(ಈ ಕವನಕ್ಕೆ ಸ್ಫೂರ್ತಿಯಾದ ಬ್ಲಾಗೆಳತಿಗೆ ಮೊದಲ ಧನ್ಯವಾದಗಳು)
ನಿನ್ನೆ ಕಟ್ಟಿದ ಮೋಡ ಇಂದು ಹನಿಹನಿದಾಗ
ತಂಪು ಅಂಗಳದೊಳಗೆ ಮನ ಹಚ್ಚಗೆ
ಇಂದಿನ ನೆನಪುಗಳು ನಾಳೆಯನು ತೆರೆವಾಗ
ಬಣ್ಣ ಬಾನಿನ ಅಂಚು, ದಿನ ಬೆಚ್ಚಗೆ
ಹೊಳೆದು ಕರಗಿದ ಹಗಲು ಮತ್ತೆ ಮರಳುವ ಹೊತ್ತು
ಸೆರಗಿನಂಚಲಿ ಗಂಟು ನಿನ್ನ ನೆನಪು
ಬರುವೆಯೋ ಬಾರೆಯೋ, ಕಾತರದ ಕೈಲಿತ್ತು
ಒಂದೊಂದು ಹನಿಯಿಳಿದ ಕೆಂಪು ಕದಪು
ಮಾಡಿನಂಚಿನ ಕೊನೆಗೆ ಸೆರೆಯಾದ ಸೋನೆಯಲಿ
ಹರಿಹರಿದು ಸುರಿವಂಥ ಒಲವ ಧಾರೆ
ಅದರ ನಲಿವಿನ ತಾಳ ನನ್ನೆದೆಯ ಮಿಡಿತದಲಿ
ಇಳಿದುಹೋಗಿದೆ ಕಾಲ ಕಡಲ ಸೇರೆ
ಮತ್ತೆ ಕಟ್ಟಿದೆ ಮೋಡ, ಹೊಳಪು ಸುರಿಯುವ ಕೆನ್ನೆ
ಸೆರಗಿನಂಚಿನ ಗಂಟು ನನ್ನದಲ್ಲ
ಬಯಲು ಆಲಯ ಮೀರಿ ಎದುರು ನಿಂತವನನ್ನೆ
ಕಣ್ಣತುಂಬಿಕೊ ಎನಲು ಶರಧಿಯೆಲ್ಲ
(೧೨-ಫೆಬ್ರವರಿ-೨೦೦೯)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Subscribe to:
Post Comments (Atom)
8 comments:
ಜ್ಯೋತಿ,
ಕೆ.ಎಸ್.ನರಸಿಂಹಸ್ವಾಮಿಯವರಿಗೆ ನೀನು ಪ್ರತಿಸ್ಪರ್ಧಿಯಾಗಿದ್ದೀಯಾ ಅಂತ ಅನ್ನಿಸುತ್ತೆ.
-ಕಾಕಾ
ಓಹ್, ಅಂಥ ದೊಡ್ಡ ಕನಸಾಗಲೀ ಆಸೆಯಾಗಲೀ ನನಗಿಲ್ಲ ಕಾಕಾ. ನಿಮ್ಮ ಪ್ರೀತಿ, ಅಭಿಮಾನದ ಕಣ್ಣಿಗೆ ಹಾಗೆ ಕಂಡಿದ್ದಕ್ಕೆ ಆತ್ಮೀಯ ವಂದನೆಗಳು.
ಸುಪ್ತ ದೀಪ್ತಿಯವರೆ..
ತುಂಬಾ ಚಂದದ ಕವನ..
"ಬಯಲು ಆಲಯ ಮೀರಿ ಎದುರು ನಿಂತವನನ್ನೇ..
ಕಣ್ಣು ತುಂಬಿಕೊ ಎನಲು ಶರಧಿಯೆಲ್ಲ"
ಬಹಳ ಇಷ್ಟವಾಯಿತು..
ಅಭಿನಂದನೆಗಳು...
ಧನ್ಯವಾದಗಳು ಪ್ರಕಾಶ್. ನೀವೆಲ್ಲ ಬಂದು ಓದಿ ಆನಂದಿಸಿದರೆ ನನಗದೇ ಇಷ್ಟ. ನಿಮ್ಮ ಅಭಿನಂದನೆಗಳು ಬೋನಸ್.
ಇಂದಿನ ಬದಲು ಇಂದಿನೀ ಇದ್ದರೆ ಇನ್ನೂ ಚೆನ್ನಾಗಿ ಕೇಳುತ್ತದಲ್ಲವೆ?
ಅನಾನಿಮಸರೇ,
ಇಂದಿನ ಮತ್ತು ಇಂದಿನೀ- ಬಹಳ ವ್ಯತ್ಯಾಸವೇನೂ ಇಲ್ಲವಲ್ಲ. ಪ್ರತಿಕ್ರಿಯೆಗೆ ಧನ್ಯವಾದಗಳು.
ವ್ಯತ್ಯಾಸ ಒಂದು ಮಾತ್ರೆಯದು, ಇಂದಿನ ೪ ಮಾತ್ರೆ, ಇಂದಿನೀ ೫.
ಹಾಡುವಾಗ ಒಂದು ಮಾತ್ರೆ ಜಾಸ್ತಿಯೇ ಬೇಕೆಂದಾದರೆ, ಇಂದಿನಾ ಎಂದೂ ಹಾಡಿಕೊಳ್ಳಬಹುದು, ಅಂತಲೇ ಹಾಗೇ ಬಿಟ್ಟಿದ್ದೇನೆ. ಲಘು-ಗುರು ಮಾತ್ರೆಗಳ ಲೆಕ್ಕವೂ ಹಾಕುವ ನಿಮ್ಮ ಖಯಾಲಿಗೆ ಖುಷಿಯಾಯಿತು.
Post a Comment