ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 22 May, 2008

ಪ್ರೇಮ

Thursday, February 14, 2008

ಪ್ರೇಮಿಗಳ ದಿನದಂದು ಪ್ರೇಮ ನೈವೇದ್ಯವೆನೆ-
ಎಲ್ಲಿಹುದು ಮನದೊಳಗೆ ನನ್ನ ಪ್ರೇಮ?
ನನ್ನದೆನುವೆಲ್ಲವನು ನೀನೆ ಆವರಿಸಿರಲು,
ನಿನಗಾಗಿ ಕೊಡಬಹುದೆ ನಿನ್ನದನ್ನೆ?

ದಿನದಿನವು ಬೆಳಗಿರಲು ನಿನ್ನ ನಗುವಿನ ಸೂರ್ಯ,
ಇರುಳಲ್ಲಿ ತಂಪಿತ್ತು ನಲಿವ ಶಶಿಯು,
ನಿನ್ನೆರಡು ಕಣ್ಣುಗಳು ದೃಷ್ಟಿ ನೀಡಿವೆ ನನಗೆ,
ನನ್ನದೆನ್ನಲಿ ಹೇಗೆ ಗರುವದಿಂದ?

ನದಿ-ನದವ ಸಾಗರವ ಬಿಡಿಸಿ ಬಡಿಸಿದೆ ನೀನು,
ನಿನ್ನೊಳಗ ಪ್ರಕೃತಿಯ ಬಿಂಬದಂತೆ;
ಭಾವ-ದಾಸೋಹಕ್ಕೆ ಹೃದಯ ಮನಸುಗಳನ್ನು-
ನಿನ್ನ ತುಣುಕುಗಳನ್ನು ನನಗೆ ಕೊಟ್ಟೆ.

ಮೂರ್ತತೆಯ ಮೀರುವೆನು ನಿನ್ನ ಸೇರುವೆನೆನಲು,
ಮೃಗತೃಷ್ಣೆಯಾಗಿ ನೀ ಗೋಚರಿಸುವೆ;
ಅಮೂರ್ತ ಪ್ರತಿಮೆಯಲಿ ನಿನ್ನ ಕಾಣಲು ಅಲ್ಲಿ-
ನನ್ನದೆಲ್ಲವ ಕಳೆದು ಬಯಲುಗೊಳುವೆ.
(೧೪-ಫೆಬ್ರವರಿ-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:00 AM
Labels: , ,

15 ಪತ್ರೋತ್ತರ:
Sritri said...
ಇದು ಅloveಕಿಕ ಪ್ರೇಮ! ಪ್ರೇಮ ಸುಂದರ! ಕವನ ಅದನ್ನು ಹಿಡಿದಿಟ್ಟಿರುವ ಪರಿಯೂ ಸುಂದರ. ಪ್ರೇಮದಿನಕ್ಕೆ ದೊರೆತ ಪ್ರೇಮಪೂರ್ಣ ಉಡುಗೊರೆಯಿದು.
February 14, 2008 8:26 AM

ಸುಪ್ತದೀಪ್ತಿ suptadeepti said...
ಧನ್ಯವಾದ ವೇಣಿ.
February 14, 2008 3:52 PM

ಜಗಲಿ ಭಾಗವತ said...
ಸಕ್ಕತ್ತಾಗಿದೆ ಕವನ. ಓದ್ಬಿಟ್ಟು ಏನಂದ್ರು? :-)
ನದ ಅಂದ್ರೆ ಎಂತ?
February 14, 2008 9:19 PM
ಸುಪ್ತದೀಪ್ತಿ suptadeepti said...
ಭಾಗವತರೇ, ಈ ಸಖತ್ತಾಗಿರೋ ಕವನಕ್ಕೆ ಒಂದು ವರ್ಷ ವಯಸ್ಸೂ ಆಗಿದೆ... ಆದ್ರೂ ಇದನ್ನ ಓದಿ ಉತ್ರ ಕೊಡ್ಬೇಕಾಗಿರೋ ವ್ಯಾಲೆಂಟೈನ್ ನನ್ನೆದುರು ಬಂದಿಲ್ಲ.
ನದಿ-ನದ ಒಂಥರಾ ಕಾವ್ಯಾತ್ಮಕ ಜೋಡಿ ಪದಗಳು; ಹೆಣ್ಣು-ಗಂಡು ಥರಾ.
February 14, 2008 10:24 PM
ಶಾಂತಲಾ ಭಂಡಿ said...
ಸುಪ್ತದೀಪ್ತಿ ಅವರೆ...
ಕವಿತೆ ತುಂಬ ಇಷ್ಟವಾಯಿತು. ಎರಡು ಮತ್ತು ಮೂರನೆಯ ಪ್ಯಾರಾ ಇನ್ನೂ ಸೊಗಸಾಗಿವೆ. ಪ್ರೇಮಿಗಳ ದಿನಕ್ಕೆ ಕೊಟ್ಟ ವರುಷತುಂಬಿದ ಕವಿತೆಯ ಮುದ್ದಾದ ನುಡಿಗಳು ಮುದ ನೀಡಿದವು.
February 15, 2008 9:41 PM

