ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday, 31 July, 2013

ಗಿ-ಗೀ-ಗಿ-ಮಿಕ್ಸ್

ಪಟ್ಟೆಗಿಟ್ಟೆ ಉಟ್ಟುಕೊಂಡು
ಚೀಲಗೀಲ ಇರುಕಿಕೊಂಡು
ಸಂತೆಗಿಂತೆ ಅಲಿಯೋದಿಕ್ಕೆ ಹೋಗೋದ್ಯಾಕೆ?
ಕೆಸರುಗಿಸರು ಎರಚಿತಂತ
ಹೊಲಸುಗಿಲಸು ಮೆತ್ತಿತಂತ
ಕೋಪಗೀಪ ಮಾಡಿಕೊಂಡು ಅರಚೋದ್ಯಾಕೆ?

ಕಟ್ಟೆಗಿಟ್ಟೆ ಹತ್ತಿಕೊಂಡು
ಹಾಡುಗೀಡು ಹೇಳಿಕೊಂಡು
ಮರಗಿರ ಸುತ್ತೋದಿಕ್ಕೆ ಹೋಗೋದ್ಯಾಕೆ?
ಕಲ್ಲುಗಿಲ್ಲು ಎಡವಿತಂತ
ಮುಳ್ಳುಗಿಳ್ಳು ಚುಚ್ಚಿತಂತ
ಬಾಯಿಗೀಯಿ ಹಾಳಾಗ್ವಂಗೆ ಬಯ್ಯೋದ್ಯಾಕೆ?

ತಟ್ಟೆಗಿಟ್ಟೆ ಹಿಡಿದುಕೊಂಡು
ಹೂವುಗೀವು ಕೊಯ್ದುಕೊಂಡು
ಬಳ್ಳಿಗಿಳ್ಳಿ ಎಳೆಯೋದಿಕ್ಕೆ ಹೋಗೋದ್ಯಾಕೆ?
ಹುಳಗಿಳ ಇಳಿಯಿತಂತ
ಮೈಗಿಯ್ಯಿ ಕೆರೆಯುತ್ತಂತ
ರಾಗಗೀಗ ಹಾಕಿಕೊಂಡು ಕೊರಗೋದ್ಯಾಕೆ?

ಲೊಟ್ಟೆಗಿಟ್ಟೆ ಬಿಟ್ಟುಕೊಂಡು
ಆಟಗೀಟ ಆಡಿಕೊಂಡು
ಕಥೆಗಿಥೆ ಕೇಳಿಕೊಂಡು ಇರಬಾರ್ದ್ಯಾಕೆ?
ಪುಸ್ತ್ಕಗಿಸ್ತ್ಕ ಓದಿಕೊಂಡು
ನಿದ್ದೆಗಿದ್ದೆ ಹೊಡೆದುಕೊಂಡು
ಊಟಗೀಟ ಮಾಡ್ತಾ ಮನೇಲಿ ಕೂರ್ಬಾರ್ದ್ಯಾಕೆ?

(೧೭-ಜುಲೈ-೨೦೧೩)

7 comments:

Badarinath Palavalli said...

ಸರಿಯಾಗಿ ಹೇಳಿದಿರಿ, ಅಖಾಡಕ್ಕೆ ಇಳಿದಾದ ಮೇಲೆ 'ಅಯ್ಯೋ ಮೈ ಮಣ್ಣಾಯಿತಲ್ಲ!' ಎಂದು ಹಾಲುಬುವ ಮಾತೇ ಇಲ್ಲ. ಇಲ್ಲದಿದ್ದರೆ ಮನೇಲೆ ಬೆಚ್ಚಗೆ ಹೊದ್ದು ಮ್ಯಲಗ ಬಹುದಲ್ಲ!

ತುಂಬಾ ಮಾರ್ಮಿಕ ಹೊಡೆತ.

ಕವನದ ಶೀರ್ಷಿಕೆ ಮತ್ತು ಶೈಲಿ ಅನನ್ಯ.

sunaath said...

