ಪ್ರತೀ ವರ್ಷದ ಹಾಗೆ ಈ ವರ್ಷವೂ ಹ್ಯಾಲೋವೀನ್ ಬಂದಿದೆ. ಅದ್ರಲ್ಲೇನು ವಿಶೇಷ ಅಂದಿರಾ? ನಂಗೊತ್ತಿಲ್ಲಪ್ಪ. ಈ ವರ್ಷ ಯಾರ್ಯಾರು ಯಾವ್ಯಾವ ವೇಷ ಭೂಷಣ ತೊಟ್ಟು ಎಲ್ಲೆಲ್ಲಿ ಸುತ್ತಾಡಿ ಏನೇನು ಕ್ಯಾಂಡಿ ಒಟ್ಟುಮಾಡ್ತಾರೋ, ನನಗ್ಗೊತ್ತಿಲ್ಲ. ನಾನಂತೂ ಹೋಗಲ್ಲ, ಯಾವತ್ತೂ ಹೋಗಿಲ್ಲ. ಆದರೆ, ನನ್ನ ಮೊತ್ತ ಮೊದಲ ಹ್ಯಾಲೋವೀನ್ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಬೇಕೂಂತಲೇ ಈ ಬರಹ....
ನಾನು ಅಮೆರಿಕಾ ಅನ್ನುವ ಈ ಆಧುನಿಕ ದೇಶಕ್ಕೆ ಕಾಲಿರಿಸಿದ್ದು ೧೯೯೨ ಸೆಪ್ಟೆಂಬರ್ ಉತ್ತರಾರ್ಧದಲ್ಲಿ. ಬೆಂಗಳೂರಲ್ಲಿದ್ದಾಗ ಏನೇನೋ ಓದು, ನೆಂಟರು, ಇನ್ನೂ ಎರಡು ವರ್ಷ ಆಗಿಲ್ಲದ ಮಗು, ಕೆಳಗೆ ಓನರ್ ಆಂಟಿ, ಅವರ ಮಕ್ಕಳು, ಪಕ್ಕದ ಮನೆಯ ಶ್ರೀದೇವಿಯಂಥಾ ರೂಪಿನ ಚಟಪಟ ಮಾತಿನ ಗೆಳತಿ- ಎಲ್ಲವನ್ನೂ ಬಿಟ್ಟು ನಡುರಾತ್ರೆಗೆ ಆಗಿನ ಮದ್ರಾಸಿನಿಂದ ಸಿಂಗಪೂರ್ ಮಾರ್ಗವಾಗಿ ಸ್ಯಾನ್ ಫ್ರಾನ್ಸಿಸ್ಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತ್ತಲಲ್ಲೇ ಇಳಿದ ನೆನಪು. ಸಾಂತಾಕ್ಲಾರಾದಲ್ಲಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಹಿಡಿದಿದ್ದರು ಇಪ್ಪತ್ತು ದಿನ ಮೊದಲೇ ಬಂದಿದ್ದ ರಾಯರು.
ನಿಧಾನವಾಗಿ ಸುತ್ತಮುತ್ತಲ ಪರಿಚಯವಾಗುತ್ತಾ, ಇಲ್ಲಿನವರ ವೇಷಭೂಷಣ, ಭಾಷೆಭಾವಗಳ ಹದ ಅರಿಯುವ ಪ್ರಯತ್ನದಲ್ಲಿ ತಿಂಗಳೇ ಉರುಳಿತು. ಹ್ಯಾಲೋವೀನ್ ಹೆಸರು ಕೇಳಿಬಂದಿತು. ನಮ್ಮ ಅಪಾರ್ಟ್ಮೆಂಟಿನ ಮ್ಯಾನೇಜರ್ ಒಳ್ಳೆಯ ಮಹಿಳೆ, ಪ್ಯಾಟ್, ನನ್ನ ಪ್ರಶ್ನೆಗೆ ಅವಳದೇ ಶೈಲಿಯಲ್ಲಿ ಉತ್ತರಿಸಿದರೂ ನನರ್ಥವಾಗಿದ್ದು ಸ್ವಲ್ಪ. ‘ಮಗನಿಗೆ ಏನಾದರೂ ಕಾಸ್ಟ್ಯೂಮ್ ತಗೋ. ನಮ್ಮನೇಗೆ ಟ್ರಿಕ್ ಆರ್ ಟ್ರೀಟಿಗೆ ಕರ್ಕೊಂಡು ಬಾ, ಅವನಿಗೆ ಕ್ಯಾಂಡಿ ಕೊಡ್ತೇನೆ’ ಅಂದಳು ಅವನ ಕೆನ್ನೆ ಸವರುತ್ತಾ. ಅವನಿಗವಳು ಇಷ್ಟದ ‘ಪ್ಯಾಟ್ ಅಜ್ಜಿ’.
