ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday 6 December, 2009

ಕಥೆ-ಕವಿತೆ

ಕಥೆ ಹುಟ್ಟಿದ ಹೊತ್ತು, ಅಂದು
ಸಡಗರದ ಜೊತೆಗೆ ಪ್ರಶ್ನೆಯೊಂದು
ಕವಿತೆಯಾಗಿಯೇ ಏಕೆ
ನೀನು ಬರಲಿಲ್ಲವೆಂದು
ಕಥೆ ಉತ್ತರಿಸಲಿಲ್ಲ, ನಕ್ಕಿತ್ತು
ಹೊರಗೆ ನಡೆದೇಬಿಟ್ಟಿತ್ತು
ಅದಕ್ಕಿಲ್ಲ ಹೆತ್ತವರ ಜತೆ
ಕೋರಿಕೆ, ಮಾತುಕತೆ
ತೆರೆದಿತ್ತು ಜಗತ್ತು
ಜನರತ್ತ ಹೊರಟಿತ್ತು

ತಪಸ್ಸು ಫಲಿಸಿತ್ತು
ಮತ್ತೆ ಬಂದಿತ್ತು
ಲಾಸ್ಯ, ಲಾವಣ್ಯಗಳ ಹೊತ್ತು
ಒನಪು, ವೈಯಾರಗಳ ಕವಿತೆ
ಬಳುಕಿ ಆಡುವ ಲತೆ
ನಿಗೂಢಗಳ ಒರತೆ

ನನ್ನೊಳಗನೆಲ್ಲ ಕದಡಿ
ಕಿಲಕಿಲನೆ ನಕ್ಕು, ಆಡಿ
ರೇಗಿಸಿ, ಟೀಕಿಸಿ, ಕಾದಾಡಿ
ತನ್ನತನ ಮೆರೆದಿತ್ತು
ನನ್ನನ್ನೇ ಮರೆಮಾಡಿ

ಕಾಲವುರುಳಿ, ಅರಳಿ
ಮರಳಿ ಬಂದಿತ್ತು ಕಥೆ
ಮನೆಯ ಕಡೆಗೆ
ಮುಖದಲ್ಲಿ ನಗು
ಎಳಸು ಮೀಸೆಯ ಮರೆಗೆ

ನಿಗೂಢಗಳ ಕವಿತೆ
ಒರಗಿದೆ ನನ್ನೆದೆಯಲ್ಲಿ
ನೆನಪುಗಳ ಮೆರವಣಿಗೆ
ಹೊಸೆಯುತ್ತಾ ಬೆಸುಗೆ
(೧೩-ಮಾರ್ಚ್-೨೦೦೮)

2 comments:

sunaath said...

‘ಹರಿವ ಲಹರಿ’ಯ ಉಪವನದಿಂದ ಹರಡುವ ಪರಿಮಳವನ್ನು ಅಸ್ವಾದಿಸಿ, ಏನೆಂದು ನೋಡಿದರೆ ಅಲ್ಲಿ ಕಾಣುವವು ಬಗೆಬಗೆಯ ರೂಪ,ಬಣ್ಣ,ಸುಗಂಧಗಳನ್ನು ಹೊತ್ತಿರುವ ಕವನ-ಹೂವುಗಳು.
ಸುತ್ತಲೂ ಮತ್ತಷ್ಟು ಕಣ್ಣು ಹಾಯಿಸಿದರೆ,ಮನ ಸೆಳೆಯುವವು ಕಥಾಫಲಗಳು!

ಸುಪ್ತದೀಪ್ತಿ suptadeepti said...

ಕಾಕಾ, ಉತ್ತರಿಸೋಕೆ ಆಗಿರಲಿಲ್ಲ. ಕೆಲವಾರು ಕೆಲಸಗಳ ನಡುವೆ ಸಿಕ್ಕಿಕೊಂಡಿದ್ದೆ. ಬಹುಶಃ ಜನವರಿಯಿಂದ ಸ್ವಲ್ಪ ಬಿಡುವಾಗಬಹುದೇನೋ!

ನಿಮ್ಮ ಪ್ರತಿಕ್ರಿಯೆಗಳೇ ಹೊಸದೇನಾದರೂ ಬರೆಯುವ ಸ್ಫೂರ್ತಿ ಕೊಡುತ್ತವೆ. ಅದಕ್ಕಾಗಿ ಮತೆ ಮತ್ತೆ ವಂದನೆಗಳು.