ಕವನಗಿವನ ಬರ್ಯೋವಾಗ
ಖುಶಿಗಿಶಿ ಆಗೋವಾಗ
ಬ್ಯಾರೆಗೀರೆ ತಿಂಡಿಗಿಂಡಿ ಯಾತಕ್ ಬೇಕಣ್ಣಾ?
ಗೀಗೀ ಮಿಕ್ಸು ಭಲೇ ತಿಂಡಿ
ಹೊಟ್ಟೆಗಿಟ್ಟೆ ಬಂಡಿ ಬಂಡಿ
ಉಂಡುಗಿಂಡು ನಕ್ಕುಗಿಕ್ಕು ಹೊಟ್ಟೇ ನೋವಣ್ಣಾ!

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯೆಗೆ ಧನ್ಯವಾದಗಳು, ಬದರಿ ಹಾಗೂ ಕಾಕಾ.

ಬದರಿ, ನಾವೆಲ್ಲರೂ ಇಲ್ಲಿಗೆ ಬರುವಾಗಲೇ ಜಟ್ಟಿಮೀಸೆ ಕಟ್ಟಿಕೊಂಡೇ ಬಂದವರು. ಅದರ ನಿಭಾವಣೆ ಹೇಗೆ ಮಾಡುತ್ತೇವೆಂಬುದೇ ನಮ್ಮ ಪರೀಕ್ಷೆ ಅಂತ ನನ್ನ ಅರಿವು.

ಕಾಕಾ,
ಕವನ ಗಿವನ ಓದಿಗೀದಿ
ತಿಂಡಿ ಗಿಂಡಿ ಬಿಟ್ಟುಗಿಟ್ಟು
ನೀವು ಹೀಗೆ ಸಣ್ಣಗಿಣ್ಣ ಆಗೋದ್ ಬೇಡಿ
ದೇಹಗೀಹ ನೋಡಿಕೊಂಡು
ನಕ್ಕುಗಿಕ್ಕು ಹಗುರಾಕ್ಕೊಂಡು
ಬ್ಲಾಗು ಗೀಗು ಬರ್ದುಗಿರ್ದು ಆರಾಮ್ ಕೂಡಿ!

ISHWARA BHAT said...

ಹಹ್ಹ.. ಭರ್ಜರಿ.. ಜಕ್ಕಣಕ್ಕ ಜಕ್ಕಣಕ್ಕ ಅಂತ ಓದಿಸಿಕೊಂಡು ಹೋಯ್ತು :)

ಸುಪ್ತದೀಪ್ತಿ suptadeepti said...

ಅಷ್ಟೇ ಭರ್ಜರಿ ಜಕ್ಕಣಕ್ಕ ಹೆಜ್ಜೆ ಹಾಕಿದ್ಯೋ ಇಲ್ವೋ?

Siddu said...

ನಿಮ್ಮ ಲಹರಿಯಿಂದ ಪ್ರೇರಿತ :

ಮನೆಗಿನೆ ಕಟ್ಟೋಕೆ
ದೇಶಗಿಶ ಸುತ್ತೋಕೆ
ಸಂಬಳ ಗಿಂಬಳ ಸಾಲ್ದಿದ್ರೆ
ಲಂಚಗಿಂಚ ತಗೊಳೋ ದುರ್ಬುದ್ದಿ ಯಾಕೆ?

ಮೈಗಿಯ್ ಬಗ್ಗಿಸಿ ದುಡಿಬೇಕು
ದುಡ್ಡು ಪಡ್ಡು ಮಾಡ್ಬೇಕು
ಆಸೆಗೀಸೆ ತೀರ್ಸ್ಕೋಂಡು
ಬದ್ಕು ಬಾಳು ನಡಿಸ್ಬೇಕು

ಸುಪ್ತದೀಪ್ತಿ suptadeepti said...

ನಮಸ್ತೆ ಸಿದ್ದು. ನನ್ನ ಈ ಕವನ ನಿಮಗೆ ಪ್ರೇರಣೆ ನೀಡಿದ್ದು ಸಂತೋಷ. ಹೀಗೇ ಬರೆಯುತ್ತಿರಿ, ಕವನವನ್ನೂ ಕಮೆಂಟನ್ನೂ...