ಕಂದನಿದ್ದನಿವ ಪುಟ್ಟ ಕೂಸು, ಒಂದು ದಶಕ ಹಿಂದೆ
ಬೆಳೆದು ನಿಂತಿದೆ ಮಾಡಿನೆತ್ತರ, ತೆಂಗು ಮನೆಯ ಮುಂದೆ
ಅಪ್ಪನೂಟದಲಿ ತುತ್ತು ಕದ್ದು ಅಮ್ಮನೆಂದು ದೂರಿ
ತಂಗಿ ಜಡೆಯೆಳೆದು ಕಾಡಿ ಅಳಿಸಿ, ಅಡಗಿಕೊಳ್ಳುವ ಮರಿ
ಕಳೆದು ಬೆಳೆದು ಹನ್ನೊಂದು ವರುಷ, ನಿಂತ ಭುಜದ ಮಟ್ಟ
ಗೆಳೆಯ ಬಳಗದಲಿ ಚೆಲುವ, ಜಾಣ, ನಮಗೆ ಅವನು ಪುಟ್ಟ
ನಾಲ್ಕು ದಿನಗಳ ಕಲಿಕೆಯಾಟಕೆ ಹೊರಟು ನಿಂತನಾತ
ಬಟ್ಟೆ ಜೋಡಿಸಿ, ಚೀಲವೇರಿಸಿ, ಆಚೆಗೊಂದೆ ಜಿಗಿತ
ಆರು ಸಾವಿರಕು ಮೀರಿ ನಿಮಿಷಗಳ ಕಾಲವಗಲಿ ಇದ್ದ
ಎಲ್ಲೋ ಕಾಡಿನೊಳು ಸಣ್ಣ ಶಿಬಿರ, ಸಹಜ ಕಲಿಕೆ ಸಿದ್ಧ
ತಂಗಿ ತಲೆಯಲ್ಲಿ ದುಂಬಿ ಮೊರೆತ, ಭಾವದ ಜಂಜಾಟ
ಸಣ್ಣ ಕಾರಣಕು ಸಿಡುಕು-ದುಡುಕು, ಅಣ್ಣನಿರದ ಕೊರೆತ
ಊಟ-ತಿಂಡಿಗಳ ಗಮನವಿಲ್ಲ, ಆಟ ರುಚಿಸಲಿಲ್ಲ
ಬೆಳಗು-ಬೈಗಿನಲಿ ಏನೋ ಶೂನ್ಯ, ಜೊತೆಗೆ ಅಣ್ಣನಿಲ್ಲ
ಹೇಗೋ ಕಳೆದೆವು ನಾಲ್ಕು ಹಗಲು ಮತ್ತೆ ನಾಲ್ಕು ರಾತ್ರೆ
ಐದನೇ ದಿನ ಅವನ ಕಾಣುವೆವು ಎಂದೇ ಜೀವ ಜಾತ್ರೆ
ಶಾಲೆಯಂಗಳದಿ ಅವನನಂದು ಬಸ್ಸು ಹತ್ತಿಸಿದ್ದೆ
ಇಂದು ಬಸ್ಸಿಳಿದು ಕಾರನೇರಿ ನುಡಿದ- "ನಂಗೆ ನಿದ್ದೆ!"
ಜಗಳವಾಡದೆ ಸೊರಗಿದ ತಂಗಿಗೆ ಸೊಟ್ಟ ಮುಖದ ಅಣಕ
ಹೆತ್ತ ಹೃದಯಗಳ ಕಾತರಕ್ಕೆ ಚೇತವಿತ್ತು ನಕ್ಕ.
(೦೬-ಎಪ್ರಿಲ್-೨೦೦೨)
(ಪ್ರಾಥಮಿಕ ಶಾಲೆಗಳಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗಾಗಿಯೇ ಆಯೋಜಿಸಲ್ಪಟ್ಟ ಶಿಬಿರವೊಂದಕ್ಕೆ ಮಗ ಹೋಗಿಬಂದ ಸಂದರ್ಭದಲ್ಲಿ)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Sunday, 10 May 2009
Subscribe to:
Post Comments (Atom)
4 comments:
ನೈಸ್! ಕೊನೆಯಲ್ಲಿ ನೋಟ್ ಹಾಕಿದ್ದಕ್ಕೆ ಕವಿತೆ ಮತ್ತಷ್ಟು ಆತ್ಮೀಯವಾಯ್ತು. :-)
ಧನ್ಯವಾದಗಳು ಸುಶ್. ಕೊನೆಯಲ್ಲಿ ನೋಟ್ ಕೊಡದೇ ಹೋದ್ರೆ ನನಗೆ ಸಮಾಧಾನವಾಗಬೇಕಲ್ಲ!
ಕವನ ಚೆನ್ನಾಗಿದೆ. ಕೊನೆಯಲ್ಲಿ ನೋಟ್ ಕೊಡುವುದರಿಂದ,ನನಗೆ ಸಂದರ್ಭ ಯಾವುದಿರಬಹುದು ಎಂದು ಯೋಚಿಸುವುದನ್ನು
ತಪ್ಪಿಸುತ್ತೀರಿ. ಧನ್ಯವಾದಗಳು ಅಕ್ಕ. ಮೊದಲ ಸಲನಾ ಅಷ್ಟು ದಿನ ಬಿಟ್ಟಿದ್ದು?
ಧನ್ಯವಾದಗಳು ಭಾರ್ಗವಿ.
ಮೊದಲಸಲವೇನಲ್ಲ, ಊರಲ್ಲಿ ಅಜ್ಜ-ಅಜ್ಜಿ ಮನೆಯಲ್ಲಿ ಒಂದೆರಡು ವಾರಗಳೇ ಇದ್ದ.
ಶಿಬಿರ ಅನ್ನುವ ಹೆಸರಲ್ಲಿ, ಕಾಡಿನ ಮೂಲೆಯಲ್ಲಿ ನಾಲ್ಕು ಇದ್ದು, ಅಲ್ಲಿನ ಛಳಿಗೆ ಸೊರಗಿ, ಬಿರುಕುಬಿಟ್ಟ ತುಟಿಗಳ, ಬಿಳಿಚಿಕೊಂಡ ಮುಖದ ಹುಡುಗನನ್ನು ಕಂಡಾಗ ಕರುಳು ಚುರುಕ್ ಅಂದಿದ್ದು ಮಾತ್ರ ಮರೆಯಲಾರೆ! ಅದನ್ನೆಲ್ಲ ಮರೆಸಲು ಇದನ್ನು ಬರೆದೆ, ಅಷ್ಟೇ.
Post a Comment