ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday, 24 July, 2013

ಅಗ್ನಿ ಬಂಧ


ಅಗ್ನಿಸಾಕ್ಷಿಯಾಗಿ ಕೈ ಹಿಡಿದವಳು 
ತೆಳ್ಳಗೆ ಬೆಳ್ಳಗೆ ಬಳುಕುವ ಲತಾಂಗಿ 
ಗಲ್ಲ ಹಿಡಿದೆತ್ತಿ ರಮಿಸಿ ಮುದ್ದಿಸಿ 
ತುಟಿಗಿರಿಸಿದ್ದೇ ಕಾರಣವಾಗಿ ವಿನಾಸುಖ; 

ಬೆಸೆಯುತ್ತಾ ಬೆಳೆದ ಅಗ್ನಿಸಖ್ಯ 
ಸುಖಿಸುತ್ತಾ ಕೆರಳುತ್ತಾ ನರಳಿತು 
ಒಳಗಿಳಿದವಳು ಒಳಸೆಳೆದವಳು 
ಒಳಗೊಳಗೇ ಉರಿಸಿದ್ದು ಹೊಸಮುಖ 

ಏರಿದ ಉನ್ಮತ್ತ ಮತ್ತ ನಶೆ ಹರಿದಾಗ 
ದಾರ್ಶನಿಕನತ್ತ ವ್ಯಾಕುಲ ಚಿತ್ತ 
ಹೊಸೆಯದ ಅಗ್ನಿಬಂಧ ಮುಕ್ತಿಧಾಮದತ್ತ 
ವಿಚ್ಛೇದಿತ ಪರಿವೃತ್ತ ದತ್ತ ಮೊತ್ತ 
ಛೇದಿಸಿದರೂ ವಿಚ್ಛಿನ್ನ ಬಂಧ 
ಎದ್ದೇಳದ ಛಿದ್ರಛಿದ್ರ ಪಾಶಶೇಷ 

(೦೫-ಜುಲೈ-೨೦೧೩)

3 comments:

Badarinath Palavalli said...

ಎಲ್ಲ ಮದುವೆಗಳ ಅಂತ್ಯ
ಶಷ್ಟ್ಯಬ್ಧಿ ಎನ್ನದಿರಿ
ಕೆಲ ಸಂಸಾರಗಳು ಜಾಡು ತಪ್ಪಿ ಕಂದಕ ಆಳವಾಗುತ್ತಾ ಹೋಗಿ, ಕಳಚಿಕೊಳ್ಳುವ ಅನಿವಾರ್ಯತೆಗಳು. :(

ಸುಪ್ತದೀಪ್ತಿ suptadeepti said...

ನಮಸ್ತೆ ಬದರಿ. ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಈ ಕವನ ಮನುಜ-ಮನಸುಗಳ ಮದುವೆಯ ಬಗೆಗಿಲ್ಲ. ಬೆಂಕಿಯಿಂದಲೇ ಶುರುವಾಗುವ, ಬೆಂಕಿಯಂತೆ ಒಳಗನೆಲ್ಲ ಸುಡುವ, ಬೆಂಕಿಯತ್ತ ಒಯ್ಯುವ ಒಂದು ಹವ್ಯಾಸದ ಕುರಿತಾಗಿದೆ. ಈಗೊಮ್ಮೆ ಓದಿ ನೋಡಿ.

sunaath said...

ಕವನ ಸ್ವಾರಸ್ಯಪೂರ್ಣವಾಗಿದೆ.