ಇವಳಲ್ಲದೆ ನಾವು ಅಲ್ಲಿ ಮಾತಾಡ್ತಿದ್ದದ್ದು ಅಥವಾ ನಮ್ಮನ್ನು ಮಾತಾಡಿಸ್ತಿದ್ದದ್ದು ಪಕ್ಕದ ಕಟ್ಟಡದಲ್ಲಿ ಕೆಳ ಅಂತಸ್ತಿನಲ್ಲಿದ್ದ ಒಬ್ಬಳು ಎಂಭತ್ತು ವರ್ಷದ ಒಂಟಿ ಮಹಿಳೆ ಷೆರೀನ್ ಮತ್ತವಳ ಗಿಳಿ ಸ್ಯಾಮ್ (ಅವಳ ಪ್ಯಾಟಿಯೋ ಮತ್ತು ರೂಮಿನ ಕಿಟಕಿ ನಮ್ಮ ಅಡುಗೆ ಮನೆಯ ಕಿಟಕಿ ಮತ್ತು ರೂಮಿನ ಕಿಟಕಿಗೆ ಕಾಣಿಸುತ್ತಿತ್ತು, ಮಗ ಒಮ್ಮೊಮ್ಮೆ ಅವಳ ಜೊತೆ ಅಲ್ಲಿಂದಲೇ ‘ಕಿಚಪಿಚ’ ಹರಟುತ್ತಿದ್ದ), ಹಾಗೂ ಅಪಾರ್ಟ್ಮೆಂಟಿನ ಮೈನ್ಟೇನೆನ್ಸ್ ಮಾಡುತ್ತಿದ್ದ ಸ್ಕಾಟ್ ಮತ್ತವನ ಮಡದಿ ಡೆಬಿ. ಬೇರೆ ಯಾರ ಪರಿಚಯವೂ ಆಗಿದ್ದಿಲ್ಲ ನಮಗೆ. ಒಂದು ಕಟ್ಟಡದ ಮಹಡಿಯ ಒಂದು ಪಾರ್ಶ್ವದಲ್ಲಿ ಎದುರುಬದುರಾಗಿದ್ದ ನಾಲ್ಕು ಮನೆಗಳಲ್ಲಿ ನಮ್ಮದು ಒಳಬದಿಯ ಮನೆ (ಬೀದಿ ಬದಿಯದ್ದಲ್ಲ).
ಅಂದು ಶುಕ್ರವಾರ, ಅಕ್ಟೋಬರ್ ಮೂವತ್ತು. ಹ್ಯಾಲೋವೀನಿನ ಮುನ್ನಾದಿನ. ಯಾಕೋ ನನ್ನ ಮೂಡ್ ಕೆಟ್ಟಿತ್ತು (ಯಾಕೇಂತ ನೆನಪಿಲ್ಲ). ಚೆನ್ನಾಗಿ ಜಗಳವಾಡಿ ಕೋಪ ಮಾಡಿಕೊಂಡು ಹಾಲಿನಲ್ಲಿ ಸೋಫಾದಲ್ಲೇ ಕೂತಿದ್ದೆ. ಅಪ್ಪ-ಮಗ ಒಳಗೆ ಮಲಗಿದ್ದರು. ಗಂಟೆ ಇನ್ನೂ ಹತ್ತರ ಆಸುಪಾಸು. ನನ್ನೊಳಗೆ ದುಸುಮುಸು. ಸುಮ್ಮನೇ ಕೂತಿದ್ದೆ. ಮಂಪರು ಹತ್ತಿರಬೇಕು, ಗೊತ್ತಿಲ್ಲ.
ಬಾಗಿಲು ಟಕಟಕಿಸಿದ ಸದ್ದಾಯ್ತು. ಹೋಗಿ ಇಣುಕಿಂಡಿಯಲ್ಲಿ ನೋಡಿದೆ, ಯಾರೂ ಕಾಣಲಿಲ್ಲ. ಮತ್ತೆ ಸೋಫಾದ ಹತ್ರ ಬರುವುದರಲ್ಲಿ ಇನ್ನೊಮ್ಮೆ ಟಕಟಕ. ಮತ್ತೆ ಇಣುಕಿಂಡಿಯಲ್ಲಿ ಯಾರೂ ಕಾಣಲಿಲ್ಲ. ಬಾಗಿಲಿಗಿದ್ದ ಸುರಕ್ಷೆಯ ಸರಪಳಿ ಸಿಕ್ಕಿಸಿತ್ತು. ಹಾಗೆಯೇ ಎರಡಿಂಚು ತೆರೆದೆ. ನನ್ನ ಮುಂದೆ, ಹೊರಗಿನ ಪ್ಯಾಸೇಜಿನಲ್ಲಿ ಮೂರಡಿ ಎತ್ತರದ, ಬಿಳಿ ಬಟ್ಟೆ ಪೂರ್ತಿ ಮುಚ್ಚಿಕೊಂಡ, ಓಲಾಡುವ ಒಂದು ಆಕೃತಿ. ಮೇಲೆ-ಕೆಳಗೆ-ಎಡ-ಬಲಕ್ಕೆ ಅನಾಯಾಸವಾಗಿ ಓಲಾಡುತ್ತಿದ್ದ ಅದನ್ನು ಕಂಡದ್ದೇ ಬಾಗಿಲನ್ನು ಠಪ್ಪೆಂದು ರಾಚಿ, ಕಿಟಾರನೆ ಚೀರಿ ಅಲ್ಲೇ ಬಾಗಿಲ ಬುಡದಲ್ಲೇ ಬಿದ್ದದ್ದು ಮಾತ್ರ ಚೆನ್ನಾಗಿ ನೆನಪಿದೆ, ಇನ್ನೂ.
‘ಜ್ಯೋತಿ, ಏಳು, ಏನಾಯ್ತು? ಇಲ್ಯಾಕೆ ಮಲಗಿದ್ದೀ? ಕಿರುಚಿದ್ದು ಯಾಕೆ? ಕನಸು ಬಿತ್ತಾ?...? ಪ್ರಶ್ನೆಗಳ ಹಿಂದೆ ಕಂಡ ಇವರ ಮುಖ ಇನ್ನಿಲ್ಲದ ನೆಮ್ಮದಿ ಕೊಟ್ಟದ್ದೂ ಸುಳ್ಳಲ್ಲ. ಏನೊಂದು ಮಾತೂ ಬಾಯಿಗೆ ಬರುತ್ತಿರಲ್ಲಿಲ್ಲ. ಸ್ವರವೇ ಹೊರಡುತ್ತಿರಲ್ಲಿಲ್ಲ. ಎಬ್ಬಿಸಿ ಸೋಫಾಕ್ಕೆ ಕರ್ಕೊಂಡು ಹೋಗಿ ಕೂರಿಸಿದರು. ನೀರು ತಂದುಕೊಟ್ಟರು. ‘ಕನಸು ಬಿತ್ತಾ?’ ಪ್ರಶ್ನೆಗೆ ಇಲ್ಲವೆಂದೆ. ಕಂಡದ್ದನ್ನು ನಿಧಾನವಾಗಿ ಬಿಡಿಬಿಡಿಯಾಗಿ ವಿವರಿಸಿದೆ. ಹೊರಗೆ ಹೋಗಿ ನೋಡಿ ಬಂದರು. ಯಾರೂ ಇಲ್ಲವೆಂದರು. ‘ಅದು ಕನಸೇ ಆಗಿರಬೇಕು, ಇಲ್ಲೆಲ್ಲ ಹಾಗೆ ಸುಮ್ಮಸುಮ್ಮನೆ ಹೆದರಿಸುವವರು ಯಾರೂ ಇಲ್ಲ’ವೆಂದು ಇವರ ವಾದ. ನಾನು ಕಂಡದ್ದು ಕನಸಲ್ಲ, ಯಾರದೋ ಪ್ರ್ಯಾಂಕ್ ಅಂತಲೇ ನನ್ನ ನಂಬಿಕೆ. ಅಲ್ಲೆಲ್ಲ ಸುಮಾರು ಹದಿಹರೆಯದ ಮಕ್ಕಳು ಇದ್ದರು. ಎಲ್ಲರೂ ಕೆಲವೊಂದು ಸಂಜೆ ಹೊತ್ತು ಗದ್ದಲವೆಬ್ಬಿಸುತ್ತಿದ್ದದ್ದು ಸಾಮಾನ್ಯ. ಆದ್ದರಿಂದ, ಈ ಅಪಾರ್ಟ್ಮೆಂಟಿಗೆ ಹೊಸಬರಾದ ನಮ್ಮನ್ನು ಹೆದರಿಸಲು ಈ ಆಟ ಹೂಡಿರಬಹುದೆಂದು ನನ್ನೆಣಿಕೆ. ಮಕ್ಕಳಾಟಕ್ಕೆ ಗೊತ್ತುಗುರಿಯಿದೆಯೆ?
ಇದೆಲ್ಲ ನಡೆದು ಹದಿನೇಳು ವರ್ಷ ಸಂದಿದೆ. ಕಾಲ ಬೇರೆಬೇರೆ ಪರೀಕ್ಷೆಗಳನ್ನು ನೀಡಿದೆ. ಎಲ್ಲವನ್ನೂ ದಾಟಿ ಬಂದಿದ್ದೇವೆ. ಆದರೂ ಇದನ್ನು ಮರೆಯಲಾರೆ. ಅಂದು ನಿಜವಾಗಿಯೂ ಏನಾಯಿತು, ಯಾರು ಅಂಥ ಆಟವಾಡಿದ್ದು, ಯಾಕೆ ಎನ್ನುವುದಕ್ಕೆ ಮಾತ್ರ ನನ್ನ ಬಳಿ ಇನ್ನೂ ಉತ್ತರವೇ ಇಲ್ಲ.
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Friday, 30 October 2009
ಟ್ರಿಕ್.... OR.... ಟ್ರೀಟ್....
Labels:
ಕಥನಕಾರಣ,
ತುಂಟ-ತುಡುಗ-ತರಲೆ-ಮನ,
ನಗುವಿನೆಳೆಗಳು,
ರಿಗ್ರೆಷನ್,
ಹೀಗೇ ಸಾಗಲಿ
Subscribe to:
Post Comments (Atom)
7 comments:
ಜ್ಯೋತಿ ಅಕ್ಕ,
ನಮ್ಮನೆಯಿಂದ ಪಿಂಕ್ ಬಟರ್ ಫ್ಲೈ ಫೇರಿ, ಅದಕ್ಕೆ ಕಾವಲಾಗಿ ಸ್ಕೇರಿ ಡೈನೋಸಾರ್ ಹೊರಟಿವೆ(ಬೆಳಿಗ್ಗೆ ಮತ್ತು ಸಂಜೆ ೨ ಟ್ರಿಪ್ ಹೊರಟಿವೆ ). ಇನ್ನು ಎಷ್ಟು ಕ್ಯಾಂಡಿ ಅನ್ನುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ:-). ನಿಮ್ಮ ಮೊದಲ ಹ್ಯಾಲೋವೀನ್
ಅನುಭವ ಈಗ ನಗು ತರಿಸಿದರೂ ,,,,ಆ ಸಮಯದಲ್ಲಿ ಹೇಗಿದ್ದಿರಬಹುದು ಅಂತ ಯೋಚಿಸಿದರೇ ಭಯವಾಗುತ್ತೆ.
ಭಾರ್ಗವಿ.
ಭಾರ್ಗವಿ,
ನಿಮ್ಮನೆಯ ಫ಼ೇರಿ ಮತ್ತು ಡೈನೋಸಾರ್ ಮರುದಿನವೂ ಟ್ರೀಟ್ ತಗೊಳೋಕೆ ರೆಡಿಯಾಗಿರುತ್ತವಲ್ಲ!
ಆ ಅನುಭವದ ನೆನಪು ಈಗ ನನಗೆ ಭಯ ತರಿಸುತ್ತಿಲ್ಲ, ಆದ್ರೆ ಆಗಿನ ಪ್ರಶ್ನಾರ್ಥಕ ಚಿಹ್ನೆ ಮಾತ್ರ ಇನ್ನೂ ಬಗೆಹರಿದಿಲ್ಲ ನೋಡು.
kyandi ottumaduvudu andrenu? swalpa details plz..