ಸುಪ್ತದೀಪ್ತಿ suptadeepti said...
ಧನ್ಯವಾದ ಶಾಂತಲಾ.
February 15, 2008 10:10 PM

ತೇಜಸ್ವಿನಿ ಹೆಗಡೆ said...
ಸುಪ್ತದೀಪ್ತಿ,
ಮೊದಲಿಗೆ ಕ್ಷಮೆ ಇರಲಿ, ತುಂಬಾ ದಿನಗಳ ನಂತರ ತಮ್ಮಲ್ಲಿಗೆ ಭೇಟಿ ನೀಡುತ್ತಿರುವುದಕ್ಕೆ.
ಕವಿತೆ ತುಂಬಾ ಅರ್ಥಪೂರ್ಣವಾಗಿದೆ. ಈಗಿನ ಪೀಳಿಗೆಯವರಲ್ಲಿ ಈ ರೀತಿಯ ಅಲೌಕಿಕ ಪ್ರೇಮ ಕಾಣುವುದು ಬಹಳ ವಿರಳವೇ ಸರಿ. ಕೊನೆಯ ಸಾಲುಗಳು ತುಂಬಾ ಇಷ್ಟವಯಿತು.
ಹೊಸ ಜೋಡಿಪದವೊಂದರ ಪರಿಚಯ ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು.
February 15, 2008 10:23 PM

ಪಯಣಿಗ said...
ಸು೦ದರ ಕವನ.
ಭಗ್ನ, ನಗ್ನ ಮತ್ತು ಪ್ರೀತಿಯಲ್ಲಿ ಮಗ್ನರಾದ ಎಲ್ಲ ಪ್ರೇಮಿಗಳನ್ನು ಸ೦ತೈಸುವ೦ತಿದೆ..
ನಿಮ್ಮ ಕವನದ ಕೆಲವು ಸಾಲುಗಳು ಕಗ್ಗದ ನಾಲ್ಕು ಸಾಲನ್ನು ನೆನಪಿಸಿದವು..

ತೃಣಕೆ ಹಸಿರೆಲ್ಲಿಯದು? ಬೇರಿನದೇ, ಮಣ್ಣಿನದೇ-
ದಿನಪನದೇ, ಚ೦ದ್ರನದೇ, ನೀರಿನದೇ, ನಿನದೇ?
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ ನೋಡು
ಗುಣಕೆ ಕಾರಣವೊ೦ದೇ? ಮ೦ಕುತಿಮ್ಮ
February 16, 2008 12:53 PM

ಸುಪ್ತದೀಪ್ತಿ suptadeepti said...
ತೇಜಸ್ವಿನಿ: ಇಲ್ಲಿ ತಪ್ಪು-ಒಪ್ಪುಗಳ ಕ್ಷಮೆಗಳ ಪ್ರಶ್ನೆಯೇ ಬರುವುದಿಲ್ಲ. ಇದು ಮುಕ್ತ ಮಂದಿರ. ಯಾರು, ಯಾವಾಗ, ಹೇಗೆ ಬೇಕಾದರೂ ಬರಬಹುದು, ಎಷ್ಟು ಬಾರಿಯೂ ಬರಬಹುದು... ನಿಮ್ಮ ವಿನಯ ಮೆಚ್ಚುತ್ತೇನೆ, ಅದರ ಅಗತ್ಯ ಇಲ್ಲಿಲ್ಲ ಅಂತಲೂ ಹೇಳಬಯಸುತ್ತೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು.

