಲಿ. ಹಾಗೆಯೇ ಇದನ್ನು poem ಅಂದಿದ್ದೀ. ನಾನಿದನ್ನು "ಗಪದ್ಯ" ಅನ್ನುವವಳಿದ್ದೆ.
January 17, 2008 5:53 PM

ಸುಪ್ರೀತ್.ಕೆ.ಎಸ್. said...
ದುಂಬಿಯ ಆಗಮನದ ನಿರೀಕ್ಷೆಯಲ್ಲಿ ಕಾತರಿಸುತ್ತಾ ಕುಳಿತ ಹೂವಿನ ಪರಕಾಯ ಪ್ರವೇಶ ಮಾಡಿ ಬರೆಸಿದಂತಿದೆ ಈ ಪತ್ರ. ಪ್ರಕೃತಿಯಲ್ಲಿ ಯಾವುದೋ ಉದ್ದೇಶಕ್ಕಾಗಿ ನಡೆಯುವ ಕ್ರಿಯೆಗಳೂ ಕೂಡ ನಾವು ಮನುಷ್ಯರ ಭಾವಾಭಿವ್ಯಕ್ತಿಗೆ, ಕಲ್ಪನೆಗೆ ಎಷ್ಟು ಸುಲಭದ ಸರಕಾಗಬಹುದಲ್ಲವೇ? ಹಿತಕರವಾದ ಓದು...
January 17, 2008 10:04 PM

suptadeepti said...
ಧನ್ಯವಾದ ಸುಪ್ರೀತ್. ಸರಿಯಾಗಿ ಊಹಿಸಿದಿರಿ, ನಿಸರ್ಗದ ಕ್ರಿಯೆಗಳಲ್ಲಿ ನಮ್ಮ ಗಮನಕ್ಕೆ ಬಾರದೇ ಹೋಗುವವು ಹಲವಾರು. ಗಮನಿಸಿದರೆ ನಮಗೆ ಏನೆಲ್ಲ ಸಿಗಬಹುದು?
January 17, 2008 10:27 PM

decemberstud said...
'ಕವಿತೆ' ಬಹಳ ಸುಂದರವಾಗಿದೆ.
ಜೀವಜಾತ್ರೆಯ ಮಧುರ ಮೆಲುಕು. ನಮ್ಮೆಲ್ಲರ ಕಥೆ. ಜೊತೆಗೆ, ನಾನು + ನೀನು = ನಾನು... ಆದ್ದರಿಂದ, ಶೀರ್ಷಿಕೆ ತುಂಬಾ ಚೆನ್ನಾಗಿದೆ.
Very apt in more than one way. It's got many layers, I hope evryone sees it!
January 18, 2008 5:25 PM

suptadeepti said...
ಧನ್ಯವಾದ D.S. ಇದನ್ನು ಕವಿತೆ ಅಂತಲೇ ನೀನೂ ಹೇಳ್ತೀಯ!? ಜೀವಜಾತ್ರೆಯ ಕಥೆ, ನಿಜ. ನೀನು ನೋಡುವ many layers ಎಲ್ಲರಿಗೂ ಕಾಣಬೇಕಂತಿಲ್ಲ. ಎಲ್ಲರಿಗೂ ಅವರವರದ್ದೇ ಆದ ಮಿತಿಗಳಿರುತ್ತವಲ್ಲ (ನಾನೂ ಹೊರತೇನಲ್ಲ).
January 18, 2008 6:32 PM

No comments: