ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 24 August 2009

ಲಂಕೇಶ್ವರ

ಮರಿಕಪಿಯ ತೊಟ್ಟಿಲಿಗೆ ಕಟ್ಟಿಸಿಕೊಂಡು
ಕೈ-ಕಾಲಾಡಿಸಿ ಕೂಸನಾಡಿಸಿದ;
ಮಹಾಬಲಿಯ ಬಲವರಿಯಲು ಹೋಗಿ
ಸೆರೆಯಲಿ ಕನ್ನೆಯರ ಜೊತೆಗಾಡಿದ;
ದೇವೇಂದ್ರನ ಕೆಣಕಿ, ಗೋಣು ಕೆಳಹಾಕಿ
ಮಗನಿಂದ ಮನೆಗೆ ಹಿಂದಿರುಗಿದ;
ದ್ವಿದಶ ಭುಜಶಾಲಿ ಸಹಸ್ರ ಭುಜನನು ಹುಡುಕಿ
ಕೆಣಕಿ, ಕಾದಿ, ಮಣ್ಣು ಮೆತ್ತಿಸಿಕೊಂಡ;
ಅಸಮಬಲ ಸಾಹಸಿ ದಶಕಂಠ
ಅಜ್ಜನ ಕರುಣೆಯಿಂದ ಸ್ನೇಹವುಂಡ.

ಅಷ್ಟಾದರೂ ಒಂದೇ ಒಂದು ತಲೆಯೊಳಗೂ
ಬುದ್ಧಿ ಬಲಿಯದೆ, ಅರಿವು ಮೂಡದೆ,
ಕೆಂಡವ ಕೆದಕಿ ಸೆರಗಿನಲಿಟ್ಟುಕೊಂಡ,
ತನ್ನ ವಂಶವ ತಾನೇ ಸುಟ್ಟುಕೊಂಡ.
(೦೭-ಅಕ್ಟೋಬರ್-೨೦೦೬)

4 comments:

sunaath said...

ಹೊಸಾದೊಂದು revelation ಇದು! ಖರೇ ಅದ. ದಶಶಿರನ ಒಂದು ಮಂಡೆಯಲ್ಲಾದರೂ ಕೊಂಚ ಬುದ್ಧಿ ಇದ್ದಿದ್ದರೆ, ಸೆರಗಿನಲ್ಲಿ ಕೆಂಡ ಕಟ್ಟಿಕೊಳ್ಳುತ್ತಿರಲಿಲ್ಲ. ಒಳ್ಳೇ wit & wisdom ತುಂಬಿದ ಚುಟುಕು-ಕುಟುಕು.

ಸುಪ್ತದೀಪ್ತಿ suptadeepti said...

ಕಾಕಾ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಹೊಗಳಿಕೆ ಮಾತ್ರ ಪ್ರತೀ ಬಾರಿಯೂ ಇಷ್ಟಿಷ್ಟೇ ಅಟ್ಟಕ್ಕೇರಿಸುತ್ತಿದೆಯಲ್ಲ. ನನ್ನ ಈ ಒಂದು ಮಂಡೆಯೊಳಗೆ ಅಹಂಕಾರ ತುಂಬಿಕೊಳ್ಳದೆ, ಬುದ್ಧಿ ಸರಿಯಾಗಿಯೇ ಬಲಿತೀತೆ? ಸಂಶಯ ನನಗೆ!

Shiv said...

ಸುಪ್ತದೀಪ್ತಿಯವರೇ,

ಕಾಕಾನ ಮಾತಿಗೆ ನನ್ನ ಸಮ್ಮತವಿದೆ.
Its witty indeed.

ಅಂದಾಗೆ ಅಜ್ಜನ ಕರುಣೆ..ಅರ್ಥವಾಗಲಿಲ್ಲ ?

ಸುಪ್ತದೀಪ್ತಿ suptadeepti said...

ಶಿವ್, ಸಹಮತ ಹಾಕಿದ್ದಕ್ಕೂ ಸೇರಿ ವಂದನೆಗಳು.

"ಅಜ್ಜನ ಕರುಣೆಯಿಂದ ಸ್ನೇಹವುಂಡ"- ರಾವಣ ತನ್ನ ಅಹಂಕಾರದಿಂದ ತಾನೇ ಲೋಕೈಕ ವೀರ ಅನ್ನುವ ಸೊಕ್ಕಿನಿಂದ ಕಾರ್ತವೀರ್ಯಾರ್ಜುನ ಎಂಬ ಸಹಸ್ರಭುಜ ಸಾಹಸಿಯೊಬ್ಬನನ್ನು ತಾನೇ ಕೆಣಕಿ ಯುದ್ಧಕ್ಕೆ ಹೋಗಿ ಅವನ ಸೆರೆಯಾದ. ಇದನ್ನು ತಿಳಿದ ರಾವಣನ ತಾಯಿ ತನ್ನ ತಂದೆಗೆ ಗೋಳಿಟ್ಟು, ಆ ತಾತ ಕರುಣೆ ತೋರಿಸಿ, ಕಾರ್ತವೀರ್ಯನಲ್ಲಿಗೆ ತಾನೇ ಬಂದು ನಯವಾದ ಮಾತುಗಳಿಂದ ಅವನನ್ನೊಲಿಸಿ ದಶಶಿರನನ್ನು ಸೆರೆಯಿಂದ ಬಿಡಿಸಿಕೊಂಡ. "ನೀವಿಬ್ಬರೂ ಸ್ನೇಹದಿಂದಿರಿ" ಎಂದು ಹರಸಿ ನಡೆದದ್ದು ಪುರಾಣದ ಕಥೆಗಳಲ್ಲೊಂದು.

ಮೇಲಿನ ಪ್ಯಾರಾಗ್ರಾಫ್ ರಾವಣನ ಇಂಥ ಸೋಲುಂಡ ಕಥೆಗಳನ್ನೇ ಹೇಳುತ್ತೆ. ಬೇರೆಯವರ ತಪ್ಪನ್ನು ನೋಡಿ ನಾವು ಅಂಥ ತಪ್ಪು ಮಾಡಬಾರದು ಎನ್ನುವ ಪಾಠ ಕಲಿಯಬೇಕು. ನಮ್ಮ ತಪ್ಪುಗಳಿಂದಲಾದರೂ ನಾವು ಪಾಠ ಕಲಿಯಬೇಕು. ಈ ಹತ್ತುತಲೆಯವನಿಗೆ ನಾಲ್ಕಾರು ಬಾರಿ ಮುಖಭಂಗವಾದರೂ ಪಾಠ ಕಲಿಯಲಿಲ್ಲವಲ್ಲ (ಹತ್ತು ಬಾರಿಯೇ ಆಗಬೇಕಿತ್ತೇನೊ)! ಅವನೆಂಥ ಪರಮ ಜ್ಞಾನಿ!? ಈ ಯೋಚನೆಯ ಹಿನ್ನೆಲೆಯಲ್ಲಿ ಹುಟ್ಟಿದ್ದು ಈ ಕವನ.