ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday 8 August, 2012

ದಾರಿ

"ರಾಜಾ..." ಜಯರಾಮನ ಕರೆಗೆ ಓಡಿ ಬಂದಳು ರಾಜಶ್ರೀ. ನಲ್ವತ್ತೆರಡು ವರ್ಷಗಳ ಒಡನಾಟ ಬಿಟ್ಟೀತೆ?
"ಏನು ಬೇಕು, ದೊರೆ?"
"ಸ್ವಲ್ಪ ನೀರು..." ಸ್ವರ ಉಡುಗುತ್ತಿತ್ತು.
ಮಗ ಬೇಗ ಬರಬಾರದೆ? ಬರಬೇಕಾಗಿತ್ತು ಈ ಹೊತ್ತಿಗೆ. ಫ್ಲೈಟ್ ಲೇಟೋ ಏನೋ! ಹಂಬಲಿಸುತ್ತಲೇ ಜಯರಾಮನ ಒಣಗುತ್ತಿದ್ದ ತುಟಿಗಳ ನಡುವೆ ಒಂದೆರಡು ಗುಟುಕು ಎಳನೀರು ಹನಿಸಿದಳು. ನಿಧಾನವಾಗಿ ಸವಿದ. ಅಷ್ಟಕ್ಕೇ ಸುಸ್ತಾಗಿ ಹಾಗೇ ದಿಂಬಿಗೆ ಒರಗಿದ. ಒಡಲೆಲ್ಲ ಬಗೆದು ನೋಡಿದರೆ ಏನಿದ್ದೀತು ಒಳಗೆ? ಗೆದ್ದಲು ತಿಂದ ಮರದ ಹಾಗಿರಬಹುದಾ? ರಾಜಶ್ರೀ ಮುಂದೆ ಯೋಚಿಸದೆ ಅಡುಗೆ ಕೆಲಸ ಮುಗಿಸಲು ಹೋದಳು.

ಯೋಚನೆಗಳು ಬೆನ್ನು ಬಿಡವು. ಇರುವ ಒಬ್ಬನೇ ಮಗ ಸಂಸಾರ ಸಮೇತ ಆಸ್ಟ್ರೇಲಿಯಾದಲ್ಲಿ. ಈ ವರ್ಷ, ಮುಂದಿನ ವರ್ಷ ಅನ್ನುತ್ತಾ ಹತ್ತು ವರ್ಷಗಳೇ ಕಳೆದಾಗಿದೆ. ಇನ್ನೂ ಗಂಟು ಮೂಟೆ ಕಟ್ಟಿ ಊರಿಗೆ ಬಂದಿಲ್ಲ. ಇಲ್ಲಿ ಜಯರಾಮನ ಆರೋಗ್ಯ ಗಂಟು ಮೂಟೆ ಕಟ್ಟಲಿಕ್ಕೆ ಶುರು ಮಾಡಿದ್ದು ವರ್ಷದ ಹಿಂದೆ ಗೊತ್ತಾದಾಗ ಗಾಬರಿಯಾದದ್ದು ಅವನಿಗೇ, ಇವಳಿಗಲ್ಲ. ಇತ್ತೀಚೆಗೆ, ಜಯರಾಮ ದಿನಗಣನೆಯ ಮಟ್ಟ ಮುಟ್ಟಿದ ಅಂದಾಗ, ಫೋನಲ್ಲಿ ಹೇಳಿದ್ದ, "ಅಮ್ಮ, ನೀನು ಪಾಸ್‌ಪೋರ್ಟಿಗೆ ಅಪ್ಲೈ ಮಾಡು. ಮತ್ತೆ ಇಲ್ಲಿಗೇ ಬಂದುಬಿಡು..." ಸುಮ್ಮನೆ ಕರೆ ಕಟ್ ಮಾಡಿದ್ದಳು. ಅವನೇನೋ ಅಪ್ಪನ ಸಾವನ್ನು ಎದುರು ನೋಡುತ್ತಿರಬಹುದು, ಅವನಿಗೆ ಬದುಕು ಎದುರಾಗಿದೆ. ಜಯರಾಮನ ನಂತರ ತನ್ನ ದಾರಿ ಹೇಗೆ? ಪ್ರಶ್ನೆ ಭೂತಾಕಾರ ಮಾತ್ರವೇ ಆಗುತ್ತಿತ್ತು ರಾಜಶ್ರೀಯ ಮನದಲ್ಲಿ.

ಯಾವುದೇ ಘಳಿಗೆಯಲ್ಲಿ ಗಾಡಿ ಮನೆ ಮುಂದೆ ಬರಬಹುದು. ಮಗ, ಸೊಸೆ, ಮತ್ತು ಮೊಮ್ಮಗ ಬಂದುಬಿಡುತ್ತಾರೆ. ವಾರದಿಂದ ಕಾಯುತ್ತಿದ್ದಳವಳು. ಅಡುಗೆ ಮುಗಿಸಿ ಕಟ್ಟೆ ಒರಸಿ ಹಾಗೇ ಗೋಡೆಗೊರಗಿ ದೇವರ ಗೂಡು ನೋಡುತ್ತಾ ಕೂತವಳ ಕಣ್ಣುಗಳಲ್ಲಿ ಧಾರೆ.
"ಭಗವಂತಾ, ಈ ಎರಡು ಜೀವಗಳಿಗೆ ಇನ್ನೆಷ್ಟು ದಿನಗಳ ಯಾತನೆ? ಅವರ ಮೌನ ವೇದನೆ ಸಹಿಸೋದು ಹೇಗೆ ನಾನು? ಆ ನೋವು ನಂಗಾದರೂ ಕೊಡು." ಮನದೊಳಗಿನ ಪರಮಾತ್ಮನೊಡನೆ ಮಾತಾಡುತ್ತಾ ಗೂಡಿನ ಬಿಂಬ ಕಂಗಳಲ್ಲಿ ತುಂಬಿಕೊಂಡು ಕಳೆದುಹೋಗದಂತೆ ಕಣ್ಣು ಮುಚ್ಚಿದಳು. ಆ ಪರಮಾತ್ಮನ ಜೊತೆ ಮತ್ತಷ್ಟು ಮಾತಾಡಿದಳು. ಒಳಗೊಳಗೇ ಇನ್ನೂ ಇನ್ನೂ ಕೊಳೆತಂತೆ ಕರಗಿಕೊಳ್ಳುತ್ತಿರುವ ಜೀವಕೋಶಗಳ ಶಿಥಿಲ ದೇಹದಿಂದ ಆ ವ್ಯಾಧಿಕಣಗಳು ದೇವಕರುಣೆಯ ಶಕ್ತಿಧಾರೆಯಲ್ಲಿ ತೊಳೆದು ಹೋಗುವ ದೃಶ್ಯ ಕಲ್ಪಿಸಿಕೊಂಡಳು. ಅದೂ ಕೂಡಾ ಜಯರಾಮನಿಗೆ ನೋವೇ ಕೊಡಬಹುದಾ? ಉತ್ತರವಿರಲಿಲ್ಲ.
"ಬಿಡುಗಡೆ ಕೊಡು, ದೇವಾ... ಬಿಡುಗಡೆ ಕೊಡು" ಕಂಗೆಟ್ಟು ಮೊರೆಯಿಟ್ಟಳು.

ಗೇಟ್ ತೆರೆದು ಗಾಡಿ ಒಳ ಬಂದು, ಬಾಗಿಲುಗಳ ಸದ್ದಾಗಿ, ಚಪ್ಪಲಿಗಾಲುಗಳು ಮೆಟ್ಟಲೇರಿ ಮುಂಬಾಗಿಲು ದೂಡಿಕೊಂಡು ಒಳಬಂದ ದನಿಗಳಿಗೆ ಪ್ರತಿಯಾಗಿ ಜಯರಾಮ ಇಷ್ಟೇ‌ಇಷ್ಟು ಉತ್ಸಾಹ ಕೂಡಿಸಿಕೊಂಡು ಕೂಗಿ ಕರೆದ,
"ರಾಜಾ... ಬಾ... ಮಕ್ಕಳು ಬಂದ್ರು ನೋಡು. ರಾಜಾ..."
ಒಳಮನೆಯಲ್ಲಿ ಸದ್ದಿಲ್ಲ. 
(೦೯-ಜುಲೈ-೨೦೧೨)

3 comments:

Badarinath Palavalli said...

ಮನಸ್ಸು ತೀರಾ ವಿಹ್ವಲವಾಯಿತು. ಹಾಸಿಗೆ ಹಿಡಿದು ಸಾವಿನೆಡೆ ಮುಖ ಮಾಡಿರುವ ಪತಿಯ ಸ್ಥಿತಿಗೆ ಮರುಗಿಯೇ ಆಕೆಯೆ ಮೊದಲೇ ವಿಧಿ ವಶಳಾದಳೋ ಏನೋ?

ಎಲ್ಲೋ ದುಡಿಯಲು ನೆಲೆನಿಂತ ಮಕ್ಕಳು, ಇಲ್ಲಿಯೇ ಕೊಳೆಯ ಬೇಕಾದ ತಂದೆ ತಾಯಿಗಳ ಅನಿವಾರ್ಯತೆ, ಪರಮಾತ್ಮ ಯಾರಿಗೂ ಬೇಡ.

ನಮಗೂ ತೀರಾ ವಯಸ್ಸಾದರೇ ಇಂತಹ ಸ್ಥಿತಿಕೊಡದೆ ಕರೆಸಿಕೋ ಕರಿಬಸವೇಶ್ವರ.

ಮೌನರಾಗ said...

ಕಣ್ಣಾಲಿಗಳು ತುಂಬಿ ಬಂದವು....
ಚೆನ್ನಾಗಿದೆ....

ಸುಪ್ತದೀಪ್ತಿ suptadeepti said...

ಬದರಿ, ಮೌನರಾಗ, ಪ್ರತಿಕ್ರಿಯೆಗೆ ಧನ್ಯವಾದಗಳು.

ಇಂಥ ಯಾತನಾಮಯ ಬದುಕು ನಮ್ಮ ಸುತ್ತಮುತ್ತಲಲ್ಲೇ ಇವೆ. ನೋಡ ಹೋದರೆ ಯಾತನೆಯ ಮಟ್ಟ ಅರಿವಾದೀತು. ಆದರೂ ಏನೂ ಮಾಡಲಾಗದ ಅಸಹಾಯ ಪರಿಸ್ಥಿತಿ ನಮ್ಮದು, ಮತ್ತು ಅದೂ ಅಷ್ಟೇ ಯಾತನಾಮಯ. ಒಂದೇ ಕೋರಿಕೆ, "ಬಿಡುಗಡೆ ಕೊಡು ಭಗವಂತಾ, ನೋವಿನಿಂದ ಬಿಡುಗಡೆ ಕೊಡು"