ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday, 4 September 2013

ಕಾವ್ಯ ಶ್ರಾವಣಕೆ ಕವನ ಬಾಗಿನ

ಕಾವ್ಯ ಶ್ರಾವಣಕೆಂದು ಕವನ ಬಾಗಿನ ಬರೆವೆ
ಸೋನೆ ಸುರಿಸುರಿದಾಗ ಕೆರೆ ತುಂಬದೆ?
ಅಂಚೆಮೇಲೊಂದಂಚೆ ಮಿಂಚಂಚೆ ಸುರಿದಿರಲು
ಹಲಕೆಲವು ಓಘಗಳ ತೆರೆಹರಿಯದೆ?

ನೇಹಿಗರ ಒಡನಾಟ ಮತ್ತೆ ಸಲುಗೆಯ ಕೂಟ
ಆದ್ಯಂತ ರಸಪಾನ ಈ ಶ್ರಾವಣ
ಕವನ-ಬಾಗಿನ ಕೊಡುವೆ ಕನ್ನಡದ ಮರಿಗಳಿಗೆ
ಓದು-ಸಂಕೋಲೆಯಲಿ ಸೆರೆ ಈ ಮನ!

ಬರೆಸಿ-ಬರೆದವರನ್ನು ಓದಿದವರೆಲ್ಲರನು
ನೆನೆನೆನೆದು ಧಾರೆಯನು ಸವಿದು ನಡೆದೆ
ಒಂದೊಂದು ಎಳೆಯೆಳೆಯು ಅಮಿತಹರ್ಷದ ಹನಿಯು
ಸುಖಸಾರವೆಂದೆನುತ ನಮಿಸಿ ಪಡೆದೆ.

(೨೦-ಆಗಸ್ಟ್-೨೦೧೩)

(ವಿಜಯವಾಣಿ ಪತ್ರಿಕೆಯಲ್ಲಿ ಆಗಸ್ಟ್ ಹದಿನೆಂಟರಂದು ಪ್ರಕಟವಾದ ಗೆಳತಿ ತ್ರಿವೇಣಿಯ ಲೇಖನ- ಕಾವ್ಯ ಶ್ರಾವಣ- ನಮ್ಮ ಕೆಲವು ಸ್ನೇಹಿತರೊಳಗೆ ಹುಟ್ಟು ಹಾಕಿದ ಚರ್ಚೆ-ಸಂವಹನಗಳ ಪತ್ರ-ಸರಪಳಿಗಾಗಿ ಸೇರಿಸಿದ ‘ಕವನ ಬಾಗಿನ’; ಇದೀಗ ಗೌರಿ ಹಬ್ಬದ ನೆಪದಲ್ಲಿ ಅಕ್ಷರಮೋಹಿತರಿಗೆಲ್ಲ ಅರ್ಪಣೆ...)

Thursday, 29 August 2013

ದರ್ಪಣ

ಏನೋ ಹುಡುಕುತ ಹೊರಟೆ
ಅವಳು ಎದುರಲಿ ಬಂದು
ತುಂಬು ಕಂಗಳ ತುಂಬ ನಿನದೆ ಬಿಂಬ
ಜಡೆಯೆಳೆದು ಕೈಹಿಡಿದು
ಆಟವಾಡಿದ ನೀನೆ
ಈಗ ಮರೆಯಾಗಿರುವೆ ಏನು ಜಂಭ?

ಸುತ್ತ ಮುತ್ತುವ ಹುಡುಗ
ಬೆನ್ಹಿಂದೆ ಬರುತಿಹನು
ನನ್ನೊಳಗೆ ಅವನಿಗೆ ಸ್ಥಾನವಿಲ್ಲ
ನಿನ್ನ ಧ್ಯಾನವ ಮನದಿ
ತುಂಬಿ ಕಳೆದಂತಿರುವೆ
ನಿನಗೇಕೊ ನನ್ನೆಡೆಗೆ ಗಮನವಿಲ್ಲ

ಅರಸಿ ಬಂದವಳನ್ನು
‘ಅರಸಿ’ ಎನ್ನದೆ ನೀನು
ಅರಗಿಣಿಯ ಅರಸುತ್ತ ಅಲೆಯುತಿರುವೆ
ನಿನ್ನ ಮೋಹನ ಮುರಳಿ
ನನ್ನುಸಿರ ನುಡಿಸಿರಲು
ಸಖ, ನಿನ್ನ ಛಾಯೆಯಲಿ ಬಾಳುತಿರುವೆ.