ಪಯಣಿಗ: ನೀವು ಮತ್ತೆ ಮತ್ತೆ ಕಗ್ಗದ ಸಾಲುಗಳನ್ನು ಇಲ್ಲಿಗೆ ತಂದು ನನಗೆ ಗರಿ ಮೂಡಿಸುತ್ತಿದ್ದೀರಿ. ಅದಕ್ಕಾಗಿ ಮತ್ತು ಪ್ರತಿಕ್ರಿಯೆಗಾಗಿ ಧನ್ಯವಾದಗಳು.
February 17, 2008 10:15 AM

ತೇಜಸ್ವಿನಿ ಹೆಗಡೆ said...
ನಿಜ, ಅದು ಗೊತ್ತು ಜ್ಯೋತಿಯವರೆ, ಆದರೆ ಹರಿವ ಲಹರಿಯನ್ನು ಭೇಟಿ ನ್ನೀಡುವುದನ್ನು ಕೆಲವುದಿನ ಮರೆತುದಕ್ಕೆ ನನಗೆ ನಾನೇ ಕೇಳಿಕೊಂಡ ಕ್ಷಮೆಯಿದೆನ್ನಬಹುದು. ಅತಿ ವಿನಯಂ ಧೂರ್ತ ಲಕ್ಷಣಂ ಎಂದು ಮಾತ್ರ ತಿಳಿಯದಿರಿ ಮತ್ತೆ...;-)
February 17, 2008 8:57 PM

ಸುಪ್ತದೀಪ್ತಿ suptadeepti said...
ತೇಜಸ್ವಿನಿ, ಧೂರ್ತ ಲಕ್ಷಣದ ವಿನಯ ನಿಮ್ಮದಲ್ಲ. 'ಅದರ' ಪರಿಚಯ ನನಗಿದೆ (ತಿಂದ 'ಏಟು'ಗಳನ್ನ ಮರೆಯಬಾರದು, ಪಾಠ ಕಲಿತಿರಬೇಕು, ಅಲ್ಲವೆ?). ಮತ್ತೊಮ್ಮೆ ಧನ್ಯವಾದ.
February 19, 2008 11:17 PM

sunaath said...
ಮನಸ್ಸನ್ನು ಆಹ್ಲಾದಗೊಳಿಸುವ ಕವನ.
February 20, 2008 6:15 AM

ಸುಪ್ತದೀಪ್ತಿ suptadeepti said...
ಸುನಾಥ್: ನಿಮ್ಮ ಆಹ್ಲಾದಕ್ಕೆ ಧನ್ಯತೆಯ ವಂದನೆಗಳು.
February 20, 2008 9:23 AM

Nempu.Guru said...
ದಿನನಿತ್ಯ ನಮಗೆ ಓದಲು ಸಿಗುತ್ತಿದ್ದ ನಿಮ್ಮ ಕವನಗಳು, ಲೇಖನಗಳು ಪ್ರೇಮಿಗಳ ದಿನದ ನಂತರ ಕಾಣೆಯಾಗಿದೆಯಲ್ಲ!!!?? ನಿಮ್ಮ ಬರಹಗಳ ನಿರೀಕ್ಷೆಯಲ್ಲಿ...
February 20, 2008 9:10 PM

ಸುಪ್ತದೀಪ್ತಿ suptadeepti said...
ಗುರು, ನೆಂಪು ಮಾಡಿಕೊಂಡು ಬಂದದ್ದಕ್ಕೆ, ಹೊಸ ಬರಹದ ನಿರೀಕ್ಷೆಯ ಉತ್ಸಾಹಕ್ಕೆ ಧನ್ಯವಾದಗಳು. ಪ್ರೇಮಿಗಳ ದಿನದ ನಂತರ ಕಾಣೆಯಾಗಿವೆ ಅಂದಿದ್ದೀ, ಕಾರಣ? "ಕಳೆದು ಹೋಗಿದ್ದೆ" ಅಂದರೆ ನಡೆದೀತ?
ಹೊಸ ಬರಹ, ನಾಳೆಯೇ...
February 20, 2008 11:04 PM

No comments: