ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 19 May, 2008

ಬೆಳಗಾಯಿತು

Tuesday, May 29, 2007

(ಗಂಭೀರ ಚಿಂತನೆಯತ್ತ ಮತ್ತೆ ಹೊರಳುವ ಮುನ್ನ... ಒಂದಿಷ್ಟು ತುಂಟತನ!)
ನಲ್ಲ ನಿನ್ನ ಲಲ್ಲೆಯಲ್ಲಿ ಮರೆತೆ ನಾನು ನನ್ನ ಲಾಲಿ
ಕೂಸು ಅಳಲು ತೊಟ್ಟಿಲಲ್ಲಿ, ನಿನಗೆ ಮುನಿಸು ಬಂದಿತೆ?

ಅಳಲಿ ಬಿಡು ಬಾರೆ ಇಲ್ಲಿ, ಎಂದೆ ನೀನು ಸಿಡುಕಿನಲ್ಲಿ
ಬಿಡಲಿ ಹೇಗೆ ಕುಡಿಯನಲ್ಲಿ, ಅತ್ತೆ ಮುನಿಯದಿರುವರೆ?

ಹಸಿದ ಮರಿಗೆ ಹಾಲನೂಡಿ, ತೂಗಿ, ಹಾಡಿ, ಮುತ್ತ ನೀಡಿ
ಮಲಗು ಎನಲು, ರಂಪ ಮಾಡಿ ಮತ್ತೆ ರಾಗ ತೆಗೆದನು

ಎತ್ತಿಕೊಂಡು ರಮಿಸುತಿರಲು ತೋಯಿಸಿದನು ನನ್ನ ಮಡಿಲು
ಹಾಗೇ ನಿದ್ದೆ ತೂಗಿ ಬರಲು, ಬಿಸಿಯ ಬಟ್ಟೆ ಹೊದೆಸಿದೆ

ಒದ್ದೆ ಸೀರೆ ಬಿಚ್ಚಿ ಬದಿಗೆ, ಹೊಸದೆ ವಸನ ಸುತ್ತಿ ಕೊನೆಗೆ
ದೀಪವಾರಿಸುತ್ತ ಒಳಗೆ, ಕತ್ತಲಲ್ಲಿ ನಿಂದೆನು

ಅತ್ತೆ, ಮಾವ ಆಚೆಗಿಹರು, ಚಾವಡಿಯಲಿ ಅಪ್ಪನುಸಿರು
ನನ್ನ ಎದೆಯಲೇನೋ ಡಮರು, ದಿಗಿಲು ನಿನ್ನ ನೋಡಲು

ತೊಟ್ಟಿಲಲ್ಲಿ ಪುಟ್ಟ ಕಂದ, ಹೊತ್ತು ತಂದೆ ತವರಿನಿಂದ
ಇಷ್ಟು ದಿನದ ವಿರಹದಿಂದ, ನೀನು ಬೇಯದಿರುವೆಯೊ?

ಆದರಿಲ್ಲಿ ಕೇಳು ನಲ್ಲ, ಸಾವಧಾನ; ಸಿಡುಕು ಸಲ್ಲ
ಎನುತ ಸವರೆ ಕೆನ್ನೆ-ಗಲ್ಲ, ಬೆಳ್ಳಂಬೆಳಗಾಯಿತು.
(೦೪-ಮೇ-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 7:30 PM
Labels: , , ,

13 ಪತ್ರೋತ್ತರ:

ಮನಸ್ವಿನಿ said...
ಮುಂದಿನ ಆತ್ಮ ಚಿಂತನೆಗೆ ಮುಂಚೆ ಇಷ್ಟೆಲ್ಲಾ ತುಂಟತನನಾ? ಚೆನ್ನಾಗಿದೆ ಹಾಡು. :)
May 29, 2007 10:29 PM

Shiv said...
ಸುಪ್ತದೀಪ್ತಿ,
ಆಹಾ ! ಎಂತಹ ಸುಂದರ ಕವನ..
ಪತ್ನಿಯಿಂದ ದೂರವಾಗಿದ್ದ ಪತಿಯ ಆತುರ..
ಪುಟ್ಟ ಕಂದನ ಲಾಲನೆಯಲ್ಲಿ ಪತ್ನಿಯ ಸಡಗರ..
ಅದರ ನಂತರ ಪತಿ-ಪತ್ನಿಯ ಎಕಾಂತ.
May 29, 2007 10:30 PM

suptadeepti said...
ಶಿವ್: "ಅದರ ನಂತರ ಪತಿ-ಪತ್ನಿಯ ಎಕಾಂತ"-- ಆದರೇನು ಮಾಡೋಣ? ಅಷ್ಟರಲ್ಲೇ ಬಂದನಲ್ಲ ಭೂ-ನಲ್ಲ ದಿನಕರ! ಇನ್ನೆಲ್ಲಿಯ ಏಕಾಂತ?? ನಿಮಗೆ ಹಾಗಾಗದಿರಲಿ!!
ಮನಸ್ವಿನಿ: ನಕ್ಕು ಮನಸ್ಸು ಹಗುರಾಗಿರುವಾಗ ಹೇಳಿದ ಮಾತು ಹಿತವಾಗಿ ಕೇಳತ್ತೆ, ಅದಕ್ಕೆ....!
May 29, 2007 11:44 PM

ಸುಶ್ರುತ ದೊಡ್ಡೇರಿ said...
ವ್ಹಾವ್ ವ್ಹಾವ್ ವ್ಹಾವ್! ಅದ್ಭುತ. ಹಾಡು ಅಂದ್ರೆ ಹಾಡು.
May 30, 2007 2:57 AM

December Stud said...
Certainly ಹೊಚ್ಚ ಹೊಸತು. The whole "story" is wonderful to read. A little unlike your most poems, but close enough.
And, of course, an excellent poem...in case I forgot to mention that :)
May 30, 2007 5:58 PM

ಶ್ರೀನಿಧಿ.ಡಿ.ಎಸ್ said...
ಆಹಾ!ಚೆನ್ನಾಗಿದೆ ಹಾಡು. ನರಸಿಂಹ ಸ್ವಾಮಿ ನೆನಪಾದರು!!
May 31, 2007 1:30 AM

ಚಿರವಿರಹಿ said...
ತುಂಬ ತುಂಬಾ ಇಷ್ಟ ಆಯ್ತು ನೊಡ್ರಿ. ಹುಡುಕಾಡಿ ಹುಡುಕಾಡಿ ಪದಗಳನ್ನು ನೇಯುವ ಕಲೆ ನಂಗೆ ಒಲಿಲೆ ಇಲ್ಲಾ ನೊಡ್ರಿ. ಅದಕ್ಕೆ ಇಂತಹ ಕವನಗಳನ್ನೆಲ್ಲಾ ನೊಡಿದ್ರ ಖುಶಿನು ಅಕ್ಕೈತ್ರಿ ಮತ್ತಾ ಒಂಚೂರು ಹೊಟ್ಟೆಕಿಚ್ಚು ಅಕ್ಕೈತ್ರಿ.. ಹಿಂಗ ನಡಿಲಿ ನಿಮ್ ಕವನಾರಾಧನೆ. ನಿಮ್ಮ ಕಲ್ಪನೆ ಮಸ್ತ್ ಐತಿ ಬಿಡ್ರಿ..
June 1, 2007 12:12 AM

suptadeepti said...
ಸುಶ್, DS, ಶ್ರೀನಿಧಿ, ಚಿರವಿರಹಿ: ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ವಂದನೆಗಳು.
ಎಚ್.ಎಸ್.ವಿ.ಯವರನ್ನು ಅನುಕರಿಸಲು ಹೋಗಿದ್ದು ಹೌದು. ತುಳಸೀವನದಲ್ಲಿ ಅವರ "ತೂಗುಮಂಚದಲ್ಲಿ ಕೂತು..." ಕವನ ಓದಿ/ ಕೇಳಿ ನನಗೊಂದು ಸವಾಲು ಬಂತು. ಉತ್ತರವಾಗಿ ಇದನ್ನು ಬರೆದೆ. ಅದೇ ಲಯದಲ್ಲಿ, ಅದೇ ರೀತಿಯ ಪ್ರಾಸ ಪ್ರಸ್ತಾರ ಉಪಯೋಗಿಸಿ ಸರಳ ವಿಷಯ, ಸಣ್ಣ ಘಟನೆಯ ನಿರೂಪಣೆಯನ್ನು ಕವನವಾಗಿಸಿದೆ. ಅಷ್ಟೇ ಇದರ ಹಿಂದಿನ ಕಥೆ. ನಿಮಗೆಲ್ಲ ಇಷ್ಟವಾಗಿದ್ದು ಸಂತೋಷ.
ಚಿರವಿರಹಿ, ಸ್ವಾಗತ. ಮತ್ತೆ ಮತ್ತೆ ಬರುತ್ತಿರಿ.
June 1, 2007 12:32 AM