(೨೬-ಆಗಸ್ಟ್-೨೦೧೩)

Wednesday, 28 August 2013

ಬೆಣ್ಣೆ ಕಳ್ಳ


ನೆಲುವಿನಲ್ಲಿ ಹಾಲು ಮೊಸರು
ನೆಲದ ಮೇಲೆ ಗೊಲ್ಲ
ಮೆಲ್ಲಬೇಕು ಅಚ್ಚ ಬೆಣ್ಣೆ
ಕೈಗೆ ನಿಲುಕದಲ್ಲ

ಹಾರಿ ಕುಣಿದು ಕಪ್ಪೆ ಜಿಗಿದು
ತೂರಿ ನೋಟದೇಣಿ
ಭಾರಿ ಕಷ್ಟ ಪಟ್ಟರೇನು
ಕೈಗೆ ಸಿಗದು ಭರಣಿ

ಸುತ್ತ ಮುತ್ತ ಕಳ್ಳ ಚಿತ್ತ
ಇತ್ತ ಬಂದರಾರು?
ಮೆತ್ತಗೊಮ್ಮೆ ಇಣುಕಿ ನೋಡೆ
ಕೈಗೆ ಹೆಗಲ ಊರು

ಅಣ್ಣ ಬಂದ ಜೊತೆಗೆ ತಂದ
ತನ್ನ ಭಂಡ ಜೋಡಿ
ಬಣ್ಣವೇರಿ ಬಾನಿನತ್ತ
ಕೈಗೆ ಬಂತು ಜಾಡಿ

ಕಿಲಕಿಲಕಿಲ ಬಳೆಯ ಸದ್ದು
ಚಲನೆ ಪಡೆದ ಕೂಟ
ನೆಲದ ಮೇಲೆ ಹಾಲು ಮೊಸರು
ಕೈಗೆ ಬೆಣ್ಣೆಯೂಟ

(೦೨-ಆಗಸ್ಟ್-೨೦೧೩)

Wednesday, 21 August 2013

ಶ್ರಾವಣ - ವರ್ಷನೂತನ

ಶ್ರಾವಣದ ಧಾರೆಯಲಿ ಮಾಧವಗೆ ಬರಿ ತಾಪ
ರಾಧೆಗಾದರೊ ಸೋನೆ ಸುರಿವಬೇಗೆ
ಹಾಡಿ ಹರಿಯುವ ನದಿಗೆ ಕೆನ್ನೀರು ಉಕ್ಕುಕ್ಕಿ
ಕಡಲ ಸೇರುವ ತವಕ ದೌಡು ನಡಿಗೆ  

ಭೋರ್ಗರೆವ ಮೊರೆತದಲಿ ಹುದುಗಿ ಮುರಳಿಯ ಗಾನ
ಒಲವ ಹಸುಕರುಗಳಿಗೆ ಮರೆತ ಮೇವು
ಮುಮ್ಮೇಳದಲ್ಲಿರಲು ಹನಿಹನಿಗಳದೆ ಮಂದ್ರ
ಬಿದುರುಗೊಳವೆಯು ದೇಹ ಉಸಿರೆ ಕಾವು  

ಆಕಾಶರಾಯನಿಗೆ ಹಗುರವಾಗುವ ಭಾವ
ನಾವುನೀವೆಲ್ಲರಿಗೆ ಬೆಳೆವ ಸಮಯ
ನೆಲಸೇರಿ ಸಾಗರಕೆ ಹರಿವ ಒಮ್ಮನದೋಟ
ಗೋಪಾಲ ಪಾದಗಳ ತೊಳೆವಾಲಯ  

ಹೃದಯದುರಿಯನು ತಣಿಸಿ ಮಣಿಸುವನು ಶ್ರಾವಣ
ಮತ್ತ ವಿಭ್ರಾಂತರನು ದಣಿಸುವನು ಶ್ರಾವಣ  

(೧೩-ಆಗಸ್ಟ್-೨೦೧೩)

Wednesday, 14 August 2013

ಜಗದ ಪರಿ


ಮುದುಡದಿರು ಮನವೆ!
ಮುದುಡಿದರೆ ಕಸವೆಂದು ಎಸೆಯುವುದು ನಿನ್ನ

ಬಾಡದಿರು ಮೊಗವೆ!
ಬಾಡಿದರೆ ಬೇಡೆಂದು ಬಿಸುಟುವುದು ನಿನ್ನ

ಕೊರಗದಿರು ಎದೆಯೆ!
ಕೊರಗಿದರೆ ಕೇಡೆಂದು ಕೆರೆಯುವುದು ನಿನ್ನ

ಮರುಗದಿರು ಮಡಿಲೆ!
ಮರುಗಿದರೆ ಹೋಗೆಂದು ಕಳಿಸುವುದು ನಿನ್ನ

ಅಳಲದಿರು ಅರಿವೆ!
ಅಳಲಿದರೆ ಅಳಿಯೆಂದು ಹೊಸಕುವುದು ನಿನ್ನ

ನೋಯದಿರು ಒಲವೆ!
ನೋಯುತಿರೆ ಬೇಯೆಂದು ಉರಿಸುವುದು ನಿನ್ನ

ಅಂಜದಿರು ಛಲವೆ!
ಅಂಜಿದರೆ ನಲುಗೆಂದು ಅಲುಗಿಪುದು ನಿನ್ನ

ಬೆಚ್ಚದಿರು ಬಲವೆ!
ಬೆಚ್ಚಿದರೆ ಬೀಳೆಂದು ಬೆದರಿಪುದು ನಿನ್ನ

ಬೀಳದಿರು ಮತಿಯೆ!
ಬೀಳುತಿರೆ ಕೊಳೆಯೆಂದು ಕೊಚ್ಚುವುದು ನಿನ್ನ

ಸೋಲದಿರು ಧೃತಿಯೆ!
ಸೋಲುತಿರೆ ಸಾಯೆಂದು ಸೋಸುವುದು ನಿನ್ನ

ಪ್ರೀತಿಸುವ ಜೀವ,
ಮುನ್ನೋಟದೀವಟಿಗೆ ಹಿಡಿದು ನಡೆಸೆನ್ನ

ಉಚ್ಚರದ ಭಾವ,
ಮೆಚ್ಚಾಗುವಂದದಲಿ ಎಚ್ಚರಿಸು ಎನ್ನ

(೧-ಆಗಸ್ಟ್-೨೦೧೩)

Wednesday, 31 July 2013

ಗಿ-ಗೀ-ಗಿ-ಮಿಕ್ಸ್

ಪಟ್ಟೆಗಿಟ್ಟೆ ಉಟ್ಟುಕೊಂಡು
ಚೀಲಗೀಲ ಇರುಕಿಕೊಂಡು
ಸಂತೆಗಿಂತೆ ಅಲಿಯೋದಿಕ್ಕೆ ಹೋಗೋದ್ಯಾಕೆ?
ಕೆಸರುಗಿಸರು ಎರಚಿತಂತ
ಹೊಲಸುಗಿಲಸು ಮೆತ್ತಿತಂತ
ಕೋಪಗೀಪ ಮಾಡಿಕೊಂಡು ಅರಚೋದ್ಯಾಕೆ?

ಕಟ್ಟೆಗಿಟ್ಟೆ ಹತ್ತಿಕೊಂಡು
ಹಾಡುಗೀಡು ಹೇಳಿಕೊಂಡು
ಮರಗಿರ ಸುತ್ತೋದಿಕ್ಕೆ ಹೋಗೋದ್ಯಾಕೆ?
ಕಲ್ಲುಗಿಲ್ಲು ಎಡವಿತಂತ
ಮುಳ್ಳುಗಿಳ್ಳು ಚುಚ್ಚಿತಂತ
ಬಾಯಿಗೀಯಿ ಹಾಳಾಗ್ವಂಗೆ ಬಯ್ಯೋದ್ಯಾಕೆ?

ತಟ್ಟೆಗಿಟ್ಟೆ ಹಿಡಿದುಕೊಂಡು
ಹೂವುಗೀವು ಕೊಯ್ದುಕೊಂಡು
ಬಳ್ಳಿಗಿಳ್ಳಿ ಎಳೆಯೋದಿಕ್ಕೆ ಹೋಗೋದ್ಯಾಕೆ?
ಹುಳಗಿಳ ಇಳಿಯಿತಂತ
ಮೈಗಿಯ್ಯಿ ಕೆರೆಯುತ್ತಂತ
ರಾಗಗೀಗ ಹಾಕಿಕೊಂಡು ಕೊರಗೋದ್ಯಾಕೆ?

ಲೊಟ್ಟೆಗಿಟ್ಟೆ ಬಿಟ್ಟುಕೊಂಡು
ಆಟಗೀಟ ಆಡಿಕೊಂಡು
ಕಥೆಗಿಥೆ ಕೇಳಿಕೊಂಡು ಇರಬಾರ್ದ್ಯಾಕೆ?
ಪುಸ್ತ್ಕಗಿಸ್ತ್ಕ ಓದಿಕೊಂಡು
ನಿದ್ದೆಗಿದ್ದೆ ಹೊಡೆದುಕೊಂಡು
ಊಟಗೀಟ ಮಾಡ್ತಾ ಮನೇಲಿ ಕೂರ್ಬಾರ್ದ್ಯಾಕೆ?