ವಿಕ್ಕಿ, ಇಲ್ಲೆಲ್ಲ ಎಲ್ಲ ರೀತಿಯ ಚಾಕೊಲೇಟ್ ಮತ್ತು ಮಿಠಾಯಿಗಳಿಗೆ (ಮನೆಯಲ್ಲಿ ಮಾಡುವ ಸಿಹಿತಿಂಡಿಗಳಲ್ಲ, ಅಂಗಡಿಯಲ್ಲಿ ದೊರೆಯುವ ಪ್ರೋಸೆಸ್ಡ್ ಸಿಹಿತಿನಿಸುಗಳು- ಟಾಫಿಗಳು, ಲಾಲಿಪಾಪ್ಸ್, ಕಿಟ್-ಕ್ಯಾಟ್ಸ್, ಜೆಮ್ಸ್... ಇತ್ಯಾದಿ) ಒಟ್ಟಾಗಿ ಕ್ಯಾಂಡಿ ಅನ್ನುತ್ತಾರೆ. ಹ್ಯಾಲೊವೀನ್ ದಿನ ‘ಟ್ರಿಕ್-ಆರ್-ಟ್ರೀಟ್’ ಅಂದುಕೊಂಡು ವಿವಿಧ ಕಾಸ್ಟ್ಯೂಮ್ ಹಾಕಿ ಬರುವ ಮಕ್ಕಳ ಕೈಬುಟ್ಟಿಗೆ (ಕೆಲವರು ದಿಂಬಿನ ಕವಚಗಳನ್ನೇ ತರುತ್ತಾರೆ) ಹಿಡಿತುಂಬ ವಿವಿಧ ಕ್ಯಾಂಡಿ ಸುರಿಯುವುದು ವಾಡಿಕೆ. ಕೊನೆಗೆ ಮನೆಗೆ ಹೋಗಿ ಮಕ್ಕಳ ಹೆಚ್ಚುಗಾರಿಕೆ- ಯಾರಿಗೆ ಜಾಸ್ತಿ ಕ್ಯಾಂಡಿ ಸಿಕ್ಕಿದೆ ಅನ್ನುವುದರಲ್ಲಿ, ವಾರ-ತಿಂಗಳುಗಟ್ಟಲೆ ಅದನ್ನು ಸವಿಯುವುದರಲ್ಲಿ.
ಅ೦ದ್ರೆ ನಮ್ಮಲ್ಲಿ ದಸರ/ಹೋಳಿ ಹುಣ್ಣಿಮೆಲ್ಲಿ ವೇಷ ಹಾಕೋ ತರ. ಇಲ್ಲಿ ಮಕ್ಕಳು ವೇಷ ಹಾಕ್ತಾರೆ ಜೊತೆಗೆ ಟಾಫಿ ಉಡುಗೋರೆ ಕೂಡಿಸುತ್ತರೆ. ಸರಿ ಬಿಡಿ. ಆದ್ರೆ ತಮ್ಮನ್ನ ಹೆದರಸಿದ ಭುತ ಯಾವ್ದು ??. ವೇಷ ಹಾಕಿದ್ದೊ ಅಥವಾ ಅಸಲಿನೋ? ಸರಿ ಬಿಡಿ ಆ ನೆವದಲ್ಲಿ ತಮ್ಮ ಸಿಟ್ಟು ಕರಗಿ ಹೋಯ್ತಲ್ಲಾ ಅಷ್ಟೇ ಸಾಕು.
ಆಮೇರಿಕನ್ನರು ತುಂಬಾ friendly ಜನರಾ?
ಸೀತಾರಾಮ್,
ಈ ಹ್ಯಾಲೋವೀನ್ ದಿನ ಮಕ್ಕಳು ಮಾತ್ರವಲ್ಲ ದೊಡ್ಡವರೂ ವೇಷ ಹಾಕ್ತಾರೆ, ಆಫೀಸುಗಳಲ್ಲಿಯೂ ಮೊನ್ನೆ, ನಿನ್ನೆ ಹ್ಯಾಲೋವೀನ್ ಪಾರ್ಟಿಗಳಾದವು, ಇಷ್ಟವಿದ್ದವರೆಲ್ಲ ವೇಷ ತೊಟ್ಟು ಬರಬಹುದಾಗಿತ್ತು. ಶಾಲೆಗಳಲ್ಲೂ ಹೀಗೇ ಮಾಡ್ತಾರೆ, ಒಂದೊಂದೇ ತರಗತಿಯ ಮಕ್ಕಳು ಉಳಿದೆಲ್ಲ ತರಗತಿಗಳನ್ನು ಸುತ್ತುತ್ತಾರೆ, ಆದರೆ ಕ್ಯಾಂಡಿ ಹಂಚುವಿಕೆ ತಮ್ಮ ಕ್ಲಾಸಿನಲ್ಲಿ, ತಂತಮ್ಮೊಳಗೆ ಮಾತ್ರ.
ನನ್ನನ್ನು ಕಾಡಿದ್ದ ಭೂತ- ಅಸಲಿಯೋ ನಕಲಿಯೋ- ಇನ್ನೂ ಬಿಟ್ಟು ಹೋಗಿಲ್ಲ! ಸಿಟ್ಟು ಮಾತ್ರ ಅಂದಿಗೆ ಶಾಂತವಾಗಿತ್ತು.
ಕಾಕಾ,
ಅಮೆರಿಕನ್ನರು ಫ್ರೆಂಡ್ಲಿ ಜನರು ಅಂತಾಗಲೀ ಅಲ್ಲ ಅಂತಾಗಲೀ ಸಾರಾಸಗಟಾಗಿ ಕೆಟಗರೈಸ್ ಮಾಡೋಹಾಗಿಲ್ಲ. ಮೊದಮೊದಲು ಕಂಡಕಂಡವರೆಲ್ಲ ಸಿಕ್ಕಲ್ಲೆಲ್ಲ ಹಾಯ್, ಹಲ್ಲೊ, ಹೌ ಆರ್ ಯೂ... ಅಂತೆಲ್ಲ ಮಾತು ಎಸೆದಾಗ ಉತ್ತರಿಸಲು ಗೊಂದಲವಾಗುತ್ತಿತ್ತು. ಈಗೀಗ ನಾವೇ ಮುಂದಾಗಿ ನಗು ಕೊಟ್ಟು ಹಲ್ಲೋ ಹೇಳುವಷ್ಟು ಚಳಿ ಬಿಟ್ಟಿದೆ. ಆದರೂ ಅದೊಂಥರಾ ಪೊಳ್ಳು ಸೌಜನ್ಯ ಅನ್ನುವ ಭಾವನೆಯೂ ಯಾಕೋ ಬೇರೂರಿದೆಯೆನ್ನಿ; ತಪ್ಪೋ ಸರಿಯೋ ತಿಳಿಯೆ.
ಆದರೆ, ನಾನು ಲೇಖನದಲ್ಲಿ ತಿಳಿಸಿದ ಪ್ಯಾಟ್, ಷೆರೀನ್, ಡೆಬಿ ಮತ್ತು ಸ್ಕಾಟ್- ಎಲ್ಲರೂ ಸಹೃದಯತೆಯಿಂದಲೇ ನಡೆಸಿಕೊಂಡಿದ್ದರು, ಸ್ಕಾಟ್ ಮತ್ತು ಡೆಬಿ ನಮ್ಮ ಊಟಕ್ಕೆ ಆಸೆಪಟ್ಟು ನಮ್ಮನೆಗೆ ಒಂದೆರಡು ಬಾರಿ ಊಟಕ್ಕೂ ಬಂದಿದ್ದರು. ನನ್ನ ಕತ್ತಿನ ಕರಿಮಣಿ ನೋಡಿ ಅಂಥದ್ದೇ ತನ್ನ ಮದುವೆಗಾಗಿ ತಾನೂ ಕೊಳ್ಳಬೇಕೆಂದು ಡೆಬಿ ಹಂಬಲಿಸುತ್ತಿದ್ದಳು. ಹೊಸದೇನಿದ್ದರೂ ಅದಕ್ಕಾಗಿ ಕುತೂಹಲ ಆಸೆ ತೋರುವುದು ಅದನ್ನು ಅನುಭವಿಸುವುದು ನಮಗಿಂತ ಅವರಿಗೆ ಸುಲಭ ಅಂತನ್ನಿಸುತ್ತದೆ ನನಗೆ.
Post a Comment