yaatrika said...
ಕವನದ ಆಶಯ, ಪ್ರಸ್ತುತಿ, ಸರಳತೆ ಎಲ್ಲವೂ ಚೇತೋಹಾರಿಯಾಗಿದೆ. ಆದರೆ ಮುದ್ದಿನ ಕಂದನಿರುವಾಗಲೂ ಪತಿ-ಪತ್ನಿಯರಿಗೆ ಏಕಾಂತದ ಬಯಕೆಯಾಗುತ್ತದೆಯೇ ಅನ್ನುವ ಚಿಕ್ಕ ಸಂಶಯವೂ ಬಂತು. ಇನ್ನೊಂದು ವಿಷಯ - ಶ್ರೀನಿಧಿ ಹೇಳಿದಂತೆ ಕೆ.ಎಸ್.ನ ಅವರು ನೆನಪಾದದ್ದು ಮಾತ್ರವಲ್ಲ, ಅಪ್ರಯತ್ನವಾಗಿ ಇಡೀ ಕವನವನ್ನು ’ಬರುವಳೆನ್ನ ಶಾರದೆ’ ರಾಗದಲ್ಲೇ ಓದಿದೆ. ಸರಿ ಇನ್ನು ಗಂಭೀರಚಿಂತನೆಯನ್ನು ಎದುರುನೋಡುತ್ತಾ...
June 1, 2007 2:31 AM

Jagali Bhagavata said...
ಭೂ-ನಲ್ಲ ದಿನಕರ!?? ಅದು ಹೇಗೆ ಸಾಧ್ಯ?
ದಿನಕರ - office husband-u
ಶಶಾಂಕ - house husband-u:-))
June 1, 2007 8:51 PM

Raghavendra said...
ತೊಟ್ಟಿಲಲ್ಲಿ ಒಂದು ಮಗು, ಅಂತಃಪುರದಲ್ಲಿನ್ನೊಂದು,
ಯಾವ ಕರೆಗೆ ಓಗೊಡುವುದು- ಅಮ್ಮನಾಗುವುದೋ ಮೊದಲು, ಮಡದಿಯಾಗುವುದೋ....
ಚಿತ್ರವಾಗಿಯೇ ಮೂಡಿದಂತಿದೆ ಕವನ.
June 8, 2007 11:16 AM

suptadeepti said...
ಯಾತ್ರಿಕ, ಭಾಗವತ, ರಾಘವೇಂದ್ರ, ಅನಿಸಿಕೆಗಳಿಗೆ ಧನ್ಯವಾದಗಳು.

@ಯಾತ್ರಿಕ: ಪುಟ್ಟ ಕಂದನಿರುವಾಗಲೂ ಏಕಾಂತದ ಬಯಕೆ ಆಗುತ್ತದೆಯೇ-- ಕಾಲವೇ ನಿಮಗೆ ಉತ್ತರ ಹೇಳಬಹುದು.

@ಭಾಗವತ: ಭೂದೇವಿಗೆ ಪಂಚ-ಪತಿಯರು ಅನ್ನುವ ಕಲ್ಪನೆಯಲ್ಲಿ ಒಂದು ಕವನ ಹೆಣೆದಿದ್ದೆ, ಅದನ್ನು ನೆನಪಿಸಿದ್ದೀರಿ, ಮುಂದೆ ಇಲ್ಲಿ ಅದೂ ಬರುತ್ತೆ, ಓದಿ.

@ರಾಘವೇಂದ್ರ: ಹೆಣ್ಣಿನ ಆ ಒಂದು ಕ್ಷಣದ ಹೊಯ್ದಾಟವನ್ನು ಅರ್ಥ ಮಾಡಿಕೊಂಡಿದ್ದೀರಿ. ನಿಮಗೆ ಅಭಿನಂದನೆ ಹೇಳಲೇ ಅಥವಾ ಕವನಕ್ಕೋ (ಅರ್ಥ ಮಾಡಿಸಿದ್ದಕ್ಕೆ!)?
June 9, 2007 4:16 PM

Keshav Kulkarni said...
ಸುಪ್ತದೀಪ್ತಿಯವರೇ,
ಈ ಹಾಡು ತುಂಬ ಇಷ್ಟವಾಯಿತು, ನನ್ನ ಬ್ಲಾಗಿನಲ್ಲೊಂದು ಕೊಂಡಿ ಕೊಟ್ಟಿದ್ದೇನೆ (ನಾನು ಮತ್ತೆ ಮತ್ತೆ ಓದಲೆಂದು), ತಮ್ಮ ಅಭ್ಯಂತರವಿಲ್ಲವೆಂದುಕೊಂಡಿದ್ದೇನೆ.
ಕೇಶವ
June 17, 2007 6:45 PM

2 comments:

Ittigecement said...

ವಾವ್...!

ತುಂಟತನ ಇಷ್ಟವಾಗುತ್ತದೆ...
ಬಹಳ.. ಬಹಳ ಇಷ್ಟವಾಯಿತು...

ಅಭಿನಂದನೆಗಳು...

ಸುಪ್ತದೀಪ್ತಿ suptadeepti said...

ಮೆಚ್ಚಿಕೊಂಡದ್ದಕ್ಕೆ ಧನ್ಯವಾದಗಳು ಪ್ರಕಾಶ್.