(೧೭-ಜುಲೈ-೨೦೧೩)

Wednesday, 24 July 2013

ಅಗ್ನಿ ಬಂಧ


ಅಗ್ನಿಸಾಕ್ಷಿಯಾಗಿ ಕೈ ಹಿಡಿದವಳು 
ತೆಳ್ಳಗೆ ಬೆಳ್ಳಗೆ ಬಳುಕುವ ಲತಾಂಗಿ 
ಗಲ್ಲ ಹಿಡಿದೆತ್ತಿ ರಮಿಸಿ ಮುದ್ದಿಸಿ 
ತುಟಿಗಿರಿಸಿದ್ದೇ ಕಾರಣವಾಗಿ ವಿನಾಸುಖ; 

ಬೆಸೆಯುತ್ತಾ ಬೆಳೆದ ಅಗ್ನಿಸಖ್ಯ 
ಸುಖಿಸುತ್ತಾ ಕೆರಳುತ್ತಾ ನರಳಿತು 
ಒಳಗಿಳಿದವಳು ಒಳಸೆಳೆದವಳು 
ಒಳಗೊಳಗೇ ಉರಿಸಿದ್ದು ಹೊಸಮುಖ 

ಏರಿದ ಉನ್ಮತ್ತ ಮತ್ತ ನಶೆ ಹರಿದಾಗ 
ದಾರ್ಶನಿಕನತ್ತ ವ್ಯಾಕುಲ ಚಿತ್ತ 
ಹೊಸೆಯದ ಅಗ್ನಿಬಂಧ ಮುಕ್ತಿಧಾಮದತ್ತ 
ವಿಚ್ಛೇದಿತ ಪರಿವೃತ್ತ ದತ್ತ ಮೊತ್ತ 
ಛೇದಿಸಿದರೂ ವಿಚ್ಛಿನ್ನ ಬಂಧ 
ಎದ್ದೇಳದ ಛಿದ್ರಛಿದ್ರ ಪಾಶಶೇಷ 

(೦೫-ಜುಲೈ-೨೦೧೩)

Monday, 18 March 2013

ಹೊಳೆಯೊಳಗೆ...


ತಲ್ಲೀನಳಾಗಿ ಬಟ್ಟೆ ಒಗೆಯುತ್ತಿದ್ದಳವಳು. ಹೊಳೆಯಲೆಗಳ ನಡುವೆ ಎಳೆಯೆಳೆ ಜಾಲಾಡುವಾಗ ಸೋಪಿನ ನೊರೆನೊರೆ ಜಾರುಗುಳ್ಳೆಗಳ ಜೊತೆಗೆ ಸುರುಳಿ ಬಿಚ್ಚಿಕೊಳ್ಳುತ್ತಾ ಹರಡಿಕೊಳ್ಳುತ್ತಾ ನೆನಪಿನಲೆಗಳೂ ಸೇರಿಕೊಂಡದ್ದು ಅವಳಿಗರಿವಾಗಲೇ ಇಲ್ಲ. ಮುಗ್ಧತೆಯ ಪದರದೊಳಗೆ ಎಲ್ಲವೂ ಸುಭದ್ರವೆಂಬ ಭರವಸೆ ಅವಳದು. 
  
ಈಗವನಿಗೆ ಅವಳರಿಯದ ಬೇನೆ; ಡಿಮೆನ್ಶಿಯಾ. 
 
(೧೬-ಡಿಸೆಂಬರ್-೨೦೧೨)

Thursday, 14 February 2013

ಒದ್ದೆಗೆನ್ನೆ



    ಗಾಳಿಗುದುರೆಯಂಥಾ ಬೈಕ್ ಬೆನ್ನ ಮೇಲೇರಿ ಇವನ ಬೆನ್ನಿಗಂಟಿ ಕೂತು ಸಾಗುತ್ತಿದ್ದೆ. ಹೊರಗೂ ಒಳಗೂ ಮಬ್ಬು ಮಬ್ಬು. ಇದ್ದಕ್ಕಿದ್ದ ಹಾಗೆ ಬಾನು ಬಿರಿದು ಸುರಿಯಿತು. ನನ್ನ ಕೆನ್ನೆಗಳೂ ಒದ್ದೆ. ಹಳೇ ಬಸ್‌ಸ್ಟಾಪ್ ಹತ್ರ ಬೈಕ್ ನಿಲ್ಲಿಸಿದ, ಇಬ್ಬರೂ ಮಾಡಿನಡಿಗೆ ಓಡಿದೆವು. ಅಲ್ಲೊಂದು ಮೂಲೆಯ ಮಬ್ಬಿನಲ್ಲಿ ಮುದ್ದೆಯಾಗಿ ನಡುಗುತ್ತಾ ಒದ್ದೆಗೆನ್ನೆಗಳ ಅವನೂ ನಿಂತಿದ್ದ.

(೨೬-ಆಗಸ್ಟ್-೨೦೧೨)